Wednesday, 11th December 2024

ಕಿರಿಕಿರಿಯ ಹೇನು ಅವಸಾನದ ಅಂಚಿನಲ್ಲಿದೆಯೇ ?!

ಶಿಶಿರ ಕಾಲ

shishirh@gmail.com

ಯಾವ್ಯಾವುದೋ ಜೀವಿಗಳೆಲ್ಲ ಅವಸಾನವಾಗುತ್ತಿವೆಯಂತೆ! ನಮಗೆ ಅಂದಾಜೇ ಇಲ್ಲದಷ್ಟು ಜೀವಿಗಳು ನಿತ್ಯ ನಾಮಾವಶೇಷ ವಾಗುತ್ತಿವೆಯಂತೆ. ಒಂದು ಲೆಕ್ಕದ ಪ್ರಕಾರ ಶೇ. ೦.೧ರಷ್ಟು ಜೀವಿಗಳು ಪ್ರತಿ ವರ್ಷ ಅಳಿದುಹೋಗುತ್ತವೆಯಂತೆ. ಆದರೆ ನಮಗೆ ಇಂದಿಗೂ ಭೂಮಯಲ್ಲಿ ಎಷ್ಟು ಜೀವ ವೈವಿಧ್ಯವಿದೆ ಎಂಬ ಅಂದಾಜೇ ಇಲ್ಲ.

ಅಮೆರಿಕದ ವಿಜ್ಞಾನಿಗಳು ಇತ್ತೀಚೆಗೆ ಪನಾಮಾದ ನಿತ್ಯ ಹರಿದ್ವರ್ಣ ಕಾಡಿನ ಆಳದಲ್ಲಿ ಮಿಡತೆಯ ಬಗ್ಗೆ ಅಭ್ಯಾಸ ಮಾಡಲಿ ಕ್ಕೆಂದು ಮುಂದಾಗಿದ್ದರು. ಅಲ್ಲಿ ಅವರು ಆಯ್ಕೆ ಮಾಡಿಕೊಂಡದ್ದು ಆ ದಟ್ಟ ಕಾಡಿನ ಮಧ್ಯದ ೧೯ ಮರಗಳನ್ನು. ಅವುಗಳ ಲ್ಲಿಯೇ ಅವರಿಗೆ ೧೨೦೦ ವೈವಿಧ್ಯದ ಮಿಡತೆಗಳು ಕಾಣಿಸಿಕೊಂಡವು. ಅವುಗಳಲ್ಲಿ ಹಿಂದೆಂದೂ ಎಲ್ಲಿಯೂ ಕಾಣದ ಮಿಡತೆಗಳೂ ಇದ್ದವಂತೆ. ಮಿಡತೆಯ ಬಗ್ಗೆ ಅಭ್ಯಾಸ ಮಾಡಲಿಕ್ಕೆ ಹೋದ ಈ ವಿಜ್ಞಾನಿಗಳ ಫೈನಲ್ ರಿಪೋರ್ಟ್ ಬಂದಾಗ ಅವರು ಹೇಳಿದ್ದು ಇದು: ನಮಗೆ ಈ ಭೂಮಿಯ ಮೇಲಿರುವ ಜೀವ ವೈವಿಧ್ಯದ ಕಾಲಂಶ ಅಷ್ಟೇ ಗೊತ್ತು.

ನಮಗೆ ಇಂದು ಬಾಹ್ಯಾಕಾಶದ ಅಸಂಖ್ಯ ನಕ್ಷತ್ರಗಳ ಗುರುತಿದೆ, ಅವಕ್ಕೆಲ್ಲ ಹೆಸರಿಟ್ಟುಕೊಂಡಿದ್ದೇವೆ; ಆದರೆ ಭೂಮಿಯ
ಮೇಲಿರುವ ಜೀವ ವೈವಿಧ್ಯದ ಶೇ.೨೫ ಅಷ್ಟೇ ನಮಗೆ ಲೆಕ್ಕಸಿಕ್ಕಿರುವ ಅಂದಾಜು. ಈ ಭೂಮಿಯಲ್ಲಿ (ನೆಲ ಮತ್ತು ಸಮುದ್ರ) ಮನುಷ್ಯನೇ ಕಾಣದ ಶೇ.೭೫ರಷ್ಟು ಜೀವ ವೈವಿಧ್ಯವಿದೆ. ಮನುಷ್ಯ ನೋಡಿದ್ದು ಅತ್ಯಲ್ಪ. ಈ ವರದಿಯಲ್ಲಿ ಅವರು ಮಿಡತೆಯ ಬಗ್ಗೆ ಹೇಳಿದ ವಿವರ ಮಾತ್ರ ಅತ್ಯಲ್ಪ. ನಮ್ಮ ಕೃಷಿ ಮಣ್ಣಿನಲ್ಲಿ, ನೀರಿನಲ್ಲಿ, ಸಮುದ್ರದಲ್ಲಿ ಮನುಷ್ಯಕೃತ ಕೈಂಕರ್ಯಗಳಿಂದಾಗಿ ಅದೆಷ್ಟೋ ಗುರುತೇ ಇಲ್ಲದ ಜೀವಿಗಳು ನಿತ್ಯ ಅಸಂಖ್ಯ ಅವಸಾನಕ್ಕೆ ಈಡಾಗುತ್ತವೆ.

