Wednesday, 11th December 2024

ಸಾಮಾಜಿಕ ಮಾಧ್ಯಮಗಳ ಜತೆ ಪತ್ರಿಕೋದ್ಯಮ ಸಂಯೋಗ

ತನ್ನಿಮಿತ್ತ

ಡಾ.ಎ.ಎಸ್‌.ಬಾಲಸುಬ್ರಹ್ಮಣ್ಯ

ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.1843ರ ಈ ದಿನದಂದು ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಹೊರಬಂತು. ಸುಳ್ಳು ಸುದ್ದಿಗಳ ಹರಡುವಿಕೆಗೆ ತಡೆವೊಡ್ಡಿ ಓದುಗರಿಗೆ ನಿಜ ಸುದ್ದಿಯನ್ನು ಪರಿಚಯಿಸುವ ಕಿಟಕಿ ಇದ್ದಂತೆ ಎಂದು ಪತ್ರಿಕೆಯ ಸಂಪಾದಕ ಹರ್ಮನ್ ಮೊಗ್ಲಿಂಗ್ ಸಮರ್ಥಿಸಿಕೊಂಡ.

178 ವರ್ಷಗಳಲ್ಲಿ ಸಮಾಚಾರ ಪತ್ರಿಕೆಗಳು, ಕನ್ನಡವೂ ಸೇರಿ, ಹಲವು ಮಜಲುಗಳಿಗೆ ಸಾಕ್ಷಿಯಾಗಿವೆ. ಕಪ್ಪು ಬಿಳುಪಿನಿಂದ ಈಗ ವರ್ಣಮಯವಾಗಿವೆ. ಸುದ್ದಿ ಸಂಗ್ರಹ ಬಹು ವಿಸ್ತಾರಗೊಂಡಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿನ ನಿಷ್ಠುರ ಇಲ್ಲವೇ ಖಡಕ್ ಅಭಿಪ್ರಾಯಗಳು ತಕ್ಷಣವೇ ಪ್ರಕಟಗೊಳ್ಳುತ್ತಿವೆ. ಚಿತ್ರಗಳು ಕ್ಷಣ ಮಾತ್ರದಲ್ಲಿ ಮನೆಮಾತಾಗುತ್ತಿವೆ. ಈ ಬಗೆಯ ಸಂವಹನ ಕ್ರಾಂತಿ ಸಾಧ್ಯವಾದದ್ದು ಆಧುನಿಕ ತಂತ್ರಜ್ಞಾನಗಳ ಸಂಯೋಗದಿಂದ. ಇದನ್ನು ಸಾಧ್ಯವಾಗಿರಿ ಸಿರುವುದು ಸಾಮಾಜಿಕ ಮಾಧ್ಯಮಗಳ ತ್ವರಿತ ಬೆಳವಣಿಗೆಯಿಂದ. ಕೆಲವರಿಂದ ಅನೇಕರ ವರೆಗಿನ ಕಲ್ಪನೆಯಿಂದ ವಿರುದ್ಧವಾಗಿ ಈಗ ಅನೇಕರಿಂದ ಅನೇಕರಿಗೆ ಸಂದೇಶಗಳು ಹರಿದಾಡುವ ಸಂವಹನ ಕ್ರಾಂತಿಯಿಂದ ಪತ್ರಿಕೆಗಳು ಅನೇಕ ಬದಲಾವಣೆಗಳಿಗೆ ಒಳಗಾಗಿವೆ. ಅದು ಅನಿವಾರ್ಯವೂ ಆಯಿತು.

