ವಿಚಾರ ವೇದಿಕೆ
ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ
ಕಾಂಗ್ರೆಸ್ ತನ್ನ ಪ್ರಣಾಳಿಕೆ ಮೂಲಕ ಮೋದಿಯವರಿಗೆ ಟಕ್ಕರ್ ಕೊಡಬಹುದು ಎಂದು ನಿರೀಕ್ಷಿಸಿದ್ದವರಿಗೆ ಅದರ ಪ್ರಣಾಳಿಕೆ ಭ್ರಮನಿರಸನ ಉಂಟುಮಾಡಿದೆ. ದೇಶದ ಭವಿಷ್ಯ ನಿರ್ಮಾಣ, ತತ್ಸಂಬಂಧಿ ಸವಾಲುಗಳು ಮತ್ತು ಪರಿಣಾಮ ಗಳನ್ನು ಒಳಗೊಳ್ಳದ ಪ್ರಣಾಳಿಕೆಯೊಂದನ್ನು, ಕಳೆದುಕೊಳ್ಳಲು ಏನೂ ಉಳಿದಿಲ್ಲದ ಪಕ್ಷದಿಂದ ಮಾತ್ರ ನಿರೀಕ್ಷಿಸ ಬಹುದು ಎನ್ನುವುದು ಸಾರ್ವಜನಿಕ ಅಭಿಪ್ರಾಯ.
ಕಾಂಗ್ರೆಸ್ ಪಕ್ಷವು ಶುಕ್ರವಾರ ಬಿಡುಗಡೆ ಮಾಡಿರುವ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ‘ನ್ಯಾಯಪತ್ರ’ ಎನ್ನುವ ತಲೆಬರಹದಲ್ಲಿ ಐದು ನ್ಯಾಯಗಳು ಮತ್ತು ಅದರಡಿಯಲ್ಲಿ ೨೫ ಗ್ಯಾರಂಟಿಗಳನ್ನು ಘೋಷಿಸಿಕೊಂಡಿದೆ. ‘ಯುವ ನ್ಯಾಯ’, ‘ಲಿಂಗ ನ್ಯಾಯ’, ‘ರೈತರ ನ್ಯಾಯ’, ‘ಕಾರ್ಮಿಕರ ನ್ಯಾಯ’ ಮತ್ತು ‘ಭಾಗೀದಾರಿ ನ್ಯಾಯ’ ಗಳನ್ನು ಈ ದಾಖಲೆ ಒಳಗೊಂಡಿದೆ. ಅರ್ಹ ಮಹಿಳೆ ಯರಿಗೆ ಸರಕಾರಿ ಕೆಲಸಗಳಲ್ಲಿ ಶೇ.೫೦ರಷ್ಟು ಮೀಸಲಾತಿ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನದ ಪುನಃ ಸ್ಥಾಪನೆ, ಮೋದಿ ನೇತೃತ್ವದ ಬಿಜೆಪಿ ಸರಕಾರದ ಕನಸಿನ ಯೋಜನೆಯಾದ ‘ಅಗ್ನಿಪಥ್’ನ ರದ್ದತಿ, ವಿವಿಧ ಹಂತಗಳಲ್ಲಿ ೩೦ ಲಕ್ಷ ಸರಕಾರಿ ಹುದ್ದೆಗಳ ಭರ್ತಿಗೆ ಕ್ರಮ, ಎಸ್ ಸಿ-ಎಸ್‌ಟಿ-ಒಬಿಸಿ ಸಮುದಾಯಗಳಿಗೆ ಈಗಿರುವ ಶೇ.೫೦ರ ಗರಿಷ್ಠ ಮೀಸಲಾತಿ ಮಿತಿ ಹೆಚ್ಚಳಕ್ಕೆ ಕಾನೂನಿಗೆ
ಅಗತ್ಯ ತಿದ್ದುಪಡಿ ಮತ್ತು ಸಾಮಾಜಿಕ, ಆರ್ಥಿಕ ಹಾಗೂ ಜಾತಿಗಣತಿ ಇವು ಕಾಂಗ್ರೆಸ್ ಪ್ರಣಾಳಿಕೆಯ ಭಾಗವಾಗಿವೆ.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಸಂವಿಧಾನದ ೩೭೦ನೇ ವಿಧಿಯ ಮರುಸ್ಥಾಪನೆಯ ಬಗ್ಗೆ ಪ್ರಣಾಳಿಕೆ ಮೌನ ವಹಿಸಿದೆ; ಆದರೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ತಕ್ಷಣವೇ ಮರುಸ್ಥಾಪಿಸುವ ಭರವಸೆಯನ್ನು ಪಕ್ಷವು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ವಿದ್ಯಾವಂತ ಯುವಕರಿಗೆ ಶಿಷ್ಯವೇತನವನ್ನು ಹಕ್ಕಾಗಿಸುವ ಮೂಲಕ ವರ್ಷಕ್ಕೆ ೧ ಲಕ್ಷ ರುಪಾಯಿ ನೀಡಲು ಪಕ್ಷ ಉದ್ದೇಶಿಸಿದೆ.
