Friday, 13th December 2024

ಡಿಯಾಗೋ ಮರಡೋನಾ: ನಿಮಗೆ ಹೇಗೆ ವಿದಾಯ ಹೇಳೋಣ ?

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಶಿಶಿರ ಕಾಲ

ಕಲೆ ಮತ್ತು ಆಚರಣೆ ಸರಿಯಾಗಿ ಅರ್ಥವಾಗಬೇಕು ಎಂದರೆ ಅದು ಹುಟ್ಟಿದ ಅಥವಾ ಅದನ್ನು ಹುಚ್ಚೆದ್ದು ಪ್ರೀತಿಸುವ ಸ್ಥಳದಲ್ಲಿ ಅಲ್ಲಿನ ಜನರ ಮಧ್ಯೆ ಸಾಕ್ಷಾತ್ ಸವಿಯಬೇಕು. ಮನೆಯ ಸೋಫಾ ಮೇಲೆ ಕೂತು ಟಿವಿಯಲ್ಲಿ ಲೈವ್ ನೋಡುವುದಕ್ಕೂ, ಅಲ್ಲಿನ ಜನರ ನಡುವೆ ಅನುಭವಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ.

ಯಕ್ಷಗಾನ ಪ್ರೀತಿಸುವಷ್ಟು ಅರ್ಥವಾಗಬೇಕು ಎಂದರೆ ಉತ್ತರ – ದಕ್ಷಿಣ ಕನ್ನಡದಲ್ಲಿ ಸ್ವಲ್ಪ ಸಮಯವಾದರೂ ಕಳೆದಿರಬೇಕು ಮತ್ತು ಅದನ್ನು ಅಲ್ಲಿನ ಜನರ ಮಧ್ಯೆ ಒಬ್ಬರಾಗಿ ನೋಡಿರಬೇಕು, ಅವರೊಂದಿಗೆ ಚರ್ಚಿಸಿರಬೇಕು. ಹಾಗಂತ ಅಲ್ಲಿರುವವರಿಗೆ ಮಾತ್ರ ಯಕ್ಷಗಾನ ಅರ್ಥ ವಾಗುತ್ತದೆ ಎಂದೇನಲ್ಲ. ಆದರೆ ಅದರ ಅಂತರಾಳ ಅರ್ಥವಾಗುವುದು ಅಲ್ಲಿಯೇ. ಅಂತೆಯೇ ಡೋಲು
ಕುಣಿತ, ಬೀಸುಕಂಸಾಳೆ ಎಂದರೇನು ಎಂದು ತಿಳಿಯಬೇಕಾದರೆ ನೀವು ಮೈಸೂರು ಪ್ರಾಂತ್ಯದವರಾಗಿರಬೇಕು ಇಲ್ಲವೇ ಅಲ್ಲಿ ನೆಲೆಸಿದವರಾಗಿರಬೇಕು.

ಭೂತಾರಾಧನೆ, ಕೋಲ, ನಾಗಮಂಡಲ ರುಚಿಸುವುದು ಅದನ್ನು ದಕ್ಷಿಣ ಕನ್ನಡದಲ್ಲಿ ಜನರ ಮಧ್ಯೆ ಕೂತು ಆಸ್ವಾದಿಸಿದಾಗ ಮಾತ್ರ. ಉಡುಪಿಯ ಕೃಷ್ಣ ಮಠದ ಪರ್ಯಾಯ, ಮೈಸೂರು ದಸರಾ ಅಲ್ಲಿ ಹೋಗಿಯೇ ಅನುಭವಿಸಬೇಕು. ಕರಗ ಎಂದರೇನು ಎಂದು ಅರ್ಥವಾಗಬೇಕೆಂದರೆ ತಿಗಳರ ಜೊತೆ ಮಧ್ಯ ರಾತ್ರಿ ಧರ್ಮರಾಯ ಸ್ವಾಮಿಯ ದೇವಸ್ಥಾನಕ್ಕೆ ಕರಗದ ಜೊತೆ ಗುಂಪಿನಲ್ಲಿ ನಡೆದು ಹೋಗಬೇಕು. ಆಚರಣೆ ಮತ್ತು ಕಲೆ ಆಯಾ ಜನರ ಮಧ್ಯೆ ಸವಿದರೆ ಮಾತ್ರ ಅದಕ್ಕೊಂದು ಮಜಕೂರು. ಆಗ ಮಾತ್ರ ಅವು
ಆಪ್ತವಾಗುತ್ತವೆ. ಹಾಗೆಯೇ ಕ್ರೀಡೆ ಕೂಡ. ಅದೂ ಕೂಡ ಅಲ್ಲಿನ ಗಾಳಿಯ ಒಂದಾಗಿರುತ್ತದೆ.

ನಮ್ಮ ಕ್ರಿಕೆಟ್‌ನ ಹುಚ್ಚು ಅಮೆರಿಕನ್ನರಿಗೆ, ದಕ್ಷಿಣ ಮೆರಿಕಾದವರಿಗೆ, ಕೆನಡಾದವರಿಗೆ ಅರ್ಥವೇ ಆಗುವುದಿಲ್ಲ. ಅದ್ಯಾರೋ ಕ್ರಿಕೆಟ್ ಮ್ಯಾಚ್ ಸೋತಿದ್ದಕ್ಕೆ ಟಿವಿ ಒಡೆದು ಹಾಕಿದನಂತೆ ಎನ್ನುವ ಸುದ್ದಿ ಅಮೆರಿಕಾದಲ್ಲಿ ವಾರ್ತೆ ನೋಡುವವರಿಗೆ ಅತಿಯೆನಿಸುತ್ತದೆ, ಹಾಸ್ಯವೆನಿಸುತ್ತದೆ. ಕ್ರಿಕೆಟ್‌ನ ಸೆಳೆತ ಇವರಿಗೆ ತಿಳಿಯುವುದಿಲ್ಲ. ನನ್ನ ಅಮೆರಿಕನ್ ಸ್ನೇಹಿತ ಡೇವಿಡ್ ಈಗ ಕೆಲ ವರ್ಷದ ಹಿಂದೆ ಎರಡು ತಿಂಗಳು ಮುಂಬೈನ ಆಫೀಸ್‌ನಲ್ಲಿ ಕೆಲಸಮಾಡಬೇಕಾಗಿ ಬಂದಿತ್ತು.

