Saturday, 23rd November 2024

ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ !

ಇದೇ ಅಂತರಂಗ ಸುದ್ದಿ

vbhat@me.com

ಇತ್ತೀಚೆಗೆ ನನ್ನ ಐಪ್ಯಾಡ್‌ನಲ್ಲಿ ಓಶೋ ರಜನೀಶ್ ಅವರ ಸುಮಾರು ಎರಡು ನೂರು ತಾಸುಗಳ ಭಾಷಣವನ್ನು ತುಂಬಿಟ್ಟುಕೊಂಡಿದ್ದೇನೆ. ಪ್ರೀತಿ, ವಿಷಾದ, ಜಗಳ,
ಮದುವೆ, ಹಾಸ್ಯ, ನಗು, ಸಂಸಾರ, ಸಂಬಂಧ, ದೇವರು, ಆಸ್ತಿಕತೆ, ನಾಸ್ತಿಕತೆ, ಧರ್ಮ ಹೀಗೆ ಅನೇಕ ವಿಷಯಗಳ ಕುರಿತು ಓಶೋ ಬಹಳ ಸೊಗಸಾಗಿ ಮಾತಾಡಿದ್ದಾರೆ. ಕೇಳಬೇಕು ಕೇಳಬೇಕು ಅಂತ ಅಂದುಕೊಂಡರೂ ಅದನ್ನು ಕೇಳಲು ಸಾಧ್ಯವಾಗಿರಲಿಲ್ಲ.

ಸ್ವಲ್ಪದಿನಗಳ ಹಿಂದೆ, ಎರಡು ದಿನ ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಪ್ರವಾಸ ಹೋದ ಸಂದರ್ಭದಲ್ಲಿ, ವಾಪಸ್ ಅಲ್ಲಿಂದ ರಸ್ತೆ ಮೂಲಕ ಬೆಂಗಳೂರಿಗೆ ಬರುವಾಗ ಓಶೋ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತು. ಬರೀ ಮದುವೆಯ ಬಗ್ಗೆಯೇ ಓಶೋ ನೂರಾರು ಗಂಟೆ ಮಾತಾಡಿದ್ದಾರೆ. ಜೀವನದಲ್ಲಿ ಎಂದೂ ಮದುವೆಯಾಗದ ತಮಗಿಂತ ಅರ್ಹ ವ್ಯಕ್ತಿ ಈ ವಿಷಯದ ಬಗ್ಗೆ ಮಾತಾಡಲು ಮತ್ತೊಬ್ಬರು ಸಿಗಲಿಕ್ಕಿಲ್ಲ ಎಂದು ಓಶೋ ತಮಾಷೆ ಯಿಂದ ಹೇಳಿಕೊಳ್ಳುತ್ತಾರೆ. ‘ಮದುವೆ ಬಗ್ಗೆ ನಾನು ಹೇಳಿದ್ದನ್ನು ಅನೇಕರು ಒಪ್ಪಲಿಕ್ಕಿಲ್ಲ.

ಯಾಕೆಂದರೆ ಮೋಸ ಹೋದವರು ಅಷ್ಟು ಸುಲಭವಾಗಿ ತಾವು ಮೋಸ ಹೋಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುವು ದಿಲ್ಲ. ಮೋಸ ಹೋಗಿದ್ದು ತಮಗೆ ಗೊತ್ತಾದರೂ ಎಲ್ಲರ ಮುಂದೆಯೂ ಒಪ್ಪಿಕೊಳ್ಳುವುದಿಲ್ಲ. ಇಲ್ಲ… ಇಲ್ಲ… ಮೋಸ ಹೋಗಿಲ್ಲ ಅಂತಾನೇ ವಾದಿಸುತ್ತಾರೆ. ಕೊನೆ ಕೊನೆಗೆ ತಮ್ಮನ್ನೇ ನಂಬಿಸಿಕೊಳ್ಳುತ್ತಾರೆ, ಸುಳ್ಳೇ ಸುಳ್ಳಾಗಿ ವಿಚಿತ್ರ ಅಂದ್ರೆ ಒಬ್ಬರಿಗೆ ಹರಡಿದ ಈ ರೋಗ ಇಡೀ ಜಗತ್ತಿಗೆ ಆವರಿಸಿ ಬಿಟ್ಟಿದೆ. ನನ್ನ ದೃಷ್ಟಿಯಲ್ಲಿ ಮದುವೆಯಂಥ ಸಾಂಕ್ರಾಮಿಕ ಪಿಡುಗು ಮತ್ತೊಂದಿಲ್ಲ. ಇದು ಮಲೇರಿಯಾ, ಕಾಲರಾಕ್ಕಿಂತ ಅಪಾಯಕಾರಿ. ಆದರೆ ಎಲ್ಲರೂ ಇದನ್ನು ಒಂದು ವ್ರತದಂತೆ ಆಚರಿಸುತ್ತಿರುವುದರಿಂದ ರೋಗಪೀಡಿತರು ಕಾಯಿಲೆಯನ್ನು enjoy ಮಾಡುತ್ತಿದ್ದಾರೆ. ಇದೇ ಮದುವೆಯ ‘ಬ್ಯೂಟಿ ಎಂದು ಓಶೋ ಸ್ವಾರಸ್ಯಕರವಾಗಿ ಬಣ್ಣಿಸುತ್ತಾರೆ.

