Saturday, 14th December 2024

ನಮ್ಮೊಡನಿದ್ದೂ ಸದಾ ಹೊರನಿಲ್ಲುವ ಮೂರೆಂಬ ಮಹಾಮಾಯೆಯ ಸುತ್ತ..

ಯಶೋ ಬೆಳಗು

ಯಶೋಮತಿ ಬೆಳಗೆರೆ

ಅಳು ಜೀವಂತಿಕೆಯ ಸಂಕೇತ!

ನಾವೆಲ್ಲರೂ ಅಳುತ್ತ ಅಳುತ್ತಲೇ ಈ ಭೂಮಿಗೆ ಬಂದವರು. ಅಳುವಿನ ಜತೆಜತೆಗೇ ದುಃಖಕ್ಕೆ ಸಾತ್ ನೀಡುತ್ತಾ ಧಾರೆಯಾಗುವುದು ಕಣ್ಣೀರು. ಅಂದಹಾಗೆ ನಾವು
ಒಂದು ನಿಮಿಷ ಅತ್ತರೆ ಶೇ.1.3 ರಷ್ಟು ಕ್ಯಾಲೋರಿ burn ಆಗಿರತ್ತೆ ನಮ್ಮರಿವಿಗೇ ಬಾರದಂತೆ. ಅಳು ಸಹಜ ಕ್ರಿಯೆ. ಅದು ಕಣ್ಣನ್ನು ಆರೋಗ್ಯವಾಗಿಡಲು ಸಹಾಯ ಕೂಡ ಮಾಡುತ್ತದೆ. ಹೊರಗಿನಿಂದ ಯಾವುದೇ ವಸ್ತು ಕಣ್ಣೊಳಗೆ ಬಿದ್ದ ಕೂಡಲೇ ಕಣ್ಣು ಜಲಾವೃತಗೊಂಡು ಒಂದು ರಕ್ಷಾ ಕವಚವನ್ನು ಸೃಷ್ಟಿಸುತ್ತದೆ.

ಹಾಗಂತ ದಿನವಿಡೀ ಅಳುತ್ತಾ ಕೂತರೆ ಅಥವಾ ದುಃಖವೇ ಆಗದಿದ್ದರೂ ಕಣ್ಣೀರು ಬರುತ್ತಲೇ ಇದ್ದರೆ something is wrong with our eyes ಅನ್ನುವುದು ಖಚಿತ! Actually ನಾನು ಹೇಳೋಕೆ ಹೊರಟದ್ದು ಅಳುವಿನ ಬಗ್ಗೆ ಅಲ್ಲ. The third person ಬಗ್ಗೆ. ಕಣ್ಣಿನೊಳಗೆ ಬಿದ್ದ ಮೂರನೆಯ ವಸ್ತುವನ್ನು ಹೊರದಬ್ಬಲು ಕಣ್ಣಿನ ಆಸರೆಗೆ ಧಾವಿಸಿ ಬರುವ ಕಣ್ಣೀರಿನಂತೆ, ನಮ್ಮ ಸಂಬಂಧಗಳಲ್ಲಿ ಎದುರಾಗುವ ಮೂರನೆಯ ವ್ಯಕ್ತಿಗಳು ಯಾವ ಯಾವ ರೂಪಗಳಲ್ಲ ಎದುರಾಗುತ್ತಾರೆ ಅನ್ನುವುದನ್ನು ಅವಲೋಕಿಸಿದಾಗ ಅರಿವಿಗೆ ಬಂದದ್ದು ಎರಡು ಅನ್ನುವುದು ಸಾಂಗತ್ಯದ ಸೂಚಕವಾದರೆ, ಹಿಡಿ ಹಿಡಿದರೆ ಹೆಬ್ಬೆರಳಿನಂತೆ ಪಾಪ! ಈ ಮೂರು ಅನ್ನುವ ವಿಘ್ನರೂಪಿ ಸದಾ ಹೊರಗೇ.

