Friday, 20th September 2024

ಹಿಮವನ್ನು ಬಣ್ಣಿಸಲು ನಿಜಕ್ಕೂ ನಲವತ್ತು ಬೇರೆ ಬೇರೆ ಪದಗಳಿವೆಯಾ ?

ಇದೇ ಅಂತರಂಗ ಸುದ್ದಿ

vbhat@me.com

ಇತ್ತೀಚೆಗೆ ನಾನು ಆರತಿ ಕುಮಾರ ರಾವ್ ಬರೆದ Marginlands : Indian Landscapes On The Brink ಎಂಬ ಪುಸ್ತಕವನ್ನು ಓದುತ್ತಿದ್ದೆ. ಈ ಕೃತಿಯಲ್ಲಿ ಒಂದು ಪ್ರಬಂಧವಿದೆ. ಅದರ ಶೀರ್ಷಿಕೆ – Forty names of clouds. ಅದರಲ್ಲಿ ಒಂದೆಡೆ ಲೇಖಕಿ ಹೀಗೆ ಬರೆಯುತ್ತಾರೆ – They say, Eskimos have 40 names for snow. I get that – they are surrounded by snow all year. The people of the Thar have just 40 cloudy days in a year-and yet they have as many names for clouds! (ಎಸ್ಕಿಮೋಗಳು ವರ್ಷವಿಡೀ ಹಿಮಗಳ ಮಧ್ಯವೇ ಇರುವುದರಿಂದ, ಹಿಮವನ್ನು ನಲವತ್ತು ಬೇರೆ ಬೇರೆ ಪದಗಳಿಂದ ಕರೆಯುತ್ತಾರೆ. ಥಾರ್ ಮರುಭೂಮಿಯಲ್ಲಿ ವರ್ಷದಲ್ಲಿ ನಲವತ್ತು ದಿನ ಮೋಡಗಟ್ಟುತ್ತವೆ. ಅಲ್ಲಿನ ಜನರೂ ಮೋಡವನ್ನು ನಲವತ್ತು ಬೇರೆ ಬೇರೆ ಪದ ಗಳಿಂದ ಕರೆಯುತ್ತಾರೆ.)

‘ಎಸ್ಕಿಮೋಗಳಿಗೆ ಹಿಮವನ್ನು ಮಾರಾಟ ಮಾಡುವವ ನಿಜವಾದ ಸೇಲ್ಸ್ ಮನ್’ ಎಂಬ ಉಕ್ತಿಯಂತೆ, ಎಸ್ಕಿಮೋ – ಹಿಮದ ಮಧ್ಯೆ ಈ ರೀತಿಯ ಒಂದು ಸಂಬಂಧ ಇರುವುದನ್ನು ಬಹಳ ವರ್ಷಗಳಿಂದ ನಾನೂ ಕೇಳುತ್ತಾ ಬಂದಿದ್ದೇನೆ. ಇದು ವಾಸ್ತವವೋ ಅಥವಾ ಅಲಂಕಾರಿಕವಾಗಿ ಬಳಸಿದ್ದೆ ಎಂಬುದು ಮಾತ್ರ ಚರ್ಚಾಸ್ಪದ. ಹಾಗಾದರೆ ಎಸ್ಕಿಮೋಗಳು (Inuit) ಹಿಮವನ್ನು ನಲವತ್ತು ಬೇರೆ ಬೇರೆ ಪದಗಳಿಂದ ಕರೆಯುತ್ತಾರಾ ಅಥವಾ ಇದೊಂದು
ಮಿಥ್ಯೆಯಾ? ಸೈಕಾಲಜಿಯಲ್ಲಿ ಇದನ್ನು snowclone ಎಂದು ಕರೆಯುತ್ತಾರೆ. ಕೆನಡದ ಬಫಿನ್ ದ್ವೀಪದಲ್ಲಿ ಖ್ಯಾತ ಮನಶ್ಯಾಸ್ತ್ರಜ್ಞ ಫ್ರಾಂಜ್ ಬೋಆಸ್, ಸ್ಥಳೀಯ ಪರಿಸರದ ಮೇಲೆ ಹೊರ ಜಗತ್ತಿನ ಪ್ರಭಾವ ಹೇಗೆ ಆಗುತ್ತದೆ ಎಂಬ ಬಗ್ಗೆ ಮಹತ್ವದ ಸಂಶೋಧನೆ ಮಾಡಿದ.

ಎಸ್ಕಿಮೋಗಳಿಗೆ ಹಿಮವೇ ಸರ್ವಸ್ವ. ಹೀಗಿರುವಾಗ ಆ ಜನಾಂಗದ ಜನ ಹಿಮವನ್ನು ಎಷ್ಟು ಪದಗಳಿಂದ ಕರೆಯಬಹುದು ಎಂಬುದನ್ನು ಅಧ್ಯಯನ ಮಾಡಿದ. ಯಾವತ್ತೂ ಯಾವ ಪದವೂ ಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಪದಗಳು ಚಲಾವಣೆಗೆ ಬರುತ್ತವೆ. ಆದರೆ ಎಸ್ಕಿಮೋ ಗಳಿಗೆ ಹಿಮವನ್ನು ಬಣ್ಣಿಸಲು ಪದಗಳ ಅಗತ್ಯವೇ ಇಲ್ಲ. ಅವುಗಳನ್ನು ಯಾವ ಪದದಿಂದ ಕರೆಯಲಿ, ಕರೆಯದಿರಲಿ ಅರ್ಥವಾಗುತ್ತದೆ. ಹೀಗಾಗಿ ಅವರು ಐದಕ್ಕಿಂತ ಹೆಚ್ಚು ಪದಗಳನ್ನು ಬಳಸಿರಲಿಕ್ಕಿಲ್ಲ ಎಂಬ ತೀರ್ಮಾನಕ್ಕೆ ಬಂದ. ಅದಾದ ಬಳಿಕ ಅನೇಕರು ಇದೇ ವಿಷಯದ ಬಗ್ಗೆ ಅಧ್ಯಯನ ನಡೆಸಿದರು.