‘ಸಂತೋಷದ ಸಂಗತಿಯೇನೆಂದರೆ ಮದುವೆಯಾದವರೆಲ್ಲ ನನ್ನ ಮಾತನ್ನು ಒಪ್ಪುತ್ತಾರೆ. ಆದರೆ ಹೆಂಡತಿಯ ಮುಂದೆ ತೆಪ್ಪಗಿರುತ್ತಾರೆ. ಹಾಗೆ ಹೆಂಡತಿಯರೂ, ಖಾಸಗಿಯಾಗಿ ಮದುವೆಯ ಬಗ್ಗೆ ಮೂಗು ಮುರಿಯುತ್ತಾರೆ. ಗಂಡಂದಿರೇನಾದರೂ ಮದುವೆ ವಿರುದ್ಧ ಮಾತಾಡಿದರೆ ಮುರಕೊಂಡು ಬೀಳುತ್ತಾರೆ. ಯಾಕಾದರೂ ಮದ್ವೆಯಾದೆನೋ ಎಂದು ಹೇಳದ ಗಂಡ ಅಥವಾ ಹೆಂಡತಿ ಹುಡುಕಿದರೂ ಸಿಗುವುದಿಲ್ಲ. ಹೀಗೆ ಗೊಣಗುತ್ತಲೇ ಮದುವೆಯನ್ನು ಬಚಾವ್ ಮಾಡಿಕೊಳ್ಳಲು, ಕಾಪಾಡಲು ಹರ ಸಾಹಸ ಮಾಡುತ್ತಾರೆ. ಈ ಪ್ರಯತ್ನ ಕೊನೆತನಕವೂ ಮುಂದುವರಿದಿರುತ್ತದೆ’ ಎಂದು ಓಶೋ ಗೇಲಿ ಮಾಡುತ್ತಾ, ತಮಾಷೆ ತೆಗೆದು
ಕೊಳ್ಳುತ್ತಾರೆ, ಹಾಗಂತ ಮದುವೆಯಾಗದವರು ಖುಷಿಯಿಂದ ಇದ್ದಾರಾ? ಮದುವೆ ಯೋಚನೆಯನ್ನು ತಲೆಯೊಳಗೆ ಹಾಕಿಕೊಳ್ಳದಿದ್ದರೆ ಅವರು ಬಚಾವ್. ಆದರೆ ಅವರ ತಲೆಯೊಳಗೇನಾದರೂ ಮದುವೆ ವಿಚಾರ ಹೊಕ್ಕಿತೆಂದರೆ ಸಾಕು, ಅವರೂ ಮದುವೆ ಮುಂದೆ ಶರಣಾಗಲು ಸಿದ್ಧರಾಗಿದ್ದಾರೆ ಎಂದೇ ಅರ್ಥ ಎಂದು
ಓಶೋ ಛೇಡಿಸುತ್ತಾರೆ.

ಓಶೋ ಮಾತಾಡಲಾರಂಭಿಸಿದರೆ ಜೋಕುಗಳು ಸಿಡಿಯದಿದ್ದರೆ ಹೇಗೆ? ಒಮ್ಮೆ ಒಬ್ಬ ತರುಣನಿಗೆ ಮದುವೆಯಾಗಬೇಕು ಎಂದೆನಿಸಿತು. ಆತ ಪರಿಪೂರ್ಣ ಹೆಂಗಸಿಗಾಗಿ ಶೋಧ ಕಾರ‍್ಯ ನಡೆಸಿದ. ಕೊನೆಗೂ ಸಫಲನಾಗದೇ ಅವಿವಾಹಿತನಾಗಿಯೇ ಸತ್ತ. ಇನ್ನೇನು ಸಾಯುತ್ತಾನೆ ಎಂದಿದ್ದಾಗ, ಯಾರೋ ಅವನನ್ನು ಕೇಳಿದರು- ‘ನೀನು ನಿನ್ನ ಇಡೀ ಜೀವನದಲ್ಲಿ ಪರಿಪೂರ್ಣ ಮಹಿಳೆಗಾಗಿ ಹುಡುಕಾಡಿದೆ. ಅಂಥ ಒಬ್ಬಳೇ ಒಬ್ಬಳು ನಿನಗೆ ಸಿಗಲಿಲ್ಲವಾ?’ ಅದಕ್ಕೆ ಆತ ಹೇಳಿದ
– ‘ಯಾರು ಹೇಳಿದರು ಅಂಥವಳು ಸಿಗಲಿಲ್ಲವೆಂದು? ಅನೇಕ ಸಲ ಅಂಥವಳು ಸಿಕ್ಕಳು.

ಈ ಮಾತಿನಿಂದ ಸೋಜಿಗಗೊಂಡು ‘ಹಾಗಾದರೆ ಅಂಥ ಹೆಂಗಸನ್ನು ನೀನ್ಯಾಕೆ ಮದುವೆಯಾಗಲಿಲ್ಲ?’ ಎಂದು ಕೇಳಿದರೆ ಆತ ಹೇಳಿದ್ದೇನು ಗೊತ್ತಾ? ‘ಆ ಪರಿಪೂರ್ಣ ಹೆಂಗಸೂ ಸಹ ಪರಿಪೂರ್ಣ ಗಂಡಸಿಗಾಗಿ ಹುಡುಕುತ್ತಿದ್ದಳು.’ ಓಶೋ ಹೇಳುತ್ತಾನೆ – ‘ಪರಿಪೂರ್ಣ ಹೆಂಗಸರೂ ಸಿಗಬಹುದು ಅಥವಾ ಗಂಡಸರೂ ಸಿಗಬಹುದು. ಆದರೆ ಅಂಥವರು ಮದುವೆ ಯಾಗುವುದಿರಲಿ, ಎಂದೆಂದೂ ಭೇಟಿಯೇ ಆಗುವುದಿಲ್ಲ. ಹೀಗಾಗಿ ಪರಿಪೂರ್ಣ ದಂಪತಿ ಇರಲು ಸಾಧ್ಯವೇ ಇಲ್ಲ.’
ಮೊದಲು ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಆದರ್ಶ ದಂಪತಿಗಳು’ ಕಾರ‍್ಯಕ್ರಮವನ್ನು ನೋಡಿದ್ದರೆ ಓಶೋ ಏನು ಹೇಳುತ್ತಿದ್ದರೋ ಗೊತ್ತಿಲ್ಲ. ಖಂಡಿತವಾಗಿಯೂ ಆ ಕಾರ‍್ಯಕ್ರಮದ ಬಗ್ಗೆ ಕಾಲೆಳೆಯದೇ ಹೋಗುತ್ತಿರಲಿಲ್ಲ.

