Saturday, 14th December 2024

ಪಥ ಬದಲಿಸಿದ ಬದುಕಿನ ಸಂಕ್ರಮಣದಲ್ಲಿ

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ನೆಮ್ಮದಿಯ ಬದುಕು ನಡೆಸಲು ಹಣ ಎಷ್ಟು ಅವಶ್ಯಕ ಅನ್ನುವುದು ಆಗಲೇ ಅರಿವಿಗೆ ಬಂದಿದ್ದು. ಅವರ ಯಾವ ಕೆಲಸ ಕಾರ್ಯಗಳಲ್ಲೂ ಭಾಗಿಯಾಗದೆ ಸುಮ್ಮನೆ ಅವರಿಂದ ಪಡೆಯುವ ಹಣ ಹೊರೆಯೆನಿಸತೊಡಗಿತು. ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಜನ ಎಲ್ಲರೂ ಹಿಮವಂತನನ್ನು ಪ್ರಶ್ನೆಗಳೊಳಗೆ ಸಿಕ್ಕಿಸಿ ಉತ್ತರ ಪಡೆದುಕೊಳ್ಳತೊಡಗಿದರು.

ಬೆಕ್ಕಿನ ಮರಿಯ ಹಾಗೆ ಸದಾ ಕಂಫರ್ಟ್ ಝೋನ್ ಹುಡುಕಿಕೊಂಡು ಬೆಚ್ಚಗಿದ್ದುಬಿಡುವ ಮನಸ್ಥಿತಿ ನನ್ನದು. ಆದರೆ ನಿಷ್ಕರುಣಿಯಾದ ಬದುಕು ದರದರನೆ ಎಳೆದು ತಂದು ನನ್ನನ್ನು ಸಮಾಜದ ಮುಂದೆ ನಿಲ್ಲಿಸಿ Face the world now ಎಂದು ಗಹಗಹಿಸಿ ನಕ್ಕಿದೆ. ಕೆಲವೊಮ್ಮೆ ಮೌನವಾಗಿ, ಕೆಲವೊಮ್ಮೆ ಸಹನೆಯಿಂದ, ಕೆಲವೊಮ್ಮೆ ನಿರ್ಲಕ್ಷ್ಯದಿಂದ, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಆಕ್ರೋಶದಿಂದ ಸಮಯಕ್ಕೆ ತಕ್ಕಂತೆ ಸ್ಪಂದಿಸಿದ್ದೇನೆ.

Ultimately what I expect from this life? ಎಂದು ಆತ್ಮಾವಲೋಕನ ಮಾಡಿಕೊಂಡಾಗ I expect happiness, peace and comfort  ಅನ್ನುವುದು ಪದೇ ಪದೆ ಅರಿವಿಗೆ ಬಂದಿದೆ. ಆದರೆ ಇದೆಲ್ಲ ಯಾವು ದರಿಂದ ಸಿಗುತ್ತದೆ ಅನ್ನುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ! ಸತ್ಯ ಹರಿಶ್ಚಂದ್ರನೆದುರು ವಿಶ್ವಾಮಿತ್ರ ಹಾಕಿದ ಕರಾರಿನಂತೆ ಎತ್ತರದ ಆನೆಯ ಮೇಲೆ ನಿಂತು ಚಿಮ್ಮಿಸಿದ ನಾಣ್ಯ ಎಷ್ಟು ಎತ್ತರಕ್ಕೆ ಚಿಮ್ಮುವುದೋ ಅಷ್ಟೆತ್ತರಕ್ಕೆ ಹಣ-ಐಶ್ವರ್ಯ-ಸಂಪತ್ತು ಎಲ್ಲವೂ ಸಿಕ್ಕರೆ ಆಗ ಈ ಜಗತ್ತಿನಲ್ಲಿ ಅತ್ಯಂತ ಸಂತೋಷದಿಂದಿರುವ ವ್ಯಕ್ತಿ ನಾನಾಗುತ್ತೇನಾ? ಬೇಕೆನಿಸಿದ್ದೆಲ್ಲ ಕೊಂಡುಕೊಳ್ಳುವಂಥ ಸಾಮರ್ಥ್ಯ ನನ್ನದಾದರೆ ಆಗ ಹೆಚ್ಚು ಸಂತೋಷ ಸಿಗಬಹುದಾ? ಅಥವಾ ದೇವರಂತೆ ನನ್ನ ಒಂದು ಕಣ್ಣ ಇಶಾರೆಯಿಂದಲೇ ಎಲ್ಲವನ್ನೂ ಅದಲು ಬದಲು ಮಾಡುವ ಶಕ್ತಿ ನನ್ನದಾದಾಗ ನಾನು ಹೆಚ್ಚು ಸಂತೋಷ ಉಳ್ಳವಳಾಗುತ್ತೇನಾ? ಉಹುಂ ಅದ್ಯಾವುದೂ ಅಲ್ಲ.

