Saturday, 14th December 2024

ಬ್ಯಾಂಕಿಂಗ್: ಸಾಲವಸೂಲಿಯ ಸವಾಲು

ವಿತ್ತಲೋಕ

ರಮಾನಂದ ಶರ್ಮಾ

ಬ್ಯಾಂಕುಗಳು ಸಾಲನೀಡಿಕೆಯ ವೇಳೆ ಅನುಸರಿಸುವ ವಿಳಂಬನೀತಿ, ಅವು ಕೇಳುವ ತರಹೇವಾರಿ ಕಾಗದಪತ್ರಗಳ ಬಗ್ಗೆ ಆಕ್ರೋಶವಿರುವುದು ಸತ್ಯ. ಆದರೆ ಬ್ಯಾಂಕಿನವರು ಹೀಗೇಕೆ ಗ್ರಾಹಕರನ್ನು ಒತ್ತಾಯಿಸುತ್ತಾರೆ ಮತ್ತು ಸಾಲದ ಹಣದ ಬಿಡುಗಡೆಯಲ್ಲಿ ವಿಳಂಬ ಮಾಡುತ್ತಾರೆ ಎನ್ನುವ ಬಗ್ಗೆ ಜನರಿಗೆ ಮಾಹಿತಿ ಇರುವುದಿಲ್ಲ.

ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿಯ ನಂತರದ ೫ನೇ ಸ್ಥಾನದಲ್ಲಿದ್ದು ೩.೭೩ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದೆ. ದೇಶಾದ್ಯಂತ ಸಾರ್ವಜನಿಕ ರಂಗದ ೧೨ ಬ್ಯಾಂಕುಗಳು, ೨೧ ಖಾಸಗಿ ಬ್ಯಾಂಕುಗಳು, ಸಾವಿರಾರು ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕುಗಳ ಶಾಖೆಗಳ ಜಾಲವಿದೆ. ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕು ಗಳೇ ೧.೬೨ ಲಕ್ಷದಷ್ಟು ಶಾಖೆಗಳನ್ನು ಹೊಂದಿದ್ದು, ಅವುಗಳಲ್ಲಿ ೧೮೦.೪೪ ಲಕ್ಷ ಕೋಟಿ ರುಪಾಯಿ ಠೇವಣಿಯಿದೆ ಮತ್ತು ಅವು ೧೬೧.೮೯ ಲಕ್ಷ ಕೋಟಿ ರು. ಸಾಲವನ್ನು ನೀಡಿವೆ.

ಈ ಬ್ಯಾಂಕುಗಳಲ್ಲಿ ೪೮೨ ಮಿಲಿಯನ್ ಖಾತೆದಾರರು ವ್ಯವಹರಿಸುತ್ತಾರೆ. ಈ ಅಧಿಕೃತ ಬ್ಯಾಂಕಿಂಗ್ ವ್ಯವಸ್ಥೆಯ ಹೊರತಾಗಿಯೂ ಅನಧಿಕೃತವಾಗಿ ಸಾವಿರಾರು ಏಜೆನ್ಸಿಗಳು, ಆಪ್ ಗಳು, ಖಾಸಗಿ ವ್ಯಕ್ತಿಗಳಿಂದ ಸಾಲ ಸಿಗುತ್ತದೆ. ಇವನ್ನು ‘ಸಮಾನಾಂತರ ಬ್ಯಾಂಕಿಂಗ್’ ಎನ್ನುತ್ತಾರೆ. ನಿಮ್ಮ ಬಳಿ ಫೋನ್ ಇದ್ದರೆ, ಯಾರ‍್ಯಾರು ಎಷ್ಟೆಷ್ಟು ಮತ್ತು ಹೇಗೆ ಸಾಲ ನೀಡುತ್ತಾರೆ ಎನ್ನುವುದರ ವಿಸ್ತೃತ ಮಾಹಿತಿ ದಿನವಿಡೀ ನಿಮಗೆ ದೊರೆಯುತ್ತದೆ. ಇಂಥ ಅನಽಕೃತ ಲೋನ್ ನೀಡುವುದರಲ್ಲಿ ‘ಲೋನ್ ಆಪ್’ ವ್ಯವಸ್ಥೆಯ ಕುರಿತಾಗಿ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ.

