ಅವಲೋಕನ
ವಿಶ್ವವಾಥ್ ಹೆಗಡೆ
1999ನೆ ಇಸವಿ ಅದು ಒರಿಸ್ಸಾದಲ್ಲಿ ಮಹಾ ವಿಪತ್ತು ಸಂಭವಿಸಿದ ವರುಷ! ಬಹುಕಾಲ ನೆನಪಿನಲ್ಲಿ ಉಳಿಯಬಹುದಾದ ವಿಪತ್ತು ಅದು ಎಂದರೆ ತಪ್ಪಾಗಲಿಕ್ಕಿಲ್ಲ. ಅಂದು ಬಾರಿ ಪ್ರಮಾಣದ ಜೀವಹಾನಿ ಮತ್ತು ಆಸ್ತಿ ಹಾನಿ ಸಂಭವಿಸಿತ್ತು. ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ಸುದ್ದಿ ವಾರಗಟ್ಟಲೆ ಹರಿದಾಡಿತ್ತು. ಅಂದು ಅಲ್ಲಿಯ ಜನ ತತ್ತರಿಸಿ ಹೋಗಿದ್ದ ಕಾಲವದು. ದಿನ ಪತ್ರಿಕೆಗಳ ಮುಖಪುಟಗಳು ಆ ಸಾವು, ನಷ್ಟಗಳ ಚಿತ್ರಣಗಳನ್ನು ಹೊತ್ತು ತಂದಿತ್ತು. ಅಂಥ ಸ್ಥಿತಿಯಲ್ಲಿ ಅದು ಸಾಮಾನ್ಯವೇ ಆಗಿತ್ತು.
ಆದರೆ ಆ ಸ್ಥಿತಿಯಲ್ಲಿ ಜನರ ಕಣ್ಣಿಗೆ ಕಾಣದೆ ಇದ್ದ ಒಂದು ಸತ್ಯ ಅದಾದ ಕೆಲವು ವಾರಗಳ ನಂತರ ಪ್ರಕಟವಾಗಿತ್ತು. ಅದು ದೊಡ್ಡ ಪ್ರಚಾರ ಪಡೆಯದಿದ್ದರೂ ಅದರಲ್ಲಿ ಮೂಡಿಬಂದ ವಿಷಯ ಚರ್ಚೆಗೆ ಅರ್ಹ ಎಂದೆನಿಸಿತ್ತು. ಇಲ್ಲಿ ಆ ಸುದ್ದಿ ಯಾವ ಮಟ್ಟಿಗೆ ಜನರಿಗೆ ತಲುಪಿತು ಎನ್ನುವುದಕ್ಕಿಂತ ಭಾರತದ ಪೂರ್ವ
ಕರಾವಳಿಯಲ್ಲಿ ಅಪ್ಪಳಿಸಿದ 1999 ಇಸವಿಯಲ್ಲಿ ಆದ ಚಂಡಮಾರುತದ ಸಂದರ್ಭದಲ್ಲಿ ಮ್ಯಾಂಗ್ರೋವ್ ಕಾಡುಗಳು ಅಂದರೆ ನಮ್ಮ ಕಾಂಡ್ಲಾ ವನಗಳು ಆ ಮಹಾ ವಿಪತ್ತಿನ ಸಂದರ್ಭದಲ್ಲಿ ಸಾವಿನ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸಿದವು ಎಂಬುದು ವರದಿಯಾಗಿದ್ದ ಸುದ್ದಿಯಾಗಿತ್ತು.