ಬಯಸಿದಾಗ ಬಯಸಿದ್ದು ಸಿಕ್ಕಾಗ ಉಂಟಾಗುವ ಆನಂದಕ್ಕೆ ಎಣೆಯುಂಟೆ? ಸಂತೋಷ ಅನ್ನುವುದು ಪ್ರತಿಯೊಂದು ವಸ್ತುವಿನಲ್ಲೂ ಇದೆ. ಆದರೆ ಅದು ನಮಗೆ ಒಲಿಯುವುದು ನಮ್ಮ ಬಯಕೆ ಈಡೇರಿದಾಗ ಮಾತ್ರ. ತರಕಾರಿ ತರಲು ಮಾರುಕಟ್ಟೆಗೆ ಹೋದ ಅಮ್ಮ ಬರುವಾಗ ಮರೆಯದೇ ನನಗಾಗಿ ಚಾಕೊಲೇಟ್ ತಂದೇ ತರುತ್ತಾಳೆ ಅನ್ನುವ ಆಸೆಯಿಂದ ಎದುರು ನೋಡುವ ಮಗುವಿನ ಮನಸಿನಂಥದ್ದು ಅದು. ಬರುವುದೇನುಂಟು ಬರುವ ಕಾಲಕೆ ಬಹುದು. ಬಯಕೆ ಬರುವ ಕನ್ಸನ್ನೆ ಕಾಣೋ… ಎನ್ನುವ ಮಧುರ ಚೆನ್ನರ ಕವಿತೆಯ ಸಾಲು ಗಳನ್ನು ರವಿ ಲೆಕ್ಕವಿಡಲಾಗದಷ್ಟು ಸಲ ಹೇಳಿದ್ದಾರೆ.

ಬಹುಶಃ ಸಂತೋಷ ಹಾಗೂ ನೆಮ್ಮದಿ ಅನ್ನುವುದು ಪರಸ್ಪರ ವಿರುದ್ಧ ದಗಳಿರಬೇಕು. ಹೀಗಾಗಿ ಒಂದರ ಹಾಜರಿಯಿದ್ದ ಕಡೆ ಮತ್ತೊಂದರ ಗೈರು ಹಾಜರಿ! ಹಾಗಂತ ನಾನು ಹಣದ ವಿರೋಧಿಯೇನಲ್ಲ. ನನ್ನ ಪರಿಶ್ರಮದ ಹಣವನ್ನು ಸದಾ ಜತನದಿಂದ ಎತ್ತಿಡುತ್ತೇನೆ. ಅದು ಒಂದು ರುಪಾಯಿಯೇ ಇರಲಿ ಒಂದು ಕೋಟಿಯೇ ಇರಲಿ. ಮತ್ತೊಬ್ಬರ ಹಣಕ್ಕಾಗಿ ಎಂದಿಗೂ ಆಸೆ ಪಟ್ಟಿದ್ದೇ ಇಲ್ಲ. ಅವರ ಬಳಿ ಅಷ್ಟು ವೈಭವದ ಬಂಗಲೆಯಿದೆ, ಕಾರಿದೆ ಎಂದು ಹೊಟ್ಟೆಕಿಚ್ಚು ಪಟ್ಟಿಲ್ಲ.
ಆದರೆ ಅಂಥಾ ಬಂಗಲೆ, ಕಾರು ಕೊಳ್ಳಲು ನನ್ನ ಸಾಮರ್ಥ್ಯದಲ್ಲಿ ಎಷ್ಟು ವರ್ಷ ದುಡಿಯಬೇಕು ಅನ್ನುವ ಲೆಕ್ಕಾಚಾರದೊಂದಿಗೆ ಅದಕ್ಕಾಗಿ ಇರುವ ಆದಾಯದ ಎಲ್ಲ ಮೂಲಗಳನ್ನೂ ಹುಡುಕಿರುತ್ತೇನೆ. ಅದಕ್ಕಾಗಿ ಹಗಲೂ-ರಾತ್ರಿ ನಿರಂತರ ಶ್ರಮ ಪಡುತ್ತೇನೆ.

