Wednesday, 11th December 2024

ಮೂರು ಹೊತ್ತೂ ಮಿಂಚುವ ಮಿನ್.. ಚು..ಕಾ..

ಅಲೆಮಾರಿಯ ಡೈರಿ

ಸಂತೋಷ ಕುಮಾರ ಮೆಹೆಂದಳೆ

mehendale100@gmail.com

ಅದು ಬರೀ ಸರಹದ್ದಿನಲ್ಲಿದೆ ಎನ್ನುವ ಕಾರಣಕ್ಕೆ ಸುದ್ದಿ ಮಾಡುತ್ತದೆ ಅಥವಾ ಭಾರತ ಮತ್ತು ಚೀನಾದ ಮ್ಯಾಲ್ಡಮಹೋನ್ ರೇಖೆಯ ಎದೆಯ ಮೇಲೆ ಕೂತು ಎರಡೂ ಕಡೆಗೆ ಕಣ್ಣು ಹಾಯಿಸುವಷ್ಟು ಸರಾಗವಾಗಿ ದಡ ಹಂಚಿಕೊಂಡಿದೆ ಎಂದ ಮಾತ್ರ ಹಳ್ಳಿಯೊಂದು ಪ್ರಸಿದ್ಧಿಯಾಗಬೇಕೆ..? ಖಂಡಿತಾ ಅಲ್ಲ.

ಆದರೆ ಪ್ರವಾಸಿಗರ ಮತ್ತು ಪರಿಸರ ಪ್ರಿಯರ ಅಪರೂಪದ ಹಳ್ಳಿ ಜತೆಗೆ ನಮ್ಮ ಪ್ರಧಾನಿ ಅರುಣಾಚಲದ ಗಡಿಯೊಂದಕ್ಕೆ ಭೇಟಿ ಕೊಟ್ಟು ಚೀನಿಯರ  ನಿದ್ದೆ ಗೆಡಿಸಿದ್ದ ರಲ್ಲ ಅದೂ ಒಂದು ಕಾರಣವಾದರೆ, ಜನ ಮತ್ತು ಸ್ಥಳ ಎರಡೂ ಅಪ್ಯಾಯಮಾನವಾಗುವ ಇದು ಭಾರತದ ಯಾವ ಕೋನದಲ್ಲೂ ಕೊಟ್ಟ ಕೊನೆಯ ದೂರದ ಸರಹದ್ದೇ ಎನ್ನುವ ಕಾರಣಕ್ಕೂ ಆಕರ್ಷಿಸುತ್ತಿದೆ. ಅದು ಮಿಂಚುವ ಮಿನ್ ಚುಕಾ.

ಸುತ್ತಮುತ್ತ ಬಂದು ತಲುಪುವವರೆಗೂ ಎಲ್ಲಿ ಬೇಕಿದ್ದರೂ ನಿಂತು ಕ್ಲಿಕ್ಕಿಸುತ್ತಲೇ ಬರಬಹುದಾದ ಅದ್ಭುತ ರಮ್ಯ ಪರಿಸರ ದಾರಿಯನ್ನು ಹೊಂದಿರುವ ಗಡಿ ತೀರದ ಹೆಸರು ಮಿನ್ ಚುಕಾ. ಅರುಣಾಚಲದ ಹೆಗಲು ಸವರಿ ಒಂಚೂರು ಆಚೆಗಿಳಿದರೆ ಆ ಇಳಿಜಾರಿನಲ್ಲಿ ಸೀದಾ ಚೀನಿಯರ ದೇಶಕ್ಕೆ ಬಿದ್ದು ಹೋಗಬಹುದಾದಷ್ಟು ತುದಿಯಲ್ಲಿ ಉದುರಿ ಬೀಳುವಂತಹ ಕೊಟ್ಟ ಕೊನೆಯ ನೆತ್ತಿಯ ಮೇಲೆ ಇರುವ ಸರ್ವಸಜ್ಜಿತ ಹಳ್ಳಿ ಇದು. ಮಿಲಿಟರಿಯವರು, ಪ್ರವಾಸಿ ಗರು, ಚಾರಣಿಗರು, ನದಿಯ ತೆಕ್ಕೆಗೆ ಆತುಕೊಂಡು ನೀರಿನ ಮೋಜಿಗಿಳಿಯುವವರು, ಇವರೆಲ್ಲರಿಗೆ ಸರ್ವೀಸು ಕೊಡುವವರು, ಗೊಣ್ಣೆ ಮೂಗಿನ ದಪ್ಪ ಸ್ವೇಟರ್ ಧರಿಸಿದ ಕೆಂಪು ಕೆಂಪು ಟೊಮ್ಯಾಟೊ ಮಕ್ಕಳು, ಅದಕ್ಕಿಂತ ಕೆಂಪಗಿನ ಚೆಂಚೆಂದ ಹುಡುಗಿಯರು, ಸೆಟೆದು ಸಾಮಾನು ಹೊರುವ ಪೋರ್ಟರುಗಳು ಹೀಗೆ ಸಾರಾಸಗಟಾಗಿ ಎಲ್ಲ ರೀತಿಯ ಜನರಿಂದ ಒಂಥರಾ ಮಿಶ್ರ ಭಾರತದ ಭಾವನೆಗೀಡು ಮಾಡುತ್ತಲೇ ನಮ್ಮನ್ನು ಮುಗುಮ್ಮಾಗಿ ಒಳ ಗೆಳೆದುಕೊಳ್ಳುವ ಹಳ್ಳಿಗೆ ತಲುಪುವುದೇ ದೊಡ್ಡ ಪ್ರಯಾಸದ ಪ್ರವಾಸ ಎನ್ನಿಸುವಂತೆ ಮಾಡುತ್ತದೆ.