‘ಮಹಾಲಕ್ಷ್ಮಿ’ ಯೋಜನೆ ಯಡಿಯಲ್ಲಿ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ೧ ಲಕ್ಷ ರು. ನೀಡುವುದು ಈ ಭರವಸೆ ಪಟ್ಟಿಯ ಭಾಗವಾಗಿದೆ. ಖಾಸಗಿ ವಲಯದ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯ ಗಳಿಗಾಗಿ ಕೋಟಾ ನಿಕ್ಕಿ ಮಾಡುವುದು ಕೂಡ ಇದರ ಒಂದು ಭಾಗವಾಗಿದೆ. ಪ್ರಣಾಳಿಕೆಯು ‘ಉದ್ಯೋಗ, ಸಂಪತ್ತು ಮತ್ತು ಕಲ್ಯಾಣ’ (Uಟ್ಟh, UಛಿZಠಿe Zb Uಛ್ಝ್ಛಿZಛಿ) ತತ್ವಗಳನ್ನು ಪ್ರತಿಪಾದಿಸುತ್ತದೆ ಮತ್ತು ಸಂಪತ್ತಿನ ಸೃಷ್ಟಿ ಹಾಗೂ ಜನಕಲ್ಯಾಣದ ಕ್ರಮಗಳ ಅನುಷ್ಠಾನವನ್ನು ಗುರಿಯಾಗಿಸಿಕೊಂಡಿದೆ ಎನ್ನುವುದು ಕಾಂಗ್ರೆಸ್ಸಿಗರ ಅಭಿಮತವಾಗಿದೆ. ಕಳೆದುಕೊಳ್ಳಲು ಏನೂ
ಉಳಿದಿಲ್ಲದ ಪಕ್ಷದಿಂದ ಮಾತ್ರ ದೇಶದ ದೂರಗಾಮಿ ಸವಾಲುಗಳನ್ನು ಮತ್ತು ಪರಿಹಾರಗಳನ್ನು ಒಳಗೊಳ್ಳದ ಭರವಸೆಗಳ ಪಟ್ಟಿಯನ್ನು ನಿರೀಕ್ಷಿಸಬಹುದಾಗಿದೆ ಎನ್ನುವುದು ವಿರೋಧಿಗಳ ಸಾರ್ವಜನಿಕ ಅಭಿಪ್ರಾಯವಾಗಿದೆ.
