Wednesday, 11th December 2024

ಮಂತ್ರಿ ಮಾಧವ ವಿವರಿಸಿದ ಸಂತೋಷದ ಸಂಗತಿ

ಸುಧಕ್ಕನ ಕತೆಗಳು

ಸುಧಾಮೂರ್ತಿ

ಅಜ್ಜಿ ಈ ಹೊತ್ತು ನೀನು ರಾಜನ ಕಥೆ ಹೇಳಬೇಕು’ ಎಂದು ಮೀನು ಅಜ್ಜಿಗೆ ಗಂಟು ಬಿದ್ದಳು. ‘ಆದರೆ ಒಳ್ಳೆ ರಾಜನ ಕಥೆ ಇರಬೇಕು. ಯಾರಿಗೂ ರಾಜ ಶಿಕ್ಷೆ ಕೊಡಬಾರ‍್ದು, ಕಷ್ಟ ಕೊಡಬಾರದು’ ಎಂದಳು ಅನುಷ್ಕಾ. ‘ಅಜ್ಜಿ, ರಾಜನಿಗೆ ಮಂತ್ರಿ ಯಾಕಿರಬೇಕು? ಸೇನಾ
ಪತಿ ಯಾಕಿರಬೇಕು?’ ಅಜ್ಜಿ ನಗುತ್ತಾ ಹೇಳಿದಳು.

‘ರಾಜ್ಯ ಅಂದ್ರೆ ಸಾಮಾನ್ಯವಲ್ಲ. ಅಲ್ಲಿ ಪ್ರಜೆಗಳು ಇರ‍್ತಾರೆ. ಅವರಿಗೆ ಕಷ್ಟ, ಸುಖ ಎಲ್ಲಾ ರಾಜನೇ ನೋಡ್ಕೋಬೇಕು. ರಾಜ್ಯದ ಮೇಲೆ ಯಾರಾದರೂ ದಂಡೆತ್ತಿ ಬಂದರೆ ಪುಂಡರನ್ನು ಹೊರಗೆ ಹೊಡೆದು ಓಡಿಸಲಿಕ್ಕೆ ಸೈನ್ಯ ಬೇಕು. ಸೈನ್ಯ ನೋಡಿಕೊಳ್ಳೋಕೆ ಸೇನಾಧಿಪತಿ ಬೇಕು. ಹೀಗೆ ರಾಜನಿಗೆ ಅನೇಕ ಸಹಾಯಬೇಕು. ಸಾಮಾನ್ಯವಾಗಿ ಮಂತ್ರಿಗಳು ರಾಜನಿಗೆ ಸಲಹೆ ಕೊಡ್ತಾರೆ. ಅದಕ್ಕೆ ಮಂತ್ರಿಗಳ ಸ್ಥಾನ ಮಹತ್ವದ್ದು.

‘ಅಜ್ಜಿ ಈ ಹೊತ್ತು ಅಂಥಾ ಒಂದು ಕಥೆ ಹೇಳು’ ಎಂದು ರಘು ಹೇಳಿದ. ‘ಹೇಳ್ತೀನಿ. ಹಳೇ ಕಾಲದಲ್ಲಿ ರಾಜನಿಗೆ ಸಂಪತ್ತು, ಕೋಟೆ, ಸೈನ್ಯ, ಮಂತ್ರಿಗಳು, ಉತ್ಸಾಹ, ಕಲೆ ಎಲ್ಲವೂ ಇದ್ರೆ ಮಾತ್ರ ಅವನು ಒಳ್ಳೆ ರಾಜ್ಯ ಆಳಲು ಸಾಧ್ಯವಾಗ್ತಿತ್ತು. ರಾಜ ಏನಾದ್ರು ತಪ್ಪಿದ್ರೆ ಹೆದರದೇನೇ ಮಂತ್ರಿ ಸಲಹೆ ಕೊಡ್ತಿದ್ರು’ ಅರಸು ಅಮರಸಿಂಹ ಮತ್ತು ಮಂತ್ರಿ ಮಾಧವ ಯಾವಾಗಲೂ ಪ್ರಜೆಗಳ ಬಗ್ಗೆಯೇ ಯೋಚಿಸುತ್ತಿದ್ದರು. ಒಂದು ದಿನ ರಾಜ- ಮಂತ್ರಿ ಅರಮನೆಯ ಮೇಲಿನ ಅಂಗಳದಲ್ಲಿ ನಿಂತು ರಾಜಧಾನಿಯನ್ನು ನೋಡು ತ್ತಿದ್ದರು. ಅದು ಉತ್ಸವದ ದಿನಗಳಾಗಿದ್ದವು.

