Friday, 13th December 2024

ಬದುಕೆಂಬ ಮಾರುಕಟ್ಟೆಯ ಮಾರುವ – ಕೊಳ್ಳುವ ಸಿದ್ಧಾಂತ

ಲಹರಿ

ಮಲ್ಲಿಕಾರ್ಜುನ ಗುಮ್ಮಗೋಳ

“ಈ ಪ್ರಪಂಚ ಎಷ್ಟೊಂದು ವಿಸ್ಮಯಕರ ವಾಗಿದೆ. ಅದೇ ಮಣ್ಣು, ಆದರೆ ಅದರ ಒಡಲೊಳಗಿಂದ ಎಷ್ಟೊಂದು ತರಹದ ಹೂವು, ಹಣ್ಣು! ರಸ, ರೂಪ, ಸ್ವಾದ, ಗಂಧ! ದೇವರೇ, ನಿನ್ನ ಚಮತ್ಕಾರಕ್ಕೆ ನಾನು ನಿಬ್ಬೆರಗಾದೆ. ಎಷ್ಟೊಂದು ಜೀವ ಸಂಕುಲವನ್ನು ಹುಟ್ಟಿಸಿ, ಸಾಕಿ, ಸಲಹಿ ಸಾಗಹಾಕುತ್ತಿರುವೆ.

‘ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ’ ಎಂಬಂತೆ ಅಡಿಗಡಿಗೆ ಆಹಾರ, ನೀರು ಇಟ್ಟು ಸಂರಕ್ಷಿಸುತ್ತಿರುವೆ. ಒಂದೊಂದು ಜೀವಿಗೂ ಒಂದೊಂದು ಬದುಕಿನ ಪರಿಧಿಯನ್ನು ಸೃಷ್ಟಿಸಿರುವೆ. ಆದರೆ ಒಂದರ ದಾರಿ ಮತ್ತೊಂದ ರಂತಿಲ್ಲ. ರೂಪ, ರಂಗು, ಬೆಡಗು, ಬಗೆ ಎಲ್ಲವೂ ಭಿನ್ನ ವಿಭಿನ್ನ! ಎಲ್ಲಿ, ಯಾವಾಗ, ಹೇಗೆ, ಏನು ಘಟಿಸು ತ್ತದೆಯೋ ತೋರಗಾಣದು. ಒಂದು ಕಡೆ ಹುಟ್ಟಿನ ಸಂಭ್ರಮ.

ಮತ್ತೊಂದು ಕಡೆ ಸಾವಿನ ಸೂತಕ. ಇಲ್ಲಿ ಮಳೆ, ಅಲ್ಲಿ ಧಗೆ. ಎಲ್ಲವೂ ನಿಗೂಢ. ನಿನ್ನಂಥ ವಿಜ್ಞಾನಿ, ಕಲಾಕಾರ, ನಿರೂಪಕ, ನಾಟಕಕಾರ ಮತ್ತೊಬ್ಬನಿಲ್ಲ” ಎಂದು ಸಹಜ ಕಾಡಿನಂಥ ಬಟಾನಿಕಲ್ ಗಾರ್ಡನ್‌ನಲ್ಲಿ ಎರಡು ಸುತ್ತು ವಾಕಿಂಗ್ ಮುಗಿಸುವಷ್ಟರಲ್ಲಿ ಮನಸ್ಸು ಆಲೋಚಿಸುತ್ತಿತ್ತು. ಈ ಬಾಹ್ಯ ಪ್ರಪಂಚ ಮತ್ತು ಆಂತರಿಕ ಆಲೋಚನಾ ಪ್ರಪಂಚ ಅಚ್ಚರಿದಾಯಕವಾಗಿದೆಯಲ್ಲಾ ಎನ್ನುತ್ತ ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದೆ… ವಾಕಿಂಗ್ ಗ್ರೌಂಡಿನ ರಸ್ತೆಯ ಪಕ್ಕದಲ್ಲಿ ಒಬ್ಬ ಒಂದಿಷ್ಟು ತರಕಾರಿ, ಹಣ್ಣು, ಒಂದು ಮಿಕ್ಸರ್ ಹಾಗೂ ಪೇಪರ್ ಲೋಟ ಗಳನ್ನು ಇಟ್ಟುಕೊಂಡು ಮಿಕ್ಸರನ್ನು ‘ಗೊರ್’ ಎಂದು ಒದರಿಸುತ್ತ ನಿಂತಿದ್ದ. ಅವನ ಸುತ್ತ ಎಲ್ಲ ವಯೋ
ಮಾನದ ವಾಕರ್ಸ್‌ಗಳು ಮುತ್ತಿಕೊಂಡಿದ್ದರು. ಕೆಲವರು ಒಂದೊಂದು ಲೋಟ ರಸ ಹೀರುತ್ತಿದ್ದರು.

