ಶಿಶಿರ ಕಾಲ
shishirh@gmail.com
ಇದು ಸುಮಾರು ೧೬-೧೭ ವರ್ಷದ ಹಿಂದಿನ ಕಥೆ. ನನ್ನ ಒಬ್ಬ ಸ್ನೇಹಿತನದು ಮೀನುಗಾರರ ಕುಟುಂಬ. ಓದು ಮುಗಿಸಿದ ಮೇಲೆ ಕುಲಕಸುಬನ್ನೇ ಮುಂದು
ವರಿಸುವುದಾಗಿ ನಿರ್ಧರಿಸಿದ್ದ. ಸ್ವಲ್ಪ ಹಣ ತೊಡಗಿಸಿ, ಇನ್ನು ಸ್ವಲ್ಪ ಸಾಲ ಮಾಡಿ ಅತ್ಯಾಧುನಿಕ ಮೀನುಗಾರಿಕಾ ದೋಣಿಯನ್ನು ಖರೀದಿಸಿದ್ದ. ಅಂದಿನಿಂದ ಒಮ್ಮೆ ಕಡಲಿಗೆ ಮೀನು ಹಿಡಿಯಲು ಹೋಗುವಾಗ ‘ಜತೆಯಲ್ಲಿ ಬಾ’ ಎಂದು ಹೇಳುತ್ತಲೇ ಇದ್ದ. ನನಗೂ ಕಡಲೆಂದರೆ ಎಲ್ಲಿಲ್ಲದ ಸೆಳೆತ.
ಆದರೆ ಅವರ ದೋಣಿ ಸಮುದ್ರಕ್ಕೆ ಇಳಿದರೆ ಸುಮಾರು ೧೫-೨೦ ದಿನಗಳವರೆಗೆ ವಾಪಸ್ ಬರುವುದಿಲ್ಲ. ಅಷ್ಟೆಲ್ಲ ದಿನ ರಜೆ ಸಿಗುವುದು ಕಷ್ಟವಾದದ್ದರಿಂದ ನಾನು ಮುಂದೂಡುತ್ತಲೇ ಇದ್ದೆ. ‘ಎರಡು ಮೂರು ದಿನದ್ದು ಏನಾದರೂ ಇದ್ದರೆ ಹೇಳು, ಬರ್ತೇನೆ’ ಎಂದಿದ್ದೆ. ಅದಕ್ಕೆ ‘ಇದೇನು ಪ್ಯಾಕೇಜ್ ಟೂರ್ ಅಲ್ಲ’ ಎಂದು ಸ್ನೇಹಿತ ಕಿಚಾಯಿಸಿದ್ದ. ಅವರು ಕಡಲಿಗೆ ಹೋಗುವಾಗ ಯಥೇಚ್ಛ ಐಸ್, ಆಹಾರ, ನೀರು, ಡೀಸಲ್ ಇತ್ಯಾದಿ ತುಂಬಿಸಿಕೊಂಡು, ಬಲೆಗಳನ್ನು ಮಡಚಿ, ಸಾವಿರದೆಂಟು ತಯಾರಿ ಮಾಡಿಕೊಂಡು ಹೋಗಬೇಕು. ಹೋದ ಮೇಲೆ ಮೀನು ಸಿಗದೇ ಇದ್ದಲ್ಲಿ, ಬರಿಗೈಯಲ್ಲಿ ಬಂದರೆ ಲಕ್ಷಾಂತರ ಹಣ ಲಾಸ್.
ಹಾಗಾಗಿ ಖಾಲಿ ಮರಳುವ ಮಾತೇ ಇಲ್ಲ. ಮೀನು ಸಿಗುವಲ್ಲಿಯವರೆಗೆ ಸಮುದ್ರದಲ್ಲೇ ಇರಬೇಕು. ಕೊನೆ ಗೊಂದು ದಿನ ಅವನ ಒತ್ತಾಯಕ್ಕಿಂತ ಜಾಸ್ತಿ ನನ್ನ ಕುತೂಹಲಕ್ಕೆ ಹೊರಟು ನಿಂತೆ. ಸಮುದ್ರದ ನಟ್ಟ ನಡುವೆ, ಯಾವುದೇ ನೆಲ ಕಾಣಿಸದ ಜಾಗದಲ್ಲಿ ಅಷ್ಟು ದಿನಗಳನ್ನು ಕಳೆಯುವುದು ಅನುಭವಿಸಿದವರಿಗೇ ಗೊತ್ತು. ಅಲ್ಲಿಂದ ಸಮುದ್ರದ ಗೀಳು ಇನ್ನಷ್ಟು ಹೆಚ್ಚಾಯಿತು. ಈಗ ಎರಡು ವರ್ಷದ ಹಿಂದೆ ಅಮೆರಿಕದ ಮಯಾಮಿ ನಗರದಿಂದ ದಕ್ಷಿಣದಲ್ಲಿರುವ ಬಹಾಮಾಸ್ ದ್ವೀಪಕ್ಕೆ ಕ್ರೂಸ್ (ಹಡಗು) ಟ್ರಿಪ್‌ಗೆ ಹೊರಟಿದ್ದೆ. ಅರಬ್ಬಿ ಸಮುದ್ರದೊಳಕ್ಕೆ ಹೋಗಿ ಬಂದಿದ್ದ ನನ್ನೊಳಗೆ ‘ಎಕ್ಸ್‌ಪೀರಿ ಯನ್ಸ್ ಕಾಂಪ್ಲೆಕ್ಸ್’ ಇತ್ತೇನೋ, ಗೊತ್ತಿಲ್ಲ.