ಅವರ ಪ್ರಕಾರ, -ಂಜ್ ಬೋಆಸ್ ಹೇಳಿದ್ದು ನಿಜ ಎಂದೇ ಸಾಬೀತಾಯಿತು. ಆದರೆ ಆರ್ಕ್ಟಿಕ್ ಪ್ರಾಂತದಲ್ಲಿ ಚಳಿಯನ್ನು ಬಣ್ಣಿಸಲು ಐವತ್ತಕ್ಕಿಂತ ಬೇರೆ ಬೇರೆಯಾದ ಅಭಿವ್ಯಕ್ತಿಗಳಿರುವುದು ನಿಜ. ಆದರೆ ಹಿಮವನ್ನು ಬಣ್ಣಿಸಲು ನಲವತ್ತು-ಐವತ್ತು ಪದಗಳಿವೆ ಎಂಬುದು ನಿಜವಲ್ಲ. ಇದನ್ನು ಮುಂದೆ the great Eskimo vocabulary hoax ಎಂದು ಕರೆಯಲಾಯಿತು. ಯಾರೋ ಬಳಸಿದ ಒಂದು ಪದ ಪ್ರಯೋಗ ಚಲಾವಣೆಗೆ ಬಂದು ಅದೇ ನಿಜ ಎನ್ನುವಂತಾ ಗಿದೆ. ಸಾಹಿತ್ಯದಲ್ಲಿ ಅಲಂಕಾರಿಕವಾಗಿ ಹೇಳಿದ್ದೇ ನಿಜವಿರಬಹುದು ಎಂದು ಅನೇಕರು ನಂಬಿದ್ದಾರೆ.

ಅದೇ ರೀತಿ, ಥಾರ್ ಮರುಭೂಮಿಯಲ್ಲಿ ಮಳೆಯೇ ಆಗದಿದ್ದರೂ, ಮೋಡವನ್ನು ನಲವತ್ತು ಪದಗಳಿಂದ ಕರೆಯುತ್ತಾರೆ ಎಂಬುದು ನಿತ್ಯಬಳಕೆಯಲ್ಲಿ ಬಂದಿದೆ. ಮೋಡ ಕಟ್ಟಿ ಮಳೆಯಾಗಲಿ ಎಂದು ಸದಾ ಅವರು ಹಂಬಲಿಸುವುದರಿಂದ, ಹಾಗೆ ಹಂಬಲಿಸಿದರೂ ಮಳೆ ಆಗದಿರುವುದರಿಂದ, ಅವರಿಗೆ ಮೋಡಗಳ ಕುರಿತು ಅಷ್ಟೊಂದು ಪದಗಳ ಅಗತ್ಯ ಕಂಡು ಬಂದಿರಲಿಕ್ಕಿಲ್ಲ. ಹೀಗಾಗಿ ಈ ಪದಪುಂಜವನ್ನು ಅಲಂಕಾರಿಕವಾಗಿ, ಪ್ರತಿಮೆಯಾಗಿ
ಬಳಸಿರ ಬಹುದು.

ಆದರೂ ಆಗಾಗ ‘ಎಸ್ಕಿಮೋಗಳು ಹಿಮವನ್ನು ನೂರಕ್ಕಿಂತ ಹೆಚ್ಚು ಪದಗಳಲ್ಲಿ ಬಣ್ಣಿಸುತ್ತಾರಂತೆ, ನಿಜವಾ?’ ಎಂಬ ಜಿಜ್ಞಾಸೆ ಮೂಡುತ್ತಿರುತ್ತದೆ. ಕಾಲಕಾಲಕ್ಕೆ ಬೇರೆ ಬೇರೆ ಸಂದರ್ಭ- ಸನ್ನಿವೇಶಗಳಲ್ಲಿ ಈ ಪದ ಪ್ರಯೋಗ ಚಾಲ್ತಿಗೆ ಬರುವುದರಿಂದ, ಹೊಸ ಹೊಸ ಪ್ರಶ್ನೆಗಳು ಮೂಡುವುದುಂಟು. ಕೆಲವು ವರ್ಷಗಳ ಹಿಂದೆ ಕೇಟ್ ಬುಷ್ ಎಂಬ ಸಂಗೀತಗಾರ ಮತ್ತು ಗೀತರಚನೆಕಾರ 50 Words for Snow ಎಂಬ ಆಲ್ಬಮ್ ಬಿಡುಗಡೆ ಮಾಡಿದಾಗ,
ಈ ಬಗ್ಗೆ ಚರ್ಚೆಯಾಗಿತ್ತು. ಆದರೆ ಭಾಷಾ ಶಾಸಜ್ಞರ ಪ್ರಕಾರ, ಎಸ್ಕಿಮೋಗಳೇ ಅಷ್ಟೊಂದು ಪದಗಳನ್ನು ಹುಟ್ಟುಹಾಕಬೇಕಿಲ್ಲ.

ಸಾಹಿತಿಗಳು, ಪತ್ರಕರ್ತರು ಕೂಡ ಆ ಕೆಲಸವನ್ನು ಮಾಡಬಹುದು. ಆದರೆ ಅಂಥ ಜರೂರತ್ತು ಉದ್ಭವ ಆಗಬೇಕಷ್ಟೆ. ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆ ವ್ಯಾಪಕವಾಗಿರುವ ಈ ದಿನಗಳಲ್ಲಿ ಅವುಗಳನ್ನು ಅದೊಂದೇ ಪದದಿಂದ ಕರೆಯುತ್ತಾರೆ. ಕಂಪ್ಯೂಟರ್ ಬಣ್ಣಿಸಲು ಯಾಕೆ ಐವತ್ತು ಪದಗಳಿಲ್ಲ ಎಂದು ಕೇಳಿದರೆ ಏನು ಹೇಳುವುದು?

