ಅಭಿಮತ
ಆದರ್ಶ್ ಶೆಟ್ಟಿ
‘ಭಾರತ ಪ್ರಕಾಶಿಸುತ್ತಿದೆ’ ಎಂಬ ಸಾಲು ಭಾರತದಲ್ಲಿ ಮೊಟ್ಟಮೊದಲು ಮೊಳಗಿದ್ದೇ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿಯಲ್ಲಿ. ವಾಜಪೇಯಿಯವರ ಆಡಳಿತದಲ್ಲಿ ಗ್ರಾಮಸಡಕ್ ರಸ್ತೆ, ಕುಡಿಯುವ ನೀರು, ಮತ್ತಿತರ ಮೂಲಭೂತ ಸೌಕರ್ಯಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದವು. ಈ ಕಾರಣಕ್ಕೆ ವಾಜಪೇಯಿಯವರ ಹೆಸರು ಇಂದಿಗೂ ಪಕ್ಷಾತೀತವಾಗಿ, ಧರ್ಮಾತೀತವಾಗಿ ಅಜರಾಮರವಾಗಿ ಉಳಿದಿದೆ.
ವಾಜಪೇಯಿಯವರ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷದ/ಒಕ್ಕೂಟದ ಸರಕಾರಗಳು ಹಗರಣಗಳ ಸುಳಿಗೆ ಸಿಲುಕಿ, ನರೇಂದ್ರ ಮೋದಿಯವರ ಅಲೆಯಲ್ಲಿ ಕೊಚ್ಚಿಹೋದವು. ಈ ಕಾರಣಕ್ಕೆ ಆ ಪಕ್ಷ/ಒಕ್ಕೂಟ ಇಂದಿಗೂ ಚೇತರಿಸಿಕೊಂಡಿಲ್ಲ. ದಶಕದ ಹಿಂದೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕ್ರಮಗಳ ಮೂಲಕ ಅಲ್ಲಿನ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮುತ್ತಲೇ ಬಂದವರು ನರೇಂದ್ರ ಮೋದಿ; ಆದರೆ ಅವರ ಹೆಸರು ಗೋಧ್ರಾ ಘಟನೆಯ ಸಂದರ್ಭದಲ್ಲಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೆ ನಾಂದಿ ಹಾಡಿತು.
ಈ ವ್ಯಕ್ತಿಯನ್ನು ಸಮಾಜದ ಮುಂದೆ ಖಳನಾಯಕನಂತೆ ಬಿಂಬಿಸಲು ಮತ್ತು ರಾಜಕೀಯವಾಗಿ ಕಪ್ಪುಚುಕ್ಕೆಯನ್ನು ಮೆತ್ತಲು ವಿರೋಧಿಗಳು ಸಾಕಷ್ಟು ಬಾರಿ ಹೆಣಗಿದರೂ, ಅದ್ಯಾವುದಕ್ಕೂ ಸೊಪ್ಪುಹಾಕದೆ ಅಭಿವೃದ್ಧಿ ಮತ್ತು ಸಂಘಟನಾ ಮಂತ್ರವನ್ನಷ್ಟೇ ಮೊಳಗಿಸಿದ ಕಾರಣಕ್ಕೆ ಮೋದಿಯವರ ನಾಯಕತ್ವವು ವಾಜಪೇಯಿ ಮತ್ತು ಆಡ್ವಾಣಿಯವರ ಬಳಿಕೆ ಬಿಜೆಪಿಗೆ ಅನಿವಾರ್ಯತೆಯನ್ನು ಸೃಷ್ಟಿಸಿತು.
