Wednesday, 18th September 2024

ಕತೆ ಕತೆ ಕಾರಣ, ಬದುಕಿಗಿರಲಿ ಸ್ಫೂರ್ತಿಯ ಹೂರಣ !

ಶ್ವೇತಪತ್ರ
shwethabc@gmail.com

ಬದುಕೆಂಬುದು ಕಪ್‌ನಲ್ಲಿರುವ ಕಾಫಿಯಂತೆ. ನಮ್ಮ ಕೆಲಸ, ದುಡ್ಡು, ವೃತ್ತಿ, ಸ್ಥಾನ ಇವೆಲ್ಲವೂ ಕಾಫಿ ಕಪ್‌ಗಳಂತೆ. ಇವೆಲ್ಲವೂ ನಮ್ಮ ನಮ್ಮ ಬದುಕಿನ ಕತೆಗಳನ್ನು ಹಿಡಿದಿಟ್ಟಿರುವ ರಚನೆಗಳಷ್ಟೇ. ನಮ್ಮ ಬಳಿ ಇರುವ ಕಾಫಿ ಕಪ್ ನಾವು ಯಾರೆಂಬುದನ್ನು ನಿರೂಪಿಸುವುದಿಲ್ಲ ಅಥವಾ ನಮ್ಮ ಬದುಕಿನ ಗುಣಮಟ್ಟವನ್ನು ಬದಲಾಯಿಸುವುದಿಲ್ಲ.

ಒಮ್ಮೆ ಅಪ್ಪ ಹಾಗೂ ಆತನ ೨೪ ವರ್ಷದ ಮಗ ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಕಿಟಕಿಯಿಂದ ಹೊರ ಜಗತ್ತನ್ನು ನೋಡುತ್ತಿದ್ದ ಹುಡುಗ ಕೂಗ ತೊಡಗಿದ- ‘ಅಪ್ಪ ನೋಡಲ್ಲಿ, ಮರ-ಗಿಡಗಳು, ಬೆಟ್ಟ – ಗುಡ್ಡಗಳು ನಮ್ಮ ಜತೆಯೇ ಸಾಗುತ್ತಿವೆ’ ಎಂದು. ಅಪ್ಪ ಮುಗುಳು ನಕ್ಕು ಸುಮ್ಮನಾದ. ಇವರೆದುರು ಕುಳಿತಿದ್ದ ಚಿಕ್ಕ ಪ್ರಾಯದ ದಂಪತಿಗೆ ೨೪ ವರ್ಷದ ಹುಡುಗನ ಈ ವರ್ತನೆ ವಿಚಿತ್ರವೆನಿಸಿತು. ಸ್ವಲ್ಪ ಹೊತ್ತು ಕಳೆದಿರಬೇಕು, ಮತ್ತೆ ಆ ಹುಡುಗ, ‘ಅಪ್ಪ ನೋಡಲ್ಲಿ, ಮೋಡಗಳು ನಮ್ಮೊಂದಿಗೆ ಓಡುತ್ತಿವೆ’ ಎಂದು ಉದ್ಗರಿಸಿದ.

ಈಗಂತೂ ಎದುರಲ್ಲಿ ಕುಳಿತಿದ್ದ ದಂಪತಿಗೆ ತಡೆಯಲಾಗಲಿಲ್ಲ, ಅವರಿಬ್ಬರೂ ಹುಡುಗನ ತಂದೆಯನ್ನು ಕುರಿತು, ‘ನಿಮ್ಮ ಮಗನನ್ನು ಉತ್ತಮ ವೈದ್ಯರ ಬಳಿ ತೋರಿಸಬಾರದೇಕೆ?’ ಎಂದು ಕೇಳುತ್ತಾರೆ. ಇದಕ್ಕುತ್ತ ರಿಸುವ ತಂದೆ, ‘ಖಂಡಿತವಾಗಿಯೂ ನನ್ನ ಮಗನನ್ನು ವೈದ್ಯರಿಗೆ ತೋರಿಸಿ ಇವತ್ತಷ್ಟೇ ಆತನನ್ನು ಡಿಸ್ಚಾರ್ಜ್ ಮಾಡಿಸಿ ಕರೆ ತರುತ್ತಿದ್ದೇನೆ. ನನ್ನ ಮಗ ಹುಟ್ಟಿನಿಂದ ಕುರುಡನಾಗಿದ್ದ, ಇವತ್ತಷ್ಟೇ ಅವನಿಗೆ ಕಣ್ಣು ಬಂದಿದ್ದು ಪ್ರಪಂಚಕ್ಕೆ ಮೊದಲ ಬಾರಿಗೆ ತೆರೆದುಕೊಳ್ಳುತ್ತಿದ್ದಾನೆ’ ಎಂದು ಹೇಳಿ ಸುಮ್ಮನಾಗು ತ್ತಾನೆ. ಹೌದಲ್ಲವೇ!