ಒಂದಿಷ್ಟು ಹಿಂದಿನ ಅನುಭವ ಗಳಂತೆಯೇ ಇದು ಕೂಡ ಇರುತ್ತದೆ ಎಂದೇ ಅಂದುಕೊಂಡಿದ್ದೆ. ನಾನು ಹೊರಟ ಐಷಾರಾಮಿ ಹಡಗು ತದಡಿಯ ಸ್ನೇಹಿತನ
ಮೀನುಗಾರಿಕಾ ದೋಣಿಯ ಸುಮಾರು ೫೦ ಪಟ್ಟು ದೊಡ್ಡದಿತ್ತು. ಹಡಗು ಮಯಾಮಿ ತೀರವನ್ನು ಬಿಟ್ಟದ್ದು ಸಂಜೆ. ರಾತ್ರಿಯಿಡೀ ಹಡಗಿನ ರೂಮಿನ ಬಾಲ್ಕನಿಯಲ್ಲಿ ಸಮುದ್ರವನ್ನು ನೋಡುತ್ತ ಕಳೆಯುವಾಗ ಅರಬ್ಬಿ ಸಮುದ್ರದಂತೆ, ಎಲ್ಲ ಸಮುದ್ರವೂ ಒಂದೇ ರೀತಿ, ಶಾಂತ ಎಂದೇ ಅನಿಸಿತು. ಆದರೆ ಮಾರನೇ ದಿನ ಹಾಗಿರಲಿಲ್ಲ. ಸಾಯಂಕಾಲವಾಗುತ್ತಿದ್ದಂತೆ ಕಾರ್ಮೋಡ ಕವಿಯಿತು.
ಸುಮಾರು ೧೦೦ ಕಿ.ಮೀ. ವೇಗದ ಬೀಸುಗಾಳಿ. ಹಡಗಿನ ಮುಂದಿನ ಭಾಗಕ್ಕೆ ಹೋಗಿ ಟೈಟಾನಿಕ್ ಪೋಸ್‌ನಲ್ಲಿ ನಿಲ್ಲಬೇಕೆಂದು ಇಣುಕಿ ನೋಡಿದರೆ ಕೆಳಗಡೆ
ಹಡಗು ನೀರನ್ನು ಸೀಳಿ ಹೋಗುತ್ತಿದ್ದುದು ಕಾಣಿಸುತ್ತಿತ್ತು. ೧೦-೧೫ ಅಡಿ ಎತ್ತರದ ತೆರೆಗಳು. ಈಗ ಗಾಳಿಯ ವೇಗ ೧೫೦ ಕಿ.ಮೀ. ನೋಡನೋಡುತ್ತಿರುವಾಗ ಇಡೀ ಹಡಗು ಸುಮಾರು ೨೦ ಡಿಗ್ರಿ ಇತ್ತಿಂದತ್ತ, ಅತ್ತಿಂದಿತ್ತ ಜೋಲಿ ಹೊಡೆಯಲು ಶುರುಮಾಡಿತು. ಕ್ರೂಸ್‌ನಲ್ಲಿದ್ದ ಕೆಲಸಗಾರರು ಇದೆಲ್ಲ ಸಹಜ ಎಂದರೂ ನಮಗೆಲ್ಲ ಭಯ. ಅಷ್ಟೊಂದು ಭೀಕರತೆ, ಅಷ್ಟೊಂದು ಗಾಳಿ ಯಾವತ್ತೂ ನೋಡಿರಲೇ ಇಲ್ಲ.
ಒಮ್ಮೆಯಂತೂ ಹಡಗು ಸುಮಾರು ೩೦ ಡಿಗ್ರಿಗಿಂತ ಜಾಸ್ತಿ ವಾಲಿ ಬಿಟ್ಟಿತು. ನನಗೆ ಒಮ್ಮೆಲೇ ಟೈಟಾನಿಕ್ ಹೀರೋಯಿನ್, ನಮ್ಮೂರು, ದೇಶ, ಬಾಲ್ಯ, ಅಪ್ಪ, ಅಮ್ಮನಿಂದ ಕುಲಪುರೋಹಿತರವರೆಗೆ ಎಲ್ಲರೂ ಕಣ್ಣೆದುರು ಬಂದುಹೋದರು. ನಾನು ಹೊರಟಿದ್ದ ಕ್ರೂಸ್ ‘ಬರ್ಮುಡಾ ಟ್ರಯಾಂಗಲ್’ ತ್ರಿಕೋನ ಪ್ರದೇಶದ ಒಂದು ಮೂಲೆಯಲ್ಲಿಯೇ ಪ್ರಯಾಣಿಸುತ್ತಿತ್ತು. ಕಾಲಡಿ, ಕೆಳಗೆ ಸಾವಿರಾರು ಅಡಿ ಆಳ. ಲಕ್ಷಾಂತರ ಜಲಚರಗಳು. ಅವುಗಳಲ್ಲಿ ಕೆಲವು ಮನುಷ್ಯನನ್ನು ಒಂದೇ ಗುಕ್ಕಿಗೆ ನುಂಗಿಹಾಕಬಲ್ಲವು.
