ಭಾರತದ ಹೆಮ್ಮೆ
ಗಿರೀಶ್ ಲಿಂಗಣ್ಣ
ಇತ್ತೀಚೆಗೆ ಭಾರತೀಯ ನೌಕಾಪಡೆಯ ಮಾರ್ಕೋಸ್ ತಂಡ ಭಾರತೀಯ ಸೇನೆಯ ಥಾರ್ ರಾಪ್ಟರ್ ಏವಿಯೇಷನ್ ಬ್ರಿಗೇಡ್
ಜತೆಗೂಡಿ ಅಭ್ಯಾಸ ಕಾರ್ಯಾಚರಣೆ ಕೈಗೊಂಡಿತ್ತು.
‘ಎಕ್ಸಸೈಸ್ ರುದ್ರ ಪ್ರಹಾರ್’ ಹೆಸರಿನ ಈ ಅಭ್ಯಾಸ ಜಂಟಿ ಕಾರ್ಯಾಚರಣೆ ಮತ್ತು ಎರಡೂ ತಂಡಗಳ ಪರಸ್ಪರ ಕಾರ್ಯ ಸಾಧ್ಯತೆಗಳ ಗುರಿಯನ್ನು ಹೊಂದಿದೆ. ಈ ಬೆಳವಣಿಗೆಗಳು ವಿಶೇಷ ಸಾಗರ ಕಮಾಂಡೋಗಳ ತಡವಾದ ಮಾರ್ಕೋಸ್ ಅಂದರೆ ಏನು ಎಂದು ಯೋಚಿಸುವಂತೆ ಮಾಡುತ್ತದೆ.
ಭಾರತ ಅದು ಹೇಗೆ ಇಂಥ ಒಂದು ವಿಶೇಷ ನೌಕಾಪಡೆಯ ಕಮಾಂಡೋ ತಂಡವನ್ನು ಆರಂಭಿಸಿತು? ಮರೀನ್ ಕಮಾಂಡೋ ಪಡೆ ಎಂತಹಾ ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತದೆ? ವಿವರಿಸುವ ಪ್ರಯತ್ನ ಇಲ್ಲಿದೆ. 1954ರಲ್ಲಿ ಗ್ರೇಟ್ ಬ್ರಿಟನ್ನಿನ ಸ್ಪೆಷಲ್ ಬೋಟ್ ಸರ್ವಿಸ್ ಕಮಾಂಡೊ ಪಡೆ ಭಾರತೀಯ ನೌಕಾಪಡೆಯ ಅಧಿಕಾರಿಗಳ ಮತ್ತು ಮುಂದಾಳು ಗಳ ತಂಡವನ್ನು ಆಯ್ಕೆ ಮಾಡಿಕೊಂಡು, ಅವರಿಗೆ ಸಾಗರ ಸಮರದಲ್ಲಿ ವಿಶೇಷ ತರಬೇತಿ ನೀಡಲು ನಿರ್ಧರಿಸಿತು.
ಬ್ರಿಟಿಷ್ ಪಡೆಗಳು ಈ ತರಬೇತಿಯ ಬಳಿಕ ತರಬೇತಿ ಪಡೆದ ಸೈನಿಕರೇ ಮುಂದಿನ ಸೈನಿಕರಿಗೆ ತರಬೇತಿ ನೀಡಲು ಸಾಧ್ಯವಾಗುವಂತೆ ಮಾಡಿದ್ದವು. 1955ರಲ್ಲಿ ಭಾರತೀಯ ನೌಕಾಪಡೆಯ ಲೈಟ್ ಡೈವಿಂಗ್ ಸ್ಕೂಲ್ ಅನ್ನೂ ಆರಂಭಿಸಲಾಯಿತು. ತಜ್ಞರು ಈಗಾಗಲೇ ತರಬೇತಿ ಪಡೆದಿರುವುದರಿಂದ, ಎರಡು ಮಿಲಿಟರಿ ಘಟಕಗಳನ್ನು ಆರಂಭಿಸಲಾಯಿತು. ಅವುಗಳಲ್ಲಿ ಒಂದು ಘಟಕ ಪಶ್ಚಿಮ ನೌಕಾಪಡೆಯ ಜತೆ ಕಾರ್ಯ ನಿರ್ವಹಿಸಲು ಮುಂಬೈ ಯನ್ನು ಪ್ರಧಾನವಾಗಿಟ್ಟುಕೊಂಡಿತು.