ಈ ಲೋನ್ ಆಪ್ ವ್ಯವಸ್ಥೆಯಲ್ಲಿ ಕನಿಷ್ಠ ಕಾಗದ ಪತ್ರಗಳು, ಪರಿಷ್ಕರಣೆಯ ಮೂಲಕ ತ್ವರಿತವಾಗಿ ಸಾಲವನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಿಂದ ಸಾಕಷ್ಟು ಜನರು ಸಹಾಯ ಪಡೆದಿದ್ದಾರೆ ಎನ್ನಲಾಗುತ್ತದೆ. ತುರ್ತು ಹಣದ ಅವಶ್ಯಕತೆ ಇದ್ದವರಿಗೆ ಇದು ಸಹಾಯಕ ಎನ್ನಬಹುದು. ದಾಖಲೆ/ಕಾಗದ ಪತ್ರಗಳ ಹೊರೆ ಇಲ್ಲದೇ, ‘ರೆಡ್ ಟೇಪಿಸಂ’ನ ಅಸಹನೆಯಿಲ್ಲದೇ, ಆ ರೇಟಿಂಗ್, ಈ ರೇಟಿಂಗ್ ಎಂಬ ಗೊಂದಲವಿಲ್ಲದೆ ಕನಿಷ್ಠ ಅವಧಿಯಲ್ಲಿ ಗರಿಷ್ಠ ಲೋನ್ ದೊರಕುತ್ತದೆ. ತುರ್ತಾಗಿ ಸಾಲ ಬೇಕಾದ ವರು ಮತ್ತು ಕೆಲವು ಬ್ಯಾಂಕಿನವರು ಕೇಳುವಂಥ ದಾಖಲೆ, ಕಾಗದಪತ್ರಗಳನ್ನು ಸಲ್ಲಿಸಲಾಗದವರು ಇಂಥ ಲೋನ್ ವ್ಯವಸ್ಥೆಯ ಮೊರೆಹೋಗುತ್ತಾರಂತೆ.

ಇಂಥ ಕೆಲವು ವ್ಯವಸ್ಥೆಗಳು ಆದಾಯದ ದೃಢೀಕರಣ ಮತ್ತು ಗ್ಯಾರಂಟಿ ಇಲ್ಲದೆ ಕೂಡ ಸಾಲ ಕೊಡುತ್ತವಂತೆ. ಆದರೆ, ಈ ಸಾಲಗಳ ವಸೂಲಾತಿಯ ವೇಳೆ
ಕೆಲವರು ಅಮಾನವೀಯವಾಗಿ ನಡೆದುಕೊಳ್ಳುವನಿದರ್ಶನಗಳು ಕೇಳಿಬರುತ್ತಿವೆ. ಇಂಥ ಅಮಾನುಷ ವರ್ತನೆ ಹಾಗೂ ಮಾನಸಿಕ ಹಿಂಸೆ ತಡೆಯಲಾಗದೆ,
ಇವರ ಗ್ರಾಹಕರು ಆತ್ಮಹತ್ಯೆ ಮಾಡಿಕೊಂಡ ವರದಿ ಗಳು ಇತ್ತೀಚೆಗೆ ಮಾಧ್ಯಮದಲ್ಲಿ ಭಾರಿ ಸುದ್ದಿ ಮಾಡಿದ್ದವು. ಇಂಥ ಕೆಲವು ಆಪ್‌ಗಳ ಕಾರ್ಯ ವೈಖರಿ ಬಗೆಗೆ ಇತ್ತೀಚೆಗೆ ಭಾರಿ ಆಕ್ರೋಶ ವ್ಯಕ್ತ ವಾಗಿದೆ. ಈ ವ್ಯವಸ್ಥೆ ಒಂದು ರೀತಿಯಲ್ಲಿ ‘ಮೀಟರ್ ಬಡ್ಡಿ’ಯಂತಿದ್ದು, ಅವರ ಸಾಲ ವಸೂಲಾತಿ ಕ್ರಮಗಳ ಬಗ್ಗೆ ಸಾಕಷ್ಟು ದೂರುಗಳಿರುವುದನ್ನು ಕಂಡ ಸರಕಾರವು ಇಂಥ ಲೋನ್ ಆಪ್‌ಗಳನ್ನು ನಿಷೇಧಿಸಿದೆ ಮತ್ತು ಅವುಗಳ ಕಾರ್ಯಾಚರಣೆ ಬಗೆಗೆ ನಿಗಾ ವಹಿಸಿದೆ.