ಕಾಂಗ್ರೆಸ್ ಪಕ್ಷವು ವೈಚಾರಿಕವಾಗಿ ಚಿಂತಿಸಿ ತನ್ನ ಪ್ರಣಾಳಿಕೆಯ ಮೂಲಕ ಮೋದಿಯವರಿಗೆ ಈ ಬಾರಿಯಾದರೂ ಟಕ್ಕರ್ ಕೊಡಬಹುದು ಎಂದು ನಿರೀಕ್ಷಿಸಿದ್ದವರಿಗೆ ಈ ಪ್ರಣಾಳಿಕೆಯ ಘೋಷಣೆಯಿಂದ ಭ್ರಮನಿರಸನ ಆಗಿರುವುದಂತೂ ಸತ್ಯ. ಕಾಂಗ್ರೆಸ್ಸೇ ಸ್ವಂತ ಬಲದ ಮೇಲೆ ಬಹುಮತ ಪಡೆದು ಕೇಂದ್ರದಲ್ಲಿ ಸರಕಾರ ನಡೆಸುವುದು ದೂರದ ಮಾತು ಎನ್ನುವುದನ್ನು ಅನೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಈಗಾಗಲೇ ಸಾದರಪಡಿಸಿವೆ. ಹಾಲಿ ಇರುವ ಸದಸ್ಯರ ಸಂಖ್ಯೆಯನ್ನು ಉಳಿಸಿಕೊಳ್ಳುವುದು
ಅಥವಾ ಸಾಧ್ಯವಾದರೆ ಸ್ವಲ್ಪ ಮಟ್ಟಿಗೆ ಬೆಳೆಸಿಕೊಳ್ಳುವುದು ಮಾತ್ರ ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪರಮಧ್ಯೇಯವಾಗಿದೆ ಎನ್ನುವ ವಾಸ್ತವದ ಅರಿವು ಎಲ್ಲರಿಗೂ ಇದೆ (ಈ ಸಂದರ್ಭದಲ್ಲಿ, ತನ್ನ ಮಿತಿಗಳ ತಿಳಿವಳಿಕೆ ಕಾಂಗ್ರೆಸ್‌ನ ನಾಯಕತ್ವಕ್ಕೂ ಇದೆ ಎನ್ನುವುದು ನನ್ನ ಅಭಿಪ್ರಾಯ).
ಇನ್ನು, ಒಂದೊಮ್ಮೆ ‘ಇಂಡಿಯ’ ಮೈತ್ರಿಕೂಟದ ಸಹವರ್ತಿ ಪಕ್ಷಗಳಿಗೆ ಚುನಾವಣೆಯಲ್ಲಿ ಅಗತ್ಯ ಬಹುಮತ ಒದಗಿಬಂದರೂ, ಕಾಂಗ್ರೆಸ್ ಪಕ್ಷವನ್ನು ಮೈತ್ರಿಕೂಟದ ನಾಯಕನ/ಚಾಲಕನ ಸ್ಥಾನದಲ್ಲಿ ಕೂರಿಸಲು ಅವು ತಯಾರಿದ್ದ ಹಾಗೆ ಸದ್ಯಕ್ಕೆ ಯಾರಿಗೂ ಅನಿಸುತ್ತಿಲ್ಲ. ಹೀಗಿರುವಾಗ, ತನ್ನ ಪ್ರಣಾಳಿಕೆ ಯಲ್ಲಿನ ಭರವಸೆಗಳನ್ನು ಈಡೇರಿಸುವ ಪ್ರಮೇಯ ಕಾಂಗ್ರೆಸ್ಸಿಗೆ ಎಲ್ಲಿಂದ ಬರುತ್ತದೆ ಹೇಳಿ? ಹಾಗಾಗಿಯೇ ಈ ತರಹದ, ವಿಧಾನಸಭಾ ಚುನಾವಣೆಗಳ ಮಟ್ಟದ, ಪ್ರಾಯೋಗಿಕವಲ್ಲದ ಮತ್ತು ಕೇವಲ ಜನಮೋಹಕ ಭರವಸೆಗಳನ್ನೊಳಗೊಂಡ ಪ್ರಣಾಳಿಕೆಯನ್ನು ಕಾಂಗ್ರೆಸ್ ಪ್ರಕಟಿಸಿರಬಹುದು ಎನ್ನುವ ಭಾವನೆ ಜನರಲ್ಲಿ ಬಂದಿದ್ದರೆ ತಪ್ಪಿಲ್ಲ.
