Wednesday, 11th December 2024

ಅಲುಗಾಡುತ್ತಿದೆ ಮಮತಾ ಬ್ಯಾನರ್ಜಿ ಸಾಮ್ರಾಜ್ಯ

ಅವಲೋಕನ

ಪ್ರಕಾಶ್ ಶೇಷರಾಘವಾಚಾರ್‌

2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಮಮತಾ ಬ್ಯಾನರ್ಜಿ ಅವರ ಸಾಮ್ರಾಜ್ಯವನ್ನು ಅಲುಗಾಡು ತ್ತಿರುವುದಾ? ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿ ಬರುತ್ತಿರುವುದು. ಮೋದಿ ಮತ್ತು ಅಮಿತ್ ಶಾ ರವರ ಅಬ್ಬರದ ಪ್ರಚಾರಕ್ಕೆ ಕಂಗಾಲಾಗಿ ಮಮತಾರವರು ನೀಡುತ್ತಿರುವ ಪ್ರತಿಕ್ರಿಯೆ ಇದಕ್ಕೆ ಪುಷ್ಠಿ ನೀಡುತ್ತದೆ.

ಕಳೆದ 10 ವರ್ಷಗಳ ತುಷ್ಟೀಕರಣ ರಾಜಕಾರಣ, ಹಿಂಸಾಚಾರಕ್ಕೆ ಉತ್ತೇಜನ, ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಮತ್ತು ಮಮತಾ ತಾವು ಬೆಳೆದು ಬಂದ ರಾಜಕೀಯ ಸಂಸ್ಕೃತಿಗೆ ಭಿನ್ನ ನಡೆಯಿಂದ ಬಂಗಾಲಿಗಳ ಕೆಂಗೆಣ್ಣಿಗೆ ಗುರಿ ಯಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಶಾಂತನು ಗುಹಾ ರೇ ಅಭಿಪ್ರಾಯ ಪಡುತ್ತಾರೆ.

2005 ಆಗಸ್ಟ್ 4 ಲೋಕಸಭಾ ಸದಸ್ಯೆ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುಕೋರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಇದೊಂದು ಅಪಾಯಕಾರಿ ಸಂಗತಿ. ಈ ಬಗ್ಗೆ ಚರ್ಚಿಸಲು  ನಿಲುವಳಿ ಸೂಚನೆಯನ್ನು ಸಭಾಧ್ಯಕ್ಷ ಸೋಮನಾಥ ಚಟರ್ಜಿಯವರಿಗೆ ಸಲ್ಲಿಸಿರುತ್ತಾರೆ. ನೋಟಿಸ್ ತಿರಸ್ಕಾರವಾದ ಕಾರಣ ಕೆಂಡಾಮಂಡಲವಾದ ಮಮತಾ
ರವರು ನೋಟೀಸ್ ಪ್ರತಿಯನ್ನು ಸದನದೊಳಗೆ ಹರಿದು ಸಭಾಧ್ಯಕ್ಷರ ಪೀಠದ ಮೇಲೆ ಎಸೆದು ಸಭಾತ್ಯಾಗ ಮಾಡುತ್ತಾರೆ.

2020ರಲ್ಲಿ ಮಮತಾ ಬ್ಯಾನರ್ಜಿಯವರು ಪೌರತ್ವ ಕಾಯಿದೆಯ ತಿದ್ದುಪಡಿಯನ್ನು ಈ ಕಾಯಿದೆಯು ದೇಶದಲ್ಲಿ ಅಂರ್ತ ಯುದ್ದವನ್ನು ಸೃಷ್ಟಿಸಿ ರಕ್ತಪಾತ ವಾಗುತ್ತದೆ ಎಂದು ಕೂಗಾಡುತ್ತಾರೆ. 15 ವರ್ಷಗಳ ಅಂತರದಲ್ಲಿ ಅಧಿಕಾರಕ್ಕಾಗಿ ಮಮತಾ ರವರ ನಿಲುವು ಅಕ್ರಮ ನುಸುಳುಕೋರರ ಪರವಾಗಿ ಬದಲಾಗಿರುವುದು. ದಶಕಗಳ ಕಾಲ ಎಡರಂಗ ಸರಕಾರದ ರಾಜಕೀಯ
ಹಿಂಸಾಚಾರವನ್ನು ಏಕಾಂಗಿಯಾಗಿ ಎದುರಿಸಿ 2011ರಲ್ಲಿ ಪಶ್ಚಿಮಬಂಗಾಳದ ಗದ್ದುಗೆ ಹಿಡಿಯುವ ಮಮತಾರವರು
ಎಡರಂಗವನ್ನು ಮೀರಿಸಿದ ರಾಜಕೀಯ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ.

ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಜೀವನದ ಅತಿ ದೊಡ್ಡ ಸವಾಲನ್ನು 2021ರ ವಿಧಾನಸಭಾ ಚುನಾವಣೆಯಲ್ಲಿ
ಎದುರಿಸುತ್ತಿದ್ದಾರೆ. 2018ರ ಪಂಚಾಯತಿ ಚುನಾವಣೆಯಲ್ಲಿ ಅಧಿಕಾರದ ದುರುಪಯೋಗ ಪಡಿಸಿಕೊಂಡು ಸುಲಭವಾಗಿ
ಜಯ ಸಾಧಿಸಿದ ರೀತಿಯೇ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭ್ರಮೆ ಈಗ ಅವರಿಗೆ ಇಲ್ಲ.

2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು ಕೇವಲ 3 ಕ್ಷೇತ್ರಗಳಲ್ಲಿ. ಆದರೆ 2019ರ ಲೋಕಸಭಾ ಚುನವಣೆಯಲ್ಲಿ 18 ಸ್ಥಾನಗಳನ್ನು ಗೆಲವು ಸಾಧಿಸಿತ್ತು. ಪಶ್ಚಿಮಬಂಗಾಳದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲಲ್ಲು ಸಂಘ ಪರಿವಾರದ ವಿವಿಧ ಸಂಘಟನೆಗಳು ಕಳೆದ ಅನೇಕ ದಶಕಗಳಿಂದ ನೂರಾರು ಸೇವಾ ಚಟುವಟಿಕೆಗಳ ಮೂಲಕ ಹಾಕಿರುವ ಭದ್ರಬುನಾದಿಯು ಕಾರಣವಾಗಿದೆ.

2006ರವರೆಗೆ ಬಂಗಾಳದ ಅಲ್ಪಸಂಖ್ಯಾತರ ಮತಗಳು ಎಡರಂಗದ ಏಕಸ್ವಾಮ್ಯವಾಗಿತ್ತು. ಮಮತಾ ಬ್ಯಾನರ್ಜಿಯವರು ಈ ಮತಗಳಿಗೆ ಲಗ್ಗೆ ಹಾಕಿ 2011ರಲ್ಲಿ ತಮ್ಮೆಡೆಗೆ ಸೆಳೆದುಕೊಳ್ಳಲು ಸಫಲರಾದರು. ಮುಸ್ಲಿಂ ಮತದಾರರು ಎಡರಂಗವನ್ನು ತೊರೆಯಲು 3 ಕಾರಣಗಳು ಎಂದು ಪತ್ರಕರ್ತ ಸುರಿದ್ ಸಂಕರ್ ಚಟ್ಟೋಪಾಧ್ಯಾಯ ಅಭಿಪ್ರಾಯ ಪಡುತ್ತಾರೆ. ಸಾಚಾರ್
ವರದಿ ಪ್ರಕಟವಾದಾಗ ಗುಜರಾತಿನ ಮುಸ್ಲಿಂರು ಬಂಗಾಳದ ಮುಸ್ಲಿಂರಿಗಿಂತ ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಮುಂದೆ ಇದ್ದಾರೆ.