ಈ ಆಪ್‌ಗಳ ದುಂಡಾವರ್ತನೆ ಮತ್ತು ಸಾಲ ವಸೂಲಾತಿಗೆ ಸಂಬಂಽಸಿದ ಅಮಾನುಷ ವರ್ತನೆಗಳ ಬಗೆಗೆ ದೇಶಾದ್ಯಂತ ಚರ್ಚೆಯಾಗುತ್ತಿರುವಾಗ, ಈ ದಾರುಣ ಪರಿಸ್ಥಿತಿಗೆ ಬ್ಯಾಂಕುಗಳನ್ನು ಪರೋಕ್ಷವಾಗಿ ಹೊಣೆ ಮಾಡುವ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಬ್ಯಾಂಕುಗಳು ಮೈಚಳಿ ಬಿಟ್ಟು, ಅವಶ್ಯಕತೆ ಇದ್ದವರಿಗೆ ಹತ್ತಾರು ದಾಖಲೆಗಳು, ಪುರಾವೆಗಳು, ರೆ-ರೆನ್ಸ್ ಮತ್ತು ಗ್ಯಾರಂಟಿಗಳು ಇಲ್ಲದೆ, ಈ ಆಪ್‌ಗಳಂತೆ ತ್ವರಿತವಾಗಿ ಸಾಲ ನೀಡಿದ್ದರೆ, ಇಂಥ ದುರಂತಗಳನ್ನು ತಪ್ಪಿಸಬಹುದಿತ್ತು ಎಂಬುದಾಗಿ ಬ್ಯಾಂಕುಗಳ ಕಾರ್ಯವಿಧಾನವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

ಸಾಲನೀಡಿಕೆಯಲ್ಲಿನ ಬ್ಯಾಂಕುಗಳ ವಿಳಂಬ ಮತ್ತು ಅವು ಕೇಳುವ ತರಹೇವಾರಿ ದಾಖಲೆಗಳು, ಕಾಗದಪತ್ರಗಳ ಬಗ್ಗೆ ಆಕ್ರೋಶವಿರುವುದು ಸತ್ಯ.
ಆದರೆ ಬ್ಯಾಂಕಿನವರು ಹೀಗೇಕೆ ಗ್ರಾಹಕರನ್ನು ಒತ್ತಾಯಿಸುತ್ತಾರೆ ಮತ್ತು ಸಾಲದ ಹಣದ ಬಿಡುಗಡೆಯಲ್ಲಿ ವಿಳಂಬ ಮಾಡುತ್ತಾರೆ ಎನ್ನುವ ಬಗ್ಗೆ ಜನರಿಗೆ ಮಾಹಿತಿ ಇರುವುದಿಲ್ಲ. ನೀಡುವ ಸಾಲದ ಭದ್ರತೆಯ ದೃಷ್ಟಿಯಲ್ಲಿ ಗ್ರಾಹಕರಿಂದ ಪಡೆಯುವ ಮಾಹಿತಿ ಮತ್ತು ಕಾಗದಪತ್ರಗಳ ಬಗೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಹಣಕಾಸು ಮಂತ್ರಾಲಯಗಳಿಂದ ಸುತ್ತೋಲೆಗಳು ನಿರಂತರವಾಗಿ ಬರುತ್ತಿದ್ದು, ಬ್ಯಾಂಕುಗಳು ಅವನ್ನು ಕಡ್ಡಾಯವಾಗಿ ಅನುಸರಿಸ ಬೇಕಾಗುತ್ತದೆ.

