Saturday, 14th December 2024

ದೀಪನಿರ್ವಾಣಗಂಧ: ದೀಪ ಆರಿಹೋಗುವಾಗಿನ ವಾಸನೆ

ತಿಳಿರು ತೋರಣ

srivathsajoshi@yahoo.com

ದೀಪ ಗೊತ್ತು, ನಿರ್ವಾಣ ಗೊತ್ತು, ಗಂಧ ಗೊತ್ತು. ಆದರೆ ಮೂರೂ ಸೇರಿ ಆದ ‘ದೀಪನಿರ್ವಾಣಗಂಧ’ ಗೊತ್ತಿಲ್ಲ. ಓದಿ ದೊಡನೆಯೇ ಏನೋ ಒಂದು ರೋಮಾಂಚನ ತಂದಿತು. ಕಳೆದೆರಡು ದಿನಗಳಲ್ಲಿ ತಲೆಯೊಳಗೆ ಅದೇ ಗುಂಯ್‌ ಗುಡುತ್ತಿತ್ತು.ಗೂಗಲ್‌ನ ನೆರವನ್ನೂ ಪಡೆದು ಎಷ್ಟು ಸಾಧ್ಯವೋ ಅಷ್ಟು ಮಾಹಿತಿಯನ್ನು ಕಲೆಹಾಕಿ ಈವತ್ತು ನಿಮ್ಮ ಮೂಗಿಗೂ ‘ದೀಪನಿರ್ವಾಣಗಂಧ’ ಅಡರಿಸಲಿಕ್ಕೆ ಇಲ್ಲಿ ಬರೆಯುತ್ತಿದ್ದೇನೆ.

ಅರುಂಧತೀ ನಕ್ಷತ್ರದ ಬಗ್ಗೆ ಈಹಿಂದೆ ಇದೇ ಅಂಕಣದಲ್ಲಿ ಎರಡು ಕಂತುಗಳ ಲೇಖನ ಬರೆದಿದ್ದೆ. ಅದರಲ್ಲಿ, ‘ಈಗಿನ ಕಾಲದ ಮದುವೆ ಸಮಾರಂಭಗಳಲ್ಲಿ ಹಾಡುಹಗಲಲ್ಲೇ ಅರುಂಧತೀ ನಕ್ಷತ್ರ ನೋಡುವ ನಾಟಕವಾಡುವುದು ಅನುಕೂಲ ಶಾಸ್ತ್ರವಷ್ಟೇ. ಹಿಂದೆಲ್ಲ ಅರುಂಧತೀ ನಕ್ಷತ್ರ ದರ್ಶನ ರಾತ್ರಿಸಮಯದಲ್ಲೇ ಮಾಡುತ್ತಿದ್ದದ್ದಂತೆ. ಮದುವೆ ಸಮಾ ರಂಭ ಐದು ದಿನಗಳವರೆಗೆ ವ್ಯಾಪಿಸಿದ್ದಾಗ ಬಹುಶಃ ಒಂದು ರಾತ್ರಿ ಅರುಂಧತೀ ನಕ್ಷತ್ರದರ್ಶನದ್ದೇ ಸಂಭ್ರಮ ಇದ್ದಿರಬಹುದು.

ಸ್ವಾರಸ್ಯವೆಂದರೆ ನಾವು ಭಾರತೀಯರು ವಸಿಷ್ಠ-ಅರುಂಧತೀ ಎಂದು ಗುರುತಿಸುವ ನಕ್ಷತ್ರಜೋಡಿಯನ್ನು ಪಾಶ್ಚಾತ್ಯ ಖಗೋಳ ಜ್ಞರು ಕ್ರಮವಾಗಿ ಮಿಝಾರ್ ಮತ್ತು ಆಲ್ಕರ್ ಎಂದು ಗುರುತಿಸುತ್ತಾರೆ. ಪಾಶ್ಚಾತ್ಯರಲ್ಲಿ ಈ ಮಿಝಾರ್-ಆಲ್ಕರ್ ತಾರಾ ಜೋಡಿಯು ವಿವಾಹ ಸಂಪ್ರದಾಯದಲ್ಲಿ ಅಲ್ಲದಿದ್ದರೂ ದೃಷ್ಟಿಪರೀಕ್ಷೆಗೆ ಬಳಕೆಯಾಗುತ್ತಿತ್ತಾದ್ದರಿಂದ ವಿಶೇಷ ಸ್ಥಾನವುಳ್ಳದ್ದು. ಪ್ರಾಚೀನ ರೋಮನ್ನರಲ್ಲಿ ಸೈನ್ಯಕ್ಕೆ ನೇಮಕಾತಿ ಮಾಡುವಾಗ ಆಲ್ಕರ್ ನಕ್ಷತ್ರವನ್ನು ಬರಿಗಣ್ಣಿಂದ ಗುರುತಿಸುವ ಒಂದು ಪ್ರವೇಶ ಪರೀಕ್ಷೆ ಇರುತ್ತಿತ್ತಂತೆ.