ಜಗತ್ತಿನ ಪ್ರತಿ ಮನುಷ್ಯನಿಗೂ ಅವನದೇ ಆದ ಬದುಕಿನ ಕತೆ ಇರುತ್ತದೆ. ವ್ಯಕ್ತಿಗಳನ್ನು, ಅವರ ವ್ಯಕ್ತಿತ್ವವನ್ನು ಅರಿಯುವ ಮುನ್ನವೇ ಅವರನ್ನು ಜಡ್ಜ್ ಮಾಡಿ ಬಿಡಬಾರದು, ಏಕೆಂದರೆ ಅವರ ಬದುಕಿನ ಸತ್ಯಾಸತ್ಯತೆಗಳು ನಮ್ಮನ್ನು ಅಚ್ಚರಿಗೊಳಿಸಿಬಿಡಬಹುದು, ಏನಂತೀರಿ? ದಾರಿಹೋಕನೊಬ್ಬನಿಗೆ ಆನೆಗಳ ಹಿಂಡೊಂದು ಕಾಣಸಿಗು ತ್ತದೆ. ಆನೆಗಳ ಹಿಂಡನ್ನು ಸೂಕ್ಷ್ಮವಾಗಿ ಗಮನಿಸಿದ ಆ ವ್ಯಕ್ತಿಗೆ ಏನಾಶ್ಚರ್ಯ! ಭಾರಿ ಗಾತ್ರದ ಆನೆಗಳ ಮುಂಗಾಲಿಗೆ ಚಿಕ್ಕ
ದೊಂದು ಹಗ್ಗವನ್ನಷ್ಟೇ ಕಟ್ಟಿರುತ್ತಾರೆ. ಯಾವುದೇ ಕಬ್ಬಿಣದ ಸಲಾಕೆ ಅಥವಾ ಇನ್ಯಾವುದೋ ದೊಡ್ಡ ಗಾತ್ರದ ವಸ್ತುವಿನಿಂದ ಅವುಗಳನ್ನು ಬಂಧಿಸಿರುವುದಿಲ್ಲ.

ಆನೆಗಳ ಕಾಲಿಗೆ ಕಟ್ಟಿದ ಹಗ್ಗವನ್ನು ನೋಡಿದರೆ ಯಾವ ಸಂದರ್ಭದಲ್ಲಾದರೂ ಆನೆಗಳು ಅದನ್ನು ಕಳಚಿ ಹೋಗಿಬಿಡಬಹುದಿತ್ತು; ಆದರೆ ಹಾಗೆ ಮಾಡದೆ ಆನೆಗಳು ಸುಮ್ಮನಿದ್ದವು. ಆಗ ಮಾವುತನನ್ನು ಮಾತನಾಡಿಸುವ ವ್ಯಕ್ತಿ, ‘ಈ ಆನೆಗಳು ಸುಮ್ಮನೆ ನಿಂತಿವೆಯಲ್ಲ, ಆರಾಮವಾಗಿ ಆ ಹಗ್ಗವನ್ನು ಕಳಚಿ ಅವು ತಪ್ಪಿಸಿ ಕೊಂಡುಬಿಡಬಹುದಲ್ಲವೇ?’ ಎಂದು ಕೇಳುತ್ತಾನೆ. ನಗುತ್ತಾ ಉತ್ತರಿಸುವ ಮಾವುತ, ‘ಆನೆಗಳನ್ನು ಚಿಕ್ಕ ವಯಸ್ಸಿನಿಂದಲೂ ಇದೇ ಪುಟ್ಟ ಹಗ್ಗದಿಂದ ಕಟ್ಟಿ ಹಾಕಲಾಗುತ್ತಿತ್ತು. ಅವು ಚಿಕ್ಕವಿರುವಾಗ ಈ ಹಗ್ಗ ಸಾಕಾಗುತ್ತಿತ್ತು, ಈಗ ಅವು ಬೆಳೆದು ದೊಡ್ಡವಾದ ಮೇಲೂ ಅದೇ ಹಗ್ಗವನ್ನು ಉಪಯೋಗಿಸುತ್ತೇವೆ.