ಎಲ್ಲೆಲ್ಲಿಯೂ ಸಂಭ್ರಮವೇ ಸಂಭ್ರಮ. ವಿಧ ವಿಧವಾದ ಅಂಗಡಿಗಳು, ವಿವಿಧ ಸಾಮಗ್ರಿಗಳನ್ನು ಮಾರುತ್ತಿದ್ದರು. ಜನರು ಹೊಸ ಬಟ್ಟೆಯನ್ನು ಖರೀದಿಸುತ್ತಿದ್ದರು. ಮನೆಯ ಮುಂದೆ ರಂಗೋಲಿ, ಹಸಿರು ತೋರಣ, ಕಾಣುತ್ತಿದ್ದವು. ರಾಜನಿಗೆ ತುಂಬಾ ಸಂತೋಷವಾಯಿತು. ‘ಮಾಧವ, ನೋಡು. ನನ್ನ ರಾಜ್ಯದಲ್ಲಿ ಹೇಗೆ ಎಲ್ಲರೂ ಸುಖಿಯಾಗಿದ್ದಾರೆ.’ ಎಂದು ಹೆಮ್ಮೆಯಿಂದ
ಹೇಳಿಕೊಂಡ.

‘ಪ್ರಭು ಸುಖ ಎನ್ನೋದು ಅವರವರ ಮನಸ್ಸಿನಂತೆ. ನಾವು ಅಂದುಕೊಂಡಂತೆ ಎಲ್ಲರೂ ಸುಖಿಯಾಗಿ, ಸಂತೋಷದಿಂದ ಇರುವುದಿಲ್ಲ.’ ‘ಮಾಧವ ಅದನ್ನು ನಾನು ಒಪ್ಪೋದಿಲ್ಲ. ಬೇಕಿದ್ದರೆ ನಾಳೆ ಸಭೆಗೆ ಬೇರೆ, ಬೇರೆ ಜನರನ್ನು ಕರೆಸಿ ಕೇಳೋಣ’
ಎಂದ. ಮರುದಿನ ಸಭೆಯಲ್ಲಿ ಎಲ್ಲ ವರ್ಗದ ಜನರನ್ನು ಕರೆಯಿಸಲಾಯಿತು. ಅಮರಸಿಂಹ ಪ್ರಜೆಗಳನ್ನು ಉದ್ದೇಶಿಸಿ ‘ನೀವೇಲ್ಲರು
ಪ್ರಾಮಾಣಿಕವಾಗಿ ಸಂತೋಷವಾಗಿ ಇದ್ದೇವೆ ಎಂದರೆ ನನಗೂ ಸಂತೋಷ. ನಿಮ್ಮ ನಿಮ್ಮ ಅಭಿಪ್ರಾಯ ಹೇಳಿ’ ಅಂದ.

‘ಪ್ರಭು ನಾವು ಸಂತೋಷದಿಂದ ಇದ್ದೇವೆ. ನಿಮ್ಮ ರಾಜ್ಯದಲ್ಲಿ ಹೆಚ್ಚಿನ ತೆರಿಗೆ ಇಲ್ಲ. ಕಳ್ಳರ ಭಯ ಕಡಿಮೆ. ಬೇಕಾದಷ್ಟು ವ್ಯಾಪಾರ ಚೆನ್ನಾಗಿದೆ’ ಎಂದರು ವ್ಯಾಪಾರ ವರ್ಗದವರು. ಅವರ ಮುಖದಲ್ಲಿ ಸಂತೋಷ ಕಾಣಿಸುತ್ತಿತ್ತು. ‘ನಮಗೆಲ್ಲ ಉತ್ತಮ ಊಟ, ವಸತಿ, ಸಂಬಳ ಸಿಗುತ್ತದೆ. ಸದ್ಯಕ್ಕೆ ಯಾವ ವೈರಿಗಳು ನಮ್ಮ ಮೇಲೆ ದಂಡೆತ್ತಿ ಬಂದಿಲ್ಲ. ನಾವೆಲ್ಲ ಸಂತೋಷವಾಗಿ ಇದ್ದೇವೆ ಎಂದರು
ಸೈನಿಕರು.