ಅದರಲ್ಲಿ ಉತ್ತೀರ್ಣನಾದರಷ್ಟೇ ಆ ವ್ಯಕ್ತಿ ಸೈನ್ಯದಲ್ಲಿ ಬಿಲ್ಲುಗಾರನಾಗಿ ಸೇರಿಕೊಳ್ಳಬಹುದು. ಅರಬ್ ಸುಲ್ತಾನರೂ ತಮ್ಮ ಸೈನಿಕರ ದೃಷ್ಟಿಪರೀಕ್ಷೆಯನ್ನು ಆಲ್ಕರ್ ನಕ್ಷತ್ರವೀಕ್ಷಣಾ ರೀತಿಯಿಂದ ಮಾಡುತ್ತಿದ್ದರಂತೆ. ಪುರಾತನ ಭಾರತೀಯ ವೈದ್ಯಪದ್ಧತಿಯಲ್ಲೂ ಅರುಂಧತೀ ನಕ್ಷತ್ರವನ್ನು ಬರಿಗಣ್ಣಿಂದ ನೋಡುವ ಸಾಮರ್ಥ್ಯವಿಲ್ಲವೆಂದಾದರೆ ಆ ವ್ಯಕ್ತಿಯ ದೃಷ್ಟಿ ಕ್ಷೀಣವಾಗಿದೆ ಮತ್ತು ಮರಣಕ್ಕೆ ಸನ್ನಿಹಿತರಾಗಿದ್ದಾರೆ ಎಂದೇ ಪರಿಗಣಿಸಲಾಗುತ್ತಿತ್ತು.

ಹಾಗೆ ನೋಡಿದರೆ, ವಿವಾಹ ಮಹೋತ್ಸವದಲ್ಲಿ ಅರುಂಧತೀ ನಕ್ಷತ್ರದರ್ಶನವು ಸೊಸೆಯ ದೃಷ್ಟಿಸಾಮರ್ಥ್ಯ ಹೇಗಿದೆಯೆಂದು ಗಂಡಿನ ಕಡೆಯವರೂ, ಅಳಿಯನ ದೃಷ್ಟಿಸಾಮರ್ಥ್ಯ ಹೇಗಿದೆಯೆಂದು ಕನ್ಯಾಪಿತೃಗಳೂ ತಿಳಿದುಕೊಳ್ಳುವ ಒಂದು ಉಪಾಯ. ಯಾವ ರೀತಿಯಲ್ಲೂ ಕುರುಡು ಸಂಪ್ರದಾಯ ಅಲ್ಲ, ವಧೂವರರಿಬ್ಬರಿಗೂ ಕುರುಡಿಲ್ಲ ಎಂದು ಸಾಬೀತುಪಡಿಸುವುದೇ ಅದರ ಉದ್ದೇಶ. ನಮ್ಮ ಪೂರ್ವಿಕರ ಸ್ಮಾರ್ಟ್‌ನೆಸ್ ನಮಗಿಂತ ಹತ್ತು ಪಟ್ಟು ಹೆಚ್ಚು ಇತ್ತೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು!’ ಎಂದು ವಿವರಿಸಿದ್ದೆ.

ಯಥಾಪ್ರಕಾರ ಅಲ್ಲಿಇಲ್ಲಿ ಓದಿ ಅರಿತಿದ್ದನ್ನೇ ಹಾಗೆ ಪ್ರಸ್ತುತ ಪಡಿಸಿದ್ದೆನೇ ಹೊರತು ಇದೇನೂ ನನ್ನ ಸ್ವಂತದ ಸಂಶೋಧನೆಯಲ್ಲ
eನವಲ್ಲ. ಇದಕ್ಕೆ ಪೂರಕವಾಗಿ ಈಗೊಂದು ಸಂಸ್ಕೃತ ಶ್ಲೋಕ ನನಗೆ ಸಿಕ್ಕಿದೆ. ‘ದೀಪನಿರ್ವಾಣಗಂಧಂ ಚ ಸುಹೃದ್ವಾಕ್ಯಮರುಂ
ಧತೀಂ| ನ ಜಿಘ್ರಂತಿ ನ ಶೃಣ್ವಂತಿ ನ ಪಶ್ಯಂತಿ ಗತಾಯುಷಃ||’ ಎಂಬುದೇ ಆ ಶ್ಲೋಕ. ಹಿತೋಪದೇಶದಲ್ಲಿ ಬರುವಂಥದ್ದು.

ಹಿತೋಪದೇಶ ಅಂದರೆ ಗೊತ್ತಲ್ಲ, ಪಂಚತಂತ್ರದಂತೆಯೇ ಪುರಾತನವಾದೊಂದು ಭಾರತೀಯ ಗ್ರಂಥ. ಪ್ರಾಣಿ ಮತ್ತು ಮನುಷ್ಯ
ಎರಡೂ ಪಾತ್ರಗಳಿರುವ ನೀತಿಕಥೆಗಳನ್ನು, ಲೌಕಿಕ ವಿವೇಕವನ್ನು ಸರಳವಾದ ಸೊಗಸಾದ ಭಾಷೆಯಲ್ಲಿ ತಿಳಿಸುವ, ನಾರಾಯಣ
ನೆಂಬ ಕವಿಯಿಂದ ರಚಿತವೆಂದು ನಂಬಲಾದ ಕೃತಿ. ಇರಲಿ, ನಾನೇನೂ ಹಿತೋಪದೇಶವನ್ನು ಆಮೂಲಾಗ್ರ ಓದಿದವನಲ್ಲ,
ಮೊನ್ನೆ ವೀಣಾ ಜೋಶಿ ಎಂಬುವ ಓದುಗಸ್ನೇಹಿತೆಯೊಬ್ಬರು ಹೀಗೇ ಏನೋ ವಿಚಾರ ವಿನಿಮಯದಲ್ಲಿ ಈ ಶ್ಲೋಕವನ್ನು ಉಲ್ಲೇಖಿಸಿದರು.