ಮದುವೆ ಬಗ್ಗೆ ಓಶೋ ಏನೋ ಹೇಳಲು ಹೊರಟಿದ್ದಾರೆಂಬುದು ಗೊತ್ತಾಗುವುದು ಅವರು ಹೇಳುವ ಹಾಸ್ಯ ಪ್ರಸಂಗಗಳಿಂದಲೇ ವೇದ್ಯವಾಗುತ್ತಾ ಹೋಗುತ್ತದೆ. ಈ ಮಧ್ಯೆ ಓಶೋ ತಮಗೆ ಯಾರೋ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾರೆ. ಒಮ್ಮೆ ಮಧ್ಯವಯಸ್ಕ ಗಂಡನೊಬ್ಬ ಓಶೋ ಅವರನ್ನು ಕೇಳಿದನಂತೆ – ‘ನಾನು ಎಂಟು
ಸಲ ಮದುವೆಯಾಗಿದ್ದೇನೆ. ಪ್ರತಿ ಸಲ ಮದುವೆಯಾದ ಬಳಿಕ ನಾನು ತಪ್ಪು ಮಾಡಿದೆ ಅಂತ ಅನಿಸುತ್ತದೆ. ನಾನು ಕೈ ಹಿಡಿದ ಹೆಂಗಸು ನನಗೆ ಹೇಳಿ ಮಾಡಿಸಿದ ವಳಲ್ಲ ಎಂದು ಭಾಸವಾಗುತ್ತದೆ. ಹೀಗಾಗಿ ಪ್ರತಿ ಮದುವೆಯೂ ಬೇಸರ, ವಿಚ್ಛೇದನದಲ್ಲಿಯೇ ಕೊನೆಗೊಳ್ಳುತ್ತದೆ ಹೀಗೇಕೆ?

ಅದಕ್ಕೆ ಓಶೋ ಹೇಳುತ್ತಾರೆ- ಅಬ್ಬಾ ಎಂಟು ಮದುವೆ ಪ್ರತಿ ಸಲವೂ ಕೆಟ್ಟ ಆಯ್ಕೆ? ಪ್ರತಿ ಬಾರಿ ಉತ್ತಮ ಹೆಂಡತಿಯನ್ನು ಆರಿಸಬೇಕೆಂದು ಎಚ್ಚರವಹಿಸಿ ಈ ಸಲ ಮೋಸ ಹೋಗಬಾರದು ಅಂದುಹೋದರೂ ಮೋಸ ಹೋಗುತ್ತಿದ್ದೀಯ. ನೀನು ಆರಿಸುವ ಹೆಂಗಸು ಭಿನ್ನವಾಗಿಲ್ಲ ಎಲ್ಲರೂ ಒಂದೇ ಅಂತ ಭಾವಿಸಿದ್ದೀಯಾ.
ಆದರೆ ಅವರು ಭಿನ್ನವಾಗಿರಬಹುದು ಅಥವಾ ಇಲ್ಲದಿರಬಹುದು. ಆದರೆ ಅವರನ್ನು ಆರಿಸುವವನು ಮಾತ್ರ ನೀನೊಬ್ಬನೇ. ಹೀಗಿರುವಾಗ ನೀನು ಯಾವ ಬದಲಾವಣೆ ನಿರೀಕ್ಷಿಸಲು ಸಾಧ್ಯ? ಆಯ್ಕೆ ಮಾಡುವವನು ಒಬ್ಬನೇ ಆದರೆ, ಆಯ್ಕೆಯೂ ಒಂದೇ ಆಗಿರುತ್ತದೆ. ನೀನು ಆರಿಸುವ ಹೆಂಗಸಿನ ಮುಖ, ಕೂದಲ ವಿನ್ಯಾಸ, ಮೈಮಾಟ, ಮೈಬಣ್ಣ, ಕಣ್ಣಕಾಂತಿ, ಬೇರೆ ಬೇರೆ ಇರಬಹುದು.

