Saturday, 14th December 2024

‘ಮಹಾತ್ಮಗಾಂಧಿ’ಯ ಹೆಸರಿನಲ್ಲಿ ಸಂವಿಧಾನ ’ಅಂಗೀಕಾರ’ವಾಗಲಿಲ್ಲವಲ್ಲ !

ವೀಕೆಂಡ್ ವಿಥ್‌ ಮೋಹನ್

ಮೋಹನ್‌ ವಿಶ್ವ

ಸಂವಿಧಾನವೆಂಬುದು ಪ್ರತಿಯೊಂದು ದೇಶದ ಆಂತರಿಕ ನಿಯಮಾವಳಿಗಳು ಇದ್ದ ಹಾಗೆ, ಒಂದು ಕುಟುಂಬವನ್ನು ನಡೆಸಲು ಹೇಗೆ ಒಂದು ಭದ್ರ ಬುನಾಧಿಯ ನಿಯಮಾವಳಿಗಳಿರುತ್ತವೆಯೋ ಒಂದು ದೇಶವನ್ನು ನಡೆಸಲೂ ಸಹ ಭದ್ರ ನಿಯಮಾವಳಿಯ
ಅಗತ್ಯವಿರುತ್ತದೆ. ಈ ನಿಯಮಾವಳಿಯ ಅಡಿಯಲ್ಲಿಯೇ ಇಡೀ ದೇಶವು ನಡೆಯ ಬೇಕಾಗುತ್ತದೆ.

ದೇಶದ ಪ್ರತಿಯೊಂದು ಕಾನೂನುಗಳು ಈ ನಿಯಮಾವಳಿಯನ್ನು ಮೀರುವಂತಿಲ್ಲ, ಯಾವುದಾದರೊಂದು ನೂತನ ಕಾನೂನ ನ್ನು ಜಾರಿಗೆ ತರಬೇಕಾದರೆ ಆ ದೇಶದ ಸಂವಿಧಾನ ದಡಿಯಲ್ಲಿಯೇ ಜಾರಿಗೆ ತರಬೇಕು, ಪ್ರಸ್ತುತವಿರುವ ಕಾನೂನಿಗೆ ತಿದ್ದುಪಡಿ
ತರಬೇಕೆಂದರೂ ಅಷ್ಟೇ ಸಂವಿಧಾನದಡಿಯಲ್ಲಿಯೇ ಜಾರಿಗೆ ತರಬೇಕು. ಸಂವಿಧಾನಕ್ಕೆ ವಿರುದ್ಧವಿರುವ ಯಾವ ಕಾನೂನು ಸಹ
ಜಾರಿಗೆ ಬರುವಂತಿಲ್ಲ. ಅದನ್ನೂ ಮೀರಿ ನೂತನ ಕಾನೂನುಗಳನ್ನೋ ಅಥವಾ ನೂತನ ತಿದ್ದುಪಡಿಯನ್ನೋ ತರಬೇಕೆಂದರೆ
ಸಂವಿಧಾನವನ್ನೇ ತಿದ್ದುಪಡಿ ಮಾಡಬೇಕು. ಹಾಗಂತ ಸಂವಿಧಾನವನ್ನು ತಿದ್ದುಪಡಿಮಾಡುವುದು ಅಷ್ಟು ಸುಲಭದ ಕೆಲಸವಲ್ಲ,
ಒಂದು ದೇಶದ ಸಂವಿಧಾನವನ್ನು ತಿದ್ದುಪಡಿ ಮಾಡುವುದೆಂದರೆ ಅಲ್ಲಿನ ಮೂಲ ನಿಯಮಾವಳಿಯನ್ನು ಬದಲಾವಣೆ ಮಾಡಿದ
ಹಾಗೆ. ಕೇವಲ ಅಗತ್ಯ ಬಿದ್ದರೆ ಮಾತ್ರ ಸಂವಿಧಾನದ ತಿದ್ದುಪಡಿ ಮಾಡಬೇಕೆ ಹೊರತು ಮನಸ್ಸಿಗೆ ತೋಚಿದ ಹಾಗೆಲ್ಲ ಮಾಡಲಾ ಗುವುದಿಲ್ಲ.

ನಿಮಗೆ ಒಂದು ಚಿಕ್ಕ ಉದಾಹರಣೆಯನ್ನು ನೀಡಬೇಕೆಂದರೆ ಬಹು ನಿರೀಕ್ಷಿತ ಜಿ.ಎಸ್.ಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತರುವ ಮೊದಲು 2016ರಲ್ಲಿ ಸಂವಿಧಾನದ ತಿದ್ದುಪಡಿಯನ್ನು ಮಾಡಲಾಯಿತು. ಭಾರತದ ಸಂವಿಧಾನವು ರಾಜ್ಯದೊಳಗಿನ ಸರಕು ವಸ್ತುಗಳ ಮಾರಾಟದ ಮೇಲಿನ ತೆರಿಗೆ ವಿಧಿಸುವ ಹಕ್ಕನ್ನು ಆಯಾ ರಾಜ್ಯಗಳಿಗೆ ನೀಡಿತ್ತು, ಸೇವಾವಲಯದ ಮೇಲೆ ವಿಧಿಸುವ ತೆರಿಗೆಯ ಹಕ್ಕನ್ನು ಕೇಂದ್ರ ಸರಕಾರಕ್ಕೆ ನೀಡಿತ್ತು. ಜಿ.ಎಸ್.ಟಿ ಅಡಿಯಲ್ಲಿ ಸರಕು ವಸ್ತುಗಳು ಹಾಗೂ ಸೇವಾವಲಯವೆಂಬ ವ್ಯತ್ಯಾಸವಿಲ್ಲದ ಕಾರಣ ದೇಶದಾದ್ಯಂತ ಒಂದೇ ತೆರಿಗೆ ಪದ್ಧತಿಯನ್ನು ಜಾರಿಗೆ ತರಬೇಕಿತ್ತು.