ಅದು ಐಪಿಎಲ್ ಸೀಸನ್. ಆತನನ್ನು ಇಲ್ಲಿಂದ ಕಳಿಸುವಾಗಲೇ ಒಂದಾದರು ಐಪಿಎಲ್ ಮ್ಯಾಚ್ ಅನ್ನು ಸ್ಟೆಡಿಯಮ್‌ಗೆ ಹೋಗಿ ನೋಡಬೇಕು ಎಂದು ಆದೇಶಿಸಿ ಕಳಿಸಿ‌ದ್ದೆ. ನಂತರ ನಮ್ಮ ಮುಂಬೈ ಆಫೀಸ್ ಹುಡುಗರ ಜೊತೆ ಆತನನ್ನು ಒಂದು ಆಟಕ್ಕೆ ಟಿಕೆಟ್ ಖರೀದಿಸಿ ಕಳಿಸಿದ್ದೂ ಆಯಿತು. ಅಲ್ಲಿಯವರೆಗೆ ಕ್ರಿಕೆಟ್ ಎಂದರೇನು ಎಂದೇ ತಿಳಿಯದ ಡೇವಿಡ್ ಆ ಮ್ಯಾಚ್ ಮುಗಿದು ಹೊರ ಬರುವಾಗ ಸಂಪೂರ್ಣವಾಗಿ ಕ್ರಿಕೆಟ್‌ಗೆ ಮತಾಂತರವಾಗಿದ್ದ. ಆಮೇಲೆ ಮುಂಬೈನಲ್ಲಿ ನಡೆದ ಪ್ರತಿಯೊಂದು ಮ್ಯಾಚ್‌ಗೂ
ಯಾರಾದರೂ ಕರೆದುಕೊಂಡು ಹೋಗಿ ಎಂದು ದುಂಬಾಲು ಬೀಳುವಷ್ಟು ಗೀಳು ಹಚ್ಚಿಸಿಕೊಂಡಿದ್ದ.

ಬಹುಷಃ ಡೇವಿಡ್‌ಗೆ ಅಮೆರಿಕಾದಲ್ಲಿ ಅದೆಷ್ಟೇ ಲೈವ್ ಮ್ಯಾಚ್ ಅನ್ನು ಟಿವಿಯಲ್ಲಿ ತೋರಿಸಿದ್ದರೂ ಈ ಮತಾಂತರದ ಸಾಧ್ಯತೆ ಯಿರಲಿಲ್ಲ. ಇಂದಿಗೂ ಡೇವಿಡ್ ಐಪಿಎಲ್ ಬಂತೆಂದರೆ ಕ್ರಿಕೆಟ್ ಚ್ಯಾನಲ್ ಹಚ್ಚಿ ಕೂರುತ್ತಾನೆ, ಟಿವಿ ಎದುರು ನಿಂತು ಸೆಲ್ಫಿ ಹೊಡೆದು ಕಳಿಸುತ್ತಾನೆ. ಫುಟ್ಬಾಲ್ ಕೂಡ ಹಾಗೆಯೇ. ಫುಟ್ಬಾಲ್ ಆಡುವ ದೇಶಗಳು, ಫುಟ್ಬಾಲ್ ಆಡದ ದೇಶಗಳು ಹೀಗೆ ಜಗತ್ತನ್ನು
ವಿಂಗಡಿಸಿ ನೋಡಲಾಗುವ ಕಾಲವೊಂದಿತ್ತು. ಆಗ ಜಗತ್ತಿನ ದೇಶಗಳನ್ನು ಪ್ರತ್ಯೇಕಿಸಲು ಇದ್ದ ಮಾಪನವೇ ಫುಟ್ಬಾಲ್.

ಈಗ ಒಂದು ದಶಕದ ಹಿಂದೆ ಆಫೀಸ್ ಕೆಲಸದ ನಿಮಿತ್ತ ದಕ್ಷಿಣ ಅಮೆರಿಕಾದ ಉರುಗ್ವೆ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ಚಿಲಿಗೆ ಹೊರಟಿz. ಉಳಿದುಕೊಳ್ಳುವುದು ಉರುಗ್ವೆಯಲ್ಲಿ. ಅಲ್ಲಿಂದ ಉಳಿದ ದೇಶಗಳಿಗೆ ಹೋಗಿ ಬರುವುದಿತ್ತು. ಉರುಗ್ವೆಗೆ ಹೊರಟಿದ್ದೇನೆ ಎಂದಾಕ್ಷಣ ಕೆಲವು ಸ್ನೇಹಿತರು ಅದ್ಯಾವ ದೇಶ? ಆಫ್ರಿಕಾದಲ್ಲಿದೆಯೇ? ಎಂದೆಲ್ಲ ಕೇಳಿದ್ದರು. ಇನ್ನು ಕೆಲವು ಫುಟ್ಬಾಲ್ ಅನ್ನು ಹಿಂಬಾಲಿಸುವವರು ಮಾತ್ರ ಒಹ್ ಉರುಗ್ವೆ, ಫುಟ್ಬಾಲ್ ಆಡುವ ದೇಶ’ ಎಂದು ಗುರುತಿಸಿದ್ದರು.