ಸಾಮಾಜಿಕ ಮಾಧ್ಯಮ, ದೃಶ್ಯ ಮಾಧ್ಯಮ, ಕೈಗಾರಿಕಾ ರಂಗ, ಉದ್ಯಮಕ್ಷೇತ್ರ, ಕ್ರೀಡೆ, ಸಾಂಸ್ಕೃತಿಕ ಹಿನ್ನೆಲೆಯ ಪ್ರಮುಖರಿಂದ ಹಿಡಿದು ಜನಸಾಮಾನ್ಯರ ಬಾಯಲ್ಲೂ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ಕಾಣಬೇಕೆಂಬ ಹಂಬಲ ಮತ್ತು ಆಗ್ರಹ ಅಂದು ಬಹು ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾಗಿತ್ತು. ಮೋದಿಯವರಿ ಗಾಗಿ ಲಕ್ಷಗಟ್ಟಲೆ ಯುವಕಾರ್ಯಕರ್ತರ ಪಡೆ, ಮೋದಿ ಬ್ರಿಗೇಡ್, ನಮೋ ಸೇನೆ, ನಮೋ ಭಾರತ್, ಯುವ ಭಾರತ್ ಹೀಗೆ ನಾನಾ ಹೆಸರುಗಳಲ್ಲಿ ಪಕ್ಷದಿಂದ ಹೊರತಾಗಿ ಸ್ವತಃ ಫೀಲ್ಡಿಗಳಿದು ಸ್ವಯಂಪ್ರೇರಿತವಾಗಿ ಕಾರ್ಯ ನಿರ್ವಹಿಸಿದ ಕಾರಣಕ್ಕೆ ಬಿಜೆಪಿಯು ನರೇಂದ್ರ ಮೋದಿ
ಯವರ ನೇತೃತ್ವದಲ್ಲಿ ಸ್ವಂತ ಬಲದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವಂತಾಯಿತು.
ಮೋದಿಯವರು ತಮ್ಮ ಆಡಳಿತದ ಮೊದಲ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು, ರಕ್ಷಣಾ ವ್ಯವಸ್ಥೆಯಲ್ಲಿನ ಆಮೂಲಾಗ್ರ ಬದಲಾವಣೆ ಸೇರಿದಂತೆ ಪಾರದರ್ಶಕ ಆಡಳಿತದ ಮೂಲಕ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಎರಡನೇ ಅವಧಿಯ ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿಯು ತನ್ನ ಸ್ವಂತ ಬಲದಲ್ಲಿ ಮೋದಿ ಅಲೆಯಲ್ಲಿ ಅಧಿಕಾರದ ಗದ್ದುಗೆಗೇರಿದ್ದು ಇತಿಹಾಸ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ್, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿಯ ರದ್ದತಿ, ಬಾಂಗ್ಲಾದ ಅಕ್ರಮ ನುಸುಳುಕೋರರಿಗೆ ನಿರ್ಬಂಧ, ಪಾಕಿಸ್ತಾನ ಮತ್ತು ಚೀನಾಗಳ ಗಡಿಕ್ಯಾತೆಗೆ ಅಂಕುಶ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣ ಮತ್ತು ಉದ್ಘಾಟನೆ, ಕಾಶಿ, ಮಥುರಾ ಕಾರಿಡಾರ್ ಯೋಜನೆಗಳು, ತ್ರಿವಳಿ ತಲಾಖ್ ರದ್ದು ಹೀಗೆ ಮೋದಿಯವರ ದೂರದೃಷ್ಟಿಯ ಚಿಂತನೆಯ ಹಲವು ಅಭಿವೃದ್ಧಿ ಯೋಜನೆಗಳು ಭವ್ಯ ಭಾರತದ ಅಡಿಪಾಯವಾಗಿವೆ.