ಇನ್ನೊಂದು ಘಟಕ ಪೂರ್ವದ ಪಡೆಗಳೊಂದಿಗೆ ಕಾರ್ಯ ನಿರ್ವಹಿಸಲು ವಿಶಾಖಪಟ್ಟಣಂ ಅನ್ನು ಕೇಂದ್ರವಾಗಿರಿಸಿಕೊಂಡಿತು. ಈ
ಎರಡೂ ಘಟಕಗಳೂ ಯಾವುದೇ ರೀತಿಯ ವಿಧ್ವಂಸಕ ದಾಳಿಯ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಈ ಘಟಕಗಳ ಮೂಲ ಉದ್ದೇಶಗಳು ಕರಾವಳಿಯ ಅಡೆತಡೆಗಳನ್ನು ನಿವಾರಿಸುವುದು, ಸಾಗರದಾಳದಲ್ಲಿನ ಕೆಡವುವ ಕಾರ್ಯಾಚರಣೆಗಳು, ಸಮುದ್ರದಲ್ಲಿ ರಕ್ಷಣೆ ಒದಗಿಸುವುದು, ಹಾಗೂ ಮುಳುಗಿದ ಹಡಗುಗಳ ಮರುಪಡೆಯುವ ಕಾರ್ಯಗಳಾಗಿದ್ದವು. ಆದರೂ ಈ ತಂಡದ ಹಲವು ಕಾಂಬ್ಯಾಟ್ ಸ್ವಿಮ್ಮರ್ಗಳು ಪೂರ್ವ ಪಾಕಿಸ್ತಾನದಲ್ಲಿ ವಿವಿಧ ವಿಧ್ವಂಸಕ ದಾಳಿಗಳಲ್ಲಿ ಭಾಗವಹಿಸಿದ್ದರು.
1986ರಲ್ಲಿ ಭಾರತೀಯ ನೌಕಾಪಡೆ ಒಂದು ಹೊಸ ಘಟಕವನ್ನು ಸ್ಥಾಪಿಸಲು ಕಾರ್ಯಾಚರಿಸತೊಡಗಿತು. ಈ ತಂಡವು ಸಾಗರದಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳುವ, ಕರಾವಳಿ ಪ್ರದೇಶದಲ್ಲಿ ಗಸ್ತು ನಡೆಸುವ ಹಾಗೂ ಭಯೋತ್ಪಾದನಾ ವಿರೋಽ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿತ್ತು. ಮುಳುಗು ಪಡೆಗಳಿಂದ ಕೆಲವು ಸ್ವಯಂಪ್ರೇರಿತ ಯುವಕರು ಮತ್ತು ಸಾಗರದಾಳದಲ್ಲಿ ಕಾರ್ಯಾಚರಣೆ ನಡೆಸುವ ವಿಶೇಷ ತಂಡದ ಸದಸ್ಯರುಗಳನ್ನು ಈ ಹೊಸ ತಂಡಕ್ಕೆ ಸೇರ್ಪಡೆಗೊಳಿಸಲಾಯಿತು.