ಒಂದು ಸಂಪ್ರದಾಯದ ಕೊನೆ

ಅಮೆರಿಕದ ಅಧ್ಯಕ್ಷರು ಬೇರೆ ದೇಶಗಳಿಗೆ ಹೋಗುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಅವರಿಗೆ ಸಾಕಷ್ಟು ಮಾಹಿತಿ ನೀಡುತ್ತಾರೆ. ಉದಾಹರಣೆಗೆ ಅಮೆರಿಕದ ಅಧ್ಯಕ್ಷರು ಡೆನ್ಮಾರ್ಕಿಗೆ ಭೇಟಿ ನೀಡಲಿದ್ದಾರೆ ಎಂದು ಭಾವಿಸಿ. ಅವರು ಅಲ್ಲಿಗೆ ಹೋಗುವ ಒಂದು ವಾರದ ಮೊದಲು, ಡೆನ್ಮಾರ್ಕಿನ ಇತಿಹಾಸ, ಸಂಸ್ಕೃತಿ, ಆಚರಣೆ, ಸಂಪ್ರದಾಯ ಹಾಗೂ ಇನ್ನಿತರ ಆಸಕ್ತಿದಾಯಕ ವಿಷಯಗಳ ಬಗ್ಗೆ ವಿದೇಶಾಂಗ ಸಚಿವಾಲಯದಲ್ಲಿರುವ ಅಧ್ಯಕ್ಷರ ವಿದೇಶ ಪ್ರವಾಸದ ಮಾಹಿತಿ ಪೂರೈಸುವ ಅಧಿಕಾರಿಗಳು ವಿಷಯವನ್ನು ಮನವರಿಕೆ ಮಾಡಿಕೊಡುತ್ತಾರೆ.

ಅಧ್ಯಕ್ಷರು ತಮ್ಮ ಭೇಟಿ ಸಮಯದಲ್ಲಿ ಅಲ್ಲಿನ ಸಾಹಿತಿಯೊಬ್ಬರನ್ನು ಭೇಟಿ ಮಾಡಿದರೆ, ಅವರ ಜತೆ ಏನು ಮಾತಾಡಬೇಕು, ಯಾವ ಸಂಗತಿಗಳನ್ನು ಹೇಳಿ ಆ ಸಾಹಿತಿಯಲ್ಲಿ ಬೆರಗು ಮೂಡಿಸಬೇಕು ಎಂಬ ಮಾಹಿತಿಯನ್ನೂ ನೀಡುತ್ತಾರೆ. ಅಧ್ಯಕ್ಷರ ಗೌರವಾರ್ಥ ಡೆನ್ಮಾರ್ಕಿನ ಪ್ರಧಾನಿ ಔತಣಕೂಟ ಏರ್ಪಡಿಸಿ ದರೆ, ಆ ಟೇಬಲ್ ನಲ್ಲಿ ಯಾರು ಯಾರು ಎಲ್ಲಿ ಕುಳಿತುಕೊಳ್ಳುತ್ತಾರೆ, ಅವರ ಸಂಕ್ಷಿಪ್ತ ಪರಿಚಯವೇನು ಎಂಬುದು ಅಧ್ಯಕ್ಷರಿಗೆ ಗೊತ್ತಿರುತ್ತದೆ. ಅಂದರೆ ಅಧ್ಯಕ್ಷರ ಗಮನಕ್ಕೆ ಬಾರದೇ, ಪೂರ್ವಭಾವಿ ಮಾಹಿತಿ ಇಲ್ಲದೇ ಯಾವುದೂ ನಡೆಯುವುದಿಲ್ಲ. ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್ ಲಂಡನ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿ ಔತಣಕೂಟದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರನ್ನು ತಪ್ಪಾಗಿ ಸಂಬೋಧಿಸಿ ಬುಷ್ ಮುಜುಗರ ಕ್ಕೊಳಗಾಗಿದ್ದರು.

ಆಗ ಅವರು ಕ್ಷಮೆಯಾಚಿಸಿ ದೊಡ್ಡತನ ಮೆರೆದಿದ್ದರು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಅಧಿಕಾರಿಗಳ ತಲೆದಂಡವಾಗುತ್ತದೆ. ಬರಾಕ್ ಒಬಾಮ ಅಧ್ಯಕ್ಷರಾಗಿ ಭಾರತಕ್ಕೆ ಭೇಟಿ ನೀಡಿದಾಗ, ಅವರ ಒಂದು ದಿನದ ಕಾರ್ಯಕ್ರಮ ಹೇಗಿತ್ತು ಎಂಬುದನ್ನು ಫೈನಾನ್ಸಿಯಲ್ ಟೈಮ್ಸ್ ಪತ್ರಿಕೆ ಸಂಪಾದಕ ಲಿಯೋನೆಲ್ ಬಾರ್ಬರ್ ತಮ್ಮ ದಿನಚರಿಯಲ್ಲಿ ಬರೆದಿಟ್ಟುಕೊಂಡಿದ್ದನ್ನು ಪ್ರಕಟಿಸಿದ್ದರು. ಭಾರತಕ್ಕೆ ಕಾಲಿಟ್ಟಾಗಿನಿಂದ ಹಿಡಿದು, ಅವರು ನಿರ್ಗಮಿಸುವ ತನಕ ಅವರ ಭೇಟಿಯ ಸಂಪೂರ್ಣ ಮಾಹಿತಿ ಅದರಲ್ಲಿತ್ತು. ಅಧ್ಯಕ್ಷರ ಭೇಟಿಗಿಂತ ಮುನ್ನ ಈ ಮಾಹಿತಿ ಅವರ ಪ್ರವಾಸದ ಉಸ್ತುವಾರಿ ಹೊತ್ತ ಒಂದಿಬ್ಬರು ಅಧಿಕಾರಿಗಳಿಗೆ ಮಾತ್ರ ಗೊತ್ತಿರಬಹುದು. ಸಾಮಾನ್ಯವಾಗಿ ಈ ಮಾಹಿತಿಯನ್ನು ಸಾರ್ವಜನಿಕ ಕುತೂಹಲಕ್ಕೂ ಬಿಡುಗಡೆ ಮಾಡುವುದಿಲ್ಲ. ಈ ಬಗ್ಗೆ
ಯಾರಾದರೂ ಆಸಕ್ತಿವಹಿಸಿದರೆ, ಅಧ್ಯಕ್ಷರ ನಿರ್ಗಮನ ಮೂವತ್ತೆರಡು ದಿನಗಳ ನಂತರ, ನಿರೀಕ್ಷಿತ ಮಾಹಿತಿಯನ್ನು ಒದಗಿಸಲಾಗುತ್ತದೆ.