ಈಗ ಎದುರಿಗಿರುವ ಪ್ರಶ್ನೆ- ಮನುಷ್ಯಕುಲವನ್ನು ಅತ್ಯಂತ ದೀರ್ಘ ಸಮಯ ಗೋಳು ಹೊಯ್ದುಕೊಂಡ, ಇಂದಿಗೂ ಒಂದು ವರ್ಗದ ಮನುಷ್ಯನನ್ನು ನಿತ್ಯ ಕಾಡುವ ಹೇನಿನ ಅವಸಾನದ ಬಗ್ಗೆ. ಅವು ಕೂಡ ಅವಸಾನದ ಅಂಚಿನಲ್ಲಿವೆಯೇ ಎಂಬ ಪ್ರಶ್ನೆ.
ಹೇನು. ಒಮ್ಮೆ ಪರಕಾಯ ಪ್ರವೇಶ ಮಾಡಿ ಕಂಡರೆ ಅದರದು ಅತ್ಯಂತ ರೋಚಕ, ಸಾಹಸಮಯ ಬದುಕು. ಗಾತ್ರ ಸಾಸಿವೆಕಾಳಿ ಗಿಂತ ಕಡಿಮೆ. ಅದಿರಬೇಕಾದದ್ದು ದಟ್ಟ ಕಾಡಿನಂಥ ತಲೆಕೂದಲಿನಲ್ಲಿ. ಕೂದಲು ದಟ್ಟವಾಗಿದ್ದರೆ ಅದರಲ್ಲಿ ಓಡಾಡುವುದು ಸುಲಭವೇನಲ್ಲ. ಅದರಲ್ಲಿಯೂ ಎಣ್ಣೆ (ತಲೆಗೆ) ಹಾಕುವವರ ತಲೆಯನ್ನೇನಾದ್ರೂ ಸೇರಿಕೊಂಡರೆ ಮುಗಿದೇ ಹೋಯಿತು.

ಓಡಾಡಲಿಕ್ಕೇ ಕಷ್ಟ. ಕೂದಲೋ, ಅದೇನು ನಿಂತಲ್ಲಿ ನಿಲ್ಲುವ ಕಾಡಲ್ಲ. ಓಡಾಡುವ ವ್ಯಕ್ತಿಯ ತಲೆ ಗಾಳಿಗೆ ಒಗ್ಗಿಕೊಂಡರೆ ಹಾರಿ ಹೋಗದಂತೆ ಭದ್ರವಾಗಿ ಕಾಲೂರಿ ಹಿಡಿದಿಟ್ಟುಕೊಳ್ಳಬೇಕು. ಅದೆಲ್ಲದರ ನಡುವೆ ಹೊಟ್ಟೆ ತುಂಬಿಸಿಕೊಳ್ಳಬೇಕೆಂದರೆ ವಾಸಿಸುವ ನೆಲ (ತಲೆ)ವನ್ನು ಕಚ್ಚಬೇಕು. ನೆಲದೊಳಗಿನಿಂದ ಆಹಾರ- ರಕ್ತವನ್ನು ಹೀರಬೇಕು. ಅದು ಕೂಡ ಹಾಗೆಯೇ ಸಿಕ್ಕಿಬಿಡುವುದಿಲ್ಲ. ಅದು ಮನುಷ್ಯನೆಂಬ ಜೀವಿಯ ಅತ್ಯಂತ ಸೂಕ್ಷ್ಮವಾದ ರುಂಡದ ಭಾಗ.

ಕಚ್ಚಿತೆಂದರೆ ಆ ಆಹಾರದಲ್ಲಿಯೇ ಇರುವ ಬಿಳಿ ರಕ್ತಕಣಗಳು ಆ ಗಾಯದ ರಕ್ಷಣೆಗೆ ಮುಂದಾಗುತ್ತವೆ. ಅದರಿಂದಾಗಿ ನವೆ
ಉಂಟಾಗಿ ಕ್ಷಣಾರ್ಧದಲ್ಲಿ ಬುಲ್ಡೋಜರ್ ಹಲ್ಲಿನ ಗಾತ್ರದ ಮನುಷ್ಯನ ಉಗುರುಗಳು ಆ ಭಾಗದ ಸುತ್ತ ಬಂದು ಕೆರೆಯುತ್ತವೆ. ಹಾಗಾಗಿ ಕಚ್ಚಿ ರಕ್ತ ಹೀರಿ ಅಂದಾಜಾಗುವ ಮೊದಲು ಅಲ್ಲಿಂದ ಜಾಗ ಕೀಳಬೇಕು. ಒಂದುವೇಳೆ ಅಲ್ಲೇ ಉಳಿದರೆ ಅದುವೇ ಕೊನೆಯ ಊಟವಾಗಬಹುದು. ಸಂಖ್ಯೆ ಲೆಕ್ಕಮೀರಿದರೆ ಆ ಮನುಷ್ಯ ಅವುಗಳ ಸರ್ವನಾಶಕ್ಕೆಂದೇ ಏನೇನೋ ರಾಸಾಯನಿಕ ವನ್ನು ತಲೆಯ ಮೇಲೆಯೇ ಹೊಯ್ಯುತ್ತಾನೆ. ಸೋಪಿನಿಂದ ಗಸಗಸ ತಿಕ್ಕುತ್ತಾನೆ. ನೀರು ಬಿಟ್ಟುಕೊಳ್ಳುತ್ತಾನೆ- ಪ್ರವಾಹ. ಅದರಿಂದ ಇಡೀ ಕುಲಕ್ಕೆ ಕುಲವೇ ಒಂದೇ ಸ್ನಾನದಲ್ಲಿ ನಾಶವಾಗಿಬಿಡಬಹುದು.

