ಸಂಗತ
ವಿಜಯ್ ದರಡಾ
ಲಕ್ಷದ್ವೀಪದ ಸುಂದರ ಸಮುದ್ರ ದಂಡೆಯ ಮೇಲೆ ಮೋದಿ ಕುರ್ಚಿ ಹಾಕಿಕೊಂಡು ಕುಳಿತ ಬೆನ್ನಲ್ಲೇ ಅತ್ತ ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷ ಮುಯಿಝು ಅವರ ಕುರ್ಚಿ ಅಲುಗಾಡತೊಡಗಿತು. ಅವರ ಕಿಡಿಗೇಡಿತನವನ್ನು ನೋಡಿಕೊಂಡು ಭಾರತ ಸುಮ್ಮನಿರುವುದು ಆ ದೇಶದ ಜನಸಾಮಾನ್ಯರ ಮೇಲೆ ಭಾರತೀಯರಿಗೆ ಇರುವ ಪ್ರೀತಿಯ ಕಾರಣಕ್ಕೇ ಹೊರತು ಇನ್ನಾವ ಕಾರಣಕ್ಕೂ ಅಲ್ಲ.
ಬಹುಶಃ ಇದು ಜಗತ್ತಿನ ರಾಜತಾಂತ್ರಿಕ ಇತಿಹಾಸದಲ್ಲೇ ಮೊದಲ ಘಟನೆಯಿರಬಹುದು. ಒಂದು ದೇಶದ ಪ್ರಧಾನಮಂತ್ರಿಯು ತನ್ನ ದೇಶದ ಸಮುದ್ರದ ದಂಡೆಯ ಮೇಲೆ ಕುರ್ಚಿ ಹಾಕಿಕೊಂಡು ಆರಾಮಾಗಿ ಕುಳಿತುಕೊಳ್ಳುತ್ತಾರೆ. ನಂತರ ಅದೇ ಪ್ರಶಾಂತ ಸಮುದ್ರದಲ್ಲಿ ಮುಳುಗೇಳುತ್ತಾರೆ. ಆಗ ಎದ್ದ ಶಕ್ತಿಶಾಲಿ ಅಲೆಯಿಂದ ಅದೇ ಸಮುದ್ರದ ಆಚೆ ಕಡೆ ೮೦೦ ಕಿ.ಮೀ. ದೂರದಲ್ಲಿರುವ ಇನ್ನೊಂದು ದೇಶದ ಅಧ್ಯಕ್ಷರ ಕುರ್ಚಿಯೇ ಅಪಾಯಕ್ಕೆ ಸಿಲುಕುತ್ತದೆ! ಇದು ನನ್ನ ಪ್ರಕಾರ ತುಂಬಾ ಅಪರೂಪದ ವಿದ್ಯಮಾನ. ಇದನ್ನೇ ಕಾವ್ಯಾತ್ಮಕವಾಗಿ ಹೇಳುವುದಾದರೆ ಒಂದು ಕುರ್ಚಿಯು ಇನ್ನೊಂದು ಕುರ್ಚಿಯನ್ನು ಟಾರ್ಗೆಟ್ ಮಾಡಿಕೊಂಡ ಕತೆಯಿದು!