ಸಂವಿಧಾನದ ಪ್ರಕಾರ ಸೇವಾ ವಲಯದ ತೆರಿಗೆ ವಿಧಿಸುವ ಹಕ್ಕನ್ನು ಕೇಂದ್ರಕ್ಕೆ ಮಾತ್ರ ನೀಡಿದ್ದರಿಂದ, ನೂತನ ತೆರಿಗೆ ಪದ್ಧತಿ ಯನ್ನು ಜಾರಿಗೆ ತರಲು ರಾಜ್ಯ ಸರಕಾರಗಳಿಗೂ ತೆರಿಗೆ ವಿಧಿಸುವ ಹಕ್ಕನ್ನು ನೀಡಬೇಕಿತ್ತು, ಜೊತೆಗೆ ರಾಜ್ಯದೊಳಗಿನ ಸರಕು ವಸ್ತುಗಳ ಮಾರಾಟದ ಮೇಲಿನ ತೆರಿಗೆಯ ಹಕ್ಕನ್ನು ಕೇಂದ್ರ ಸರಕಾರಕ್ಕೆ ನೀಡಬೇಕಿತ್ತು. ಈ ಎರಡನ್ನೂ ಜಾರಿಗೆ ತರಬೇಕಿ ದ್ದರೆ ಸಂವಿಧಾನದ ತಿದ್ದುಪಡಿಯ ಅಗತ್ಯವಿತ್ತು, ಇಲ್ಲವಾದಲ್ಲಿ ಜಿಎಸ್‌ಟಿ ಕಾಯ್ದೆ ಜಾರಿಗೆ ತರಲು ಸಾಧ್ಯವಿರಲಿಲ್ಲ.

ಇದರ ಪರಿಣಾಮವಾಗಿ ಮೊದಲು ಸಂವಿಧಾನವನ್ನು ತಿದ್ದುಪಡಿ ಮಾಡಿ ನಂತರ ಜಿ.ಎಸ್.ಟಿ ಕಾಯ್ದೆಯನ್ನು ಜಾರಿಗೆ ತರಲಾಯಿ ತು. ದೇಶದ ಒಳಿತಿಗಾಗಿ ಅಥವಾ ಬಹುದೊಡ್ಡ ಸುಧಾರಣೆಯನ್ನು ಮಾಡಲು ಸಂವಿಧಾನವನ್ನು ತಿದ್ದುಪಡಿ ಮಾಡುವುದರಲ್ಲಿ ತಪ್ಪಿಲ್ಲ, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಮಾಡಿರುವ ತಿದ್ದುಪಡಿಯೆಲ್ಲವೂ ಸಹ ದೇಶದ ಒಳಿತಿಗಾಗಿಯೇ ಹೊರತು ಸ್ವಾರ್ಥ ರಾಜಕಾರಣಕ್ಕಾಗಿ ಅಲ್ಲ. ಭಾರತದ ಸಂವಿಧಾನವು ಅಂಗೀಕಾರವಾದ ನಂತರ ಒಟ್ಟಾರೆ 104 ಬಾರಿ ತಿದ್ದುಪಡಿ ಯಾಗಿದೆ.

ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಇದುವರೆಗೂ 20 ತಿದ್ದುಪಡಿಯಾಗಿವೆ. ಉಳಿದ ತಿದ್ದುಪಡಿಗಳೆಲ್ಲವೂ ಕಾಂಗ್ರೆೆಸ್ ಪೋಷಿತ ಸರಕಾರದ ಅವಧಿಯಲ್ಲಿಯೇ ಆಗಿವೆ. 1949ರಲ್ಲಿ ಮೊಟ್ಟಮೊದಲ ಬಾರಿಗೆ ಸಂವಿಧಾನದ ಕರಡು ಪ್ರತಿಯು ಚರ್ಚೆಗೆ ಬಂದಾಗ ಹಲವು ಬದಲಾವಣೆಗಳನ್ನು ಸೂಚಿಸಲಾಯಿತು, ಈ ಬದಲಾವಣೆಯಲ್ಲಿ ಜಾತ್ಯತೀತ ಹಾಗೂ ಸಮಾಜವಾದವೆಂಬ ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲು ಹಲವು ಮುಖಂಡರು ಒತ್ತಾಯಿಸಿ ದರು.

ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸ್ವತಃ ಇದಕ್ಕೆ ಒಪ್ಪಲಿಲ್ಲ,  ಅಂಬೇಡ್ಕರ್ ಅವರಿಗೆ ಸಂವಿಧಾನವನ್ನು ಕಠಿಣವಾಗಿ ರಚಿಸಲು ಇಷ್ಟವಿರಲಿಲ್ಲ. ಅವರ ದೂರದೃಷ್ಟಿ ಎಷ್ಟಿತ್ತೆಂದರೆ ಸಮಯಕ್ಕೆ ತಕ್ಕಂತೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಗಳು ಬದಲಾಗು ತ್ತಿರುತ್ತವೆ, ಆಯಾ ಕಾಲಕ್ಕೆ ತಕ್ಕಂತೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯವನ್ನು ದೇಶದ ಜನರು ನಿರ್ಧರಿಸಬೇಕೇ ಹೊರತು ಸಂವಿಧಾನದ ಮುನ್ನುಡಿಯಲ್ಲಿ ಸೇರಿಸಿದರೆ ಅದಕ್ಕೆ ಅರ್ಥವಿರುವುದಿಲ್ಲವೆಂಬುದನ್ನು ಹೇಳಿದ್ದರು, ಇದಕ್ಕೆ ಸ್ವತಃ ನೆಹರು ಸಹ ಸಹಮತ ನೀಡಿದ್ದರೆಂದು ಹೇಳಲಾಗುತ್ತದೆ.