2006-07ರಲ್ಲಿ ಮುಸ್ಲಿಂ ಬಾಹುಳ್ಯರುವ ನಂದಿಗ್ರಾಮ ಮತ್ತು ಭಾಂಗಾರ್‌ನಲ್ಲಿ ಭೂಸ್ವಾಧೀನ ಮಾಡಿದ್ದು. ಉದ್ಯಮಿ ಅಶೋಕ್ ಟೋಡಿ ಪುತ್ರಿಯನ್ನು ವರಿಸಿದ್ದ ರಿಜ್ವಾನೂರ್ ರಹಮಾನ್ ನಿಗೂಢ ಸಾವು. ಇವುಗಳ ಪರಿಣಾಮ ಟಿಎಂಸಿ 2016ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 90 ರಷ್ಟು ಮುಸ್ಲಿಂ ಪ್ರಾಬಲ್ಯರುವ ಕ್ಷೇತ್ರಗಳಲ್ಲಿ ಜಯ ಸಾಧಿಸಿತು. 2011ರಲ್ಲಿ ಮಮತಾ ಅಽಕಾರಕ್ಕೆ ಬಂದ ತರುವಾಯ ತುಷ್ಟೀಕರಣ ರಾಜಕೀಯ ಪರಾಕಷ್ಟೆಯನ್ನು ತಲುಪಿತು.

ಇಮಾಂಗಳ ಮತ್ತು ಅವರ ಸಹಾಯಕರ ಸಂಬಳವನ್ನು ಹೆಚ್ಚು ಮಾಡಿದರು. ದೇವಸ್ಥಾನಗಳ ಅರ್ಚಕರ ಸಂಬಳ ಹೆಚ್ಚಳವಾಗಲೇ ಇಲ್ಲ. ರಾಜ್ಯದಲ್ಲಿ 10000 ಮದರಸ ಗಳನ್ನು ತೆರೆಯಲಾಗುತ್ತದೆ ಎಂದು ಘೋಷಿಸುತ್ತಾರೆ. ಬಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿರುವವರನ್ನು ನಿರ್ದ್ಯಾಕ್ಷಿಣ್ಯವಾಗಿ ಹೊರ ಹಾಕಲಾಗುವುದು ಎಂದು ಪ್ರಧಾನಿ ಮೋದಿಯವರು ಘೋಷಿಸಿದರೆ ಮಮತಾ ಬ್ಯಾನರ್ಜಿ ಅಕ್ರಮ ನುಸುಳುಕೋರರನ್ನು ಹೊರ ಹಾಕಲು ಮೋದಿ ಯಾರು? ಎಂದು ಪ್ರಶ್ನಿಸಿ ನುಸುಳುಕೋರರ ಪರವಾಗಿ ವಕಾಲತ್ತು ವಹಿಸುತ್ತಾರೆ.

ಬಂಗ್ಲಾದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರ ನರಮೇಧ ನಡೆಸಿದ್ದ ಜಮಾತ್ ಇಸ್ಲಾಂನ ದಿಲ್ವಾರ್ ಹುಸೇನ್ ಸಮೀದ್‌ಗೆ ಗಲ್ಲು ಶಿಕ್ಷೆ ವಿಧಿಸಿದರೆ ಹಂತಕನನ್ನು ಬೆಂಬಲಿಸಿ 16 ಮುಸ್ಲಿಂ ಸಂಘಟನೆಗಳು ಬೃಹತ್ ಪ್ರತಿಭಟನಾ ಸಭೆಯನ್ನು ಕೋಲ್ಕತ್ತಾದಲ್ಲಿ ಮಾಡಲು ಅವಕಾಶ ನೀಡಲಾಗುವುದು. ಮುರ್ಶಿದಾಬಾದ್ ಜಿಲ್ಲೆಯ ಅದ್ವೆ ತ್ ನಗರದಲ್ಲಿ ಮಸೀದಿಯ ಮೌಲ್ವಿ ಸಂಗೀತ, ಸಿನಿಮಾ, ಟಿ.ವಿ ನೋಡಬಾರದು, ಕೇರಂ ಆಡಬಾರದು ಮತ್ತು ಲಾಟರಿ ಟಿಕೇಟ್ ಖರೀದಿಸಬಾರದು ಎಂದು ಫತ್ವಾ ಹೊರಡಿಸಿದರೆ
ರಾಜ್ಯ ಸರಕಾರ ಇದರ ವಿರುದ್ಧ ಚಕಾರವೆತ್ತುವುದಿಲ್ಲ.