ಅಮೆರಿಕದ ಅಧ್ಯಕ್ಷರಿಗೆ ಅವರು ಭೇಟಿ ನೀಡಲಿರುವ ದೇಶದ ಬಗ್ಗೆ ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕರು ಮಾಹಿತಿ ನೀಡುವುದು ಬ್ರೀಫ್ ಮಾಡುವುದು ಲಾಗಾಯ್ತಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಅಮೆರಿಕದ ಅಧ್ಯಕ್ಷರು ಯೂರೋಪಿನ ದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ವಿಮಾನದಲ್ಲಿ ಲಂಡನ್ ಮೂಲದ ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕರು ಪೂರಕ ಮಾಹಿತಿ ನೀಡುತ್ತಾರೆ. ಇದು ಒಂದು ಪತ್ರಿಕೆ ಮತ್ತು ಒಬ್ಬ
ಸಂಪಾದಯಾನಿಗೆ ಸಿಗುವ ಉನ್ನತ ಗೌರವವೂ ಹೌದು. ಆಮೆರಿಕದ ಅಧ್ಯಕ್ಷರು ಯುರೋಪ್ ಗೆ ಭೇಟಿ ನೀಡುವ ಮುನ್ನ ‘ಫೈನಾನ್ಸಿಯಲ್ ಟೈಮ್ಸ್’ ಪತ್ರಿಕೆ ಸಂಪಾದಕರನ್ನು ಕರೆದುಕೊಂಡು ಹೋಗುವುದು ವಾಡಿಕೆ. ಕೆಲವು ಸಂದರ್ಭಗಳಲ್ಲಿ ಈ ಸಂಪಾದಕರು ಉಭಯ ದೇಶಗಳ ನಾಯಕರ ಕೋರಿಕೆ ಮೇರೆಗೆ ಸಂಧಾನಕಾರರಾಗಿ, ಸಂವಾದಕರಾಗಿ ಕೆಲಸ ನಿರ್ವಹಿಸುತ್ತಾರೆ.

೧೯೫೦ ರಿಂದ ೧೯೭೨ರವರೆಗೆ ಲಂಡನ್ ಮೂಲದ ‘ಫೈನಾನ್ಸಿಯಲ್ ಟೈಮ್ಸ್’ ಸಂಪಾದಕರಾಗಿದ್ದ ಸರ್ ಗೋರ್ಡಾನ್ ನ್ಯೂಟನ್ ಅವರು ಅಮೆರಿಕ ಅಧ್ಯಕ್ಷರಿಗೆ ಸಂವಾದಕರಾಗಿ, ಅನುಕೂಲಕಾರರಾಗಿ ಕೆಲಸ ಮಾಡಿದ್ದರು. ಅಧ್ಯಕ್ಷರ ನಿಯೋಗದಲ್ಲಿ ಸಂಪಾದಕರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳು ತ್ತಿದ್ದರು. ನಾಲ್ಕು ಅಧ್ಯಕ್ಷರ ವಿದೇಶ ಪ್ರವಾಸಗಳಲ್ಲಿ, ಭೇಟಿ ನೀಡಲಿರುವ ದೇಶಗಳ ಕುರಿತು ನ್ಯೂಟನ್ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿದ್ದರು. ಅವರ ಅಭಿಪ್ರಾಯಗಳಿಗೆ ಅಂಥ ಮನ್ನಣೆಯಿತ್ತು. ಆ ದಿನಗಳಲ್ಲಿ ಒಬ್ಬ ಸಂಪಾದಕರಿಗೆ ಸಿಗಬಹುದಾದ ದೊಡ್ಡ ಗೌರವ ಇದೆಂದು ಭಾವಿಸಲಾಗುತ್ತಿತ್ತು. ಒಬಾಮ ಅಧ್ಯಕ್ಷರಾಗಿರುವ ತನಕ ಈ ಸಂಪ್ರದಾಯ ಮುಂದುವರಿದುಕೊಂಡು ಬಂದಿತ್ತು. ಅವರ ನಂತರ ಅಧ್ಯಕ್ಷರಾದ ಟ್ರಂಪ್ ಇದನ್ನು ಮುಂದು ವರಿಸಲಿಲ್ಲ. ಅವರಿಗೆ ಪತ್ರಿಕಾ ಸಂಪಾದಕರ ಬಗ್ಗೆ ತಿರಸ್ಕಾರ ಮತ್ತು ಪೂರ್ವಗ್ರಹವಿತ್ತು. ಅಲ್ಲಿಗೆ ಒಂದು ಸತ್ಸಂಪ್ರದಾಯ ಕೊನೆಗೊಂಡಿತು.