ಅದೇರೀತಿ ಕಲಾವಿದರು, ಶಿಕ್ಷಕರು, ಶಿಲ್ಪಿಗಳು, ಕೆಲಸಗಾರರು ‘ಸಂತೋಷವಾಗಿಯೇ ಇದ್ದೇವೆ’ ಎಂದು ಹೇಳಿದರು. ರಾಜ ಮಂತ್ರಿಯ ಕಡೆಗೆ ನೋಡಿ ತನ್ನ ಊಹೆ ಸರಿ ಎಂದು ನಸುನಕ್ಕ. ಮಾಧವ ಎದ್ದುನಿಂತು ಹೇಳಿದ. ‘ಹಾಗಿದ್ದರೆ ನಾಳೆ ನೀವೆಲ್ಲರೂ ಮಹಾರಾಜರ ಅಂತಃಪುರ ಹೂವಿನ ತೋಟಕ್ಕೆ ಬನ್ನಿ, ಒಂದೆರಡು ಗಂಟೆ ಅಲ್ಲಿ ಓಡಾಡಿ ಹೋಗುವಿರಂತೆ’. ಪ್ರಜೆಗಳು ಒಪ್ಪಿಕೊಂಡು ಹೊರಟುಹೋದರು. ಅಮರಸಿಂಹನ ಅಂತಃಪುರದ ತೋಟ ತುಂಬ ಪ್ರಸಿದ್ಧಿಯಾಗಿ ಅದನ್ನು ನೋಡಲು ಎಲ್ಲರಿಗೂ ಸಾಧ್ಯವಿರಲಿಲ್ಲ. ಅದಕ್ಕೆ ಎಲ್ಲರಿಗೂ ಆನಂದವಾಯಿತು.

ಮಾಧನ ರಾಜನ ಕಡೆ ತಿರುಗಿ ‘ನಾಳೆ ನಿಮಗೆ ಎಲ್ಲರ ಸಂತೋಷ ಗೊತ್ತಾಗುವುದು. ನಾನೂ ನಿಮ್ಮೊಡನೆ ಇರುತ್ತೇನೆ. ಬೇಕೂಂತಲೇ ಈ ತರಹದ ವ್ಯವಸ್ಥೆ ನಿಮ್ಮನ್ನು ಕೇಳದೇನೆ ಮಾಡಿದ್ದೇನೆ ಕ್ಷಮಿಸಬೇಕು’ ‘ಇಲ್ಲ ಮಾಧವ. ನೀನು ಏನು ಮಾಡಿದ್ರು ನಮ್ಮ ರಾಜ್ಯದ ಹಿತಕ್ಕಾಗಿಯೇ ಮಾಡ್ತೀರಿ. ಅದು ನನಗೆ ಚೆನ್ನಾಗಿ ಗೊತ್ತಿದೆ’. ಮರುದಿನ ರಾಜನ ತೋಟದ ಮುಂದೆ ಪ್ರಜೆಗಳು ನೆರೆದರು. ಮಂತ್ರಿ ಅವರಿಗೆಲ್ಲಾ ಒಂದೇ ತರಹದ ಚೀಲಕೊಟ್ಟು ‘ ನೀವೆಲ್ಲರೂ ಎರಡು ಗಂಟೆ ತೋಟದಲ್ಲಿ ತಿರುಗಾಡಿ ನಿಮಗೆ ಏನು ಬೇಕು ಅದನ್ನ ಈ ಚೀಲದಲ್ಲಿ ಹಾಕಿಕೊಂಡು ಬನ್ನಿ. ಚೀಲದಲ್ಲಿ ಇದ್ದದ್ದೆಲ್ಲಾ ನಿಮ್ಮದೇ ಗಾಬರಿಬೇಡ. ನಾನೂ ಮತ್ತು ಮಂತ್ರಿ ಬಾಗಿಲ ಬಳಿ
ನಿಂತಿರುತ್ತೇವೆ. ಅಲ್ಲಿ ನಿಮ್ಮನ್ನು ಭೇಟಿ ಮಡುತ್ತೇವೆ’ ಎಂದು ರಾಜ ಅಮರಸಿಂಹ ಹೇಳಿದ.

