ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

H‌ari Paraak Column: ಮೇಜಿನ ಕೆಳಗೆ ತಗೊಳ್ಳೋ ಮ್ಯಾನರ್ಸ್:‌ ʼಟೇಬಲ್‌ ಮ್ಯಾನರ್ಸ್ʼ

ಸಿನಿಮಾ ಚೆನ್ನಾಗಿದೆ ಅಂತ ವಿಮರ್ಶೆ ಮಾಡ್ತೀವಿ ದುಡ್ಡು ಕೊಡಿ ಅಂತ ಹಿಂದೆ ಬೀಳುವ ಯುಟ್ಯೂ ಬರ್‌ಗಳು ಇರೋದು ಸತ್ಯ. ಅವರ ಈ ದಂಧೆ ನಿರ್ಮಾಪಕರ ಪಾಲಿಗೆ ಕಂಟಕವಾಗಿರೋದು ಕೂಡ ಸತ್ಯ. ಕೆಲವರಂತೂ ನಿರ್ಮಾಪಕರು ಹಣ ಕೊಡದಿದ್ದರೆ, ಸಿನಿಮಾ ವಿಮರ್ಶೆಯನ್ನ ‘ರೋ’ ಅಂತಲೇ ಕರೆದು ಕೊಂಡು ಬಯ್ಯಲು ತುದಿಗಾಲಲ್ಲಿ ರೆಡಿಯಾಗಿರುತ್ತಾರೆ.

ಮೇಜಿನ ಕೆಳಗೆ ತಗೊಳ್ಳೋ ಮ್ಯಾನರ್ಸ್:‌ ʼಟೇಬಲ್‌ ಮ್ಯಾನರ್ಸ್ʼ

-

ಹರಿ ಪರಾಕ್‌ ಹರಿ ಪರಾಕ್‌ Nov 2, 2025 8:30 AM

ತುಂಟರಗಾಳಿ

ಸಿನಿಗನ್ನಡ

ಪಕ್ಕದ ರಾಜ್ಯದ ಪುಣ್ಯಾತ್ಮರೊಬ್ಬರು ‘ಒಂದು ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಆಗೋ ವರೆಗೂ ಅದನ್ನು ವಿಮರ್ಶೆ ಮಾಡಬಾರದು’ ಅಂತ ಕೋರ್ಟಿಗೆ ಹೋಗಿದ್ದರು. ನೆಗೆಟಿವ್ ವಿಮರ್ಶೆ ಮಾಡೋರ ವಿರುದ್ಧದ ಈ ಹೋರಾಟಕ್ಕೆ ಕೋರ್ಟ್‌ನಲ್ಲಿ ಅವರಿಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದ್ದರೂ ಇನ್ನೂ ಅಂತಿಮ ತೀರ್ಪು ಬಂದಿಲ್ಲ. ವಿಶೇಷವಾಗಿ ಅವರು ಯುಟ್ಯೂಬರ್‌ಗಳನ್ನು ಗಮನದಲ್ಲಿಟ್ಟು ಕೊಂಡು ಈ ಕಾನೂನು ಹೋರಾಟ ನಡೆಸುತ್ತಿದ್ದಾರಂತೆ. ಕನ್ನಡದ ನಟ ಆದಿತ್ಯ ಕೂಡ ತಮ್ಮ ‘ಮುಂದುವರಿದ ಅಧ್ಯಾಯ’ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದ ಯುಟ್ಯೂಬರ್‌ಗಳ ಮೇಲೆ ರಾಂಗ್ ಆಗಿದ್ದರು. ನಿರ್ದೇಶಕ ಎ.ಪಿ. ಅರ್ಜುನ್ ಕೂಡ ‘ಪೊಗರು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಕೆಟ್ಟದಾಗಿ ಸಿನಿಮಾ ವಿಮರ್ಶೆ ಮಾಡುವ ಯುಟ್ಯೂಬರ್‌ಗಳ ಮೇಲೆ ಹರಿಹಾಯ್ದಿದ್ದರು.