ಮೊಹರಂ ಹಾಗೂ ದುರ್ಗಾ ವಿಸರ್ಜನೆ ಒಂದೇ ದಿನ ಬಂದಿದೆಯೆಂದು ದುರ್ಗಾ ವಿರ್ಸಜನೆಗೆ ಅನುಮತಿ ನಿರಾಕರಿಸಲಾಗುವುದು. ವಿದ್ಯಾರ್ಥಿಗಳು ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡಲು ಒತ್ತಾಯಿಸಿ ಧರಣಿ ಕೂತರೆ ಅವರ ಮೇಲೆ ಅಮಾನುಷವಾಗಿ ಪೊಲೀಸರು ಲಾಠಿ ಬೀಸುತ್ತಾರೆ. ವಿರೋಧ ಪಕ್ಷಗಳನ್ನು ದಮನ ಮಾಡುವ ನಿರಂಕುಶಾಧಿಕಾರವನ್ನು ನಿರ್ಲಜ್ಜವಾಗಿ ಮಮತಾ ಆಡಳಿತ
ಪದೇ ಪದೆ ಕೈಗೊಳ್ಳುತ್ತದೆ. ಜಾಧವ್‌ಪುರ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ ಕೇಂದ್ರ ಸಚಿವ
ಬಾಬೂಲ್ ಸುಪ್ರೀಯೊ ಅವರನ್ನು ಎಡಪಕ್ಷಗಳ ವಿದ್ಯಾರ್ಥಿ ಸಂಘದವರು 5 ಗಂಟೆಗಳ ಕಾಲ ಹೊರ ಬರದಂತೆ ಘೇರಾವ್
ಮಾಡಿದಾಗ ಪೊಲೀಸರು ಮೂಕಪ್ರೇಕ್ಷರಾಗಿರುತ್ತಾರೆ.

ಪ್ರಧಾನಿ ಮೋದಿಯವರ ಸಾರ್ವಜನಿಕ ಸಭೆ ಠಾಕೂರ್ ನಗರದಲ್ಲಿ ಅನುಮತಿ ನೀಡುವುದಿಲ್ಲ. ಉತ್ತರ ದಿನಾಜ್ ಪುರದ ಜಿಲ್ಲಾಡಳಿತವು ಯೋಗಿ ಆದಿತ್ಯನಾಥ್‌ರವರ ಹೆಲಿಕಾಪ್ಟರ್ ಇಳಿಯಲು ಅನುಮತಿ ನಿರಾಕರಿಸುತ್ತಾರೆ. ಪೂರ್ವ ಮಿಡ್ನಾಪುರದ ಕಾಂತಿಯೆಂಬಲ್ಲಿ ಅಮಿತ್ ಶಾ ಸಾರ್ವಜನಿಕ ಸಭೆಯ ವೇಳೆ ಮೈದಾನದ ಹೊರಗೆ ನಿಲ್ಲಿಸಿದ್ದ ನೂರಾರು ಬಸ್ ಮತ್ತು ಇತರ ವಾಹನಗಳ ಗಾಜುಗಳನ್ನು ಟಿಎಂಸಿ ಕಾರ್ಯಕರ್ತರು ಪುಡಿ ಪುಡಿ ಮಾಡುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರತಾಪ್ ನಡ್ಡಾರವರ ಕಾರಿನ ಮೇಲೆ ಟಿಎಂಸಿ ಗೂಂಡಾಗಳು ದಾಳಿ ಮಾಡುತ್ತಾರೆ.

ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯ ಗಣತಂತ್ರ ಉಳಿಸಿ ಜಾತ್ರೆಯನ್ನು ಕೈಗೊಳ್ಳಲು ಅನುಮತಿ ನಿರಾಕರಿಸಲಾಗುವುದು.
2018ರ ಪಶ್ಚಿಮ ಬಂಗಾಳದ 58 ಸಾವಿರ ಪಂಚಾಯತಿ ಮತ್ತು ಜಿಲ್ಲಾ ಪರಿಷದ್ ಸ್ಥಾನಗಳ ಚುನಾವಣೆಯಲ್ಲಿ ಒಂದೂ ಸ್ಥಾನವು ರೋಧ ಪಕ್ಷಗಳಿಗೆ ದೊರೆಯದಂತೆ ಮಾಡಬೇಕು ಎಂದು ಮಮತಾ ಕರೆ ನೀಡುತ್ತಾರೆ. ಇದರಿಂದ ಉತ್ತೇಜಿತರಾದ ಟಿಎಂಸಿ ಗೂಂಡಾಗಳು ಸಾವಿರಾರು ಸ್ಥಳಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯುತ್ತಾರೆ. ಟಿಎಂಸಿ ಅಭ್ಯರ್ಥಿಗಳು ಶೇಕಡಾ 35ರಷ್ಟು ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತಾರೆ.

ಶೇಕಡಾ 90ರಷ್ಟು ಸ್ಥಾನವನ್ನು ಚುನಾವಣಾ ಅಕ್ರಮದ ಮೂಲಕ ಜಯ ಸಾಧಿಸುತ್ತಾರೆ. ಆದರೆ ಪಂಚಾಯತಿ ಚುನಾವಣಾ ಅಕ್ರಮವು ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಗೆ ಉರುಳಾಗಿದೆ. ಟಿಎಂಸಿ ಕಾರ್ಯಕರ್ತರ ಹಿಂಸಾತ್ಮಕ ಮತ್ತು ದೌರ್ಜನ್ಯದ
ರಾಜಕೀಯದಿಂದ ರಾಜ್ಯದಲ್ಲಿ ಭಯದ ವಾತಾವರಣವನ್ನು ಸೃಷಿಸಿದ್ದಾರೆ. ಬಿಜೆಪಿಯ 130 ಕಾರ್ಯಕರ್ತರ ಹತ್ಯೆ ನಡೆದಿದೆ. ಕೆಲವರನ್ನು ಮರಕ್ಕೆ ನೇತು ಹಾಕಿ ಮತ್ತೇ ಕೆಲವರನ್ನು ವಿದ್ಯುತ್ ಕಂಬಕ್ಕೆ ನೇತುಹಾಕಿ ಹತ್ಯೆ ಮಾಡಿದ್ದಾರೆ.

ಬಿಜೆಪಿ ನಾಯಕತ್ವ ಈ ಎಲ್ಲಾ ಸಂದರ್ಭದಲ್ಲಿ ಗಟ್ಟಿಯಾಗಿ ನಿಂತುರಾಜ್ಯ ಸರಕಾರ ರಕ್ಷಣೆ ನೀಡದಿದ್ದರೆ ಕೇಂದ್ರ ಸರಕಾರ
ನೀಡುತ್ತದೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಎಡರಂಗ ಮತ್ತು ಕಾಂಗ್ರೇಸ್ ಕಾರ್ಯಕರ್ತರ
ಮೇಲೆಯೂ ಹಲವಾರು ಬಾರಿ ಟಿಎಂಸಿ ಗೂಂಡಾಗಳು ಹಲ್ಲೆ ನಡೆಸಿರುತ್ತಾರೆ. ಆದರೆ ಆ ಪಕ್ಷಗಳ ಕೇಂದ್ರ ನಾಯಕತ್ವ ತಮ್ಮ
ಕಾರ್ಯಕರ್ತರೊಂದಿಗೆ ನಿಲ್ಲುವುದರಲ್ಲಿ ಸೋತಿವೆ.