ತಲುಪಿದ ಮೇಲೆ ಬಿಟ್ಟು ಬಾರದೆ ಅಲ್ಲೆ ಉಳಿದು ಬಿಡೋಣ ಎನ್ನುವ ಆತ್ಮೀಯತೆಯಿಂದ ಬಿಡಿಸಿಕೊಳ್ಳುವುದು ಇನ್ನೂ ದುಸ್ತರ. ಕಾರಣ ಮೇಲೆ ಎಲ್ಲಾ ಬಂಗಾರ ಮಯ. ವರ್ಣಗಳ ಕಾಮನ ಬಿಲ್ಲು ಹಲವು ಸ್ತರದಲ್ಲಿ ಎರಚಿದಂತೆ ಊರ ತುಂಬ, ನದಿ, ನೀರು, ಹಿಮದ ಪರ್ವತಗಳು, ಜಲಪಾತಗಳು, ಅದರ ಪಾದಕ್ಕಿರುವ ಹಸಿರು ಗುಡ್ಡಗಳು ಹೀಗೆ ಪ್ರತಿ ಯೊಂದೂ ಅದ್ಭುತ ವರ್ಣಮಯ ರಂಗೋಲಿ. ಕುಲುಷಿತ ಎನ್ನುವ ಪದವೇ ಇಲ್ಲಿ ಅರ್ಥಹೀನ. ಅಷ್ಟು ಅದ್ಭುತ ಶುಭ್ರತೆಯೇ ಇದರ ಕಲರ್ ರಿಪ್ಲೆಕ್ಸಿಗೆ ಕಾರಣ. ಹಾಗೆ ಭೂಮಿಯ ಮೇಲ್ಭಾಗಕ್ಕೆ ಹೋದಂತೆ ವಾತಾವರಣದ ಶುಭ್ರತೆ ಇದಕ್ಕೆ ಇನ್ನಿಷ್ಟು ಕಾಣಿಕೆ ಕೊಡುತ್ತದೆ.