ದಕ್ಷಿಣ ಅಮೆರಿಕಾದ ಬಹುತೇಕ ದೇಶಗಳ ಪರಿಚಯ ಅನ್ಯ ಖಂಡಗಳ ದೇಶಗಳಿಗೆ ಆಗಿದ್ದೇ ಫುಟ್ಬಾಲ್ ಎಂಬ ಆಟದಿಂದಾಗಿ. ಈ ಆಟವೊಂದು ಇರದಿರುತ್ತಿದ್ದರೆ ಆಚೆ ಜಗತ್ತಿಗೆ ಈ ದೇಶಗಳು ಇವೆ ಎಂದೇ ತಿಳಿಯುತ್ತಿರಲಿಲ್ಲವೇನೋ. ಉರುಗ್ವೆ ದೇಶ ಕರ್ನಾಟಕ ಕ್ಕಿಂತ ಚಿಕ್ಕದು. ಅಲ್ಲಿ ಅರ್ಧದಷ್ಟು ಮಂದಿ ಕ್ರಿಶ್ಚಿಯನ್ನರು, ಇನ್ನರ್ಧದಷ್ಟು ಮಂದಿ ಯಾವುದೇ ಧರ್ಮಕ್ಕೂ ಸೇರದವರು. ಆದರೆ ಅವರೆಲ್ಲರ ಒಂದೇ ಧರ್ಮ ಫುಟ್ಬಾಲ್.

ಅಲ್ಲಿನ ರಾಜಧಾನಿ ಮೊಂಟೆವಿಡಿಯೋದಲ್ಲಿ ಒಂದು ಫುಟ್ಬಾಲ್ ಸ್ಟೇಡಿಯಂ ಇದೆ. ಅಲ್ಲಿ ನಡೆಯುವ ಕ್ಲಬ್ ಫುಟ್ಬಾಲ್ ಪಂದ್ಯದಲ್ಲಿ ಅರವತ್ತು ಸಾವಿರ ಮಂದಿ ಸೇರುತ್ತಾರೆ. ಅರವತ್ತು ಸಾವಿರ ಎಂದರೆ ಇಡೀ ದೇಶದ ಶೇ.೨% ಮಂದಿ. ಅಲ್ಲಿನ ಮ್ಯಾಚ್ ನೋಡಲು ಏನಿಲ್ಲವೆಂದರೆ ಮೂರು ತಿಂಗಳ ಮೊದಲು ಟಿಕೆಟ್ ಖರೀದಿಸಿರಬೇಕು. ಟಿಕೆಟ್ ಪಡೆಯಬೇಕೆಂದರೆ ಆನ್ಲೆ ನ್‌ನಲ್ಲಿ ದುಡ್ಡು ಕೊಟ್ಟು ಮೊದಲು ರಿಜಿಸ್ಟರ್ ಮಾಡಬೇಕು. ಹಾಗೆ ಮಾಡಿದ ನಂತರ ಲಾಟರಿಯಲ್ಲಿ ಟಿಕೆಟ್ ಅನ್ನು ಹಂಚಲಾಗುತ್ತದೆ. ಹೀಗೆ ಟಿಕೆಟ್ ಸಿಗದಿದ್ದ ಉಳಿದವರು ಮ್ಯಾಚ್ ನೋಡಲು ಬಯಲುಗಳಲ್ಲಿ ದೊಡ್ಡ ದೊಡ್ಡ ಪರದೆಯಲ್ಲಿ ಲೈವ್ ನೋಡಲು ಸರಕಾರವೇ ವ್ಯವಸ್ಥೆಮಾಡಿರುತ್ತದೆ.

ಅಲ್ಲಿನ ದೇಶದ ಅಧ್ಯಕ್ಷ ಒಂದು ಚಿಕ್ಕ ಕಾರಿನಲ್ಲಿ ಯಾವುದೇ ಸೆಕ್ಯೂರಿಟಿ ಇಲ್ಲದೇ ಆರಾಮಾಗಿ ಓಡಾಡುತ್ತಿರುತ್ತಾನೆ. ಈ ಕ್ಲಬ್ ಫುಟ್ಬಾಲ್ ಆಟಗಾರರಿಗೆ ಮಾತ್ರ ಎಲ್ಲಿಲ್ಲದ ಐದಾರು ಕಾರುಗಳ ಸೆಕ್ಯೂರಿಟಿ ವ್ಯವಸ್ಥೆಯಿರುತ್ತದೆ. ಇದರಿಂದಲೇ ನಿಮಗೆ ಅಲ್ಲಿನ ಜನರು ಫುಟ್ಬಾಲ್‌ಗೆ ಕೊಡುತ್ತಿದ್ದ ಮಹತ್ವದ ಮತ್ತು ಕ್ರೇಜ್‌ನ ಅರಿವಾಗುತ್ತದೆ. ನಾನು ಉರುಗ್ವೆಯಲ್ಲಿ ಇದ್ದಾಗ ಫುಟ್ಬಾಲ್ ವಿಶ್ವಕಪ್ ನಡೆಯುತ್ತಿತ್ತು. ಉರುಗ್ವೆ ಆಟವಿದ್ದಾಗ ಎಲ್ಲ ಆಫೀಸ್‌ಗಳಿಗೆ ರಜೆ. ಆ ದಿನ ಎಲ್ಲರೂ ಗ್ರೌಂಡಿನಲ್ಲಿ ದೊಡ್ಡ ದೊಡ್ಡ
ಪರದೆಯಲ್ಲಿ ಮ್ಯಾಚ್ ನೋಡುವುದು, ಕೇಕೆ ಸಂಭ್ರಮ ಇತ್ಯಾದಿ.