ಅದೆಲ್ಲ ಕಷ್ಟಕಾರ್ಪಣ್ಯಗಳ ನಡುವೆ ಬದುಕು ಸಾಗಬೇಕು. ಅದೆಲ್ಲದರ ನಡುವೆ ಸಂತಾನೋತ್ಪತ್ತಿಯಾಗಬೇಕು. ಅಷ್ಟೇ ಅಲ್ಲ,
ಇನ್ನೊಂದು ತಲೆ ಹತ್ತಿರ ಬಂದರೆ ತಕ್ಷಣ ಜಾಗ್ರತವಾಗಿ ಆ ಬದುಕಿನ ಅವಕಾಶಕ್ಕೆ ಹಾರಿ ವಲಸೆ ಹೋಗಬೇಕಾಗಬಹುದು. ಬೇರೊಂದು ತಲೆಯೆಂದರೆ ಬೇರೊಂದು ಹೊಸ ಲೋಕ, ನೆಲೆ, ಜಗತ್ತು. ಒಬ್ಬೊಬ್ಬ ಮನುಷ್ಯನ ರಕ್ತವೂ ಅನನ್ಯ ರುಚಿ. ಯಾವು ದಾದರೂ ಸರಿ. ಅಲ್ಲಿಯೂ ಬದುಕಬೇಕು, ಸಂತಾನೋತ್ಪತ್ತಿ ಮಾಡಿ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು. ವಂಶ ಮುಂದುವರಿಯ ಬೇಕು.

ಮೊಟ್ಟೆ ಇಡುವ ಕೆಲಸವೂ ಸುಲಭದ್ದಲ್ಲ. ಅಸಂಖ್ಯ ಕೂದಲುಗಳ ನಡುವೆ ಸದೃಢವಾದ ಕೂದಲನ್ನು ಹುಡುಕಬೇಕು. ಆ ಕೂದಲು ಸದ್ಯದಲ್ಲೇ ಉದುರಿ ಹೋಗುವಂಥದ್ದಾಗಿರಬಾರದು. ಅದರ ಬುಡದಲ್ಲಿ ಅತ್ಯಂತ ಚಿಕ್ಕ ಮೊಟ್ಟೆಯನ್ನಿಟ್ಟು, ಅಂಟಿಸಿ ಭದ್ರಪಡಿಸಬೇಕು. ಇಂಥ ಬದುಕಿನಲ್ಲಿ ಮೊಟ್ಟೆ ಇಟ್ಟ ನಂತರ ಅದನ್ನು ಕಾಪಾಡಲು ಪಕ್ಕದಲ್ಲಿ ಕುಳಿತುಕೊಳ್ಳುವಂತಿಲ್ಲ. ಬದುಕೇ ಒಂದು ತಿಂಗಳ ಸಂಪತ್ತು.

ಮೊಟ್ಟೆಯಿಂದ ಹೊರಬಂದಾಕ್ಷಣ ರಕ್ತ ಹೀರುವುದೇ ಮೊದಲ ಕೆಲಸ. ಅದಾಗದಿದ್ದರೆ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಉಪವಾಸ ದಿಂದ ಸಾವು ನಿಶ್ಚಿತ. ಏಳೇ ದಿನಕ್ಕೆ ಹದಿಹರೆಯ ದಾಟಿ ಪ್ರಾಯಕ್ಕೆ ಬಂದಾಗಿರುತ್ತದೆ. ಬದುಕನ್ನು ಕಲಿಯಲಿಕ್ಕೆಂದು ಅಷ್ಟೆಲ್ಲಾ ಸಮಯವಿಲ್ಲ. ಇಡೀ ಬದುಕೇ ಮೂವತ್ತು ದಿನ ಪರಮಾವಧಿಯಾಗಿರುವಾಗ ಕಲಿಕೆಗೆ ಸಮಯವೆಲ್ಲಿದೆ? ಬದುಕಿಗೆ ಧುಮುಕಬೇಕು. ಅನುವಂಶೀಯವಾಗಿ ಬಂದದ್ದೇ ಜ್ಞಾನ. ಇದೆಲ್ಲದರ ನಡುವೆ ಗಾಳಿಯಲ್ಲಿ ತೂರಿ ಹೋಗಿಬಿಟ್ಟರೆ ಅಥವಾ ಯಾವುದೊ ಬಟ್ಟೆ ಯಲ್ಲಿ ಸಿಕ್ಕಿಹಾಕಿಕೊಂಡರೆ ರಕ್ತಾಹಾರವಿಲ್ಲದೆ ಹೆಚ್ಚೆಂದರೆ ಎರಡು ಮೂರು ದಿನವಷ್ಟೇ ಉಪವಾಸ ಉಳಿಯಬಹುದು. ಮನುಷ್ಯ ಅಥವಾ ಚಿಂಪಾಂಜಿ ರಕ್ತ ಬಿಟ್ಟರೆ ಬೇರಿನ್ನೇನೂ ಆಹಾರವೇ ಅಲ್ಲ.

ಬೇರೆಲ್ಲಿಯೇ ಹೋಗಿಬಿದ್ದರೂ ಅಲ್ಲಿಯೇ ಅಂತ್ಯ. ಮನುಷ್ಯನನ್ನು ಅಸಂಖ್ಯ ಶತಶತಮಾನ ಕಾಡಿದ ಅತ್ಯಂತ ಚಿಕ್ಕ ಜೀವಿ ಹೇನು. ಇದೊಂದನ್ನು ಮತ್ತು ಸೊಳ್ಳೆಯನ್ನು ಮನುಷ್ಯ ಸಂಪೂರ್ಣ ಸರ್ವನಾಶ ಮಾಡಬೇಕೆಂದು ಪಣ ತೊಟ್ಟು ಅದೆಷ್ಟೋ ಸಹಸ್ರ ವರ್ಷಗಳೇ ಸಂದಿವೆ. ಆದರೆ ಇಂದಿಗೂ ಸರ್ವನಾಶ ಬಿಡಿ, ನಿಯಂತ್ರಣವೇ ಹರಸಾಹಸ. ಹಾಗೆ ನೋಡಿದರೆ, ಅವುಗಳ ಬದುಕು ಬಹಳ ನಾಜೂಕು. ಹೀಗಿರುವಾಗ, ಕತ್ತಿ ಅಲಗಿನ ಮೇಲಿನ ಬದುಕಿನ ಈ ಜೀವಿಯ ಬದುಕಿನ ಹೋರಾಟ ತಾತ್ಸಾರ ಮಾಡು ವಂತಿಲ್ಲ.