ಮತ್ತೊಂದು ಸ್ವಾರಸ್ಯಕರ ಸಂಗತಿಯೊಂದನ್ನು ಹಂಚಿಕೊಳ್ಳುವುದಾದರೆ ಕೆಲವು ಮುಖಂಡರು ಸಂವಿಧಾನದ ಮುನ್ನುಡಿಯಲ್ಲಿ
‘ದೇವರ ಹೆಸರಿನಲ್ಲಿ’ ಅಥವಾ ‘ಮಹಾತ್ಮಾ ಗಾಂಧೀಜಿಯವರ ಹೆಸರಿನಲ್ಲಿ’ ಎಂಬ ಅಂಶವನ್ನು ಅಂಗೀಕಾರ ಮಾಡಿಕೊಳ್ಳಲು
ಸೂಚಿಸಿದ್ದರು, ಆದರೆ 68:41ರ ಬೆಂಬಲದ ಅನುಪಾತದಲ್ಲಿ ಈ ಸಲಹೆ ಕೂಡ ಅಂಗೀಕಾರವಾಗಲಿಲ್ಲ. ಇಡೀ ದೇಶವೇ ಮಹಾತ್ಮ ನೆಂದು ಒಪ್ಪಿಕೊಳ್ಳುವ ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿ ಸಂವಿಧಾನದ ಅಂಗೀಕಾರಕ್ಕೆ ಸರ್ನಾನುಮತದಿಂದ  ಒಪ್ಪಿಗೆ ಸಿಗುತ್ತದೆಯೆಂದುಕೊಂಡವರಿಗೆ ಆಶ್ಚರ್ಯ ಕಾದಿತ್ತು. 68 ಮಂದಿ ಈ ಪ್ರಸ್ತಾವನೆಯ ವಿರುದ್ಧ ಮತ ಹಾಕಿದ್ದರೆಂದರೆ ಮಹಾತ್ಮಾ ಗಾಂಧಿಯವರ ವಿರುದ್ಧದ ಅಲೆ ಎಷ್ಟಿತ್ತೆಂದು ನೀವೇ ಆಲೋಚಿಸಿ ನೋಡಿ.

ಭಾರತದ ಸಂವಿಧಾನದ ಇತಿಹಾಸದಲ್ಲಿ ಅತ್ಯಂತ ಕರಾಳವಾದ ಯುಗವೆಂದರೆ 1976ರಲ್ಲಿ ಅಂದಿನ ಕಾಂಗ್ರೆಸ್ಸಿನ ಪ್ರಧಾನಿ
ಇಂದಿರಾ ಗಾಂಧಿ ಮಾಡಿದ ತಿದ್ದುಪಡಿಗಳು. ಒಂದು ದೇಶದ ಅಸ್ತಿತ್ವವು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ
ಮೇಲೆ ನಿಂತಿರುತ್ತದೆ. ಸರಕಾರವು ಮಾಡಿದ ಕಾನೂನುಗಳನ್ನು ಕಾರ್ಯಾಂಗವು ಜಾರಿಗೊಳಿಸಿದರೆ, ಸರಕಾರ ಹಾಗೂ ಕಾರ್ಯಾಂಗ ಗಳ ನಡುವೆ ಕಾನೂನಿನ ತೊಡಕುಗಳು ಬಂದಾಗ ನ್ಯಾಯಾಂಗವು ತೀರ್ಮಾನಿಸುತ್ತದೆ, ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅಲ್ಲಿ ಆದದ್ದೇ ಬೇರೆ, ಇಂದಿರಾ ಗಾಂಧಿಯವರ ಚುನಾವಣೆಯಲ್ಲಿ ನಡೆದ ಅಕ್ರಮದ ತನಿಖೆಯನ್ನು ಪರಿಶೀಲಿಸಿದ ಅಂದಿನ ನ್ಯಾಯಪೀಠವು ಅವರ ಚುನಾವಣೆಯಲ್ಲಿ ನಡೆದಿದ್ದ ಅಕ್ರಮವನ್ನು ಎತ್ತಿ ಹಿಡಿದು ತೀರ್ಪು ನೀಡಿತ್ತು.