ಉರುಗ್ವೆ ತಂಡ ಒಂದೊಂದು ಮ್ಯಾಚ್ ಗೆಲ್ಲುತ್ತಿದ್ದರೆ ಇಡೀ ಮೊಂಟೆವಿಡಿಯೋ ಸಂಭ್ರಮಿಸುತ್ತಿತ್ತು. ಮ್ಯಾಚ್ ಮುಗಿದ ಅರ್ಧತಾಸು ಸಂಪೂರ್ಣ ಟ್ರಾಫಿಕ್ ಜಾಮ. ಜನರೆ ಕಾರ್‌ನಲ್ಲಿ ಹಾರ್ನ್ ಹಾಕುತ್ತ ನಿಧಾನವಾಗಿ ರಸ್ತೆಯಲ್ಲಿ ಸಾಗುವುದು, ಮಧ್ಯ ಮಧ್ಯ ಗುಂಪಿನಲ್ಲಿ ನಿಂತು ಪಟಾಕಿ ಹೊಡೆಯುವುದು ಇತ್ಯಾದಿ. ಹೋಲಿಕೆಗೆ ಹೇಳಬೇಕೆಂದರೆ ನಮ್ಮಲ್ಲಿ ಇಂಡಿಯಾ ಪಾಕಿಸ್ತಾನದ ವಿರುದ್ಧ ಮ್ಯಾಚ್ ಗೆದ್ದಾಗ ನಿರ್ಮಾಣವಾಗುವ ಸ್ಥಿತಿಯ ಸಾವಿರ ಪಟ್ಟು ಸಂಭ್ರಮ ಅದು.

ಫುಟ್ಬಾಲ್‌ನ ವಿಷಯಕ್ಕೆ ಬಂದರೆ ಅರ್ಜೆಂಟೀನಾ ಮತ್ತು ಬ್ರೆಝಿಲ್ ಉರುಗ್ವೆಯ ಬದ್ಧ ವೈರಿ. ಆದರೆ ಅಲ್ಲಿ ಒಂದು ವಿಚಿತ್ರ ನೋಡಿz. ಬಯಲಲ್ಲಿ ಹಾಕಿದ್ದ ದೊಡ್ಡ ಪರದೆಯಲ್ಲಿ ಮರಡೋನಾ ಮತ್ತು ಪೀಲೆ ಕಾಣಿಸಿಕೊಂಡಾಗ ಸೇರಿದ ಸಾವಿರಗಟ್ಟಲೆ ಮಂದಿ ಕುರ್ಚಿಯಿಂದ ಎದ್ದು ನಿಲ್ಲುತ್ತಿದ್ದರು. ಇದು ಒಂದೇ ಸಲ ನಡೆಯುತ್ತಿರಲಿಲ್ಲ. ಈ ಇಬ್ಬರು ವ್ಯಕ್ತಿಗಳು ಪರದೆಯ ಮೇಲೆ
ಬಂದಾಗಲೆಲ್ಲ ಈ ಎದ್ದುನಿಲ್ಲುವ ಪ್ರಕ್ರಿಯೆ ನಡೆಯುತ್ತಿತ್ತು.

ಹೀಗೇಕೆ ಎಂದು ಕೇಳಿದರೆ, ಫುಟ್ಬಾಲ್ ಒಂದು ಧರ್ಮವಾದರೆ ಪೀಲೆ ಮತ್ತು ಮರಡೋನಾ ದೇವರುಗಳು, ದೇವರು ಕಂಡರೆ ಎದ್ದುನಿಲ್ಲಬೇಕಲ್ಲ’ ಎಂದಿದ್ದ ಪಕ್ಕದಲ್ಲಿ ಕೂತ ನನ್ನ ಉರುಗ್ವೆ ಸ್ನೇಹಿತ. ಪೀಲೆ ಬ್ರೆಝಿಲ್‌ನ ಫುಟ್ಬಾಲ್ ಆಟಗಾರ. ಮರಡೋನಾ ಅರ್ಜೆಂಟಿನಾದವನು. ಈ ಎರಡೂ ದೇಶಗಳು ಉರುಗ್ವೆಗೆ – ಭಾರತಕ್ಕೆ ಪಾಕಿಸ್ತಾನವಿದ್ದಂತೆ. ಆದರೂ ಇವರಿಬ್ಬರೆಂದರೆ ಈ ಎಲ್ಲದನ್ನು ಮರೆತು ಗೌರವ ಸೂಚಿಸುತ್ತಿದ್ದರು.

ರಜನಿಕಾಂತ್ ಅನ್ನು ತಮಿಳರು ಪೂಜಿಸುತ್ತಾರೆ. ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಚಿನ್ ತೆಂಡೂಲ್ಕರ್ ಅನ್ನು ಆರಾಧಿಸುತ್ತಾರೆ. ಆದರೆ ಈ ಪೀಲೆ ಮತ್ತು ಮರಡೋನಾರನ್ನು ಫುಟ್ಬಾಲ್ ನೋಡುವವರೆಲ್ಲ ಆರಾಧಿಸುವವರೇ. ಈ ಇಬ್ಬರ ವಿಷಯಕ್ಕೆ ಬಂದರೆ ದೇಶ ದ್ವೇಷ ಎಲ್ಲ ಪಕ್ಕಕ್ಕೆ. ವ್ಯಕ್ತಿಗಳನ್ನು ದೇಶದ ಗಡಿಯಾಚೆ, ದೇಶ ದೇಶಗಳ ವೈಷಮ್ಯವನ್ನು ಮೀರಿ ಜನರು ಆರಾಧಿಸಲ್ಪಡು
ತ್ತಾರೆ ಎಂದರೆ ಅದು ಪೀಲೆ ಮತ್ತು ಮರಡೋನಾರನ್ನು ಮಾತ್ರ.