ಇವು ಅಪ್ರಸ್ತುತ ಸಂಗತಿಗಳು. ಮದುವೆಗೂ ಮೂಗಿನ ಉದ್ದಕ್ಕೂ, ಕಣ್ಣಕಾಂತಿಗೂ, ದೇಹದ ಮೈಮಾಟಕ್ಕೂ ಸಂಬಂಧವೇ ಇಲ್ಲ. ಒಂದು ವೇಳೆ ಹೆಂಡತಿ ಅವಳ ಕೂದಲ ಬಣ್ಣವನ್ನೇನಾದರೂ ಬದಲಿಸಿಕೊಂಡರೆ ಅದನ್ನು ಗಮನಿಸುವ ಕಟ್ಟ ಕಡೆಯ ವ್ಯಕ್ತಿಯೇ ಗಂಡ! ಇಲ್ಲಿ ಮುಖ್ಯವಾಗುವ ಅಂಶವೇನೆಂದರೆ ಯಾಕೆ ನೀನು
ಅವಳನ್ನೇ ಇಷ್ಟಪಡುತ್ತೀಯಾ ಎಂಬುದು. ಏಕೆ? ಅವಳನ್ನು ಇಷ್ಟ ಪಟ್ಟಿದ್ದೇವೆ? ಪದೇ ಪದೆ ಒಂದೇ ಥರನ ಹೆಂಗಸನ್ನ ಆಯ್ಕೆ ಮಾಡಿದ್ದೇಕೆ? ನೀನು ಆಯ್ಕೆ ಮಾಡಿದ ವರೆಲ್ಲ ಒಂದೇ ರೀತಿಯವರು ಏಕೆ? ನೀನು ಪ್ರತಿಸಲ ಹೆಂಗಸರನ್ನು ಬದಲಿಸಿದರೂ ನಿನಗೆ ಬೇಕಾದ ಹೆಂಗಸು ಸಿಗುತ್ತಾರೆಂಬುದಕ್ಕೆ ಗ್ಯಾರಂಟಿ ಇಲ್ಲ. ಆಯ್ಕೆ ಮಾಡುವಾಗ ಸರಿ ಕಂಡಿದ್ದು ಕೆಲವು ದಿನಗಳಲ್ಲಿ ಸರಿ ಕಾಣದೇ ಹೋಗಬಹುದು, ನಿನ್ನಲ್ಲಿ ಪರಿವರ್ತನೆಯಿಲ್ಲದೇ ಎಷ್ಟು ಸಲ ಆರಿಸಿದರೂ ಅಷ್ಟೆ, ನಿನಗೆ ಒಂಥರ ಧೃತರಾಷ್ಟ್ರನ ಪಿಡುಗು. ಮದುವೆ ಬಗ್ಗೆ ಬಹಳ ಸಲೀಸಾಗಿ, ತಮಾಷೆಯಿಂದ, ಒಮ್ಮೆ ಪೋಲಿಪೋಲಿಯಾಗಿ, ಮತ್ತೊಮ್ಮೆ ಗೇಲಿಗೇಲಿಯಾಗಿ ಮಾತಾಡುತ್ತಿದ್ದ ಓಶೋ, ತಮ್ಮ ಶಿಷ್ಯನೊಬ್ಬ ಒಂದು ಪ್ರಶ್ನೆ ಕೇಳುತ್ತಿದ್ದಂತೆ ಇದ್ದಕ್ಕಿದ್ದಂತೆ ಗಂಭೀರವಾಗಿ ಬಿಡುತ್ತಾರೆ. ಆತ ಕೇಳುತ್ತಾನೆ – ‘ಓಶೋ, ನಾನು ನನ್ನ ಹೆಂಡತಿ ಜತೆ ಸದಾ ಸಂತೋಷದಿಂದ ಇರಲು ಸಾಧ್ಯವಾ?’ ಓಶೋ ಗಡುಸಾಗಿ, ಏರಿದ ದನಿಯಲ್ಲಿ ಹೇಳುತ್ತಾರೆ- ‘ಸಾಧ್ಯವೇ ಇಲ್ಲ. ಮದುವೆಯಾಗಿ ಸದಾ ಸಂತಸದ ಬಗ್ಗೆ ಮಾತಾಡುತ್ತೀಯಲ್ಲ’ ಹೇಳ್ತೇನೆ ಕೇಳು. ನಿನ್ನ ಹೆಂಡತಿಯಲ್ಲಿ ತಪ್ಪೇನೂ ಇಲ್ಲ, ಆದರೆ ಮದುವೆಯೆಂಬ ವ್ಯವಸ್ಥೆಯಿದೆಯಲ್ಲ ಅದು ಸರಿ ಇಲ್ಲ. ತಿಳಕೋ, ಮದುವೆ ಯಾವತ್ತೂ ಪ್ರೀತಿ ವಿರೋಧಿ.

ಭೂಮಿಯ ಮೇಲೆ ಪ್ರೀತಿಯ ಹೂವುಗಳ ಬೃಂದಾವನ ಇರಬಾರದು ಎಂದು ಬಯಸುವವರೆಲ್ಲ ಸೇರಿ ಹುಟ್ಟು ಹಾಕಿದ ವ್ಯವಸ್ಥೆ ಅಥವಾ ಒಡಂಬಡಿಕೆಯೇ ಮದುವೆ. ಈ ಸಮಾಜ ಪ್ರೀತಿಮುಖಿ ಅಲ್ಲ, ದ್ವೇಷಮುಖಿ. ನಮ್ಮ ರಾಜಕೀಯ, ಸಾಮಾಜಿಕ, ಧಾರ್ಮಿಕ ಸಂಗತಿಗಳೂ ಹೀಗೆ. ಈ ಭೂಮಿಯೆಲ್ಲ ಒಂದೇ ಆಗಿದ್ದರೆ ನಮಗೆ
ಬೇರೆ ಬೇರೆ ದೇಶಗಳ ಅಗತ್ಯವಿತ್ತಾ? ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನಗಳೆಲ್ಲ ಏಕೆ? ಇಡೀ ಮಾನವ ಸಂಕುಲ ಒಟ್ಟಿಗೆ ಇರಲು ಏನು ಧಾಡಿ? ಮದುವೆ ಯೆಂಬುದು ಒಂದು ಅನುಕೂಲ, ಇಲ್ಲಿ ಗಂಡ-ಹೆಂಡತಿ ಸಂತಸದಿಂದ ಇರುವ (ಒಳ) ಒಪ್ಪಂದ ಮಾಡಿಕೊಂಡಿರುತ್ತಾರೆ.

ಇಬ್ಬರೂ ಒಪ್ಪಂದ ಉಲ್ಲಂಘಿಸದಿರಲು ಹೆಣ ಗುತ್ತಾರೆ, ಅಷ್ಟೆ. ಅದಕ್ಕಿಂತ ಹೆಚ್ಚೂ ಇಲ್ಲ, ಕಮ್ಮಿಯೂ ಇಲ್ಲ. ನನ್ನ ಹಾಗೆ ಎಲ್ಲರೂ ಭಾವಿಸಿದ್ದಾರೆ. ಆದರೆ ಉಳಿದವರು ಹೇಳೋಲ್ಲ, ನಾನು ಗಟ್ಟಿಯಾಗಿ ಹೇಳುತ್ತೇನೆ. ಇಷ್ಟಕ್ಕೂ ನಾನು ಹೇಳೋದೇ ನೆಂದರೆ ನೀನು ನಿನ್ನ ಹೆಂಡತಿ ಜತೆಗಿನ ಒಳಒಪ್ಪಂದವನ್ನು ಮುರಿಯದೇ ಕಾಪಾಡು, ಅಷ್ಟರಮಟ್ಟಿಗಿನ ಸಂತಸ ನಿನ್ನದಾಗಿರಲಿ ಇಷ್ಟು ಹೇಳಿದ ನಂತರ ಓಶೋ ಮದುವೆ ಹಾಗೂ ಪ್ರೀತಿಯ ನಡುವಿನ ವ್ಯತ್ಯಾಸದ ಸೂಕ್ಷ್ಮದ ಕದ ಬಡಿಯು ತ್ತಾರೆ. ಮದುವೆ ಎಂಬುದು ಮಾನವ ನಿರ್ಮಿತ, ಪ್ರೀತಿ ಬದುಕಿನದ್ದೇ ಒಂದು ಭಾಗ, ನೀವು ಪ್ರೇಮದ ಸುತ್ತ ಮದುವೆ ಎಂಬ ವ್ಯವಸ್ಥೆಯನ್ನು ಹುಟ್ಟುಹಾಕುವುದರ ಮೂಲಕ ಅಲ್ಲೊಂದು ಭದ್ರತೆಯನ್ನು ನೆಲೆಗೊಳಿಸುತ್ತಿದ್ದೀರಿ.