ಇದಾದ ಕೆಲವೇ ವರುಷಗಳಲ್ಲಿ 2004ರಲ್ಲಿ ನಮ್ಮಲ್ಲಿ ನಡೆದ ಸುನಾಮಿಯ ದುರಂತದ ಸಮಯದಲ್ಲಿ ಆದ ಅನಾಹುತಗಳು ಮತ್ತು ಆ ಸುನಾಮಿ ತೆಗೆದುಕೊಂಡ ಬಲಿಗಳು ಈಗಲೂ ಮೈ ಜುಮ್ಮನೆಸುವಂಥದ್ದು. ಈ ಸಮಯದಲ್ಲೂ ಕೆಲವು ವಾರಗಳ ನಂತರ ಬಂದ ವರದಿ ಈ ಕರಾವಳಿಯ ಸಸ್ಯವರ್ಗ ಹೇಗೆ ಸುನಾಮಿಯ ವಿರುದ್ಧ ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸಿತ್ತು ಮತ್ತು ಹೇಗೆ ತನ್ನ ದಟ್ಟವಾದ ಅರಣ್ಯದಿಂದ ಉಂಟಾದ ಘರ್ಷಣೆಯಿಂದಾಗಿ ಪ್ರವೇಶಿಸಿದ ನಂತರ ಸುನಾಮಿ ನೀರಿನ ವೇಗಕ್ಕೆ ಹೇಗೆ ಕಡಿವಾಣ ಹಾಕಿತ್ತು ಮತ್ತು ಆಗಬಹುದಾದ ಇನ್ನಷ್ಟು ಮಾರಣಹೋಮಕ್ಕೆ ತಡೆ ಒಡ್ಡಿತ್ತು ಎನ್ನುವುದು.
ಅಲ್ಲಿ 10 ರಿಂದ 15 ಅಡಿಗಳಷ್ಟು ಎತ್ತರಕ್ಕೆ ಏರಿ ಬರುತ್ತಿದ್ದ ಕಡಲ ರಕ್ಕಸ ಅಲೆಗಳನ್ನು ಸಾದ್ಯವಾದಷ್ಟು ತಡೆ ಹಿಡಿದಿಟ್ಟಿದ್ದು ಈ ಕಾಂಡ್ಲಾ ಕಾಡುಗಳು ಮತ್ತು ಅದರಿಂದಲೇ ನಾವು ಮತ್ತು ನಮ್ಮ ಕೆಲ ಸಂಬಂಧಿಕರು ಈ ಕರಾಳ ಅಲೆಯಿಂದ ಪಾರಾಗಲು ಸಾದ್ಯವಾದದ್ದು ಎಂದು ಸ್ವತಃ ಮೀನುಗಾರರೇ ಇದನ್ನು ವಿಶ್ಲೇಷಿಸಿ ದ್ದರು. ಆ 2004ರ ಸುನಾಮಿಯಲ್ಲಿ ಕಲೈನಗರ ಪಿಚವರಂ, ಎಂಜಿಆರ್ ನಗರಗಳಂಥ ಕೆಲ ಪ್ರದೇಶ ಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರಭಾವ ಕಡಿಮೆ ಆಗಿತ್ತು ಅಂದರೆ ಕಾರಣ ಇದೇ ಕಾಂಡ್ಲಾ ವನಗಳು. ಈಗ ನಿಮಲ್ಲಿ ಕೆಲವರಿಗೆ ಈಗ ಸ್ವಲ್ಪ ಕುತೂಹಲ ಹುಟ್ಟಿ ಇದರ ಬಗ್ಗೆ ಅಂತರ್ಜಾಲದಲ್ಲಿ ಸ್ವಲ್ಪ ತಡಕಾಡಲು ಪ್ರಾರಂಭಿಸಿದರೂ ಅಲ್ಲಿಗೆ ಈ ಲೇಖನ ಸಾರ್ಥಕ ಆಯ್ತು ಅಂದುಕೊಳ್ತೀನಿ.