ನಾನೂ ಗದ್ದಲದಲ್ಲಿ ಸಂದಿ ಮಾಡಿಕೊಂಡು ಗೋಣು ತುರುಕಿ ಹಣಕಿಹಾಕಿದೆ. ‘ಬರ್ರೀ, ಸೋರೆಕಾಯಿ ಜ್ಯೂಸ್ ಬಿಪಿಗೆ ಒಳ್ಳೆಯದು, ಹಾಗಲಕಾಯಿ ಶುಗರ್‌ಗೆ ಒಳ್ಳೆಯದು, ಕರಕಿ ಕಿಡ್ನಿಗೆ, ಮೂಲಂಗಿ ಮೂಲವ್ಯಾಽಗೆ, ಬೂದುಗುಂಬಳ ಜ್ಞಾಪಕಶಕ್ತಿಗೆ, ಅಶ್ವಗಂಧ ನರ ದೌರ್ಬಲ್ಯಕ್ಕೆ ಒಳ್ಳೆಯದು. ಯಾವುದೇ ಜ್ಯೂಸ್ ತೆಗೆದುಕೊಳ್ಳಿ. ಒಂದು ಗ್ಲಾಸ್‌ಗೆ ಬರೀ ಇಪ್ಪತ್ತು ರುಪಾಯಿ ಮಾತ್ರ’ ಎಂದು ಕೂಗುತ್ತಿದ್ದ. ಅಲ್ಲೇ ಪಕ್ಕದಲ್ಲಿ ಪೇರಲ, ಪಪ್ಪಾಯಿ ಸೇರಿದಂತೆ ಹಲವಾರು ತಾಜಾ ಹಣ್ಣುಗಳನ್ನು ಇಟ್ಟುಕೊಂಡು ಮತ್ತೊಬ್ಬ ಕುಳಿತಿದ್ದ. ‘ಪೇರಲ ಎಂದರೆ ಅಮರೂದ, ಅಮರೂದ ಎಂದರೆ ಅಮೃತ. ಒಂದು ಅಮರೂದ ಹತ್ತು ಸೇಬಿಗೆ ಸಮ.

ಒಂದು ನೆಲ್ಲೀಕಾಯಿ ಹತ್ತು ಕಿತ್ತಳೆಗೆ ಸಮ’ ಎನ್ನುತ್ತ ಒಂದೊಂದು ಹಣ್ಣಿನ ಗುಣವಿಶೇಷಗಳನ್ನು ವರ್ಣಿಸುತ್ತ ಗಿರಾಕಿಗಳನ್ನು ಕರೆಯುತ್ತಿದ್ದ. ಅವನ ಪಕ್ಕದಲ್ಲಿಯೇ ಡೀಪ್ ನೆಕ್ ಬ್ಲೌಸ್ ತೊಟ್ಟು, ತೊಟ್ಟುಮುರಿದ ತೋತಾಪುರಿಗಳನ್ನು ತೋರುಗಾಣಿಸುತ್ತ, ತಾಜಾ ತಾಜಾ ಸೊಪ್ಪುಗಳನ್ನು ನೀಟಾಗಿ ಹೊಂದಿಸಿಕೊಂಡು ಹೆಂಗಸೊಬ್ಬಳು ಬಾಯಿ ತುಂಬ ಎಲೆ-ಅಡಿಕೆ ಹಾಕಿಕೊಂಡು ಕೆನ್ನೆಗಳನ್ನು ಸೇಬಿನ ಗಾತ್ರದಲ್ಲಿ ಉಬ್ಬಿಸಿಕೊಂಡು, ತೊಂಡೆತುಟಿಗಳಿಂದ ತಾಂಬೂಲ ಹೊಳಸ್ಯಾ ಡುತ್ತ, ತುಟಿಗಳ ಮೇಲೆ ಒಸರುತ್ತಿದ್ದ ತಾಂಬೂಲ ರಸವನ್ನು ಚೂಪಾದ ನಾಲಿಗೆಯಂದ ಆಗಾಗ ಒಳಗೆ ಸವರಿಕೊಳ್ಳುತ್ತ ಕುಳಿತಿದ್ದಳು.