ಸುತ್ತಲೆಲ್ಲೆಡೆ, ಎಲ್ಲೆಂದರಲ್ಲಿ ಬರೀ ನೀರು. ಕಣ್ಣು ಬಿಟ್ಟರೆ ಕಾಣುವುದು ಆಕಾಶ, ಮೋಡಗಳು, ಹಗಲಲ್ಲಿ ಸೂರ್ಯ, ರಾತ್ರಿಯಾದರೆ ಚಂದ್ರ, ನಕ್ಷತ್ರಗಳು. ಅಷ್ಟೆ.
ಸಮುದ್ರದ ಅಗಾಧತೆಯ ನಡುವೆ ಬದುಕಿನ ಪೂರ್ಣ ಶೂನ್ಯತೆಯ ಅನುಭವವಾಗುತ್ತದೆ. ನಾನೆಷ್ಟು ಯಕಃಶ್ಚಿತ್ ಎಂಬುದರ ಅರಿವಾಗುತ್ತದೆ. ನೀವು ವಿಮಾನದಲ್ಲಿ ಹಾರುವಾಗ ಅದೆಷ್ಟೇ ಸಾಗರ, ಸಮುದ್ರಗಳನ್ನು ನೋಡಿರಬಹುದು. ಅದರಾಳದಲ್ಲಿ ಈಜುವ ಮೀನುಗಳನ್ನು ಟಿವಿಯಲ್ಲಿ ಕಂಡಿರಬಹುದು. ಆದರೆ ಸಮುದ್ರದ ನಡುವೆ ನೆಲಕಾಣದ ದೂರದಲ್ಲಿ ಪ್ರಯಾಣಿಸುವುದಿದೆಯಲ್ಲ, ಅದರ ಅನುಭವವೇ ಅನನ್ಯ.
ಕೆಲವೊಂದು ಸಮುದ್ರಗಳು ಹೋಲಿಕೆಯಲ್ಲಿ ತೀರಾ ಶಾಂತ. ಇನ್ನು ಕೆಲವು ಅವರ್ಣನೀಯ ರೌದ್ರ. ಅಟ್ಲಾಂಟಿಕ್ ಮಹಾಸಾಗರ ಅದರಲ್ಲಿಯೂ ಕೆರೆಬಿಯನ್ ಸಮುದ್ರ. ಅಲ್ಲಿ, ಬರ್ಮುಡಾ ಟ್ರಯಾಂಗಲ್‌ನಲ್ಲಿ ಹಡಗುಗಳಷ್ಟೇ ಅಲ್ಲ, ಅದೆಷ್ಟೋ ವಿಮಾನಗಳು ನೀರಿಗುರುಳಿವೆ. ಅದರಿಂದಲೇ ಕುಖ್ಯಾತಿ. ಅಂಥ ಭಯಂಕರ ಸಾಗರದಲ್ಲಿ ಏಕಾಂತ ಪ್ರಯಾಣಕ್ಕೆ ಹೊರಡುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಅಮೆರಿಕದ ದಕ್ಷಿಣದಿಂದ, ಪೂರ್ವದಿಂದ ಅದೆಷ್ಟೋ ಮಂದಿ ಚಿಕ್ಕ ಹಡಗು, ಹಾಯಿದೋಣಿಯನ್ನು ಹತ್ತಿ ಕೆರೆಬಿಯನ್ ದ್ವೀಪಗಳಿಗೆ ಹೋಗಿಬರುವ ಅಸಾಮಾನ್ಯ ಸಾಹಸ ತೀರಾ ಸಾಮಾನ್ಯ. ಇವೇನೂ ಸುಲಭದ ಸಾಹಸವಲ್ಲ. ಮೌಂಟ್
ಎವರೆಸ್ಟ್ ಏರುವಷ್ಟೇ ಚಾಲೆಂಜಿಂಗ್. ಜೀವಂತವಾಗಿ ಹೋಗಿ ಮುಟ್ಟುವ ಖಾತರಿಯಿಲ್ಲ.