ಇದರಿಂದ ವಿಚಲಿತಗೊಂಡಂಥ ಸರ್ವಾಧಿಕಾರಿ ಇಂದಿರಾ ಗಾಂಧಿ ಸಂವಿಧಾನವನ್ನೇ ತಿದ್ದುಪಡಿ ಮಾಡಿ ನ್ಯಾಯಾಲಯದ ವ್ಯಾಪ್ತಿ ಯನ್ನೇ ಕುಂಠಿತಗೊಳಿಸಿದ್ದರು. ಈ  ತಿದ್ದುಪಡಿಯ ಪ್ರಭಾವ ಹೇಗಿತ್ತೆಂದರೆ, ಸಾರ್ವಭೌಮ ಭಾರತದ ಬಹುಮುಖ್ಯ ಅಂಗ ವಾಗಿದ್ದ ನ್ಯಾಯಾಂಗ ವ್ಯವಸ್ಥೆನ್ನೇ ಬುಡಮೇಲಾಗಿಸಿತ್ತು. ಇದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯ ಇಂದಿರಾ ಗಾಂಧಿ ಸರಕಾರವು ಮಾಡಿದ ಈ ತಿದ್ದುಪಡಿಯು ದೇಶದ ಮೂಲ ಅಸ್ತಿತ್ವವನ್ನೇ ಅಲುಗಾಡಿಸಿದೆಯೆಂದು ಹೇಳಿತ್ತು. ಇಷ್ಟಾದರೂ ಇಂದಿರಾ ಗಾಂಧಿ ಯವರಿಗೆ ಬುದ್ಧಿ ಬರಲಿಲ್ಲ, ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಸರಕಾರದ ವಿರುದ್ಧ ಯಾರು ಪ್ರತಿಭಟನೆಯನ್ನು ಮಾಡುತ್ತಾರೋ ಅವರನ್ನು ಜೈಲಿಗೆ ಹಾಕುವ ಸರ್ವಾಧಿಕಾರವನ್ನು ಸಂವಿಧಾನದ ತಿದ್ದುಪಡಿಯ ಮೂಲಕ ಸರಕಾರಕ್ಕೆ ನೀಡಲಾಯಿತು. ಸಿಕ್ಕ ಸಿಕ್ಕ ಪ್ರತಿಭಟನಾಕಾರರನ್ನು ಜೈಲಿಗಟ್ಟಲಾಯಿತು. ಮಾಧ್ಯಮದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತು, ಪತ್ರಿಕೆಯೊಂದು ಇಂದಿರಾ ಸರಕಾರದ ವಿರುದ್ಧ ಬರೆದರೆ ಸಾಕು ಅದರ ಸಂಪಾದಕನನ್ನು ಜೈಲಿಗೆ ಹಾಕಲಾಗುತ್ತಿತ್ತು.

ಸುಬ್ರಮಣ್ಯಂ ಸ್ವಾಮಿಯಂಥ ತರುಣ ಯುವಕರೂ (1976ರಲ್ಲಿ) ಸಹ ಜೈಲಿಗೆ ಹೋಗಬೇಕಾಯಿತು. ದೆಹಲಿಯ ಶ್ರೀ ರಾಮ್ ಕಾಲೇಜಿನಲ್ಲಿ ಓದುತ್ತಿದ್ದ ‘ಅರುಣ್ ಜೇಟ್ಲಿ’ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಪರಿಣಾಮವಾಗಿ ಜೈಲಿಗೆ ಹೋಗಬೇಕಾಯಿತು. ಇಂತಹ ತಿದ್ದುಪಡಿಯನ್ನು ಪ್ರಶ್ನಿಸುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವಷ್ಟರಲ್ಲಿ ಇಂದಿರಾ ಗಾಂಧಿ ತನ್ನ ಅಧಿಕಾರವನ್ನು ಬಳಸಿ ನೇಮಿಸಿದ್ದ ನ್ಯಾಯಮೂರ್ತಿ ತಿದ್ದುಪಡಿಯನ್ನು ಎತ್ತಿ ಹಿಡಿಯುವ ಮೂಲಕ, ಸರಕಾರದ ವಿರುದ್ಧ ಮಾತನಾಡಿದವರ ಬಂಧನವು ಮತ್ತಷ್ಟು ತೀವ್ರವಾಯಿತು. ಮಾತು ಮಾತಿಗೂ ಸಂವಿಧಾನದ ತಿದ್ದುಪಡಿಯ ವಿಚಾರವಾಗಿ ನರೇಂದ್ರ ಮೋದಿ ಯವರನ್ನು ಟೀಕಿಸುವ ಕಾಂಗ್ರೆಸ್ಸಿಗರಿಗೆ ತಮ್ಮ ಅಧಿನಾಯಕಿ ತನ್ನ ಸ್ವಾರ್ಥಕ್ಕಾಗಿ ಮಾಡಿದ ಸಂವಿಧಾನದ ತಿದ್ದುಪಡಿಯ ನೆನಪಾಗುವುದಿಲ್ಲ.

‘ವಾಕ್ ಸ್ವಾತಂತ್ರ್ಯ’ವನ್ನು ಕಸಿದುಕೊಂಡು ತನಗಿಷ್ಟಬಂದಂತೆ ಸರ್ವಾಧಿಕಾರ ನಡೆಸಿದ ಕೀರ್ತಿ ‘ಇಂದಿರಾ ಗಾಂಧಿ’ಗೆ ಸಲ್ಲಬೇಕು.
ತನ್ನ ಸ್ವಾರ್ಥಕ್ಕೋಸ್ಕರ ಸಂವಿಧಾನವನ್ನು ಅಡ್ಡ ದಿಡ್ಡಿಯಾಗಿ ತಿದ್ದುಪಡಿ ಮಾಡಿದಂಥ ಕಾಂಗ್ರೆಸ್ಸಿನ ನಾಯಕಿ ಇಂದಿರಾ
ಗಾಂಧಿಯ ಹಿಂಬಾಲಕರು, ಇಂದು ಮಾತು ಮಾತಿಗೂ ಜನರ ತಲೆಯಲ್ಲಿ ಸಂವಿಧಾನದ ವಿಚಾರವಾಗಿ ಸುಳ್ಳುಗಳನ್ನು ತುಂಬುವ
ಪ್ರಯತ್ನ ಮಾಡುತ್ತಿರುತ್ತಾರೆ.