ಹಿಂದಿನ ಸರಕಾರಗಳ ಅವಧಿಯಲ್ಲಿ ವಿದೇಶಿಗರು ಭಾರತವನ್ನು ಅವಮಾನಿಸುವ ಸಂದರ್ಭಗಳು ಎದುರಾಗಿದ್ದವು; ಆದರೆ ಪ್ರಸ್ತುತ ಭಾರತವು ವಿಶ್ವಗುರುವಾಗುವತ್ತ ದಾಪುಗಾಲಿಟ್ಟಿದೆ. ಭಾರತದೆಡೆಗಿನ ಜಾಗತಿಕ ಭರವಸೆಗಳು, ವಿಶ್ವಸನೀಯ ಭಾವನೆಗಳು ಉನ್ನತ ಮಟ್ಟದಲ್ಲಿವೆ. ಭ್ರಷ್ಟಾಚಾರಮುಕ್ತ ಭಾರತದ ಪರಿಕಲ್ಪನೆ ಏನಿದ್ದರೂ, ಹಿಂದಿನ ಅಟಲ್ ಬಿಹಾರಿ ವಾಜಪೇಯಿ ಮತ್ತು ಈಗಿನ ನರೇಂದ್ರ ಮೋದಿಯವರ ಆಡಳಿತದಲ್ಲಿ ಹೆಚ್ಚಿನ ಪ್ರಮಾಣ
ದಲ್ಲಿ ಕಂಡುಬಂದಿದೆ. ನರೇಂದ್ರ ಮೋದಿ ಎಂಬ ಹೆಸರು ಕೇವಲ ಒಂದು ವ್ಯಕ್ತಿಯಾಗಿರದೆ ಜಾಗತಿಕ ಮಟ್ಟದಲ್ಲಿ ಒಂದು ಬಲಾಢ್ಯ ಶಕ್ತಿಯಾಗಿ ರೂಪು ಗೊಂಡಿರುವುದಕ್ಕೆ, ವಿದೇಶಿ ನೆಲಗಳಲ್ಲಿ ಮೋದಿಯವರಿಗೆ ದೊರಕುವ ಭರಪೂರ ಸ್ವಾಗತ, ವ್ಯಕ್ತವಾಗುವ ಅಭಿಮಾನವೇ ಸಾಕ್ಷಿಯಾಗಿದೆ.
ಇಂಥ ಒಬ್ಬ ನರೇಂದ್ರ ಮೋದಿಯವರನ್ನು ಸೋಲಿಸಲು, ಒಂದು ಬಿಜೆಪಿಯನ್ನು ಕಟ್ಟಿಹಾಕಲು ವಿರೋಧ ಪಕ್ಷ ಗಳು ಬಹುದೊಡ್ಡ ಗಾತ್ರದಲ್ಲಿ ಕಟ್ಟಿಕೊಂಡ ಕೋಟೆಯ ಹೆಸರೇ ‘ಇಂಡಿಯ’ ಮೈತ್ರಿಕೂಟ. ಮತದಾರರ ಸಮ್ಮುಖದಲ್ಲಿ ಮೋದಿಯವರನ್ನು ಹಾಗೂ ಬಿಜೆಪಿಯನ್ನು ಹಳಿಯಲು ಮತ್ತು ಹಣಿಯಲು ಈ ತಂಡವು ಕಂಡು ಕೊಂಡ ಮಾರ್ಗಗಳು ಹಲವು. ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಹಲವಾರು ಮಟ್ಟದ ಟೀಕೆಗಳು, ವೈಯಕ್ತಿಕ ನೆಲೆಯಲ್ಲಿನ ಕೊಂಕುಗಳು, ಜಾಗತಿಕ ಮಟ್ಟದಲ್ಲಿ ಮುಜುಗರ ತರುವಂಥ ಕೂರಂಬುಗಳು, ದೇಶದ ರೈತರು ಮತ್ತು ಸೇನಾ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ನಡೆಸಲಾದ ಟೀಕಾ ಪ್ರಹಾರಗಳು ಭಾರತದ ರಾಜಕಾರಣದ ಮನಸ್ಥಿತಿಯನ್ನು ವಿದೇಶಿಗರ ಮುಂದೆಯೂ ಅನಾವರಣಗೊಳಿಸಿದ್ದಕ್ಕೆ ಜ್ವಲಂತ ಸಾಕ್ಷಿಗಳಾಗಿದ್ದವು.