ಬ್ಯಾಂಕುಗಳು ಸಾರ್ವಜನಿಕರ ಹಣ ದಲ್ಲಿ ವ್ಯವಹರಿಸುತ್ತಿರುವುದರಿಂದ ಅವು ಠೇವಣಿ ದಾರರಿಗೆ ಉತ್ತರದಾಯಿಗಳಾಗಿರುತ್ತವೆ ಮತ್ತು ನೀಡಿದ ಸಾಲವು ಸದುಪಯೋಗವಾಗುವುದನ್ನು ಅವು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ. ಇಷ್ಟಾಗಿಯೂ ನೀಡಿದ ಸಾಲವು ಸಂಪೂರ್ಣವಾಗಿ ಸದುಪಯೋಗವಾಗುತ್ತದೆ ಎಂದು ಹೇಳಲಾಗದು. ಸಾಲವು ಸುಸ್ತಿಯಾದಾಗ ಅಥವಾ ವಸೂಲಿಯಾಗದಿರುವಾಗ, ಅವುಗಳ ವಸೂಲಿಗಾಗಿ ಬ್ಯಾಂಕುಗಳು ಕೋರ್ಟುಗಳ ಮೊರೆಹೋಗುವುದು ಸಾಲ ವಸೂಲಾತಿ ಕ್ರಮಗಳಲ್ಲಿ ಮುಖ್ಯವಾಗಿರುತ್ತದೆ.

ದೃಢವಾದ ದಾಖಲೆಗಳು ಮತ್ತು ಕಾಗದಪತ್ರಗಳು ಇಲ್ಲದ ಪ್ರಕರಣಗಳನ್ನು ಕೋರ್ಟುಗಳು ಮಾನ್ಯ ಮಾಡುವುದಿಲ್ಲ. ಕೋರ್ಟು ಗಳಿಗೆ ತಮ್ಮದೇ ಆದ ಕಟ್ಟುನಿಟ್ಟಿನ ವಿಚಾರಣಾ ವ್ಯವಸ್ಥೆಯಿದ್ದು, ಬ್ಯಾಂಕುಗಳು ಆ ಪರಿಧಿಯೊಳಗೆ ತಮ್ಮ ಅಹವಾಲನ್ನು ಕೋರ್ಟಿನ ಮುಂದೆ ಹಾಜರುಪಡಿಸಬೇಕಾಗುತ್ತದೆ. ಗ್ರಾಹಕರಿಂದ ತೆಗೆದು ಕೊಳ್ಳದ ದಾಖಲೆಗಳು, ಸರಿಯಿಲ್ಲದ ಕಾಗದಪತ್ರಗಳು ಮತ್ತು ಲಿಮಿಟೇಷನ್ ಆಕ್ಟ್ ಅನ್ವಯ ಅವಧಿ ಮೀರಿದ ದಾಖಲೆಗಳಿಂದಾಗಿ, ಬ್ಯಾಂಕುಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಭಾರಿ ಬೆಲೆ ತೆತ್ತ ಉದಾಹರಣೆ ಗಳಿವೆ. ಅಂತೆಯೇ, ಸಾಲ ನೀಡುವ ಮೊದಲು ಬ್ಯಾಂಕಿನವರು ಪ್ರತಿಯೊಂದು ದಾಖಲೆಯನ್ನೂ
ಕೂಲಂಕಷವಾಗಿ ಪರಿಶೀಲಿಸುತ್ತಾರೆ ಮತ್ತು ಅದು ಸಂಪೂರ್ಣ ಸಮರ್ಪಕವಾಗಿರುವವರೆಗೆ ಸಾಲವನ್ನು ನೀಡುವುದಿಲ್ಲ.