ಹಾಗಂತ ನನ್ನ ಕುತೂಹಲ ಆರಂಭ ಆಗಿದ್ದು ಹೊನ್ನಾವರದ ಶರಾವತಿ ನದಿ ಬಂದರಿನಿಂದ ದೋಣಿಯಲ್ಲಿ ನನ್ನ ಸಂಬಂಧಿಕರ ಪ್ರಯಾಣಿಸುವಾಗ ಕಣ್ಣಿಗೆ ಬಿದ್ದ ಈ ವಿಚಿತ್ರ ವನಗಳು. ಇದಕ್ಕೆ ವಿಚಿತ್ರ ಅನ್ನೋದಕ್ಕೆ ಕಾರಣ ಇದೆ, ಏಕೆಂದರೆ ಇದರ ರಚನೆಯೇ ಹಾಗಿದೆ. ಅಂದಹಾಗೆ ಇಲ್ಲಿನ ಈ ವನಗಳಿಗೆ ಈಗ ಛಾಯಾಗ್ರಹ ಣಕ್ಕೂ, ಕಿರುಚಿತ್ರಕ್ಕೂ ಜನ ಇಲ್ಲಿಗೆ ಬರ್ತಾ ಇರ್ತಾರೆ, ಅಲ್ಲ ಸುತ್ತಾಡಿದರೂ ಆ ಕಾಡುಗಳ ಬಗ್ಗೆ ಎಷ್ಟರ ಮಟ್ಟಿಗೆ ತಿಳಿಯಲು ಪ್ರಯತ್ನ ಪಟ್ಟಿರುತ್ತಾರೆ ಅನ್ನೋದು ಪ್ರಶ್ನೆಯೇ? ಆದರೆ ಖುಷಿ ಏನೆಂದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಅರಣ್ಯ ಇಲಾಖೆ, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಕಾಂಡ್ಲಾ ವನಗಳ ಅಭಿವೃದ್ಧಿ ಮತ್ತು ಅದರ ಬಗ್ಗೆ ಮೂಡುತ್ತಿರುವ ಅರಿವು.
ಇಲ್ಲಿ ಹೇಳಬೇಕು ಅಂದರೆ, ಈ ಕಾಂಡ್ಲಾ ವನಗಳು ವಿಪತ್ತುಗಳ ವಿರುದ್ಧದ ಮೊದಲ ತಡೆಗೋಡೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ಕರಾವಳಿ ತೀರದ ಅದರಲ್ಲೂ ನದಿ ಮುಖಜ ಭೂಮಿಯ ಸುತ್ತಲಿನ ಜನರ, ಆಸ್ತಿ ಪಾಸ್ತಿಗಳ ಪ್ರಥಮ ರಕ್ಷಕ. ಅಂದು ಓಡಿಶಾದಲ್ಲಿ ಆಗಿ ಹೋದ ದುರಂತದ ಅಧ್ಯಯನದಲ್ಲಿ ಕಾಂಡ್ಲಾ ವನಗಳು ಮತ್ತು ಅದರ ಪರಿಣಾಮದ ಬಗ್ಗೆ ಅಂದಾಜಿಸಲು ನೂರಾರು ಹಳ್ಳಿಗಳಿಗೆ ಸಂಭಂಽತ ಅಂಶಗಳನ್ನು ವಿವರವಾಗಿ ನೋಡಲಾಗಿತ್ತು. ಆಗ ಕಂಡ ಬಂದ ಪ್ರಮುಖ ಅಂಶ ವೇನೆಂದರೆ ಎಲ್ಲಿ ವಿಶಾಲವಾದ ಮ್ಯಾಂಗ್ರೋವ್ ಕಾಡುಗಳಿದ್ದ ಹಳ್ಳಿಗಳಿತ್ತೋ ಅಲ್ಲಿ ಸಾವಿನ ಮತ್ತು ನಷ್ಟದ ಪ್ರಮಾಣ ಕಡಿಮೆ ಬಂದಿದ್ದು ಒಂದೆಡೆಯಾದರೆ, ಕಾಂಡ್ಲಾ ವನಗಳು ನಾಶವಾಗಿದ್ದ ಅಥವಾ ಇಲ್ಲದೇ ಇದ್ದ ಪ್ರದೇಶಗಳಲ್ಲಿ ಇದಕ್ಕೆ ವಿರುದ್ಧವಾದ ಅಂಶಗಳು ಗೋಚರಿಸಿದ್ದು ಈ ಸಂಶೋಧನೆಗೆ ಇನ್ನಷ್ಟು ವೇಗ ಮತ್ತು ಬಲ ನೀಡಿತ್ತು. ಕೇವಲ ಇದು ಕಡಲ ತಡಿಯ ರಕ್ಷಕನಾಗದೆ ಹಲವಾರು ಉಪಯೋಗಗಳನ್ನು ಪರಿಸರ ವ್ಯವಸ್ಥೆಗೆ ನಿಡುತ್ತಿರುವುದು ಇದರ ಉಳಿವಿಗೆ
ಮಹತ್ತರ ಕಾರಣಗಳನ್ನು ನೀಡಿದೆ. ಈ ಮ್ಯಾಂಗ್ರೋವ್ ಕಾಡುಗಳು ಉಷ್ಣವಲಯದ ಮತ್ತು ಉಪೋಷ್ಣವಲಯದ ಕರಾವಳಿಯ ಅಂತರ ವಲಯಗಳಲ್ಲಿ, ನದಿ ಹರಿದು ಸಮುದ್ರ ಸೇರುವ ಜಾಗಗಳಲ್ಲಿ ಬೆಳೆಯುತ್ತವೆ, ವಿಶೇಷವೆಂದರೆ ಇಲ್ಲಿಯ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ರಕ್ಷಿಸಲು ಅಗತ್ಯವಾದ ಹಲವಾರು ಪರಿಸರ, ಸಾಮಾಜಿಕ ಆರ್ಥಿಕ ಮತ್ತು ಭೌತಿಕ ಕಾರ್ಯಗಳನ್ನು ಅವು ಮಾಡುತ್ತಲೇ ಇರುತ್ತವೆ.