ಅಮೆರಿಕನ್ ನೌಕಾಪಡೆಯ ಸೀಲ್ ತಂಡವನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ರಚಿಸಲಾಯಿತು. ಈ ತಂಡದ ಹಲವು ಸದಸ್ಯರನ್ನು ಹೆಚ್ಚಿನ ತರಬೇತಿಗಾಗಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಕೊರೊನಾಡೋ ಸೀಲ್ ತರಬೇತಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. 1987ರ ಫೆಬ್ರವರಿ ತಿಂಗಳಲ್ಲಿ ಭಾರತೀಯ ನೌಕಾಪಡೆ ತನ್ನ ಇಂಡಿಯನ್ ಮರೀನ್ ಸ್ಪೆಷಲ್ ಫೋರ್ಸಸ್ (ಐಎಂಎಸ್ಎಫ್) ಸ್ಥಾಪನೆಯನ್ನು ಅಧಿಕೃತವಾಗಿ ಘೋಷಿಸಿತು.
1991ರಲ್ಲಿ ಈ ಹೆಸರನ್ನು ಬದಲಾಯಿಸಿ, ತಂಡವನ್ನು ಸಬೊಟಾಜ್ ಫೋರ್ಸಸ್ ಆಫ್ ದ ಮರೀನ್ – ಮರೀನ್ ಕಮಾಂಡೋ ಫೋರ್ಸ್ (ಎಂಸಿಎಫ್) ಅಥವಾ ಮಾರ್ಕೋಸ್ ಎಂದು ಕರೆಯಲಾಯಿತು. ಸ್ವಯಂ ಪ್ರೇರಿತ ಅಭ್ಯರ್ಥಿಗಳು ತಂಡಕ್ಕೆ ಸೇರ್ಪಡೆ ಗೊಳ್ಳಲು 11 ತಿಂಗಳ ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆ ಯಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಮೊದಲ ತಿಂಗಳು ತರಬೇತಿ ನಡೆಯುತ್ತದೆ. ಈ ತರಬೇತಿಯಲ್ಲಿ ಅತ್ಯಂತ ಕಠಿಣವಾದ ಪರೀಕ್ಷೆ ಎಂದರೆ ಒಂದು ವಾರ ಕಾಲ ಕಾಡಿನಲ್ಲಿ ನಡೆಯುವ ಪರೀಕ್ಷೆ. ಕ್ರೂರ ಕಾಡು ಪ್ರಾಣಿಗಳು, ವಿಷಪೂರಿತ ಹಾವುಗಳು, ಕೀಟಗಳು, ಹಾಗೂ ಮನುಷ್ಯರಿಗೆ ಸಹಿಸಲಸಾಧ್ಯ ಎನಿಸುವ ಸುಸ್ತು ಈ ತರಬೇತಿಯಲ್ಲಿ ಅಭ್ಯರ್ಥಿಗಳು ಅನುಭವಿಸಬೇಕಾದ ಪಟ್ಟಿಯಲ್ಲಿರುವ ಕೆಲವು ಅಂಶಗಳಷ್ಟೇ.
ಇದರ ಕಠಿಣತೆಯ ಆಧಾರದಲ್ಲಿ, ಹೆಚ್ಚೇನೂ ಆಶ್ಚರ್ಯಕ್ಕೆ ಎಡೆಯಿಲ್ಲದಂತೆ ಶೇ.85 ಅಭ್ಯರ್ಥಿಗಳು ಈ ಹಂತದ ತರಬೇತಿಯಿಂದ
ಹೊರ ನಡೆಯುತ್ತಾರೆ. ಈ ಹಂತದ ಬಳಿಕ ಸ್ಕೂಲ್ ಆಫ್ ಕಾಂಬ್ಯಾಟ್ ಸ್ವಿಮರ್ಸ್ ನಲ್ಲಿ ಒಂಬತ್ತು ತಿಂಗಳ ತರಬೇತಿ ಆರಂಭ ವಾಗುತ್ತದೆ. ತರಬೇತಿಯಲ್ಲಿ ಅಭ್ಯರ್ಥಿಗಳು ನಾನಾ ಆಯುಧಗಳನ್ನು ಬಳಸುವ ವಿಧಾನಗಳು, ಕಣ್ಗಾವಲು ವಿಧಾನಗಳು ಮತ್ತು ಶತ್ರುಗಳ ಕಣ್ಗಾವಲಿನ ವಿಧ್ವಂಸಕಗಳನ್ನು ತಲುಪಿಸುವ ಹಾದಿಗಳನ್ನು ಕುರಿತು ಕಲಿಯುತ್ತಾರೆ. ಭೂಸೇನಾ ವಿಶೇಷ ಪಡೆಗಳ ಜತೆ ನೌಕಾಪಡೆಯ ತಂಡಕ್ಕೂ ಹಲವು ಕಾರ್ಯತಂತ್ರಗಳ ತರಬೇತಿ ನೀಡಲಾಗುತ್ತದೆ. ಸಂವಹನ ವಿಚಾರದ ಕುರಿತು ತರಬೇತಿಯಲ್ಲಿ ಹೆಚ್ಚಿನ ಗಮನ ನೀಡಲಾಗುತ್ತದೆ.