ಯಾವುದನ್ನು ನಿರ್ಮಿಸಲಿಕ್ಕೆ ಆಗುವುದಿಲ್ಲವೋ ಅದನ್ನು ಮಾಡಲಿಕ್ಕೆ ಹೊರಟಿದ್ದೀರಿ. ನೀವು ಪ್ರೀತಿಯನ್ನು ಕಾನೂನುಬದ್ಧವಾಗಿಸುವುದು ಸಾಧ್ಯವಿಲ್ಲ. ಅಸಾಧ್ಯ
ವಾದುದನ್ನು ಮಾಡುವುದಕ್ಕೆ ನೀವು ಮುಂದಾಗುತ್ತೀರಿ.

ಆ ಪ್ರಕ್ರಿಯೆಯಲ್ಲಿ ಪ್ರೀತಿ: ಕೊನೆ ಉಸಿರು ಎಳೆದರೆ ಅದರಲ್ಲಿ ಆಶ್ಚರ್ಯ ಏನಿದೆ? ನೀವು ಗಂಡ ಎನಿಸಿ ಕೊಂಡು ನಿಮ್ಮನ್ನು ಪ್ರೀತಿ ಸುವವಳು ಹೆಂಡತಿ ಆಗುತ್ತಾಳೆ. ಅಲ್ಲಿಂದ ನೀವು ಎರಡು ಜೀವ ಚೈತನ್ಯದ ವ್ಯಕ್ತಿಗಳಾಗಿ ಉಳಿಯುವುದೇ ಇಲ್ಲ, ಇಬ್ಬರಿಗೂ ತಾವು ಮಾಡಬೇಕಾದ ಒಂದಷ್ಟು ಕಾರ್ಯಗಳಿದ್ದು, ಕಾರ್ಯಕಾರಿ ಗಳಾಗುತ್ತೀರಿ. ಇಬ್ಬರಿಗೂ ಅವರವರು ಪೂರೈಸಬೇಕಾದ ಕರ್ತವ್ಯಗಳಿರುತ್ತವೆ.

ಅಲ್ಲಿಯೇ ಬದುಕು ಹರಿವನ್ನು ಕಳೆದುಕೊಂಡು ಹೆಪ್ಪುಗಟ್ಟುವುದು. ಗಂಡ-ಹೆಂಡತಿಯನ್ನು ಗಮನಿಸಿ, ಅವರಿಬ್ಬರೂ ಅಕ್ಕಪಕ್ಕದಲ್ಲಿ ಹೆಪ್ಪುಗಟ್ಟಿ ಕುಳಿತ ಇಬ್ಬರು ವ್ಯಕ್ತಿಗಳು. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂದು ಗೊತ್ತಿಲ್ಲ, ತಾವೇಕೆ ಕುಳಿತಿದ್ದೇವೆ ಎಂದು ಅರಿವಿಲ್ಲ. ಬಹುಶಃ ಅವರಿಗೆ ತಲುಪಬೇಕಿರುವ ಒಂದು ಗುರಿಯೇ
ಇದ್ದಿರಲಿಕ್ಕಿಲ್ಲ. ಅದೇ ನೀವು ಪ್ರೇಮದಲ್ಲಿರುವ ಇಬ್ಬರು ವ್ಯಕ್ತಿಗಳನ್ನು ಗಮನಿಸಿದಾಗ ಅಲ್ಲಿ ಏನೋ ಹರಿಯುತ್ತಿರುತ್ತದೆ.

ಚಲನೆ ಇರುತ್ತದೆ, ಬದಲಾವಣೆ ಕಾಣಿಸುತ್ತದೆ. ಇಬ್ಬರು ವ್ಯಕ್ತಿಗಳ ನಡುವೆ ಪ್ರೇಮವಿದ್ದಾಗ ಅವರು ಒಂದು ಪ್ರಭೆಯಲ್ಲಿ ಬದುಕುತ್ತಿರುತ್ತಾರೆ, ಇಬ್ಬರ ನಡುವೆ ನಿರಂತರ ಕೊಡು ಕೊಳ್ಳುವಿಕೆ ಇರುತ್ತದೆ. ಅಲ್ಲಿ ಒಬ್ಬರನ್ನೊಬ್ಬರು ತಾಕುವ ಕಂಪನವಿದೆ. ಅವರ ನಡುವೆ ಗೋಡೆ ಗಳಿಲ್ಲ, ಇಬ್ಬರಾಗಿದ್ದರೂ ಅವರು ಎರಡಲ್ಲ, ಏಕವೂ ಹೌದು. ಗಂಡ ಹೆಂಡತಿ ಪಕ್ಕವೇ ಕುಳಿತಿರಬಹುದಾದರೂ ಅವರು ಯಾವತ್ತೂ ದೂರ ದೂರ. ಮಡದಿ ಏನು ಹೇಳುತ್ತಾಳೋ ಕೇಳುವುದಕ್ಕೆ ಗಂಡನಿಗೆ ಆಸ್ಥೆಯಿಲ್ಲ. ಆತ ಬಹಳ ಹಿಂದೆಯೇ ಕಿವುಡಾಗಿ ಬಿಟ್ಟಿದ್ದಾನೆ. ಹೆಂಡತಿಗೂ ತನ್ನ ಗಂಡನಿಗೆ ಏನಾಗುತ್ತಿದೆ ಎಂದು ನೋಡಲಾಗದು, ಆಕೆಯೂ ಕುರುಡಾಗಿ ಬಿಟ್ಟಿದ್ದಾಳೆ.