ತೋಟದ ಬಾಗಿಲು ತೆರೆಯಿತು. ಜನರು ಉತ್ಸಾಹ ದಿಂದ ಒಳನುಗ್ಗಿದರು. ಅದೊಂದು ಅಪೂರ್ವವಾದ ಉದ್ಯಾನವಾಗಿತ್ತು. ಅಲ್ಲಿ ಹೊಸ ಹೊಸ ಹಣ್ಣಿನ ಗಿಡಗಳಿದ್ದವು. ಬಣ್ಣ ಬಣ್ಣದ ಹೂಗಳಿದ್ದವು. ಬಾಳೆ, ಮಾವು, ಹಲಸು, ನೇರಳೆ, ಸೇಬು ಹಣ್ಣುಗಳ ರಸ ದಿಂದ ತುಂಬಿ ತುಳುಕುತ್ತಿದ್ದವು. ಜನರು ಆಸೆಯಿಂದ ಗಿಡದಿಂದ ಹರಿವು ಚೀಲ ತುಂಬಿಕೊಂಡರು. ಮುಂದೆ ನಡೆದಾಗ ಒಂದೆಡೆ ಬೆಳ್ಳಿಯ ಪಾತ್ರೆಗಳ ರಾಶಿಯೇ ಕಂಡಿತು. ಅಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದವು. ಜನರು ಏನನ್ನೂ ಯೋಚಿಸದೆ ಹಣ್ಣಿನ ಚೀಲವನ್ನು ಬರಿದು ಮಾಡಿಕೊಂಡು ಅದರಲ್ಲಿ ಸಾಧ್ಯವಾದಷ್ಟು ಬೆಳ್ಳಿಯ ಪಾತ್ರೆಗಳನ್ನು ತುಂಬಲು ಪ್ರಯತ್ನ
ಪಡುತ್ತಿದ್ದರು.

ಹಾಗೆಯೇ ಮುಂದೆ ಬಂದಾಗ ಅವರಿಗೆ ಚಿನ್ನದ ಗಟ್ಟಿಗಳು ಕಂಡವು. ಜನರ ಉತ್ಸಾಹಕ್ಕೆ ಎಣೆಯೇ ಇರಲಿಲ್ಲ. ಅನೇಕ ಸುಂದರ ಪ್ರಾಣಿ ಪಕ್ಷಿಗಳು ಸಹಿತ ಅಲ್ಲಿ ಓಡಾಡುತ್ತಿದ್ದರೂ ಯಾರ ಲಕ್ಷ್ಯ ಅಲ್ಲಿಗೆ ಹೋಗಲಿಲ್ಲ. ತಮ್ಮ ತಮ್ಮ ಚೀಲದಲ್ಲಿಯ ಬೆಳ್ಳಿಯ ಸಾಮಾನುಗಳನ್ನು ನೆಲಕ್ಕೆ ಸುರಿದು ಚಿನ್ನದ ಗಟ್ಟಿಗಳನ್ನು ಚೀಲಕ್ಕೆ ತುಂಬಿಕೊಳ್ಳಲು ಪರದಾಡುತ್ತಿದ್ದರು. ಭಾರವಾದ ಚೀಲವನ್ನು ಹೊತ್ತು ಬಾಗಿಲ ಕಡೆಗೆ ಬರುವಾಗ ಅವರಿಗೆ ಇನ್ನೊಂದು ಅಚ್ಚರಿ ಕಾದಿತ್ತು. ಅಲ್ಲಿ ನೀರಿನ ತೊರೆ ರಭಸದಿಂದ ಹರಿಯುತ್ತಿತ್ತು.
ಅದನ್ನು ದಾಟಿದರೆ ಎದುರಿಗೆ ಬಾಗಿಲು. ಅಲ್ಲಿ ರಾಜಾ ಅಮರಸಿಂಹ ಮತ್ತು ಮಂತ್ರಿ ಮಾಧವ ನಿಂತಿದ್ದರು.

ನೀರಿನ ರಭಸ ಬಹು ಜೋರಾಗಿತ್ತು. ಕಾಲು ಇಟ್ಟರೆ ಆ ಪ್ರವಾಹ ನಿಮ್ಮನ್ನು ಸೆಳೆದೊಯ್ಯುತ್ತಿತ್ತು. ಒಂದೂ ಹೆಜ್ಜೆ ಇಡಲಾರದಂಥ ಪರಿಸ್ಥಿತಿ. ಒಂದೇ ಒಂದು ದಾರಿಯೆಂದರೆ ಕೈಲಿರುವ ಚೀಲವನ್ನು ಬಿಟ್ಟು ಸಾವಧಾನವಾಗಿ ಒಂದೊಂದೆ ಕಲ್ಲಿನ ಆಸರೆ ಹಿಡಿದು
ಜಾರುವುದನ್ನು ತಡೆಗಟ್ಟಿ ತೊರೆಯ ಆಚೆಗೆ ಬಂದು ತಲುಪುವುದು. ವೇಳೆ ಬೇರೆ ಬಹಳವಿರಲಿಲ್ಲ. ಎಲ್ಲರೂ ನಿರಾಸೆಯಿಂದ ತಮ್ಮ ತಮ್ಮ ಚೀಲವನ್ನು ಎಸೆದು ನೀರಿನಲ್ಲಿ ನಾಜೂಕಾಗಿ ನಡೆದುಕೊಂಡು ಬಾಗಿಲಕಡೆಗೆ ಬಂದರು. ಎಲ್ಲರ ಮುಖದಲ್ಲಿ ನಿರಾಸೆ ತುಂಬಿತ್ತು. ಸಂತೋಷದ ಯಾವ ರೇಖೆಯೂ ಇರಲಿಲ್ಲ.