ತರಬೇತಿಯ ಕೊನೆಯಲ್ಲಿ ನೌಕಾಪಡೆ ಮತ್ತು ಭೂಸೇನಾ ಪಡೆಯ ವಿಶೇಷ ತಂಡಗಳ ಜಂಟಿ ಅಭ್ಯಾಸಗಳನ್ನೂ ಆಯೋಜಿಸ ಲಾಗುತ್ತದೆ. ಈ ಹಂತದಲ್ಲಿಯೂ, ವಿಶೇಷವಾಗಿ ಲೈಟ್ ಡೈವಿಂಗ್ ತರಬೇತಿಯ ವೇಳೆ ಶೇ.10 ಮೀರದಂತೆ ಸ್ಕ್ರೀನಿಂಗ್ ಪ್ರಕ್ರಿಯೆ ಮುಂದುವರಿಯುತ್ತದೆ. ತರಬೇತಿ ಪಡೆದ ಪದವೀಧರರನ್ನು ಯಾವುದಾದರೂ ಒಂದು ತಂಡಕ್ಕೆ ನಿಯೋಜಿಸಲಾಗುತ್ತದೆ. ಅವರಿಗೆ ಚೆವ್ರಾನ್ ಹಾಗೂ ಚಿನ್ನದ ಬಣ್ಣದ ಬಿ ಅಥವಾ ಪದಕ ಒದಗಿಸಲಾಗುತ್ತದೆ. ಇದು ಅವರು ಎಂಸಿಎಫ್ ಗೆ ಸೇರಿದವರು ಎಂಬುದನ್ನು ಸೂಚಿಸುತ್ತದೆ.
ಅವರು ಈ ಸಮರ ತಂಡಗಳನ್ನು ಸೇರಿದ ಮಾತ್ರಕ್ಕೆ ಅವರ ತರಬೇತಿ ಕೊನೆಯಾಗುವುದಿಲ್ಲ. ಮುಂದಿನ ಹನ್ನೆರಡು ತಿಂಗಳ ಕಾಲ ಅವರಿಗೆ ವಿಶೇಷ ಬುದ್ಧಿಮತ್ತೆ, ವಿಧ್ವಂಸಕ ಕಾರ್ಯತಂತ್ರ, ಹಾಗೂ ಕೌಂಟರ್ ಟೆರರಿಸಂ ಕಾರ್ಯಾಚರಣೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಕೆಲವರಿಗೆ ಎತ್ತರದ ಪರ್ವತ ಪ್ರದೇಶಗಳು ಮತ್ತು ಮರುಭೂಮಿ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವ ತರಬೇತಿ ನೀಡಲಾಗುತ್ತದೆ.