ಒಮ್ಮೆ ಪಠ್ಯಪುಸ್ತಕದ wrapper ಒಳಗೆ safe ಆಗಿ ಎತ್ತಿಟ್ಟಿದ್ದ ಐದು ರುಪಾಯಿಯ ನೋಟು ಆಕಸ್ಮಿಕವಾಗಿ ಸಿಕ್ಕಾಗ ಕುಣಿದಾಡುವಷ್ಟು ಖುಷಿಯಾಗಿತ್ತು. ಅಪ್ಪ
ಕೊಡುತ್ತಿದ್ದ ಎರಡು ರುಪಾಯಿಯ ಪಾಕೆಟ್ ಮನಿ ಉಳಿಸಿಕೊಳ್ಳಲು ಬಸ್ಸಿಗೆ ಹೋಗದೆ ಶಾಲೆಗೆ ನಡೆದೇ ಹೋಗುತ್ತಿದ್ದ, ರಿಸಲ್ಟು ಬಂದ ಕೂಡಲೇ ಹಳೆಯ
ಪುಸ್ತಕಗಳನ್ನೆಲ್ಲ ಜೂನಿಯರ್ ವಿದ್ಯಾರ್ಥಿಗಳಿಗೆ ಅರ್ಧ ಬೆಲೆಗೆ ಕೊಟ್ಟು ಅದರಿಂದ ಬರುತ್ತಿದ್ದ ಹಣವನ್ನು ಎತ್ತಿಟ್ಟುಕೊಳ್ಳುತ್ತಿದ್ದ ಆ ದಿನಗಳಿಂದಲೂ ನನಗೆ ಎಂದಿಗೂ
ಹಣದ ಸಮಸ್ಯೆಯೆಂಬುದು ಎದುರಾಗದಂತೆ ನನ್ನ ದೈವ ನನ್ನನ್ನು ಬಿಡದೆ ಕಾಯುತ್ತಿದೆ. ಹಾಗಂತ ನನಗೆ ಸಮಸ್ಯೆಗಳೇ ಎದುರಾಗಿಲ್ಲವೆಂದರ್ಥವಲ್ಲ.

ಇನ್ನೇನು ಎಲ್ಲ ಕಳೆದುಕೊಂಡು ಬರಿಗೈಯಾಗಿ ಹೋಯಿತು ಅಂದುಕೊಳ್ಳುವಷ್ಟರ ಈ ಬದುಕು ಬೊಗಸೆ ತುಂಬ ಮೊಗೆಮೊಗೆದು ಕೊಟ್ಟಿದೆ. ಇದೆಲ್ಲ ನೋಡುವಾಗ ಒಂದು ವಿಷಯವಂತೂ ಖಚಿತವಾಗಿದೆ. ಈ ಬದುಕು ನನ್ನಿಂದ ಮತ್ತೇನನ್ನೋ ಬಯಸುತ್ತಿದೆ. ಹೀಗಾಗಿ ನನ್ನನ್ನು ನಿಂತಲ್ಲಿ ನಿಲ್ಲದಂತೆ, ಕೂತಲ್ಲಿ ಕೂರದಂತೆ ತನ್ನೊಂದಿಗೆ ಎಳೆದೊಯ್ಯುತ್ತಲೇ ಇದೆ. ಇತ್ತೀಚೆಗೆ ಹಟಮಾರಿತನ ಬಿಟ್ಟು ನಾನೂ ಅದರಿಚ್ಛೆಗೆ ಬಿಟ್ಟುಬಿಟ್ಟಿದ್ದೇನೆ. ನಿನಗೆ ತೋಚಿದಂತೆ ನಡೆಸಿಕೋ. ಅದರ ಎಲ್ಲ ಹೊಣೆ ನಿನ್ನದೇ ಎಂದುಕೊಳ್ಳುತ್ತಾ ನಿರುಮ್ಮುಳವಾಗಿದ್ದುಬಿಟ್ಟಿದ್ದೇನೆ.