ಆದರೆ ಅದರಲ್ಲಿ ಒಬ್ಬನು ಮಾತ್ರ ನಗುತ್ತ ನಿಂತಿದ್ದ. ಮಾಧವ ಆತನನ್ನು ಕರೆದು ‘ನಿನ್ನ ಸಂತೋಷಕ್ಕೆ ಕಾರಣವೇನು?’ ಎಂದು ಕೇಳಿದ. ‘ನಾನು ಉದ್ಯಾನವನಕ್ಕೆ ಬಂದಾಗ ಚೀಲ ತೆಗೆದುಕೊಂಡು ಬಂದೆ. ಆದರೆ ಅಲ್ಲಿರುವ ಮನೋಹರ ದೃಶ್ಯ ನೋಡಿ ಚೀಲ ವನ್ನು ತುಂಬಲೇ ಇಲ್ಲ. ಎಷ್ಟು ಸುಂದರವಾದ ಹೂಗಳು? ಎಷ್ಟು ಬಣ್ಣದ ಚಿಟ್ಟೆಗಳು? ಎಷ್ಟು ವಿಧ ವಿಧವಾದ ಹಣ್ಣುಗಳು? ಎಷ್ಟು ವಿವಿಧ ಪಕ್ಷಿ ಪ್ರಾಣಿಗಳು? ನನ್ನ ಮನಸ್ಸು ಆನಂದದಿಂದ ತುಂಬಿದೆ. ಅದನ್ನು ನೋಡುವುದರಲ್ಲಿಯೇ ವೇಳೆಯಾಯಿತು. ನಾನು ನಿರಾಂತಕವಾಗಿ ನಡೆದು ಬಂದೆ.

ನನಗೆ ಚೀಲದ ಅವಶ್ಯಕತೆಯೇ ಬೀಳಲಿಲ್ಲ. ನನ್ನ ಮನಸ್ಸಿನಲ್ಲಿ ತುಂಬಿದ ಸಂತೋಷವನ್ನು ನಾನು ನನ್ನ ಮನೆಯಲ್ಲಿ ಎಲ್ಲರಿಗೂ ಹೇಳಬಲ್ಲೆ. ಇದನ್ನು ಕೇಳಿ ಮಧವ ಅರಸನಿಗೆ ಹೇಳಿದ. ‘ಯಾರಿಗೆ ಮನಸ್ಸಿನಲ್ಲಿ ಸಂತೋಷವಿದೆಯೋ ಅವರಿಗೆ ನಿಜವಾದ ಸಂತೋಷ ಗೊತ್ತಿದೆ. ಯಾರು ಅತಿಯಾಸೆಯ ಬೆನ್ನುಹತ್ತಿ ಹೋಗುವರೋ ಅವರಿಗೆ ನಿರಾಶೆ ಕಾದಿದೆ. ಉಳಿದ ಪ್ರಜೆಗಳನ್ನು ನೋಡಿ
ಹೂವಿಗಿಂತ ಹಣ್ಣು ಮೇಲು ಹಣ್ಣಿಗಿಂತ ಬೆಳ್ಳಿ ಮೇಲು ಬೆಳ್ಳಿಗಿಂತ ಚಿನ್ನ ಮೇಲು ಚಿನ್ನಕ್ಕಿಂತ ಪ್ರಾಣ ಮೇಲು ಹೀಗೆ ಒಂದರ ಹಿಂದೆ ಹೋಗಿ ನಿಜವಾದ ಉದ್ಯಾನವನದ ಸೌಂದರ್ಯ ನೋಡದೆ ಅಸಂತೋಷವಾಗಿದ್ದಾರೆ. ರಾಜ ಮಂತ್ರಿಯ ಮಾತಿಗೆ ತಲೆದೂಗಿದ.