ಜನವರಿ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿ ಇಳಿದಾಗ ಯಾರೂ ಅದು ರಾಜತಾಂತ್ರಿಕತೆಯ ಮಹಾಸಾಗರದಲ್ಲಿ ಅಷ್ಟೊಂದು ಶಕ್ತಿಶಾಲಿಯಾದ ಅಲೆಯನ್ನು ಎಬ್ಬಿಸಬಹುದು ಎಂದು ಊಹಿಸಿರಲಿಲ್ಲ. ಆದರೆ ಯಾರೂ ಊಹಿಸಿರದಿದ್ದುದು ಘಟಿಸಿತು. ಅವರ ಭೇಟಿಯಿಂದ ಎದ್ದ ಅಲೆಗಳು ಕೇವಲ ಒಂದು ತಿಂಗಳೊಳಗೆ ಪಕ್ಕದ ಮಾಲ್ಡೀವ್ಸ್ ಎಂಬ ಪುಟ್ಟ ದ್ವೀಪರಾಷ್ಟ್ರದ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ವಾಗ್ದಂಡನೆಯ
ಭೀತಿಗೆ ಸಿಲುಕಿಸಿವೆ. ಅವರೀಗ ಕುರ್ಚಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಅವರ ಹುದ್ದೆ ಡೋಲಾಯಮಾನವಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಮಾಲ್ಡೀವ್ಸ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ನೋಡಿದಾಗ ನನಗೆ ಬಹಳ ವರ್ಷಗಳ ಹಿಂದಿನ ನನ್ನ ಮಾಲ್ಡೀವ್ಸ್ ಪ್ರವಾಸದ ದಿನಗಳು ನೆನಪಾಗುತ್ತವೆ. ಆ ಪ್ರವಾಸದಲ್ಲಿ ನಾನು ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಅಬ್ದುಲ್ ಗೇಯೂಮ್ ಅವರನ್ನು ಭೇಟಿಯಾಗಿದ್ದೆ. ದಕ್ಷಿಣ ಏಷ್ಯಾ ಸಂಪಾದಕರ ವೇದಿಕೆಯ ಅಧ್ಯಕ್ಷನಾಗಿದ್ದ ನಾನು ನಮ್ಮ ವೇದಿಕೆಗಾಗಿ ಮಾಲ್ಡೀವ್ಸ್‌ನಲ್ಲೊಂದು ಸಭೆ ಆಯೋಜಿಸಿದ್ದೆ. ಆ ಸಭೆಯ ಆಸುಪಾಸಿನಲ್ಲಿ ಕೊಂಚ ಸಮಯ
ಸಿಕ್ಕಾಗ ನಮ್ಮಲ್ಲಿದ್ದ ಕೆಲವು ಪತ್ರಕರ್ತರು ಅಬ್ದುಲ್ ಗೇಯೂಮ್ ಅವರ ಕಚೇರಿಗೆ ತೆರಳಿ ಅವರನ್ನು ಭೇಟಿಯಾಗುವ ಬಯಕೆ ವ್ಯಕ್ತಪಡಿಸಿದೆವು.
ತಕ್ಷಣ ಅವರು ಒಪ್ಪಿಕೊಂಡು ನಮಗೆ ಆಹ್ವಾನ ನೀಡಿದರು. ಅಬ್ದುಲ್ ಗೇಯೂಮ್ ಮತ್ತು ಅವರ ಪತ್ನಿ ನಸ್ರೀನಾ ಇಬ್ರಾಹಿಂ ಅವರು ನಮ್ಮನ್ನು ತಮ್ಮ ಅಧಿಕೃತ ಸರಕಾರಿ ನಿವಾಸಕ್ಕೆ ಆಹ್ವಾನಿಸಿದ್ದಷ್ಟೇ ಅಲ್ಲ, ಪುಷ್ಕಳ ಔತಣವನ್ನೂ ನೀಡಿದರು. ಔಪಚಾರಿಕವಾಗಿ ಮಾತನಾಡುವಾಗ ಗೇಯೂಮ್ ದಂಪತಿ ಹೇಗೆ ಭಾರತ ಮತ್ತು
ಮಾಲ್ಡೀವ್ಸ್ ನಡುವಿನ ಸಂಬಂಧ ಕಬ್ಬಿಣ ಮತ್ತು ಅಯಸ್ಕಾಂತದ ನಡುವಿನ ಸಂಬಂಧವಿದ್ದಂತೆ ಎಂದು ಹೇಳಿದರು. ಅವರಿಗೆ ಭಾರತದ ಜತೆಗಿನ ಸಂಬಂಧದ ಬಗ್ಗೆ ಬಹಳ ಗೌರವವಿತ್ತು.