ಆದಿತ್ಯ ಅವರದ್ದು ಅದರ ಮುಂದುವರಿದ ಅಧ್ಯಾಯ ಆಗಿತ್ತು ಅಷ್ಟೇ. ಆದಿತ್ಯ ತಮ್ಮ ಚಿತ್ರದ ಹೆಸರಿಗೆ ತಕ್ಕಂತೆ ಇನ್ನೂ ಸ್ವಲ್ಪ ಮುಂದುವರಿದು ವಾಣಿಜ್ಯ ಮಂಡಳಿಯ ಚೇಂಬರ್ ವರೆಗೂ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದರು. ಅಲ್ಲಿ, ಯುಟ್ಯೂಬರ್‌ಗಳ ಮೇಲೆ ಕ್ರಮ ತೆಗೆದು ಕೊಳ್ಳುವ ಭರವಸೆ ಸಿಕ್ಕಿತ್ತಾದರೂ ಚೇಂಬರ್ ಇನ್ನೂ ಯಾವ ಕ್ರಮ ತೆಗೆದುಕೊಂಡ ಬಗ್ಗೆ ವರದಿ ಆಗಲಿಲ್ಲ.

ಹಾಗಾಗಿ ಈ ವಿಷಯ ಕೋರ್ಟ್‌ನ ಮೆಟ್ಟಿಲೇರಿತ್ತು. ಆದರೆ ಈ ವಿಷಯಕ್ಕೆ ನೆಟ್ಟಿಗರು ಮಾತ್ರ ‘ಇದು ಕೆಟ್ಟ ಬೆಳವಣಿಗೆ, ನಿಮ್ಮ ಸಿನಿಮಾ ನೋಡಿದವರೆಲ್ಲ, ಚೆನ್ನಾಗಿದೆ ಅಂತಲೇ ವಿಮರ್ಶೆ ಮಾಡಬೇಕಾ?’ ಅಂತ ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ: Hari Paraak Column: ವಿರಾಟ್‌ ಕೊಹ್ಲಿ- ಡಕ್‌ ಡಕ್‌ ಕರ್‌ ನೇ ಲಗಾ

ಸಿನಿಮಾ ಚೆನ್ನಾಗಿದೆ ಅಂತ ವಿಮರ್ಶೆ ಮಾಡ್ತೀವಿ ದುಡ್ಡು ಕೊಡಿ ಅಂತ ಹಿಂದೆ ಬೀಳುವ ಯುಟ್ಯೂ ಬರ್‌ಗಳು ಇರೋದು ಸತ್ಯ. ಅವರ ಈ ದಂಧೆ ನಿರ್ಮಾಪಕರ ಪಾಲಿಗೆ ಕಂಟಕವಾಗಿರೋದು ಕೂಡ ಸತ್ಯ. ಕೆಲವರಂತೂ ನಿರ್ಮಾಪಕರು ಹಣ ಕೊಡದಿದ್ದರೆ, ಸಿನಿಮಾ ವಿಮರ್ಶೆಯನ್ನ ‘ರೋ’ ಅಂತಲೇ ಕರೆದುಕೊಂಡು ಬಯ್ಯಲು ತುದಿಗಾಲಲ್ಲಿ ರೆಡಿಯಾಗಿರುತ್ತಾರೆ. ಅವರ ಈ ದಂಧೆಯ ವಿರುದ್ಧ ಮಾತಾಡೋದು ಸರಿ. ಆದರೆ, ತೀರಾ ಕೋರ್ಟಿಗೆ ಹೋಗಿ ‘ನಮ್ಮ ಚಿತ್ರ ಹೇಗಿದ್ದರೂ ಅದನ್ನು ಚೆನ್ನಾಗಿದೆ ಅನ್ನಬೇಕು. ಇಲ್ಲದಿದ್ದರೆ, ವಿಮರ್ಶೆ ಮಾಡೋದೇ ತಪ್ಪು’ ಎನ್ನುವಂತೆ ನ್ಯಾಯ ಕೇಳುತ್ತಿ ರೋದು ಮಾತ್ರ ಸರಿ ಅಲ್ಲ ಅನ್ನೋದು ಬಹುತೇಕರ ಅಭಿಪ್ರಾಯ.