ಅವರು ತೆಲುಗು ಸಾಹಿತ್ಯಮಂಥನ ಗ್ರೂಪುಗಳಲ್ಲೂ ಇದ್ದಾರಾದ್ದರಿಂದ, ನನಗೆ ಅರೆಬರೆ ತೆಲುಗು ಗೊತ್ತಿದೆಯೆಂದರಿತು ಅಲ್ಲಿಂದ ಒಳ್ಳೊಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹಿತೋಪದೇಶದ ಇದೇ ಶ್ಲೋಕವನ್ನು ಚಿನ್ನಯ ಸೂರಿ ಎಂಬ ತೆಲುಗು ವಿದ್ವಾಂಸನು ತನ್ನ ನೀತಿಚಂದ್ರಿಕಾ ಕೃತಿಯಲ್ಲೂ ವಿವರಿಸಿದ್ದಾನಂತೆ. ಶ್ಲೋಕದ ವಾಚ್ಯಾರ್ಥವನ್ನು ಸರಳಗನ್ನಡದಲ್ಲಿ ಹೇಳುವು ದಾದರೆ: ಆಯುಷ್ಯ ಮುಗಿಯುತ್ತ ಬಂದವರು, ಅಂದರೆ ಮೃತ್ಯುವಿಗೆ ಸನಿಹರಾದವರು, ದೀಪ ಆರಿಹೋಗುವಾಗಿನ ವಾಸ
ನೆಯನ್ನು ಗುರುತಿಸಲಾರರು; ಸಹೃದಯಿ ಸ್ನೇಹಿತರು ಹೇಳಿದ ಮಾತುಗಳನ್ನು ಕೇಳಲಾರರು; ಅರುಂಧತೀ ನಕ್ಷತ್ರವನ್ನು ನೋಡ ಲಾರರು.

ವಯಸ್ಸಾದಂತೆಲ್ಲ ಪಂಚೇಂದ್ರಿಯಗಳ ಕಾರ್ಯಕ್ಷಮತೆ ಮತ್ತು ಸ್ಪಂದನ ಕಡಿಮೆಯಾಗುತ್ತ ಹೋಗುವುದು ಗೊತ್ತಿರುವ
ವಿಷಯವೇ. ಶ್ಲೋಕದ ಭಾವಾರ್ಥ ಅದೇ. ವಯಸ್ಸಾದವರಿಗೆ ಒಟ್ಟಾರೆಯಾಗಿ ಶ್ರವಣ ಸಾಮರ್ಥ್ಯ ಕಡಿಮೆಯಾಗುತ್ತದಾದ್ದರಿಂದ
ಸ್ನೇಹಿತರ ಮಾತುಗಳನ್ನಂತಲ್ಲ ಯಾವ ಧ್ವನಿ/ಶಬ್ದಗಳನ್ನೂ ಸರಿಯಾಗಿ ಕೇಳಲಾರರು. ದೃಷ್ಟಿ ಮಂದ ಆಗುವುದರಿಂದ ಅರುಂ
ಧತೀ ನಕ್ಷತ್ರವನ್ನಂತಲ್ಲ ಅಂಗೈಯಲ್ಲಿರುವ ಪುಸ್ತಕದಿಂದ ಅಕ್ಷರಗಳನ್ನೂ ಗುರುತಿಸಲಾರರು.

ಆಘ್ರಾಣಿಸುವ ಶಕ್ತಿ ಕುಂದಿರುವುದರಿಂದ ದೀಪ ಆರಿಹೋಗುವಾಗಿನ ವಾಸನೆಯನ್ನೂ ಅರಿಯಲಾರರು. ವೃದ್ಧಾಪ್ಯದ ಸ್ಪಷ್ಟ ಲಕ್ಷಣಗಳಿವು. ಇದರಲ್ಲಿ ಅರುಂಧತೀ ನಕ್ಷತ್ರದ ವಿಚಾರ ನನಗೇನೂ ಹೊಸದೆನಿಸಲಿಲ್ಲ. ಮೇಲೆ ಹೇಳಿದಂತೆ ಈಗಾಗಲೇ ಅದನ್ನು ತಿಳಿರುತೋರಣ ವಾಗಿಸಿದ್ದೇನೆ ಕೂಡ. ಇನ್ನು, ವಯಸ್ಸಾದವರು ಶ್ರವಣಶಕ್ತಿ ಕಡಿಮೆಯಾಗಿ ಸ್ನೇಹಿತರ/ ಮನೆಮಂದಿಯ ಮಾತು ಗಳನ್ನು ಕೇಳಲಾರರು ಎಂಬ ವಿಚಾರವೂ ಅಚ್ಚರಿಪಡುವಂಥದ್ದೇನಲ್ಲ. ಆದರೆ ‘ದೀಪ ಆರಿಹೋಗುವಾಗಿನ ವಾಸನೆ’ ಅಥವಾ ಸುಸಂಸ್ಕೃತವಾಗಿ ‘ದೀಪನಿರ್ವಾಣಗಂಧ’ – ಈ ಒಂದು ಸಂಗತಿ ಮಾತ್ರ ನನಗೆ ತುಂಬ ವಿಶೇಷವಾಗಿ ಕಂಡಿತು.

ಮೂಗಿನ ಕಾರ್ಯಕ್ಷಮತೆಯ ಮಾಪಕವಾಗಿ ಬೇರಾವುದೋ ಸುಗಂಧ-ದುರ್ಗಂಧಗಳನ್ನು ಬಳಸದೆ ‘ದೀಪ ಆರಿಹೋಗುವಾಗಿನ ವಾಸನೆ’ಯನ್ನೇ ಬಳಸಿದ್ದು ಆಶ್ಚರ್ಯವೆನಿಸಿತು. ಬಹುಶಃ ಇದುವರೆಗೂ ನಾನು ಕೇಳಿರದ ಪದ. ದೀಪ ಗೊತ್ತು, ನಿರ್ವಾಣ ಗೊತ್ತು, ಗಂಧ ಗೊತ್ತು. ಆದರೆ ಮೂರೂ ಸೇರಿ ಆದ ‘ದೀಪನಿರ್ವಾಣಗಂಧ’ ಗೊತ್ತಿಲ್ಲ. ಓದಿದೊಡನೆಯೇ ಏನೋ ಒಂದು ರೋಮಾಂಚನ ತಂದಿತು.