ಏಕೆಂದರೆ, ಹಗ್ಗ ದೊಡ್ಡದೋ-ಚಿಕ್ಕದೋ, ಆದರೆ ನಾವು ತಪ್ಪಿಸಿಕೊಳ್ಳಲಾರೆವು ಎಂಬ ‘ಕಂಡಿಷನ್ಡ್’ ಮನಸ್ಥಿತಿಗೆ ಆನೆಗಳು ಬಂದುಬಿಟ್ಟಿವೆ. ಆ ಪುಟ್ಟ ಹಗ್ಗ ತಮ್ಮನ್ನು ಹಿಡಿದು ನಿಲ್ಲಿಸಿದೆ ಎಂಬ ನಂಬಿಕೆ ಆನೆಗಳದ್ದು, ಹಾಗಾಗಿ ಅವು ಎಂದಿಗೂ ಹಗ್ಗವನ್ನು ಬಿಡಿಸಿಕೊಳ್ಳಲು ಪ್ರಯತ್ನಪಟ್ಟಿಲ್ಲ’. ಈ ಕತೆ ಕೇಳಿ ನಿಮ್ಮೆಲ್ಲರಿಗೂ ಆಶ್ಚರ್ಯವಾಗಿರಬಹುದು, ಅಲ್ಲವೇ? ತಮ್ಮೊಳಗಿರುವ ಶಕ್ತಿಯಿಂದ ಆನೆಗಳು ಎರಡೇ ನಿಮಿಷದಲ್ಲಿ ಹಗ್ಗವನ್ನು ಕಳಚಿ ಬಂಧನದಿಂದ ಬಿಡುಗಡೆಗೊಳ್ಳಬಹುದಿತ್ತು; ಆದರೆ ಹಗ್ಗವನ್ನು ತಾವು ಕಳಚಲಾರೆವು ಎಂಬ ಮನಸ್ಥಿತಿ ಆನೆಗಳನ್ನು ತಡೆದು ನಿಲ್ಲಿಸಿಬಿಟ್ಟಿದೆ. ಆನೆಗಳಂತೆ ನಾವು ಮನುಷ್ಯರೂ ಅಷ್ಟೇ, ಇಡೀ ಬದುಕಿನುದ್ದಕ್ಕೂ ಯಾವುದೋ ಹಳೆಯ ನಂಬಿಕೆಗಳಿಗೆ ಜೋತು ಬಿದ್ದು ಹಗ್ಗ ಕಳಚಿ ಹೊರಬರದ ಮನಸ್ಥಿತಿ-ಪರಿಸ್ಥಿತಿಯಲ್ಲಿ ಇದ್ದುಬಿಟ್ಟಿದ್ದೇವೆ.

ಹೋರಾಡುವುದನ್ನು ಮರೆತೇಬಿಟ್ಟಿದ್ದೇವೆ, ಅಲ್ಲವೇ? ಈಗಂತೂ ೫೦ ವರ್ಷಕ್ಕೆ ನಿವೃತ್ತಿಯ ಮನಸ್ಥಿತಿಯನ್ನು ನಾವೆಲ್ಲ ತಲುಪಿಟ್ಟಿದ್ದೇವೆ. ಇಲ್ಲೊಬ್ಬ ವ್ಯಕ್ತಿ ತನ್ನ ೬೫ನೇ ವಯಸ್ಸಿನಲ್ಲಿ ತಾನಿರುವ ಬದುಕನ್ನು ಬದಲಾಯಿಸಿಕೊಳ್ಳಲು ನಿಶ್ಚಯಿಸಿ ಕೊಳ್ಳುತ್ತಾನೆ. ಎಲ್ಲರ ಮೂದಲಿಕೆ, ತಾತ್ಸಾರದ ನಡುವೆಯೂ ತಾನು ಕಂಡುಹಿಡಿದ ಹೊಸ ಚಿಕನ್ ಖಾದ್ಯವನ್ನು ಅನೇಕ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಮಾರಲು ಪ್ರಯತ್ನಿಸುತ್ತಾನೆ. ತನ್ನ ಖಾದ್ಯವನ್ನು ಉಚಿತ ವಾಗಿ ಪರಿಚಯಿಸಲೂ ಹಾತೊರೆಯುತ್ತಾನೆ. ಆದರೆ ಅನೇಕ ಹೋಟೆಲ್‌ಗಳು ಆತನ ಖಾದ್ಯವನ್ನು ತಿರಸ್ಕರಿಸುತ್ತವೆ. ಸಾವಿರಕ್ಕೂ ಅಧಿಕ ಬಾರಿ ಆತ ‘ಇಲ್ಲ, ಆಗಲ್ಲ’ ಎಂಬ ಅವಮಾನದ ಮಾತುಗಳನ್ನು ಕೇಳುತ್ತಾನೆ. ಆದರೆ ಆತನಿಗೆ ತನ್ನ ಖಾದ್ಯದ ಮೇಲೆ ವಿಶೇಷ ನಂಬಿಕೆ.