ಎರಡೂ ದೇಶಗಳ ನಡುವೆ ಬಿಡಿಸಲಾಗದ ಬಂಧವೊಂದು ಬೆಸೆದುಕೊಂಡಿದೆ ಎಂದು ಅವರು ಹೇಳಿದರು. ಭಾರತ ಮತ್ತು ಮಾಲ್ಡೀವ್ಸ್ ದೇಶಗಳು ಪರಸ್ಪರ ದೂರವಾಗುವುದನ್ನು ಯಾರೂ ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಮಾಲ್ಡೀವ್ಸ್‌ಗೆ ಭಾರತವು ಅತ್ಯಂತ ಆಪ್ತಮಿತ್ರ ರಾಷ್ಟ್ರ ಎಂದು ಗೇಯೂಮ್ ಹೇಳಿದ್ದರು. ಆದರೆ ಈಗ ನೋಡಿದರೆ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗಿಬಿಟ್ಟಿದೆ. ಇಷ್ಟು ಹಠಾತ್ತಾಗಿ ಎರಡು ಮಿತ್ರರಾಷ್ಟ್ರಗಳ ನಡುವೆ ಪರಸ್ಪರ ವೈರತ್ವದ ಭಾವ ಮೂಡಿದ್ದು ಹೇಗೆಂದು ನನಗೆ ಅಚ್ಚರಿಯಾಗುತ್ತದೆ. ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷರುಗಳೆಲ್ಲ ನಡೆದ ದಾರಿಯನ್ನು ಬಿಟ್ಟು ಈಗಿನ ಅಧ್ಯಕ್ಷ ಮುಯಿಝು ಸಂಪೂರ್ಣ ಬೇರೆಯದೇ ದಾರಿಯಲ್ಲಿ ಹೊರಟಿದ್ದಾರೆ.
ಗೇಯೂಮ್ ಅವರಿಂದ ಆರಂಭಿಸಿ ಮೊಹಮ್ಮದ್ ನಶೀದ್ ಹಾಗೂ ಇಬ್ರಾಹಿಂ ಸೋಲಿವರೆಗೆ ಮಾಲ್ಡೀವ್ಸ್‌ನ ಎಲ್ಲಾ ಅಧ್ಯಕ್ಷರೂ ಭಾರತದ ಜತೆಗೆ ಆಪ್ತ ಹಾಗೂ ಸುಮಧುರ ಸಂಬಂಧ ಹೊಂದಿದ್ದರು. ಮಾಲ್ಡೀವ್ಸ್‌ನಲ್ಲಿ ಹೊಸತಾಗಿ ಅಧಿಕಾರಕ್ಕೆ ಬರುವ ಯಾವುದೇ ಅಧ್ಯಕ್ಷ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ವಿದೇಶ ಪ್ರವಾಸಕ್ಕೆ ತೆರಳುವುದು ಭಾರತಕ್ಕೆ ಎಂಬುದು ಒಂದು ಸಂಪ್ರದಾಯವೇ ಆಗಿತ್ತು. ಭಾರತದ ಬಗ್ಗೆ ಮಾಲ್ಡೀವ್ಸ್ ಹೊಂದಿರುವ ಗೌರವವನ್ನು ಅಲ್ಲಿನ ನೂತನ ಅಧ್ಯಕ್ಷರು ಈ ಭೇಟಿಯ ಮೂಲಕ ಸಾಂಕೇತಿಕವಾಗಿ ಜಗತ್ತಿನೆದುರು ಪ್ರದರ್ಶಿಸುತ್ತಿದ್ದರು. ಎರಡೂ ದೇಶಗಳ ನಡುವೆ ಇರುವ ಬಾಂಧವ್ಯ ಹಾಗೂ ವಿಶ್ವಾಸವನ್ನು ಈ ಭೇಟಿ ಒತ್ತಿ ಹೇಳುತ್ತಿತ್ತು. ಅದಕ್ಕಿಂತ ಹೆಚ್ಚಾಗಿ, ಭೌಗೋಳಿಕ ಅನಿವಾರ್ಯತೆಗಳ ಕಾರಣದಿಂದ ಮಾಲ್ಡೀವ್ಸ್ ಯಾವಾಗಲೂ ತನ್ನ ಸಾಕಷ್ಟು ಅಗತ್ಯಗಳಿಗೆ ಭಾರತವನ್ನೇ ಅವಲಂಬಿಸಿದೆ.