ಈ ಊರಿನ ಹೆಸರಲ್ಲೇ ಒಂದು ಕತೆ ಇದ್ದು ಅದಕ್ಕೆ ಸಾಕ್ಷಿಯಾಗಿ ಹಳ್ಳಿಯನ್ನು ಬಳಸಿ ಹರಿಯುವ ನದಿ ಸಿಯೋಮ್ (ಸ್ಥಳೀಯವಾಗಿ ಯಾರ- ಎಂದು ಕರೆಸಿಕೊಳ್ಳುವ) ಸದ್ದಿಲ್ಲದೆ ಇವರ ಜೀವನೋಪಾಯಕ್ಕೆ ದಾರಿಯಾಗಿದೆ. ಇದೂ ಪ್ರವಾಸಿಗರ ದೊಡ್ಡ ಆಕರ್ಷಣೆ. ಕಾರಣ ರಭಸದಿಂದ ಹರಿಯುತ್ತಿರುತ್ತದೆ. ಆದರೆ ನಿರಪಾಯಕಾರಿ. ದಂಡೆಯಲ್ಲಿ ಸ್ವಚ್ಛಾತಿಸ್ವಚ್ಛ ಗೋಲಿಕಲ್ಲುಗಳು. ಮಿನ್ ಎಂದರೆ ಔಷಧದ ಗುಣವುಳ್ಳ ‘ಚು’ ಎಂದರೆ ನೀರಿನಿಂದ ಕೂಡಿದ ‘ಕಾ’ ಎಂದರೆ ಹಿಮಭರಿತ. ಹೀಗೆ ಸಿಯೋಮ್‌ನ ಔಷಧಿಯ ಗುಣವುಳ್ಳ ನೀರಿನ ಕಾರಣ ಹೆಸರಾದ ಹಳ್ಳಿಯೀಗ ಹಲವು ರಂಗದಲ್ಲಿ ಹೆಸರುವಾಸಿ.

ಇತ್ತೀಚೆಗಷ್ಟೆ ರಸ್ತೆ ಸೌಲಭ್ಯವನ್ನು ಕಂಡ ಮಿನ್‌ಚುಕಾಗೆ ಮೊದಲೆಲ್ಲಾ ವಾಯು ಸೇನಾ ಸಿಬ್ಬಂದಿ ಅಗತ್ಯತೆಗಳನ್ನು ಏರ್‌ಡ್ರಾಪ್ ಮಾಡುತ್ತಿದ್ದುದೇ ಹೆಚ್ಚು. ಸರಿ ಸುಮಾರು 1962ರವರೆಗೆ ಭಾರತದ ಭೂಪಟದಲ್ಲಿ ಇದಕ್ಕೊಂದು ಮಾನ್ಯತೆ ಸಾಯಲಿ ಗುರುತೂ ಇರಲಿಲ್ಲ. ಅಲ್ಲೊಂದು ಊರಿದೆ ಎನ್ನುವ ಸುಳಿವೇ ಭಾರತ ಕ್ಕಿರಲಿಲ್ಲವೇನೋ..? ಆದರೆ ಯಾವಾಗ ಮ್ಯಾಕ್‌ಮೋಹನ ರೇಖೆಯನ್ನು (ಭಾರತ ಚೀನಾದ ಲೈನ್ ಆಫ್ ಕಂಟ್ರೋಲ್) ಏಳೆಯಲಾಯಿತೋ ಆಗ ಇದರ ಚಿತ್ರಣ ಬದಲಾಯಿತು. ಎರಡೂ ಕಡೆಯಲ್ಲಿ ಸೈನ್ಯದ ಜನರು ಕಾಲಿಡತೊಡಗುವ ಮೊದಲು ಸ್ಥಳೀಯರ ಸಹಾಯವಿಲ್ಲದೇ ಹುಲ್ಲು ಕಡ್ಡಿ ಕೂಡ ಜರಗುತ್ತಿರಲಿಲ್ಲ ಇಲ್ಲಿ.

ಬಂದು ತಲುಪುವುದೇ ಅಸಾಧ್ಯವಾಗಿದ್ದ ಕಾಲ ಅದು. ಸುತ್ತಮುತ್ತ ಅಪರೂಪದ ಬಂಗಾರ ವರ್ಣದ ನದಿ ಮತ್ತದರ ಹಿಮ ಪರ್ವತಗಳು, ಎಲ್ಲೆಲ್ಲೂ ಹಸಿರು ಅದೇ
ಉಸಿರು ಹೊರತಾಗಿ ಬೇರೆ ಮಾತೇ ಇಲ್ಲದ ಮಿನ್‌ಚುಕಾ ಸೈನ್ಯದ ಬಾಗಿಲು ತೆರೆಯುತ್ತಿದ್ದಂತೆ ಶುಕ್ರದೆಸೆಯೇನೂ ಕಾಣಲಿಲ್ಲ. ಆದರೆ ಸೈನ್ಯ ಬರುತ್ತಿದ್ದಂತೆ ಒಂದಷ್ಟು ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಆರಂಭವಾಯಿತು ನೋಡಿ. ಮಿನ್‌ಚುಕಾ ಕ್ರಮೇಣ ಚಾರಣ ಮತ್ತು ಪ್ರವಾಸಿ ಪ್ರಿಯ ಯುವಜನತೆಯ
ಮೂಲಕ ಒಂದೊಂದೇ ತನ್ನ ದೃಶ್ಯಕಾವ್ಯಗಳನ್ನು ಹೊರ ಹಾಕತೊಡಗಿತ್ತು.