ಉಪಗ್ರಹ ಆಧಾರಿತ ಟಿವಿ ವಾಹಿನಿಗಳು ಜಗತ್ತಿನ ಆಗುಹೋಗುಗಳನ್ನು ಮನೆಯಂಗಳಕ್ಕೆ ತಂದವು. 24*7 ಸುದ್ದಿವಾಹಿನಿಗಳು ದಿನವಿಡೀ ಜೀರ್ಣಿಸಿಕೊಳ್ಳ
ಲಾಗದಷ್ಟು ಸುದ್ದಿಗಳನ್ನು ವೀಕ್ಷಕರಿಗೆ ತುರುಕಲಾರಂಭಿಸಿದವು. ಇವೆಲ್ಲವುಗಳ ಜತೆ ಕಂಪ್ಯೂಟರ್ ಆಧಾರಿತ ಜಾಲತಾಣಗಳು ಸುದ್ದಿ ಪ್ರಸರಣೆಗೆ ಮತ್ತು
ವಿಶ್ಲೇಷಣೆಗೆ ಮತ್ತಷ್ಟು ವೇಗ ನೀಡಿದವು. ಸುದ್ದಿ, ಲೇಖನಗಳನ್ನು ಪ್ರಕಟಿಸಿ ಓದುಗರಿಗೆ ಪತ್ರಿಕೆ ತಲುಪಿಸಿದರಾಯ್ತು ಎನ್ನುವ ಮಾನಸಿಕ ಚೌಕಟ್ಟಿನಿಂದ
ಹೊರಬರುವುದು ಸುದ್ದಿ ಪತ್ರಿಕೆಗಳಿಗೆ ಅನಿವಾರ್ಯ ವಾಯಿತು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಪತ್ರಿಕೆಯನ್ನು ಸುಂದರವಾಗಿ ಹೊರತಂದನಂತರ,
ಪತ್ರಿಕೆಯನ್ನು ಓದುಗರಿಗೆ ನೀಡುವ ವಿಧಾನವು ಸಹ ಬದಲಾವಣೆಗೆ ಒಳಪಟ್ಟಿತು.

ಅಮೆರಿಕದ ‘ಚಿಕಾಗೊ ಟ್ರಿಬ್ಯೂನ್’ ಪತ್ರಿಕೆ ಮೊದಲ ಬಾರಿಗೆ 1992ರಲ್ಲಿ ತನ್ನ ಎಲ್ಲ ಪುಟಗಳನ್ನು ಕಂಪ್ಯೂಟರ್ ಪರದೆಯಮೇಲೆ ಲಭ್ಯವಾಗುವ ವಿದ್ಯುನ್ಮಾನ ಪತ್ರಿಕೆಗೆ (ಇ-ಪೇಪರ್) ನಾಂದಿಯಾಯಿತು. ಇಲ್ಲಿಂದ ಆರಂಭವಾದ ಬದಲಾವಣೆ ಪರ್ವ ನಿರಂತರವಾಗಿ ಪತ್ರಿಕೆಗಳ ಸ್ವರೂಪಗಳನ್ನೇ ಬದಲಿಸುತ್ತಿದೆ. ಮುದ್ರಿತ ಪತ್ರಿಕೆ ಓದುಗರಿಗೆ ಬೆಳಗ್ಗೆ ಮುಟ್ಟುವ ಮುನ್ನವೇ, ಇ – ಪೇಪರ್ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಓದುಗರಿಗೆ ಕಂಪ್ಯೂಟರ್ ಪರದೆಯ ಮುಂದೆ ಸಿದ್ಧವಿರು ತ್ತದೆ. ಅದನ್ನು ತೆರೆದು ಓದಬೇಕಷ್ಟೆ.