ಇದು ಕೂಡ ಭಾರತದ ಜತೆಗೆ ಮಾಲ್ಡೀವ್ಸ್ ಸದಾ ಸೌಹಾರ್ದ ಯುತವಾದ ಸಂಬಂಧ ಕಾಯ್ದುಕೊಳ್ಳಲು ಕಾರಣವಾಗಿತ್ತು. ಆದರೆ ಮುಯಿಝು ಈ ಸಂಪ್ರದಾಯ ವನ್ನು ಮುರಿದರು. ಅವರು ಅಧ್ಯಕ್ಷರಾಗಿ ಅಽಕಾರ ವಹಿಸಿಕೊಂಡ ನಂತರ ಟರ್ಕಿಗೆ ಮೊದಲ ಭೇಟಿ ನೀಡಿದರು. ನಂತರ ಯುಎಇಗೆ ತೆರಳಿದರು. ಆಮೇಲೆ ಭಾರತದ ಶತ್ರು ರಾಷ್ಟ್ರವಾದ ಚೀನಾಕ್ಕೆ ಭೇಟಿ ನೀಡಿ ದರು. ನಂತರವಂತೂ ಅವರು ಚೀನಾದ ಮಡಿಲಿನಲ್ಲೇ ಕುಳಿತುಬಿಟ್ಟರು. ಅವರೀಗ ಭಾರತದ ಸಖ್ಯ ತೊರೆದು ಚೀನಾದ ಸ್ನೇಹವನ್ನು ಬಯಸುತ್ತಿದ್ದಾರೆಂಬುದು ಜಗತ್ತಿಗೇ ತಿಳಿದಿದೆ.
ಮುಯಿಝು ಹೀಗೆ ಉಲ್ಟಾ ಹೊಡೆಯುವವರಿದ್ದಾರೆ ಎಂಬುದು ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕಿಂತಲೂ ಮೊದಲೇ ತಿಳಿದಿತ್ತು. ಚುನಾವಣೆಯ ಪ್ರಚಾರದ ಸಮಯದಲ್ಲೇ ಅವರು ‘ಇಂಡಿಯಾ ಔಟ್’ ಎಂಬ ಸ್ಲೋಗನ್ ಇರುವ ಟಿ-ಶರ್ಟ್ ತೊಟ್ಟು ಓಡಾಡುತ್ತಿದ್ದರು. ತಾನು ಗೆದ್ದರೆ ಮಾಲ್ಡೀವ್ಸ್‌ನಿಂದ ಭಾರತದ ಸೈನಿಕ ರನ್ನು ಹೊರಗೆ ಹಾಕುವುದಾಗಿ ಅವರು ಸಾಕಷ್ಟು ಬಾರಿ ಹೇಳಿಕೆ ನೀಡಿದ್ದರು. ವಾಸ್ತವವಾಗಿ ಅದು ಬರೀ ಹೇಳಿಕೆಯಾಗಿರಲಿಲ್ಲ, ಬದಲಿಗೆ ಅವರ ಶಪಥವಾಗಿತ್ತು. ಇಲ್ಲೊಂದು ಸಂಗತಿಯನ್ನು ನೆನಪಿಸಿಕೊಳ್ಳಬೇಕು. ಮಾಲ್ಡೀವ್ಸ್‌ಗೆ ಭಾರತವು ಈ ಹಿಂದೆ ಸ್ನೇಹಪೂರ್ವಕವಾಗಿ ಎರಡು ಸೇನಾ ಹೆಲಿಕಾಪ್ಟರ್‌ಗಳು ಹಾಗೂ ಒಂದು ಯುದ್ಧವಿಮಾನವನ್ನು ಉಚಿತವಾಗಿ ನೀಡಿದೆ. ಅವುಗಳ ಬೆಲೆ ಸಾವಿರಾರು ಕೋಟಿ ರುಪಾಯಿ ಆಗುತ್ತದೆ. ಸಮುದ್ರದ ಮೇಲೆ ಪಹರೆ ತಿರುಗಲು, ಶೋಧ ಕಾರ್ಯಾಚರಣೆ ನಡೆಸಲು, ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಹೀಗೆ ನಾನಾ ಉದ್ದೇಶಗಳಿಗೆ ನೆರವಾಗುವ ಮತ್ತು ಮಾಲ್ಡೀವ್ಸ್‌ನ ಜನರ ಅನುಕೂಲಕ್ಕೆ ಒದಗಿಬರುವ ಉದ್ದೇಶದಿಂದ ಈ ಹೆಲಿಕಾಪ್ಟರ್ ಮತ್ತು ಯುದ್ಧವಿಮಾನವನ್ನು ಭಾರತ ನೀಡಿದೆ.