ಸಂದರ್ಶನ ಮತ್ತು ಮರಳು ಗಡಿಯಾರ

ಅಮೆರಿಕದ ಅಧ್ಯಕ್ಷರು ಯಾರನ್ನಾದರೂ ಭೇಟಿ ಮಾಡುವಾಗ ಕಡ್ಡಾಯವಾಗಿ ಸಮಯವನ್ನು ಪಾಲಿಸಲಾಗುತ್ತದೆ. ಅಧ್ಯಕ್ಷರು ಭೇಟಿ ಮಾಡುವ ವ್ಯಕ್ತಿ ಯಾರೇ ಆಗಿದ್ದರೂ, ಅವರ ಶಿಷ್ಟಾಚಾರ ನಿರ್ವಹಿಸುವ ಅಧಿಕಾರಿಗಳು ಸಮಯದ ಕಡೆ ಒಂದು ಕಣ್ಣಿಟ್ಟಿರುತ್ತಾರೆ. ತಾವು ಭೇಟಿ ಮಾಡಿದ ವ್ಯಕ್ತಿ ಜತೆ ಸ್ವತಃ ಅಧ್ಯಕ್ಷರೇ ಹೆಚ್ಚಿನ ಸಮಯ ಕಳೆಯಲು ಬಯಸಿದಾಗಲೂ, ಸಮಯ ಪಾಲಕರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಮರೆಯುವುದಿಲ್ಲ. ಅಧ್ಯಕ್ಷರು ಗಹನವಾದ ವಿಷಯ ಚರ್ಚಿಸುವಾಗ, ಶಿಷ್ಟಾಚಾರ ಪಾಲನ ಅಧಿಕಾರಿಗಳು ಮಧ್ಯೆ ಹೋಗಿ, ‘ಸಮಯವಾಯಿತು..’ ಎಂದು ಹೇಳುವುದು ಅಥವಾ ನೆನಪಿಸುವುದು ಸೌಜನ್ಯ ಅಲ್ಲ. ಈ ಕಾರಣದಿಂದ ಅವರು ಬೇರೆಯದೇ ಪದ್ಧತಿಯನ್ನು ಅನುಸರಿಸುತ್ತಾರೆ.

ಅದೆಂದರೆ, ಮರಳು(sand)ತುಂಬಿದ hourglass (ಮರಳು ಗಡಿಯಾರ). ಭೇಟಿಯಾದ ತಕ್ಷಣ ನಿಗದಿಪಡಿಸಲಾದ ಸಮಯಕ್ಕೆ ಅನುಗುಣವಾದ ಮರಳು ಗಡಿಯಾರವನ್ನು ಇಬ್ಬರಿಗೂ ಕಾಣುವ ಹಾಗೆ ಮುಂದಿನ ಟೀಪಾಯ್ ಮೇಲೆ ಇಟ್ಟು ಬರುತ್ತಾರೆ. (ಸಂದರ್ಭ-ಸಮಯಕ್ಕೆ ತಕ್ಕಂತೆ ಐದು, ಹತ್ತು, ಹದಿ ನೈದು, ಇಪ್ಪತ್ತು, ಮೂವತ್ತು ನಿಮಿಷಗಳ ಮರಳು ಗಡಿಯಾರವನ್ನು ಇಡುತ್ತಾರೆ.) ಅದು ಬರಿದಾಗುತ್ತಿದ್ದಂತೆ, ’ನಿಮಗೆ ನೀಡಿದ ಸಮಯ ಮುಗಿದಿದೆ, ಇನ್ನು ಹೊರಡಬಹುದು’ ಎಂದು ಸೂಚಿಸದ ಹಾಗೆ. ಮರಳು ಗಡಿಯಾರವನ್ನು ಇಟ್ಟಾಗ, ಕಾಲಕಾಲಕ್ಕೆ ಇಬ್ಬರ ಲಕ್ಷ್ಯವೂ ಅದರ ಮೇಲೆಯೇ ಹರಿಯು ವುದು ಸಾಮಾನ್ಯ. ಮರಳು ಬರಿದಾಗಲು ಇನ್ನೂ ಮೂರ್ನಾಲ್ಕು ನಿಮಿಷಗಳಿರುವಾಗಲೇ ಅಧ್ಯಕ್ಷರನ್ನು ಭೇಟಿ ಮಾಡಿದವರು ಹೊರಡಲು ಸಿದ್ಧರಾಗು ತ್ತಾರೆ.

ಕಟ್ಟುನಿಟ್ಟಾಗಿ ಸಮಯ ಪಾಲಿಸಲು ಈ ಮರಳು ಗಡಿಯಾರ ಅತ್ಯಂತ ಪರಿಣಾಮಕಾರಿ. ಪ್ರತಿಷ್ಠಿತ ‘ಫೈನಾನ್ಸಿಯಲ್ ಟೈಮ್ಸ್’ ಪತ್ರಿಕೆಗೆ ಸುಮಾರು ಹದಿ
ನೈದು ವರ್ಷಗಳ ಕಾಲ ಸಂಪಾದಕರಾಗಿದ್ದ ಲಿಯೋನೆಲ್ ಬಾರ್ಬರ್ ಒಮ್ಮೆ ಅಧ್ಯಕ್ಷ ಒಬಾಮ ಅವರನ್ನು ಸಂದರ್ಶಿಸಲು ಬಯಸಿದರು. ಇದಕ್ಕಾಗಿ ಅವರು ಲಂಡನ್ ನಿಂದ ಆಗಮಿಸಿದರು. ಅವರಿಗೆ ಅರ್ಧ ಗಂಟೆ ಸಮಯ ನೀಡಲಾಗಿತ್ತು. ಸಂದರ್ಶನ ಆರಂಭವಾಗುತ್ತಿದ್ದಂತೆ, ವೈಟ್ ಹೌಸ್ ಪ್ರೆಸ್ ಸೆಕ್ರೆಟರಿ ಮರಳು ಗಡಿಯಾರವನ್ನು ತಂದಿಟ್ಟರು.