ಕೆಲ ದಿನದ ಹಿಂದೆ ಲೈಬ್ರರಿಯಲ್ಲಿ ಯಾವತ್ತೋ ಓದಿದ ಒಂದು ಪುಸ್ತಕ ಅಕಸ್ಮಾತ್ ಕೈಗೆ ಸಿಕ್ಕಿತು. ಅದು ಸ್ಟೀವನ್ ಕಲಹನ್ ಬರೆದ Adrift: Seventy-six Days Lost at Sea ಎಂಬ ಪುಸ್ತಕ. ಹಿಂದೆ ನಡೆದ ತನ್ನದೇ ಅನನ್ಯ ಅನುಭವದ ಸಾಹಸಗಾಥೆಯನ್ನು ಆತ ರಸವತ್ತಾಗಿ ವಿವರಿಸಿರುವ ಪುಸ್ತಕ ಅದು. ಸ್ಟೀವನ್‌ನ ಕಥೆ ಶುರುವಾಗುವುದು ಆತನ ಮದುವೆ ಯಿಂದ. ಆಗ ತಾನೇ ಮದುವೆಯಾಗಿದ್ದ. ಹೆಂಡತಿಯ ಜತೆ ಜೀವನ ಸರಿಬರಲಿಲ್ಲ. ವಿಚ್ಛೇದನವೂ ಆಗಿ ಹೋಯಿತು. ಇದ್ದ ಮನೆ ಹೆಂಡತಿಯ ಪಾಲಾಯ್ತು. ಇದ್ದ ಉದ್ಯೋಗವೂ ಅಷ್ಟಕ್ಕಷ್ಟೇ. ಜೀವನದಲ್ಲಿ ಗೊತ್ತು ಗುರಿಯೇ ಇಲ್ಲದ, ಎಲ್ಲವನ್ನು ಕಳೆದುಕೊಂಡ ಸ್ಥಿತಿ ಕಲಹನ್‌ದು. ಅವನಿಗೆ ಗೊತ್ತಿದ್ದದ್ದು ಒಂದೇ. ಸಮುದ್ರದಲ್ಲಿ ನಾವೆಯಲ್ಲಿ ಒಬ್ಬನೇ ಒಂದಿಷ್ಟು ದೂರ ಕ್ರಮಿಸಿ ವಾಪಸಾಗುವುದು.
ಅದು ಅವನ ಹವ್ಯಾಸವಾಗಿತ್ತು. ಬದುಕಿನ ಜಂಜಾಟವನ್ನು ಒಂದಿಷ್ಟು ಕಾಲ ಮರೆಯಬೇಕೆಂದು ನಾವೆ ಹತ್ತಿ ಈ ಬಾರಿ ಅವನು ಹೊರಟದ್ದು ಆಫ್ರಿಕಾಕ್ಕೆ- ಅಮೆರಿಕದ ನ್ಯೂಪೋರ್ಟ್ ನಗರದಿಂದ. ಸ್ಟೀವನ್ ಕಲಹನ್ ಏಕಾಂಗಿ ಸಮುದ್ರ ಪಯಣಮಾಡುವ ಒಬ್ಬ ಸಾಹಸಿಗ- solo sea trekker. ನೆಲದಲ್ಲಿ, ಗುಡ್ಡಗಾಡುಗಳಲ್ಲಿ
ಟ್ರೆಕಿಂಗ್ ಮಾಡುವಂತೆ ಈತನದು ಸಮುದ್ರದಲ್ಲಿ, ನಾವೆಯಲ್ಲಿ ಟ್ರೆಕಿಂಗ್. ಅಮೆರಿಕದ ರೋಡ್ ಐಲ್ಯಾಂಡ್‌ನಿಂದ ೨೦ ಅಡಿ ಉದ್ದದ, ತಾನೇ ನಿರ್ಮಿಸಿಕೊಂಡ ಹಾಯಿದೋಣಿಯಲ್ಲಿ ಪ್ರಯಾಣ ಶುರುವಾಯ್ತು. ಮೊದಲು ಬರ್ಮುಡಾ ತಲುಪಿದ, ನಂತರ ಸ್ಪೇನ್ ತಲುಪಿ, ಅಲ್ಲಿಂದ ಇಂಗ್ಲೆಂಡಿಗೆ ಹೋಗುವವನಿದ್ದ.
ವಾತಾವರಣದಲ್ಲಿನ ವ್ಯತ್ಯಯದ ಕಾರಣದಿಂದ ಹೋಗಲಾಗಲಿಲ್ಲ. ಮರಳಿ ಪ್ರಯಾಣ. ಸ್ಪೇನ್‌ನಿಂದ ಹೊರಟು ಆಫ್ರಿಕಾದ ಅಂಚಿನಲ್ಲಿರುವ ಕ್ಯಾನರಿ ದ್ವೀಪ ತಲುಪಿ ಅಲ್ಲಿಂದ ದಕ್ಷಿಣ ಅಮೆರಿಕದ ಅಂಟಿಗ್ವಾಕ್ಕೆ ಪ್ರಯಾಣ ಶುರುವಾಯ್ತು. ಅಲ್ಲಿಯ ವರೆಗೆ ಕಡಲು ಒಡ್ಡುವ ಸಾವಿರದೆಂಟು ತೊಂದರೆಗಳನ್ನೆಲ್ಲ ಮೀರಿಯೇ ಪ್ರಯಾಣಿ ಸಿದ್ದು. ಈಗಿನ ಪ್ರಯಾಣ ಸುಮಾರು ೫,೦೦೦ ಕಿ.ಮೀ., ಅದೂ ಕುಖ್ಯಾತ ಅಟ್ಲಾಂಟಿಕ್ ಮಹಾಸಾಗರ ದಲ್ಲಿ. ಪ್ರಯಾಣ ಸುಮಾರು ಕಾಲುಭಾಗ ಕಳೆದಿರಬೇಕು. ನೆಲದಿಂದ ಒಂದೂವರೆ ಸಾವಿರ ಕಿ.ಮೀ. ಸಾಗದರೊಳಕ್ಕೆ. ರಾತ್ರಿ ತನ್ನ ಹಾಯಿದೋಣಿಯನ್ನು ಆಟೋಮ್ಯಾಟಿಕ್ ಮೋಡ್‌ನಲ್ಲಿಟ್ಟು ಸ್ವಲ್ಪ ವಿಶ್ರಾಂತಿಗೆಂದು ಚಿಕ್ಕ ಕೋಣೆಯಂತಿದ್ದ ದೋಣಿಯ ಒಳಭಾಗ ಹೊಕ್ಕ.