ಅವತ್ತು ಬಹುಶಃ 2015ರ ಹೊಸತರ ಮೊದಲಲ್ಲಿ ಬಂದ ಸಂಕ್ರಾಂತಿ ಹಬ್ಬ. ಮನೆಮುಂದೆ ರಂಗೋಲಿ ಹಾಕಲು ಬಾಗಿಲು ತೆರೆದವಳಿಗೆ ಕಂಡಿದ್ದು ಕಪ್ಪು ಬಿಳುಪಿನ ಪತ್ರಿಕೆ. (ಹೆಸರು ಮರೆತಿದ್ದೇನೆ. ಅದರ ಪ್ರತಿ ಮನೆಯ ಅಟ್ಟದ ಯಾವುದೋ ಮೂಲೆಯಲ್ಲಿ ಆಕಳಿಸುತ್ತಾ ಮಲಗಿದೆ ನಿದ್ರೆಯಿಲ್ಲದೆ!) ಮುಖಪುಟದ ನನ್ನ ಹಾಗೂ ರವಿಯ ಫೋಟೋ! ಹಾಕಿ ಬಾಯಿಗೆ ಬಂದಂತೆ ಬರೆದಿದ್ದರು. ಇದೆಲ್ಲ ಇದ್ದಿದ್ದೇ ಎಂದು ಅದನ್ನು ಪಕ್ಕಕ್ಕಿರಿಸಿ ಬಾಗಿಲು ಗುಡಿಸಿ ಸ್ವಚ್ಛ ಮಾಡಿ ಚೆಂದದ ರಂಗೋಲಿ ಹಾಕಿ ಒಳಗೆ ಹೋದ ಎರಡೇ ನಿಮಿಷದಲ್ಲಿ ಪಕ್ಕದ ಮನೆಯಾಕೆ ಅದೇ ಪತ್ರಿಕೆಯ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ನೋಡಿ ಇದು ಬೆಳಗ್ಗೆ ನಮ್ಮ ಮನೆಯ ಬಾಗಿಲಲ್ಲಿತ್ತು. ನಿಮಗೆ ಹೇಗೆ ಹೇಳುವುದು? ಎಂದು ಕಸಿವಿಸಿ ಮಾಡಿಕೊಳ್ಳುವಷ್ಟರಲ್ಲಿ ಉಳಿದ ಮನೆಯವರೂ ಜೊತೆಯಾದರು.

ನಾವಿದ್ದ ಅಪಾರ್ಟ್‌ಮೆಂಟಿನ ಅಷ್ಟೂ ಮನೆಯ ಬಾಗಿಲ ಬಳಿ ಸಂಕ್ರಾಂತಿಯ ಗಿಫ್ಟ್ ಎನ್ನುವಂತೆ ಇಟ್ಟು ಹೋಗಿದ್ದರು. ಓಹೋ ಇದು ಯಾರೋ ಬೇಕಂತಲೇ ಮಾಡಿದ ಕಿತಾಪತಿಯ ಕೆಲಸ. ಅದರಲ್ಲೂ ಪರಿಚಯದವರೇ ಅನ್ನುವುದು ನೋಡಿದ ಕೂಡಲೇ ತಿಳಿದು ಹೋಯಿತು. ರವಿಗೆ ಹೇಳಿ ದಾಗ ಇದಕ್ಕೆಲ್ಲ ತಲೆ ಕೆಡಿಸಿ ಕೊಳ್ಳಬೇಡ. ನಿನ್ನ ಪಾಡಿಗೆ ನೀನು ಆರಾಮಾಗಿರು ಎಂದು ಹೇಳಿ ಅದರ ಹಿಂದೆ ಯಾರ ಕೈವಾಡವಿದೆ ಅನ್ನುವುದರ ಪತ್ತೆ ಹಚ್ಚಿದ್ದರು. ಆದರೆ ನನಗೆ ತಿಳಿಸಲಿಲ್ಲ. ಅದಾದ ನಂತರ ನನ್ನ ಪ್ರತಿಯೊಂದು ಚಲನವಲನವನ್ನು ಯಾರೋ ಗಮನಿಸುತ್ತಿzರೆ ಅನ್ನುವ ಅನುಮಾನ ಮೂಡತೊಡಗಿತು. ಇದರಿಂದ ಇದ್ದಬದ್ದ ನೆಮ್ಮದಿಯೆಲ್ಲ ಹಾಳಾಗಿ ಹೋಗಿತ್ತು.

