Wednesday, 11th December 2024

ಕವಲುದಾರಿಯಲ್ಲಿ ವೈದ್ಯವೃತ್ತಿ

ಅಭಿವ್ಯಕ್ತಿ

ಡಾ.ಕರವೀರಪ್ರಭು ಕ್ಯಾಲಕೊಂಡ

ವೈದ್ಯಕೀಯ ವೃತ್ತಿ ಈಗ ಕವಲುದಾರಿಯಲ್ಲಿ ನಿಂತಿವೆ. ವೈದ್ಯ-ರೋಗಿಗಳ ಸಂಬಂಧ ಹಳಸಿದೆ. ವಿಶ್ವಾಸ ನಂಬಿಕೆ ನೆಲ ಕಚ್ಚಿದೆ. ಜನರ ನಿರೀಕ್ಷೆಗಳು ಗಗನಕ್ಕೇರಿವೆ. ಸಮಾಜದಲ್ಲಿಯ ಕನಿಷ್ಠ ಸಹನೆ, ಸಂಯಮ, ಶಕ್ತಿ, ಭಾರತೀಯ ಜನಮಾನಸಗಳಿಂದ ಮಾಯ ವಾಗಿವೆ.

ಸರಕಾರಿ ಆಸ್ಪತ್ರೆಗಳಲ್ಲಿಯ ವೈದ್ಯರ ಕೊರತೆ, ಔಷಽ, ಸಲಕರಣೆಗಳ, ಪರಿಕರಗಳ ಕೊರತೆ……ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ
ಹೆಚ್ಚಾಗಿವೆ. ಇವೆಲ್ಲ ಗೊಂದಲ, ಗೌಜುಗಳು ವೈದ್ಯರ ಮೇಲಿನ ಹಗೆ ನಾಂದಿ ಹಾಡಿವೆ. ಇಂದಿನ ಕಾಲಘಟ್ಟದಲ್ಲಿ ವೈದ್ಯ ವೃತ್ತಿಯು ಗೊಂದಲದಲ್ಲಿ ಮತ್ತು ದ್ವಂದ್ವಕ್ಕೆ ತಲುಪಿದೆ. ಪ್ರಸ್ತುತ ನಮ್ಮ ಸುತ್ತಮುತ್ತಲೂ ವೈದ್ಯರ ಮೇಲೆ ನಡೆಯುವ ದಾಳಿ, ಆಸ್ಪತ್ರೆಯ ಮೇಲೆ ನಡೆಯುವ ಗೂಂಡಾಗಿರಿ ಕಂಡಾಗ, ಆಸ್ಪತ್ರೆಯಲ್ಲಿರುವುದಕ್ಕಿಂತ ಮನೆ ಯಲ್ಲಿಯೇ ನೆಮ್ಮದಿಯಿಂದ ಉಸಿರು ಬಿಡುವುದು ಲೇಸು ಎನ್ನುವ ನಕಾರಾತ್ಮಕ ಚಿಂತನೆಗಳೇ ಹೆಚ್ಚಾಗಿವೆ.

ಇತ್ತೀಚೆಗೆ ಜಾಗತಿಕ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದಲ್ಲಿ ವೈದ್ಯ ಮತ್ತು ಜನಸಂಖ್ಯೆಯ ಅನುಪಾತ 0.7 /1000. ಚೀನಾದಲ್ಲಿ 1.7 /1000, ಅಮೆರಿಕದಲ್ಲಿ 2.5 / 1000, ಬ್ರಿಟನ್‌ನಲ್ಲಿ 2.8 /1000, ಸ್ಪೇನ್‌ ನಲ್ಲಿ 4.9 /1000. ಹೀಗಿರುವಾಗ, ಒಬ್ಬ ವೈದ್ಯನನ್ನು ದೇವರಾಗಿ ಕಾಣುವುದು ಬಿಡಿ, ಕೇವಲ ಮನುಷ್ಯನಾಗಿ ನೋಡಿದರೂ ತನ್ನ ಇತಿ ಮಿತಿಯೊಳಗೆ ಆತ ಬಹಳ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಕಠಿಣ ಪರಿಸ್ಥಿತಿ ಇದೆ.