‘ಅನಂತ ಕುಮಾರ್ ಹೆಗ್ಡೆ ಸಂವಿಧಾನವನ್ನು ತಿದ್ದುಪಡಿ ಮಾಡಲು ನಾವು ಸಿದ್ದ’ನೆಂದು ಒಂದೇ ಒಂದು ಹೇಳಿಕೆ ನೀಡಿದ್ದರ ಪರಿಣಾಮವಾಗಿ ಸಂಸತ್ತಿನಲ್ಲಿ ಕ್ಷಮೆಯಾಚಿಸು ವಂತಾಯಿತು, ಆದರೆ ಅದೇ ಜಾಗದಲ್ಲಿ ತನ್ನ ಸ್ವಾರ್ಥ ರಾಜಕೀಯ ಜೀವನಕ್ಕಾಗಿ ಇಂದಿರಾ ಗಾಂಧಿ ಮಾಡಿದ ಅನಾಹುತಗಳಿಗೆ ಕ್ಷಮೆ ಕೇಳುವ ನೈತಿಕತೆ ಕಾಂಗ್ರೆಸ್ಸಿನವರಿಗಿದೆಯೇ? ಸಂವಿಧಾನದ ದಿವಸದಂದು ಸಂವಿಧಾನದ ಮುನ್ನುಡಿಯನ್ನು ಓದುವ ಮೂಲಕ ತಾವು ಸಂವಿಧಾನಕ್ಕೆ ಬದ್ಧನೆಂದು ಪುಂಗಿ ಊದುವ ಕಾಂಗ್ರೆಸ್ಸಿಗರಿಗೆ, ಸಂವಿಧಾನದ ಮುನ್ನುಡಿಯಲ್ಲಿನ ಅಂಶಗಳಿಗೆ ಇಂದಿರಾ ಗಾಂಧಿ ಮಾಡಿರುವ ಅವಮಾನದ ಅರಿವಿದೆಯೇ? ಸಂವಿಧಾನದ ಮುನ್ನುಡಿಯಲ್ಲಿರುವ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಂಥ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ‘ಸಮಾಜವಾದ’ ‘ಜಾತ್ಯತೀತತೆ’ಯ ಅಂಶಗಳನ್ನು ಬಳಸಿಕೊಂಡು ದಶಕಗಳಿಂದ ಮತ ಬ್ಯಾಂಕ್ ರಾಜಕೀಯ ಮಾಡಿದ್ದು ಇದೇ ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರು. ‘ಜಾತ್ಯತೀತತೆ’ಯೆಂದರೆ ಜಾತಿಯನ್ನೂ ಮೀರಿದಂಥ ಆಚರಣೆ, ಜಾತಿ ಯನ್ನೂ ಮೀರಿದಂಥ ಆಡಳಿತ, ಜಾತಿಯನ್ನೂ ಮೀರಿದಂಥ ನ್ಯಾಯ. ಆದರೆ ಇವರು ಆಡಳಿತ ನಡೆಸಿದ್ದು ಮಾತ್ರ ಇದರ ತದ್ವಿರುದ್ದ. ಇವರ ಪ್ರಖಾರ ‘ಜಾತ್ಯತೀತ’ರೆಂದರೆ ಕೇವಲ ಮುಸಲ್ಮಾನರು ಹಾಗೂ ದಲಿತರು.

ಜಾತ್ಯತೀತೆಯ ಸೋಗಿನಲ್ಲಿ ಇವರಿಬ್ಬರನ್ನೂ ಪ್ರತಿಯೊಂದು ಚುನಾವಣೆಯಲ್ಲೂ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿ
ಕೊಂಡರು. ಜಾತ್ಯತೀತತೆಯಡಿಯಲ್ಲಿರುವ ಹಿಂದೂಗಳು, ಸಿಕ್ಕರು, ಜೈನರು, ಪಾರ್ಸಿಗಳು ಇವರಿಗೆ ನೆನಪಾಗಲೇ ಇಲ್ಲ. ಮುಸಲ್ಮಾಾನರು ಹಾಗೂ ದಲಿತರನ್ನು ಚುನಾವಣೆಗಾಗಿ ಬಳಸಿಕೊಂಡರೆ ಹೊರತು ಅವರ ಉದ್ದಾರಕ್ಕಂತೂ ಶ್ರಮಿಸಲಿಲ್ಲ.
ಇಂದಿಗೂ ಇವರಿಬ್ಬರನ್ನು ಸಮಾಜದ ಹಿಂದುಳಿದ ವರ್ಗದಡಿಯಲ್ಲಿಯೇ ಸೇರಿಸಿ ರಾಜಕಾರಣ ಮಾಡುತ್ತಾರೆ. ಸಂವಿಧಾನ ಪೀಠಿಕೆಯ ಮತ್ತೊಂದು ಪ್ರಮುಖ ಅಂಶವೆಂದರೆ ‘ಅಭಿವ್ಯಕ್ತಿ’ ಸ್ವಾತಂತ್ರ್ಯ, ಇಂದಿರಾ ಗಾಂಧಿ ತಮ್ಮ ಸರಕಾರದ ವಿರುದ್ಧ ಕೂಗಿದವರನ್ನು ಜೈಲಿಗಟ್ಟುವ ಮೂಲಕ ‘ಅಭಿವ್ಯಕ್ತಿ’ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದರು.

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ‘ಅರ್ನಬ್ ಗೋಸ್ವಾಮಿ’ಯನ್ನು ಜೈಲಿಗೆ ಕಳುಹಿಸುವ ಮೂಲಕ ಕಾಂಗ್ರೆಸ್ ಬೆಂಬಲಿತ ‘ಶಿವಸೇನಾ’ ಸರಕಾರ ಮತ್ತದನ್ನೇ ಮಾಡಿತು. ಭಾರತದ ವಿರುದ್ಧ ನೀಡುವ ದೇಶದ್ರೋಹಿ ಹೇಳಿಕೆಗಳನ್ನು ಹತ್ತಿಕ್ಕಲು ‘ಅಭಿವ್ಯಕ್ತಿ’
ಸ್ವಾತಂತ್ರ್ಯವನ್ನು ಬಳಸುವಂತಿಲ್ಲ, ಅಪ್ಪಿ ತಪ್ಪಿ ಬಳಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮದೇ ಸಂವಿಧಾನ ಹೇಳಿದೆ. ಭಾರತದ ವಿರುದ್ಧ ಹೇಳಿಕೆ ನೀಡುವುದೆಂದರೆ ‘ಸಾರ್ವಭೌಮತ್ವ’ಕ್ಕೆ ಧಕ್ಕೆಯುಂಟು ಮಾಡಿದ ಹಾಗೆ, ಹಾಗಾಗಿ
ಅಂತಹವರ ವಿರುದ್ಧ ಯಾವುದೇ ಕ್ರಮ ಬೇಕಾದರೂ ಕೈಗೊಳ್ಳಬಹುದಾಗಿದೆ.