ಇನ್ನೇನು ನಿದ್ರಿಸಬೇಕು, ಅಷ್ಟರಲ್ಲಿ ಒಂದು ದೊಡ್ಡ ಶಬ್ದ. ದೋಣಿಗೆ ಏನೋ ಒಂದು ಅಪ್ಪಳಿಸಿದಂತೆ ಶಬ್ದವಾಯಿತು. ಕ್ಷಣಾರ್ಧದಲ್ಲಿ ಆತನಿದ್ದ ದೋಣಿಯೊಳಕ್ಕೆ ನೀರು ತುಂಬಲು ಶುರುವಾಯ್ತು. ಏನಾಗುತ್ತಿದೆ ಎಂದು ತಿಳಿಯುವುದರೊಳಗೆ, ದಟ್ಟ ಕತ್ತಲಿನಲ್ಲಿ ದೋಣಿ ಮುಳುಗಲು ಆರಂಭವಾಯಿತು. ತಕ್ಷಣ ದೋಣಿಯಲ್ಲಿದ್ದ ಚಿಕ್ಕ ಲೈಫ್ ಬೋಟ್ ಅನ್ನು ಬಿಚ್ಚಿ ಸಮುದ್ರಕ್ಕೆಸೆದ. ಲೈಫ್ ಬೋಟ್ ಗಾಳಿ ತುಂಬಿಕೊಳ್ಳಲಿಲ್ಲ. ನಾಲ್ಕಾರು ಬಾರಿ ಎಸೆದ ನಂತರ ಅದು ಉಬ್ಬಿಕೊಂಡಿತು. ಅಷ್ಟರೊಳಗೆ ಆತನ ದೋಣಿ ಬಹುತೇಕ ಮುಳುಗಿತ್ತು. ದೋಣಿ ಯಿಂದ ಹಾರಿ ಲೈ-ಬೋಟ್ ಹೊಕ್ಕು ಕೂತು ಸುಧಾರಿಸಿಕೊಂಡ. ಆಗಲೇ ನೆನಪಾದದ್ದು, ಅವಶ್ಯವಿರುವ
ಸರ್ವೈವಲ್ ಕಿಟ್ ದೋಣಿಯಲ್ಲಿಯೇ ಉಳಿದುಹೋಯ್ತು ಎಂದು. ಆತನಿಗೆ ತಾನಿರುವ ಸ್ಥಿತಿ ಆಗ ಸ್ಪಷ್ಟವಾಗಿತ್ತು.
ಸರ್ವೈ ವಲ್ ಕಿಟ್ ಇಲ್ಲದೆ ಹೆಚ್ಚೆಂದರೆ ೨-೩ ದಿನ ಬದುಕಬಹುದು. ತಕ್ಷಣ ಮುಳುಗುತ್ತಿರುವ ದೋಣಿಯ ಒಳಕ್ಕೆ ಹಾರಿದ. ಕಾರ್ಗತ್ತಲೆ. ತಡಕಾಡಿದಾಗ ಹೇಗೋ ಸರ್ವೈವಲ್ ಕಿಟ್ ಸಿಕ್ಕಿತು. ಅದೇ ಸಮಯದಲ್ಲಿ ಆ ಚಿಕ್ಕ ಕೋಣೆಯ ಬಾಗಿಲು ನೀರಿನ ಒತ್ತಡಕ್ಕೆ ಮುಚ್ಚಿಕೊಂಡಿತ್ತು. ಎಷ್ಟೇ ದೂಡಿದರೂ ತೆರೆ ಯಲಾಗದ ಸ್ಥಿತಿ. ಸುಮಾರು ೩ ನಿಮಿಷ ಉಸಿರು ಹಿಡಿದಿಟ್ಟು, ಎಷ್ಟೇ ಶಕ್ತಿ ಹಾಕಿದರೂ ಬಾಗಿಲು ತೆರೆಯುತ್ತಿಲ್ಲ. ಬದುಕು ಮುಗಿದೇಹೋಯಿತು ಅನ್ನುತ್ತಿರುವಾಗ ಇನ್ನೊಂದು ರಭಸದ
ತೆರೆ ಬಾಗಿಲನ್ನು ಕಿತ್ತುಹಾಕಿತು. ಸರ್ವೈವಲ್ ಕಿಟ್ ಜತೆಯಲ್ಲಿ ಬಲೂನಿನಂಥ ಲೈ-ಬೋಟ್ ಸೇರಿಕೊಂಡ. ನೀರು ದೂಡಲು ಆತನಲ್ಲಿ ಹುಟ್ಟು ಇರಲಿಲ್ಲ.