ಅನ್ನ ಬೇಯಿಸಲು ಹೂಡಿಕೊಂಡ ಒಲೆಯ
ಕಲ್ಲುಗಳು,
ಹಣೆಗೆ ತೀಡಿಕೊಂಡ ವಿಭೂತಿ ಸಾಲುಗಳು
ಹಸೆಮಣೆ ಹೆಣ್ಣಿನ ಕೊರಳಿಗೆ ಬಿಗಿದ ದಾರದ
ಗಂಟುಗಳು
ದತ್ತನ ಮುಖಗಳು, ತ್ರಿಶೂಲದೆಸಳುಗಳು,
ಮಳೆ, ಚಳಿ, ಬಿಸಿಲು ಕಾಲಮಾನಗಳು
ಪಾರ್ವತಿ ಪತಿ ಕಂಗಳು, ಬಿಲ್ವಪತ್ರೆ ದಳ
ವೆಂಕಟನ ಹಣೆಗೆ ತೀಡಿ ಬರೆದ ನಾಮದ
ಗೀರುಗಳು….
ಉ- ಎಷ್ಟೊಂದು ಮೂರು!
ಮೂರು ಮಹಾ ಕೆಡುಕು,

ಮೂರಾಬಟ್ಟೆಯ ಕುರುಹೆಂದು ಮೂಗು ಮುರಿದವರೇ ಹೆಚ್ಚು ಇಲ್ಲಿ… ಅನ್ನುವ ಕವಿತೆಯ ಸಾಲುಗಳು ಕಣ್ಣಿಗೆ ಬಿದ್ದಾಗ ಅನಿಸಿದ್ದು… ಅರೆರೆ ಅದೆಷ್ಟೊಂದು ಮೂರುಗಳಿವೆಯಲ್ಲ ನಮ್ಮ ನಡುವೆ? ಹಾಗೆಯೇ ಮೂರೂ ಹೊತ್ತು, ಮೂರು ಲೋಕ, ಮೂರೂ ಬಿಟ್ಟವರು ಲೋಕಕ್ಕೇ ದೊಡ್ಡವರು, ‘ಮಳ್ಳೀ ಮಳ್ಳಿ ಮಂಚಕ್ಕೆ ಕಾಲೆಷ್ಟು ಅಂದಾಗ ಮೂರು ಮತ್ತೊಂದು ಅಂದವಳು‘, ಮೂರು ಖ’ ಸೇರಿ ಆಗುವ ಮೂರ್ಖ….ಹೀಗೆ ಮೂರು ಅನ್ನುವುದು ಕೆಡುಕಿನ ಸಂಕೇತವಾಗಿ ನಿಂತುಬಿಟ್ಟಿದೆಯಲ್ಲ ಅನ್ನಿಸಿದಾಗ ನೆನಪಾದದ್ದು ಕಪಟತನಕ್ಕೆ ಮತ್ತೊಂದು ಹೆಸರಾದ ಮಾರ್ಜಾಲ ನ್ಯಾಯದ ಕತೆ.

ಸಣ್ಣವಯಸ್ಸಿನಲ್ಲಿ ನಾವೆಲ್ಲ ಕೇಳುತ್ತಲೇ ಬೆಳೆದ ಮಾರ್ಜಾಲ ನ್ಯಾಯದ ಕತೆ ನಿಮಗೆಲ್ಲ ಗೊತ್ತಿರಬೇಕಲ್ಲ? ಸಿಕ್ಕ ಕಜ್ಜಾಯದ ತುಂಡನ್ನು ಸಮಪಾಲು ಮಾಡಿ ಹಂಚಿಕೊಳ್ಳಲಾಗದೆ ಎರಡು ಮಂಗಗಳು ನ್ಯಾಯಕ್ಕಾಗಿ ಬೆಕ್ಕಿನ ಮೊರೆ ಹೋಗುವ ಕತೆ. ಚಾಣಾಕ್ಷ ಬೆಕ್ಕು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಕಜ್ಜಾಯವನ್ನು ಸಂಪೂರ್ಣ ಗುಳುಂ ಮಾಡಿ ಮಂಗಗಳಿಗೆ ತಾರಮ್ಮಯ್ಯ ಆಡಿಸಿದ ಕತೆ. ತಮ್ಮ ತಮ್ಮ ಎದುರಾದ ಸಮಸ್ಯೆಗೆ ಸರಿಯಾದ ಪರಿಹಾರ
ಕಂಡುಕೊಳ್ಳಲಾಗದೆ ಮೂರನೆಯವರ ಬಳಿಗೆ ಹೋಗಿ ಪೆಚ್ಚಾಗಿ ಬರಿಗೈಯಲ್ಲಿ ಹಿಂತಿರುಗಿದ ನೀತಿ ಕತೆ.