ಲೂಸ್‌ ಟಾಕ್‌ - ನವೆಂಬರ್‌ ಕನ್ನಡಿಗ

ನಮಸ್ಕಾರ, ಸ್ವಾಭಿಮಾನಿ ಕನ್ನಡಿಗರಿಗೆ, 10 ಗಂಟೆ ಆದ್ರೂ ಇನ್ನೂ ಮಲಗೇ ಇದ್ದೀರಲ್ಲ, ರಾಜ್ಯೋತ್ಸವದ ಸಮಯ ಇದು.

- ಹಲೋ ಬಾಸ್, ಇವತ್ತು ನವೆಂಬರ್ ೨. ರಾಜ್ಯೋತ್ಸವ ನಿನ್ನೆನೇ ಮುಗೀತು. ನಿನ್ನೆ ನಿನ್ನೆಗೆ ನಾಳೆ ನಾಳೆಗೆ ಅಂತ ಕೇಳಿಲ್ವಾ?

ಹೋ, ಅಂದ್ರೆ ನಿಮ್ಮ ಅಭಿಮಾನ ೩ ದಿನದಾ ಬಾಳೂ ಅಲ್ವಾ.. ನೀವು ನವೆಂಬರ್ ೧ಕ್ಕೆ ಮಾತ್ರ ಕನ್ನಡಿಗರಾ? ಸರಿ, ಬೆಂಗಳೂರಲ್ಲಿ ಕನ್ನಡ ಮಾತಾಡದೇ ಇದ್ರೆ, ಕನ್ನಡ ಹಾಡು ಹಾಕದಿದ್ರೆ, ಕನ್ನಡದಲ್ಲಿ ಬೋರ್ಡ್ ಹಾಕದಿದ್ರೆ ನಮ್ಮವರು ಹೊರಗಿನವರ ಮೇಲೆ ಕೈ ಮಾಡ್ತಾರಲ್ಲ ಇದು ಸರೀನಾ?

- ಮತ್ತೆ? ಬೋರ್ಡಿಗಿಲ್ಲದವರೆ ಇಲ್ಲಿಗೆ ಬಂದು, ಕನ್ನಡ ಬೋರ್ಡ್ ಹಾಕಲ್ಲ ಅಂದ್ರೆ, ಸುಮ್ನೆ ಇರ್ಬೇಕಾ. ಕುವೆಂಪು ಅವರೇ ಹೇಳಿದ್ದಾರಲ್ಲ, ‘ಕನ್ನಡಕ್ಕಾಗಿ ಕೈ ಎತ್ತು’ ಅಂತ. ಇಲ್ಲಾ ಅಂದ್ರೆ ನಾವ್ ತಲೆ ಎತ್ಕೊಂಡ್ ಓಡಾಡೋಕಾಗುತ್ತಾ.

ಸರ್, ಕುವೆಂಪು ಅವರು ಹೇಳಿದ್ದು ಬೇರೆ ಅರ್ಥದಲ್ಲಿ. ಹೋಗ್ಲಿ ಬಿಡಿ, ನೀವು ಕನ್ನಡ ರಕ್ಷಕರು ಅಲ್ವಾ? ಹಾಗಿದ್ರೆ, ಕನ್ನಡಕ್ಕಾಗಿ ಹೋರಾಡಿದ ಒಂದಿಬ್ಬರು ಮಹನೀಯರ ಹೆಸರು ಹೇಳಿ ನೋಡೋಣ?