ಅವರು ಒಬ್ಬರನ್ನೊಬ್ಬರು ತಮಗೆ ಬೇಕಾದಂತೆ ನಿರ್ಧಾರ ತೆಗೆದುಕೊಳ್ಳುವ ರೂಢಿಗೆ ಬಿದ್ದುಬಿಟ್ಟಿದ್ದಾರೆ. ಅಕ್ಷರಶಃ ವಸ್ತುಗಳಂತೆ ಆಗಿದ್ದಾರೆ. ಅವರು ವ್ಯಕ್ತಿಗಳಾಗಿ ಉಳಿದಿಲ್ಲ. ಏಕೆಂದರೆ, ವ್ಯಕ್ತಿಗಳು ಎನಿಸಿಕೊಂಡವರು ಯಾವಾಗಲೂ ಮುಕ್ತವಾಗಿರುತ್ತಾರೆ, ಅನಿಶ್ಚಿತತೆಯಿಂದ ಇರುತ್ತಾರೆ ಹಾಗೂ ಯಾವತ್ತೂ ಬದಲಾಗು ತ್ತಿರುತ್ತಾರೆ. ಈಗ ಅವರಿಗೆ ನೆರವೇರಿಸಬೇಕಾದ ನಿರ್ದಿಷ್ಟ ಪಾತ್ರಗಳಿವೆ. ಅವರು ಮದುವೆಯಾದ ದಿನವೇ ಸತ್ತು ಹೋದರು. ಅವತ್ತಿನಿಂದ ಅವರಿಗೆ
ಬದುಕುವುದಕ್ಕೇ ಆಗಿಲ್ಲ. ಮದುವೆಯಾಗಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಪ್ರೀತಿಯೇ ನಿಜವಾದದ್ದು ಎಂಬುದು ತಿಳಿದಿರಲಿ. ಅದು ಸತ್ತರೆ ಮದುವೆ ವ್ಯರ್ಥ.

ಇದು ಬದುಕಿನ ಎಲ್ಲ ಅಂಶಗಳಿಗೂ ಲಗತ್ತಾಗುತ್ತದೆ. ನೀವು ಅದನ್ನು ಬದುಕಬೇಕೆಂದರೆ ಹಿಂಜರಿಕೆಯೊಂದಿಗೆ, ಮುಂದಿನ ಕ್ಷಣದಲ್ಲಿ ಏನಾಗುವುದೋ ಎಂಬ ಅನಿಶ್ಚಿತತೆಯೊಂದಿಗೆ ಬದುಕಬೇಕು. ಇಲ್ಲವೇ ಎಲ್ಲದರ ಬಗ್ಗೆಯೂ ನಿಶ್ಚಿತತೆ ರೂಢಿಸಿಕೊಂಡುಬಿಡಬೇಕು. ಎಲ್ಲದರ ಬಗ್ಗೆಯೂ ನಿಶ್ಚಯ ಮಾಡಿಕೊಂಡಿರುವ ವ್ಯಕ್ತಿಗಳಿದ್ದರೆ, ಅವರು ಯಾವತ್ತೂ ಚಕಿತರಾಗುವುದಿಲ್ಲ. ನೀವು ಅಚ್ಚರಿಗೆ ಈಡು ಮಾಡಲು ಸಾಧ್ಯವೇ ಆಗದ ಮಂದಿಯೂ ಇದ್ದಾರೆ. ನಾನು ನೀಡಲಿರುವ ಸಂದೇಶ ಮಾತ್ರ ಆಶ್ಚರ್ಯದ್ದೇ, ನೀವದನ್ನು ನಂಬಲಾರಿರಿ ಎಂದು ನನಗೆ ಗೊತ್ತು. ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎಂಬುದೂ ಗೊತ್ತು. ಏಕೆಂದರೆ ನಂಬಲಿಕ್ಕೇ ಆಗದ
ಸಂಗತಿಯನ್ನು ನಿಮಗೆ ಹೇಳಲಿದ್ದೇನೆ – ‘ನೀವು ದೇವ ಪುರುಷರು ಹಾಗೂ ದೇವಿಯಂದಿರು. ನಿಮಗದು ಮರೆತುಹೋಗಿದೆ. ಓಶೋ ಹೇಳಿದ್ದೆಲ್ಲವನ್ನೂ ಕೇಳಿದ ಮೇಲೆ ನಾನು ನನ್ನ ಹೆಂಡತಿಯನ್ನು ಎಷ್ಟು ಗಾಢವಾಗಿ ಪ್ರೀತಿಸುತ್ತಿದ್ದೇನೆ ಎಂದೆನಿಸಿತು. ನಿಮ್ಮ ಅನುಭವವೂ ಅದೇ ಆಗಿರಬಹುದು!

ಭಾರತದಲ್ಲಿ ತಯಾರಿಸುವ ಔಷಧ ಹಾಗೂ ಸೈಡ್ ಎಫೆಕ್ಟ್ !