ಇನ್ನು ನಾವು ಹುಟ್ಟುತ್ತ ಹುಟ್ಟುತ್ತ ಮನಸು ಹಾಗೂ ದೇಹದ ಜತೆ ಜತೆಗೆ ಜನ್ಮ ತಳೆದಿರುತ್ತೇವೆ. ಅದೆಷ್ಟು ಅನ್ಯೋನ್ಯತೆಯಿಂದ ಒಬ್ಬರ ಮಾತು ಮತ್ತೊಬ್ಬರು
ಕೇಳುತ್ತಾ ಸಾಕಷ್ಟು ಆರೋಗ್ಯ ಕಾಪಾಡುತ್ತ ಜೀವರಕ್ಷಣೆ ಮಾಡಿಕೊಂಡಿರುತ್ತೇವೆ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಕಳ್ಳಹೆಜ್ಜೆ ಇಟ್ಟು ಬರುವ ಭಾವನೆಗಳ
ಸುಳಿಯಲ್ಲಿ ಸಿಲುಕಿ ಇರುವ ಅಲ್ಪಸ್ವಲ್ಪ ಬುದ್ದಿಯೂ ಬುಡಮೇಲಾಗುವುದು ಒಂದಲ್ಲ ಒಂದು ಹಂತದಲ್ಲಿ ನಮ್ಮೆಲ್ಲರ ಅನುಭವಕ್ಕೆ ಬಂದೇ ಇರುತ್ತದೆ. ಕೆಲವರು
ತೋರ್ಪಡಿಸಿಕೊಂಡರೆ, ಮತ್ತೆ ಕೆಲವರು ಅದನ್ನು ಗೌಪ್ಯವಾಗಿರಿಸಿಕೊಳ್ಳುತ್ತಾರೆ ಅಷ್ಟೆ.

ಹಿಂದೆಲ್ಲ ರಾಜಾ ಬಹುವಲ್ಲಭ ಅನ್ನುವ ಮಾತಿತ್ತು. ಅವರಿಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಅದೊಂದು ಮಾರ್ಗವಾಗಿತ್ತು. ಮೊಘಲರ ಚಕ್ರವರ್ತಿಯಾದ ಅಕ್ಬರನು ಮತಾಂತರಕ್ಕೆ ಒತ್ತಾಯಿಸದೇ ನಮ್ಮ ರಜಪೂತರ ರಾಜಕುವರಿ ಹೀರಾ ಕುವರಿ (ಜೋಧಾ ಅಕ್ಬರ್)ಯೆಡೆಗೆ ಅನುರಕ್ತನಾಗಿ, ಆನಂತರ ವಿವಾಹವಾಗಿ ರಜಪೂತರ ವಿಶ್ವಾಸ ಗಳಿಸಿಕೊಳ್ಳಲಿಲ್ಲವೇ? ಅಂತಹ ಶೆಹನ್ ಷಾ ಜೋಧಾಳಿಗೆ ವಿಶೇಷ ಪ್ರೀತಿಯಿಂದ ಜಡೆ ಹೆಣೆದುಕೊಡುತ್ತಿದ್ದನಂತೆ… ವಿಜಯನಗರದ
ಅರಸನಾದ ಶ್ರೀಕೃಷ್ಣದೇವರಾಯ, ತಿರುಮಲಾಂಬೆ ಯನ್ನು ವಿವಾಹವಾಗಲು ನಮ್ಮ ಮೈಸೂರಿನ ತನಕ ಬರಲಿಲ್ಲವೆ? ದಶರಥನ ಮೂರನೇ ಹೆಂಡತಿಯಾದ
ಕೈಕೇಯಿ, ತನ್ನ ದಾಸಿ ಮಂಥರೆಯ ಮಾತು ಕೇಳಿದಾಗ ನಡೆದ ಘಟನೆಗಳಿಂದ ರಾಮಾಯಣವೇ ಸೃಷ್ಟಿಯಾಗಿ ಹೋಯಿತು.