ಅವಳು ಯಾರನ್ನೂ ಕೂಗಿ ಕರೆಯುತ್ತಿರಲಿಲ್ಲ. ಏಕೆಂದರೆ ಬಾಯಲ್ಲಿ ತಾಂಬೂಲ ವಿತ್ತಲ್ಲ. ಕರೆದರೆ, ಕೂಗಿದರೆ ರಸ ಸೋರುತ್ತದೆ! ಅವಳು ಕರೆಯದಿದ್ದರೂ ಆ ಕಡೆಗೆ ಜನರ ಕಣ್ಣು ಮತ್ತು ಕಾಲು ಹರಿಯುತ್ತಿದ್ದವು. ಹೀಗೆಯೇ ನಾನು ಕಾಲು ಜಾರಿಸಿದೆ. ಯಾವುದರ ರೇಟನ್ನೂ ಚೌಕಾಸಿ ಮಾಡದೆ ಜನ ಮುಗಿಬಿದ್ದು ಖರೀದಿಸು
ತ್ತಿದ್ದರು. ಕೈತುಂಬ ಚಿನ್ನದ ಉಂಗುರ, ಕಡಗ ಹಾಕಿಕೊಂಡು, ದೊಡ್ಡ ದೊಡ್ಡ ನೋಟುಗಳನ್ನು ಅವಳ ಮುಂದೆ ಚಾಚುತ್ತಿದ್ದರು. ಈ ಮಾರುವ ತಂತ್ರ ಮತ್ತು ಕೊಳ್ಳುವ ಪರಿಯ ಬೆಡಗನ್ನು ನಾನು ಕಣ್ಣತುಂಬ ನೋಡುತ್ತಿದ್ದೆ. ಕಿವಿಗೆ ನಾನಾ ರೀತಿಯ ಶಬ್ದಗಳು, ನಗೆಚಟಾಕಿಗಳು, ವೇದಾಂತಗಳು, ಆರೋಗ್ಯಯುತ ಆಹಾರದ ಮಾತುಗಳು ಹಾಗೂ ಡಬಲ್ ಮೀನಿಂಗ್ ಡೈಲಾಗುಗಳು ಕೇಳುತ್ತಿದ್ದವು.

ಈ ಮಾರುಕಟ್ಟೆ ಎಂಬುದೇ ನಿಜವಾದ ವಿಶ್ವವಿದ್ಯಾಲಯವೆಂದು ನನಗೆ ಅನ್ನಿಸಿತ್ತು. ಲೋಕಜ್ಞಾನದ ಸಿದ್ಧಾಂತಗಳು ಏನಾದರೂ ಇದ್ದರೆ ಅದು ಇಂಥ ಜನನಿಬಿಡ ಮಾರುಕಟ್ಟೆ ಯಲ್ಲಿ ಅನ್ನಿಸಿತು. ಹೇಗಂತೀರಾ?! ಬನ್ನಿ ಹೇಳುತ್ತೇನೆ: ಒಬ್ಬ ಸಬ್ಬಸಿಗೆ ಸೊಪ್ಪು ಖರೀದಿಸುತ್ತಿದ್ದ. ಅವನ ಪಕ್ಕದಲ್ಲಿ ನೋಡುತ್ತ ನಿಂತಿದ್ದ ಅವನ ವಾಕ್‌ಮೇಟ್, ‘ಲೋ, ಸಬ್ಬಸಿಗೆ ಸೊಪ್ಪು ಭಾಳ್ ತಿನ್ಬಾರ್ದಲೇ, ಬ್ಯಾಕ್‌ಪೇನ್ ಬರ್ತೈತಿ’ ಅಂದ. ಅವನು ಸಬ್ಬಸಿಗೆ ಚೆಲ್ಲಿ, ಪಾಲಕ್ ಸಿವ್ಡ್ ಹಿಡಿದುಕೊಂಡ. ‘ಲೇ, ಪಾಲಕ್ ಸೊಪ್ಪು ಭಾಳ್ ತಿನ್ಬಾರ್ದಲೇ, ಕಿಡ್ನಿ ಸ್ಟೋನ್ ಆಗ್ತಾವು’ ಅಂದ. ಏನು ಖರೀದಿಸಬೇಕು ಎಂಬ ಗೊಂದಲಕ್ಕೆ ಅವನು ಬಿದ್ದ.