ಭಾರತದ ಕೆಲ ಯೋಧರು ಆ ದೇಶದಲ್ಲಿ ಇರುವುದಕ್ಕೂ ಇದೇ ಕಾರಣ. ಈ ಹೆಲಿಕಾಪ್ಟರ್ ಮತ್ತು ಯುದ್ಧವಿಮಾನದ ನಿರ್ವಹಣೆ ಹಾಗೂ ಇವುಗಳಿಗೆ ಸಂಬಂಽಸಿದ ಮೂಲಸೌಕರ್ಯಗಳ ರಕ್ಷಣೆಗಾಗಿ ಅವರು ಮಾಲ್ಡೀವ್ಸ್‌ನಲ್ಲಿದ್ದಾರೆ. ಆದರೆ ಮುಯಿಝು ಇದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ, ತಮ್ಮ ದೇಶದ ಜನರೆದುರು ಇದನ್ನು ರಾಜಕೀಯಕ್ಕೆ ಬಳಸಿಕೊಂಡು, ಮಾರ್ಚ್‌ನೊಳಗೆ ಭಾರತ ತನ್ನೆಲ್ಲಾ ಸೈನಿಕರನ್ನೂ ಮಾಲ್ಡೀವ್ಸ್ ನಿಂದ ವಾಪಸ್ ಕರೆಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ವಸ್ತುಸ್ಥಿತಿ ಹೀಗಿರುವಾಗ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಅತ್ಯಂತ ಸುಂದರ ಪ್ರವಾಸಿ ತಾಣ ಗಳಲ್ಲಿ ಒಂದಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದರು. ಅಲ್ಲಿನ ನೀರಿನಲ್ಲಿ ಮುಳುಗು ಹಾಕಿ ಸ್ನಾರ್ಕೆಲಿಂಗ್ ಮಾಡಿದರು. ಒಂದಷ್ಟು ಸಮಯ ಸಮುದ್ರದ ದಂಡೆಯ ಮೇಲೆ ಓಡಾಡಿ ಹಾಯಾಗಿ ಕಾಲ ಕಳೆದರು.
ಅಲ್ಲೇ ಕುರ್ಚಿ ಹಾಕಿಸಿಕೊಂಡು ಕುಳಿತು ಧ್ಯಾನಸ್ಥರಾದರು. ತನ್ಮೂಲಕ ಭಾರತೀಯರಿಗೆ ನಮ್ಮದೇ ದೇಶದ ಲಕ್ಷ ದ್ವೀಪಗಳ ಸಮೂಹದಲ್ಲಿರುವ ಬೀಚ್‌ಗಳ ಸೌಂದರ್ಯವನ್ನು ತೋರಿಸಿಕೊಟ್ಟರು. ಆದರೆ, ಇದಕ್ಕೆ ಮಾಲ್ಡೀವ್ಸ್ ಏಕೆ ಉರಿದುಕೊಂಡಿತೋ ಗೊತ್ತಿಲ್ಲ. ಅಲ್ಲಿನ ಮಂತ್ರಿ ಮರಿಯಾಮ್ ಶಿಯುನಾ ಎಂಬುವರು ನರೇಂದ್ರ ಮೋದಿ ಬಗ್ಗೆ ಇದ್ದಕ್ಕಿದ್ದಂತೆ ಅವಹೇಳನಕಾರಿಯಾಗಿ ಮಾತನಾಡಿದರು. ನಂತರ ಇನ್ನಿಬ್ಬರು ಸಚಿವರಾದ ಮಾಲ್ಷಾ ಶರೀಫ್ ಹಾಗೂ ಮಹಜೂಮ್ ಮಜಿ
ದ್ ಎಂಬುವರು ಕೂಡ ಭಾರತದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರು. ಅದು ದೊಡ್ಡ ವಿವಾದ ಹುಟ್ಟು ಹಾಕಿತು.