ಶಂತನುಗೆ ಎರಡನೇ ಹೆಂಡತಿಯಾಗಿ ಬರುವ ಮನ್ನ ಸತ್ಯವತಿ ಒಡ್ಡುವ ಷರತ್ತುಗಳಿಂದ ಭೀಷ್ಮ ಆಜನ್ಮ ಪರ್ಯಂತ ಬ್ರಹ್ಮಚಾರಿ ಯಾಗೇ ಉಳಿದುಹೋದದ್ದು, ಕೌರವ-ಪಾಂಡವರ ಜನ್ಮರಹಸ್ಯ, ಅವರ ಮುಂದಿನ ಸಂತತಿಗಳಿಂದ ಮಹಾಭಾರತದ ಯುದ್ಧವೇ ನಡೆದು ಹೋದದ್ದು, ನಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಇನ್ನು ಕೃಷ್ಣನ ಮಾತಂತೂ ಹೇಳುವುದೇ ಬೇಡ. ರುಕ್ಮಿಣಿ- ಸತ್ಯಭಾಮೆಯರೊಂದಿಗೆ ಅದೆಷ್ಟು ಸಾವಿರ ಹೆಂಡತಿಯರು! ಅದಕ್ಕೇ ಅವನು ದೇವಮಾನವ. ಆದರೆ ಇಂದು ಹಾಲು-ಜೇನಿನಂತಿರುವ ಸಂಸಾರದಲ್ಲಿ ಹುಳಿಯಂತೆ ವಕ್ಕರಿಸುವ ಮೂರನೆಯವರ ಪಾಲಿಗೆ ಯಾವುದೇ ಹಕ್ಕುಗಳಿಲ್ಲದಂತೆ ಮಾಡಿ ಅಸ್ಪೃಶ್ಯರಂತೆ ಬದಿಗೊತ್ತಿ ಬಿಟ್ಟಿದೆ ನಮ್ಮ ಕಾನೂನು ವ್ಯವಸ್ಥೆ.

ಆದರೆ ಕಣ್ಣಿಗೆ ಕಪ್ಪು ಪಟ್ಟಿ ತೊಟ್ಟಿರುವ ನ್ಯಾಯದೇವತೆಯ ಅರಿವಿಗೆ ಬಾರದಂತೆ ಅದೆಷ್ಟು ಕಳ್ಳಾಟಗಳು ನಡೆಯುತ್ತವೆ ಈ ಕಾನೂನಿನ ಹೆಸರಿನಡಿಯಲ್ಲಿ? ಒಂದು ಕಾಲದಲ್ಲಿ ಗಾಂಧಾರ ದೇಶದ ಭಾಗವೇ ಆಗಿದ್ದ ಪೇಶಾವರ್‌ನ ಮೂಲದಿಂದ ಬಂದ ಸುಂದರ ಸುರದ್ರೂಪಿ ನಾಯಕ ನಟ ರಾಜ್ ಕಪೂರ್ ಹಾಗೂ ನರ್ಗಿಸ್ ನಡುವಿನ ಉತ್ಕಟತೆಯನ್ನು ಅವರು ಒಟ್ಟೊಟ್ಟಿಗೆ ನಟಿಸಿದ ಸಾಕಷ್ಟು ಚಿತ್ರಗಳಲ್ಲಿ ಕಾಣಬಹುದು. ಅದು ಕೇವಲ ಚಿತ್ರ ಜೀವನಕ್ಕಷ್ಟೆ ಸೀಮಿತವಾಗದೇ ವೈಯಕ್ತಿಕ ಮಟ್ಟದಲ್ಲಿಯೂ ಸಾಕಷ್ಟು ಪರಿಣಾಮ ಉಂಟು ಮಾಡಿತ್ತು.

ಒಂದು ಮಾಹಿತಿಯ ಪ್ರಕಾರ ನರ್ಗೀಸ್, ಅಷ್ಟರಗಲೇ ವಿವಾಹಿತರಾಗಿದ್ದ ರಾಜಕಪೂರ್‌ರನ್ನು ವಿವಾಹವಾಗಲು ಕಾನೂನಿನ ಸಹಕಾರ ಕೋರಿ ಅಂದಿನ
ಮಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ ಯವರಿಗೆ ಪತ್ರ ಬರೆದಿದ್ದರಂತೆ. ಆದರೆ ಮುಖ್ಯಮಂತ್ರಿಗಳು ನರ್ಗಿಸ್‌ರ ಕೋರಿಕೆಯನ್ನು ತಳ್ಳಿಹಾಕಿದ್ದರು ಅನ್ನುವ ಮಾತಿದೆ. ಕ್ರಮೇಣ ಯಶಸ್ಸಿನ ಉತ್ತುಂಗಕ್ಕೇರುತ್ತಿದ್ದ ರಾಜಕಪೂರ್‌ನ ಆಸಕ್ತಿಗಳು ಕವಲೊಡೆಯುತ್ತಿದ್ದುದನ್ನು ಕಂಡು ಭ್ರಮನಿರಸನಗೊಂಡ ನರ್ಗೀಸ್ ಸುನೀಲ್ ದತ್‌ರನ್ನು ವಿವಾಹವಾಗಿದ್ದು, ಅವರ ದಾಂಪತ್ಯ ಜೀವನಕ್ಕೆ ಸಂಜಯ್ ದತ್ ಹುಟ್ಟಿದ ಕೆಲವೇ ವರ್ಷಗಳಿಗೆ ಕ್ಯಾನ್ಸರ್ ಅನ್ನುವ ಮಹಾಮಾರಿ ಅವರನ್ನು ಬಲಿತೆಗೆದು ಕೊಂಡಿದ್ದು ಈಗ ಇತಿಹಾಸ.