ದಾಖಲೆಗಳ ಸಮರ್ಪಕತೆಯ ವಿಶ್ಲೇಷಣೆಗೆ/ಮೌಲ್ಯಮಾಪನಕ್ಕೆ ಬ್ಯಾಂಕುಗಳು ಸಮಯ ತೆಗೆದುಕೊಳ್ಳುವುದರಿಂದ ಸಾಲ ನೀಡಿಕೆಯಲ್ಲಿ ವಿಳಂಬವಾಗುತ್ತದೆ. ಹೀಗಾಗಿ, ‘ಸಾಲದ ಹಣದ ಮರುಪಾವತಿಯಾಗದಿದ್ದರೂ ಪರವಾಗಿಲ್ಲ, ಅದಕ್ಕೆ ಸಂಬಂಧಪಟ್ಟ ಕಾಗದಪತ್ರಗಳು ಸರಿಯಾಗಿರಲಿ’ ಎನ್ನುವ ಜೋಕ್ ಬ್ಯಾಂಕಿಂಗ್ ವಲಯದಲ್ಲಿ ಸದಾ ಕೇಳುತ್ತದೆಯಂತೆ! ಹಾಗೆಯೇ, ಸಾಲ ವಸೂಲಾತಿಯ ವೇಳೆ ಗ್ರಾಹಕ ನಿಗೆ ಬ್ಯಾಂಕ್‌ನಿಂದ ಬರುವ ಫೋನ್ ಕರೆ, ವೈಯಕ್ತಿಕ ಭೇಟಿ, ಲಾಯರ್ ನೋಟಿಸು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುವುದು, ರಾಜಿ, ಒನ್‌ಟೈಮ್ ಸೆಟ್ಲ್‌ಮೆಂಟ್, ನ್ಯಾಯಮಂಡಳಿಗೆ ಹೋಗುವುದು, ಬ್ಯಾಂಕ್ ದಿವಾಳಿ ಕಾನೂನಿನ ಅಡಿಯಲ್ಲಿ ಕಾನೂನಾತ್ಮಕ ರೀತಿಯಲ್ಲಿ ಸಾಲ ವಸೂಲಿಗೆ ಪ್ರಯತ್ನಿಸುವುದು ಇತ್ಯಾದಿಯನ್ನು ಬಿಟ್ಟರೆ ಬೇರೆ ಮಾರ್ಗವಿರುವುದಿಲ್ಲ.

ಸಾಲ ವಸೂಲಿಗಾಗಿ ಬ್ಯಾಂಕುಗಳು ಗ್ರಾಹಕರ ಮೇಲೆ ದಬ್ಬಾಳಿಕೆ ಮಾಡುವಂತಿಲ್ಲ, ದೈಹಿಕ ಹಲ್ಲೆ ನಡೆಸುವಂತಿಲ್ಲ, ಮಾನಸಿಕವಾಗಿ ಹಿಂಸಿಸುವಂತಿಲ್ಲ ಮತ್ತು
ಸಾರ್ವಜನಿಕವಾಗಿ ಸಾಲಗಾರನಿಗೆ ಅವಮಾನ ವಾಗುವಂತೆ ನಡೆದುಕೊಳ್ಳುವಂತಿಲ್ಲ. ಕ್ರೆಡಿಟ್ ಕಾರ್ಡ್ ಸಂಬಂಽತ ಬಾಕಿ ವಸೂಲಿಗಾಗಿ ಕೆಲವು ಖಾಸಗಿ ಬ್ಯಾಂಕುಗಳು ಏಜೆಂಟರನ್ನು ನೇಮಿಸಿರು ತ್ತವೆ. ಅವರು ತಮ್ಮ ವಸೂಲಿ ಪ್ರಕ್ರಿಯೆಯಲ್ಲಿ ಅನಾಗರಿಕ ಮಾರ್ಗವನ್ನು ಅನುಸರಿಸಿದ್ದರೆ ಬ್ಯಾಂಕುಗಳು ಅದನ್ನು ಗಂಭೀರವಾಗಿ ಪರಿಗಣಿಸಿದ ಉದಾಹರಣೆಗಳು ಇವೆಯಂತೆ. ಅಂತೆಯೇ ಸಾಲಗಾರರು ಕಾನೂನಿನಲ್ಲಿರುವ ನ್ಯೂನತೆಯನ್ನು ದುರುಪಯೋಗ ಮಾಡಿಕೊಂಡು ಸಾಲವನ್ನು ಪೂರ್ತಿ ಮರುಪಾವತಿ ಮಾಡುವುದಿಲ್ಲ, ವಿಳಂಬ ಮಾಡುತ್ತಾರೆ ಅಥವಾ ಬ್ಯಾಂಕುಗಳಿಂದ ಗರಿಷ್ಠ ವಿನಾಯಿತಿಯನ್ನು ಪಡೆಯುತ್ತಾರೆ ಎನ್ನಲಾಗುತ್ತದೆ.
ಲೋನ್ ಆಪ್‌ನಲ್ಲಿ ಕನಿಷ್ಠ ದಾಖಲೆಗಳು, ಕಾಗದ ಪತ್ರಗಳು ಇರುತ್ತಿದ್ದು, ಅವು ಕೂಡ ಡಿಜಿಟಲ್ ಮಯ ಆಗಿರುತ್ತವೆ.