ವಿರೋಧ ಪಕ್ಷಗಳ ಈ ಎಲ್ಲಾ ಪ್ರಯತ್ನಗಳು ಕಳೆದೊಂದು ದಶಕದಿಂದ ನರೇಂದ್ರ ಮೋದಿಯವರ ಆಡಳಿತ ವೈಖರಿಯ ಎದುರು ಮಂಕಾಗಿವೆ. ಪ್ರತಿಪಕ್ಷವಾಗಿರುವ ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಎಂಬ ಅಪ್ರಬುದ್ಧ ನಾಯಕನನ್ನು ಬಿಂಬಿಸಿದ್ದು ಕೂಡ ಇದಕ್ಕೊಂದು
ಕಾರಣವಾಗಿರಲಿಕ್ಕೂ ಸಾಕು. ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಸರಕಾರಗಳು ಉತ್ತಮ ಜನಪರ ಕಾರ್ಯಗಳನ್ನು ಕೈಗೊಂಡಾಗ ರಾಜಕೀಯ ಪಕ್ಷಗಳು
ಪಕ್ಷಭೇದ ಮರೆತು ಅವನ್ನು ಮುಕ್ತಮನಸ್ಸಿನಿಂದ ಸ್ವಾಗತಿಸುವಂತಿರಬೇಕು.
ಪ್ರತಿಪಕ್ಷ ಗಳು ಆಡಳಿತ ಪಕ್ಷದ ವೈ-ಲ್ಯ, ಹುಳುಕುಗಳನ್ನು ಎತ್ತಿ ತೋರಿಸುವಂತಿರಬೇಕು. ಆದರೆ ನಮ್ಮ ದೇಶದಲ್ಲಿ ಇವೆಲ್ಲಕ್ಕಿಂತ ಭಿನ್ನವಾಗಿರುವ ವಿಲಕ್ಷಣ ಪರಿಸ್ಥಿತಿಯನ್ನು ಹಾಗೂ ಚಿತ್ತಸ್ಥಿತಿಯನ್ನು ಕಾಣಬೇಕಾಗಿ ಬಂದಿದೆ. ೨೦೨೪ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಬಿಜೆಪಿಗೆ ಸ್ವಂತ ಬಲದಲ್ಲಿ ಅಧಿಕಾರಕ್ಕೇರಲು ಒಂದಷ್ಟು ಸ್ಥಾನಗಳ ಕೊರತೆಯಾಯಿತು. ತೆಲುಗುದೇಶಂ ಮತ್ತು ಜೆಡಿಯು ಪಕ್ಷಗಳು ಎನ್‌ಡಿಎ ಒಕ್ಕೂಟದೊಂದಿಗೆ ಕೈಜೋಡಿಸಿದ್ದರ ಫಲವಾಗಿ ನರೇಂದ್ರ ಮೋದಿಯವರು ಮೂರನೆಯ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಆಗಿದೆ. ಕಳೆದ ಎರಡು ಅವಧಿಯಲ್ಲಿ ಮೋದಿ ಸರಕಾರವು ತನ್ನ ಆಡಳಿತದಲ್ಲಿ ಹಿಂದಿನ ಸರಕಾರಗಳು ನೀಡದ ಅಭಿವೃದ್ಧಿಯ ಕೊಡುಗೆಯನ್ನು ನೀಡಿದ್ದಕ್ಕೆ ಜನರು ಸಾಕ್ಷಿಯಾಗಿದ್ದಾರೆ. ಭ್ರಷ್ಟಾಚಾರಮುಕ್ತ ಆಡಳಿತ, ದೂರದೃಷ್ಟಿಯ ಯೋಜನೆಗಳ ಜತೆಗೆ, ಈ ದೇಶದ ಪ್ರಬುದ್ಧ ಮತದಾರರ ಆಶಯ ಮತ್ತು ನಿರೀಕ್ಷೆ
ಗಳಿಗೆ ಪೂರಕವಾಗಿಯೇ ಆಡಳಿತ ನೀಡಿದರೂ ಬಿಜೆಪಿಗೆ ಈ ಬಾರಿ ಹಲವಾರು ಕಡೆ ಸ್ಥಾನಗಳು ಕೈತಪ್ಪಿಹೋಗಿದ್ದು ತುಸು ಆಶ್ಚರ್ಯಕರ ಸಂಗತಿ.
ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕದಂಥ ರಾಜ್ಯಗಳಲ್ಲಿ ಬಿಜೆಪಿ ತುಸು ಹಿನ್ನಡೆಯನ್ನು ಅನುಭವಿಸಿದೆ. ಕೆಲ
ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ನಾಯಕರ ವೈಫಲ್ಯ, ಟಿಕೆಟ್ ಹಂಚಿಕೆಯಲ್ಲಾದ ಲೋಪದೋಷಗಳು, ಆಗ ಇದ್ದ ಸಂಸದರು ತಮ್ಮ ಕ್ಷೇತ್ರದ ಕಡೆಗೆ ತೋರಿದ ನಿರ್ಲಕ್ಷ್ಯ, ಅತಿಯಾದ ಆತ್ಮವಿಶ್ವಾಸ, ಕೆಲವೆಡೆ ರಾಜ್ಯ ಸರಕಾರಗಳ ಗ್ಯಾರಂಟಿ ಯೋಜನೆಗಳು ಮತ್ತು ಆಮಿಷಗಳು, ಸಂಸದ ರಾಗಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೂ ಮೋದಿ ಹೆಸರಿನಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆ (ಈ ಮನಸ್ಥಿತಿಯು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮಟ್ಟಕ್ಕೂ ಬಂದು
ನಿಂತಿದೆ!), ಕೆಲವೆಡೆ ಕಾರ್ಯಕರ್ತರ ನಿರ್ಲಕ್ಷ್ಯ ಈ ಕಾರಣ ಗಳಿಂದಾಗಿ ಬಿಜೆಪಿ ಒಂದಷ್ಟು ಸ್ಥಾನಗಳನ್ನು ಕಳೆದುಕೊಳ್ಳುವಂತಾಯಿತು.
ಮಿಕ್ಕಂತೆ, ೩೦,೦೦೦ ಮತ್ತು ೧೫,೦೦೦ ಮತಗಳ ಆಸುಪಾಸಿನಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯೂ ಸಾಕಷ್ಟು ದೊಡ್ಡದಿದೆ. ಇನ್ನು ಕರ್ನಾಟಕದ ವಿಷಯದಲ್ಲಿ ಹೇಳುವುದಾದರೆ, ಆಡಳಿತಾರೂಢ ಕಾಂಗ್ರೆಸ್ ಸರಕಾರ ಮತ್ತು ಅದರ ಗ್ಯಾರಂಟಿ ಯೋಜನೆಗಳ ಪ್ರಭಾವವೋ ಏನೋ, ಕಾಂಗ್ರೆಸ್ ಪಕ್ಷವು ೯ ಸ್ಥಾನಕ್ಕೆ ಏರಿಕೆ ಕಂಡು, ಬಿಜೆಪಿಯು ಕೆಲ ಸ್ಥಾನಗಳನ್ನು ಕಳೆದುಕೊಳ್ಳುವಂತಾಯಿತು. ಲೋಕಸಭಾ ಚುನಾವಣೆ ಎಂಬುದು ಪ್ರಾದೇಶಿಕ/ಸ್ಥಳೀಯ ಚರ್ಚಾ
ವಿಷಯಗಳ ಆಧಾರದ ಮೇಲೆ ನಡೆಯುವ ಚುನಾವಣೆಯಲ್ಲ. ಬದಲಾಗಿ, ಅದು ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆ. ನಮ್ಮ ಮುಂದಿನ ಪೀಳಿಗೆಯ ಉಳಿವು ಹಾಗೂ ಭವಿಷ್ಯವು ಈ ಚುನಾವಣೆಯ ಹಿಂದೆ ಅಡಕ ವಾಗಿದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನೇ ಬಂಡವಾಳವಾಗಿಸಿ, ಇನ್ಯಾವುದೋ ವಿಚಾರಕ್ಕೆ ಬಲಿಬಿದ್ದು ಸ್ಥಾನಗಳನ್ನು ಕಳೆದು ಕೊಂಡು, ಅನ್ಯಪಕ್ಷಗಳ ಹಂಗಿನಲ್ಲಿ ಸರಕಾರ ನಡೆಸಬೇಕಾದ ಸ್ಥಿತಿಗೆ ನರೇಂದ್ರ ಮೋದಿಯವರಂಥ ನಾಯಕರನ್ನು ತಂದು ನಿಲ್ಲಿಸಿದ ಚುನಾವಣಾ ಸಂದರ್ಭವಿದು.