‘ಬೆಲ್ಲ ಇಲ್ಲದಿದ್ದರೇನಂತೆ, ಬೆಲ್ಲದಂಥಾ ಮಾತುಗಳನ್ನು ಆಡಲು ಏನು ತೊಂದರೆ?’ ಎನ್ನುವುದು ಕಾಂಗ್ರೆಸ್‌ನ ಉದ್ದೇಶವಿರುವಂತೆ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ, ಖಾಸಗಿ ಕಂಪನಿಗಳು ಕೂಡ ಕನಿಷ್ಠ ೨೫ ವರ್ಷಗಳ ಅಭಿವೃದ್ಧಿ ಪಥವನ್ನು ನಿಷ್ಕರ್ಷಿಸಿ ನಿರ್ಧರಿಸುತ್ತವೆ. ಅಂದ ಮೇಲೆ, ದೇಶವೊಂದು ಆರ್ಥಿಕತೆ, ಆಂತರಿಕ ಮತ್ತು ಬಾಹ್ಯ ವಿಚ್ಛಿದ್ರಕಾರಕ ಶಕ್ತಿಗಳಿಂದ ದೇಶದ ರಕ್ಷಣೆ, ಪರಿಸರ ಸಂರಕ್ಷಣೆ, ಕೃಷಿ ಹಾಗೂ ಔದ್ಯೋಗಿಕ ಉತ್ಪಾದಕತೆ ಇವುಗಳ ಕುರಿತು ಮುಂದಿನ ೨೫ ವರ್ಷಗಳ ನಿಲುವುಗಳ ನೀಲಿನಕ್ಷೆ ಯನ್ನು ಹೊಂದಿರಲೇಬೇಕಾಗುತ್ತದೆ.
ಆದರೆ, ದೇಶದ ದೂರಗಾಮಿ ಭವಿಷ್ಯದ ಬೆಳವಣಿಗೆಗಳ ಕುರಿತು ಮೇಲೆ ಹೇಳಿರುವ ಯಾವುದೇ ದೂರದೃಷ್ಟಿಯು ಈ ಭರವಸೆಗಳ ಪಟ್ಟಿಯಲ್ಲಿದೆ ಎನಿಸುತ್ತಿಲ್ಲ. ‘ಮೋದಿಯವರು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಐದು ವರ್ಷ ತೆಗೆದು ಕೊಳ್ಳುವುದಾದರೆ, ನಾವು ಮೂರೇ ವರ್ಷದಲ್ಲಿ ಸಾಧಿಸುತ್ತೇವೆ; ನೀವು ಶೇ.೭೦ರಷ್ಟು ರಕ್ಷಣಾ ಉಪಕರಣಗಳ ತಯಾರಿಯನ್ನು ದೇಶೀಕರಣ ಮಾಡಿ ವಿದೇಶಿ ವಿನಿಮಯವನ್ನು ಉಳಿಸುವುದಾದರೆ, ನಾವು ನೂರಕ್ಕೆ ನೂರು ಪ್ರತಿಶತ ದೇಶದಲ್ಲೇ ಉತ್ಪಾದಿ
ಸುತ್ತೇವೆ; ಹೆಚ್ಚಿನ ತೆರಿಗೆ ಹೇರಿ ಜನರಿಗೆ ತೊಂದರೆ ಆಗದಂತೆ ಅತ್ಯಂತ ಕ್ರಿಯಾತ್ಮಕವಾಗಿ ಸಂಪನ್ಮೂಲ ಕ್ರೋಡೀಕರಣ ನೀತಿಯನ್ನು ನಿರೂಪಿಸುತ್ತೇವೆ; ವಿದೇಶಿ ಬಂಡವಾಳವನ್ನು ಆಕರ್ಷಿಸಲು ಪೂರಕ ವಾತಾವರಣವನ್ನು ನಿರ್ಮಿಸುತ್ತೇವೆ’ ಮುಂತಾದ ಸ್ಪರ್ಧಾತ್ಮಕವಾದ ಮತ್ತು ಸೃಜನಶೀಲವಾದ ಉಪಾಯಗಳನ್ನು ಜನರ ಮುಂದಿಡುವ ಬದಲು, ಅದೇ ಹಳಸಲು ಉಚಿತಗಳು, ಅದೇ ಜಾತಿ ರಾಜಕಾರಣ, ಮೀಸಲಾತಿ ಮತ್ತು ಅದೇ ಅಲ್ಪಸಂಖ್ಯಾತರ ಓಲೈಕೆಗಳು, ಸಾಲಮನ್ನಾ ಮುಂತಾದವುಗಳು ಮಾತ್ರ
ಪ್ರಣಾಳಿಕೆಯಲ್ಲಿ ಕಣ್ಣಿಗೆ ರಾಚುತ್ತವೆ.