‘ಸುಮ್ನ ಮೆಂತೆಪಲ್ಲೆ ತುಗೋ. ಹೆಸರ್ಕಾಳ್ ಇಲ್ಲಾ ತೊಗರೀ ಬ್ಯಾಳ್ಯಾಗ್ ಹಾಕಿ ಪಲ್ಲೆ ಮಾಡಿ, ಜ್ವಾಳದ್ ರೊಟ್ಟಿ ಜೊತಿಗೆ ಹಚ್ಗೊಂಡ್ ಮನಗಂಡ್ ಹೊಡ್ತಾ ಹೊಡ್ದಾ ಅಂದ್ರ…. ಬೀಪಿ, ಶುಗರ್, ಹಾರ್ಟ್ ಎಲ್ಲಾ ನಾರ್ಮಲ್ ಆಗ್ತಾವ’ ಅಂದ. ಇದನ್ನು ಕೇಳಿದ ಆ ಮಾ(ರಾ)ಟಗಾತಿ ‘ಸಾಹೇಬ್ರಾ, ಎಲ್ಲಾ ತೊಪ್ಪಲ ಪಲ್ಲೆ ದೇಹಕ್ಕ ಒಳ್ಳೇದು. ಸಂಶಯಪಟ ಗೋಂತ ತಿಂದ್ರ ಎಲ್ಲಾ ಕೆಟ್ಟ ಅನ್ಸತಾವ್. ಸುಮ್ನ ಎಲ್ಲಾ ಎಲ್ಡೆಲ್ಡ್ ತುಗೊಂಡ್ ಹೋಗ್ರೀ’ ಎಂದು ತನ್ನ ಮಾರಾಟದ ಥೇರಿ ಮಂಡಿಸಿದಳು. ಆದರೂ ಅವನ ಗೆಳೆಯ ನಿತ್ಯ ಮೆಂತೆ ಪಲ್ಲೆಯನ್ನೇ ಒಯ್ಯುತ್ತಿದ್ದಾನೆ. ಇಂಥ ಮಾತುಗಳು ಯಾರದೇ ಕಿವಿಮೇಲೆ ಬಿದ್ದರೂ ಮನಸ್ಸು ಸ್ವಲ್ಪ ಹೊರಳಾಡಿ ಆಲೋಚಿಸುತ್ತದೆ. ಹೀಗೆ ಏನನ್ನಾದರೂ ಖರೀದಿಸುವಾಗ ಕೊಂಚ ಹೊಯ್ದಾಡುತ್ತದೆ. ಇದಕ್ಕೆ ಸಮೂಹಸನ್ನಿ ಎನ್ನಬೇಕೋ, ಲೋಕಜ್ಞಾನ ಎನ್ನಬೇಕೋ ತಿಳಿಯುವುದಿಲ್ಲ.

ಮೊದಲೆಲ್ಲ ಕೂಡುಕುಟುಂಬಗಳು ಹೆಚ್ಚಾಗಿದ್ದವು. ಮನೆಯಲ್ಲಿ ಇರುವ ಅಜ್ಜ-ಅಜ್ಜಿಯರು ‘ಊಟ ಬಲ್ಲವನಿಗೆ ರೋಗವಿಲ್ಲ’, ‘ಆಹಾರವೇ ಔಷಧಿ’ ಎಂಬಂತೆ ಆಯಾ
ಕಾಲಕ್ಕೆ, ಋತುಮಾನಕ್ಕೆ ತಕ್ಕಂತೆ ಆಹಾರ ಪದಾರ್ಥಗಳ ಆಯ್ಕೆ ಮಾಡುತ್ತಿದ್ದರು. ಅಡುಗೆ ಮನೆಯಲ್ಲಿಯ ಮಸಾಲೆ ಸಾಮಾನುಗಳಿಂದಲೇ ಮನೆಮದ್ದು ತಯಾರಿಸಿ ಕಾಯಿಲೆ- ಕಸಾರಿಕೆ ನಿಯಂತ್ರಿಸುತ್ತಿದ್ದರು. ಈ ರೀತಿ ಆಹಾರ ಪದಾರ್ಥ ಗಳ ಜ್ಞಾನ ಇಲ್ಲದ ಹೊಸ ತಲೆಮಾರಿನ ಜನ ಪ್ರತಿಯೊಂದನ್ನೂ ಇಂಟರ್‌ ನೆಟ್‌ನಲ್ಲಿ ಚೆಕ್ ಮಾಡಿ ತಿಳಿದುಕೊಳ್ಳುತ್ತಾರೆ. ಕೆಲವು ಬಾರಿ ಪದಾರ್ಥಗಳ ಪ್ರಯೋಜನಕ್ಕಿಂತ ಅವುಗಳ ಸೈಡ್ ಎಫೆಕ್ಟ್ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ.