ಕ್ವೀನ್ ವಿಕ್ಟೋರಿಯಾ ಆಳ್ವಿಕೆಯ ಸಮಯದಲ್ಲಿ ಲಂಡನ್ನಿನ ಆಸ್ಪತ್ರೆಗಳಲ್ಲಿ ಹೇನುಗಳನ್ನು ನಿಯಂತ್ರಿಸಲಿಕ್ಕೆಂದೇ ಉದ್ಯೋಗಗಳಿ ದ್ದವು ಎಂಬುದು ದಾಖಲಾದ ಇತಿಹಾಸ. ಅಲ್ಲಿನ ಹೇನು ನಿಯಂತ್ರಕರ ಕೆಲಸವೆಂದರೆ ಮನುಷ್ಯ ದೇಹದಲ್ಲಿರುವ ಹೇನುಗಳಷ್ಟೇ ಅಲ್ಲ, ಅಲ್ಲಿನ ಬೆಡ್ಡುಗಳಲ್ಲಿ, ರೋಗಿಗಳ ಬಟ್ಟೆಯಲ್ಲಿದ್ದ ಹೇನನ್ನು ಕೂಡ ಇವರೇ ನಿಯಂತ್ರಿಸಬೇಕಿತ್ತು. ಅಂದಿನ ಕಾಲದಲ್ಲಿ ಹೇನಿನ ಕಾಟ ಎಷ್ಟಿತ್ತೆಂದರೆ ಈ ಹೇನು ನಿಯಂತ್ರಕರಿಗೆ ಅಲ್ಲಿನ ವೈದ್ಯರಿಗಿಂತ ತುಸು ಜಾಸ್ತಿ ಸಂಬಳವಿತ್ತಂತೆ. ನಮ್ಮೂರಿನ ಮಂಗಗಳನ್ನು ತೆಗೆದುಕೊಂಡು ಹೋಗಿ ಬಿಟ್ಟಿದ್ದರೆ ಈ ಕೆಲಸವನ್ನು ಖುಷಿಯಿಂದ ಮಾಡುತ್ತಿದ್ದವೇನೋ. ಆದರೆ ಲಂಡನ್ನಿನಲ್ಲಿ ಮಂಗಗಳಿರಲಿಲ್ಲವಲ್ಲ!!

ಹೇನುಗಳಲ್ಲಿ ಮುಖ್ಯವಾಗಿ ಮೂರು ವಿಧ. ತಲೆ ಕೂದಲಿನಲ್ಲಿ ಬದುಕುವವು ಒಂದು. ಇನ್ನೊಂದು ದೇಹದ ಚರ್ಮದ ಮೇಲೆ, ಕೂದಲಿನ ಅಂಚಿನಲ್ಲಿ ಬದುಕುವವು. ಇನ್ನೊಂದು ಗುಪ್ತಾಂಗಗಳ ಕೂದಲಿನಲ್ಲಿ ಬದುಕುವವು. ಈ ಹೇನು ಮನುಷ್ಯನ ಜತೆ ಯಾದದ್ದು ಅನಾದಿಕಾಲದಲ್ಲಿ. ಸುಮಾರು ೧,೭೦,೦೦೦ ವರ್ಷಗಳ ಹಿಂದೆ! ಹೇನಿನ ಡಿಎನ್‌ಎ ಸೀಕ್ವೆನ್ಸಿಂಗ್ ವಿವರ ನೋಡುವಾಗ ಎರಡು ಲಕ್ಷ ವರ್ಷದ ಹಿಂದೆ ಚಿಂಪಾಂಜಿ, ಮಂಗಗಳ ದೇಹದಿಂದ ಮನುಷ್ಯನ ದೇಹ ಸೇರಿಕೊಂಡವು ಎನ್ನುವುದು ತಿಳಿಯುತ್ತದೆ. ಅದಾದ ನಂತರವೇ ಮನುಷ್ಯ ವಲಸೆ ಶುರುಮಾಡಿದ್ದು ಎಂಬುದು ಆಫ್ರಿಕನ್ ಮನುಷ್ಯ ಮೂಲದ ವಾದ. ಒಟ್ಟಾರೆ ಮನುಷ್ಯ ವಲಸೆ ಹೋದಂತೆಲ್ಲ, ಆತನ ಜತೆಯಲ್ಲಿಯೇ ಜಗದ್ವ್ಯಾಪಿಯಾದ ಇನ್ನೊಂದು ಜೀವಿ ಹೇನು!