ಕ್ಷಿಪ್ರ ಪ್ರತಿಕ್ರಿಯೆ ವಿಭಾಗಕ್ಕೆ ಸೇರ್ಪಡೆಯಾದವರಿಗೆ ಇನ್ನೂ ಹೆಚ್ಚಿನ ಭಯೋತ್ಪಾದನಾ ವಿರುದ್ಧ ಕಾರ್ಯಾಚರಣೆಯ ತರಬೇತಿ ನೀಡಲಾಗುತ್ತದೆ. ವಿಶೇಷ ಕಾರ್ಯಾಚರಣೆಯ ತಂಡಗಳಿಗೆ ಒತ್ತೆಯಾಳುಗಳನ್ನು ಬಿಡಿಸುವುದು ಮಾತ್ರವಲ್ಲದೆ, ಹಡಗು ಮತ್ತು ಭೂ ನೆಲೆಗಳನ್ನು ವಶಪಡಿಸಿಕೊಳ್ಳಲೂ ತರಬೇತಿ ನೀಡಲಾಗುತ್ತದೆ. ಬಳಿಕ ಅತ್ಯಂತ ಸಂಕೀರ್ಣವಾದ ವಾಯು ತರಬೇತಿಗಳೂ ಮುಂದುವರಿಯುತ್ತವೆ. ಇದರಲ್ಲಿ ಕಮಾಂಡೋಗಳು ಅತ್ಯಂತ ಕಡಿಮೆ ಎತ್ತರದಿಂದ ವಿಮಾನಗಳಿಂದ ಧುಮುಕಿ, ಪ್ಯಾರಾಶೂಟ್
ಗಳನ್ನು ಸ್ವತಃ ತೆರೆದು, ನೆಲದಲ್ಲಿ ಸುರಕ್ಷಿತವಾಗಿ ಇಳಿಯುವ ಕಾರ್ಯಾಚರಣೆಗಳೂ ಸೇರಿವೆ.
ಸೈನಿಕರು ಡೈವಿಂಗ್ ಉಪಕರಣಗಳೊಡನೆ ಭೂಸ್ಪರ್ಶ ಮಾಡುವುದು ಹಾಗೂ ನೀರಿನಾಳದಲ್ಲಿ ಓಡಾಡುವುದನ್ನೂ ಕಲಿಯುತ್ತಾರೆ.
ಯಾವುದೇ ಕಾಂಬ್ಯಾಟ್ ತಂಡದಲ್ಲಿ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗೆ ಯಾವುದಾದರೂ ಒಂದು ವಿಶೇಷತೆಯಲ್ಲಿ
ಅರ್ಹತೆ ಲಭಿಸುತ್ತದೆ. ಅವರನ್ನು ಅವರ ವಿಶೇಷತೆಯ ಮೇಲೆ ಸ್ಕೌಟ್, ಡೆಮಾಲಿಷನ್ ಆಫೀಸರ್, ಮೆಡಿಕ್ ಹೀಗೆ ಬೇರೆ ಬೇರೆ ರೀತಿ
ಗುರುತಿಸಲಾಗುತ್ತದೆ.
ಮಾರ್ಕೋಸ್ ಸಂಸ್ಥೆಯನ್ನು ಮೂರು ಕಾರ್ಯಾಚರಣಾ ತಂಡಗಳನ್ನಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ತಂಡವೂ ಅದು
ಕಾರ್ಯ ನಿರ್ವಹಿಸುವ ಪಡೆಯ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಗುಂಪುಗಳಲ್ಲಿ 2000 ಸದಸ್ಯರಿದ್ದು, ಅವರನ್ನು ತಲಾ 200 ಜನರ ಹತ್ತು ಕಂಪನಿಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಕಂಪನಿಯಲ್ಲೂ ಕೇವಲ 120 ಜನರಷ್ಟೇ ವಿಶೇಷ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಾರೆ. ಇನ್ನುಳಿದವರು ಸಹಕಾರ ನೀಡಲು ಮತ್ತು ಸಹಕಾರ ತಂಡಗಳಲ್ಲಿ ಭಾಗಿಯಾಗುತ್ತಾರೆ.