ಭಾರತೀಯರು ಮಾಲ್ಡೀವ್ಸ್ ವಿರುದ್ಧ ಸಿಟ್ಟಿಗೆದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ‘ಬಾಯ್ಕಾಟ್ ಮಾಲ್ಡೀವ್ಸ್’ ಎಂಬ ಹ್ಯಾಶ್‌ಟ್ಯಾಗ್ ಅಡಿ ನೆಟ್ಟಿಗರು ಕ್ಯಾಂಪೇನ್ ಆರಂಭಿಸಿದರು. ಅದು ಸಾಕಷ್ಟು ಟ್ರೆಂಡ್ ಆಯಿತು. ಎಲ್ಲೆಡೆ ವೈರಲ್ ಆಯಿತು. ಬೆನ್ನಲ್ಲೇ ಭಾರತದ ಪ್ರವಾಸೋದ್ಯಮ ಕಂಪನಿಯೊಂದು ಮಾಲ್ಡೀವ್ಸ್‌ಗೆ ಈ ಹಿಂದೆ ಮಾಡಿಕೊಂಡಿದ್ದ ಎಲ್ಲಾ ಪ್ರವಾಸಿ ಬುಕಿಂಗ್‌ಗಳನ್ನು ರದ್ದುಪಡಿಸಿಬಿಟ್ಟಿತು. ತಗೋ, ಇದು ಒಂಥರಾ ಸಮೂಹ ಸನ್ನಿಯಾಯಿತು. ಒಂದಾದ ಮೇಲೊಂದು ಪ್ರವಾಸಿ ಕಂಪನಿಗಳು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದವು. ೨೦೨೩ರ ಡಿಸೆಂಬರ್‌ವರೆಗೆ ಮಾಲ್ಡೀವ್ಸ್‌ಗೆ ಭಾರತವು ಅತಿದೊಡ್ಡ ಪ್ರವಾಸೋದ್ಯಮ ಸಂಬಂಧಿ ಆದಾಯದ ಮೂಲವಾಗಿತ್ತು. ಹೀಗಾಗಿ ಭಾರತೀಯರು ಮಾಲ್ಡೀವ್ಸ್ ಪ್ರವಾಸದ ಬುಕಿಂಗ್‌ಗಳನ್ನು ರದ್ದುಪಡಿಸುವುದು ಅಲ್ಲಿನ ಪ್ರವಾಸೋದ್ಯಮಕ್ಕೆ ಆಘಾತ ನೀಡಿತು. ಆ ಒತ್ತಡಕ್ಕೆ ಮಣಿದ ಅಧ್ಯಕ್ಷ ಮುಯಿಝು ಅವರು ಮೂವರು ಸಚಿವರನ್ನು ಅಮಾನತುಗೊಳಿಸಿದರು.
ಗಮನಿಸಿ, ಸಚಿವರನ್ನು ಅವರು ಅಮಾನತುಗೊಳಿಸಿದರು ಅಷ್ಟೆ, ಸಂಪುಟದಿಂದ ವಜಾಗೊಳಿಸಲಿಲ್ಲ. ಈಗ ಮಾಲ್ಡೀವ್ಸ್‌ನಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ
ನಾಯಕರು ಹಾಗೂ ಜನಸಾಮಾನ್ಯರು ಕೂಡ ಮುಯಿಝು ಅವರ ಭಾರತ-ವಿರೋಧಿ ನೀತಿಯ ವಿರುದ್ಧ ತಿರುಗಿಬಿದ್ದಿ ದ್ದಾರೆ. ಏಕೆಂದರೆ ಅವರಿಗೆ ತಮ್ಮ ದಿನನಿತ್ಯದ ಬದುಕಿಗೆ ಭಾರತದ ನೆರವು ಎಷ್ಟು ಅಗತ್ಯವಿದೆ ಎಂಬುದು ತಿಳಿದಿದೆ. ಔಷಧಗಳಿಂದ ಹಿಡಿದು ಬಿಡಿಭಾಗಗಳವರೆಗೆ ಮಾಲ್ಡೀವ್ಸ್‌ಗೆ ಸಾಕಷ್ಟು ಸರಕುಗಳು ಭಾರತದಿಂದ ರಫ್ತಾಗುತ್ತವೆ. ಇಂಥ ವಸ್ತುಗಳ ಪೂರೈಕೆಯನ್ನು ಭಾರತ ನಿಲ್ಲಿಸಿದರೆ ಮಾಲ್ಡೀವ್ಸ್ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಮುಯಿಝು ಅವರ
ದುರಹಂಕಾರವು ಮಾಲ್ಡೀವ್ಸನ್ನು ಮುಳುಗಿಸುತ್ತದೆ ಎಂದು ವಿರೋಧ ಪಕ್ಷಗಳು ಸಿಟ್ಟಿಗೆದ್ದಿವೆ.