ಒಂದು ಸಾವಿರದ ಒಂಬತ್ತು ತಿರಸ್ಕಾರಗಳ ನಂತರ ಆತನಿಗೆ ಹೋಟೆಲ್ ಒಂದರಲ್ಲಿ ‘ಎಸ್’ ಎಂಬ ಉತ್ತರ ದೊರಕುತ್ತದೆ. ಆ ಒಂದು ಯಶಸ್ಸಿನಿಂದ ಕಲೋನಲ್ ಹಾಟ್ ಲ್ಯಾಂಡ್ ಸ್ಯಾಂಡರ್ಸ್, ಅಮೆರಿಕನ್ನರು ಚಿಕನ್ ತಿನ್ನುವ ವಿಧಾನವನ್ನೇ ಬದಲಿಸಿಬಿಡುತ್ತಾನೆ. ಅನೇಕ ರಿಜೆಕ್ಷನ್‌ಗಳ ನಂತರ ಪ್ರಪಂಚದಾದ್ಯಂತ ಹುಟ್ಟಿಕೊಂಡಿದ್ದೇ ಕೆಂಟುಕಿ ಫುಡ್ ಚಿಕನ್, ‘ಕೆಎಫ್ ಸಿ’ ಎಂದೇ ಜನಪ್ರಿಯವಾಗಿ ಸುಪರಿಚಿತವಾಗಿರುವ ಚಿಕನ್. ಕಲೋನಲ್ ಬದುಕಿನ ಕತೆಯನ್ನು ಕೇಳಿದಾಗ ನಮಗೆ ದೊರಕುವ ದೊಡ್ಡ ಪ್ರೇರಣೆಯೆಂದರೆ, ತಿರಸ್ಕಾರಗಳ ನಡುವೆಯೂ ನಮ್ಮ ಮೇಲಿನ ನಂಬಿಕೆಯನ್ನು ನಾವು ಕಳೆದುಕೊಳ್ಳಬಾರದು. ನಿಜ ಅಲ್ಲವೇ?!

ಬದುಕು ‘ಕಾಫಿ ಕಪ್’ ಇದ್ದ ಹಾಗೆ: ಒಂದಷ್ಟು ವಿದ್ಯಾರ್ಥಿಗಳು ತಾವು ಓದಿದ ವಿಶ್ವವಿದ್ಯಾಲಯದ ಪ್ರೊಫೆಸರ್‌ರನ್ನು ಭೇಟಿಯಾಗಲು ಬಯಸುತ್ತಾರೆ. ಅವರೆಲ್ಲರೂ ವಿಶ್ವವಿದ್ಯಾ ಲಯದಲ್ಲಿ ಅವರನ್ನು ಭೇಟಿಯಾಗುತ್ತಾರೆ ಕೂಡ. ಆಗ ತಮ್ಮ ಕೆಲಸದ ಬಗ್ಗೆ, ಬದುಕಿನ ಬಗ್ಗೆ, ಸಂಬಂಧಗಳ ಬಗ್ಗೆ ದೂರಿ
ಕೊಳ್ಳಲು ಶುರುವಿಟ್ಟುಕೊಳ್ಳುತ್ತಾರೆ. ಇದೆಲ್ಲವನ್ನು ತಾಳ್ಮೆ ಯಿಂದ ಕೇಳಿಸಿಕೊಳ್ಳುತ್ತಿದ್ದ ಪ್ರೊಫೆಸರ್, ವಿದ್ಯಾರ್ಥಿಗಳಿಗೆ ಬದುಕನ್ನು ಅರ್ಥ ಮಾಡಿಸಲು ಅಡುಗೆ ಮನೆಯೊಳಗೆ ಹೋಗುತ್ತಾರೆ. ಕೆಲ ಹೊತ್ತಿನ ನಂತರ ಅಲ್ಲಿಂದ ಹೊರಬರುವ ಪ್ರೊಫೆಸರ್, ತಟ್ಟೆಯಲ್ಲಿ ಬೇರೆ ಬೇರೆ ಕಾಫಿ ಲೋಟಗಳಲ್ಲಿ
ಕಾಫಿಯನ್ನು ತುಂಬಿಸಿಕೊಂಡು ಬಂದಿರುತ್ತಾರೆ. ಆ ಲೋಟ ಗಳಲ್ಲಿ ಕೆಲವು ಪ್ಲಾಸ್ಟಿಕ್‌ನವಾಗಿದ್ದರೆ, ಮತ್ತೆ ಕೆಲವು ಗಾಜಿನ ವಾಗಿರುತ್ತದೆ, ಇನ್ನೂ ಕೆಲವು ಪಿಂಗಾಣಿಯವು, ಉಳಿದವು ಪೇಪರ್ ಕಪ್‌ಗಳಾಗಿರುತ್ತವೆ; ಆ ಪೈಕಿ ಕೆಲವು ಕಪ್‌ಗಳು ದುಬಾರಿಯವಾಗಿರುತ್ತವೆ, ಮತ್ತೆ ಕೆಲವು ಬಲು ಸೊಗಸಾಗಿರುತ್ತವೆ.