ಪ್ರತಿಯೊಂದು ಕಾರ್ಯಾಚರಣೆಯ ತಂಡದಲ್ಲೂ ಒಂದು ಆಂಟಿ-ಟೆರರಿಸ್ಟ್ ಘಟಕ ಇರುತ್ತದೆ. ಇದು ಒಂದು ಪ್ಲಟೂನಿನ ರೀತಿ ರಚಿಸಲ್ಪಟ್ಟಿರುತ್ತದೆ. ಈ ಘಟಕವನ್ನು ರಾಪಿಡ್ ರೆಸ್ಪಾನ್ಸ್ ಸೆಕ್ಷನ್ ಎಂದು ಕರೆಯಲಾಗುತ್ತದೆ. ಪ್ರಮುಖ ಕಾರ್ಯಗಳನ್ನು ಕೈಗೊಳ್ಳುವುದರ ಜತೆಗೆ, ಈ ಘಟಕವು ಸಮುದ್ರದಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲೂ ಭಾಗವಹಿಸುತ್ತದೆ. ಅದರೊಡನೆ ಈ ಘಟಕವು ಗುಪ್ತಚರ ಸೇವೆಯ ಭಾಗವಾಗಿ ವಿಚಕ್ಷಣಾ ಕಾರ್ಯಗಳನ್ನೂ ಕೈಗೊಳ್ಳುತ್ತದೆ.
ನೀರಿನಾಳದ ಡೈವಿಂಗ್ ಉಪಕರಣಗಳಲ್ಲಿ ಉಸಿರಾಟದ ಉಪಕರಣಗಳು, ವೆಟ್ಸೂಟ್ಗಳು, ಈಜುರೆಕ್ಕೆ ಹಾಗೂ ದಿಕ್ಸೂಚಿ ಗಳಿರುತ್ತವೆ. ನೀರಿನಾಳದ ವಾಹನಗಳು ಎರಡು ಅಥವಾ ನಾಲ್ಕು ಆಸನಗಳನ್ನು ಹೊಂದಿರುತ್ತವೆ. ಅವುಗಳು ನೀರಿನಾಳದ ಸಮರ ಈಜುಗಾರರಿಗೆ 25 ನಾಟಿಕಲ್ ಮೈಲು ದೂರದ ತನಕ ಆಯುಧಗಳು ಮತ್ತು ಇತರ ವಸ್ತುಗಳನ್ನು ಒದಗಿಸಬಲ್ಲವು. ಇದರಲ್ಲಿ ಒಂದು ಕಂಟೇರ್ನ ವ್ಯವಸ್ಥೆಯೂ ಇದ್ದು, ಅದು ಸಣ್ಣ ಆಯುಧಗಳು, ಇಂಜಿನಿಯರಿಂಗ್ ಆಯುಧಗಳು, ಹಾಗೂ ಸಂವಹನ ಉಪಕರಣಗಳು ಮತ್ತು ನ್ಯಾವಿಗೇಷನ್ ಉಪಕರಣಗಳನ್ನು ಒಯ್ಯುತ್ತದೆ.
ನೀರಿನ ಮೇಲ್ಮೈಯಲ್ಲಿ ಚಲಿಸುವ ವಾಟರ್ ಕ್ರಾಫ್ಟ್ ನಲ್ಲಿ ಹಗುರವಾದ, ಗಾಳಿ ತುಂಬಬಹುದಾದ ಬೋಟುಗಳು, ಕಯಾಕ್
ಗಳು ಹಾಗೂ ಮೋಟಾರ್ ಬೋಟುಗಳು ಲಭ್ಯವಿರುತ್ತವೆ. ಶತ್ರು ಜಲ ಪ್ರದೇಶದಲ್ಲಿರುವ ಸೇನಾ ಪಡೆಯ ಹಿಂತೆಗೆತ ಸೇರಿದಂತೆ ಇತರ ದೊಡ್ಡ ಪ್ರಮಾಣದ ಕಾರ್ಯಾಚರಣೆಗಳನ್ನು ನಡೆಸಲು ಭಾರತೀಯ ನೌಕಾಪಡೆಯ ಬಳಿ ಪ್ರತ್ಯೇಕ ಸಣ್ಣ ನೌಕೆಗಳ ವಿಭಾಗವಿದ್ದು, ಇದರಲ್ಲಿ ಗಸ್ತು ಹಾಗೂ ಲ್ಯಾಂಡಿಂಗ್ ಬೋಟುಗಳೂ ಸೇರಿವೆ.