ನಾನು ಮಾಲ್ಡೀವ್ಸ್‌ಗೆ ಹೋಗಿದ್ದಾಗ ಅಲ್ಲಿನ ಜನಸಾಮಾನ್ಯರು ಭಾರತದ ಬಗ್ಗೆ ಎಷ್ಟು ಪ್ರೀತಿ ಹೊಂದಿದ್ದಾರೆಂಬುದನ್ನು ಗಮನಿಸಿದ್ದೆ. ಅವರು ಭಾರತವನ್ನು ಅಣ್ಣನಂತೆ ನೋಡುತ್ತಾರೆ. ತಮಗೆ ಏನೇ ತೊಂದರೆಯಾದರೂ ನೆರವಿಗೆ ಭಾರತ ಬರುತ್ತದೆ ಎಂಬ ನಂಬಿಕೆ ಅವರಲ್ಲಿದೆ. ಮಾಲ್ಡೀವ್ಸ್‌ನ ಆಡಳಿತಾರೂಢ ಸರಕಾರವನ್ನು ಬೀಳಿಸಲು ಪ್ರಯತ್ನಗಳು ನಡೆದಾಗ ಭಾರತ ಅದನ್ನು ತಡೆದಿದೆ. ಸುನಾಮಿಯ ಸಮಯದಲ್ಲಿ ಮಾಲ್ಡೀವ್ಸ್‌ಗೆ ಭಾರತ ಸಾಕಷ್ಟು ನೆರವು ನೀಡಿದೆ.
ಕೋವಿಡ್ ಬಿಕ್ಕಟ್ಟಿನ ವೇಳೆ ಮಾಲ್ಡೀವ್ಸ್‌ಗೆ ಭಾರತ ಕೇವಲ ಉಚಿತ ಲಸಿಕೆ ಹಾಗೂ ಔಷಧಗಳನ್ನು ನೀಡಿದ್ದಷ್ಟೇ ಅಲ್ಲ, ಆ ದೇಶದಲ್ಲಿ ಸೋಂಕಿಗೆ ತುತ್ತಾದವರ ಚಿಕಿತ್ಸೆಗೆ ನೆರವು ನೀಡುವುದರ ಜತೆಗೆ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ರೀತಿಯಲ್ಲೂ ಸಾಥ್ ನೀಡಿದೆ.
ಇದರ ಜತೆಗೆ ಭಾರತ ಸರಕಾರವು ಪ್ರತಿ ವರ್ಷ ಮಾಲ್ಡೀವ್ಸ್‌ಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುತ್ತದೆ. ವಿರೋಧ ಪಕ್ಷಗಳು ಈ ಎಲ್ಲ ಉದಾಹರಣೆ ಗಳನ್ನು ಮುಂದಿಟ್ಟು ಮುಯಿಝು ಅವರನ್ನು ಎಚ್ಚರಿಸುತ್ತಿವೆ. ಮಾಲ್ಡೀವಿಯನ್ನರ ಬದುಕಿನಲ್ಲಿ ಭಾರತದ ಪಾತ್ರ ಎಷ್ಟು ಮಹತ್ವದ್ದು ಎಂಬುದು ಅಲ್ಲಿನ ವಿರೋಧ ಪಕ್ಷಗಳಿಗೆ ಗೊತ್ತಿದೆ. ಆದ್ದರಿಂದಲೇ ಜಮ್ಹೂರಿ ಪಾರ್ಟಿಯ ನಾಯಕ ಖಾಸಿಮ್ ಇಬ್ರಾಹಿಂ ಅವರು ಮುಯಿಝು ಭಾರತದ ಬಳಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಮಾಲ್ಡೀವ್ಸ್‌ನ ಆಡಳಿತ ಪಕ್ಷ ಚೀನಾಕ್ಕೆ ಎಷ್ಟು ಹತ್ತಿರವಾಗುತ್ತಿದೆಯೋ ಅಲ್ಲಿನ ವಿರೋಧ
ಪಕ್ಷಗಳು ಚೀನಾದ ಬಗ್ಗೆ ಅಷ್ಟೇ ವಿರೋಽ ಭಾವನೆ ಬೆಳೆಸಿಕೊಳ್ಳುತ್ತಿವೆ.