ಹೀಗಿರುವಾಗ, ವೈದ್ಯರ ಮೇಲೆ ಆಕ್ರಮಣ, ಆಸ್ಪತ್ರೆಯ ಮೇಲೆ ದಾಳಿ, ದೌರ್ಜನ್ಯ ಮಾಡುವುದು ಎಷ್ಟು ಸರಿ? ಬದಲಿಗೆ ರೋಗಿಯ
ಸಂಬಂಧಿಕರು ವಾಸ್ತವವನ್ನು ಅರಿತು ತಾಳ್ಮೆಯಿಂದ ವೈದ್ಯರೂಂದಿಗೆ ವರ್ತಿಸಿದಲ್ಲಿ ಮಾತ್ರ ಸಮಾಜದಲ್ಲಿ ವೈದ್ಯರು ತಮ್ಮ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯ. ವೈದ್ಯರ ಮೇಲಿನ ಹಗೆ ಕಾರಣ ಹಲವು. ಪ್ರತಿ ಘಟನೆಯ ಹಿಂದೆಯೂ ಒಂದೊಂದು ಕಾರಣ. ಇಂಥದ್ದೇ ನಿಖರವಾದ ಕಾರಣವೆಂದು ನಿಶ್ಚಿತವಾಗಿ ಹೇಳಲು ಬರುವುದಿಲ್ಲ. ಕೆದಕಿದಷ್ಟೂ ಆಳ, ಅಗಲ ಹೆಚ್ಚುವುದು. ವಿಜಾಪುರ ದಾಗ ಇಜಾರಿನವ್ರು ಹಜಾರಮಂದೆಂತ?

ಗ್ರಾಹಕರ ರಕ್ಷಣಾ ಕಾನೂನು: ಗ್ರಾಹಕರ ರಕ್ಷಣಾ ಕಾನೂನನ್ನು ಸರಕಾರ ಜಾರಿಗೆ ತಂದಾಗಲೇ ವೈದ್ಯವೃತ್ತಿಯಲ್ಲಿಯ ಸೇವಾ ಮನೋಭಾವ ನೇಪಥ್ಯಕ್ಕೆ ಸರಿಯಿತು. ಉದ್ದಿಮೆಯಾಗಿ ಬೆಳೆಯಿತು. ವೈದ್ಯ ತನ್ನ ಮತ್ತು ತನ್ನವೃತ್ತಿ ರಕ್ಷಣೆಗಾಗಿ ಎವಿಡೆನ್ಸ್ ಬೇಸ್ಡ್ ಪ್ರಾಕ್ಟೀಸ್ ಪ್ರಾರಂಭಿಸಿದ. ಅದು ಜನರಿಗೆ ವಿಚಿತ್ರವಾಗಿ ಕಾಣಿಸಿತು. ಅವರು ಬರೆಯುವ ಇನ್ ವೆಸ್ಟಿಗೇನ್ಸ್‌ಗೆ ಹಣ ಸುಲಿಗೆಯ ಹೊಸ ರೂಪ ಎಂಬ ಆರೋಪ ಬಂತು.

ಗ್ರಾಹಕರ ರಕ್ಷಣಾ ಕಾನೂನು ಜಾರಿಗೆ ಬಂದಾಗ ಅವೆ ಅವಶ್ಯವಾಗಿದ್ದವು ವಿನಃ ಅನಾವಶ್ಯಕವಾಗಿರಲಿಲ್ಲ. ಸರಕಾರ ಸಿಪಿಎ ಕಾನೂನು ಜಾರಿಗೆ ತರುವಾಗ/ತಂದ ಮೇಲೆ ಜನರಿಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಲಿಲ್ಲ… ಹೀಗಾಗಿ ವೈದ್ಯ ರೋಗಿಯ ನಡುವಿನ ಸಂಬಂಧದ ಬಿರುದು ದೊಡ್ಡದಾಯಿತು. ಕಂದಕವಾಯಿತು. ಕಾದಾಟಕ್ಕೆ ಕಾರಣವಾಯಿತು. ಮಾಧ್ಯಮಗಳು ಹೊತ್ತಿದ ಬೆಂಕಿಗೆ ತುಪ್ಪ ಸುರಿದವು. ನಮ್ಮನ್ನಾಳುವ ಪ್ರತಿನಿಧಿಗಳು ತಮ್ಮ ಬೆಳೆ ಬೇಯಿಸಿಕೊಳ್ಳಲು ವೈದ್ಯರ ಹಗೆ ಕುಮ್ಮಕ್ಕು ಕೊಟ್ಟರು.
ಇಂಥವರು ನಾಡ ನಾಯಕರಿಗೆ ಕೆಟ್ಟವರಾಗಿ ಕಾಣಲಿಲ್ಲ.