ಗ್ರಾಹಕರಿಂದ ಕನಿಷ್ಠ ವೈಯಕ್ತಿಕ ಮಾಹಿತಿಯನ್ನು ಪಡೆದು, ಚಿಟಿಕೆ ಹೊಡೆಯುವಷ್ಟರಲ್ಲಿ ಅವರು ಸಾಲವನ್ನು ನೀಡುತ್ತವೆಯಂತೆ. ಹಾಗೆಯೇ ಸಾಲ ವಸೂಲಿಯನ್ನೂ ಮಾಡುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಬ್ಯಾಂಕುಗಳು ಅನುಸರಿಸುವ ಯಾವ ಮಾರ್ಗವನ್ನೂ ಸದರಿ ಆಪ್‌ನವರು ಅನುಸರಿಸುವುದಿಲ್ಲ ಮತ್ತು ವಸೂಲಿಗಾಗಿ ಸಮಯ,
ಮಾನವ ಸಂಪನ್ಮೂಲ ಹಾಗೂ ಹಣವನ್ನು ವ್ಯಯಿಸುವುದಿಲ್ಲ. ಸಾಲ ವಸೂಲಿಯ ವೇಳೆ ಸಾಮ, ದಾನ ಮತ್ತು ಭೇದಗಳಿಗಿಂತ ದಂಡದ ಮಾರ್ಗವನ್ನು ಅವರು ಹೆಚ್ಚಾಗಿ ಹಿಡಿಯುತ್ತಾರೆ ಎನ್ನುವ ಆರೋಪ ಗಳು ಕೇಳಿಬರುತ್ತವೆ. ವರದಿಗಳ ಪ್ರಕಾರ, ಅವರು ವಸೂಲಿಗಾಗಿ ನೇರವಾಗಿ ಕಾರ್ಯಾಚರಣೆಗೆ ಇಳಿದು, ಗ್ರಾಹಕರಿಗೆ ಮಾನಸಿಕವಾಗಿ ಕಿರುಕುಳ ನೀಡಿ ತಮ್ಮ ಸಾಲವನ್ನು ವಸೂಲಿ ಮಾಡುತ್ತಾರಂತೆ.