ಏನು ಮಾಡಲಾಗದಿದ್ದರೂ ಇಂತಹದ್ದೊಂದು ಸ್ಥಳಕ್ಕೆ ನುಗ್ಗಿ ಕೂತೆದ್ದು ಬರುವ ‘ಅಲೆಮಾರಿ’ ತನದ ಕಾರಣ ಹೊರಜಗತ್ತಿಗೆ ತೆರೆದುಕೊಳ್ಳುತ್ತಿದ್ದರೆ, ಪ್ರತಿ ಚಿತ್ರವೂ ಫೇಸ್‌ಬುಕ್ಕು, ಇನ್ ಸ್ಟಾದಲ್ಲಿ ಮಿಂಚುತ್ತಿದ್ದರೆ, ಅಗತ್ಯಕ್ಕೆ ತಕ್ಕಂತೆ ನಿಲ್ಲಲೇಬೇಕಾದ, ಸೇವೆ ಸಲ್ಲಿಸಲು ಹೊರಟ ಸ್ಥಳೀಯರ ಬದುಕು ಹಸನಾಗತೊಡಗಿತ್ತು. ಇವತ್ತು ಪ್ರತಿ ಮನೆಯವರೂ ಕೈತುಂಬ ಕೆಲಸ ಕಾಣುತ್ತಿದ್ದಾರೆ. ಅರ್ಧಊರು ಸೈನ್ಯದ ಸಹಾಯಕ್ಕೆ ನಿಂತಿದ್ದರೆ, ಉಳಿದವರು ಮನೆಯಲ್ಲಿದ್ದವರು ಪ್ರವಾಸಿಗರ ಜತೆ ಕೈ ಜೋಡಿಸುತ್ತಾ ಮೂರು ಕಾಸು ಕಾಣುತ್ತಿದ್ದಾರೆ. ಪ್ರತಿ ಮನೆಯೂ ಇವತ್ತು ಅತಿಥಿ ಗೃಹವೇ.

ಅದ್ಭುತ ಆತಿಥ್ಯ ಇವರ ಪ್ಲಸ್ ಪಾಯಿಂಟು. ದಪ್ಪನೆಯ ದಾಲ್, ಅಕ್ಕಿ ರೊಟ್ಟಿ, ಖಡಕ್ ಚಹ ಮತ್ತು ಕೆಂಪು ಮೆಣಸಿನಕಾಯಿ ಟೊಮೆಟೊ ಚಟ್ನಿ ಎಷ್ಟೊತ್ತಿಗೂ ಬಿಸಿ
ಮಾಡುವ ಸಾಧನಗಳು. ‘ಲಿಲಾಬರಿ’ ಏರ್‌ಪೋರ್ಟ್‌ನಿಂದ ಅನಾಮತ್ತಾಗಿ ನೂರಿಪ್ಪತ್ತು ಕಿ.ಮೀ. ದೂರ ಇರುವ ಮಿನ್‌ಚುಕಾ ಚೀನಾದ ಸರಹದ್ದಿನಿಂದ ಕೇವಲ 22 ಕಿ.ಮೀ. ದೂರದಲ್ಲಿದೆ. ಆದರೆ ಅರುಣಾಚಲದ ಪಶ್ಚಿಮ ಸೀಯಾಂಗ್ ಜಿಲ್ಲೆಯ, ಸಬ್ ಡಿವಿಶನ್ ಮಣಿಗಾಂಗ್‌ನ ಟಾಟೊ ಮೂಲಕ 70 ಕಿ.ಮೀ. ದೂರದ ರಸ್ತೆ ಪಯಣಕ್ಕೆ ಅನಾಮತ್ತು ಏಳೆಂಟು ತಾಸು ಬೇಕು.