ಭಾರತೀಯ ನೌಕಾಪಡೆಯ ಕಮಾಂಡೋಗಳ ಬಳಿ ಹಲವು ರೀತಿಯ ಸಣ್ಣ ಆಯುಧಗಳಿವೆ. ಇವುಗಳಲ್ಲಿ ಭಾರತೀಯ ನಿರ್ಮಾಣದ ಎ-ಎನ್ಎ-ಎಎಲ್ ಆಟೋಮ್ಯಾಟಿಕ್ ರೈ-ಲ, ಅಮೆರಿಕ ನಿರ್ಮಿತ ಎಂ16 ರೈಫಲ್, ಹಾಗೂ ಸೋವಿಯತ್ ನಿರ್ಮಾಣದ ಕಲಾಶ್ನಿಕೋವ್ ಎಕೆ-47 ಅಸಾಲ್ಟ್ ರೈಫಲ್ಗಳು ಸೇರಿವೆ. ಸ್ನೈಪರ್ ಗಳು ಎಂಎಸ್ಜಿ ಹಾಗೂ ಪಿಎಸ್ಜಿ-ಎಲ್ ರೈಫಲ್ಗಳನ್ನು ಬಳಸುತ್ತಾರೆ.
ಸಬ್ ಮೆಷಿನ್ ಗನ್ನುಗಳಲ್ಲಿ ಭಾರತೀಯ ನಿರ್ಮಾಣದ 9 ಎಂಎಂ ಸ್ಟರ್ಲಿಂಗ್, ಇಸ್ರೇಲ್ ನಿರ್ಮಿತ ಮೈಕ್ರೋ ಉಜಿ, ಹಾಗೂ ಜರ್ಮನ್ ಎನ್ಕೆ ಎಂಪಿ-5ರ ವಿವಿಧ ಆವೃತ್ತಿಗಳೂ ಸೇರಿವೆ. ಪಿಸ್ಟಲ್ಗಳಲ್ಲಿ ಪ್ರಮುಖವಾಗಿ ಗ್ಲಾಕ್ ನಿರ್ಮಾಣದ ಪಿಸ್ಟಲ್ಗಳಿವೆ. ಇವುಗಳೊಡನೆ, ಆರ್ಪಿಜಿ-7 ಗ್ರೆನೇಡ್ ಲಾಂಚರ್ಗಳು ಹಾಗೂ ಸೋವಿಯತ್ ನಿರ್ಮಾಣದ ಪಿಆರ್ಕೆ ಮೆಷಿನ್ ಗನ್ನುಗಳೂ
ಬಳಕೆಯಾಗುತ್ತವೆ. ನಿಶ್ಯಬ್ದ ಆಯುಧವಾಗಿ ಕ್ರಾಸ್ ಬೋ ಸಹ ಬಳಕೆಯಾಗುತ್ತದೆ. ಶ್ರೀಲಂಕಾದಲ್ಲಿ ಎಲ್ಟಿಟಿಇ ವಿರುದ್ಧ ನಡೆದ ‘ಆಪರೇಷನ್ ಪವನ್’ನಲ್ಲಿ ಮಾರ್ಕೋಸ್ ಪಡೆ ಭಾಗವಹಿಸಿತ್ತು.