ಕಳೆದೆರಡು ದಿನಗಳಲ್ಲಿ ತಲೆಯೊಳಗೆ ಅದೇ ಗುಂಯ್‌ಗುಡುತ್ತಿತ್ತು. ಗೂಗಲ್‌ನ ನೆರವನ್ನೂ ಪಡೆದು ಎಷ್ಟು ಸಾಧ್ಯವೋ ಅಷ್ಟು
ಮಾಹಿತಿಯನ್ನು ಕಲೆಹಾಕಿ ಈವತ್ತು ನಿಮ್ಮ ಮೂಗಿಗೂ ‘ದೀಪ ನಿರ್ವಾಣಗಂಧ’ ಅಡರಿಸಲಿಕ್ಕೆ (ತನ್ಮೂಲಕ ನಿಮಗಿನ್ನೂವೃದ್ಧಾಪ್ಯ
ಬಂದಿಲ್ಲವೆಂದು ಸಾಬೀತುಪಡಿಸಲಿಕ್ಕೆ) ಇಲ್ಲಿ ಬರೆಯುತ್ತಿದ್ದೇನೆ. ತೆಲುಗಿನಲ್ಲಿ ‘ದೀಪನಿರ್ವಾಣಗಂಧಂ’ ಎಂಬ ಹೆಸರಿನ ಪುಸ್ತಕ ವೊಂದು ಆಧುನಿಕ ಸಾಹಿತ್ಯಮಾಲೆಯಲ್ಲಿ ಪ್ರಕಟವಾಗಿದೆಯೆಂದು ಗೂಗಲ್‌ನಿಂದ ಗೊತ್ತಾಗುತ್ತದೆ.

ಅದನ್ನು ಬರೆದವರು ಲಂಕಾ ಶಿವರಾಮ ಪ್ರಸಾದ್ ಎಂಬುವವರು. ಅ An anthology about Death ಎಂದು ಅದರ ಉಪಶೀರ್ಷಿಕೆ ಇರುವುದರಿಂದ ಅದೊಂದು ಗಂಭೀರವಾದ ಕೃತಿ, ಅಲ್ಲಿ ದೀಪ ನಿರ್ವಾಣ ಎಂದಿರುವುದು ಮನುಷ್ಯನ ದೇಹ ಕೊನೆಯುಸಿರೆಳೆ ಯುವುದಕ್ಕೆ ಎಂದು ಸುಲಭವಾಗಿ ಊಹಿಸಬಹುದು. ಜೀವಾತ್ಮವನ್ನು ದೀಪಕ್ಕೆ ಹೋಲಿಸುವುದು ಸನಾತನ ಭಾರತೀಯ ಸಂಸ್ಕೃತಿಯ ಉನ್ನತ ಮೌಲ್ಯಗಳಿಂದ ಬಂದಿರುವಂಥದ್ದು. ದೀಪ ಆರಿಹೋಗದಂತೆ ಅತ್ತಿತ್ತ ಎರಡು ಕೈಗಳನ್ನು ಹಿಡಿದ ಜೀವ ವಿಮಾ ನಿಗಮದ ಲಾಂಛನ, ಅದರ ಕೆಳಗೆ ಭಗವದ್ಗೀತೆಯಿಂದ ಉದ್ಧೃತ ‘ಯೋಗಕ್ಷೇಮಂ ವಹಾಮ್ಯಹಮ್’ ವಾಕ್ಯ ನಮಗೆಲ್ಲ ಪರಿಚಿತವೇ.

ಹಾಗೆಯೇ ಮಹಾತ್ಮ ಗಾಂಧೀಜಿಯವರ ಹತ್ಯೆಯಾದ ದಿನ ಆಮೇಲೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಜವಹರಲಾಲ್ ನೆಹರು ಭಾಷಣದ The light has gone out of our lives and there is darkness everywhere. Our beloved leader, Bapu as we called him, the Father of the Nation, is no more… ಮಾತುಗಳೂ ಲೋಕಪ್ರಖ್ಯಾತ. ‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು…’ ಭಾವಗೀತೆಯ ಸಾಲಿನಲ್ಲೂ, ‘ನೀನೇ ಉರಿಸಿದ ದೀಪಗಳನ್ನು ನೀನೇ ಆರಿಸಿ ನೋಡುವೆಯಾ…’ ಚಿತ್ರಗೀತೆಯ ಸಾಲಿನಲ್ಲೂ ಜೀವವನ್ನು ದೀಪಕ್ಕೆ, ದೀಪವನ್ನು ಜೀವಕ್ಕೆ ಹೋಲಿಸಿರುವುದು.

ಆದ್ದರಿಂದ ‘ದೀಪನಿರ್ವಾಣ’ದ ಧ್ವನ್ಯಾರ್ಥವು ಮರಣವೆಂದೇ ಆಗುವುದು. ‘ದೀಪ ನಿರ್ವಾಣ’ ಎಂಬ ಹೆಸರಿನ ಕನ್ನಡ ಕಾದಂಬರಿ ಯೊಂದಿದೆ; ರಾಮಚಂದ್ರ ಕೊಟ್ಟಲಗಿ ಅವರು ಬರೆದಂಥದ್ದು; ಅದರ ಎರಡನೆಯ ಭಾಗವಾಗಿ ‘ದೀಪ ಹತ್ತಿತು’ ಎಂಬ ಕಾದಂಬರಿ ಯನ್ನೂ ಅವರೇ ಬರೆದಿದ್ದಾರೆ; ಈ ಕಾದಂಬರಿಗಳಲ್ಲಿ ಉತ್ತರ ಕರ್ನಾಟಕದ ಬ್ರಾಹ್ಮಣ ಕುಟುಂಬದ ಮೂರು ತಲೆಮಾರಿನ
ಬದುಕಿನ ಅನಾವರಣ ಮಾಡಿದ್ದಾರೆ. ಈ ಕಾದಂಬರಿಗಳನ್ನು ಕೊಟ್ಟಲಗಿ ಅವರ ಸಹೋದರಿ ಮರಾಠಿ ಭಾಷೆಗೆ ಅನುವಾದ
ಮಾಡಿದ್ದಾರೆ… ಎಂಬ ವಿವರಗಳೂ ನನಗೆ ಸಿಕ್ಕಿದ್ದು ಗೂಗಲ್ ನಿಂದಲೇ. ಮೂರು ತಲೆಮಾರುಗಳ ಬದುಕಿನ ಚಿತ್ರಣ ಅಂತಾದರೆ
ಅಲ್ಲಿಯೂ ‘ದೀಪ ನಿರ್ವಾಣ’ವನ್ನು ಮರಣವೆಂಬ ಧ್ವನ್ಯಾ ರ್ಥದಲ್ಲೇ ಬಳಸಿದ್ದು ಎಂದು ಊಹಿಸಲಿಕ್ಕಡ್ಡಿಯಿಲ್ಲ.