ಈ ಬಗ್ಗೆ ಬಾರ್ಬರ್ ತಮ್ಮ The Powerful and the Damned : The life behind the headlines in Financial Times ಎಂಬ ಕೃತಿಯಲ್ಲಿ ಹೀಗೆ ಬರೆದಿ ದ್ದಾರೆ – ‘ಪ್ರೆಸ್ ಸೆಕ್ರೆಟರಿ ಮರಳು ಗಡಿಯಾರವನ್ನು ತಂದಿಟ್ಟ ನಂತರ ನಾನು ಒಬಾಮ ಅವರನ್ನು ನೋಡುವುದಕ್ಕಿಂತ ಆ ಮರಳು ಗಡಿಯಾರವನ್ನೇ ಹೆಚ್ಚು ದಿಟ್ಟಿಸಲಾರಂಭಿಸಿದೆ. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಇಡೀ ಒಂದು ಪುಟಕ್ಕಾಗುವಷ್ಟು ವಿಷಯವೇನೋ ಸಿಕ್ಕಿತ್ತು, ಆದರೆ ಆ ಸಂದರ್ಶನ ದಲ್ಲಿ ಹೇಳಿಕೊಳ್ಳುವಂಥ ಮಹತ್ವದ ಸುದ್ದಿಯಿರಲಿಲ್ಲ. ನಾನು ಅಧ್ಯಕ್ಷರಿಗೆ ಏನಾದರೂ ಮುಜುಗರ ಹುಟ್ಟಿಸುವ ಪ್ರಶ್ನೆಯನ್ನು ಕೇಳಬೇಕಾಗಿತ್ತು. ನೀವು ಜೀವನದಲ್ಲಿ ಏನನ್ನೂ ನೀವಾಗಿಯೇ ಮ್ಯಾನೇಜ್ ಮಾಡದವರು, ಹೀಗಿರುವಾಗ ನಿಮ್ಮ ಮ್ಯಾನೇಜ್ಮೆಂಟ್ ಸ್ಟೈಲ್ ಹೇಗಿದೆ ಎಂದು ಕೇಳಬೇಕಾಗಿತ್ತು. ಆದರೆ ಆ ಹಾಳು ಮರಳು ಗಡಿಯಾರ ಕೇಳಬೇಕೆಂದಿದ್ದ ಪ್ರಶ್ನೆಗಳನ್ನೆಲ್ಲ ಮರೆಯಿಸಿಬಿಟ್ಟಿತು.’

ರವಾಂಡದ ಸರ್ವಾಧಿಕಾರಿ 
ಕೆಲ ವರ್ಷಗಳ ಹಿಂದೆ, ರವಾಂಡ ಅಧ್ಯಕ್ಷರಾಗಿರುವ ಪಾಲ್ ಕಗಾಮೆ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಬೆಂಗಳೂರಿನಲ್ಲಿ ರವಾಂಡ ಆನರರಿ ಕೌನ್ಸುಲ್ ಆಗಿರುವ, ಕನ್ನಡಿಗರಾದ ಮೋಹನ್ ಸುರೇಶ ಈ ಭೇಟಿಗೆ ನೆರವಾಗಿದ್ದರು. ಕಳೆದ ೨೪ ವರ್ಷಗಳಿಂದ (೨೦೦೦ ದಿಂದ) ಕಗಾಮೆ ರವಾಂಡ ಅಧ್ಯಕ್ಷರಾಗಿzರೆ. ಅವರು ಅಧ್ಯಕ್ಷರಾಗುವುದಕ್ಕಿಂತ ಮುನ್ನ ಆ ದೇಶದ ಉಪಾಧ್ಯಕ್ಷರಾಗಿದ್ದರು. ತಾವು ಅಧ್ಯಕ್ಷರಾಗುತ್ತಿದ್ದಂತೆ,
ಉಪಾಧ್ಯಕ್ಷ ಹುದ್ದೆಯನ್ನೇ ರದ್ದು ಮಾಡಿಬಿಟ್ಟರು. ರವಾಂಡದ ಮಿಲಿಟರಿಯಲ್ಲಿ ಗೂಢಚಾರರಾಗಿ ಕೆಲಸ ಮಾಡಿದ ಕಗಾಮೆ, ಇಡೀ ದೇಶವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಅವರು ಆಫ್ರಿಕಾದ ಉಳಿದ ಸರ್ವಾಧಿಕಾರಿಗಳಂತಲ್ಲ. ತಮ್ಮ ದೇಶವನ್ನು ಮಾದರಿ ದೇಶವನ್ನಾಗಿ ಮಾಡುವ ಕನಸನ್ನು ಹೊತ್ತು ಆ ದಿಸೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ.

ರವಾಂಡದಲ್ಲಿ ಒಂದೇ ಒಂದು ರಸ್ತೆಗುಂಡಿಯನ್ನು ನೋಡಲು ಸಾಧ್ಯವಿಲ್ಲ. ಹಾಗೆಯೇ ಬರಿಗಾಲಲ್ಲಿ ಓಡಾಡುವವರನ್ನು. ಉತ್ತಮ ಹೋಟೆಲ್‌ನ್ನೇ ಅಭಿವೃದ್ಧಿಯ ಮಾನದಂಡವನ್ನಾಗಿ ಇಟ್ಟುಕೊಂಡರೆ, ನಾನು ಮೊದಲ ಬಾರಿಗೆ ಆ ದೇಶಕ್ಕೆ ಹೋದಾಗ (ಹನ್ನೆರಡು ವರ್ಷಗಳ ಹಿಂದೆ) ಅಲ್ಲಿ ಒಂದೇ ಒಂದು ಪಂಚಾತಾರ ಹೋಟೆಲ್ ಇತ್ತು. ಈಗ ಇಪ್ಪತ್ತಕ್ಕೂ ಹೆಚ್ಚು ಹೋಟೆಲುಗಳು ತಲೆಯೆತ್ತಿವೆ. ರವಾಂಡವನ್ನು ಆಧುನಿಕ ಸಿಂಗಾಪುರದಂತೆ ಅಭಿವೃದ್ಧಿ
ಪಡಿಸುವ ಕನಸು ಹೊತ್ತಿರುವ ಕಗಾಮೆ, ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಮೂಲತಃ ಕಗಾಮೆ ಅವರು ಪಕ್ಕದ ದೇಶವಾದ ಉಗಾಂಡದ ಈಗಿನ ಅಧ್ಯಕ್ಷರಾಗಿರುವ ಯೋವೇರಿ ಮೂಸೆವೆನಿ (ಪೂರ್ತಿ ಹೆಸರು ಯೋವೇರಿ ಕಾಗುತ ಮೂಸವೆನಿ ತಿಬುಹಬರ್ವ) ಅವರ ಬಂಡುಕೋರ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಯೋವೇರಿ ಮೂಸೆವೆನಿ ಕೂಡ ಕಳೆದ ಮೂವತ್ತೆಂಟು ವರ್ಷಗಳಿಂದ ಉಗಾಂಡದ ಅಧ್ಯಕ್ಷರಾಗಿzರೆ. ಅವರನ್ನು ಸೋಲಿಸಲು ಆ ಭಗವಂತ ಬಂದರೂ ಸಾಧ್ಯವಿಲ್ಲ. ಕಾರಣ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ, ಸುಮಾರು ೪೦೦ ಬೂತುಗಳಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಿತ್ತು ಮತ್ತು ಆ ಮತಗಳು ಯೋವೇರಿ ಮೂಸೆವೆನಿ ಪರವಾಗಿ ಚಲಾಯಿಸಲಾಗಿತ್ತು. ಅಂದರೆ ಆ ಚುನಾವಣೆಯ ಸಾಚಾತನದ ಬಗ್ಗೆ ಎಂಥವರಿಗಾದರೂ ಸಂದೇಹ ಬರದೇ ಇರದು.