ಒಂದೆರಡು ದಿನದಲ್ಲಿ ಯಾವುದೋ ಹಡಗು ತನ್ನನ್ನು ನೋಡುತ್ತದೆ, ರಕ್ಷಿಸುತ್ತದೆ ಎಂದುಕೊಂಡ. ಇದ್ದ ಆಹಾರ, ನೀರನ್ನು ಸೇವಿಸಿ ಕಾಯುವ ಕಾಯಕ. ದಿನಗಳು ಕಳೆದವು. ಆರೇಳು ದಿನದಲ್ಲಿ ಕಿಟ್‌ನಲ್ಲಿದ್ದ ಎಲ್ಲ ಆಹಾರ, ನೀರು ಖಾಲಿಯಾದವು. ಯಾವುದೇ ಹಡಗು ಸಮುದ್ರದಂಚಿನಲ್ಲೆಲ್ಲೂ ಕಾಣಿಸಲಿಲ್ಲ. ಸುಡುವ ಬಿಸಿಲು.
ರಾತ್ರಿ ಕೊರೆಯುವ ಚಳಿ. ಎಲ್ಲೆಡೆ ಸಮುದ್ರ. ಸಮುದ್ರದ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಲ್ಲಿ ನೀರಿನದು ಮೊದಲ ಸಮಸ್ಯೆ. ಸುತ್ತಲೂ ನೀರಿದ್ದರೂ ಕುಡಿಯಲಿಕ್ಕೆ
ಸಾಧ್ಯವೇ ಇಲ್ಲ. ಉಪ್ಪುನೀರನ್ನು ಕುಡಿಯುವಷ್ಟು ಭಯಾನಕ ಇನ್ನೊಂದಿಲ್ಲ.
ಕಲಹನ್‌ನಿಗೆ ಕಿಟ್‌ನಲ್ಲಿ, ವಿಶ್ವ ಯುದ್ಧದ ಸಮಯದಲ್ಲಿ ಸಮುದ್ರದ ನೀರಿನ ಬಿಸಿಲಿನ ಆವಿಯನ್ನು ಘನೀಕರಿಸಿ ಶೇಖರಿಸುತ್ತಿದ್ದ ಚಿಕ್ಕ ಬಲೂನಿನಂಥ ಸಲಕರಣೆ
ಸಿಕ್ಕಿತು. ಆದರೆ ಅದರ ಬಳಕೆದಾರರ ಕೈಪಿಡಿಯಲ್ಲಿ ಸ್ಪಷ್ಟ ವಿವರ ವಿರಲಿಲ್ಲ. ಏನೋ ಒಂದು ತಪ್ಪಿನಿಂದಾಗಿ ಉಪ್ಪುನೀರೇ ತುಂಬಿಕೊಳ್ಳುತ್ತಿತ್ತು. ಕೊನೆಗೂ, ಶತಪ್ರಯತ್ನ ಮಾಡಿ ಹನಿಹನಿ ನೀರು ಶೇಖರಿಸುವ ವ್ಯವಸ್ಥೆಯಾಯಿತು. ಕುಡಿಯಲು ನೀರು ಸರಿ, ಆಹಾರಕ್ಕೆ? ಹನ್ನೊಂದು ದಿನ ಕಳೆದಾಗಿತ್ತು. ಕಿಟ್‌ನಲ್ಲಿ ಚಿಕ್ಕ ಫಿಶ್ ಗನ್ ಇತ್ತು. ಚಿಕ್ಕ ಬಾಣ, ಅದರ ಒಂದು ತುದಿಯಲ್ಲಿ ಮೊನಚು, ಇನ್ನೊಂದು ತುದಿಯಲ್ಲಿ ದಾರ. ಆ ದಾರವನ್ನು ಸ್ಪ್ರಿಂಗ್ ಹಾಕಿದ ಬಿಲ್ಲಿಗೆ ಕಟ್ಟಲಾಗಿತ್ತು. ಅದನ್ನು ಬಿಲ್ಲು ಬಾಣ ದಂತೆ ನೀರಿನಲ್ಲಿರುವ ಮೀನಿಗೆ ಗುರಿಯಾಗಿಸಿ ಕೊಲ್ಲುವುದು, ಕಟ್ಟಿದ ದಾರದಿಂದ ಎಳೆದುಕೊಳ್ಳುವುದು.