‘ಪೌರತ್ವ ತಿದ್ದುಪಡಿ ಕಾಯ್ದೆ’ಯ ವಿರುದ್ಧದ ಹೋರಾಟದಲ್ಲಿ ಕಮ್ಯುನಿಸ್‌ಟ್‌ ಬೆಂಬಲಿತ ಕೆಲವರು ಭಾರತದ ವಿರುದ್ಧ ಹಲವಾರು ಹೇಳಿಕೆಗಳನ್ನು ನೀಡಿದ್ದರು, ಅಂತಹ ಸಂದರ್ಭದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು, ಇದರಿಂದ ಅವರ ‘ಅಭಿವ್ಯಕ್ತಿ’ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಬಂದಿರಲಿಲ್ಲ. ಅತ್ತ ಕಾಶ್ಮೀರದಲ್ಲಿ ಸಂವಿಧಾನದ ಪರಿಚ್ಛಯ 370ರ ರದ್ಧತಿಯ ಸಂದರ್ಭದಲ್ಲಿ ಕೆಲವು ‘ನಾಯಕರನ್ನು’ ಗೃಹ ಬಂಧನದಲ್ಲಿರಿಸಲಾಯಿತು, ಅಲ್ಲಿಯೂ ಅಷ್ಟೇ ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವು ಇತರೆ ರಾಜ್ಯಗಳ ವಿರುದ್ಧವಾಗಿತ್ತು.

ಭಾರತದ ಇತರ ರಾಜ್ಯಗಳೆಲ್ಲವೂ ಪರಿಚ್ಛಯ 370ರ ರದ್ಧತಿಗೆ ಬೆಂಬಲಿಸಿದ ಮೇಲೆ ‘ಗೃಹ ಬಂಧನ’ವನ್ನು ‘ಅಭಿವ್ಯಕ್ತಿ’ ಸ್ವಾತಂತ್ರ್ಯಕ್ಕ ತಂದಂಥ ಧಕ್ಕೆ ಎನ್ನಲು ಸಾಧ್ಯವಿಲ್ಲ. ‘ಭಾರತವನ್ನು ತುಂಡು ತುಂಡಾಗಿ ಮಾಡಬೇಕು’ ಎಂದವನ ಪರವಾಗಿ ‘ಅಭಿವ್ಯಕ್ತಿ’ ಸ್ವಾತಂತ್ರ್ಯದ ಕೂಗು ಕೇಳಿಬಂತು, ಆದರೆ ಅವನ ದೇಶದ್ರೋಹಿ ಹೇಳಿಕೆಯಿಂದ ಭಾರತದ ‘ಸಾರ್ವಭೌಮತ್ವ’ಕ್ಕೆ ಧಕ್ಕೆಯುಂಟಾಗಿತ್ತು. ಭಾರತದ ಈಶಾನ್ಯ ಭಾಗವನ್ನು ಸಂಪರ್ಕಿಸುವ ‘ಚಿಕನ್ ನೆಕ್’ ಭಾಗವನ್ನು ನಿರ್ಬಂದಿಸಬೇಕೆಂಬ ಹೇಳಿಕೆಯನ್ನು ನೀಡಿದಾಗಲೂ ಅಷ್ಟೇ ಸಂವಿಧಾನದ ಪೀಠಿಕೆಯ ‘ಸಾರ್ವಬೌಮತ್ವ’ಕ್ಕೆ ಧಕ್ಕೆಯಾಗಿತ್ತು, ಇಂತಹವರನ್ನು ಬಂಧಿಸಿ ಜೈಲಿಗೆ ಕಳುಹಿಸುವುದರ ಮೂಲಕ ಭಾರತ ಸಂವಿಧಾನದಕ್ಕೆ ಗೌರವ ನೀಡಲಾಯಿತು.

ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರತಿಭಟನೆ ಮಾಡಿದವರ್ಯಾಾರೂ ಸಹ ಭಾರತದ ಸಾರ್ವಭೌಮತ್ವ’ಕ್ಕೆ ಧಕ್ಕೆ ತಂದಿರಲಿಲ್ಲ, ಆದಾಗ್ಯೂ ಅವರನ್ನೆಲ್ಲ ಬಂಧಿಸಿ ಜೈಲಿಗಟ್ಟಲಾಗಿತ್ತೆಂಬ ಸತ್ಯವನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು.
ಸಂವಿಧಾನ ಪೀಠಿಕೆಯ ಮತ್ತೊಂದು ಪ್ರಮುಖ ಅಂಶವೆಂದರೆ ‘ಧರ್ಮ’ ಹಾಗೂ ‘ಉಪಾಸನ’ ಸ್ವಾತಂತ್ರ್ಯ, ಧರ್ಮ ಸ್ವಾತಂತ್ರ್ಯವೆಂದರೆ ಭಾರತದಲ್ಲಿ ಯಾರು ಯಾವ ಧರ್ಮವನ್ನು ಬೇಕಾದರೂ ಪಾಲಿಸಬಹುದಾಗಿದೆ. ಇದರರ್ಥ ಧರ್ಮ ಪಾಲನೆಯೆಂಬುದು ಅವರವರ ಮನಸ್ಸಿನಿಂದ ಬರಬೇಕೆ ಹೊರತು ಮತ್ಯಾರೋ ಹೇರುವುದರಿಂದ ಬರಬಾರದು. ಒಂದು ಧರ್ಮದ ಆಚರಣೆಯು ಮತ್ತೊಂದು ಧರ್ಮಕ್ಕೆ ಅಡ್ಡಿಿಯನ್ನುಂಟು ಮಾಡಿದರೆ ಮತ್ತೊಂದು ಧರ್ಮಕ್ಕೆ ‘ಸಾಮಾಜಿಕ’ನ್ಯಾಯವೇ ಸಿಕ್ಕಂತಾಗು ವುದಿಲ್ಲ.