ಇ – ಪತ್ರಿಕೆಯ ನಂತರ ಪತ್ರಿಕಾ ಪ್ರಕಾಶಕರು ಪತ್ರಿಕೆಯ ಜಾಲತಾಣಗಳನ್ನು ತೆರೆಯುವುದು ಅನಿವಾರ್ಯವೆನಿಸಿತು. ಸಂಕ್ಷಿಪ್ತ ರೂಪದ ಸುದ್ದಿ, ಚಿತ್ರಗಳು ನಂತರ ವಿಡಿಯೋಗಳನ್ನು ಸಹ ಅಳವಡಿಸುವುದು ರೂಢಿಗೆ ಬಂತು. ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು, ಅಂಕಣಗಳು, ಹೆಚ್ಚುವರಿ ಸುದ್ದಿ ವಿವರಗಳು, ಓದುಗರ ಪತ್ರಗಳು, ಹಳೆಯ ಸಂಚಿಕೆಗಳು, ಚಿತ್ರಗಳು, ಪ್ರಕಟಣೆಗೆ ಯೋಗ್ಯವಾದ, ಆದರೆ ಪ್ರಕಟಿಸಲಾಗದ ಕವಿತೆ, ಕಥೆಗಳನ್ನು ಜಾಲತಾಣಗಳಲ್ಲಿ ಪ್ರಕಟಿಸುವ ಪರಿಪಾಠ
ಆರಂಭವಾಯಿತು. ಈ ಘಟಕವನ್ನು ನಿರ್ವಹಿಸುವ ಪ್ರತ್ಯೇಕ ಕಂಪ್ಯೂಟರ್ ತಂತ್ರಜ್ಞಾನ ಪರಿಣತ ಪತ್ರಕರ್ತರ ನೇಮಕ ಅಗತ್ಯವಾಯಿತು.

ಮುದ್ರಿತ ಪತ್ರಿಕೆಯ ವಿಸ್ತಾರ ಸೀಮಿತವಾಗಿತ್ತು. ಇ-ಪತ್ರಿಕೆಯ ಅವತಾರದ ನಂತರ ಜಗತ್ತೇ ಮಾರುಕಟ್ಟೆಯಾಯ್ತು. ಯಾವ ದೇಶಗಳಲ್ಲಿ ಎಷ್ಟು ಆನ್‌ಲೈನ್ ಓದುಗರು ನಮ್ಮ ಪತ್ರಿಕೆಯ ಜಾಲತಾಣಗಳಿಗೆ ಭೇಟಿ ನೀಡುತ್ತಾರೆ, ಯಾವ ಬಗೆಯ ಸುದ್ದಿಗಳನ್ನು ಓದಲು ಬಯಸುತ್ತಾರೆ ಎಂಬುದನ್ನು ಗುರುತಿಸಲು ಈಗ ಸಾಧ್ಯವಾಗುತ್ತಿದೆ. ಆದರೆ ಈಗಲೂ ಮುದ್ರಿತ ಪತ್ರಿಕೆಯನ್ನು ಎಷ್ಟು ಓದುಗರು, ಎಷ್ಟು ಹೊತ್ತು ಮತ್ತು ಯಾವ ಬಗೆಯ ಸುದ್ದಿಗಳನ್ನು ಓದುತ್ತಾರೆ ಎಂದು ನಿಖರ ವಾಗಿ ಹೇಳಲು ಕಠಿಣ.