ಮನುಷ್ಯ ಇತಿಹಾಸದ ವಿವಿಧ ಕಾಲಘಟ್ಟದಲ್ಲಿ, ಸಂಸ್ಕೃತಿ ಯಲ್ಲಿ ಹೇನಿಗೆ ಅದರದೇ ಆದ ಸ್ಥಾನವಿದೆ. ಹೇನೆಂದರೆ ಅದು ವಿಲನ್. ಹೇನೆಂದರೆ ಕಿರಿಕಿರಿಯ ದ್ಯೋತಕವಾಗಿ ಅದೆಷ್ಟೋ ಕಾವ್ಯಗಳು, ಹಾಡುಗಳು. ಅದೊಂದು ಪಿಡುಗು, ದೇವರ ಶಾಪ ಎಂದೇ ರೋಮನ್ನರ ಕಾಲದಲ್ಲಿ ನಂಬಿಕೆಯಿತ್ತು. ತಲೆಗೆ ಹೇನಾಗಿದೆ ಎಂದರೆ ಅದು ಯಾವುದೊ ದೇವರ ಮುನಿಸು, ಕರ್ಮಫಲ. ಅಷ್ಟೇ ಅಲ್ಲ, ಇದನ್ನು ಮನುಷ್ಯ ಬದುಕಿನ ಹೋರಾಟದ ಬದುಕಿನ ರಂಜನೆಯ ವರ್ಣನೆಗೂ ಬಳಸಿಕೊಂಡದ್ದುಂಟು.

Gulliver’s Travels ಎಂಬ ಕಥೆಯ ಚಲನಚಿತ್ರದಲ್ಲಿ ಸಿನಿಮಾ ಹೀರೋ ಅತ್ಯಂತ ಚಿಕ್ಕ ಗಾತ್ರದ ಮನುಷ್ಯರುಳ್ಳ ಒಂದು ದ್ವೀಪ ದಲ್ಲಿ ಹೋಗಿ ಬೀಳುತ್ತಾನೆ. ಅವನ ತಲೆಯಲ್ಲಿರುವ ಹೇನು ಅಲ್ಲಿನ ಚಿಕ್ಕ ಗಾತ್ರದ ಮನುಷ್ಯರಿಗೆ ಸಾಕುಪ್ರಾಣಿಗಳ ಗಾತ್ರದಲ್ಲಿ ಕಾಣಿಸುತ್ತವೆ. ಅವರು ಅದನ್ನು ಪಳಗಿಸಲು ಮುಂದಾಗುತ್ತಾರೆ. ಹೀಗೆ ಮನುಷ್ಯ ಕಲ್ಪನೆಯ ಕಥೆ ಕಾವ್ಯಗಳಲ್ಲಿ ಹೇನಿಗೆ ಕೂಡ
ಜಾಗವಿದೆ. ಕ್ರೈಸ್ತರ ನರಕದಲ್ಲಿ ಹೇನಿಗೆ ಸಾಕಷ್ಟು ಕೆಲಸ. ಪಾಪ ಮಾಡಿದವರನ್ನು ಹೇನು ತುಂಬಿದ ಬಾವಿಯಲ್ಲಿ ಹಾಕುವುದೇ ಶಿಕ್ಷೆ. ಇಂಗ್ಲಿಷ್ ಭಾಷೆಯ ನಿತ್ಯ ಬಳಸುವ ಹಲವು ಶಬ್ದಪುಂಜಗಳಲ್ಲಿಯೂ ಹೇನಿದೆ.

ಅದೆಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅದರಲ್ಲಿನ ಚಿಕ್ಕ ತಪ್ಪನ್ನು ಹುಡುಕುವುದನ್ನು ಮೊಸರಲ್ಲಿ ಕಲ್ಲು ಹುಡುಕುವುದು ಎಂದು ಬಳಸುತ್ತೇವಲ್ಲ. ಅದೇ ರೀತಿ ಇಂಗ್ಲೀಷಿನಲ್ಲಿ ‘nitpicking’ ಎನ್ನುವುದು. ಹೇನಿನ ಮೊಟ್ಟೆಯನ್ನು nit ಎನ್ನುವುದು. ತಪ್ಪು
ಬೊಟ್ಟುಮಾಡುವವರನ್ನು ಕಂಡು Stop ‘nitpicking’ ಎಂದು ಹೇಳುವಾಗ ಅದರ ಶಬ್ದಶಃ ಅರ್ಥ ಹೇನಿನ ಮೊಟ್ಟೆ ಹೆಕ್ಕುವ ಕೆಲಸ ಮಾಡಬೇಡ ಎಂದು. ಇಂಗ್ಲಿಷಿನಲ್ಲಿ ಕೊಳಕಾದದ್ದನ್ನು ‘Lousy’ ಎಂದು ಹೇಳುವುದಿದೆ. ಅದು lice ಹೇನು ಶಬ್ದದ ಉತ್ಪತ್ತಿ. ಹೇನು ಕೊಳೆಯಿಂದ, ಸ್ವಚ್ಛತೆ ಇಲ್ಲದಿರುವುದರಿಂದ ಬರುತ್ತದೆ, ಹರಡುತ್ತದೆ ಎಂಬ ನಂಬಿಕೆ ದೀರ್ಘಕಾಲ ಮನುಷ್ಯನಲ್ಲಿತ್ತು. ಇಂದಿಗೂ ಹೇನಿದೆಯೆಂದರೆ ಅವನು ಕೊಳಕ ಎಂದೇ ಅಂದುಕೊಳ್ಳುವುದು.