ಮೊದಲೇ ಆತನಿ ದ್ದದ್ದು ಗಾಳಿ ತುಂಬಿದ ಲೈಫ್ ಬೋಟ್. ಸ್ವಲ್ಪ ಗುರಿತಪ್ಪಿದರೂ ತಾನಿರುವ ಲೈಫ್ ಬೋಟ್ ತೂತಾಗಿಬಿಡುವ ಸಾಧ್ಯತೆ. ಅಲ್ಲದೆ ಆ ಫಿಶ್‌ಗನ್‌ನಿಂದ ಮೀನು ಹಿಡಿಯುವುದು ಅಷ್ಟು ಸುಲಭದ್ದಾಗಿರಲಿಲ್ಲ. ಮೊದಲ ೧೦ ದಿನ ಒಂದೇ ಮೀನು ಗುರಿ ಸಿಗಲಿಲ್ಲ. ೧೧ನೇ ದಿನ ಒಂದು ದೊಡ್ಡ ಮೀನು ಸಮೀಪದಲ್ಲಿ ಕಾಣಿಸಿತು. ಈ ಬಾರಿ ಬಾಣ ಬಿಡಬೇಕು, ಆ ಫಿಶ್‌ಗನ್ ತುಂಡಾಗಿ ಹೋಯಿತು. ಈಗ ಕೈಯಲ್ಲಿರುವುದು ಕೇವಲ ಒಂದು ತ್ರಿಶೂಲದಂಥ ವಸ್ತು. ಅದನ್ನೇ ಬಳಸಿ, ಲೈಫ್ ಬೋಟ್‌ನ ಹತ್ತಿರ ಬರುವ ಮೀನಿಗೆ ತಿವಿಯಬೇಕು. ಹೀಗೆ ಮೀನು ಹಿಡಿಯಲು ಶುರುಮಾಡಿದ. ಹಸಿಮೀನೇ ಆಹಾರ. ಒಂದು
ದಿನ ದೊಡ್ಡ ಮೀನೊಂದು ಸಮೀಪಕ್ಕೆ ಬಂತು. ಅದಕ್ಕೆ ತನ್ನಲ್ಲಿದ್ದ ತ್ರಿಶೂಲದಿಂದ ಚುಚ್ಚಿದ. ಅದು ದೊಡ್ಡ ಮೀನು, ಆ ತ್ರಿಶೂಲವನ್ನೇ ಸಿಕ್ಕಿಸಿಕೊಂಡು ತಪ್ಪಿಸಿಕೊಂಡು ಹೋಯಿತು.
ಹೋಗುವಾಗ ಅವನಿದ್ದ ಲೈಫ್ ಬೋಟ್‌ನ ಕೆಳಕ್ಕೆ ಸರಕ್ಕನೆ ಸರಿಯಿತು. ಬೋಟ್‌ನ ಕೆಳಭಾಗ ಸಂಪೂರ್ಣ ಹರಿದು ಹೋಯಿತು. ಈಗ ಲೈಫ್ ಬೋಟ್‌ನ ನೆಲವೆಂದರೆ ಒಂದೇ ತೆಳ್ಳಗಿನ ಪದರ. ಅದರಲ್ಲಿ ಸರಿಯಾಗಿ ನಿದ್ರಿಸಲು, ನಡೆದಾಡಲು, ಮೀನು ಹಿಡಿಯಲು ಸಾಧ್ಯವೇ ಇರಲಿಲ್ಲ. ಕಲಹನ್ ನೀರಿಗೆ
ಹಾರಿದ. ಲೈಫ್ ಬೋಟ್‌ನ ಕೆಳಕ್ಕೆ ಹೋಗಿ ಹೊಲಿಗೆ ಹಾಕಿ, ಹೇಗೋ ಗಾಳಿ ನಿಲ್ಲುವಂತೆ ಮಾಡಿಕೊಂಡ. ಕಿಟ್‌ನಲ್ಲಿದ್ದ ಚಿಕ್ಕ ಪಂಪ್ ಅನ್ನು ಬಳಸಿ ಗಾಳಿ ತುಂಬಿಸಿಕೊಂಡ. ಕಥೆ ಅಷ್ಟಕ್ಕೇ ಮುಗಿಯಲಿಲ್ಲ. ನಂತರ ಶಾರ್ಕ್‌ಗಳು ಅವನ ಮೇಲೆ ದಾಳಿ ಮಾಡಿದವು, ನೀರಿನ ಆಸರೆಯಾಗಿದ್ದ ಆ ಚಿಕ್ಕ ವಾಟರ್
ಕಂಡೆನ್ಸರ್ ಕೈಕೊಟ್ಟಿತು. ಮಳೆನೀರು ಕುಡಿದುಕೊಂಡು, ಇದ್ದ ಬದ್ದ ಮೀನನ್ನು ಹಿಡಿದು ತಿನ್ನುತ್ತ, ಗೊತ್ತು ಗುರಿಯೇ ಇಲ್ಲದೆ ಸಮುದ್ರ ಒಯ್ದಲ್ಲಿ ಸಾಗುತ್ತ ದಿನಗಳೆಯಲು ಶುರುಮಾಡಿದ.