ಮರಡೋನಾನ ಜೀವನವನ್ನು ಹೀಗೆಯೇ ಎಂದು ಬಣ್ಣಿಸುವುದು ಬಹಳ ಕಷ್ಟ. ಅರ್ಜೆಂಟಿನಾದ ಬೂನೋಸರಿಸ್ ನ ಸ್ಲಂನಿಂದ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಪಟ್ಟದವರೆಗಿನ ಹಾದಿ ಅತ್ಯಂತ ರೋಚಕ, ಅಷ್ಟೇ ರಂಗಬಿರಂಗಿ. ಆತನ ಜೀವನದ ಏರು ಬೀಳುಗಳು ಬಹುಷಃ ಇನ್ನೊಬ್ಬ ಆಟಗಾರನ ಜೀವನದಲ್ಲಿ ನಡೆದಿರಲಿಕ್ಕಿಲ್ಲ. ಬೂನೋಸರಿಸ್ ಸ್ಲಮ್ ರಸ್ತೆಗಳಲ್ಲಿ ಫುಟ್ಬಾಲ್ ಆಡುತ್ತಿದ್ದುದನ್ನು ನೋಡಿ, ಮರಡೋನಾನ ಸಾಮರ್ಥ್ಯವನ್ನು ತಿಳಿದು ಅಲ್ಲಿನ ಸ್ಥಳೀಯ ಮಕ್ಕಳ ಕ್ಲಬ್‌ಗೆ ಸಂಬಂಧಿಗಳು ಸೇರಿಸುತ್ತಾರೆ.

ಮರಡೋನಾ ಇದ್ದ ಮಕ್ಕಳ ತಂಡ ಬರೋಬ್ಬರಿ ೧೩೬ ಮ್ಯಾಚ್ ಗೆದ್ದು ಇಡೀ ದೇಶದ ಗಮನ ಸೆಳೆಯುತ್ತದೆ. ಅಲ್ಲಿಂದ ಮುಂದೆ
ಬೆಳೆಯುವ ಮರಡೋನಾ ನಂತರ ಅರ್ಜೆಂಟಿನಾ ದೇಶಕ್ಕೇ ಒಂದು ಬ್ರಾಂಡ್ ಅನ್ನು ಜಾಗತಿಕವಾಗಿ ತಂದುಕೊಡುತ್ತಾನೆ.
ಜೂನಿಯರ್ ಕ್ಲಬ್‌ಗಳಲ್ಲಿ ಆಟವಾಡುತ್ತಿದ್ದ ಮರಡೋನಾ ಹದಿನಾರು ವರ್ಷವಾಗುವಾಗ ಅರ್ಜೆಂಟೀನಾದ ಡಿವಿಜನಲ್ ಜೂನಿಯರ್ ಟೀಮ್‌ನಲ್ಲಿ ಸುಲಭವೆನ್ನುವಂತೆ ಜಾಗ ಪಡೆಯುತ್ತಾನೆ. ಆ ಮೊದಲ ಮ್ಯಾಚ್ ಅರ್ಜೆಂಟಿನಾ ಜೂನಿಯರ್ ವರ್ಸಸ್ ಬೋಕಾ ಜೂನಿಯರ್.

ಮರಡೋನಾ ಪಂದ್ಯದಲ್ಲಿ ಅತೀ ಚಿಕ್ಕ ವಯಸ್ಸಿನ ಆಟಗಾರ. ಬೊಕಾ ಟೀಮಿನ ಗೋಲ್ ಕೀಪರ್ ಮರಡೋನಾ ಹತ್ತಿರ ಬಂದು ನೀನೊಬ್ಬ ಕುಳ್ಳ ಧಡೂತಿ ಬ್ಯಾರಲ. ನನ್ನೆದುರು ನೀನು ಒಂದೇ ಸ್ಕೋರ್ ಮಾಡಲೂ ಸಾಧ್ಯವಿಲ್ಲ’ ಎಂದು ಸ್ಲೆಡ್ಜ್ ಮಾಡುತ್ತಾನೆ. ಮರಡೋನಾ ಇದಕ್ಕೆ ಬರೋಬ್ಬರಿ ನಾಲ್ಕು ಗೋಲ್ ಬಾರಿಸುವುದರ ಮೂಲಕ ಉತ್ತರಿಸುತ್ತಾನೆ. ಇದೊಂದು ರೀತಿ ಥೇಟ್ ಯುವರಾಜ್ ಸಿಂಗ್ ಫ್ಲಿನ್ಟೋಪ್ ಸ್ಲೆಡ್ಜಿಂಗ್‌ಗೆ ಆರು ಸಿಕ್ಸರ್ ಬಾರಿಸಿ ಉತ್ತರಿಸಿದಂತೆ. ಈ ಘಟನೆಯ ನಂತರ ಮರಡೋನಾನನ್ನ ‘ಪುಟ್ಬಾಲ್ ಲೋಕೊ’ (ಫುಟ್ಬಾಲ್ ಹುಚ್ಚ) ಎಂದು ಕರೆಯುವುದು ಪರಿಪಾಠವಾಯಿತು.