ಆದರೆ ಹೇನಿಗೂ ಸ್ವಚ್ಛತೆಗೂ ಜಾಸ್ತಿಯೇನು ಸಂಬಂಧವಿಲ್ಲ. Louse Up ಎಂದರೆ ಗಬ್ಬೆಬ್ಬಿಸುವುದು. Louse’s Egg ಏನಾದರೂ ಅಸಹ್ಯವಾದದ್ದು ಕಂಡರೆ ಹೀಗೆನ್ನುವುದಿದೆ. ಹೇನಿನದು ಏಕಾಂಗಿ ಬದುಕು. ಅವು ಒಂದನ್ನೊಂದು ಸಂಧಿಸುವುದು ಎರಡೇ ಸಂದರ್ಭದಲ್ಲಿ. ನಮ್ಮ ತಲೆಮೇಲಿನ ಚಿಕ್ಕ, ಅದರದೇ ಜಮೀನಿನನ್ನು ಇನ್ನೊಂದು ಹೇನು ಆಕ್ರಮಿಸಿದಾಗ ಪ್ರತಿದಾಳಿ ಯಾಗಿ ಮತ್ತು ಸಂತಾನೋತ್ಪತ್ತಿ ಕ್ರಿಯೆಯಲ್ಲಿ. ಈ ರೀತಿ ಬದುಕುವ ಜನರದು lice life ಎನ್ನುವ ರೂಢಿ. ಇಂಗ್ಲಿಷಿನಲ್ಲಷ್ಟೇ ಅಲ್ಲ, ಬಹುತೇಕ ಭಾಷೆಗಳಲ್ಲಿ ಹೇನಿನ ರೂಪಕಗಳಿವೆ.

ಹೇನುಗಳು ಇತಿಹಾಸದುದ್ದಕ್ಕೂ ಅತ್ಯಂತ ಕಾಡಿದ್ದು ಸೈನಿಕರನ್ನು. ಯುದ್ಧಕ್ಕೆ ಹೊರಟ ಸೈನಿಕರು ಅತ್ಯಂತ ಚಿಕ್ಕ ಜಾಗದಲ್ಲಿ
ಜತೆಯಲ್ಲಿ ಮಲಗುವುದು, ಬಟ್ಟೆಗಳನ್ನು ಹಂಚಿಕೊಳ್ಳುವುದು ಮಾಡುತ್ತಿದ್ದರಿಂದ ಹೇನಿನ ಸಮಸ್ಯೆ ಅವರಲ್ಲಿ ಜಾಸ್ತಿಯಿತ್ತು.
ಅಲೆಕ್ಸಾಂಡರ್ ದಿ ಗ್ರೇಟ್ ತನ್ನ ಸೈನಿಕರಲ್ಲಿ ಹೇನು ಇದೆಯೇ ಎಂದು ಆಗೀಗ ಪರೀಕ್ಷಿಸುವಂತೆ ಆಜ್ಞಾಪಿಸಿದ್ದನಂತೆ. ಸೈನಿಕನಲ್ಲಿ
ಲೆಕ್ಕ ಮೀರಿ ಹೇನು ಕಂಡರೆ ತನ್ನ ದಂಡಯಾತ್ರೆಯಲ್ಲಿ ಆತನನ್ನು ಅಲ್ಲಿಯೇ ಹಿಂದೆ ಬಿಟ್ಟು ಮುಂದೆ ಹೋಗುತ್ತಿದ್ದನಂತೆ.

ಈಗ ಹೇನು ನಾಮಾವಶೇಷವಾಗಲಿದೆಯೇ ಎಂಬ ಪ್ರಶ್ನೆಯಲ್ಲವೇ? ಮೇಲ್ನೋಟಕ್ಕೆ ಈಗ, ಮೊದಲಿನಂತೆ, ಹೇನಿನ ಸಮಸ್ಯೆ ಅಷ್ಟು ಪ್ರಮಾಣದಲ್ಲಿದ್ದಂತಿಲ್ಲ. ಅದಕ್ಕೆ ಕಾರಣ ನಿಮಗೆಲ್ಲ ತಿಳಿದೇ ಇದೆ. ನಮ್ಮೆಲ್ಲರ ಬದುಕಿನ ರೀತಿ ಬದಲಾಗಿದೆ. ನಾವು ಇಂದು ಹಿಂದೆಲ್ಲದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಸ್ನಾನ ಮಾಡುತ್ತಿದ್ದೇವೆ, ಶ್ಯಾಂಪೂ ಇತ್ಯಾದಿ ಬಳಸುತ್ತಿದ್ದೇವೆ. ಸಾಮಾಜಿಕ ಅಂತರ ಸಹಜವಾಗಿದೆ. ಹಾಗಾಗಿ ಮೇಲ್ನೋಟಕ್ಕೆ ಹೇನು ಬಹುತೇಕ ವಿನಾಶದ ಅಂಚಿನಲ್ಲಿದೆ ಎಂದೆನಿಸಬಹುದು.

ಆದರೆ ಅವು ಇಂದಿಗೂ ಹಿಂದುಳಿದ ದೇಶಗಳಲ್ಲಿ, ಅಲ್ಲಿನ ಗುಡಿಸಲು, ಮನೆಗಳಲ್ಲಿ, ಶಾಲೆಗಳಲ್ಲಿ ಪ್ರಫುಲ್ಲವಾಗಿ ಉಳಿದುಕೊಂಡಿವೆ. ಅದರಲ್ಲಿಯೂ ಆಫ್ರಿಕನ್ ರಾಷ್ಟ್ರಗಳಲ್ಲಿ, ಅಲ್ಲಿನವರ ಗುಂಗುರು ಕೂದಲಿನ ತಲೆಯೆಂದರೆ ಅವಕ್ಕೆ ಒಂದಿಷ್ಟು ರಕ್ಷಣೆಯೂ ಇದೆಯಲ್ಲ. ಹಮಾಸ್, ದಕ್ಷಿಣ ಸುಡಾನ್, ರೋಹಿಂಗ್ಯಾ, ಅಫ್ಘಾನಿಸ್ತಾನ ಇಲ್ಲೆಲ್ಲಾ ಹೇನು ನಾವು ಅಂದಾಜಿಸಲಾಗದ ಪ್ರಮಾಣ ದಲ್ಲಿ ಮನುಷ್ಯನನ್ನು ಕಾಡುತ್ತಿವೆ. ಇತ್ತೀಚೆಗೆ ರೋಹಿಂಗ್ಯಾಗಳ ಬಗ್ಗೆ, ಅಲ್ಲಿನ ಕ್ಯಾಂಪುಗಳ ಸ್ಥಿತಿಯ ಬಗ್ಗೆ ಒಂದು ವರದಿ ಬಂದಿತ್ತು. ಅದರಲ್ಲಿ ಅರ್ಧಪುಟಕ್ಕಾಗುವಷ್ಟು ವಿವರ ಹೇನಿನ ಸಮಸ್ಯೆಯ ಬಗ್ಗೆ ಇತ್ತು.