ಇದು ನಮಗಷ್ಟೇ ಅಲ್ಲ, ಸಹಜವಾಗಿ ಪ್ರಾಣಿ ಪಕ್ಷಿ ಗಳಿಗೂ ಒಳ್ಳೆಯ ಆವಾಸ ಸ್ಥಾನವೂ ಹೌದು. ಈ ಕಾಂಡ್ಲಾ ವನಗಳ ಸಂಕೀರ್ಣವಾದ ರಚನೆ ಭೂಮಿ ಮತ್ತು ಸಮುದ್ರದ ಅಂಚಿನಲ್ಲಿರುವ ಸ್ಥಳದೊಂದಿಗೆ ಬೆರೆತು ಇದೂ ಒಂಥರ ನಮ್ಮನ್ನು ಕಾಪಾಡುವ ಹಸಿರಿನ ಪಟ್ಟಿಯಂತೆ ಕೆಲಸ ಮಾಡುತ್ತದೆ. ಅವುಗಳ ದಟ್ಟವಾದ ಬೇರುಗಳು ಮಣ್ಣನ್ನು ಸವೆತವನ್ನು ಹಿಡಿದಿರುವ ಜತೆಗೆ ಅವುಗಳ ಬೇರುಗಳು ನೀರಿನ ಹರಿವನ್ನು ನಿಧಾನಗೊಳಿಸುತ್ತವೆ. ಯಾವುದೇ ಸಸ್ಯದ ಅಂಗಾಂಶ
ಗಳಿಗೆ ಉಸಿರಾಟಕ್ಕೆ ಆಮ್ಲಜನಕದ ಅಗತ್ಯ ಇದ್ದೇ ಇರುತ್ತೆ. ಆದರೆ ಮ್ಯಾಂಗ್ರೋವ್ ಕಾಡಿನ ಪರಿಸರದಲ್ಲಿ, ಮಣ್ಣಿನಲ್ಲಿರುವ ಆಮ್ಲಜನಕ ಸೀಮಿತವಾಗಿರುತ್ತದೆ. ಆದ್ದರಿಂದ ಕಾಂಡ್ಲಾ ಗಿಡದ ವಿಶೇಷ ಬೇರಿನ ವ್ಯವಸ್ಥೆಯು ವಾತಾವರಣದಿಂದ ಆಮ್ಲಜನಕ ವನ್ನು ಹೀರಿಕೊಳ್ಳುತ್ತದೆ ಮತ್ತು ಈ ಬೇರುಗಳು ಹಲವಾರು
ರಂಧ್ರಗಳನ್ನು ಹೊಂದಿದ್ದು, ಅವುಗಳ ಮೂಲಕ ಆಮ್ಲಜನಕವು ನೀರಿನೊಳಗಿರುವ ಅಂಗಾಂಶಗಳಿಗೆ ಪ್ರವೇಶಿಸುತ್ತದೆ.