ಅಂತರ್ಜಾಲ ಸಂಪರ್ಕ ವಿಸ್ತಾರಗೊಳ್ಳುತ್ತಿದ್ದಂತೆ ಅಧಿಕ ಸಂಖ್ಯೆಯ ಓದುಗರು ಮುದ್ರಿತ ಪತ್ರಿಕೆಯ ಬದಲು ಇ-ಪತ್ರಿಕೆಯನ್ನು ಕಂಪ್ಯೂಟರ್ ಪರದೆಯಲ್ಲಿ ಓದಲಾ ರಂಭಿಸಿದರು. ಬಹುಮಾಧ್ಯಮ ಪರಿಸರದಲ್ಲಿ ದಿನವಿಡೀ ಬ್ರೇಕಿಂಗ್ ಸುದ್ದಿಗಳನ್ನು ನೋಡಿಯೋ, ಕೇಳಿಯೋ ಓದುಗನ ಮನಸ್ಸು ಪತ್ರಿಕೆಗಳಲ್ಲಿ ಬಯಸುವುದು ಕೆಲ ವಿವರಗಳು ಮತ್ತು ಸುದ್ದಿಯ ಸತ್ಯಾಸತ್ಯತೆ. ಪ್ರಧಾನ ಸುದ್ದಿ ಮಾಧ್ಯಮವಾಗಿ ಪತ್ರಿಕೆಗಳ ಮಹತ್ವ ಅಷ್ಟು ಗೌಣವಾಗುತ್ತಿರುವುದಕ್ಕೆ ಕಾರಣ ಕಂಪ್ಯೂಟರ್ ಮತ್ತು ಮೊಬೈಲುಗಳ ವ್ಯಾಪಕ ಬಳಕೆ. ಅನೇಕ ಮಹತ್ತರ ಘಟನೆಗಳು ನೇರವಾಗಿಯೇ ಬಿತ್ತರಗೊಳ್ಳುತ್ತಿವೆ. ಇಲ್ಲವೇ ಕ್ಷಣ ಮಾತ್ರದಲ್ಲಿ ಚಿತ್ರ ಇಲ್ಲವೇ ವಿಡಿಯೋ ಮುಖಾಂತರ ಲಭ್ಯವಾಗುತ್ತಿವೆ. ಈ ಭರಪೂರ ಮಾಹಿತಿ ಮತ್ತು ಬಳಕೆದಾರನ ಆಯ್ಕೆ ಎಲ್ಲರನ್ನು ಚಕಿತಗೊಳಿಸಿದೆ. ಮೊಬೈಲ್ ಇಲ್ಲವೇ ಕಂಪ್ಯೂಟರ್ ಮೂಲಕ ನೀವು ಊಹಿಸಬಹುದಾದ ಎಲ್ಲ ಮಾಧ್ಯಮಗಳಿಗೆ ಸಂಪರ್ಕ ಪಡೆಯಬಹುದಾಗಿದೆ. ಹೀಗಾಗಿ ಪತ್ರಿಕೆಗಳು ಬಹುಮಾಧ್ಯಮ ಸಂಸ್ಕೃತಿಗೆ ಸಂಯೋಗವಾಗುವುದು ಅನಿವಾರ್ಯವಾಯಿತು.

ತಮ್ಮದೇ ಆದ ಸುದ್ದಿ ಜಾಲತಾಣಗಳನ್ನು ನಿರ್ವಹಿಸಬೇಕಾಗಿ ಬಂತು. ನಂತರ ಇವುಗಳಿಗೆ ಬಹುಮಾಧ್ಯಮ ಸ್ಪರ್ಶ ನೀಡಲಾಯಿತು. ಫೇಸ್ಬುಕ್, ಟ್ವಿಟ್ಟರ್,
ಇನ್ಸ್ಟಾಗ್ರಾಮ, ಯುಟ್ಯೂಬ್ ಮೂಲಕ ಸಂಪರ್ಕ ಕಲ್ಪಿಸಲಾಯಿತು. ಫೇಸ್ಬುಕ್, ಯು ಟ್ಯೂಬ್ ಬಳಸಿ ಪತ್ರಿಕೆಗಳು ಸುದ್ದಿ ಮಂಡನೆ, ಚರ್ಚೆ ಹಾಗೂ ಸಂಗೀತ ಆರಂಭಿಸಿವೆ. ಇತ್ತೀಚಿನ ‘ಕ್ಲಬ್ ಹೌಸ್’ ಆಪ್ ಬಳಸಿ ಚರ್ಚೆ, ಹರಟೆಗಳು ಸಹ ಶುರುವಾಗಿವೆ. ಇವೆಲ್ಲ ಓದುಗರಿಗೆ ನೀಡುವ ಪುಕ್ಕಟೆ ಸೇವೆಗಳು. ಈ ಕಾರ್ಯಕ್ರಮ ಗಳನ್ನು ಕೇಳುಗರು ಇಲ್ಲವೇ ವೀಕ್ಷಕರಿಂದ ಚಂದಾ ಹಣ ಪಡೆಯಬೇಕೆ ಎಂಬುದು ನಮ್ಮ ದೇಶದಲ್ಲಿ ಇನ್ನೂ ಚರ್ಚಿತ ವಿಷಯ.