ಈ ವಾಟ್ಸಾಪ್, ಫೇಸ್‌ಬುಕ್, ಯುಟ್ಯೂಬ್ ವಿಶ್ವ ವಿದ್ಯಾಲಯಗಳಂತೂ ಜೀವಮಾನವಿಡೀ ಓದಿದರೂ, ಕೇಳಿದರೂ ಮುಗಿಯದಷ್ಟು ಮಾಹಿತಿಯನ್ನು ಬೆರಳತುದಿ
ಯಲ್ಲಿ ತಂದು ಒಗೆಯುತ್ತವೆ. ‘ಇದನ್ನು ತಿಂದರೆ ಜೋಕೆ! ಹೀಗೆ ಮಾಡಿದರೆ ಎಚ್ಚರ! ತಿಂದರೆ ಏನಾಗುತ್ತದೆ ಎಂಬುದನ್ನು ಕೇಳಿದರೆ ಶಾಕ್ ಆಗ್ತೀರಾ!!’ ಎಂದು ಹೆದರಿಸಿಯೇ ಕೊಲ್ಲುತ್ತವೆ. ಆದರೂ ಬಹಳಷ್ಟು ಜನ ಮೆಡಿಸಿನ್‌ಗಳ ಎಫೆಕ್ಟ್ ಮತ್ತು ಸೈಡ್ ಎಫೆಕ್ಟ್‌ಗಳ ಬಗ್ಗೆ ವೈದ್ಯರನ್ನು ಕೇಳುವುದನ್ನು ಬಿಟ್ಟು, ಅಂತರ್ಜಾಲದಲ್ಲಿ ಜಾಲಾಡುವುದೇ ಹೆಚ್ಚು. ಯಾವುದೇ ಪದಾರ್ಥ, ಪರಿಕರ ಖರೀದಿಸುವಾಗಲೂ ಅದರ ಗುಣಮಟ್ಟ, ಬ್ರ್ಯಾಂಡ್, ರೇಟಿಂಗ್ ಸ್ಟಾರ್‌ಗಳನ್ನು ಹುಡುಕುತ್ತಾರೆ. ಹೀಗೆ ಸಿಗುವ ಮಾಹಿತಿ ನಿಖರವೋ ‘ನಿಕ್ಕರವೋ’ ಎಂದು ಆಲೋಚಿಸಲು ಸಮಯವಿಲ್ಲ.

ಹಿರಿಯರ ಹತ್ತಿರ ವಿಚಾರಿಸಲು ಹಿರಿಯರೆಲ್ಲ ಹಳ್ಳಿಗಳಲ್ಲೋ, ವೃದ್ಧಾಶ್ರಮಗಳಲ್ಲೋ ಹಳಹಳಿಸುತ್ತ ಕುಳಿತಿದ್ದಾರೆ. ಈಗಲೂ ಪ್ರತಿ ಊರಿನಲ್ಲಿ ಬೇರೆ ಬೇರೆ ವಸ್ತುಗಳಿಗೆ ಬೇರೆ ಬೇರೆ ಮಾರುಕಟ್ಟೆ ಇರುವುದನ್ನು ಅಲ್ಲಲ್ಲಿ ಕಾಣುತ್ತೇವೆ. ಅಕ್ಕಿಪೇಟೆ, ಗ್ರಾಸರಿ ಮಾರ್ಕೆಟ್, ಜವಳಿ ಸಾಲ್, ಬಳೇಪೇಟೆ, ಕಾಟನ್‌ಪೇಟೆ, ಮಟನ್ ಮಾರ್ಕೆಟ್,
ಫಿಶ್ ಮಾರ್ಕೆಟ್, ಸಬ್ಜಿ ಮಂಡಿ, ಚಿನ್ವಾಲ್ ಗಟ್ಟಿ (ಬಂಗಾರ ಪೇಟೆ), ದಲಾಲ್ ಸ್ಟ್ರೀಟ್, ಆಟೋವೇ, ನಿಲಿಜಿನ್ ರೋಡ್ ಹೀಗೆ ಹಲವು ವಿಧ. ಒಂದೊಂದು ಏರಿಯಾದಲ್ಲಿ ಒಂದೊಂದು ದಿನ ಸಂತೆ ನಡೆಯುವುದು ವಾಡಿಕೆ ಇತ್ತು. ಐತ್ಯಾರ ಪ್ಯಾಟಿ, ಸ್ವಾಮಾರ ಸಂತಿ, ಮಂಗಳಾರ ಪ್ಯಾಟಿ, ಶುಕ್ರಾರ್ ಸಂತಿ, ಶನಿವಾರ್ ಸಂತಿ ಹೀಗೆ. ಇನ್ನು ಕಳ್ಳಮಾಲು, ಸೆಕೆಂಡ್ಸ್ ವಸ್ತುಗಳು ಸಿಗುವ ಮಾರುಕಟ್ಟೆ ಗಳಂತೂ ನಮ್ಮಲ್ಲಿ ಫೇಮಸ್.