ಹಾಗೇನೇ ನಮ್ಮ ದೇಶದಲ್ಲಿ ಈ ಕಾಡುಗಳ ಬಗ್ಗೆ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಯತ್ನ ನಡೆಯುತ್ತಿದ್ದರೂ ಇನ್ನೂ ಈ ಕಾಡುಗಳ ತವರು ನಮ್ಮ ಕರಾವಳಿಗಳಲ್ಲಿ ಜನರಿಗೆ ಇದರ ಬಗೆಗೆ ಇರುವ ತಿಳಿವಳಿಕೆ ಕಡಿಮೆಯೇ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಿನ ಯುವಕರು, ಮಕ್ಕಳು ಹಿರಿಯರಿಂದ ಕಲಿಯಬೇಕೆ ಹೊರತು ಮತ್ತೆ ಬೇರೆ ದಾರಿಯಿಲ್ಲ. ಎಲ್ಲೂ ಪಾಠದಲ್ಲಿ ಇದನ್ನು ಹೇಳಿಕೊಡೋದಿಲ್ಲ. ಇಲ್ಲಿ ಹಿರಿಯರ ಅನುಭವದ ಕಥನಗಳು ಮತ್ತು ಈ ಕಾಡುಗಳ ಬಗೆಗಿನ
ಮಾಹಿತಿಗಳು ಇನ್ನೂ ಹೆಚ್ಚಿನ ವಿಷಯಗಳನ್ನು ನಮ್ಮೆದುರು ಬಿಚ್ಚಿಡುತ್ತವೆ. ನಮ್ಮ ಸುತ್ತಮುತ್ತ ಲಿನ ಕಾಡಿನ ಕಥೆಗಳು, ಅದರ ಅವಶ್ಯಕತೆಗಳು ನಮಗೆ ಗೊತ್ತಿರೋದಿಲ್ಲ. ಇದು ವಿಚಿತ್ರ ಆದರೂ ಸತ್ಯವೆ. ಆ ಕಥೆಗಳು ಯಾವುದೂ ಕೂಡ ನಮಗೆಲ್ಲೂ ಸಿಗದು ಮತ್ತು ಅಷ್ಟೇ ಮಜವಾಗಿರುತ್ತೆ. ಈ ಮ್ಯಾಂಗ್ರೋವ್
ಗಳು ಉಷ್ಣವಲಯದ ಕರಾವಳಿಯ ಮಣ್ಣಿನ ಮಣ್ಣಿನಲ್ಲಿ ಕಂಡುಬರುವ ಮರಗಳು ಮತ್ತು ಪೊದೆಗಳು, ಇದನ್ನು ನಮ್ಮ ಕರಾವಳಿಯ ತೀರದಲ್ಲೂ ಕಾಣುತ್ತೇವೆ. ನಾನು ನಮ್ಮ ಶರಾವತಿ ಸಮುದ್ರ ಸೇರುವ ಮತ್ತು ಅಲ್ಲಿಂದ ಹೆಚ್ಚು ಕಡಿಮೆ ೪ ರಿಂದ ೫ ಕಿ.ಮೀ ವರೆಗೂ ಇದನ್ನು ಕಾಣಬಹುದು.