ಆದರೆ ‘ದೀಪ ನಿರ್ವಾಣ’ವನ್ನು ವಾಚ್ಯಾರ್ಥದಲ್ಲಿ, ಅಂದರೆ ರಾತ್ರಿ ಮಲಗುವ ಮುನ್ನ ಲೈಟ್ ಆಫ್ ಮಾಡುವುದು ಎಂಬ ಅರ್ಥ ದಲ್ಲಿ ಬಳಸುವುದೂ ಇದೆ. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್‌ನ ವಸತಿಶಾಲೆಗಳ ದೈನಂದಿನ ವೇಳಾಪಟ್ಟಿಯ ಮೇಲೊಮ್ಮೆ ಕಣ್ಣಾಡಿಸಿ: ಉತ್ಥಾನ, ಶೌಚ, ಅಧ್ಯಯನ, ಪ್ರಾತಃ ಸ್ಮರಣ, ಉಪಾಹಾರ, ಶಿಕ್ಷಣ, ಕ್ರೀಡೆ, ಭಜನೆ, ಭೋಜನ, ಅಧ್ಯಯನ, ದೀಪ ನಿರ್ವಾಣ. ಎಷ್ಟು ಚಂದದ ಸಂಸ್ಕೃತ ಪದಗಳು!

ಪ್ರಖರ ರಾಷ್ಟ್ರವಾದಿ ಪ್ರಭಾಕರ ಭಟ್ಟರಿಂದಾಗಿ, ಮತ್ತು ಅಷ್ಟೇ ಖಡಕ್ ಚಹದಿಂದಾಗಿ ಕಲ್ಲಡ್ಕ ವರ್ಲ್ಡ್‌ಫೇಮಸ್. ರಾಷ್ಟ್ರೀಯ
ಸ್ವಯಂಸೇವಕ ಸಂಘದ ಶಿಬಿರಗಳಲ್ಲಿ ವಿವಿಧ ಚಟುವಟಿಕೆಗಳಿಗೂ ಹೀಗೆಯೇ ಹೆಸರುಗಳಿರುತ್ತವೆ. ಒಂದೊಂದು ಚಟುವಟಿಕೆಯ
ಮುನ್ನವೂ ನಿರ್ದಿಷ್ಟವಾದ ನಾದಘೋಷ ಇರುತ್ತದೆ. ದಿನದ ಕಟ್ಟಕಡೆಯ ಘೋಷವೇ ‘ದೀಪ ನಿರ್ವಾಣ’. ಇದನ್ನು ಎನ್ನೆಸ್ಸೆಸ್
ಮತ್ತಿತರ ಸೇವಾಸಂಸ್ಥೆಗಳೂ ತಮ್ಮ ಶಿಬಿರಗಳಲ್ಲಿ ಅಳವಡಿಸಿಕೊಂಡಿರುವುದು ಗೊತ್ತಾಗುತ್ತದೆ. ದೀಪ ಆರಿಹೋಗುವುದನ್ನು ಅಥವಾ ನಾವಾಗಿಯೇ ದೀಪ ನಂದಿಸುವುದನ್ನು ದೀಪ ನಿರ್ವಾಣ ಎಂದು ವ್ಯಾಸಮಹರ್ಷಿಗಳು ಮಹಾಭಾರತದಲ್ಲೇ ಹೇಳಿದ್ದಾರೆ.

ವಿರಾಟ ಪರ್ವದಲ್ಲಿ ಕೀಚಕವಧೆಯ ಮುನ್ನ ಕೀಚಕನ ವರ್ಣನೆಯದೊಂದು ಶ್ಲೋಕ ಬರುತ್ತದೆ: ‘ಆಸೀದಭ್ಯಧಿಕಾ ಚಾಸ್ಯ ಶ್ರೀಃ
ಶ್ರಿಯಂ ಪ್ರಮುಮುಕ್ಷತಃ| ನಿರ್ವಾಣಕಾಲೇ ದೀಪಸ್ಯ ವರ್ತೀಮಿವ ದಿಧಕ್ಷತಃ||’ ಅಂದರೆ, ಶೋಭೆಯನ್ನು ತ್ಯಜಿಸಲಿದ್ದ ಅವನ
ಶೋಭೆಯು ಆರುವ ಕಾಲದಲ್ಲಿ ಬತ್ತಿಯನ್ನು ಸುಡುವ ದೀಪದಂತೆ ಅತ್ಯಧಿಕವಾಗಿತ್ತು ಎಂದು. ಎಂಥ ಜಾಜ್ವಲ್ಯಮಾನ
ಉಪಮೆ! ದೀಪ ಆರುವ ಮುನ್ನ ಒಮ್ಮೆ ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತದೆ ಎನ್ನುವುದೂ ದೇವರ ಬಳಿ ತುಪ್ಪದ ದೀಪ, ಎಣ್ಣೆಯ ದೀಪ ಹಚ್ಚಿಡುವವರಿಗೆ ಗೊತ್ತಿರುತ್ತದೆ.