ಜಾಹೀರಾತುದಾರರು ಇವುಗಳಿಗೆ ಪ್ರೋತ್ಸಾಹಿಸುವುದು ತಡವಾದ ಮಾತು. ಆನ್‌ಲೈನ್ ಮಾಧ್ಯಮ ವ್ಯವಹಾರದಲ್ಲಿ ಬಹು ಯಶಸ್ಸು ಕಂಡ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ’. 170 ವರ್ಷಗಳ ಇತಿಹಾಸ ಹೊಂದಿರುವ ಈ ಪತ್ರಿಕೆ ತನ್ನ ಭಂಡಾರದಲ್ಲಿರುವ ವಸ್ತುವಿಷಯಗಳನ್ನು ಬಹು ವ್ಯವಸ್ಥಿತವಾಗಿ ಮಾರುಕಟ್ಟೆಗೆ ಸಿದ್ದಪಡಿಸಿ ಮಾರುತ್ತಿದೆ. ಅಡುಗೆ ವಿಧಾನಗಳು, ಪದಬಂಧ, ಸುದ್ದಿ, ಲೇಖನ ಗಳು, ಇ-ಪತ್ರಿಕೆ, ಹೀಗೆ ವಿವಿಧ ಪ್ರಕಟಿತ ಉತ್ಪನ್ನಗಳನ್ನು ಚಂದಾದಾರರಿಗೆ ನೀಡುತ್ತಿದೆ. ಪ್ರತಿದಿನ ೮.೪ ಲಕ್ಷ ಮುದ್ರಿತ ಪತ್ರಿಕೆಗಳು ಮಾರಾಟವಾದರೆ, ಸುಮಾರು 50 ಲಕ್ಷ ಓದುಗರು ಡಿಜಿಟಲ್ ಸುದ್ದಿಗೆ ಚಂದಾದಾರರು. ಉಳಿದವರು ಇತರ ಉತ್ಪನ್ನಗಳ ಚಂದಾದಾರರು. ಮೊದಲ ಬಾರಿಗೆ ಮುದ್ರಿತ ಪತ್ರಿಕೆಯ ಆದಾಯವನ್ನು ಡಿಜಿಟಲ್ ಸುದ್ದಿ ಆದಾಯ ಮೀರಿಸಿದೆ.

ನಮ್ಮ ದೇಶದಲ್ಲೂ ನ್ಯೂಯಾರ್ಕ್ ಟೈಮ್ಸ ದಿನ ಪತ್ರಿಕೆ ತಿಂಗಳಿಗೆ 60 ರು. ದರದಲ್ಲಿ ಆನ್‌ಲೈನ್ ಮೂಲಕ ಲಭ್ಯವಿದೆ. ಇದು ಆರಂಭಿಕ ಕೊಡುಗೆ. ‘ದಿ ಹಿಂದೂ’ ದೈನಿಕ ಸಹ ವರ್ಷಕ್ಕೆ 949 ರು.ಗೆ ಲಭ್ಯ. ವಿಶ್ವದ ಇನ್ನೊಂದು ಪ್ರಸಿದ್ಧ ದೈನಿಕ ‘ದಿ ಗಾರ್ಡಿಯನ್’ ಮುದ್ರಿತ ಪತ್ರಿಕೆಯ ಪ್ರಸಾರ ಕೇವಲ ಒಂದು ಲಕ್ಷಕ್ಕೆ ಕುಸಿದಿದೆ. ಆದರೆ ಹತ್ತು ಲಕ್ಷ ಡಿಜಿಟಲ್ ಚಂದಾದಾರರು ವಿಶ್ವದಾದ್ಯಂತ ಓದುತ್ತಾರೆ. ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳ ಓದುಗರಿಗಾಗಿ ಪ್ರತ್ಯೇಕವಾಗಿ ಆವೃತ್ತಿಗಳನ್ನು ಪತ್ರಿಕೆ ತರುತ್ತಿದೆ.

ಕಳೆದೆರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಪತ್ರಿಕೆಗಳು ಸೊರಗಿವೆ. ನಮ್ಮ ದೇಶದಲ್ಲಂತೂ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಏಕೆಂದರೆ ಪತ್ರಿಕೆಗಳು ಜಾಹಿರಾತು ಗಳ ಆದಾಯದ ಮೇಲೆ ನಿಂತಿವೆ. ನೆರೆಯ ಪಾಕಿಸ್ತಾನ ದಲ್ಲಿ ಒಂದು ದಿನಪತ್ರಿಕೆಯನ್ನು 20ರು. ಕೊಟ್ಟು ಖರೀದಿಸಬೇಕು. ನಮ್ಮಲ್ಲಿ ಅದು 4 ರಿಂದ 6 ರು. ಮಾತ್ರ. ಆರ್ಥಿಕ ಹಿಂಜರಿತ ಮತ್ತು ದುಬಾರಿ ಮುದ್ರಣ ಕಾಗದ ಉದ್ದಿಮೆಗೆ ಬರೆ ಎಳೆದಿವೆ. ಪತ್ರಿಕೆ ಯ ಖರ್ಚುವೆಚ್ಚಗಳನ್ನು ಕಡಿಮೆಗೊಳಿಸುವ ಭರದಲ್ಲಿ
ನೂರಾರು ಪತ್ರಕರ್ತರ ನೌಕರಿಗೆ ಕತ್ತರಿ ಬಿದ್ದಿದೆ.

ಜಾಹಿರಾತುಗಳ ಆದಾಯ ಕುಸಿತ ಕಂಡರೆ ಇನ್ನೊಂದೆಡೆ ಪತ್ರಿಕೆಗಳ ಪ್ರಸಾರ ಸಹ ನಿರೀಕ್ಷಿತ ಪ್ರಮಾಣದಲ್ಲಿ ಏರುತ್ತಿಲ್ಲ. ಹಲವು ಕ್ಷೇತ್ರಗಳಿಗೆ ಸೀಮಿತವಾದ ಜಾಲತಾಣಗಳು- ಉದಾಹರಣೆಗೆ ವೈವಾಹಿಕ, ಮನೆ/ನಿವೇಶನ/ವಾಹನಗಳ ಮಾರಾಟ/ ಖರೀದಿ, ಹೀಗೆ ಬಹುಪಾಲು ಜಾಹಿರಾತುಗಳು ಜಾಲತಾಣಗಳತ್ತ ಮುಖ ಮಾಡಿವೆ. ಇದು ಪತ್ರಿಕೆಗಳ ಆದಾಯವನ್ನು ಕಸಿದಿವೆ.

ಉತ್ತಮ ಹಾಗೂ ಜನಹಿತ ಪತ್ರಿಕೆಗಳ ಉಳಿವಿಗೆ ಸಾರ್ವಜನಿಕರ ದೇಣಿಗೆ ಮತ್ತು ಸರಕಾರದ ನೆರವು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಲಿದೆ. ಈಗಾಗಲೇ ಅಮೆರಿಕ ಹಾಗೂ ಯೂರೋಪಿನಲ್ಲಿ ಸ್ಥಳೀಯ ಪತ್ರಿಕೆಗಳ ಉಳಿವಿಗೆ ಸಂಘಸಂಸ್ಥೆಗಳು, ದಾನಿಗಳು ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡುತ್ತಿದ್ದಾರೆ. ಸಣ್ಣ ಪತ್ರಿಕೆ ಗಳಿಗೆ ಪತ್ರಕರ್ತರನ್ನು ನೇಮಿಸಿ ಸ್ಥಳೀಯ ಸಮಸ್ಯೆಗಳನ್ನು ಕುರಿತು ವರದಿ ಮಾಡಲು ಹೇಳಿ ಅವರಿಗೆ ವೇತನವನ್ನು ಸಹ ಸರಕಾರ/ ಸಂಘಸಂಸ್ಥೆಗಳು ನೀಡುತ್ತಿವೆ.