ಕಣ್ಣು ಬಿಟ್ಟ ಕೂಡಲೇ ಕಾಣುತ್ತಿದ್ದ ಕಚೇರಿ, ಅಲ್ಲಿಗೆ ಬಂದು ಹೋಗುತ್ತಿದ್ದ ಜನಸಂದಣಿಯ ನಡುವೆ ಯಾರ ಇಶಾರೆ ಇದೆಯೋ ಯಾರಿಗೆ ಗೊತ್ತು? ಅನಿಸಿದಾಗ ಯಾಕೋ ಇನ್ನು ಈ ಮನೆಯಲ್ಲಿರುವುದು ಸುರಕ್ಷಿತವಲ್ಲ ಅನ್ನಿಸಿ ನಾನು ಅಲ್ಲಿ ರಾತ್ರಿಯ ಹೊತ್ತು ತಂಗುವುದನ್ನೇ ಬಿಟ್ಟೆ. ಮಗನೊಂದಿಗೆ ನನ್ನ ತಂಗಿಯ ಮನೆಗೆ ಬಂದು ಬೆಳಗೆದ್ದು ಹೋಗುವುದು ರೂಢಿಸಿಕೊಂಡೆ. ಆದರೆ ಮನೆಯೆಂಬುದು ಅವರೇ ಕಟ್ಟಿಕೊಂಡ ಪುಟ್ಟ comfort zone! ಅವರ ನಡುವೆ ಪ್ರತಿದಿನ ರಾತ್ರಿ ನಾನು ವಕ್ಕರಿಸಿದರೆ ಹೇಗನಿಸಬೇಡ? ಇದಕ್ಕೆಲ್ಲ ಒಂದು ಪರಿಹಾರವಾಗಿ ಸದ್ಯಕ್ಕೆ ಒಂದಷ್ಟು ದಿನ ತಂಗಿಯ ಮನೆಯ ಬಳಿಯೇ ಒಂದು ಬಾಡಿಗೆ ಮನೆ ಮಾಡಿ ಕೊಂಡಿರುವುದು, ಹೇಗಿದ್ದರೂ ನಮ್ಮ ಹೊಸ ಮನೆ ನಿರ್ಮಾಣವಾಗುತ್ತಿತ್ತಲ್ಲ? ಅದು ಪೂರ್ಣವಾದ ನಂತರ ಅಲ್ಲಿಗೆ ತೆರಳಿದರಾಯ್ತು ಅನ್ನುವ ಲೆಕ್ಕಾಚಾರದಲ್ಲಿ ರವಿ ಯೊಂದಿಗೆ ಮಾತಾಡಿ ಒಪ್ಪಿಸಿ, ಪದ್ಮನಾಭನಗರದಲ್ಲಿದ್ದ ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು ಅದರಿಂದ ರಾಜರಾಜೇಶ್ವರಿ ನಗರದ ಬಾಡಿಗೆ ಮನೆಗೆ ಬೇಕಾದ ಹಣವನ್ನು ಹೊಂದಿಸುವುದು ಎಂದುಕೊಂಡು ಸ್ಥಳಾಂತರದ ತಯಾರಿಗೆ ಸಿದ್ಧಗೊಳ್ಳತೊಡಗಿದೆ.