ಅವು ಮುಖ್ಯ ಮಾರುಕಟ್ಟೆಯಿಂದ ದೂರ ಸಂದಿಗೊಂದಿಯಲ್ಲಿದ್ದರೂ ಖರೀದಿ ಜೋರು. ಇಂಥ ಜನಸಾಮಾನ್ಯ ಮಾರುಕಟ್ಟೆಯಲ್ಲಿ ತರಕಾರಿ ಮಾರುವವರ ಕೂಗಾಟ ಭರಾಟೆಯಾಗಿರುತ್ತದೆ. ‘ಬರ್ರೀ, ನುಗ್ಗಿಕಾಯಿ ಹತ್ತ ರುಪಾಯಿಗೊಂದು, ಹದ್ನೈದ ರುಪಾಯಿಗೆರಡು. ಈ ಮನಿಗೊಂದ, ಆ ಮನಿಗೊಂದ. ಮಕ್ಕಳ (ಸಿಂಗಾ) ಬೀಜ ತಿನ್ನರೀ, ಮನಿತುಂಬ ಮಕ್ಕಳ ಮಾಡ್ರಿ. ಮೆಣಸಿನಕಾಯಿ ತಿನ್ನರಿ, ಹೊಟ್ಯಾಗಿನ ಹುಳಾ ಕೊಲ್ಲರೀ’ ಎಂದು ಡಬಲ್ ಮೀನಿಂಗ್ ಟಾಂಟ್‌ಗಳು ಜೋರಾಗಿರುತ್ತವೆ.

ಇತ್ತಿತ್ತಲಾಗಿ ಪ್ರತ್ಯೇಕ ಮಾರುಕಟ್ಟೆಯ ಮಹತ್ವ ಕಡಿಮೆಯಾಗಿ ಮಾಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಇರುವ ಮಾಲ್‌ಗಳಲ್ಲಿ ಏಸಿ ಇದ್ದರೂ ಬಾಸಿ ತರಕಾರಿ
ಖರೀದಿಸಬೇಕಾಗುತ್ತದೆ. ಆಫರ್, ‘ಬೈ ಒನ್, ಗೆಟ್ ಒನ್’ ಎಂಬ ಆಮಿಷದಿಂದಾಗಿ ಬೇಡವಾಗಿದ್ದನ್ನೂ ಖರೀದಿಸಿ ತಂದು ಮನೆಯನ್ನು ಡಸ್ಟ್‌ಬಿನ್ ಮಾಡಿಕೊಳ್ಳುತ್ತೇವೆ. ದಿವಾಳಿ ಧಮಾಕಾ, ಬಿಗ್ ಬಿಲಿಯನ್ ಸೇಲ್, ಇಂದಿನ ಉಚಿತ ಕೊಡುಗೆ ಎಂದೆಲ್ಲ ಜಾಹೀರಾತುಗಳು, ಎಸ್ ಎಂಎಸ್ ಸಂದೇಶಗಳು ಮನಸನ್ನು ಕೆರಳಿಸುತ್ತವೆ. ಖರೀದಿಸುವ ಕೌಂಟರ್‌ನಲ್ಲಿಯೇ ಕೆಲವು ವಸ್ತುಗಳನ್ನು ಪೇರಿಸಿಟ್ಟು, ‘ಫಸ್ಟ್ ಮೂವ್‌ಮೆಂಟ್’, ‘ಮಸ್ಟ್ ಬೈ’, ‘ಅವರ್ ಪ್ರೈಸ್’
ಎಂದೆಲ್ಲ ಬೋರ್ಡ್ ಹಾಕಿ, ಖಾಲಿಕಿಸೆಯ ಸಂತನ ಮನಸನ್ನು ಮಂಗ್ಯಾನ ಮಾಡಿ ಕ್ರೆಡಿಟ್‌ದಾರನನ್ನಾಗಿ ಮಾಡುತ್ತದೆ ಈ ಮಾರುಕಟ್ಟೆ ಎಂಬ ಮರ್ಕಟ.