ಮರಣಶಯ್ಯೆಯಲ್ಲಿರುವವರು ಕೊನೆಯುಸಿರೆಳೆಯುವ ಮುನ್ನ ಒಮ್ಮೆ ತುಸು ಚೇತರಿಸಿಕೊಂಡವರಂತೆ ಕಾಣುತ್ತಾರೆ ಎನ್ನುವುದೂ ಲೋಕಾನುಭವ. ಲೈಟ್ ಆಫ್ ಮಾಡುವುದೆಂದರೆ ಈಗ ನಾವು ವಿದ್ಯುದ್ದೀಪಗಳ ಸ್ವಿಚ್ ಆಫ್ ಮಾಡುವುದೆಂದೇ ಅರ್ಥೈಸುತ್ತೇವೆ. ಆದರೆ ನನ್ನಂಥವರು ಬಾಲ್ಯದಲ್ಲಿ ವಿದ್ಯುದ್ದೀಪಗಳ ಬೆಳಕಿನಲ್ಲಿ ಬೆಳೆದವರಲ್ಲ. ನಮ್ಮಲ್ಲಿ ಬಳಸುತ್ತಿದ್ದದ್ದು ಸೀಮೆಎಣ್ಣೆಯ ದೀಪಗಳು. ಚಿಮಣಿ ಬುಡ್ಡಿ, ಗಾಜಿನ ಬುರುಡೆಯ ದೊಡ್ಡ ಲ್ಯಾಂಪ್, ಅದರದೇ ಚಿಕ್ಕ ರೂಪ ಬೆಡ್‌ಲ್ಯಾಂಪ್ ಇವೆಲ್ಲ ನಮ್ಮ ದೀಪಗಳು. ದೇವರಕೋಣೆಯಲ್ಲಿ ಎಳ್ಳೆಣ್ಣೆಯ ನಂದಾದೀಪ. ಪೂಜೆಯ ವೇಳೆ ತುಪ್ಪದ ದೀಪ.

ಸಂಜೆಹೊತ್ತು ತುಳಸಿಕಟ್ಟೆಯ ಬಳಿ ಇನ್ನೊಂದು ಪುಟ್ಟ ದೀಪ. ಆಟೋಟ ಮುಗಿಸಿ ಕೈಕಾಲು ತೊಳೆದು ‘ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ… ಶತ್ರುಬುದ್ಧಿವಿನಾಶಾಯ ಪಜ್ಯೋತಿರ್ನಮೋಸ್ತುತೇ…’, ತಿಥಿ ವಾರ ನಕ್ಷತ್ರ ತಿಂಗಳು
ಸಂವತ್ಸರ ಹೆಸರುಗಳ ಬಾಯಿಪಾಠ, ಭಜನೆಪದ್ಯಗಳು. ರಾತ್ರಿ ಮಲಗುವಾಗ ‘ರಾಮಂ ಸ್ಕಂದಂ ಹನೂಮಂತಂ ವೈನತೇಯಂವೃಕೋದರಮ್… ಶಯನೇ ಯಃ ಸ್ಮರೇನ್ನಿತ್ಯಂ ದುಃಸ್ವಪ್ನಸ್ತಸ್ಯ ನಶ್ಯತಿ…’ ಶ್ಲೋಕದ ಜೊತೆಗೇ, ದೀಪಕ್ಕೆ ವಿದಾಯ ಹೇಳುವ ಒಂದು ಪ್ರಾರ್ಥನೆಯೂ ನಮ್ಮಲ್ಲಿತ್ತು.

ಅದು ಬಹುಶಃ ನಮ್ಮ ಅಜ್ಜಿಮನೆಯಿಂದ, ನನ್ನ ಸೋದರಮಾವಂದಿರಿಂದ ನಮ್ಮಲ್ಲಿಗೆ ಬಂದದ್ದು. ಸಂಸ್ಕೃತ ಶ್ಲೋಕವಲ್ಲ, ಕನ್ನಡದಲ್ಲಿ ಅದು ಹೀಗಿತ್ತು: ‘ದೀಪದೀಪಾಂತರಕ್ಕೆ ಹೋಗಿ, ಬತ್ತಿಪರ್ವತಕ್ಕೆ ಹೋಗಿ, ಎಣ್ಣೆಸಮುದ್ರಕ್ಕೆ ಹೋಗಿ, ಈವತ್ತು ಹೋಗಿ ನಾಳೆ ಬನ್ನಿ. ಅಗತ್ಯವಾದರೆ ಈವತ್ತೇ ಬನ್ನಿ’ ಎಂದು ಹೇಳಿ ಚಿಮಣಿಬುಡ್ಡಿಯನ್ನೋ ಬೆಡ್‌ಲ್ಯಾಂಪನ್ನೋ ಆರಿಸುವುದು. ಆಮೇಲೆ ನಿದ್ದೆ.