- ನಾರಾಯಣಗೌಡ್ರು, ರೂಪೇಶ್ ರಾಜಣ್ಣ, ಕಿರಿಕ್ ಕೀರ್ತಿ, ಮತ್ತೆ... ಇನ್ನೊಂದಿಬ್ರು ಇದ್ದಾರೆ, ಇರಿ ಹೇಳ್ತೀನಿ

ಅಯ್ಯೋ, ಸಾಕು ಬಿಡಿ, ಓವರ್ ಡೋಸ್ ಆಗೋಯ್ತು. ಸರಿ, ಸಾಫ್ಟ್‌ ವೇರ್ ಕಂಪನಿಗಳಲ್ಲಿ ಕನ್ನಡವನ್ನ, ಕನ್ನಡಿಗರನ್ನ ನಿರ್ಲಕ್ಷ್ಯ ಮಾಡ್ತಿದಾರೆ. ನೀವು ಅಲ್ಲಿ ಕೆಲಸ ಮಾಡ್ತಾ ಇದ್ರೆ ಏನ್

ಮಾಡ್ತಿದ್ರಿ?

- ನಾನು ಅಂಥವರ ಕೈ ಕೆಳಗೆ ಕೆಲಸ ಮಾಡೋದೇ ಇಲ್ಲ. ಬೇಕಿದ್ರೆ ಸರಕಾರಿ ಕೆಲಸ ಸೇರಿ, “ಟೇಬಲ್ ಕೆಳಗೆ ಕೈ ಇಟ್ಕೊಂಡ್" ಜೀವನ ಮಾಡ್ತೀನಿ.

ಓಹೋ, ಟೇಬಲ್ ಮ್ಯಾನರ್ಸ್ ಬಗ್ಗೆ ಮಾತಾಡ್ತಾ ಇದ್ದೀರಿ. ಆದ್ರೆ ಈ ಟೈಮ್ ಟೇಬಲ್ ಹಾಕ್ಕೊಂಡು, ನವೆಂಬರ್ ಬಂದಾಗ ಮಾತ್ರ ‘ಕನ್ನಡ, ಕನ್ನಡ’ ಅನ್ನೋರಿಗೆ ನಿಮ್ಮ ಕಿವಿಮಾತು ?

- ಏನಿಲ್ಲ ಬಿಡ್ರೀ, ಅದರಲ್ಲಿ ತಪ್ಪೇನಿದೆ. ಅವರಿಗೆ ಒಳ್ಳೆ ಟೈಮ್ ಸೆನ್ಸ್ ಇದೆ ಅಂತ ಅಪ್ರಿಶಿಯೇಟ್ ಮಾಡ್ಬೇಕು.‌

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ರಾತ್ರಿ ಹೊತ್ತು ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಸಿಡಿಲು, ಗುಡುಗು ಸಹಿತ ಭಾರಿ ಮಳೆ ಬಂದು ರಸ್ತೆಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಸೋಮು ತನ್ನ ಗಾಡಿ ಮೇಲೆ ಆ ಮಳೆಯ ಹೊರಗೆ ಹೊರಟ. ಗಾಡಿ ಓಡಿಸುತ್ತಿದ್ದ ಸೋಮು ಹಾಕಿಕೊಂಡಿದ್ದ ಜರ್ಕಿನ್‌ನ ಜಿಪ್ ಕಿತ್ತು ಹೋಗಿತ್ತು. ಹಾಗಾಗಿ, ಅದು ಗಾಳಿಗೆ ಅಗಲ ಆಗಿ ಹಾರಾಡುತ್ತಾ ತೊಂದರೆ ಕೊಡುತ್ತಿತ್ತು. ಅದಕ್ಕೆ ಸೋಮು ತನ್ನ ಜರ್ಕಿನ್ ಅನ್ನು ಬಿಚ್ಚಿ ಅದರ ಜಿಪ್ ಬೆನ್ನಿನ ಮೇಲೆ ಬರುವಂತೆ, ಅದರ ಹಿಂಭಾಗ ತನ್ನ ಎದೆ ಮೇಲೆ ಬರುವಂತೆ ಮಾಡಿ ಹಾಕಿಕೊಂಡು ಹೊರಟ.‌