ನೋಡಿ ನಾವು ಮನುಷ್ಯರು. ಹೆಚ್ಚಾಗಿ ಎಲ್ಲಿ ಅನುಕೂಲವೋ ಅಲ್ಲಿ ಹೋಗಿ ವಾಸಿಸಲು ಇಷ್ಟ ಪಡುತ್ತೇವೆ ಅಲ್ಲವೇ. ಆದರೆ ಈ ಸಸ್ಯ ಪ್ರಭೇದ ಹಾಗಲ್ಲ. ಬೇರೆ ಗಿಡ ಪ್ರಭೇದಗಳಿಗೆ ಕಷ್ಟ ಅನ್ನಿಸುವ ಸಿಹಿ ಉಪ್ಪು ನೀರು ಮಿಶ್ರಿತ ಮತ್ತು ಉಪ್ಪುನೀರಿನಲ್ಲಿ ವಾಸಿಸಲು ಯಶಸ್ವಿಯಾಗಿ ಹೊಂದಿಕೊಂಡ ಕೆಲವೇ ಕೆಲವು ಸಸ್ಯ ಪ್ರಭೇದಗಳಲ್ಲಿ ಒಂದಾಗಿದೆ ಮತ್ತು ಉಪ್ಪುನೀರಿನಲ್ಲಿ ವಾಸಿಸಲು ಯಶಸ್ವಿಯಾಗಿ ಹೊಂದಿಕೊಂಡ ಕೆಲವೇ ಕೆಲವು ಸಸ್ಯ ಪ್ರಭೇದಗಳಲ್ಲಿ ಒಂದಾಗಿದೆ. ಅರಣ್ಯ ವ್ಯಾಪ್ತಿಯಂತೆಯೇ, ಮ್ಯಾಂಗ್ರೋವ್ ಕಾಡುಗಳನ್ನು ತುಂಬಾ ದಟ್ಟವಾದ, ಮಧ್ಯಮ ಮತ್ತು ಮುಕ್ತ ಎಂದು ವಿಂಗಡಿಸಲಾಗಿದೆ. ಪರಿಸರ, ಅರಣ್ಯ ಮತ್ತು ಹವಾಮಾನಕ್ಕೆ ಸಂಬಂಽಸಿದ ಕೇಂದ್ರ ಸಚಿವಾಲಯ ಈ ಕಾಡುಗಳಿಗೆ ಸಂಬಂಽತ ಇತ್ತೀಚಿನ ದಾಖಲೆಯನ್ನು ಬಿಡುಗಡೆ ಮಾಡಿದ್ದು ಅದರ ಪ್ರಕಾರ ಹಿಂದಿನ
ಮೌಲ್ಯಮಾಪನಕ್ಕೆ ಹೋಲಿಸಿದರೆ ದೇಶದಲ್ಲಿ ಮ್ಯಾಂಗ್ರೋವ್ ಕವರ್ 54 ಚದರ ಕಿ.ಮೀ (ಶೇ.1.10) ಹೆಚ್ಚಾಗಿದೆ ಎಂದು ಹೇಳುತ್ತದೆ.
ಅದರಲ್ಲಿ ನಮ್ಮ ಕರ್ನಾಟಕದ ಪಾಲು ಅಂದಾಜು ಪ್ರತಿಶತ ಶೇ.0.20ರಷ್ಟು ಮತ್ತು ಪಶ್ಚಿಮ ಬಂಗಾಳ ಅತಿ ಹೆಚ್ಚು ಅಂದರೆ ಶೇ.42.45ರಷ್ಟು ಪಾಲು ಹೊಂದಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಗಳು ಸುಂದರ್ಬನ್ ರಾಷ್ಟ್ರೀಯ ಉದ್ಯಾನವನ್ನು ಹೊಂದಿದ್ದು, ಇದು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಕಾಡು ಗಳಲ್ಲಿ ಒಂದಾಗಿದ್ದು ನಮ್ಮ ದೇಶದ ಒಟ್ಟಾರೆ ಮ್ಯಾಂಗ್ರೋವ್ ಕಾಡುಗಳಲ್ಲಿ ಇದರದ್ದು ಸಿಂಹಪಾಲು.
ದುರದೃಷ್ಟವಶಾತ್, ಈ ನಮ್ಮ ಮ್ಯಾಂಗ್ರೋವ್ ಕಾಡುಗಳ ಅವನತಿಗೆ ಕಾರಣವಾಗುತ್ತಿರುವ ಸವಾಲುಗಳು ಬಹಳವೇ ಇದೆ. ಅದರಲ್ಲೂ ಮುಖ್ಯವಾಗಿ ನಮ್ಮ ಜನರು ನಡೆಸುತ್ತಿರುವ ಮರಳುಗಾರಿಕೆ ಮತ್ತು ಹೂಳೆತ್ತುವ ಯೋಜನೆ. ಆದರೆ ಈಗ ಹಳ್ಳಿಗಳು ಕಾಂಡ್ಲಾ ವನಗಳ ಬೆಳೆಸುವಿಕೆಯ ಬಗೆಗೆ ಸ್ವತಃ ನಿರ್ಧಾರ ತೆಗೆದು ಕೊಳ್ತಾ ಇzರೆ. ಅದರಲ್ಲೂ ನಮ್ಮ ಪಶ್ಚಿಮ ಬಂಗಾಳದ ಸುಂದರಬನ ಹಳ್ಳಿಗಳು ಇದು ಸಾಯ ಎಂದು ತೋರಿಸುತ್ತಿದ್ದಾರೆ.