ಮೂರು ಬಾರಿ ಸಿಪಿಎಂನ ಶಾಸಕರಾಗಿದ್ದ ಮುಮುರ್ ರವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಪತ್ರಕರ್ತರು ತಾವು ಲಾಲ್ ಸಲಾಂ ಹೇಳುತ್ತಿದ್ದವರು ಈಗ ಜೈ ಶ್ರೀರಾಮ್ ಎನ್ನುತ್ತಿದ್ದೀರಾ ಎಂದು ಕೇಳಿದಾಗ ಕೇವಲ ಬಿಜೆಪಿ ಮಾತ್ರ ಟಿಎಂಸಿ ಗೂಂಡಾಗಳಿಂದ ರಕ್ಷಣೆ ನೀಡಲು ಸಾಧ್ಯ ಹೀಗಾಗಿ ಬಿಜೆಪಿ ಸೇರಿದ್ದೇನೆ ಎನ್ನುತ್ತಾರೆ.

2015ರಲ್ಲಿ ಹಿಂದೂ ಜಾಗರಣ ಮಂಚದ ಸಂಘಟನಾ ಕಾರ್ಯದರ್ಶಿಯಾಗಿದ್ದ ದಿಲೀಪ್ ಘೋಷ್ ರವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ನಿಯುಕ್ತಿಯು ಪಕ್ಷದ ಬೆಳವಣಿಗೆಗೆ ವೇಗವನ್ನು ತರುವುದರಲ್ಲಿ ಸಫಲವಾಗುತ್ತದೆ. ಹಾಗೆಯೇ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ಜಯವರ್ಗೀಯರವರು ಕಳೆದ ೫ ವರ್ಷದಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬಲವರ್ಧನೆಗೆ ಸತತವಾಗಿ ಬೆವರು ಸುರಿಸಿರುವ ಪರಿಣಾಮ ಮಮತಾ ಬ್ಯಾನರ್ಜಿಗೆ ಪರ್ಯಾಯ ಶಕ್ತಿಯಾಗಿ ಬೆಳೆಯಲು ಸಹಕಾರಿಯಾಗಿದೆ.

ಕಳೆದ ಆರು ವರ್ಷದಲ್ಲಿ ಮಮತಾ ಸರಕಾರವು ಕೆಂದ್ರ ಸರಕಾರದೊಂದಿಗೆ ಸಂಘರ್ಷದ ನಿಲುವನ್ನು ತೆಗೆದುಕೊಂಡು 80ಕ್ಕೂ ಹೆಚ್ಚು ಕೇಂದ್ರೀಯ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿಲ್ಲ. ರೈತರಿಗೆ ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆ ಯಡಿಯಲ್ಲಿ ನೀಡುವ ರು.6000 ಗಳನ್ನು ಸಹಾ ನಿರಾಕರಿಸಿದ್ದಾರೆ. ಮಮತಾ ಬ್ಯಾನರ್ಜಿಯವರು ಬಿಜೆಪಿಯನ್ನು ಎದುರಿಸಲು ಟಿಎಂಸಿ, ಎಡರಂಗ ಮತ್ತು ಕಾಂಗ್ರೇಸ್ ಕೈಜೋಡಿಸಬೇಕು ಎಂದು ಅಸಹಾಯಕರಾಗಿ ಪತ್ರ ಬರೆಯುತ್ತಾರೆ.

ಪ್ರಚಾರದ ವೇಳೆ ತಮ್ಮ ಅಚಾತುರ್ಯದಿಂದ ಕಾಲಿಗೆ ಪೆಟ್ಟು ಮಾಡಿಕೊಂಡು ಕಳೆದ 15 ದಿನದಿಂದ ಜನರ ಸಹಾನೂಭೂತಿ ಗಿಟ್ಟಿಸಲು ವ್ಹೀಲ್ ಚೇರ್‌ನಲ್ಲೇ ಪ್ರಚಾರ ಮಾಡುತ್ತಿದ್ದಾರೆ. ಸುವೇಂದು ಅಧಿಕಾರಿಯನ್ನು ಅವರ ಭದ್ರಕೋಟೆಯಾದ
ನಂದಿಗ್ರಾಮದಲ್ಲೇ ಮಣಿಸುವೆ ಎಂದು ಅಬ್ಬರಿಸಿ ಸೋಲಿನ ಭಯದಿಂದ ನಾಲ್ಕುದಿನಗಳ ಕಾಲ ನಂದಿಗ್ರಾಮದಲ್ಲೇ ತಳವೂರಿ ಪ್ರಚಾರ ಮಾಡಬೇಕಾಯಿತು.

ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವನ್ನು ಮತ್ತು ಸರ್ಕಾರಿ ಯಂತ್ರವನ್ನು ಬಳಸಿಕೊಂಡು
ವಿರೋಧಿಗಳನ್ನು ದಮನ ಮಾಡಿದ ಪ್ರಜಾತಂತ್ರ ವಿರೋಧಿ ನಡೆಯನ್ನು ಸಂಪೂರ್ಣವಾಗಿ ಮರೆತು ಕೇಂದ್ರ ಚುನಾವಣಾ
ಆಯೋಗವನ್ನು ಪಕ್ಷಪಾತ ಧೋರಣೆ ತೋರಿಸುತ್ತಿದೆ ಎಂದು ಹರಿಹಾಯುತ್ತಿರುವುದು ತಾನು ಕಳ್ಳ ಪರರ ನಂಬ ಬಂತಾಗಿದೆ.

ಮಮತಾ ಅವರಿಗೆ ಮೊದಲಿನ ಆತ್ಮವಿಶ್ವಾಸ ಕುಂದಿಹೋಗಿ ಹತಾಶೆಯಿಂದ ಪ್ರಧಾನಿ ಮತ್ತು ಗೃಹಸಚಿವರ ವಿರುದ್ಧ ಅನಾಗರಿಕ ಭಾಷೆಯ ಬಳಕೆ ಮಾಡಲು ಮಮತಾ ಹಿಂಜರಿಯುತ್ತಿಲ್ಲ. ಮಿಷನ್ ಬೆಂಗಾಲ್ ಲೇಖಕ ಸಿಂಗ್‌ಧೇಂದು ಭಟ್ಟಾಚಾರ್ಯ ಬರೆಯುತ್ತಾರೆ. ಎಡರಂಗ ಸರಕಾರವು ಪಶ್ಚಿಮ ಬಂಗಾಳವನ್ನು ಕ್ಯೂಬಾ ಮತ್ತು ಚೀನಾ ಮಾಡಲು ಹೊರಟಿದ್ದರು. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗ್ಲಾದೇಶ ಮಾಡಲು ಹೊರಟಿದ್ದಾರೆ ಎಂಬ ಭಾವನೆ ಜನರಲ್ಲಿ ಬಂದಿರುವುದು ಎಂದು ತಮ್ಮ ಪುಸ್ತಕದಲ್ಲಿ ವ್ಯಾಖ್ಯಾನಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷಗಳು ಕೇವಲ ಮಮತಾ ಬ್ಯಾನರ್ಜಿಯನ್ನು ಎದುರಿಸುತ್ತಿಲ್ಲ ಇಡಿ ಸರಕಾರಿ ಆಡಳಿತದ
ಯಂತ್ರ ವಿಶೇಷವಾಗಿ ಪೊಲೀಸರು ಮತ್ತು ಟಿಎಂಸಿ ಗೂಂಡಾಗಳನ್ನು ಎನ್ನುತಾರೆ ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳ ಉಸ್ತುವಾರಿಯಾಗಿ 21ದಿನಗಳ ಕಾಲ ಪ್ರಚಾರ ಮಾಡಿದ ಸಚಿವ ಅರವಿಂದ ಲಿಂಬಾವಳಿಯವರು. 2011ರಲ್ಲಿ ಬಂಗಾಳದಲ್ಲಿ ಪೊರಿರ್ಬತನ್ ತರಲಾಗುವುದು ಎಂಬ ಮಮತಾರವರ ಘೋಷಣೆ 2021ರಲ್ಲಿ ಅದು ಅವರಿಗೇ ತಿರುಗುಬಾಣವಾಗುವುದಾ? ಎಂದು ಮೇ 2ರ ತನಕ ಕಾದು ನೋಡಬೇಕಾಗಿದೆ.