ಆದರೆ ನೂರು ಜನ ನೂರು ದನಿ. ಅದೇನಾಯಿತೋ ರವಿ ಇದ್ದಕ್ಕಿದ್ದಂತೆ ಪ್ರತಿಕ್ರಿಯೆಯೇ ನೀಡದೆ ಮೌನವಾಗಿ ಉಳಿದುಬಿಟ್ಟರು. ಒಂದು ಶುಭ್ರ ಮುಂಜಾನೆಯಂದು
ಬರೆಯುತ್ತಾ ಕುಳಿತವರು ಇದ್ದಕ್ಕಿದ್ದಂತೆ ಎದ್ದು ಜೋರು ನಿದ್ರೆಯಲ್ಲಿದ್ದ ನನ್ನನ್ನು ಎಬ್ಬಿಸದೆ ಕಚೇರಿಯ ಸೆಕ್ಯುರಿಟಿ ಗಾರ್ಡನ್ನು ಕರೆದುಕೊಂಡು ಕಾಫಿ ಕುಡಿಯಲು ಬಂದಾಗ ಎದುರಿಗೆ ಕಂಡ ಅಪಾರ್ಟ್ ಮೆಂಟನ್ನು ಕಂಡು ಇದರಲ್ಲಿ ಮನೆಗಳಿವೆಯೇನೋ ವಿಚಾರಿಸು ಎಂದು ಕೇಳಿದ್ದಾರೆ. ಎಲ್ಲ sale ಆಗಿಬಿಟ್ಟಿವೆ. ಒಂದೇ ಒಂದು ಉಳಿದಿದೆಯಂತೆ ಎಂದಾಗ ಮರಳಿ ಬಂದು ವಿಷಯ ತಿಳಿಸಿ ಈ ಮನೆಯನ್ನು ಖರೀದಿಸಿಬಿಡೋಣ.

ನಿನ್ನ ಈ ಸೀತೆಯ ವನವಾಸವನ್ನು ನಾನು ನೋಡಲಾರೆ ಎಂದು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದರು. ಹಾಗೆ 2007ರಲ್ಲಿ ಕೊಂಡ ಮನೆಯಲ್ಲಿ ಏಳು
ವರ್ಷ ವಾಸವಿದ್ದೆವು. ಅದಕ್ಕೆ ಮೊದಲು ಬೆಕ್ಕಿನ ಸಂಸಾರದಂತೆ ಸಾಕಷ್ಟು ಮನೆಗಳೂ ಬದಲಾಗಿದ್ದವು. ಕೊನೆಗೂ ಒಂದು ನೆಲೆ ಸಿಕ್ಕಿತಲ್ಲ ಎಂದು ನಿಟ್ಟುಸಿರಾ ಗಿದ್ದೆವು. ಬಹುಶಃ ಅವರಿಗೆ ನಾವು ಅಲ್ಲಿಂದ ದೂರ ಸರಿಯುವುದು ಇಷ್ಟವಿರಲಿಲ್ಲವೇನೋ? ಆದರೆ ನನಗೆ ಮಾತ್ರ ಒಂದು ಸುದೀರ್ಘ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿತ್ತು. ಯಾವ ಜಂಜಾಟಗಳಿಲ್ಲದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದೆ. ಹಿಮವಂತನಿಗೆ ಆಗ ಕೇವಲ ಐದು ವರ್ಷಗಳಷ್ಟೆ. ಸಮಯ ಸಿಕ್ಕಾಗಲೆಲ್ಲ ಕಚೇರಿಗೆ ಹೋಗಿ ಮಾತನಾಡಿಸಿಕೊಂಡು ಬರುತ್ತಾ ಒಟ್ಟಿಗೆ ಸಮಯ ಕಳೆಯುತ್ತಿದ್ದೆವು.