ಇನ್ನು ಎರಡು ಗಾಢ ಸ್ನೇಹ ಜೀವಗಳ ನಡುವೆ ಪ್ರೀತಿ ಅನ್ನುವುದು ಸದಾ ಮೂರನೆಯ ಸ್ಥಾನದಲ್ಲಿ ನಿಲ್ಲುತ್ತದೆ. ಅದಕ್ಕೆ ಉತ್ತಮ ನಿದರ್ಶನವಾಗಿ ಉತ್ತರ ಕರ್ನಾಟಕದ ಜನಪದ ಸೊಗಡಿನ ಪಾತ್ರಗಳಾದ ಸಂಗ್ಯಾ-ಬಾಳ್ಯಾರ ನಡುವೆ ಬರುವ ಗಂಗಾಳಿಂದ ಅವರ ಸ್ನೇಹ ಹೇಗೆ ದಾರುಣವಾದ ಅಂತ್ಯ ಕಾಣುತ್ತದೆ
ಅನ್ನುವ ವಿಷಯ ಒಂದು ಕಡೆಯಾದರೆ, ಜನ್ನ ಕವಿಯಿಂದ ಸೃಷ್ಟಿಯಾದ ‘ಯಶೋಧರ ಚರಿತೆ’ಯಲ್ಲಿ ಅಹಿಂಸೆಗೆ ಮತ್ತೊಂದು ಹೆಸರಾಗಿರುವ ಜೈನಧರ್ಮದ
ನಾಡಾದ ಉಜ್ಜಯನಿಯ ರಾಜ ಯಶೋಧರನ ರಾಣಿ ಅಮೃತಮತಿ ಅಷ್ಟಾವಕ್ರನಾದ ಮಾವುತನೆಡೆಗೆ ಪ್ರಣಯಾಕರ್ಷಿತಳಾಗಿ ತನ್ನ ಗಂಡನಿಗೇ ವಿಷವಿಟ್ಟು
ಕೊಂದ ಕತೆ ಕೂಡ ಅಷ್ಟೇ ಪ್ರಭಾವವನ್ನು ಬೀರುತ್ತದೆ.

ಇನ್ನು ಸಪ್ತಪದಿ ತುಳಿದು, ಧರ್ಮ-ಅರ್ಥ- ಕಾಮ-ಮೋಕ್ಷಗಳಿಗಾಗಿ ಒಬ್ಬರಿಗೊಬ್ಬರು ಆಸರೆಯಾಗಿ ಗಂಡು-ಹೆಣ್ಣು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಆರಂಭ ವಾಗುವ ದಾಂಪತ್ಯವೆಂಬ ಜೀವನ ಪಯಣದಲ್ಲಿ ತಮ್ಮದೇ ರಕ್ತ-ಮಾಂಸ- ಕೋಶಗಳನ್ನು ಹಂಚಿಕೊಂಡು ಹುಟ್ಟಿದ ಮಕ್ಕಳು ಕೂಡ ಮೂರನೆಯವರಾಗಿ ನಿಲ್ಲುತ್ತಾರೆ ಅನ್ನುವುದು ವಿಸ್ಮಯ ಮೂಡಿಸಿದ ವಿಷಯ.