ಸಂವಿಧಾನದ ಪೀಠಿಕೆಯನ್ವಯ ‘ಸಾಮಾಜಿಕ’ ನ್ಯಾಯವನ್ನು ಭಾರತದ ಪ್ರತಿಯೊಬ್ಬ ಪ್ರಜೆಗೂ ನೀಡಲೇಬೇಕಿದೆ, ಹಾಗಾಗಿ
‘ಧರ್ಮ’ಆಚರಣೆಯ ಸ್ವಾತಂತ್ರ್ಯದ ನೆಪದಲ್ಲಿ ಸಾಮಾಜಿಕ ನ್ಯಾಯವನ್ನು ಮರೆಯಬಾರದು. ಸಂವಿಧಾನದ ಅಡಿಯಲ್ಲಿ
ಮತ್ತೊಂದು ಧರ್ಮಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರಕಾರಗಳ ಆದ್ಯ ಕರ್ತವ್ಯ, ಆದರೆ ಅದುದ್ದಾದರೂ
ಏನು? ಪಶಿಮ ಬಂಗಾಳದಲ್ಲಿ ‘ಈದ್ ಮಿಲಾದ್’ ‘ಮೊಹರಂ’ ನಂದು ನಡೆಯುವ ಮೆರವಣಿಗೆಗಳಿಗೆ ಸರಕಾರದ ಅನುಮತಿಯು ಅನಾಯಾಸವಾಗಿ ಸಿಗುತ್ತದೆ, ಆದರೆ ‘ದುರ್ಗಾಷ್ಟಮಿ’ಯಾ ಮೆರವಣಿಗೆಗೆ ಬೇಕಿರುವ ಅನುಮತಿಯೂ ಸಿಗುವುದಿಲ್ಲ.

‘ಗಣೇಶ ಚತುರ್ಥಿ’ಯ ಸಂದರ್ಭದಲ್ಲಿ ಸಂಜೆ ಹತ್ತು ಗಂಟೆಯ ನಂತರ ವಾದ್ಯಗೋಷ್ಠಿಯನ್ನು ನಡೆಸುವಂತಿಲ್ಲ,  ಮೆರವಣಿಗೆ ಯನ್ನು ನಡೆಸುವಂತಿಲ್ಲ. ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯುವಂತಿಲ್ಲ. ‘ಧರ್ಮ’ ಸ್ವಾತಂತ್ರ್ಯ ಕೇವಲ ಒಂದು ಧರ್ಮಕ್ಕೆ ಮಾತ್ರ ಮೀಸಲೇ? ಆಯುಧ ಪೂಜೆಯಂದು ಸಂವಿಧಾನವನ್ನಿಟ್ಟು ಪೂಜೆ ಮಾಡುವ ಶಾಸಕಿ ‘ಸೌಮ್ಯ ರೆಡ್ಡಿ’ಗೆ ತಾನು ಕೇವಲ
ಒಂದು ಧರ್ಮದ ಆಚರಣೆಗಳಿಗೆ ಗಂಟುಬಿದ್ದದ್ದು ಸಂವಿಧಾನದ ಪೀಠಿಕೆಯ ವಿರುದ್ಧವೆಂದು ತಿಳಿದಿಲ್ಲವೇ? ಹಾಗಾದರೆ ಇವರಿಗೆಲ್ಲ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವಲ್ಲ. ಏಸುವಿನ ಚಿತ್ರದ ಪಕ್ಕದಲ್ಲಿ ಗಣೇಶನ ಚಿತ್ರವಿಟ್ಟು ಪೂಜೆ ಮಾಡುವ ಮೂಲಕ, ಬಲವಂತವಾಗಿ ‘ಧರ್ಮ’ವನ್ನು ಜನರ ತಲೆಯಲ್ಲಿ ತುರುಕುವ ಕೆಲಸ ಮಾಡಿದರಲ್ಲ, ಅದೂ ಸಹ ಸಂವಿಧಾನದ ‘ಧರ್ಮ’ ಸ್ವಾತಂತ್ರ್ಯದ ವಿರುದ್ಧವಲ್ಲದೆ ಮತ್ತೇನು? ‘ಧರ್ಮ’ ಸ್ವಾತಂತ್ರ್ಯ ವಿದೆ ಎಂದಾಕ್ಷಣ ಬಲವಂತವಾಗಿ ಮತಾಂತರ ಮಾಡುವುದಲ್ಲ ಅಥವಾ ತಲೆಯನ್ನು ಹಾಳು ಮಾಡಿ ಇತರೆ ಧರ್ಮದ ಅಮಲನ್ನು ತಲೆಯಲ್ಲಿ ತುಂಬುವುದಲ್ಲ, ಇದರಿಂದ ಇತರ
‘ಧರ್ಮ’ಕ್ಕೆ ಧಕ್ಕೆ ಬರುವುದರಿಂದ, ಮತಾಂತರವೂ ಸಹ ಸಂವಿಧಾನದ ಮೂಲ ‘ಪೀಠಿಕೆ’ಯ ವಿರುದ್ಧವಾಗಿದೆ.