ಸ್ವಲ್ಪ ಹೊತ್ತಿನ ನಂತರ ರಾತ್ರಿ ಮನೆಯ ಇದ್ದ ಖೇಮುಗೆ ಒಂದ್ ಕಾಲ್ ಬಂತು. ನೋಡಿದ್ರೆ ಸೋಮುದು. ಕಾಲ್ ಎತ್ತಿದ ತಕ್ಷಣ, “ಖೇಮು, ಆಕ್ಸಿಡೆಂಟ್ ಆಗಿದೆ, ಹೈವೇ ಪಕ್ಕ ಗಾಡಿ ಸ್ಕಿಡ್ ಆಗಿ ಪಕ್ಕದ ಹಳ್ಳಕ್ಕೆ ಬಿದ್ದಿದ್ದೇನೆ. ಬೇಗ ಬಾ" ಅಂತ ಲೊಕೇಶನ್ ಹೇಳಿದ ಸೋಮು. ಮಳೆಯಲ್ಲಿ ಹೈವೇ ರೋಡಿನ ಪಕ್ಕದ ಮನೆಯಿದ್ದ ಖೇಮು ಅವಸರವಾಗಿ ಸುರಿಯುವ ಮಳೆಯ ಗಾಡಿ ಹತ್ತಿ ಹೈವೇನಲ್ಲಿ ಹೊರಟ. ಸೋಮು ಹೇಳಿದ ಲೊಕೇಶನ್ ತಲುಪಿದಾಗ ಅಲ್ಲಿ ಸೋಮು ಗಾಡಿ ಬಿದ್ದಿತ್ತು.

ಪಕ್ಕದಲ್ಲಿ ಬಗ್ಗಿ ನೋಡಿದಾಗ ಆಳವಾದ ಹಳ್ಳದಲ್ಲಿ ಬಿದ್ದಿದ್ದ ಸೋಮು ಕಾಣಿಸಿದ. ಖೇಮು ಏನೇ ಪ್ರಯತ್ನಪಟ್ಟರೂ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು, “ಆಸ್ಪತ್ರೆಗೆ ತರೋಕೆ ಮುಂಚೆನೇ ಇವರ ಪ್ರಾಣ ಹೋಗಿದೆ" ಅಂತ ಹೇಳಿಬಿಟ್ಟರು. ದುಃಖದಲ್ಲಿ ಕೂತಿದ್ದ ಖೇಮುವನ್ನು ಪೊಲೀಸರು ವಿಚಾರಿಸಲು ಬಂದರು. ಖೇಮುವನ್ನು ಕುರಿತು ಪೊಲೀಸ್ ಆಫೀಸರ್ ಕೇಳಿದ, “ನೀವು ಅಲ್ಲಿಗೆ ಹೋದಾಗ ಅವರ ಪ್ರಾಣ ಹೋಗಿತ್ತಾ?".

ಅದಕ್ಕೆ ಖೇಮು ಹೇಳಿದ, “ಇ ಸರ್, ಆಕ್ಸಿಡೆಂಟ್ ಆಗಿ ಬಿದ್ದ ರಭಸಕ್ಕೆ ಸೋಮುನ ತಲೆ ಉಲ್ಟಾ ತಿರುಗಿಕೊಂಡಿತ್ತು. ನಾನು ಅದನ್ನ ಸರಿ ಮಾಡಿದೆ. ತಕ್ಷಣ ಪ್ರಾಣ ಹೋಯ್ತು".

ಲೈನ್‌ ಮ್ಯಾನ್

ಸೋತವರನ್ನು ಆಡಿಕೊಳ್ಳೋ ಮಂದಿ, ಆಡಿಕೊಂಡು ಸಾಕಾದಾಗ ಏನಂತಾರೆ?