ಸಮಾಜದಲ್ಲಿ ಸಮ ಪ್ರಮಾಣದಲ್ಲಿರುವ ಮಹಿಳೆಯರಿಗೆ ಸರಕಾರಿ ಕೆಲಸಗಳಲ್ಲಿ ಶೇ.೫೦ರ ಮೀಸಲಾತಿ ಮತ್ತು ರಾಜಸ್ಥಾನದಲ್ಲಿ ಯಶಸ್ವಿಯಾಗಿ ಜಾರಿಯಾಗಿದ್ದ ೨೫ ಲಕ್ಷದ ನಗದುರಹಿತ ಆರೋಗ್ಯ ವಿಮೆ ಮಾತ್ರ ಈ ಪ್ರಣಾಳಿಕೆಯ ಅತ್ಯಂತ ಸಕಾರಾತ್ಮಕ ಭರವಸೆ ಎಂದು ಹೇಳಬಹುದು.
ಇನ್ನು ಕಾಶ್ಮೀರದ ಕುರಿತಾದ ನಿರ್ಧಾರ ಮತ್ತು ಸೇನಾ ನೇಮಕಾತಿಯ ‘ಅಗ್ನಿವೀರ’ ಕಾರ್ಯಕ್ರಮದ ರದ್ದತಿ, ಮೀಸಲಾತಿಯಲ್ಲಿನ ಹೆಚ್ಚಳಕ್ಕೆ ಕಾನೂನಿನ ತಿದ್ದುಪಡಿ ಮುಂತಾದ ಪ್ರಸ್ತಾಪಗಳು ದೇಶದ ಭವಿಷ್ಯಕ್ಕೆ ಪೂರಕವಾಗಿವೆ ಅಂತ ಯಾಕೋ ನನಗೆ ಅನಿಸುತ್ತಿಲ್ಲ. ಜಾಗತಿಕ ವ್ಯಾಪಾರ-ವ್ಯವಹಾರಗಳು ಅತ್ಯಂತ ಚಂಚಲ ಮತ್ತು ಚಲನಶೀಲವಾಗಿರುವ ಈ ಸಂದರ್ಭದಲ್ಲಿ, ಖಾಸಗಿ
ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವ ಪ್ರಸ್ತಾವದಿಂದ ಅಥವಾ ಕೇವಲ ಅರ್ಹತೆಯ ಆಧಾರದಲ್ಲಿ ನಡೆಯುತ್ತಿದ್ದ ನೇಮಕಾತಿ ಪ್ರಕ್ರಿಯೆಯ ಮೇಲೆ ಮೀಸಲಾತಿಯನ್ನು ಹೇರುವುದರಿಂದ ಉದ್ದಿಮೆಗಳ ಮೇಲೆ ಮಾರಕ ಪರಿಣಾಮ ಉಂಟಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
ದೇಶದಲ್ಲಿ ಹೆಚ್ಚುಕಡಿಮೆ ೫.೫ ಕೋಟಿಗೂ ಮಿಕ್ಕಿ ಇರುವ ಗುತ್ತಿಗೆ ಆಧಾರದ ಉದ್ಯೋಗಿಗಳ ಕೆಲಸವನ್ನು ಕಾಯಂಗೊಳಿಸಲು ಸರಕಾರ ಮುಂದಾದರೆ, ಉದ್ದಿಮೆದಾರರು ಅದರಲ್ಲೂ ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ದಾರಿ ತಾವು ನೋಡಿಕೊಳ್ಳಬಹುದು. ತನ್ಮೂಲಕ, ದೇಶದಲ್ಲಿ ಈಗಾಗಲೇ ಇರುವ ನಿರುದ್ಯೋಗದ ಸಮಸ್ಯೆ ಉಲ್ಬಣವಾಗಬಹುದು. ಉದ್ಯಮಸ್ನೇಹಿ ವಾತಾವರಣ ಇಲ್ಲದಿದ್ದರೆ ಹೊಸ ವಿದೇಶಿ ಬಂಡವಾಳವನ್ನಂತೂ ಕನಸಿನಲ್ಲೂ ನಿರೀಕ್ಷಿಸುವ ಹಾಗಿರುವುದಿಲ್ಲ.