ಹೀಗೆ ಸ್ನೇಹ, ಪ್ರೀತಿ, ದಾಂಪತ್ಯಗಳೆಂಬ ಬಹುಮುಖ್ಯವಾದ ಸ್ಥರಗಳಲ್ಲಿ ಈ ಮೂರನೆಯ ಸ್ಥಾನ ಹೇಗೆಲ್ಲ ನಿರಾಕರಣೆಗೆ ಒಳಗಾಗುತ್ತದೆ ಹಾಗೂ ಅವಘಡಗಳಿಗೆ ಕಾರಣವಾಗುತ್ತದೆ ಅನ್ನುವುದು ಒಂದು ಅಂಶವಾದರೆ, ನಮ್ಮ ಜೊತೆಜೊತೆಗೇ ಇರುವ ಆಶಾಢಭೂತಿಗಳ ಸಾಹಚರ್ಯದಿಂದ ಉಂಟಾಗುವ ತೊಡಕುಗಳು, ತಂದೊಡ್ಡುವ ಕೆಡುಕುಗಳು ಇನ್ನೂ ಘೋರ!

ಈ ಜಗತ್ತಿನಲ್ಲಿ ಎರಡು ರೀತಿಯ ಜನರು ನಂಬಿಕೆಗೆ ಅರ್ಹರು. ನಿಮ್ಮ ಮುಖ ಕಂಡರಾಗದೆ, ಎದುರಾ ಎದುರು ದೂಷಿಸಿ ವೈರತ್ವವನ್ನು ಸಾಧಿಸುವ ನಿಷ್ಠುರವಾದಿ ಗಳು ಒಂದು ವರ್ಗವಾದರೆ, ಎರಡನೆಯ ವರ್ಗದರು ನಿಮ್ಮನ್ನು ನಿಮ್ಮ ಎಲ್ಲ ಬಲಹೀನತೆಗಳ ಸಮೇತ ನಿಮ್ಮನ್ನು ಒಪ್ಪಿಕೊಂಡು ಪ್ರೀತಿ, ಸಹನೆಯೊಂದಿಗೆ ಮನ ದಾಳದಿಂದ ನಿಮ್ಮ ಏಳಿಗೆಯನ್ನು ಬಯಸುವವರು. ಆದರೆ ಈ ಮೂರನೆಯವರಿದ್ದಾರಲ್ಲ? ನಿಮ್ಮೆದುರು ನಿಮ್ಮಂತೆಯೇ ಮಾತನಾಡಿ ನಂತರ ನಿಮ್ಮ ವಿರುದ್ಧವೇ ಮಸಲತ್ತು ಮಾಡುವವರು ಅವರನ್ನು ಯಾವ ಕಾರಣಕ್ಕೂ ನಂಬಬಾರದು! ಆದರೆ ದುರ್ದೈವ ಅಂದರೆ ನಾವೆಲ್ಲ ಹೆಚ್ಚಿಗೆ ನಂಬುವುದು ಹಾಗೂ ಅವಲಂಬಿತರಾಗು ವುದು ಹೆಚ್ಚಾಗಿ ಈ ಮೂರನೆಯ ವರ್ಗದವರ ಮೇಲೆಯೇ!

ಗಮನಿಸಿ ನೋಡಿ, ಅಂಥವರು ಬಹಳ ಬೇಗ ನಿಮ್ಮಂತೆಯೇ ಮಾತನಾಡಿ ನಿಮ್ಮ ವಿಶ್ವಾಸವನ್ನು ಗಳಿಸಿಕೊಳ್ಳುತ್ತಾರೆ. ನಿಮ್ಮ ಸಣ್ಣಪುಟ್ಟ ಆಗುಹೋಗುಗಳಿಗೂ ಮರುಗುತ್ತಾ ನಿಮ್ಮ ಮನಸ್ಸಿನಲ್ಲಿ ಒಂದು ವಿಶೇಷವಾದ ಸ್ಥಾನವನ್ನು ಗಳಿಸಿಕೊಳ್ಳುತ್ತಾರೆ. ನೀವು ಎಲ್ಲಿ ಹೋದರೆ ಅಲ್ಲಿ ನಿಮ್ಮ ಜತೆ ಜತೆಗೆ ಬರುತ್ತಾ ನಿಮ್ಮ ನೆರಳಿನಂತೆಯೇ ಆಗಿ ಹೋಗಿರುತ್ತಾರೆ. ಅವರಿಗೆ ನಿಮ್ಮ ಸಿಟ್ಟು, ಸಿಡುಕು, ಅಳು, ನಗು, ಧ್ಯಾನ, ಪ್ರೀತಿ, ವ್ಯಾಮೋಹ, ನೋವು, ವೈರತ್ವ, ಕುಟುಂಬ, ನೆಂಟರಿ ಷ್ಟರು, ಸ್ನೇಹಿತರು, ಆಪ್ತವಲಯ, ಚಲನವಲನ, ಉಡುಗೆ ತೊಡುಗೆ, ನಿಮ್ಮನ್ನು ಬೆಂಬಲಿಸುವವರು ಯಾರು? ನಿಮ್ಮನ್ನು ದ್ವೇಷಿಸುವವರು ಯಾರು? ಯಾವ ಮಾತಿನಿಂದ ನೀವು ಹೆಚ್ಚು ಕೋಪಗೊಳ್ಳುತ್ತೀರಿ? ಯಾವ ಮಾತು ನಿಮಗೆ ಹೆಚ್ಚು ಸಂತೋಷವನ್ನು ಕೊಡುತ್ತದೆ.