ಅದೇ ನಮ್ಮ ದೀಪನಿರ್ವಾಣ ಆಗಿತ್ತು. ಅದರಲ್ಲಿನ ‘ದೀಪ ದೀಪಾಂತರ’ವು ದ್ವೀಪ-ದ್ವೀಪಾಂತರ ಇರಬಹುದು ಎಂದು ಈಗ
ನನಗೆ ಅನಿಸುತ್ತಿದೆ. ಏನೇ ಇರಲಿ, ದೀಪಕ್ಕೆ ವಿದಾಯ ಹೇಳುವ ಆ ಸುಂದರ ಕಲ್ಪನೆಯನ್ನು ಮೆಚ್ಚಬೇಕು. ಬತ್ತಿಪರ್ವತಕ್ಕೆ, ಎಣ್ಣೆ ಸಮುದ್ರಕ್ಕೆ ಹೋಗಿ ದೀಪ ತನ್ನ ಕಚ್ಚಾಸಾಮಗ್ರಿಗಳ ಮರುಪೂರೈಕೆ ಮಾಡಿಕೊಳ್ಳುತ್ತದೆಯೆಂಬ ಕಲ್ಪನೆಯೇ ಗ್ರೇಟ್!

ನಂದಾದೀಪವಲ್ಲದೆ ದೇವರ ಕೋಣೆಯಲ್ಲಿ ಸ್ವಲ್ಪ ಹೊತ್ತು ಮಾತ್ರ ಬೆಳಗುವ ದೀಪ ಹಚ್ಚಿದ್ದರೆ ಒಂದೋ ಅದು ತಾನಾಗಿಯೇ
ಆರಿಹೋಗಬೇಕು. ನಾವೇ ಆರಿಸುವುದಾದರೆ ಬಾಯಿಯಿಂದ ಗಾಳಿಯೂದಿ ಆರಿಸಬಾರದು, ಕೈಗಳನ್ನು ರೆಕ್ಕೆಗಳಂತೆ ಅಲ್ಲಾಡಿಸಿ
ಆರಿಸಬಾರದು ಹಾಗೆ ಮಾಡಿದರೆ ಅಶುಭವಾಗುತ್ತದೆ, ಮನೆಯಲ್ಲಿ ಅಶಾಂತಿ, ಕಷ್ಟಗಳು ಹೆಚ್ಚಾಗುತ್ತವೆ ಎಂಬ ನಂಬಿಕೆಗಳಿವೆ.
ಅದಕ್ಕೋಸ್ಕರ ಹಣತೆಯಲ್ಲಿ ಉರಿಯುವ ಬತ್ತಿಯನ್ನು ಒಂದು ಕಡ್ಡಿಯಿಂದ ನಿಧಾನಕ್ಕೆ ಎಣ್ಣೆಯೊಳಕ್ಕೆ ಎಳೆದುಕೊಳ್ಳುವ ಕ್ರಮವನ್ನು ಅನೇಕರು ಅನುಸರಿಸುತ್ತಾರೆ.

ಮತ್ತೆ ಕೆಲವರು ನಿರ್ಮಾಲ್ಯ (ದೇವರಿಗೆ ಮುಡಿಸಿ ಆಗಿರುವ ಹೂವು) ಬಳಸಿ ದೀಪ ಆರಿಸುವುದೂ ಇದೆ. ಅಂದಹಾಗೆ ದೀಪ ಆರಿಹೋಗುವಾಗಿನ ‘ವಾಸನೆ’ ಎಂದು ನಾನು ತಲೆಬರಹದಲ್ಲಿ ಬಳಸಿದೆನಾದರೂ ತುಪ್ಪದ ದೀಪವಾದರೆ ಅದೊಂದು ಒಳ್ಳೆಯ ಪರಿಮಳವೇ. ಸೀಮೆಎಣ್ಣೆಯ ಬುಡ್ಡಿಯನ್ನು ಆರಿಸುವಾಗಾದರೆ ಹೌದು ಅದು ಒಂದು ತೆರನಾದ ಕಮಟುವಾಸನೆ. ಏನೇ ಇರಲಿ, ವಾಸನೆ ಅಥವಾ ಗಂಧ ಅಂದರೆ ನ್ಯೂಟ್ರಲ್ ಪದ. ಸುಗಂಧ ಅಥವಾ ದುರ್ಗಂಧ ಎರಡೂ ಅಲ್ಲದ ಅನುಭವ.

ದೀಪನಿರ್ವಾಣಗಂಧ ಎಂದಿರುವುದು ಅದನ್ನೇ. ಅದು ಮೂಗಿಗೆ ಅಡರದಿದ್ದರೆ ವಯಸ್ಸಾಯ್ತು ಇನ್ನು ಕೌಂಟ್ ಡೌನ್ ಶುರು ಎನ್ನುತ್ತದೆ ಹಿತೋಪದೇಶದ ಆ ಶ್ಲೋಕ. ‘ದೀಪ ನಿರ್ವಾಣ’ಕ್ಕೆ ಇರುವ ಬೇರೆಯದೇ ಒಂದು ಅರ್ಥವನ್ನೂ ಉಲ್ಲೇಖಿಸಿ ಈ ಲಹರಿ ಯನ್ನು ಮುಗಿಸುತ್ತೇನೆ. ಇದು ಆಚಾರ್ಯ ವಿನೋಬಾ ಭಾವೆಯವರು ಬರೆದ, ಸಾಲಿ ರಾಮಚಂದ್ರರಾಯರು ಕನ್ನಡಕ್ಕೆ ಅನುವಾದಿಸಿದ ‘ಸ್ಥಿತಪ್ರಜ್ಞ ದರ್ಶನ’ ಪುಸ್ತಕದಲ್ಲಿ ಸಿಕ್ಕಿದ ಹೊಳಹು.