ಇಂಥ ಸ್ಥಿತಿ ರೂಪುಗೊಂಡ ಬಳಿಕ ಪರಿತಪಿಸಿದರೆ ಏನು ಪ್ರಯೋಜನ? ಆದ್ದರಿಂದ ಬಿಜೆಪಿ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಏಕೆಂದರೆ, ಸ್ವಂತ ಬಲದಲ್ಲಿ ಆಡಳಿತ ನಡೆಸು ವುದು ಒಂದು ತೂಕವಾದರೆ, ಅನ್ಯಪಕ್ಷಗಳ ಬೆಂಬಲ ದೊಂದಿಗೆ ಅಥವಾ ಅವುಗಳ ಹಂಗಿನಲ್ಲಿ ಸರಕಾರ ನಡೆಸುವ ಸಂದರ್ಭದಲ್ಲಿ, ಯಾವುದೇ ಪ್ರಮುಖ ಕಾಯ್ದೆಗಳಿಗೆ, ಮಸೂದೆಗಳ ಅಂಕಿತಕ್ಕೆ ಆ ಪಕ್ಷಗಳನ್ನು ಆಶ್ರಯಿಸ ಬೇಕಾಗುತ್ತದೆ. ಹೀಗೆ ಸರಕಾರವನ್ನು ನಡೆಸುವುದು ಮುಳ್ಳಿನ ಹಾದಿಯ ಮೇಲಿನ ನಡಿಗೆಯಂತೆಯೇ ಸರಿ. ಎಲ್ಲವನ್ನೂ ಸರಿದೂಗಿಸಿಕೊಂಡು ಒಮ್ಮತದಿಂದ ಸರಕಾರವನ್ನು ಕೊಂಡೊಯ್ಯಬೇಕಾದ ಎಚ್ಚರಿಕೆಯ ಹಾಗೂ ಅಪಾಯದ ಹಾದಿ ಮೋದಿಯವರ ಎದುರಿಗಿದೆ ಎಂದರೂ ತಪ್ಪಾಗಲಾರದು.
ಒಂದಂತೂ ಸತ್ಯ- ನರೇಂದ್ರ ಮೋದಿಯೆಂದರೆ ಸ್ವಾರ್ಥ ಅಲ್ಲ, ಸ್ವಜನ ಪಕ್ಷಪಾತ ಅಲ್ಲ, ಭ್ರಷ್ಟಾಚಾರವಲ್ಲ. ಮೋದಿಯೆಂದರೆ ಭವ್ಯಭಾರತದ
ಪರಿಕಲ್ಪನೆಯ ಜತೆಗೆ ದೇಶವು ಭವಿಷ್ಯದಲ್ಲಿ ಕಾಣುವ ಅಭಿವೃದ್ಧಿಯ ಪ್ರತಿರೂಪ. ಈ ಶಕ್ತಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಪಡೋಣ.
(ಲೇಖಕರು ಹವ್ಯಾಸಿ ಬರಹಗಾರರು)