ನಿಮ್ಮ ಆಸಕ್ತಿಗಳೇನು? ಅನ್ನುವುದರಿಂದ ಹಿಡಿದು ನಿಮಗೆ ಯಾವ ಆಹಾರ ಹೆಚ್ಚು ರುಚಿಸುತ್ತದೆ. ಹಾಗೂ ಎಲ್ಲಿಂದ ನಿಮ್ಮ ಊಟ ಸರಬರಾಜಾಗುತ್ತದೆ. ಮತ್ತು
ಯಾವ ಸಮಯಕ್ಕೆ? ನಿಮ್ಮ ನಿದ್ರೆಯ ಲೆಕ್ಕಾಚಾರ, ಎಷ್ಟು ಗಂಟೆಗೆ ಏಳುತ್ತೀರಿ? ನಂತರದ ನಿಮ್ಮ ರೊಟೀನು ಏನೇನು ಅನ್ನುವುದೆಲ್ಲ ಇಂಚಿಂಚೂ ಅವರಿಗೆ ತಿಳಿದಿರುತ್ತದೆ. ನಾವೂ ಸಹ ಶತಮೂರ್ಖರಂತೆ ಎಲ್ಲದಕ್ಕೂ ಅವರನ್ನು ನಂಬುತ್ತಾ ಪ್ರತಿ ಆಗುಹೋಗುಗಳನ್ನೂ ಅವರೊಂದಿಗೆ ಹಂಚಿಕೊಳ್ಳುತ್ತಾ ಮನಸ್ಸು ಹಗುರ ಮಾಡಿಕೊಂಡು ನಿರಾಳರಾಗಿದ್ದೇವೆ ಅಂದುಕೊಂಡಿರುತ್ತೇವೆ.

ಆದರೆ ಅವರು ಪಕ್ಕಾ ಅವಕಾಶವಾದಿಗಳು. ನಮ್ಮಲ್ಲಿ ಸಿಗುವ ಸವಲತ್ತುಗಳನ್ನೆಲ್ಲ ಅನುಭವಿಸುತ್ತಾ ನಮ್ಮಂತೆ ನಟಿಸುವವರು. ಇದಕ್ಕಿಂತ ಉತ್ತಮ ಅವಕಾಶ ಸಿಕ್ಕಾಗ ಯಾವುದೇ ಮುಲಾಜಿಲ್ಲದೆ ನಮ್ಮ ಬೆನ್ನಿಗೆ ಚೂರಿ ಹಾಕಿ ತಮ್ಮ ಹಿತವನ್ನು ಕಾಯ್ದುಕೊಳ್ಳುವವರು. ಇದೆಲ್ಲವನ್ನೂ ನಾವು ಕತೆಗಳಲ್ಲಿ, ಕವಿತೆಗಳಲ್ಲಿ, ಇತಿಹಾಸದಲ್ಲಿ, ಪುರಾಣಗಳಲ್ಲಿ, ಸಿನೆಮಾಗಳಲ್ಲಿ ನೋಡಿರುತ್ತೇವೆ. ಆದರೆ ನಮ್ಮ ಸನಿಹವೇ ಇರುವ ಆ ಮೂರನೆಯವರನ್ನು ಗುರುತಿಸುವುದರಲ್ಲಿ ಸೋಲುತ್ತೇವೆ. ಯಾಕೆ ಹೀಗೆ?