ಜೇಮ್ಸ್ ಹ್ಯಾಡ್ಲಿ ಚೇಸ್ ಕಾದಂಬರಿಯಲ್ಲಿರುವಂತೆ ‘ಭಯವು ತಿಜೋರಿಯ ಕೀಲಿಯನ್ನು ತೆರೆಸುತ್ತದೆ’ ಎನ್ನುವ ಸೂತ್ರ ಇಲ್ಲಿ ಬಳಕೆಯಾಗುತ್ತದಂತೆ. ಬ್ಯಾಂಕುಗಳು ಈವರೆಗೆ ತಮ್ಮ ವಸೂಲಾಗದ ಸಾಲದ ಮೊತ್ತವಾದ ೨೫ ಲಕ್ಷ ಕೋಟಿ ರುಪಾಯಿ ಗಳಷ್ಟನ್ನು ರೈಟ್ ಆಫ್ ಮಾಡಿದ್ದು, ಅದರ ವಸೂಲಾತಿಗಾಗಿ ಹಣ, ಸಮಯ ಮತ್ತು ಮಾನವ ಸಂಪನ್ಮೂಲವನ್ನು ವ್ಯಯಮಾಡುತ್ತಿವೆ. ಆದರೆ ಲೋನ್ ಆಪ್‌ಗಳು ಇಂಥ ಕ್ರಮ ಕೈಗೊಳ್ಳಲು ಸಾಧ್ಯವೇ? ಚೀನಾದ ಲೋನ್ ಆಪ್‌ಗಳ ಸಾಲ
ವಸೂಲಾತಿ ಕ್ರಮಗಳು ಅಮಾನುಷ ಮತ್ತು ಖಂಡನೀಯ. ಅವರ ವಸೂಲಿ ಕ್ರಮದಲ್ಲಿ ಮಾನವೀಯತೆ ಕಾಣದು. ಆದರೆ, ಅವರು ಕೂಡ ವ್ಯವಹಾರದಲ್ಲಿದ್ದು, ಅದರ ಬಂಡಿಯೂ ಓಡಬೇಕಲ್ಲವೇ? ಸಾಲವಸೂಲಿಯಲ್ಲಿ ಕಠಿಣ ಕ್ರಮದ ಭಯ ಇಲ್ಲದಿದ್ದರೆ, ಸುಸ್ತಿ ಸಾಲಗಳು ಸಾಲ ನೀಡಿದವರನ್ನು ಮುಗಿಸುತ್ತವೆ.

ಮಾಡಿದ ಸಾಲವನ್ನು ಸಮಯದ ಪರಿಮಿತಿ ಯಲ್ಲಿ ಮರುಪಾವತಿಸಿ, ಸಮಾಜದಲ್ಲಿ ಗೌರವಾನ್ವಿತ ರಾಗಿ ತಲೆಯೆತ್ತಿ ಓಡಾಡುವ ಹಿಂದಿನ ಸಂಸ್ಕೃತಿ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಿದ್ದು, ‘ಸಾಲ ತಾನೇ? ತೀರಿಸಿದರಾಯಿತು…’ ಎನ್ನುವ ಕೆಲವರ ಉದಾಸೀನತೆ ಮತ್ತು ನಿರ್ಲಿಪ್ತತೆ ಮೇಲ್ಮೈಗೆ ಬಂದಾಗ ಇಂಥ ಘಟನೆಗಳು ಕಾಣಸಿಗುತ್ತವೆ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ. ಇತ್ತೀಚೆಗೆ ಯುವಕನೊಬ್ಬ ಬ್ಯಾಂಕ್ ಸಾಲದ ನೆರವಿನಿಂದ ಹೊಸ ಬೈಕ್ ಖರೀದಿಸಿದ್ದ. ‘ಸಾಲವನ್ನು ಹೇಗೆ ಹಿಂದಿರುಗಿಸುತ್ತೀಯಾ?’ ಎಂದು ಅವನ ಸ್ನೇಹಿತರು ಕೇಳಿದಾಗ, ‘ನಾನೇನು ಸಾಲ ಕೊಡಿ ಎಂದು ಕೇಳಿದ್ನಾ? ಅವರೇ ಕೇಳಿ ಕೇಳಿ ಕೊಟ್ಟಿದ್ದು. ನನಗೆ
ಅನುಕೂಲವಾದಾಗ ಹಿಂದಿರುಗಿಸುವೆ. ಇದು ಅವರಿಗೆ ಒಪ್ಪಿಗೆಯಾಗದಿದ್ದಲ್ಲಿ ಅವರು ಈ ಬೈಕನ್ನು ವಾಪಸ್ ಒಯ್ಯಲಿ’ ಎಂದನಂತೆ! ಇದು ಬ್ಯಾಂಕಿಂಗ್
ಉದ್ಯಮವು ಕೂಲಂಕಷವಾಗಿ ಅವಲೋಕಿಸಬೇಕಾದ ವಿಷಯ.

(ಲೇಖಕರು ನಿವೃತ್ತ ಬ್ಯಾಂಕರ್)