‘ಟಾಟೊ’ ಅಲೆಮಾರಿಗಳಿಗೆ, ಚಾರಣಕ್ಕೆ ಪ್ರಕೃತಿ ಬೆನ್ನಟ್ಟುವವರಿಗೆ ಬೇಸ್‌ಕ್ಯಾಂಪ್ ಇದ್ದಂತೆ. ಆಮೇಲೆ ಆರೇಳು ಕಿ.ಮೀ. ಚಾರಣ ಇದ್ದದ್ದೇ. ಈಗ ಈ ರಸ್ತೆಯನ್ನು
ವಾಹನ ಸ್ನೇಹಿಯಾಗಿ ಪರಿವರ್ತಿಸಲಾಗಿದ್ದು ಫೋರ್ ವ್ಹೀಲ್ ಡ್ರೈವ್‌ಗಳು ಮೇಲಕ್ಕೇರುತ್ತಿವೆ. ಆದರೆ ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಆ ದಾರಿಯನ್ನು ದಿನವೀಡಿ ಕ್ರಮಿಸಿ ನಡೆದೇ ಹೋಗಿ ಎನ್ನುವುದು ನನ್ನ ಸಲಹೆ. ಕಾರಣ ಮಿನ್‌ಚುಕಾ ತಲುಪುವ ಮೊದಲೇ ನಿಮ್ಮ ಅರ್ಧ ಕ್ಯಾಮರಾ ಭರ್ತಿಯಾಗುವಷ್ಟು ರಮ್ಯ ರೋಚಕ ಈ ದಾರಿ. ಇದಲ್ಲದೆ ದಿಬ್ರುಗಡ್‌ನಿಂದ ಖ್ಯಾತ ಪ್ರವಾಸಿ ಸ್ಥಳ ‘ಅಲಾಂಗ್’ ಮೂಲಕ ಕೂಡಾ ಟಾಟೋವರೆಗೆ ಬರಬಹುದಾಗಿದ್ದು, ಇಲ್ಲಿಂದ ಮುಂದಕ್ಕೆ ಮಾಮೂಲಿನ ದಾರಿಗೇ ಎಲ್ಲಾ ಸೇರುತ್ತಾರೆ.

ಸಮುದ್ರ ಮಟ್ಟದಿಂದ 6200 ಅಡಿ ಎತ್ತರ. ಹಾಗಾಗಿ ಎಂಥಾ ಬಿಸಿಲಲ್ಲೂ ಮೈ ಕೊರೆವ ಕುಳಿರ್‌ಗಾಳಿ ನಿಮ್ಮನ್ನು ಸ್ವಾಗತಿಸುತ್ತದೆ ಜೊತೆಗೆ ಜಲಪಾತಗಳ ನೀರು
ರಾಚುತ್ತಿರುತ್ತದೆ. ಕಿವಿಯ ಅಕ್ಕಪಕ್ಕ ತಣ್ಣಿರು ಸುರಿದ ಭಾವ ಹಗಲು ಹನ್ನೆರಡು ತಾಸೂ ನಿಶ್ಚಿತ. ಮೆಂಬಾ (ಮೂಲತ: ಶಾಂಗ್ಲಾ ಭಾಷೆ) ಮತ್ತು ಆದಿ ಎನ್ನುವ ಸ್ಥಳೀಯ ಭಾಷೆ ಕೇಳುತ್ತಿದ್ದರೆ ಅವರು ಮಾತಾಡುತ್ತಿದ್ದಾರೋ ಅಥವಾ ಕರಟದಲ್ಲಿ ಬೆಣಚುಕಲ್ಲು ಹಾಕಿ(ಹಂಡೆಹಳ್ಳದ ಆಟದ ನೆನಪು) ಅಲ್ಲಾಡಿಸುತ್ತಿದ್ದಾರೊ
ಗೊತ್ತಾಗುವುದಿಲ್ಲ. ಅದರೆ ಇಂಗ್ಲಿಷು ಪ್ರಬುದ್ಧ, ಹಿಂದಿಯೂ ಅಹಾ ಎನ್ನುವ ಹಾಗೆ ಇರುತ್ತದೆ.