ಸ್ಥಿತಪ್ರಜ್ಞನ ಲಕ್ಷಣಗಳನ್ನು ಕುರಿತಂತೆ ಭಗವದ್ಗೀತೆಯಲ್ಲಿರುವ ವಿಚಾರಗಳ ವ್ಯಾಖ್ಯಾನ: ‘ಪ್ರಜ್ಞೆ ಎಂದರೆ ಸಾಮಾನ್ಯ ಬುದ್ಧಿ ಅಲ್ಲ. ಯಾವುದರ ಒಲವು ಕೇವಲ ನಿರ್ಣಯದತ್ತ ಇರುವುದೋ ಆ ಬುದ್ಧಿ. ಸ್ಥಿತ ಅಂದರೆ ನಿಶ್ಚಲ, ನಿಶ್ಚಿತ, ಮತ್ತು ಸರಳ. ಸಮಾಧಿ ಎಂಬ ಪದದ ವಿವೇಚನೆಯೂ ಇಲ್ಲಿ ಪ್ರಸ್ತುತ. ಚಿತ್ತದ ಸಮಾಧಾನ ಸ್ಥಿತಿಯೇ ಸಮಾಧಿ. ಸಮಾಧಾನ ಎಂದರೆ ಸಮ-ತುಲನ. ತಕ್ಕಡಿಯ ಎರಡೂ ತಟ್ಟೆಗಳು ಸಮನಾಗಿದ್ದರೆ ತಕ್ಕಡಿ ಸಮತೋಲವಾಗಿದೆ, ತಕ್ಕಡಿ ಸಮಾಧಾನವಾಗಿದೆ ಎನ್ನುತ್ತೇವೆ.

ತಕ್ಕಡಿಯ ದಂಡಿಗೆಯಂತೆ ಚಿತ್ತದ ಸ್ಥಿತಿ ಸಮತೋಲದಲ್ಲಿರಬೇಕು. ಅಚಲವಾಗಿರಬೇಕು. ಶಾಂತವಾಗಿರಬೇಕು. ಅದುವೇ ಚಿತ್ತದ ಸಮಾಧಾನ. ಈ ಸಮಾಧಿಸ್ಥಿತಿಯಾವಾಗಲೂ ಸ್ಥಿರವಾಗಿ ಇರುತ್ತದೆ, ಎಂದೂ ಭಂಗ ಹೊಂದುವುದಿಲ್ಲ. ಆರನೆಯ ಅಧ್ಯಾಯದ ಒಂದು ಶ್ಲೋಕದಲ್ಲಿ ‘ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಸ್ಮೃತಾ| ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ||’ ಎಂದಿದೆ. ಗಾಳಿ ಬೀಸದಿರುವ ಸ್ಥಳದಲ್ಲಿಟ್ಟ ದೀಪವು ಹೇಗೆ ಸ್ವಲ್ಪವೂ ಹೊಯ್ದಾಡದೆ ನಿಶ್ಚಲವಾಗಿರುವುದೋ ಹಾಗೆಯೇ ಮನಸ್ಸನ್ನು ನಿಯಂತ್ರಿಸಿರುವ ಅಧ್ಯಾತ್ಮವಾದಿಯು ಆಧ್ಯಾತ್ಮಿಕ ಧ್ಯಾನದಲ್ಲಿ ನಿಶ್ಚಲನಾಗಿರುತ್ತಾನೆ.

ನಿಯತಚಿತ್ತನಾಗಿ ಆತ್ಮನಲ್ಲಿ ಸಮಾಧಿಸ್ಥನಾಗಿರುವ ಯೋಗಿಗೆ ದೀಪದ ಹೋಲಿಕೆ. ಇದಕ್ಕೆ ದೀಪ ನಿರ್ವಾಣ ಎಂದು ಹೆಸರು. ದೀಪನಿರ್ವಾಣ ಎಂಬುದರ ಅರ್ಥವನ್ನು ‘ದೀವಿಗೆ ನಿಶ್ಚಲವಾಗಿ ಒಂದೇಸವನೆ ಉರಿ ಯುತ್ತಿರುವುದು’ ಎಂದು ಮಾಡಬೇಕು. ‘ದೀವಿಗೆ ನಂದುವುದು’ ಎಂದು ಮಾಡುವುದು ಸರಿಯಲ್ಲ. ನಂದಿದ ಬಳಿಕ ಇರುವ ಶಾಂತಿ ಶರೀರವಿರುವಾಗ ಲಭಿಸ ಲಾರದು. ಸಮಾಧಿಯೆಂದರೆ ಇಲ್ಲಿಯೇ ಅನುಭವಕ್ಕೆ ಬರುವ, ಎಂದೂ ಚಲಿಸದ, ಚಿತ್ತದ ಶಾಂತಸ್ಥಿತಿ.’ ಈ ಅರ್ಥದಲ್ಲಾದರೆ ‘ದೀಪ ನಿರ್ವಾಣಗಂಧ’ ಎಂದರೆ ದೀಪ ಆರಿಹೋಗುವಾಗಿನ ವಾಸನೆ ಅಲ್ಲ, ದೀಪ ಉರಿಯುತ್ತಿರುವಾಗಿನ ಪರಿಮಳ.

ದೀಪ ಉರಿಯುತ್ತಿರುವುದೆಂದರೆ ನಾವು ಜೀವಂತವಾಗಿದ್ದು ಶಾಂತ ಮನಸ್ಸಿನಿಂದ ಇರುವುದು; ನಾಲ್ಕಾರು ಜನರಿಗಾದರೂ ಬೆಳಕಾಗುವ ಒಳ್ಳೆಯ ಚಿಂತನೆಯಲ್ಲಿ, ಒಳ್ಳೆಯ ಕೆಲಸಗಳಲ್ಲಿ ತೊಡಗಿರುವುದು. ಅದೇ ದೀಪನಿರ್ವಾಣ. ಅದರಿಂದ ಸಿಗುವ
ಆತ್ಮತೃಪ್ತಿ, ಧನ್ಯತಾಭಾವಗಳೇ ದೀಪನಿರ್ವಾಣಗಂಧ. ಅದು ಎಲ್ಲರಿಂದಲೂ ಎಲ್ಲೆಡೆಯೂ ಪಸರಿಸುತ್ತಿರಬೇಕು.