ಇತ್ತೀಚಿಗೆ ಬಂದ ಇನ್ನೊಂದು ವಿಷಯ ಏನೆಂದರೆ ಒಡಿಶಾ ಸರಕಾರ ಸುಮಾರು 109 ಮತ್ತು 4000 ಹೆಕ್ಟೇರ್ ಭೂಮಿಯಲ್ಲಿ ಮ್ಯಾಂಗ್ರೋವ್ ಮತ್ತು ಗಾಳಿ ಗಿಡದ ತೋಟವನ್ನು ಮಾಡಲು ಪ್ರಸ್ತಾಪಿಸಿದೆ. ಇದು ನಿಜಕ್ಕೂ ಇದರ ಉದ್ದೇಶ ಇಷ್ಟೇ, ಸಾಧ್ಯವಾದಷ್ಟೂ ನೈಸರ್ಗಿಕ ಗೋಡೆ ನಿರ್ಮಿಸೋದು. ಹಾಗೆ ಗಾಳಿ ಮರದ ಚೆಂದ ನೋಡಿದವರಿಗೆ ಮತ್ತು ಸದ್ದು ಕೇಳಿದವರಿಗೆ ಗೊತ್ತು. ನಾವು ಚಿಕ್ಕವರಿದ್ದಾಗ ಅದರ ಸದ್ದಿಗೆ ಹೆದರಿ ಓಡಿದ್ದು ಉಂಟು. ಅದು ಬೇರೆಯದೇ ಮಾತು.
ಅಂದಹಾಗೆ, 2004ರ ನಂತರ ತಮಿಳುನಾಡಿನ ಮೀನುಗಾರ ರೊಬ್ಬರು ಒಂದು ಸಂಸ್ಥೆಯ ಪ್ರತಿನಿಧಿಗೆ ಹೇಳಿದ ಮಾತು ಎಷ್ಟು ಸತ್ಯ ಎನಿಸುತ್ತದೆ, ನಾವು ಮ್ಯಾಂಗ್ರೋವ್‌ಗಳನ್ನು ಕಾಪಾಡುವ ಮೂಲಕ ಉಳಿಸಿದ್ದೇವೆ ಮತ್ತು ಅದು ನಮ್ಮನ್ನು ರಕ್ಷಿಸುವ ಮೂಲಕ ನಮ್ಮ ಜೀವ ಮತ್ತು ಆಸ್ತಿಯನ್ನು ಉಳಿಸಿದೆ ಅಂದರೆ ನಾವು ಪ್ರಕೃತಿಯನ್ನು ಉಳಿಸಿದರೆ ಬೆಳೆಸಿದರೆ ಅದು ಖಂಡಿತವಾಗಿ ಉಳಿಸುತ್ತದೆ. ಅಂದ ಹಾಗೆ ಈ ಮಾಂತ್ರಿಕ ವನಗಳೇ ಹಾಗೆ, ನಮ್ಮನ್ನು, ನದಿಯನ್ನು, ಸಮುದ್ರವನ್ನು ಬೆಸೆದು ಪ್ರಕೃತಿಯ ರಹಸ್ಯಗಳ ಕೊಂಡಿ ಕೂಡಾ. ನಾವು ಹವಾಮಾನ ಬದಲಾವಣೆಯನ್ನು ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಈ ವನಗಳು ಪ್ರಮುಖ ಪರಿಸರ ವ್ಯವಸ್ಥೆಯ ಒಂದು ಭಾಗವೇ ಆಗಿದೆ. ಈ ಕಾಂಡ್ಲಾ ವನಗಳ ಗುಣ ವಿಶೇಷತೆಗಳನ್ನು ಹೇಳೋಕೆ ಇನ್ನೂ ಬಹಳಷ್ಟು ಇದೆ ಮತ್ತು ಅಷ್ಟೇ ರಹಸ್ಯಗಳನ್ನು ಈ ಕಾಂಡ್ಲಾ ವನಗಳು ಹೊಂದಿವೆ.