ಈ ಆಟವಾದ ನಾಲ್ಕೇ ತಿಂಗಳಲ್ಲಿ ಮರಡೋನಾ ಅರ್ಜೆಂಟೀನಾದ ರಾಷ್ಟ್ರೀಯ ಜ್ಯುನಿಯರ್ ತಂಡಕ್ಕೆ ಆಯ್ಕೆಯಾಗುತ್ತಾನೆ. ನಂತರ ೧೯೭೮ ವರ್ಲ್ಡ್ ಕಪ್ ತಂಡಕ್ಕೆ ಮರಡೋನಾ ಕೆಲವು ರಾಜಕೀಯ ಕಾರಣದಿಂದ ಆಯ್ಕೆ ಯಾಗುವುದಿಲ್ಲ. ಆದರೆ
ಆ ಸಮಯಕ್ಕೆ ಫುಟ್ಬಾಲ್ ಕ್ಲಬ್ ಆಟಗಳಿಂದ ಮಿಲಿಯನ್ ಗಟ್ಟಲೆ ಗಳಿಕೆ ಮರಡೋನಾಗೆ ಸಾಧ್ಯವಾಗುತ್ತದೆ. ೧೯೮೬ವರ್ಲ್ಡ್ ಕಪ್ ಗೆಲುವು, ನಾಲ್ಕು ಬಾರಿ ವರ್ಷದ ಆಟಗಾರ, ಬಾರ್ಸಿಲೋನಾ ಕಪ್, ಇಟಾಲಿಯನ್ ಕಪ್, ಸ್ಪ್ಯಾನಿಷ್ ಕಪ್, ಸ್ಪ್ಯಾನಿಷ್ ಚಾಂಪಿಯನ್‌ಷಿಪ್ ಕಪ್, ಅಂಡರ್ ೨೦ ವರ್ಲ್ಡ್ ಕಪ್, ಅರ್ಜೆಂಟಿನಾ ಕಪ್ ಹೀಗೆ ಬರೋಬ್ಬರಿ ೩೩ ಕಪ್‌ನ ಗೆಲುವಿನ ರೂವಾರಿ.

ಅರ್ಜೆಂಟಿನಾ ಪರವಾಗಿ ೯೧ ಪಂದ್ಯದಲ್ಲಿ ೩೪ ಗೋಲು, ನಾಲ್ಕು ವಿಶ್ವಕಪ್‌ನಲ್ಲಿ ೨೧ ಪಂದ್ಯಗಳಲ್ಲಿ ಭಾಗವಹಿಸಿದ ದಾಖಲೆ ಇವೆಲ್ಲ ಮರಡೋನಾ ಸಾಧನೆಗಳು. ಫಿ- ಶತಮಾನದ ಆಟಗಾರ ಪ್ರಶಸ್ತಿಯನ್ನು ಪೀಲೆ ಜೊತೆ ಮರಡೋನಾ ಹಂಚಿಕೊಂಡಿzರೆ. ಅಂದು ಈ ಕುಳ್ಳ ದೇಹದ ಮರಡೋನಾ ಬಳಿ ಬಾಲ್ ಸಿಕ್ಕಿತೆಂದರೆ ಇಡೀ ಸ್ಟೇಡಿಯಂ ತುದಿಗಾಲಲ್ಲಿ ನಿಲ್ಲುತ್ತಿತ್ತು, ಎದುರಾಳಿ ಗೋಲ್ ಕೀಪರ್ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದ. ದಂತಕಥೆ ಎನ್ನುವ ಶಬ್ದ ಪೀಲೆ ಬಿಟ್ಟರೆ ಮರಡೋನಾಗೆ ಸಲ್ಲುವಷ್ಟು
ಇನ್ಯಾರಿಗೂ ಸಲ್ಲುವುದಿಲ್ಲ.

ಮರಡೋನಾ, ಅರ್ಜೆಂಟೀನಾ ಇಷ್ಟು ಅಡ್ರೆಸ್‌ನಲ್ಲಿ ಬರೆದು ಪತ್ರ ಹಾಕಿದರೆ ಅದು ಆತನಿಗೆ ತಲುಪುತ್ತಿತ್ತಂತೆ ಎನ್ನುವ ಮಾತಿದೆ. ಅದು ಎಷ್ಟು ಸತ್ಯವೋ ಗೊತ್ತಿಲ್ಲ ಆದರೆ ಆತನ ಜನಪ್ರಿಯತೆ ನೋಡಿದರೆ ಅದು ಸಾಧ್ಯವಿರಬಹುದು ಎಂದೆನಿಸುತ್ತದೆ. ಮರಡೋನಾನನ್ನು ಎಲ್ ಫಿಬೆ ದೆ ಓರೋ’ – ಚಿನ್ನದ ಹುಡುಗ ಎಂದೇ ಇಂದಿಗೂ ಕರೆಯಲಾಗುತ್ತದೆ. ಮರಡೋನಾ ನನ್ನ ಇಂಗ್ಲೆಂಡ್ ಫುಟ್ಬಾಲ್ ಪ್ರಿಯರು ಎಂದಿಗೂ ಮರೆಯುವುದಿಲ್ಲ. ೧೯೮೬ ಫುಟ್ಬಾಲ್ ವರ್ಲ್ಡ್ ಕಪ್ ಕ್ವಾರ್ಟರ್ ಫೈನಲ್ ಮ್ಯಾಚ್. ಇಂಗ್ಲೆಂಡ್ qo ಅರ್ಜೆಂಟೀನಾ. ಅರ್ಧ ಆಟವಾದರೂ ಇಬ್ಬರದೂ ಒಂದೂ ಗೋಲ್ ಆಗಿರುವುದಿಲ್ಲ. ಆದರೆ ಇಡೀ ಆಟದಲ್ಲಿ ಬಾಲ್ ಅತಿ ಹೆಚ್ಚು ಮೂವ್ ಮಾಡುತ್ತಿದ್ದುದು ಮೆರಡೋನ.

