Friday, 13th December 2024

ಭೂತಾಯಿಯ ಪ್ರಾರ್ಥಿಸುವ ಹಬ್ಬ; ಮಣ್ಣೆತ್ತಿನ ಅಮಾವಾಸ್ಯೆ

ತನ್ನಿಮಿತ್ತ

ಡಾ.ಪ್ರಕಾಶ ಗ.ಖಾಡೆ

ಕರ್ನಾಟಕದಲ್ಲಿ ಜ್ಯೇಷ್ಠ ಬಹುಳ ಅಮಾವಾಸ್ಯೆಗೆ ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಭದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ. ಕಾರ ಹುಣ್ಣಿವೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತು ಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ, ಮಣ್ಣು ಒಕ್ಕಲು ಮಕ್ಕಳಿಗೆ ಅತ್ಯಂತ ಪವಿತ್ರವಾದುದು.

ವರ್ಷಾರಂಭದಿಂದ ಐದು ಮುಖ್ಯ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ. ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣು ಪೂಜೆಯ ದ್ಯೋತಕವಾಗಿವೆ, ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ
ಪೂಜಿಸುತ್ತಾರೆ. ಕೃಷಿಕರ ಅತ್ಯಂತ ಒಡನಾಡಿಯಾಗಿರುವ ದನಕರುಗಳನ್ನು ಕಾರ ಹುಣ್ಣಿಮೆಯಲ್ಲಿ ವಿಶೇಷವಾಗಿ ಮೈ ತೊಳೆದು, ಬಣ್ಣ ಹಚ್ಚಿ, ವಿವಿಧ ಪರಿಕರ ಗಳಿಂದ ಸಿಂಗಾರ ಮಾಡಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಭ್ರಮ ಹೇಳತೀರದು.

ದನಕರುಗಳನ್ನು ಮನಬಂದಂತೆ ಓಡಾಡಿಸುವ ಮೂಲಕ ತಿಂಗಳೊಪ್ಪತ್ತಿನಿಂದ ವಿಶ್ರಾಂತಿಗೆ ಸರಿದಿದ್ದ ಅವುಗಳನ್ನು ಮತ್ತೆ ಕೃಷಿ ಕಾಯಕಕ್ಕೆ ಸಜ್ಜು ಮಾಡುತ್ತಾರೆ.
ಕಾರ ಹುಣ್ಣಿಮೆ ಮುಗಿದು ಬರುವ ಅಮಾವಾಸ್ಯೆಯೇ ಮಣ್ಣೆತ್ತಿನ ಅಮಾವಾಸ್ಯೆ. ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ. ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ದೊಡ್ಡ, ಸಣ್ಣ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ. ಇಲ್ಲವೇ ಊರ ಕುಂಬಾರ
ಮನೆಗಳಿಂದಲೂ ತಯಾರಿಸಿ ಜೋಡಿ ಎತ್ತುಗಳನ್ನು ಜೋಳ, ಕಾಳು, ಹಣಕೊಟ್ಟು ಖರೀದಿಸಿ ತರುತ್ತಾರೆ.

ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಬಣ್ಣಗಳ ಬ್ಯಾಗಡಿ ಚೂರು, ಬಣ್ಣದಲ್ಲಿ ತೊಯಿಸಿದ ಜೋಳ. ಕುಸುಬಿ ಕಾಳುಗಳಿಂದ ಎತ್ತುಗಳಿಗೆ ಕೊಂಬಣಸು, ಇಣಿಗವಚ, ಜೂಲು, ತೋಡೆ, ಗಂಟೆ ಸರಗಳಿಂದ ಸಿಂಗರಿಸುತ್ತಾರೆ.
ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆ ಹೆಣ್ಣು ಮಕ್ಕಳು ಹೋಳಿಗೆ, ಕಡಬು ಸೇರಿದಂತೆ ಹಲವು ಸವಿಯಾದ ಅಡುಗೆ ಸಿದ್ಧಪಡಿಸುತ್ತಾರೆ. ಮನೆಯ ದನಕರುಗಳನ್ನೂ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ.