ಹೀಗೆಯೇ ಬರೋಬ್ಬರಿ ೭೬ ದಿನ ಕಳೆಯಿತು. ನಂತರ ಆಂಟಿ ಗ್ವಾದ ಮೀನುಗಾರರು ಆತನನ್ನು ನೋಡಿ ರಕ್ಷಿಸಿದರು. ಪ್ರತಿ ದಿನವೂ ಒಂದೊಂದು ಸಾಹಸ ಮಾಡುತ್ತ ಆತ ಬದುಕುಳಿದದ್ದು ರೋಮಾಂಚನಕಾರಿ ಕಥೆ. ಹಾಗೆ ನೋಡಿದರೆ ಸ್ಟೀವನ್ ಕಲಹನ್‌ಗೆ ಬದುಕಬೇಕೆಂಬ ಯಾವುದೇ ಕಾರಣ ಉಳಿದಿರಲಿಲ್ಲ. ಆತ ಬದುಕಿದ್ದಾನೋ, ಸತ್ತಿದ್ದನೋ ಎಂದು ಕೇಳಲೂ ಯಾರೂ ನೆಲದಲ್ಲಿರಲಿಲ್ಲ. ಕಳೆದುಕೊಳ್ಳಲು ಜೀವ ಬಿಟ್ಟರೆ ಬೇರಿನ್ನೇನೂ ಇರಲಿಲ್ಲ. ಆತನೇ ಹೇಳುವಂತೆ ಅವನ ತಲೆಯಲ್ಲಿ ಅಂದು ಇದ್ದದ್ದು ಒಂದೇ ಮಾತು: ಬದುಕಬೇಕು, ಬದುಕುವುದಕ್ಕಾಗಿಯೇ ಬದುಕಬೇಕು. ಅದೇ ಆತನನ್ನು ಬದುಕಿಸಿದ್ದು. ಯಾವುದೇ ಆತ್ಮಹತ್ಯೆಯ ಸುದ್ದಿ ಕೇಳಿದಾಗ ನನಗೆ ಅಲೆಕ್ಸಾಂಡರ್ ಡೋಬಾ, ಸ್ಟೀವನ್ ಕಲಹನ್ ಇವರೆಲ್ಲ ನೆನಪಾಗುತ್ತಾರೆ.
ಅಲೆಕ್ಸಾಂಡರ್ ಡೋಬಾ ತನ್ನ ೭೦ರ ವಯಸ್ಸಿನಲ್ಲಿ ಹಾಯಿದೋಣಿಯಲ್ಲಿ ಅಟ್ಲಾಂಟಿಕ್ ಮಹಾಸಾಗರ ದಾಟಿದವ. ಅವನ ಬಗ್ಗೆ ಇದೇ ಅಂಕಣ ಸರಣಿಯಲ್ಲಿ ಲೇಖನ
ವೊಂದನ್ನು ಹಿಂದೆ ಬರೆದಿದ್ದೆ. ಕೆಲ ದಿನಗಳ ಹಿಂದೆ ಪ್ರಕಟವಾದ ನನ್ನ ‘ಶಿಶಿರಕಾಲ’ ಪುಸ್ತಕದಲ್ಲಿಯೂ ಆ ಲೇಖನ ಇದೆ. ಇವರೆಲ್ಲರನ್ನು ಕಂಡಾಗ, ಇವರ ಕಥೆಗಳನ್ನು ತಿಳಿದಾಗ ಬದುಕಲು ಕಾರಣ ಇರಲೇಬೇಕೆಂದೇನೂ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಎಲ್ಲರ ಬದುಕಿನ ಕೊನೆಯಲ್ಲಿ ಎಲ್ಲ ಉದ್ದೇಶ, ಕಾರಣ
ಗಳು ಅಪ್ರಸ್ತುತವಾಗುವವೇ. ಕಾರಣವಿರುವವರಷ್ಟೇ ಈ ಭೂಮಿಯಲ್ಲಿ ಬದುಕುಳಿದಿಲ್ಲ. ಗೊತ್ತು-ಗುರಿ ಇದ್ದರಷ್ಟೇ ಅದು ಬದುಕಲ್ಲ. ‘ಬದುಕು ಮುಗಿದೇ ಹೋಯಿತು, ಬದುಕಿ ದ್ದರೇನು ಪ್ರಯೋಜನ’ ಎಂದು ಬದುಕಿನ ಕೆಲವು ತಿರುವು ಗಳಲ್ಲಿ ಎಂಥವರಿಗೂ ಅನಿಸುವುದಿದೆ.
ಎಲ್ಲ ಮುಗಿದು ಹೋಯ್ತು ಎಂದೆನಿಸಿದಾಗ ಸ್ಟೀವನ್ ಕಲಹನ್‌ನಂಥವರು ನೆನಪಾಗಬೇಕು. ಅವರಂತೆ ನಾವೂ ಅತಿರೇಕದ ಸಾಹಸಕ್ಕೆ ಹೊರಡಬೇಕೆಂದಿಲ್ಲ. ಪುಸ್ತಕ ಓದುತ್ತ ಪ್ರಯಾಣಿಸಬಹುದು, ಅವರ ಅನುಭವವನ್ನು ನಮ್ಮಲ್ಲಿ ಆಹ್ವಾನಿಸಿಕೊಳ್ಳಬಹುದು. ಸ್ಟೀವನ್‌ನಂತೆ Living one day at a time ಒಂದೊಂದೇ ಕಷ್ಟದ ದಿನ ಕಳೆದು ಬದುಕುವುದನ್ನು ಕಲಿಯಬಹುದು. ಜೀವಂತವಿದ್ದರೆ ಎಲ್ಲರ ಬದುಕೂ ದಡ ಮುಟ್ಟುತ್ತದೆ ಎಂಬುದೇ ಸ್ಟೀವನ್‌ನ ಕಥೆಯ ಸಾರಾಂಶ.