ಒಂದು ಕಡೆ ನರೇಂದ್ರ ಮೋದಿಯವರು, ‘ಭಾರತವು ವೈಶ್ವಿಕವಾಗಿ ಪ್ರಭಾವ ಬೀರುವುದು ಹೇಗೆ? ಭಾರತವನ್ನು ಜಾಗತಿಕವಾಗಿ ಪ್ರಬಲ ಆರ್ಥಿಕ ಶಕ್ತಿಯಾಗಿಸುವುದು ಹೇಗೆ? ಅಧಿಕ ವಿದೇಶಿ ವಿನಿಮಯವನ್ನು ಬಯಸುವ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರತುಪಡಿಸಿ ನಮ್ಮ ಸಾರಿಗೆ ವ್ಯವಸ್ಥೆಯನ್ನು ಹುರಿಗೊಳಿಸುವುದು ಹೇಗೆ ಮತ್ತು ದೇಶದ ಆದಾಯದ ಬಹುಪಾಲನ್ನು ಬೇಡುವ ರಕ್ಷಣಾ ವ್ಯವಸ್ಥೆಯ ಬೇಡಿಕೆಗಳನ್ನು ದೇಶೀಯವಾಗಿ ಪೂರೈಸುವುದು ಹೇಗೆ’ ಇವೇ ಮುಂತಾದ ಕಾರ್ಯತಂತ್ರಗಳ ಕುರಿತು ಮಾತನಾಡುತ್ತಾರೆ ಹಾಗೂ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವುದರ ಕುರಿತ ಸ್ಪಷ್ಟ ಕಾರ್ಯಕ್ರಮವನ್ನು ನಿರೂಪಿಸುತ್ತಾರೆ.
ಇನ್ನೂ ಚುನಾವಣೆಯೇ ನಡೆದಿಲ್ಲ, ಅದಾಗಲೇ ಹೊಸ ಬಿಜೆಪಿ ಸರಕಾರದ ಮೊದಲ ೧೦೦ ದಿನಗಳ ಕಾರ್ಯಸೂಚಿಯನ್ನು ಸಿದ್ಧ ಪಡಿಸಿರುತ್ತಾರೆ. ಇನ್ನೊಂದು ಕಡೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ನ ನಾಯಕತ್ವವು, ಕಾರ್ಪೊರೇಟ್ ಬೋರ್ಡ್ ರೂಮಿ ನಲ್ಲಿ ಎಷ್ಟು ಜನ ಒಬಿಸಿಯವರು ಇದ್ದಾರೆ, ಅದಾನಿ ಹೇಗೆ ಸಂಪಾದನೆ ಮಾಡುತ್ತಾರೆ, ಯಾವುದನ್ನು ಉಚಿತವಾಗಿ ಹಂಚಿ ಜನರನ್ನು ಆಕರ್ಷಿಸಬಹುದು ಮುಂತಾದ ತೀರಾ ಹಳೆಯ ಮತ್ತು ಸವಕಲು ವಿಷಯಗಳನ್ನೇ ಚರ್ಚಿಸುತ್ತಿದೆ. ಹಾಗಾಗಿ ಆಧುನಿಕ ಭಾರತದ ಪ್ರಜೆಗಳ ವಿಶ್ವಾಸ ಗಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ ಎಂದು ‘ಚುನಾವಣಾ ಚಾಣಕ್ಯ’ ಪ್ರಶಾಂತ್ ಕಿಶೋರ್ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.
ಹೆಚ್ಚುಕಡಿಮೆ ೫ ದಶಕ ಅಥವಾ ಹತ್ತು ಬಾರಿ, ಅಗತ್ಯಕ್ಕಿಂತ ಹೆಚ್ಚು ಬಹುಮತದಿಂದ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷಕ್ಕೆ, ಭಾಗೀದಾರಿ, ಕಾರ್ಮಿಕ, ರೈತ, ಯುವ ಮತ್ತು ಲಿಂಗ ನ್ಯಾಯಗಳನ್ನು ಒದಗಿಸಲು ಏಕೆ ಸಾಧ್ಯವಾಗ ಲಿಲ್ಲ? ಎನ್ನುವ ಸಾಮಾನ್ಯ ಸವಾಲಿಗೆ ಉತ್ತರಿಸಬೇಕಾದ ಉತ್ತರದಾಯಿತ್ವ ಇದ್ದೇ ಇದೆ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)