ಬದಲಾಗಿ ಅವರಿಗೆ ಮಂತ್ರಿಗಿರಿ ಸಿಕ್ಕು, ಸಿಕ್ಕಾಪಟ್ಟೆ ಮಾತನಾಡಿದರು. ಇಂಥ ದ್ವಂದ್ವಗಳು, ಗೊಂದಲಗಳ ಚಕ್ರವ್ಯೂಹದಲ್ಲಿ ವೈದ್ಯ ಬಲಿಪಶು ಆಗುತ್ತಿರುವುದು ದೊಡ್ಡ ದುರಂತ !

ಸಿಪಿಎಯಲ್ಲಿ ಏನಿದೆ ಎಂಬುದು ಜನರಿಗೆ ಗೊತ್ತಿರಲಿಲ್ಲ. ಜನಪ್ರತಿನಿಧಿಗಳು ಅಂಗೈಯಲ್ಲಿ ಅರಮನೆ ತೋರಿಸಿದರು. ಜನ ಬೆಂಬಲ ಪಡೆದರು. ವೈದ್ಯ ವೃತ್ತಿಯನ್ನು ಸಿಪಿಎ ಒಳಗಡೆ ತಂದರು. ವೈದ್ಯರು ಸೇವಾವೃತ್ತಿಗೆ ವಿದಾಯ ಹೇಳಿದರು. ಬದಲಾವಣೆ ಅನಿವಾರ್ಯವಾಯಿತು. ಬದಲಾದರು. ಜನರಿಗೆ ಆರೋಗ್ಯ ರಕ್ಷಣೆ ಹೊರೆಯಾಯಿತು. ಇದಕ್ಕೆ ವೈದ್ಯರು ಕಾರಣರಲ್ಲ.  ನಮ್ಮನ್ನಾ ಳುವ ಪ್ರತಿನಿಧಿಗಳು, ಸರಕಾರ ಕಾರಣ ಎಂಬುದನ್ನು ಸಾರ್ವಜನಿಕರು ಅರಿಯಬೇಕು.

ವೈದ್ಯರ ಮೇಲಿನ ಹಗೆ ಕಾರಣಗಳು: ಪಶ್ಚಿಮ ಬಂಗಾಳದ ಆಸ್ಪತ್ರೆಯೊಂದರ ವೈದ್ಯರ ಮೇಲೆ ರೋಗಿಯ ಕಡೆಯವರು
ಮರಣಾಂತಿಕ ಹ ನಡೆಸಿದರು. ಅದರ ವಿರುದ್ಧ ಹುಟ್ಟಿಕೊಂಡ ಪ್ರತಿಭಟನೆ ಇಡೀ ದೇಶವ್ಯಾಪಿ ಹರಡಿತು. ಈ ವೈದ್ಯರ ಪ್ರತಿಭಟನೆ ಯಲ್ಲಿ ಸಹಜವಾಗಿಯೇ ರಾಜಕೀಯ ಪ್ರವೇಶ ಪಡೆಯಿತು. ವೈದ್ಯರ ಮೇಲೆ ಹಗಳು ಕಳೆದ ದಶಕದಿಂದ ನಡೆಯುತ್ತ ಬಂದಿವೆ .ಇನ್ನೂ ನಡೆಯುತ್ತಲೇ ಇವೆ. ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧ ನಶಿಸಿರುವುದೇ ಇಂಥ ಘಟನೆಗೆ ಕಾರಣ ಎನ್ನವು ದಾದರೆ, ಅದನ್ನು ಪುನಃ ಗಟ್ಟಿಗೊಳಿಸುವುದು ಹೇಗೆ? ಹಗಳಿಂದಲೇ ಈ ಸಮಸ್ಯೆ ಬಗೆಹರಿಸಬಹುದೆಂಬುದು ಸಾರ್ವಜನಿಕರ ತಪ್ಪು ತಿಳಿವಳಿಕೆಯೇ ಇಂಥ ಘಟನೆಗಳಿಗೆ ಕಾರಣ ಎನ್ನವುದಾದಲ್ಲಿ, ಅದನ್ನು ಕಿತ್ತು ಹಾಕುವುದು ಹೇಗೆ? ದುಬಾರಿಯಾಗಿರುವ ವೈದ್ಯಕೀಯ ಸೇವೆಗಳೇ ಇವುಗಳಿಗೆ ಮೂಲ ಕಾರಣವೆಂದಾದರೆ, ಅದನ್ನು ಕಡಿಮೆ ಮಾಡಲು ಸಾಧ್ಯವೇ? ವೈದ್ಯಕೀಯ ಸೇವೆಯ ಬೆಲೆ ನಿಗದಿಯಾಗುವುದು ಉತ್ಪಾದನೆಗೆ ತಗಲುವ ವೆಚ್ಚದ ಮೇಲೆ ಅವಲಂಬಿತವಾಗಿರುತ್ತದೆ.