ಯೋವೇರಿ ಮೂಸೆವೆನಿ ಥರ ಕಗಾಮೆ ಸಹ ಸರ್ವಾಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕಗಾಮೆ ಆಫ್ರಿಕಾದ ಸರ್ವಾಧಿಕಾರಿಗಳ ಉತ್ತಮ ಎಂದು ಅನಿಸಿಕೊಂಡಿದ್ದಾರೆ. ೧೯೯೪ ರಲ್ಲಿ ರವಾಂಡದಲ್ಲಿ ಮೂರು ತಿಂಗಳ ಅವಧಿಯಲ್ಲಿ, ಸುಮಾರು ಹತ್ತು ಲಕ್ಷ ಜನರ ದಾರುಣ ಹತ್ಯೆಗೆ ಕಾರಣವಾದ
ಜನಾಂಗೀಯ ನರಮೇಧದ ಬಳಿಕ, ದೇಶದಲ್ಲಿ ಸಂಪೂರ್ಣ ಶಾಂತಿ-ಸೌಹಾರ್ದ ವಾತಾವರಣ ನೆಲೆಸುವಂತೆ ಮಾಡಿದ್ದು ಕಗಾಮೆ ಅವರ ಅಸಾಧಾರಣ ಸಾಧನೆ. ಕಗಾಮೆಯವರ ಟೀಕಾಕಾರರಾಗುವ ಒಂದು ಅಪಾಯವೆಂದರೆ ಅವರು ಹಠಾತ್ ಕಣ್ಮರೆಯಾಗುತ್ತಾರೆ, ಇಲ್ಲವೇ ಭಯದಲ್ಲಿ ಜೀವ ಸಾಗಿಸುತ್ತಾರೆ.
ಅವರನ್ನು ಸಹ ಅಧಿಕಾರದಿಂದ ತೆಗೆಯುವುದು ಕಷ್ಟವೇ.

ಕಗಾಮೆ ಬಗ್ಗೆ ರೋಚಕ ಕತೆಗಳಿವೆ. ಅವರು ಸಿಟ್ಟು ಬಂದಾಗ ತಮ್ಮ ಸುತ್ತಮುತ್ತಲಿನವರಿಗೆ ಕಪಾಳಮೋಕ್ಷ ಮಾಡುತ್ತಾರೆ ಎಂಬ ಆರೋಪಗಳೂ ಇವೆ. ಒಮ್ಮೊಮ್ಮೆ ಅವರ ಸಂಪುಟ ಸಚಿವರೂ ಅವರ ಕಪಾಳಮೋಕ್ಷಕ್ಕೆ ಗುರಿಯಾದ ನಿದರ್ಶನಗಳಿವೆ. ‘ನಿಮ್ಮ ಸಹೋದ್ಯೋಗಿಗಳಿಗೆ ನೀವು ಹೊಡೆಯುತ್ತೀರಿ ಎಂಬ ಆರೋಪವಿದೆಯೆಲ್ಲ’ ಎಂದು ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜೆಫ್ರಿ ಗೆಟಲಮ್ಯಾನ್ ಕೇಳಿದಾಗ, ಅದಕ್ಕೆ ಕಗಾಮೆ, ‘ನಾನು ಬಹಳ ಕಠೋರ ಮನುಷ್ಯ. ನಾನು ಅಂಥ ತಪ್ಪುಗಳನ್ನು ಆಗಾಗ ಮಾಡುತ್ತಾ ಇರುತ್ತೇನೆ’ ಎಂದು ಹೇಳಿದ್ದರು.