ಈ ಎಲ್ಲ ಸರಕುಸಂತೆಗಳ ನಡುವೆ ‘ಸಾವಯವ ಸಂತೆ’ ಎಂಬುದೊಂದು ಹುಟ್ಟಿಕೊಂಡಿದೆ. ರಾಸಾಯನಿಕ ಮುಕ್ತ, ಕೈಯಿಂದ ಮಾಡಿದ, ಗಾಣದಿಂದ ತೆಗೆದ,
ಸಿರಿಧಾನ್ಯಗಳಿಂದ ಮಾಡಿದ ಎಂಬೆಲ್ಲ ಫಲಕಗಳನ್ನು ಹೊತ್ತುಕೊಂಡ ದವಸಧಾನ್ಯಗಳು, ಹಣ್ಣು-ತರಕಾರಿಗಳು, ಸಿದ್ಧ ಪದಾರ್ಥಗಳು ಯಾವುದೇ ಅಂಗಡಿ ಮುಂಗಟ್ಟುಗಳ ಹಂಗಿಲ್ಲದೆ ಜನ ಸೇರುವ ರಸ್ತೆಬದಿಗಳಲ್ಲಿ ಸೇರಿ, ಕ್ಷಣ ಹೊತ್ತಿನಲ್ಲಿ ಖಾಲಿಯಾಗುತ್ತವೆ. ಇತ್ತೀಚೆಗೆ ಸಣ್ಣ ವಯಸ್ಸಿನ ವರಿಗೂ ಬಿಪಿ, ಶುಗರ್ ಬರುತ್ತಿದ್ದು, ಜನರಿಗೆ ವಿಪರೀತವಾದ ಆರೋಗ್ಯದ ಕಾಳಜಿ, ಭಯ ಹುಟ್ಟಿಕೊಂಡಿದೆ. ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗಿದೆ. ನಾವು ಸಣ್ಣವರಿದ್ದಾಗ ನವಣೆ, ಸಾವೆ, ರಾಗಿ, ಹುರಳಿಯಂಥ ತೃಣಧಾನ್ಯಗಳನ್ನು ದನಗಳಿಗೆ ಹಾಕುತ್ತಿದ್ದೆವು. ಈಗ ಇವುಗಳು ಸಿರಿಧಾನ್ಯಗಳಾಗಿ ಬಂಗಾರದ ಬೆಲೆ ಪಡೆದುಕೊಂಡಿವೆ. ನಿತ್ಯ ಆಹಾರ ತಟ್ಟೆಯ ಸಂಪದವಾಗಿವೆ.

ದೇವರೇ, ಇರುವ ಚೋಟುದ್ದ ಹೊಟ್ಟೆಗೆ ಎಷ್ಟೊಂದು ಚಪಲ ಖಾದ್ಯಗಳು! ಈ ಹೊಟ್ಟೆಯನ್ನು ಹೊರೆಯುವುದಕ್ಕಾಗಿ ಎಷ್ಟೆಲ್ಲ ವಿದ್ಯೆ, ಕಲೆ, ತಂತ್ರ, ಕುತಂತ್ರಗಳನ್ನು ನೀನು ಈ ಮಿದುಳುಗಳಲ್ಲಿ ಅಡಗಿಸಿರುವೆ? ಊಹೆಗೆ, ಗೇಣಿಕೆಗೆ ನಿಲುಕದು. ನಿನ್ನ ಸೃಷ್ಟಿಯ ಸೊಬಗು, ರೌದ್ರತೆ ಏನೆಂದು ಬಣ್ಣಿಸುವುದು?!