ವೈದ್ಯಕೀಯ ಶಿಕ್ಷಣ ಅತ್ಯಂತ ದುಬಾರಿಯಾಗಿದೆ. ಅದು ದೀರ್ಘಕಾಲಿಕವೂ ಹೌದು. ಆರು ವರ್ಷದ ವೈದ್ಯಕೀಯ ಪದವಿ
ಮುಗಿಸುವುದರೊಳಗೆ ಪಾಲಕರು ಹೈರಾಣಾಗಿ ಬಿಟ್ಟಿರುತ್ತಾರೆ. ಒಂದೇ ಪ್ರಯತ್ನದಲ್ಲಿ ಎಲ್ಲಾ ಪರೀಕ್ಷೆಗಳನ್ನು ಪಾಸಾದರೆ…
ಹಾಗಾಗುವುದು ಕಷ್ಟ ಸಾಧ್ಯ. ಸರಕಾರಿ ಸೀಟು ಪಡೆದು, ಸರಕಾರಿ ಕಾಲೇಜಿನಿಂದ ಪಾಸಾಗಬೇಕಾದರೆ, ಈಗಿನ ಕಾಲದಲ್ಲಿ ತಗಲುವ
ವೆಚ್ಚ ಸುಮಾರು ಅರ್ಧ ಕೋಟಿ. ಖಾಸಗಿ ಕಾಲೇಜಾದರೆ ಅದು ಒಂದು ಕೋಟಿಯಾಗಬಹುದು. ಬ್ಯಾಂಕ್ ಸಾಲ ಮಾಡದೇ ಕಲಿಯುವುದು ಕಷ್ಟ. ವೈದ್ಯಕೀಯ ವಿದ್ಯಾರ್ಥಿ ಪದವಿ ಮುಗಿಸುವ ಹೊತ್ತಿಗೆ ಅವನ ಶಾಲಾ ಸಹಪಾಟಿಗಳು ಗಳಿಸುವ ಸದಸ್ಯ ರಾಗಿರುತ್ತಾರೆ.

ಅನುಮಾನದ ಪಿಡುಗು: ವಾಣಿಜ್ಯಮಯ ವಾಗಿರುವ ವೈದ್ಯಕೀಯ ವೃತ್ತಿ, ಕಾನೂನಿನಡಿಯಲ್ಲಿ ವೈದ್ಯಕೀಯ ಸೇವೆಯನ್ನು ನಿಯಂತ್ರಿಸಲು ಅನುಸರಿಸುತ್ತಿರುವ ಪದ್ಧತಿಗಳು, ತಮ್ಮ ಸೇವಾ ಭದ್ರತೆಗಾಗಿ ವೈದ್ಯರುಗಳು ಅನುಸರಿಸುತ್ತಿರುವ ದುಬಾರಿ ಬೆಲೆಯ ರೋಗಪತ್ತೆ ವಿಧಾನಗಳನ್ನೊಳಗೊಂಡ ರಕ್ಷಣಾತ್ಮಕ ವೈದ್ಯಕೀಯ ಸೇವೆ, ಹದಗೆಟ್ಟ ಆಡಳಿತಾತ್ಮಕ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಇತ್ಯಾದಿ ಕಾರಣಗಳಿಂದಾಗಿ ವೈದ್ಯ ರೋಗಿಯ ನಡುವಿನ ಆತ್ಮವಿಶ್ವಾಸದ ಕೊಂಡಿ ಕಳಚಿಬೀಳುತ್ತಿದ್ದು, ಒಬ್ಬರನ್ನೊಬ್ಬರು ಸಂಶಯದಿಂದ ನೋಡುವಂತಾಗಿ ಪವಿತ್ರವಾದ ವೈದ್ಯಕೀಯ ಸೇವೆ ಇಂದು ಅಡ್ಡದಾರಿ ಹಿಡಿಯುತ್ತಿದೆ.