ಹೀಗೆ ಅತ್ಯಂತ ದಯನೀಯವಾಗಿ ಮನುಷ್ಯ ಎಲ್ಲೆಲ್ಲಿ ಬದುಕುತ್ತಿದ್ದಾನೋ ಅಲ್ಲೆಲ್ಲ ಇವುಗಳು ಏಳ್ಗೆಯಲ್ಲಿವೆ. ಮನುಷ್ಯ ಸಮಾಜ ದಲ್ಲಿ ಒಬ್ಬ ವ್ಯಕ್ತಿ ಅಕ್ಷರಶಃ ಬೀದಿಗೆ ಬಂದಾಗ, ರಸ್ತೆಯಲ್ಲಿ, ಸೇತುವೆಗಳ ಕೆಳಗೆ ಬದುಕುವ, ಮನೆಯಿಲ್ಲದ ಸ್ಥಿತಿ ಯುಂಟಾದಾಗ, ಅಂಥ ವ್ಯಕ್ತಿಯ ದೇಹವನ್ನು ಅದೆಲ್ಲಿಂದಲೋ ಮೊದಲು ಬಂದು ಸೇರುವುದು ಈ ಹೇನುಗಳು. ಅವು ಒಳ್ಳೆಯ ದೇಹ ಹೊಕ್ಕು ವಾರದೊಳಗೆ ಹತ್ತಾರುಪಟ್ಟು ವೃದ್ಧಿಯಾಗಿಬಿಡುತ್ತವೆ. ಆಗ ಸಹಜವಾಗಿ ಅವುಗಳು ಆಹಾರಕ್ಕೆ ಚರ್ಮವನ್ನು ಕಚ್ಚುತ್ತವೆ. ಇದರಿಂದ ತುರಿಕೆ, ಗಾಯವಾಗಿ ಉಳಿದ ಪರಾವಲಂಬಿ ಜೀವಿಗಳಿಗೆ ಮಾರ್ಗ ಕಲ್ಪಿಸಿಕೊಡುತ್ತವೆ. ದೇಹದ ತುಂಬೆಲ್ಲ ಚಿಕ್ಕ ಗಾಯ ಗಳು ಕ್ರಮೇಣ ಕೀವು ದ್ರವ ಸ್ರವಿಸಲು ಶುರುಮಾಡುತ್ತವೆ. ಕೀವು ಯಾವುದೇ ಉದ್ದೇಶವಿಟ್ಟು ನಮ್ಮ ದೇಹ ಸ್ರವಿಸುವ ದ್ರವವಲ್ಲ.

ಅದೊಂದು ದೇಹ ಪ್ರತಿರಕ್ಷಣಾ ವ್ಯವಸ್ಥೆಯ ತ್ಯಾಜ್ಯ. ಆದರೆ ಆ ಕೀವಿನ ವಾಸನೆ ಎಂದರೆ ಅದೆಷ್ಟೋ ಪರಾವಲಂಬಿ ಸೂಕ್ಷ್ಮ ಜೀವಿಗಳಿಗೆ ಅವಕಾಶದ ಸೂಚನೆ. ಅವು ತಕ್ಷಣ ವಾಸನೆಯನ್ನು ಹಿಡಿದು ಅಲ್ಲಿ ತಲುಪುತ್ತವೆ. ಹೀಗೆ ಒಂದು ಗಟ್ಟಿ ದೇಹವನ್ನು ನಾಶದಂಚಿಗೆ, ರೋಗಗ್ರಸ್ತವಾಗಿಸಲು ಮೊದಲ ಹೆಜ್ಜೆಯಾಗಿ ಹೇನು ಕಾರಣವಾಗುತ್ತದೆ. ಆ ಕಾರಣಕ್ಕೇ ರೋಹಿಂಗ್ಯಾ ಕ್ಯಾಂಪು ಗಳಲ್ಲಿ ಹರಡುತ್ತಿರುವ ಹಲವು ರೋಗಗಳಿಗೆ ಹೇನನ್ನೇ ದೋಷಿಯಾಗಿ ಅವರ ವರದಿ ನಿಲ್ಲಿಸಿದ್ದು. ಮನುಷ್ಯನ ಜೆನೆಟಿಕ್ಸ್/ಅನು ವಂಶೀಯತೆಯನ್ನು ಅಭ್ಯಾಸ ಮಾಡುವಾಗ ಅದರ ಜತೆಯಲ್ಲಿಯೇ ಆಯಾ ಜಾಗದ ಜನರ ತಲೆಯಲ್ಲಿ ಇಂದಿಗೂ ಬದುಕಿರುವ ಹೇನಿನ ಅನುವಂಶೀಯತೆಯನ್ನೂ ಗ್ರಹಿಸಲಾಗುತ್ತದೆ. ನಮ್ಮ ಜತೆಯಲ್ಲಿಯೇ ಎರಡು ಲಕ್ಷ ವರ್ಷಕ್ಕಿಂತ ಜಾಸ್ತಿ ಬದುಕಿದ ಜೀವಿಯ ಡಿಎನ್‌ಎ ಸಹಜವಾಗಿ ನಮ್ಮ ಇತಿಹಾಸವನ್ನು ಇನ್ನೊಂದು ದೃಷ್ಟಿಕೋನದಿಂದ ಹೇಳಬಲ್ಲವು.