ವಿದ್ಯಾರ್ಥಿಗಳೆಲ್ಲರಿಗೂ ಕಾಫಿಯನ್ನು ವಿತರಿಸುವ ಪ್ರೊಫೆಸರ್ ಒಂದು ವಿಚಾರವನ್ನು ಅವರ ಗಮನಕ್ಕೆ ತರುತ್ತಾರೆ: ‘ನಾನು ನಿಮಗೆ ಕಾಫಿಯನ್ನು ವಿವಿಧ ಬಗೆಯ ಕಪ್ ಗಳಲ್ಲಿ ತುಂಬಿಸಿಕೊಂಡು ಬಂದೆ; ನೀವೆಲ್ಲ ಆಯ್ಕೆ ಮಾಡಿ ಕೊಂಡದ್ದು ಬಹಳ ದುಬಾರಿ ಹಾಗೂ ಅಂದವಾಗಿರುವಂಥ ಕಪ್‌ಗಳನ್ನು. ಅಗ್ಗವಾದ ಹಾಗೂ ಅಂದವಲ್ಲದ ಕಪ್ಪುಗಳಲ್ಲಿನ ಕಾಫಿಯನ್ನು ನೀವು ಆಯ್ಕೆಮಾಡಿಕೊಳ್ಳಲು ಇಚ್ಛಿಸಲಿಲ್ಲ. ಇದನ್ನು ಬದುಕಿಗೂ ಅನ್ವಯಿಸಿಕೊಳ್ಳಬಹುದು. ಸಾಮಾನ್ಯ ವಾಗಿ ನಾವೆಲ್ಲ ಸದಾ ಶ್ರೇಷ್ಠರಾಗಿರಲು ಹಾತೊರೆಯುತ್ತಿರುತ್ತೇವೆ.