ಮಾರ್ಕೋಸ್ ಕಮಾಂಡೋಗಳ ಇರುವಿಕೆ ಎಲ್ಟಿಟಿಇ ಗಮನಕ್ಕೆ ಬಂದು, ಅವರ ಮೇಲೆ ಗುಂಡಿನ ದಾಳಿ ನಡೆದ ಬಳಿಕವೂ, ಮಾರ್ಕೋಸ್ ಕಮಾಂಡೋಗಳು ಜಾ- ಜೆಟ್ಟಿ ಯಲ್ಲಿ ಹಲವು ಎಲ್ಟಿಟಿಇ ಬೋಟುಗಳನ್ನು ಧ್ವಂಸಗೊಳಿಸಿದ್ದರು. ಮಾರ್ಕೋಸ್ ಕಾಶ್ಮೀರದಲ್ಲಿ ದಂಗೆಕೋರರ ವಿರುದ್ಧದ ಕಾರ್ಯಾಚರಣೆಯಲ್ಲೂ ಭಾಗವಹಿಸುತ್ತಿದ್ದಾರೆ. ಅವರನ್ನು ವಿದೇಶಗಳಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಹಾಗೂ ಚೀನಾ ವಿರುದ್ಧದ ಕಾರ್ಯಾಚರಣೆಯಲ್ಲೂ ಬಳಸಲಾಗಿದೆ.
ಶ್ರೀಲಂಕಾ ಮಾತ್ರವಲ್ಲದೆ ಮಾರ್ಕೋಸ್ ಮೊಗದಿಶುವಿನಲ್ಲೂ ಕಾರ್ಯಾಚರಿಸಿದ್ದು, ಆಪರೇಷನ್ ಕ್ಯಾಕ್ಟಸ್ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರ ರಕ್ಷಣಾ ಕಾರ್ಯಾ ಚರಣೆಯಲ್ಲೂ ಮಾರ್ಕೋಸ್ ಭಾಗವಹಿಸಿತ್ತು. ಮುಂಬೈ ತಾಜ್ ಹೊಟೆಲ್ ಮೇಲೆ ಪಾಕಿಸ್ತಾನಿ ಭಯೋತ್ಪಾದಕರ ದಾಳಿ ನಡೆದಾಗ ಎನ್ ಎಸ್ಜಿ ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋಗಳು ಬರುವ ತನಕ ಮಾರ್ಕೋಸ್ ಕಾರ್ಯಾ ಚರಣೆ ನಡೆಸಿತ್ತು.
ಮಾರ್ಕೋಸ್ ಪಡೆಗಳು ಭಾರತೀಯ ಸಮುದ್ರದ ಹೆಸರು ಅಪೇಕ್ಷಿಸದ ಹೀರೋಗಳಾಗಿzರೆ. ಅವರು ಯಾರ ಗಮನಕ್ಕೂ ಬರದಂತೆ ಒಳ ನುಗ್ಗಿ, ಸರ್ಜಿಕಲ್ ದಾಳಿ ನಡೆಸಬಲ್ಲ ಸಮರ್ಥರಾಗಿದ್ದಾರೆ. ಜನಪ್ರಿಯ ಕತೆ, ಕಾದಂಬರಿ, ಸಿನೆಮಾಗಳು ಅಮೆರಿಕಾದ ಮರೀನ್ ಗಳನ್ನು ವೈಭವೀಕರಿಸಿ, ದೈಹಿಕವಾಗಿ, ಸೈನಿಕ ಕಾರ್ಯಾಚರಣೆಗಳಲ್ಲಿ ಮಾನವಾತೀತ ಸಾಮರ್ಥ್ಯ ಉಳ್ಳವರೆಂದು ಬಿಂಬಿಸಿವೆ. ಆದರೆ ಮಾರ್ಕೋಸ್ ಈ ವೈಭವೀಕರಣವನ್ನು ಭಾರತದಲ್ಲಿ ನೈಜವಾಗಿಸಿದ ಪಡೆಗಳಾಗಿವೆ.