ದ್ವಿತೀಯಾರ್ಧದಲ್ಲಿ ಗೋಲ್ ಪೋಸ್ಟ್‌ನ ಬಳಿ ಮರಡೋನಾ ಹತ್ತಿರ ಬಾಲ್ ಬಂದಾಗ ಆತ ತನ್ನ ಎಡಗೈ ಅಲ್ಲಿ ತಟ್ಟಿ ಬಾಲ್
ಅನ್ನು ಗೋಲ್ ಪೋಸ್ಟ್‌ನೊಳಗೆ ತೂರುತ್ತಾನೆ. ಇದನ್ನು ಸರಿಯಾಗಿ ಗ್ರಹಿಸದ ರೆಫ್ರಿ ಇದೊಂದು ಸರಿಯಾದ ಗೋಲ್
ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅಸಲಿಗೆ ಕೈ ಅಲ್ಲಿ ತೂರಿರುವುದರಿಂದ ಅದು -ಲ. ಈ ಘಟನೆ ‘ಹ್ಯಾಂಡ್ ಆಫ್ ಗಾಡ್’ ಎಂದೇ ಇಂದಿಗೂ ಕುಖ್ಯಾತ. ಹಾಗೆ ದೂಡಿದ್ದು ಮರಡೋನಾ ಕೈ ಅಲ್ಲ – ಅದು ದೇವರ ಕೈ ಎನ್ನುವುದು ಇಲ್ಲಿನ ಕುಹಕ.

ಇದಾದ ಕೆಲವೇ ನಿಮಿಷದಲ್ಲಿ ೧೮೦ ಡಿಗ್ರಿ ಗಿರಕಿ ಹೊಡೆದು ಮರಡೋನಾ ಇನ್ನೊಂದು ಗೋಲ್ ಹೊಡೆಯುತ್ತಾನೆ. ಇಂದಿಗೂ ಫುಟ್ಬಾಲ್ ಇತಿಹಾಸದ ವರ್ಸ್ಟ್ ಮತ್ತು ಬೆಸ್ಟ್ ಗೋಲ್ ಯಾವುದು ಎಂದರೆ ಫುಟ್ಬಾಲ್ ಪ್ರೇಮಿಗಳು ಹೇಳುವುದು ಮರಡೋನಾ ನ ಆ ಆಟದ ಮೊದಲ ಗೋಲ್ ಮತ್ತು ಎರಡನೆಯದು ಎಂದು. ವಿಶ್ವಕಪ್ ನಲ್ಲಿ ಅತಿಹೆಚ್ಚು ಪುಲ್ ಮಾಡಿದ ದಾಖಲೆ ಕೂಡ
ಮರಡೋನಾದ್ದೇ.

ಮರಡೋನಾ ಬಹಳಷ್ಟು ಗೋಲ್‌ಗಳನ್ನು ಫುಲ್ ಮಾಡಿ ಗಳಿಸಿದ್ದಾದರೂ ಆತ ಒಬ್ಬ ಅತ್ಯದ್ಭುತ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಮರಡೋನಾ ಗೋಲ್ ಗಳನ್ನು ಯೂಟ್ಯೂಬ್‌ನಲ್ಲಿ ನೋಡಿದರೆ ಆತನ ಕೌಶಲ್ಯ, ಕಾಲ್ಕೆಲಸ ತಿಳಿಯುತ್ತದೆ. ಮರಡೋನಾ ಜೀವನವೂ ಉತ್ತಮ ಮತ್ತು ಪರಮ ನೀಚತನಗಳ ಸಮ್ಮಿಳಿತ. ೧೯೯೦ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡದ ಮುಖ್ಯ ಆಟಗಾರನಾಗಿದ್ದ ಈತ ೧೯೯೪ವಲ್ಡ ಕಪ್‌ನ ಡ್ರಗ್ ಟೆಸ್ಟ್‌ನಲ್ಲಿ ಕೊಕೇನ್ ಸೇವನೆಯಿಂದಾಗಿ ಪಾಸಾಗದೆ ತಂಡದಿಂದ ಹೊರಕ್ಕೆ ದಬ್ಬಲ್ಪಡುತ್ತಾನೆ. ಈ ಸುದ್ದಿ ಹೊರಬರುತ್ತಿದ್ದಂತೆ ಆರಾಧಿಸುತ್ತಿದ್ದ ಆತನನ್ನು ಒಮ್ಮೆಲೇ ಇಡೀ ದೇಶ ದ್ವೇಷಿಸಲು ಶುರುಮಾಡುತ್ತದೆ. ಇದರಿಂದ ಅರ್ಜೆಂಟೀನಾದಲ್ಲಿ ದಂಗೆಗಳೇಳುತ್ತವೆ. ಕಂಡಕಂಡಲ್ಲಿ ಆತನಿಗೆ ಛೀ ಥು ಹಾಕಲಾಗುತ್ತದೆ. ಆತ ಈ ಕಾರಣದಿಂದ ಅರ್ಜೆಂಟೀನಾ ತೊರೆದು ಕೆಲ ಕಾಲ ಪರದೇಶಕ್ಕೆ ಹೋಗಿ ಉಳಿಯಬೇಕಾಗುತ್ತದೆ. ಮತ್ತೆ ಆತ ದೇಶಕ್ಕೆ ಮರಳಿದ್ದು
ಮುಂದಿನ ವಿಶ್ವಕಪ್ ಸಮಯದ. ಕೊಕೈನ್, ವಿಪರೀತ ಕುಡಿತ ಇವೆಲ್ಲದರ ಜೊತೆಯೇ ಆತ ಅದ್ಭುತವಾಗಿ ಫುಟ್ಬಾಲ್ ಆಡು ತ್ತಿದ್ದುದು ಒಂದು ಸೋಜಿಗವೇ ಸರಿ. ತನ್ನ ಕರೀಯರ್ ಉದ್ದಕ್ಕೂ ಒಂದಿಷ್ಟು ಸಮಯ ನ್ಯಾಷನಲ್ ಹೀರೋ ಎನಿಸಿಕೊಳ್ಳುತ್ತಿದ್ದ ಮರಡೋನಾ ಅಷ್ಟೇ ಸಲ ತನ್ನ ಅಡ್ಡನಾಡಿ ಕೆಲಸಗಳಿಂದ ರಾಷ್ಟ್ರಕ್ಕೇ ಮುಜುಗರ ಎನಿಸಿಕೊಳ್ಳುತ್ತಿದ್ದ.