ರವಾಂಡದಲ್ಲಿ ಲಿಬರಲ್ ಡೆಮೆಕ್ರಸಿ ಸ್ಥಾಪನೆಯಾಗಬೇಕು ಎಂದು ಅಮೆರಿಕ ಮತ್ತು ಬ್ರಿಟನ್ ಹೇಳಿದಾಗ, ಕಗಾಮೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ‘ಈ ವಿಷಯದಲ್ಲಿ ಅಮೆರಿಕ ಮತ್ತು ಬ್ರಿಟನ್ ಹೇಳುವುದನ್ನು ನಾನು ಸ್ವಾಗತಿಸುತ್ತೇನೆ. ಖಂಡಿತವಾಗಿಯೂ ರವಾಂಡದಲ್ಲಿ ಲಿಬರಲ್ ಡೆಮೆಕ್ರಸಿ ಸ್ಥಾಪನೆಯಾಗಬೇಕು. ಆದರೆ ಅದಕ್ಕೂ ಮುನ್ನ ಅಫ್ಘಾನಿಸ್ತಾನ, ಲಿಬಿಯಾ ಮತ್ತು ಸಿರಿಯಾದಲ್ಲಿ ಅದು ಸ್ಥಾಪನೆಯಾಗಲಿ. ಅಲ್ಲಿ ಅದನ್ನು ಸ್ಥಾಪಿಸಿದ ಬಳಿಕ ರವಾಂಡದಲ್ಲಿ ಸ್ಥಾಪಿಸೋಣ ಎಂದು ವ್ಯಂಗ್ಯವಾಗಿ ಹೇಳಿದ್ದರು. ಕಗಾಮೆ ರವಾಂಡದ ಪತ್ರಕರ್ತರನ್ನು ಈಗಲೂ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಪತ್ರಕರ್ತರೂ ಅವರನ್ನು ಭೇಟಿ ಮಾಡಲು ಉತ್ಸಾಹ ತೋರಿಸುವುದಿಲ್ಲ. ಕಾರಣ ಅವರಿಗೆ ಸಂದರ್ಶನದ ಸಮಯದಲ್ಲಿ ಅಹಿತಕರ ಪ್ರಶ್ನೆಗಳನ್ನು ಕೇಳಬಾರದು, ಯಾರಾದರೂ ಅಂಥ ಪ್ರಶ್ನೆಗಳನ್ನು ಕೇಳಿದರೆ ಪತ್ರಕರ್ತನಿಗೆ ಹೊಡೆದು ಬಿಡುತ್ತಾರೆ. ಅದೇ ವಿದೇಶಿ ಪತ್ರಕರ್ತರನ್ನು ಎರಡು-ಮೂರು
ಗಂಟೆಗಳ ಕಾಲ ಕುಳ್ಳಿರಿಸಿಕೊಂಡು ಸಂದರ್ಶನ ನೀಡುವುದು ಅವರಿಗೆ ಇಷ್ಟ.

ಸರ್ವಾಽಕಾರಿಗಳಿಗೆ ಮತ್ತು ಉನ್ನತ ಸ್ಥಾನದಲ್ಲಿರುವವರಿಗೆ ಒಂದು ವಿಚಿತ್ರ ಸ್ವಭಾವವಿರುತ್ತದೆ. ಅವರು ಗಟ್ಟಿಯಾದ ಧ್ವನಿಯಲ್ಲಿ ಮಾತಾಡುವುದಿಲ್ಲ. ಅವರ ಮುಂದೆ ಇಬ್ಬರು-ಮೂವರು ಕುಳಿತಿದ್ದರೆ, ಅವರಿಗೆ ಸ್ಪಷ್ಟವಾಗಿ ಕೇಳಿಸುವಂತೆ ಮಾತಾಡದೇ, ಮೆಲ್ಲಗೆ ಮಾತಾಡುತ್ತಾರೆ. ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಅವರು ಇನ್ನೂ ಹತ್ತಿರಕ್ಕೆ ಬರಲಿ ಮತ್ತು ತಮ್ಮ ಮಾತಿನ ಮೇಲೆ ಇನ್ನಷ್ಟು ಗಮನ ಹರಿಸಲಿ ಎಂಬುದು ಅವರ ಲೆಕ್ಕಾಚಾರವಾಗಿರುತ್ತದೆ.
ಕಗಾಮೆ ಸಹ ಅದಕ್ಕೆ ಹೊರತಾಗಿರಲಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆ
ಪೌರತ್ವ ತಿದ್ದುಪಡಿ ಕಾಯ್ದೆ (CAA & Citizenship Amendment Act) ) ಬಗ್ಗೆ ಈಗ ಎಡೆ ಚರ್ಚೆಯಾಗುತ್ತಿದೆ. ಈ ಕಾಯ್ದೆಯನ್ನು ಸಾಮಾನ್ಯ ಜನರಿಗೆ ವಿವರಿಸುವುದು ಕಷ್ಟ. ಇತ್ತೀಚೆಗೆ ವಾಟ್ಸಾಪ್ ನಲ್ಲಿ ಬಂದ ಮೆಸೇಜಿನಲ್ಲಿ ಒಬ್ಬರು ಅದನ್ನು ಎಂಥವರಿಗೂ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದರು. ಅದನ್ನು ಇಲ್ಲಿ ಹಂಚಿಕೊಳ್ಳುವುದಾದರೆ… ಪಕ್ಕದ ಮನೆಯ ಬೆಕ್ಕಿನ ಮರಿಯನ್ನು ಒಂದಷ್ಟು ಹುಚ್ಚು ನಾಯಿಗಳು ಕಚ್ಚುವುದಕ್ಕೆ ಅಟ್ಟಿಸಿಕೊಂಡು ಬಂದಾಗ, ಆ ಬೆಕ್ಕು ನಿಮ್ಮ ಮನೆಯೊಳಕ್ಕೆ ಹಠಾತ್ ನುಗ್ಗುತ್ತದೆ. ನೀವು ಅದಕ್ಕೆ ಆಶ್ರಯ ನೀಡುತ್ತೀರಿ. ಇದು ಪೌರತ್ವ ತಿದ್ದುಪಡಿ ಕಾಯ್ದೆ.. CAA’. ‘ಹಾಗೆ ಮಾಡಬಾರದು, ಹುಚ್ಚು ನಾಯಿಗಳಿಗೂ ಆಶ್ರಯ ನೀಡಬೇಕು ಎನ್ನುತ್ತಾ ನಿಮ್ಮ ಮನೆಯ ನಾಯಿಗಳು ಬೊಗಳುತ್ತವಲ್ಲ, ಅದು ಪೌರತ್ವ ತಿದ್ದುಪಡಿ ಕಾಯ್ದೆ CAA ವಿರೋಧಿ ಹೋರಾಟ. ಇದಕ್ಕಿಂತ ಸರಳವಾಗಿ ಈ ವಿಷಯವನ್ನು ವಿವರಿಸಲು ಸಾಧ್ಯವಿಲ್ಲ.