ಆದರೆ ನೆಮ್ಮದಿಯ ಬದುಕು ನಡೆಸಲು ಹಣ ಎಷ್ಟು ಅವಶ್ಯಕ ಅನ್ನುವುದು ಆಗಲೇ ಅರಿವಿಗೆ ಬಂದಿದ್ದು. ಅವರ ಯಾವ ಕೆಲಸ ಕಾರ್ಯಗಳಲ್ಲೂ ಭಾಗಿಯಾಗದೆ ಸುಮ್ಮನೆ ಅವರಿಂದ ಪಡೆಯುವ ಹಣ ಹೊರೆಯೆನಿಸತೊಡಗಿತು. ಎಲ್ಲಿಂದ ಎಲ್ಲಿಗೆ ಹೋದರೂ ನಾನು ರವಿ ಬೆಳಗೆರೆಯ ಹೆಂಡತಿ ಅನ್ನುವುದಂತೂ ಎಲ್ಲರಿಗೂ ತಿಳಿದೇ ಇತ್ತು. ನನ್ನ ನ್ನು ನೇರವಾಗಿ ಪ್ರಶ್ನಿಸಲಾಗದ ಜನ ಎಲ್ಲರೂ ಹಿಮವಂತನನ್ನು ಪ್ರಶ್ನೆಗಳೊಳಗೆ ಸಿಕ್ಕಿಸಿ ಉತ್ತರ ಪಡೆದುಕೊಳ್ಳತೊಡಗಿದರು. ನೋಡು ರವಿ ಬಾಲ್ಯದಲ್ಲಿ ಏನೆಲ್ಲ ಅನುಭವಿಸಿದರೋ ಅದೇ ಮಗನಿಗೂ ಆಗ್ತಿದೆ ಎಂದು ಜನ ಮಾತಾಡಿಕೊಂಡು ನಗುವುದು ಕಿವಿಗೆ ಬಿದ್ದರೂ ಪ್ರತಿಕ್ರಿಯಿಸಲಾಗದ ಅಸಹಾಯ ಕತೆಯೊಳಗೆ ನಾನು ಬಂಧಿಯಾಗಿ ಹೋಗಿದ್ದೆ. ಇದರಿಂದ ಹಿಮವಂತನ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಹುದು ಎನ್ನುವ ಆತಂಕದ
ಸುರಂಗ ದೊಳಗೆ ಸಿಕ್ಕಿಕೊಂಡು ಉಸಿರುಗಟ್ಟಿ ಹೋಗುತ್ತಿತ್ತು.

ಈ ಸಮಸ್ಯೆಗಳಿಗೆಲ್ಲ ಪರಿಹಾರದಂತೆ ಕಣ್ಣಿಗೆ ಬಿದ್ದದ್ದು ಬಂಜಾರ ಅಕಾಡೆಮಿ. ಸಮಸ್ಯೆಗಳನ್ನು ಅದರ ಪಾಡಿಗೆ ಇರಲು ಬಿಟ್ಟು ಬಂಜಾರಾ ಅಕಾಡೆಮಿಯಲ್ಲಿ online
counselling course ಮುಗಿಸಿಕೊಂಡೆ. ಅದರಿಂದಾಗಿ I can face the society now ಅನ್ನುವ ಹೊಸ ಆತ್ಮವಿಶ್ವಾಸ ಜೊತೆಯಾಯ್ತು. ಇದರ ಬಗ್ಗೆ ಹೆಚ್ಚಿನ guidance ಗಾಗಿ ಹುಡುಕಾಡುತ್ತಿದ್ದಾಗ ವಸುಮತಿ ಭಾಸ್ಕರ್ ಸಿಕ್ಕು ನಮ್ಮ ನಡುವೆ ಎದ್ದಿದ್ದ ಕಂದರ ದೂರಾಗಿ ಮತ್ತೆ ಸಂತಸದ ದಿನಗಳು ಮರಳಿ ಬಂದವು. ಆದರೆ ಅದು ಕೂಡ ಕೆಲವೇ ವರುಷಗಳು ಅನ್ನುವ ಸತ್ಯ ಮಾತ್ರ ಮರೆಯ ಉಳಿದುಬಿಟ್ಟಿತ್ತು. ಮತ್ತೆ ಏಳು ವರ್ಷಗಳ ನಂತರ ಎದುರಾದ ಸಂಕ್ರಾಂತಿಗೆ ರಂಗೋಲಿ ಹಾಕಲು ಬಾಗಿಲು ತೆರೆದಾಗ ಚುಕ್ಕಿ ಗೆರೆಗಳ ನಡುವೆ ಎಲ್ಲ ನೆನಪಾದವು.