ಅಲ್ಲಿನ ವಿರೋಧ ಪಕ್ಷಗಳು ಎಷ್ಟು ರೊಚ್ಚಿಗೆದ್ದಿವೆ ಎಂಬುದಕ್ಕೆ ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಹೊಡೆದಾಟವೇ ಸಾಕ್ಷಿ. ವಿರೋಧ ಪಕ್ಷಗಳು ಈಗ ಅಧ್ಯಕ್ಷ ಮುಯಿಝು ಅವರ ಪದಚ್ಯುತಿಗೆ ಪ್ರಯತ್ನಿ ಸುತ್ತಿವೆ. ಮುಯಿಝು ಬಳಿ ಈಗ ಎರಡೇ ಆಯ್ಕೆಗಳಿವೆ. ಒಂದೋ ಅವರು ಭಾರತದ ಜತೆಗಿನ ಸಂಬಂಧ ಸುಧಾರಿ ಸಿಕೊಳ್ಳಬೇಕು, ಇಲ್ಲವೇ ಅಧ್ಯಕ್ಷ ಗಾದಿ ಕಳೆದುಕೊಳ್ಳಬೇಕು. ಅಷ್ಟು ಸುಲಭಕ್ಕೆ ಮಾಲ್ಡೀವ್ಸ್ ಸರಕಾರ ಭಾರತದಿಂದ ದೂರವಾಗಿ ಚೀನಾದ ಸ್ನೇಹ ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲ.
ಏಕೆಂದರೆ ಮಾಲ್ಡೀವ್ಸ್‌ಗೆ ಭೌತಿಕವಾಗಿ ಭಾರತ ತುಂಬಾ ಹತ್ತಿರದಲ್ಲಿದೆ ಮತ್ತು ಚೀನಾ ಬಹಳ ದೂರವಿದೆ. ಅಧ್ಯಕ್ಷ ಮುಯಿಝು ಅವರಿಗೆ ಈ ವಾಸ್ತವ ಆದಷ್ಟು ಬೇಗ ಅರ್ಥ ವಾಗಲಿ ಎಂದು ಹಾರೈಸೋಣ. ಹಲವಾರು ವರ್ಷಗಳಿಂದ ಜತನವಾಗಿ ಕಟ್ಟಿಕೊಂಡು ಬಂದ ಅಂತಾರಾಷ್ಟ್ರೀಯ ಸಂಬಂಧಗಳು ಯಾರೋ ಒಬ್ಬ ನಾಯ ಕನ ಒಂದೆರಡು ಉಪದ್ವ್ಯಾ ಪಗಳಿಂದ ಏಕಾಏಕಿ ಹಾಳಾಗಿಹೋಗುವುದಿಲ್ಲ. ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಆಳವಾದ ಸಂಬಂಧ ಕೂಡ ಹಾಗೆಯೇ. ಸದ್ಯಕ್ಕೆ ಈ ಸಂಬಂಧದಲ್ಲಿ ಬಿರುಕು ಮೂಡಿರಬಹುದು. ಆದರೆ, ಎರಡೂ ದೇಶಗಳ ಜನರ ಅನುಕೂಲಕ್ಕಾಗಿ ಇದು ಮೊದಲಿನಂತೆಯೇ ಮತ್ತೆ ಸುಮಧುರ ಬಾಂಧವ್ಯವಾಗಿ ಬದಲಾಗಲಿದೆ. ಆ ದಿನಗಳಿಗಾಗಿ ಕಾಯೋಣ.
(ಲೇಖಕರು ಹಿರಿಯ ಪತ್ರಕರ್ತರು)