ಕೆಲ ವರ್ಷದ ಹಿಂದೆ ಕತಾರ್‌ಗೆ ಹೋದಾಗ ಗೆಳೆಯ ದೀಪಕ್ ಶೆಟ್ಟಿ ಅವರು ಒಂದು ಸಂಗತಿಯನ್ನು ತಿಳಿಸಿದರು. ನಾನು ಭಾರತದಿಂದ ಬರುವಾಗ ಯಾವುದೇ ಮಾತ್ರೆ (ಟ್ಯಾಬ್ಲೆಟ್) ಅಥವಾ ಔಷಧಗಳನ್ನು ತರುವಂತಿಲ್ಲ. ವೈದ್ಯರ ಪ್ರಿಸ್ಕ್ರಿಪ್‌ಶನ್ ತರಬಹುದು. ಆ ಚೀಟಿಯನ್ನು ತೋರಿಸಿ ಕತಾರ್‌ನಲ್ಲಿಯೇ ಔಷಧವನ್ನು
ತೆಗೆದುಕೊಳ್ಳಬೇಕು. ಭಾರತದ ಎಲ್ಲ ಔಷಧಗಳನ್ನು ಕತಾರ್‌ನಲ್ಲಿ ನಿಷೇಧಿಸಲಾಗಿದೆ. ಇದು ಸಹಾ ಹಣ ಮಾಡುವ ತಂತ್ರವಾ ಎಂದು ಒಂದು ಕ್ಷಣ ಅನಿಸಿತು. ಆದರೆ ನಿಜ ಸಂಗತಿಯೇ ಬೇರೆ. ಭಾರತದಲ್ಲಿ ತಯಾರಾಗುವ ಎಲ್ಲ ಡ್ರಗ್ಸ್ ಅಥವಾ ಔಷಧ ಸೇವನೆಯಿಂದ ಸೈಡ್ ಇಫೆಕ್ಟ್ ಆಗಬಹುದು. ಅಲ್ಲದೇ ಔಷಧದ ಸೋಗಿನಲ್ಲಿ ಮಾದಕ ವಸ್ತುಗಳ ಸಾಗಣಿಕೆಗೆ ಆಸ್ಪದ ನೀಡಿದಂತಾಗ ಬಹುದು, ಮಾತ್ರೆಯೊಳಗೆ ಹಾನಿಕಾರಕ ಅಮಲು ಪದಾರ್ಥಗಳಿರಬಹುದು. ಈ ಎಲ್ಲ ಕಾರಣಗಳಿಂದ ಭಾರತದಲ್ಲಿ ತಯಾರಾಗುವ ಮಾತ್ರೆಗಳಿಗೆ ಪ್ರವೇಶ ನಿರಾಕರಿಸಲಾಗಿದೆ.

ಕೇವಲ ಕತಾರ್ ಒಂದೇ ಅಲ್ಲ, ಹಲವಾರು ದೇಶಗಳಲ್ಲೂ ನಿಯಮ ಜಾರಿಯಲ್ಲಿದೆ. ನೀವು ಗಿಲ್ ರಾಬರ್ಟ್ಸ್ ಎಂಬ ಅಮೆರಿಕದ ವೇಗದ ಓಟಗಾರನ
ಹೆಸರನ್ನು ಕೇಳಿರಬಹುದು. ೨೦೧೬ ರಲ್ಲಿ ನಡೆದ ಬೇಸಿಗೆ ಓಲಿಂಪಿಕ್ಸ್ ನಲ್ಲಿ ಆತ ಬಂಗಾರ ಪದಕ ಗೆದ್ದಿದ್ದ. ಆದರೆ ಆತ ಮಾದಕ ಪದಾರ್ಥ ಸೇವಿಸಿದ್ದ ಎಂಬುದು ಪರೀಕ್ಷೆಯಿಂದ ಸಾಬೀತಾಗಿದ್ದರಿಂದ ಓಲಿಂಪಿಕ್ಸ್ ಸಮಿತಿ ಅವನಿಗೆ ನೀಡಿದ ಬಂಗಾರದ ಪದಕವನ್ನು ತಡೆಹಿಡಿಯಿತಲ್ಲದೇ ಮುಂದಿನ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇದಾಜ್ಞೆ ವಿಧಿಸಿತು.

ಆದರೆ ಅದೆಲ್ಲ ಆಗಿ ಎರಡು ವರ್ಷದ ಬಳಿಕ ಗಿಲ್ ರಾಬರ್ಟ್ಸ್ ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದರಿಂದ ಆತನಿಗೆ ಮರುಜನ್ಮ ಸಿಕ್ಕಂತಾಗಿದೆ. ರಾಬರ್ಟ್ಸ್ ಪಂದ್ಯದ ಮುನ್ನ ಮಾದಕ ಪದಾರ್ಥವನ್ನು ಸೇವಿಸಿರಲಿಲ್ಲ ಎಂದು ಕೋರ್ಟ್ ಹೇಳಿದೆ. ಆದರೆ ಈ ಎಲ್ಲ ‘ರಾಮಾಯಣ’ ಆಗಿದ್ದಾದರೂ ಹೇಗೆ?
೨೦೧೬ರ ಓಲಿಂಪಿಕ್ಸ್ ಪಂದ್ಯ ನಡೆಯುವ ಒಂದು ತಿಂಗಳ ಮೊದಲು ಗಿಲ್ ರಾಬರ್ಟ್ಸ್‌ನ ಗರ್ಲ್ ಫ್ರೆಂಡ್ ಅಲೆಕ್ಸ್ ಸಾಲಝರ್ ಭಾರತಕ್ಕೆ ಪ್ರವಾಸಿಗಳಾಗಿ ಭೇಟಿ ನೀಡಿದ್ದಳು. ಆಕೆ ಹದಿನಾಲ್ಕು ದಿನ ಇದ್ದಳು. ಉತ್ತರ ಭಾರತದಲ್ಲಿ ಪ್ರವಾಸ ಮಾಡುವಾಗ, ವಿಪರೀತ ಧೂಳಿನಿಂದ ಅವಳಿಗೆ ನೆಗಡಿ, ಕೆಮ್ಮು, ಜ್ವರ ಬಂದಿತು. ವೈದ್ಯರನ್ನು ಸಂಪರ್ಕಿಸಿದಳು. ಅವರು ಆಕೆಗೆ ಮಾತ್ರೆ ನೀಡಿದರು.