ಸುದ್ದಿ ಮಾಧ್ಯಮ ಯಾವುದೇ ಇರಲಿ ಅದು ಪತ್ರಿಕೆಯನ್ನು ಮೀರಿಸಲಾರದು. ಮುದ್ರಿತ ಸುದ್ದಿಯನ್ನು ಅನೇಕ ಸಲ ವಿವರವಾಗಿ ಓದಬಹುದು. ಡಿಜಿಟಲ್ ಇಲ್ಲವೇ ಟಿವಿ. ಮಾಧ್ಯಮಗಳಲ್ಲಿ ಅದು ಸಾಧ್ಯವಿಲ್ಲ. ಆದ್ದರಿಂದಲೇ ಎಲ್ಲ ಪ್ರಮುಖ ಪಟ್ಟಣಗಲ್ಲಿ ಕನಿಷ್ಠ ಒಂದಾದರೂ ಪತ್ರಿಕೆ ಇರಬೇಕೆಂದು ಮುಂದುವರಿದ ದೇಶಗಳಲ್ಲಿ ಜನತೆ ಬಯಸುತ್ತಾರೆ. ಏಕೆಂದರೆ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹತೆ ಹೊಂದಿರುತ್ತವೆ. ನಮ್ಮ ದೇಶದ ಸುದ್ದಿ ಬಳಕೆದಾರರಲ್ಲಿ ನಡೆದ ಇತ್ತೀಚಿನ ಸಮೀಕ್ಷೆ ಯೊಂದರಲ್ಲಿ ಮುದ್ರಣ ಮಾಧ್ಯಮವು ಅತ್ಯಂತ ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿರುವ ಮಾಧ್ಯಮ ಎಂದು ಸಾಬೀತಾಗಿದೆ.

ಶೇ.62ರಷ್ಟು ಅಂಕಗಳೊಂದಿಗೆ ಪತ್ರಿಕೆಗಳು ಅತಿ ಹೆಚ್ಚಿನ ವಿಶ್ವಾಸಾರ್ಹ ಮಾಧ್ಯಮವೆಂದು ಮೊದಲ ಆದ್ಯತೆ ನೀಡಿದ್ದಾರೆ. ಎರಡನೇ ಸ್ಥಾನದಲ್ಲಿ ಬಾನುಲಿ (ಶೇ.56) ಮೂರನೇ ಸ್ಥಾನದಲ್ಲಿ ಟಿವಿ (ಶೇ.53) ಹಾಗೂ ಕಡೆಯ ಸ್ಥಾನವನ್ನು ಸಾಮಾಜಿಕ ಮಾಧ್ಯಮಗಳು (ಶೇ.27) ಪಡೆದಿವೆ. ಪರಿಸ್ಥಿತಿ ಹೀಗಿರುವಾಗ ಜನಹಿತ ಬಯಸುವ ಪತ್ರಿಕೆಗಳಿಗೆ ಓದುಗರಿಂದ ಮತ್ತು ಸರಕಾರದಿಂದ ಪ್ರೋತ್ಸಾಹ ಮತ್ತು ನೆರವು ಅತಿ ಅಗತ್ಯ. ಪ್ರಜಾಸತ್ತೆಯ ರಕ್ಷಣೆಗೆ ಮತ್ತು ಪೋಷಣೆಗೆ ಇದು
ಅನಿವಾರ್ಯವೂ ಹೌದು.