- ಅಯ್ಯೋ, ಹೋಗ್ಲಿ ಬಿಡಿ, ದಿನಾ ಸೋಲೋರಿಗೆ ನಗೋರ‍್ಯಾರು! ‌

ಯಾರೋ ಕಿರಿಕಿರಿ ಮಾಡಿದ್ರು ಅಂತ ಆ ಸಿಟ್ಟನ್ನ ಊಟದ ಮೇಲೆ ತೋರಿಸುವವರಿಗೆ ಒಂದು ಮಾತು

- ಅವ್ರ್ಯಾರೋ ತಲೆ ತಿಂದ್ರು ಅಂತ, ನಾವು ತಿನ್ನೋದು ಬಿಡೋಕಾಗುತ್ತಾ.

ಜೀವನದಲ್ಲಿ ಜುಗುಪ್ಸೆ ಬಂದು ಬೆಟ್ಟದ ತುದಿಯಲ್ಲಿ ನಿಂತಿದ್ದ ಸೋಮು: ‘ನನ್ನ ಜೀವನದಲ್ಲಿ ನಂಗೆ ಬೆನ್ನು ತಟ್ಟೋರೇ ಯಾರೂ ಇಲ್ಲ’.

- ಖೇಮು: ‘ನಾನಿದ್ದೀನಿ. ಆದ್ರೆ ಈಗ ಬೆನ್ನು ತಟ್ಟಿದ್ರೆ ನಿಂಗೇ ಕಷ್ಟ, ಬ್ಯಾಡ ಬಿಡು’.

ಒಂದರ ಹಿಂದೆ ಒಂದು ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್ ಹೌಸ್

- ‘ಸೋಪ್’ ಫ್ಯಾಕ್ಟರಿ

ಧಾರಾವಾಹಿಗಳ ಟಿಆರ್‌ಪಿ

- ‘ಸೀರಿಯಲ್’ ನಂಬರ್

ರಾಹುಲ್ ದ್ರಾವಿಡ್ ಹತ್ರ ಹೆಂಗ್ ಮಾತಾಡಬೇಕು ?

- ಹೆಂಗಾದ್ರೂ ಮಾತಾಡ್ಲಿ, ಆದ್ರೆ ಅಡ್ಡ ‘ಗೋಡೆ’ ಮೇಲೆ ದೀಪ ಇಟ್ಟಂಗೆ ಮಾತ್ರ ಮಾತಾಡಬಾರದು.

ಪ್ರಪಂಚದಲ್ಲಿ ನಿಜವಾದ ‘ಸಿರಿ’ವಂತ ‌

- ಐಫೋನ್ ಇಟ್ಟುಕೊಂಡವನು

ಶೋಕಿಗೋಸ್ಕರ ಐಫೋನ್ ತಗೊಂಡವನಿಗೆ ಒಂದು ಮಾತು

- ಅಲ್ಪನಿಗೆ ‘ಸಿರಿ’ ಸಿಕ್ರೆ, ಅರ್ಧರಾತ್ರಿಯಲ್ಲಿ ಚಾಟ್ ಮಾಡೋಣ ಬಾ ಅಂದ್ನಂತೆ.

ಗರ್ಲ್ ಫ್ರೆಂಡ್‌ನ ದಿನಾ ಪಿಕ್ ಅಪ್-ಡ್ರಾಪ್ ಮಾಡೋ ಹುಡುಗನದ್ದು

- ‘ಹಕ್ಕಿ’ ‘ಪಿಕ್ಕಿ’ ಜನಾಂಗ

ಮಳೆಯ ಅನಾನುಕೂಲ

- ರಸ್ತೆ ರಿಪೇರಿ ಕೆಲಸ ‘ನಿಂತ ನೀರಾಗುತ್ತೆ’