ಮಣ್ಣೆತ್ತುಗಳಿಗೆ ಕಾಯಿ, ಕರ್ಪೂರ, ಊದುಬತ್ತಿ, ಲೋಬಾನ ಹಾಕಿ ಎಡೆ ಹಿಡಿದು ಪೂಜೆ ಮಾಡುತ್ತಾರೆ. ಸಕಲ ಜೀವ ರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಊರಲ್ಲಿ ದೇವರುಗಳಿಗೆ ಕಾಯಿ, ಕರ್ಪೂರದೊಂದಿಗೆ ಹೋಗಿ ಎಡೆ ಹಿಡಿದು ಬಂದು
ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆ ಮನೆ ತೆರಳಿ ಪೂಜಿತ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.

ಮರುದಿನ ಮಕ್ಕಳು ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಎತ್ತಿನ ಕಾಲು ಮುರಿದು ತಟ್ಟೆಯಲ್ಲಿಟ್ಟುಕೊಂಡು ಮನೆ ಮನೆಗೆ ತೆರಳಿ ಎಂಟತ್ತಿನ್ಯಾಗ ಒಂದ ಕುಂಟೆತ್ತ ಬಂದೈತಿ ಜ್ವಾಳಾ ನೀಡಿರಿ ಎಂದು ತಿರುಗುತ್ತಾರೆ. ಮನೆಯವರು ಜೋಳ, ಗೋದಿ, ಸಜ್ಜೆ , ಅಕ್ಕಿ , ಹಣ ನೀಡಿ ಕಳುಹಿಸುತ್ತಾರೆ. ಸಂಗ್ರಹಿಸಿದ ದವಸ ಧಾನ್ಯಗಳನ್ನು ಊರ ಅಂಗಡಿಗೆ ಹಾಕಿ ಪಂಚ ಪಳಾರ, ಊದಬತ್ತಿ, ಕುಂಕುಮ, ವಿಭೂತಿ, ಟೆಂಗಿನಕಾಯಿ, ಬೆಲ್ಲ, ಚುರಮುರಿ ಖರೀದಿಸುತ್ತಾರೆ. ಎತ್ತುಗಳನ್ನು ತೆಗೆದುಕೊಂಡು ಹೊಳೆ, ಕೆರೆ, ಹಳ್ಳದ ದಂಡೆಗೆ ಹೋಗಿ ಅಲ್ಲಿ ಎಲ್ಲ ಮಣ್ಣೆತ್ತುಗಳ ಮುಖ ತೊಳೆದು ವಿಭೂತಿ, ಕುಂಕುಮ ಹಚ್ಚಿ ಉದುಬತ್ತಿ ಬೆಳಗಿ ಪಂಚ ಪಳಾರು ಹಾಕಿ, ಕಾಯಿ ಒಡೆದು ಕಾಲು ಮುಗಿದು ಊರ ಸಮೃದ್ಧಿಗೆ ಬೇಡಿಕೊಂಡು ಎತ್ತುಗಳನ್ನು ಹೊಳೆಗೆ ಬಿಡುತ್ತಾರೆ.

ನಂತರ ದಾರಿಯಲ್ಲಿ ಸಿಕ್ಕವರಿಗೆ ಪಳಾರು ಹಂಚುತ್ತಾರೆ. ಇದು ಹಳ್ಳಿಯ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆಯ ಸಂಭ್ರಮ. ಭೂತಾಯಿಗೆ ರೈತಾಪಿ ಜನ ಮಳೆ, ಬೆಳೆ ಚೆನ್ನಾಗಿ ಆಗಲೆಂದು ಕೃಷಿ ವರ್ಷಾರಂಭದಲ್ಲಿ ಬೇಡಿಕೊಳ್ಳುವ ಹಬ್ಬವಾಗಿದೆ.