ಆತನಿಗೆ ಸಾವಿರದೆಂಟು ಶೋಕಿಗಳಿದ್ದವು. ಅದರಲ್ಲಿ ಒಂದು ಕೈಗಡಿಯಾರದ ಹುಚ್ಚು. ಈ ಹುಚ್ಚು ಅದೆಷ್ಟು ಎಂದರೆ ಆತನ
ಬಳಿ ಸಾವಿರಾರು ತುಟ್ಟಿ ವಾಚುಗಳ ಸಂಗ್ರಹವಿತ್ತು. ಆತ ತನ್ನ ಎರಡೂ ಕೈಗೆ ವಾಚ್ ಕಟ್ಟುತ್ತಿದ್ದ !! (ಇದು ಜಾಹಿರಾತಿಗೆ ಎನ್ನುವ ಮಾತು ಕೂಡ ಇದೆ). ಇನ್ನು ತನ್ನ ಚಟಗಳಿಂದಾಗಿ ವಯಸ್ಸು ನಲವತ್ತಾಗುವಾಗ ಆತ ನಾಲ್ಕಾರು ಶಸ್ತ್ರಚಿಕಿತ್ಸೆಗೆ ಒಳಗಾಗ ಬೇಕಾಯ್ತು. ಬಲೂನಿನಂತೆ ದೇಹ ಉಬ್ಬಿ ತೂಕ ಒಂದೂಕಾಲು ಕ್ವಿನ್ಟಾಲ್ ದಾಟಿತ್ತು. ಮರಡೋನಾಗೆ ಕುಡಿತದ ಚಟ ಆತನನ್ನು ಸಾಯುವರೆಗೆ ಕಾಡಿದೆ. ಇದೇ ತಿಂಗಳ ಮೊದಲ ವಾರ ಮೆದುಳು ಶಸ್ತ್ರಚಿಕಿತ್ಸೆ ಕೂಡ ಆಗಿದ್ದು ಸುದ್ದಿಯಾಗಿತ್ತು. ಅದರಿಂದ ಚೇತರಿಸಿ
ಕೊಳ್ಳಲು ವಿಫಲವಾದನೋ ಅಥವಾ ಕುಡಿತದ ವಿತ್ ಡ್ರಾವಲ್ ಕಾರಣದಿಂದ ಹೃದಯಾಘಾತ ವಾಯಿತೋ – ಮರಣೋತ್ತರ ಪರೀಕ್ಷೆಯೇ ಹೇಳಬೇಕು.

ಒಟ್ಟಾರೆ, ಒಬ್ಬ ಮನುಷ್ಯ ಎಷ್ಟು ಔನ್ನತ್ಯ ಮತ್ತು ಅಧೋಗತಿಯನ್ನು ಬದುಕಿನಲ್ಲಿ ಹಲವು ಬಾರಿ ಪಡೆಯಬಹುದು ಎನ್ನುವುದಕ್ಕೆ ಮರಡೋನಾಗಿಂತ ಒಳ್ಳೆಯ ಉದಾಹರಣೆ ಇನ್ನೊಬ್ಬರು ಸಿಗಲಿಕ್ಕಿಲ್ಲ. ಮರಡೋನಾ ಅರ್ಜೆಂಟಿನಾ ದೇಶಕ್ಕೇ ಜಾಗತಿಕವಾಗಿ ಒಂದು ಅಸ್ತಿತ್ವವನ್ನು ಕೊಟ್ಟವನು. ಅಲ್ಲದೇ ಆತನ ಜನಪ್ರಿಯತೆ ಅದೆಷ್ಟಿತ್ತೆಂದರೆ ಫುಟ್ಬಾಲ್ ಎಂದರೇನು ಎಂದು ತಿಳಿಯದ – ಆಟವಾಡದ ದೇಶದ ಅದೆಷ್ಟೋ ಮಂದಿ ಆತನ -ಮ್ ಸುದ್ದಿ ಕೇಳಿಯೇ ಫುಟ್ಬಾಲ್ ನೋಡಲು, -ಲೋ ಮಾಡಲು ಶುರು ಮಾಡಿದ್ದರು. ಮರಡೋನಾ ಕ್ರೀಡಾ ಇತಿಹಾಸದಲ್ಲಿ ಆಡುವ ಆಟಕ್ಕಿಂತ ದೊಡ್ಡದಾಗಿ ಬೆಳೆದ ಆಟಗಾರ. ಫುಟ್ಬಾಲ್ ದಂತಕತೆ ಅರವತ್ತರ ಡಿಯಾಗೋ ಮರಡೋನಾ ನಿನ್ನೆ ಇಹಲೋಕವನ್ನು ತ್ಯೆಜಿಸಿzರೆ. ಸನ್ ಪತ್ರಿಕೆ ಮರಡೋನಾ ಜೀವನ, ಸಾಧನೆ ಮತ್ತು ಸಾವಿನ ಸುದ್ಧಿಯನ್ನು ಹೀಗೆ ಒಂದೇ ವಾಕ್ಯದಲ್ಲಿ ಪ್ರಕಟಿಸಿದೆ: Touched by god. Drugs, booze and the Hand of God & Diego Maradona was football’s flashiest, flawed most famous genius. ಆಡಿಯೋಸ್ ಮರಡೋನಾ.