ಕೆಲವೊಮ್ಮೆ ಈ ಹಾತೊರೆಯುವಿಕೆಯು ನಮ್ಮ ನಿರಾಶೆ, ಸಮಸ್ಯೆ ಹಾಗೂ ಒತ್ತಡಕ್ಕೆ ಕಾರಣವಾಗಿಬಿಡಬಹುದು. ಇಲ್ಲಿ ನಾವೆಲ್ಲ ಮುಖ್ಯವಾಗಿ ನೆನಪಿಡಬೇಕಾದ ವಿಷಯವೇನು ಗೊತ್ತಾ? ಬರೀ ಕಾಫಿ ಕಪ್ ಅಷ್ಟೇ ಕಾಫಿಯ ನಿಜವಾದ ಸ್ವಾದವನ್ನು ಹೆಚ್ಚಿಸುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಕಾಫಿ ಕಪ್‌ಗೆ ಹೆಚ್ಚಿನ ಪ್ರಾಮುಖ್ಯವನ್ನು ನಾವೆಲ್ಲ ನೀಡಿರುತ್ತೇವೆ, ಆ ಕಪ್‌ನ ಬೆಲೆ ವಿಶೇಷವಾಗಿರುತ್ತದೆ ಎನ್ನುವ ಕಾರಣಕ್ಕಾಗಿ. ಆದರೆ ನಮಗೆಲ್ಲ ನಿಜವಾಗಿಯೂ
ಬೇಕಿರುವುದು ಕಾಫಿಯ ಸ್ವಾದದ ಅನುಭವ’. ಪ್ರೊಫೆಸರ್ ತಟ್ಟೆಯಲ್ಲಿ ಕಾಫಿಯನ್ನು ಹಿಡಿದು ಬಂದಾಗ ವಿದ್ಯಾರ್ಥಿಗಳೆಲ್ಲ ಅತ್ಯುತ್ತಮವಾದ, ದುಬಾರಿ ಕಪ್‌ನಲ್ಲಿರುವ ಕಾಫಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗೂ ಎಲ್ಲರ ಕಣ್ಣು ಮತ್ತೊಬ್ಬರ ಕಾಫಿ ಕಪ್ ಮೇಲೆಯೇ ಇರುತ್ತದೆ- ಆ ಮತ್ತೊಂದು ಕಪ್ ಎಷ್ಟು ಚಂದವೆಂದು ನೋಡುವುದಕ್ಕೆ.

ಬದುಕೂ ಅಷ್ಟೇ, ಕಪ್‌ನಲ್ಲಿರುವ ಕಾಫಿಯಂತೆ. ನಮ್ಮ ಕೆಲಸ, ದುಡ್ಡು, ವೃತ್ತಿ, ಸ್ಥಾನ ಇವೆಲ್ಲವೂ ಕಾಫಿ ಕಪ್‌ಗಳಂತೆ. ಇವೆಲ್ಲವೂ ನಮ್ಮ ನಮ್ಮ ಬದುಕಿನ ಕತೆಗಳನ್ನು ಹಿಡಿದಿಟ್ಟಿರುವ ರಚನೆಗಳಷ್ಟೇ. ನಮ್ಮ ಬಳಿ ಇರುವ ಕಾಫಿ ಕಪ್ ನಾವು ಯಾರೆಂಬುದನ್ನು ನಿರೂಪಿಸುವುದಿಲ್ಲ ಅಥವಾ ನಮ್ಮ
ಬದುಕಿನ ಗುಣಮಟ್ಟವನ್ನು ಬದಲಾಯಿಸುವುದಿಲ್ಲ. ಕೆಲವೊಮ್ಮೆ ಬದುಕಲ್ಲಿ ಕೇವಲ ಕಪ್ ಮೇಲಷ್ಟೇ ನಿಗಾವಹಿಸಿ ಅದರೊಳಗಿನ ಕಾಫಿಯ ಸ್ವಾದವನ್ನು ಆಸ್ವಾದಿಸಲು ನಾವು ಸೋತುಬಿಡುತ್ತೇವೆ. ನಾವೆಲ್ಲ ಮೊದಲು ಕಾಫಿಯನ್ನು ಸವಿಯಬೇಕಿದೆ, ಕಾಫಿ ಕಪ್‌ಗಳನ್ನಲ್ಲ.

ಕಟ್ಟ ಕಡೆಯದಾಗಿ, ನಮಗೆಲ್ಲ ಬೇಕಿರುವುದು ಸಂತೋಷ ಮತ್ತು ನೆಮ್ಮದಿ. ಖುಷಿಯಿಂದ ಇರುವ ಜನರಲ್ಲಿ ಎಲ್ಲಾ ಉತ್ತಮಿಕೆಗಳು ಇರುವುದಿಲ್ಲ; ಆದರೆ ಅವರು ತಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಅತ್ಯುತ್ತಮವಾಗಿ ಸಲು ಪ್ರಯತ್ನಿಸುತ್ತಿರುತ್ತಾರೆ. ಸರಳವಾಗಿ ಬದುಕುತ್ತಾ, ಅಗಾಧವಾಗಿ ಪ್ರೀತಿಸುತ್ತಾ, ಆಳವಾಗಿ ಕಾಳಜಿವಹಿಸುತ್ತಾ, ಹಿತವಾಗಿ ಮಾತನಾಡುತ್ತಾ, ತುಂಬು ಬದುಕನ್ನು ಬದುಕಿಬಿಡೋಣ, ಏನಂತೀರಿ?

Leave a Reply

Your email address will not be published. Required fields are marked *