ಅಷ್ಟೇ ಅಲ್ಲ, ಆಯಾ ಸ್ಥಳದಲ್ಲಿನ ಅವುಗಳ ಡಿಎನ್‌ಎ ಅಲ್ಲಿನ ಪೂರ್ವಜರು ಎಲ್ಲಿಂದ ವಲಸೆ ಬಂದರು ಎಂಬುದಕ್ಕೆ ಎರಡನೇ ಸಾಕ್ಷ್ಯವಾಗಿ ನಿಲ್ಲುತ್ತವೆ. ಹೇನಿಗೆ ಮೊದಲಿಂದಲೂ ಭಕ್ಷಕರಿಲ್ಲ. ಹಾಗಾಗಿ ಅದರ ಬದುಕು, ದೇಹ ಜಾಸ್ತಿ ಬದಲಾಗಿಲ್ಲ. ೨ ಲಕ್ಷ
ವರ್ಷದಿಂದ ಅಷ್ಟು ರೂಪಾಂತರವಾಗಿಲ್ಲ. ಉತ್ಖನನ ಸಮಯದಲ್ಲಿ ಸಿಕ್ಕ ಅವಶೇಷಗಳಲ್ಲಿ, ದೇಹದ ಕೂದಲುಗಳಲ್ಲಿ ಮೃತ ಹೇನು ಸಿಕ್ಕರೆ ಅದು ಜ್ಯಾಕ್‌ಪಾಟ್. ಸಮಯವನ್ನು ಅಂದಾಜಿಸುವ ಆಣ್ವಿಕ ವಿಧಾನದಲ್ಲಿ ಕಡಿಮೆ ರೂಪಾಂತರವಾದಷ್ಟೂ ನಿಖರತೆ ಜಾಸ್ತಿ. ಹಾಗಾಗಿ ಹೇನು ನಮ್ಮ ಇತಿಹಾಸವನ್ನು ಇನ್ನಷ್ಟು ನಿಖರವಾಗಿಸುತ್ತವೆ.

ಹೇನು ಅವಸಾನವಾಗುವುದು ಸದ್ಯದ ಭವಿಷ್ಯದಲ್ಲಂತೂ ಸಾಧ್ಯವಿಲ್ಲ. ೨೦೧೨ರಲ್ಲಿ ಸೈಮನ್ ವಾಟ್ ಎಂಬ ವಿಜ್ಞಾನಿ
‘Ugly animal preservation society ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾನೆ. ಚಂದವಲ್ಲದ, ಅನವಶ್ಯಕ ಜೀವಿಗಳ ಅವಸಾನದ ವಿರುದ್ಧ ಅವನ ಹೋರಾಟ. ಅವನ ಪಟ್ಟಿಯಲ್ಲಿಯೂ ಹೇನಿಗೆ ಕೊನೆಯ ಸ್ಥಾನ. ಒಂದು ವೇಳೆ, ವಾದಕ್ಕೆ, ಹೇನು ಅವಸಾನವಾಗಿಹೋಯಿತು ಎಂದಿಟ್ಟುಕೊಳ್ಳಿ. ಅದರಿಂದ ಪರಿಸರ ಸೂಕ್ಷ್ಮ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವ ಸಂಭವ ಇಲ್ಲ. ಏಕೆಂದರೆ ಇವು ಲಕ್ಷಾನುಗಟ್ಟಲೆ ವರ್ಷದಿಂದ ಕೇವಲ ಮನುಷ್ಯ ದೇಹದಲ್ಲಷ್ಟೇ ಬದುಕುವ ರೀತಿ ಮಾರ್ಪಾಡಾಗಿಬಿಟ್ಟಿವೆ.

ಹಾಗಾಗಿ ಇದನ್ನು ಆಹಾರವೆಂದು ಬಯಸುವ, ಕಬಳಿಸುವ ಇನ್ನೊಂದು ಜೀವಿ ಅಲ್ಲಿಲ್ಲ. ಆ ಕಾರಣಕ್ಕೆ ಹೇನು ನಾಶವಾಗಿ ಹೋದರೇ ಒಳಿತು. ಆದರೆ ಅವು ರಕ್ತ ಬೀಜಾಸುರನಂತೆ. ನೋಡಲಿಕ್ಕೆ ತೀರಾ ಸೂಕ್ಷ್ಮ ಬದುಕಂತೆ ಕಂಡರೂ ಅವು ಈ ಜಗತ್ತಿನಲ್ಲಿ ಬದುಕುತ್ತಿರುವ ರೀತಿ, ಅದಕ್ಕೆ ಅವು ಮಾಡಿಕೊಂಡ ಮಾರ್ಪಾಡು ವೈಜ್ಞಾನಿಕ ಕಣ್ಣಿನಿಂದ ಕಂಡಾಗ ಅದು ಕೂಡ ಒಂದು ಬೆರಗೇ ಹೌದು.