ಎರಡು ದಿನವಾದರೂ ಕೆಮ್ಮು, ಸೋರುವ ಮೂಗು ಹಾಗೂ ಜ್ವರ ಕಡಿಮೆ ಯಾಗದಿದ್ದಾಗ ಹೈಡೋಸ್ ಮಾತ್ರೆಗಳನ್ನು ಇಂಜೆಕ್ಷನ್‌ನ್ನು ಸಹ ನೀಡಿದರು. ಇದರಿಂದ ಆಕೆ ಗುಣಮುಖಳಾದಳು. ಇದಾದ ಬಳಿಕ ಆಕೆ ತನ್ನ ಪ್ರವಾಸವನ್ನು ಮೊಟಕುಗೊಳಿಸಿ ಅಮೆರಿಕಕ್ಕೆ ವಾಪಸ್ ಹೋದಳು. ಹೋದವಳೇ ತನ್ನ ಪ್ರಿಯಕರ ಗಿಲ್ ರಾಬರ್ಟ್ಸ್‌ನನ್ನು ಭೇಟಿಯಾಗಿದ್ದಳು. ಆಗ ಆತ ಅವಳನ್ನು ಬಲವಾಗಿ ತಬ್ಬಿಕೊಂಡು ಹತ್ತು ನಿಮಿಷ ಚುಂಬಿಸಿದ್ದ. ಅಲ್ಲೇ ಯಡವಟ್ಟು ಆಗಿದ್ದು. ಆ ಸಂದರ್ಭದಲ್ಲಿ ಆಕೆ ಸೇವಿಸಿದ್ದ ಮಾತ್ರೆ, ಔಷಧಗಳಲ್ಲಿದ್ದ ಮಾದಕಪದಾರ್ಥಗಳು ಅವನಿಗೆ ಟ್ರಾನ್ಸ್ ಫರ್ ಆಗಿದ್ದವು.

ಅವು ಎಷ್ಟು ಪ್ರಭಾವಶಾಲಿಯಾಗಿದ್ದವು ಅಂದರೆ ರಾಬರ್ಟ್ಸ್ ಮಾದಕ ಪದಾರ್ಥ ಸೇವಿಸಿದ್ದಾನೆಂದು ‘ಪರೀಕ್ಷೆ ಸಮಯ’ದಲ್ಲಿ ಸಾಬೀತಾಗುವಷ್ಟು. ಮಾದಕ ಪದಾರ್ಥ ಸೇವನೆ ಪರೀಕ್ಷೆಯ ವರದಿಯಲ್ಲಿ ರಾಬರ್ಟ್ಸ್ ತಪ್ಪಿಸ್ಥನೆಂಬುದು ಘೋಷಣೆ ಯಾದಾಗ, ಒಂದೆಡೆ ಘೋರ ಅವಮಾನ, ಮತ್ತೊಂದೆಡೆ ಅಚ್ಚರಿ ಆಘಾತ. ತಾನು ಮಾದಕಪದಾರ್ಥ ಸೇವಿಸಿಲ್ಲ ಎಂದು ಎಲ್ಲರ ಮುಂದೆ ಪರಿಪರಿಯಾಗಿ ಎಷ್ಟೇ ಹೇಳಿದರೂ ಯಾರೂ ಕೇಳಲಿಲ್ಲ. ಆದರೆ ರಾಬರ್ಟ್ಸ್ ಸುಮ್ಮನಾಗಲಿಲ್ಲ. ಪಂದ್ಯದ ಹಿಂದಿನ ಒಂದು ತಿಂಗಳ ವಿದ್ಯಮಾನಗಳನ್ನೆಲ್ಲ ವೈದ್ಯರ ಮುಂದೆ ವಿವರಿಸಿದಾಗ, ಆತನ ಗರ್ಲ್ ಫ್ರೆಂಡ್‌ಳನ್ನು ಪರೀಕ್ಷೆ ಮಾಡಲು ನಿರ್ಧರಿಸಿದರು.
ಅವಳ ದೇಹದಲ್ಲಿರುವ ಪದಾರ್ಥವೇ ಈತನಲ್ಲೂ ಇರುವುದು ಪತ್ತೆಯಾಯಿತು. ತಾನು ಭಾರತದಲ್ಲಿ ಪ್ರವಾಸದ ಸಮಯದಲ್ಲಿ ಅನಾರೋಗ್ಯಪೀಡಿತಳಾದಾಗ ಸೇವಿಸಿದ ಮಾತ್ರೆ ವಿವರಗಳನ್ನು, ಸೂಕ್ತ ದಾಖಲೆ (ಪ್ರಿಸ್ಕ್ರಿಪ್‌ಶನ್)ಗಳನ್ನು ಒದಗಿಸಿದಳು.

ಆ ಮಾತ್ರೆಯಲ್ಲಿ ಇರುವ ಮಾದಕಪದಾರ್ಥಕ್ಕೂ, ಆಕೆಯ ದೇಹದಲ್ಲಿ ಪತ್ತೆ ಯಾದ ಪದಾರ್ಥಕ್ಕೂ, ರಾಬರ್ಟ್ಸ್ ದೇಹದಲ್ಲಿರುವ ಪದಾರ್ಥಕ್ಕೂ ಪಕ್ಕಾ ಸಾಮ್ಯತೆ ಕಂಡುಬಂದಿತು. ಆಕೆಯ ದೇಹದಿಂದ ಆತನ ದೇಹಕ್ಕೆ ಆ ಪದಾರ್ಥ ವರ್ಗವಾಗಲು ಚುಂಬನವೇ ಕಾರಣ ಎಂಬುದೂ ಪಕ್ಕಾ ಆಯಿತು. ಇವೆಲ್ಲ ಮುಗಿದ ಬಳಿಕ ಓಲಿಪಿಂಕ್ಸ್ ಸಮಿತಿ ರಾಬರ್ಟ್ಸ್‌ಗೆ ಪದಕ ಮರಳಿಸಲು ನಿರ್ಧರಿಸಿತು. ಭಾರತದಲ್ಲಿ ತಯಾರಾಗುವ ಔಷಧ ಎಷ್ಟು ಡೇಂಜರಸ್ ಎಂಬುದು ಇದರಿಂದ ಗೊತ್ತಾದೀತು. ಔಷಧದ ಸೈಡ್ ಇಫೆಕ್ಟ್‌ನಿಂದ ಏನೆಲ್ಲ ಅವಾಂತರಗಳಾಗುತ್ತವೆ ನೋಡಿ.