ಸಂವಿಧಾನದ ‘ಪೀಠಿಕೆಯನ್ನು’ ಕೇವಲ ಓದಿದರೆ ಸಾಲದು. ಅದರ ಹಾದಿಯಲ್ಲಿ ಭಾರತವು ನಡೆಯುತ್ತಿದೆಯೇ ಎಂಬ ಗಂಭೀರ ಸಂಗತಿಯನ್ನು ಚರ್ಚಿಸಬೇಕಿದೆ. ಹಲವಾರು ವರ್ಷಗಳ ಅಧ್ಯಯನದ ಫಲದಿಂದ ನಮ್ಮ ಸಂವಿಧಾನವನ್ನು ರಚಿಸಲಾಗಿದೆ, ಅಷ್ಟೊಂದು ಕಷ್ಟ ಪಟ್ಟು ರಚಿಸಿ, ಅಂಗೀಕರಿಸಿದ ಭಾರತದ ಸಂವಿಧಾನವನ್ನು ಬಳಸಿಕೊಂಡು ಹೀನಾಯ ರಾಜಕೀಯ ಮಾಡಿದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲಬೇಕು.

ಹಿಂದೆಯೂ ಮಾಡಿದಲ್ಲದೆ ಈಗಲೂ ಮಾಡುತ್ತಲೇ ಇದೆ. ಮಾತೆತ್ತಿದರೆ ಸಂವಿಧಾನವನ್ನು ಅಡ್ಡ ತಂದು ಜನರ ಮನಸ್ಥಿತಿ ಯೊಂದಿಗೆ ಆಟವಾಡುವ ಪಕ್ಷವಿದು. ಸಂವಿಧಾನದ ಪೀಠಿಕೆಯಲ್ಲಿನ ಒಂದೊಂದು ಅಂಶವನ್ನು ವಿವರವಾಗಿ ಅಧ್ಯಯನ ಮಾಡುತ್ತಾ ಹೋದರೆ, ಆ ಅಂಶಗಳನ್ನು ಬಳಸಿಕೊಂಡು ರಾಜಕೀಯ ಮಾಡುವ ಸಾವಿರಾರು ಘಟನೆಗಳು ಸಿಗುತ್ತವೆ. ಇವರ ಜೊತೆಗೆ ಕೈ ಜೋಡಿಸಿದ ಕಮ್ಯುನಿಸ್ಟರಂತೂ ಹೇಗಾದರೂ ಮಾಡಿ ‘ಹಿಟ್ಲರ’ನ ರೀತಿಯಲ್ಲಿ ಭಾರತದಲ್ಲಿ ಆಡಳಿತ ನಡೆಸಬೇಕೆಂಬ
ಆಸೆಯನ್ನಿಟ್ಟುಕೊಂಡು ಹಲವು ಬಾರಿ ‘ಸಂವಿಧಾನ’ದ ಮೂಲ ಪೀಠಿಕೆಗಳ ವಿರುದ್ಧ ನಡೆದು ಕೊಳ್ಳುತ್ತಿರುತ್ತಾರೆ.

ಒಳಗಿದ್ದುಕೊಂಡೇ ದೇಶವನ್ನು ತುಂಡು ತುಂಡು ಮಾಡುವ ಹುನ್ನಾರ ಕಮ್ಯುನಿಸ್ಟರದ್ದು, ಮೊದಮೊದಲು ರಷ್ಯಾದಿಂದ
ಇವರಿಗೆ ಹಣದ ಸರಬರಾಜಾಗುತ್ತಿತ್ತು, ನಂತರ ‘ಅಮೆರಿಕಾ’ದ ಗುಪ್ತಚರ ಸಂಸ್ಥೆ ಹಣವನ್ನು ನೀಡುತ್ತಿತ್ತು, ನಂತರ ‘ಚೀನಾ’ ದೇಶವು ಇವರಿಗೆ ಹಣ ನೀಡಲು ಶುರು ಮಾಡಿತ್ತು, ಈಗ ಚೀನಾ ಹಾಗೂ ಪಾಕಿಸ್ತಾನದಿಂದಲೂ ಇವರಿಗೆ ಹಣ ಸಂದಾಯವಾಗುತ್ತದೆ. ವಿಪರ್ಯಾಸ ನೋಡಿ ಇಂತಹವರ ಬಾಯಲ್ಲಿ ನಾವುಗಳು ‘ಸಂವಿಧಾನ’ ಪೀಠಿಕೆಯ ಪಠನೆ ಕೇಳಬೇಕು, ಇದೆಲ್ಲುದರ ಒಟ್ಟಾರೆ ‘ಸಾರಾಂಶ’ವೆಂದರೆ, ‘ಸಂವಿಧಾನ’ದ ಪೀಠಿಕೆಯಲ್ಲಿನ ಅಂಶಗಳನ್ನು ಬಳಸಿಕೊಂಡು ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರು ಅದರ ವಿರುದ್ಧ ಹೆಚ್ಚಿನ ರಾಜಕೀಯ ಮಾಡಿದರೆ ಹೊರತು ಅದರಲ್ಲಿನ ಅಂಶಗಳನ್ನು ಜಾರಿಗೆ ತರುವಲ್ಲಿ ಶ್ರಮ ವಹಿಸಲಿಲ್ಲ