ಹೊರಟಾಗ ರಸ್ತೆ ಮೇಲೆ ಅಲ್ಲಲ್ಲಿ ಸಿಕ್ಕುವ ಜಲಪಾತಗಳು ವಿಶೇಷ ಆಕರ್ಷಣೆ ಅದರಲ್ಲೂ ಸುಮಾರು ಇನ್ನೂರು ಅಡಿ ಎತ್ತರದಿಂದ ರಸ್ತೆಯ ಅಂಚಿಗೆ ಧುಮುಕುವ ಡಿಯೋ ಜಲಪಾತ ದೊಡ್ಡ ಆಕರ್ಷಣೆ. ಕೇವಲ ಮೂನ್ನೂರು ರುಪಾಯಿಗೆ ಲಭ್ಯವಿರುವ ಹೋಮ್‌ಸ್ಟೇಗಳು ಖರ್ಚಿನ ಬಾಬತ್ತನ್ನು ನಿಭಾಯಿಸಿದರೆ, ಸಹಾಯಕರ ದಿನದ ಕೂಲಿಯೂ ದಿನಕ್ಕೆ ಮೂನ್ನೂರು ದಾಟುವುದಿಲ್ಲ. ಮನೆ ಪೂರ್ತಿ ನಿಮ್ಮದೆ. ಹದಿನಾಲ್ಕನೆಯ ಶತಮಾನದ ಮಾನೆಸ್ಟ್ರಿ, ಪಕ್ಕದ ಕಟ್ಟಿಗೆ ಸೇತುವೆ ದಾಟಿದರೆ
ಮಾಂಬುಗಳು ಇರುವ ಹಳ್ಳಿ ಮಾಂಬನ್ ಮತ್ತು ಹೀಗೆ ಪ್ರತಿ ಗುಡ್ಡದಾಚೆಗೆ ಸಿಕ್ಕುವ ಗಾಪೋ, ಪಡುಸಾ, ಹಿರಿ, ಲಿಪುಸಾ, ಪುರಿಂಗ್, ರೆಗೋ, ಕಾಟಾರ್, ಬರಾಂಗಾಂಗ್, ಶರೋಂಗ್ ಹೀಗೆ ಸಾಲುಸಾಲು ಬುಡಕಟ್ಟುಗಳ ಹಳ್ಳಿಗಳು ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಾ ಸಿಗ್ನಲ್ ಇಲ್ಲದ ಊರಿನಲ್ಲಿ ನಮ್ಮನ್ನು ಕೂಡಿ ಹಾಕಿ ಮುದಗೊಳಿಸುತ್ತವೆ.

ಇಂಥಾ ಪ್ರತಿ ಊರುಗಳಿಗೆ ಮಿನ್‌ಚುಕಾ ಹೆಡ್‌ಕ್ವಾರ್ಟರ್ಸ್ ಇದ್ದಂತೆ. ಎಷ್ಟು ದಾರಿ ಮತ್ತು ಊರು ಸವೆಸುತ್ತೇನೆನ್ನುವುದು ನಿಮ್ಮ ನಿಮ್ಮ ಕೆಪಾಸಿಟಿ. ಹೊರಟು ಬಿಡಿ ಒಮ್ಮೆ ಎಲ್ಲಾ ಸಂಪರ್ಕ ಕಡಿದುಕೊಂಡು ಸ್ವರ್ಣವರ್ಣದ ಮಿನ್‌ಚುಕಾಗೆ. ಅಂದ ಹಾಗೆ ರಸ್ತೆ ಆರಂಭವಾಗಿದ್ದರೂ ಅದರ ಮೂಲಕ ನೇರವಾಗಿ ಮಿನ್‌ಚುಕಾ ತಲುಪಿ ಬಿಡುತ್ತೇನೆಂದರೆ ನೀವು ಪ್ರವಾಸಕ್ಕಿಳಿಯಬೇಡಿ. ಏನಿದ್ದರೂ ಆ ಮೊದಲ ಆರೇಳು ಕಿ.ಮೀ. ದೂರ ಚಾರಣ ಮಾಡುತ್ತ ಮೇಲೇರಿದರೆ, ಅದರಲ್ಲೇ ನಿಮ್ಮ ಅರ್ಧ ಕ್ಯಾಮರಾ ತುಂಬಿಸುತ್ತದೆ. ಈ ದೃಶ್ಯಾವಳಿ ಮತ್ತೆಲ್ಲೂ ಲಭ್ಯವಿಲ್ಲ. ಮಿನ್‌ಚುಕಾ ಎಲ್ಲ ಕಡೆಯಲ್ಲೂ ಮಿಂಚುತ್ತಲೇ ಇರುತ್ತದೆ ಎಂದಿದ್ದೇ ಅದಕ್ಕೆ. ಹೋಗಿ ಮಿಂಚಿಬಿಡಿ ಒಮ್ಮೆ.