ರೋಗಿ ವೈದ್ಯರನ್ನು ನೋಡುವ ಮುನ್ನ ಅವನು ಎಲ್ಲಿ ನನ್ನನ್ನು ಸುಲಿದುಬಿಡುತ್ತಾನೋ ಎಂಬ ಅನುಮಾನ ರೋಗಿಗೆ. ರೋಗಿ ತನ್ನನ್ನು ಯಾವ ಕಾನೂನು ಕಟ್ಟಳೆಗೆ ಎಳೆದು ಬಿಡುತ್ತಾನೋ ಎಂಬ ಆತಂಕ ವೈದ್ಯನಿಗೆ ಉಂಟಾಗಿರುವ ಸಂದಿಗ್ಧ ಅನುಮಾನದ ಸನ್ನಿವೇಶ ಇಂದು ನಿರ್ಮಾಣವಾಗಿದೆ. ಅನುಮಾನದ ಪರಿಸರದಲ್ಲಿ ವೈದ್ಯ ರೋಗಿಯ ನಡುವೆ ಆತ್ಮವಿಶ್ವಾಸ ಬೆಳೆಯಲು ಸಾಧ್ಯವೇ? ಖಂಡಿತಾ ಇಲ್ಲ. ವೈದ್ಯ ಎಲ್ಲ ರೋಗಗಳನ್ನು ವಾಸಿ ಮಾಡುವ ಜೈವಿಕ ಯಂತ್ರವಲ್ಲ.

ಪ್ರತಿಯೊಂದು ಕಾಯಿಲೆಗೂ ತನ್ನದೇ ಆದ ಭವಿಷ್ಯಗತಿಯಿದ್ದು, ಸಮರ್ಥವಾಗಿ ಚಿಕಿತ್ಸೆ ನೀಡಿದರೂ ವಾಸಿಯಾಗದೇ ಸಾವ ನ್ನಪ್ಪುವ ಸಾಧ್ಯತೆಗಳು ಬಹಳ. ತೀವ್ರ ನಿಗಾ ಘಟಕದ ರೋಗಿಗಂತೂ ಅಲ್ಲಿಂದ ಹೊರಬರುವವರೆಗೆ ಜೀವ ಭಯ ಇದ್ದೇ ಇರುತ್ತದೆ.

ಕ್ರೀಮ್ ಆಫ್ ದಿ ಸೊಸೈಟಿ: ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗುವವರು ಅತ್ಯಂತ ಜಾಣರು, ಹೆಚ್ಚು ಅಂಕ ಗಳಿಸಿದವರು ಎಂಬುದರಲ್ಲಿ ಎರಡು ಮಾತಿಲ್ಲ. ಸೀಟು ಸಿಕ್ಕಾಗ ಹಮ್ಮು, ಬಿಮ್ಮುಗಳಿಂದ ಬೀಗುತ್ತಿದ್ದವರು ಡಿಗ್ರಿ ಮುಗಿಸಿ ಹೊರ ಬರುವ ಹೊತ್ತಿಗೆ, ವೈದ್ಯಕೀಯ ಶಿಕ್ಷಣ ಆಯ್ಕೆ ಮಾಡಿದ್ದೇ ತಪ್ಪಾಯ್ತೆಂದು ಮನಸಿನಲ್ಲಿಯೇ ಮರುಗುತ್ತಿರುತ್ತಾರೆ.

ಬಾಯಿ ಬಿಟ್ಟು ಹೇಳುವಂತೆಯೂ ವಾತಾವರಣ ಇರುವುದಿಲ್ಲ. ಬರೀ ವೈದ್ಯಕೀಯ ಪದವಿ ಪಡೆದರೆ ಪ್ರಯೋಜನವಿಲ್ಲ.
ಸ್ನಾತಕೋತ್ತರ ಪದವಿ ಬೇಕು. ಸೂಪರ್ ಸ್ಪೇಷಾಲಿಟಿ ಕಾಲ ಇದು. ಅದಕ್ಕೂ ಸಜ್ಜಾಗಬೇಕು. ಒಟ್ಟಿನಲ್ಲಿ ವೈದ್ಯನಾಗಿ ಬದುಕು
ಪ್ರಾರಂಭಿಸುವ ಹೊತ್ತಿಗೆ ಮೂರು ದಶಕಗಳು ಮುಗಿದಿರುತ್ತವೆ. ನಂತರ ಕ್ಲಿನಿಕ್/ಆಸ್ಪತ್ರೆ ಪ್ರಾರಂಭಿಸಲು ಬಿಲ್ಡಿಂಗ್ ಬೇಕು,
ಯಂತ್ರೋಪಕರಣ ಬೇಕು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಬೇಕು. ಇಷ್ಟೊತ್ತಿಗೆ ತಲೆಯ ಮೇಲೆ ಕೈ ಹೊತ್ತು ಕೂಡುವುದೊಂದು ಬಾಕಿ. ಮತ್ತೆ ಬ್ಯಾಂಕಿನ ಸಾಲಕ್ಕೆ ಮೊರೆಹೋಗಬೇಕು.

ಕಲಿಯುವಾಗಿನ ಸಾಲ, ಬಿಲ್ಡಿಂಗ್, ಯಂತ್ರೋಪಕರಣಗಳ ಸಾಲ, ಒಟ್ಟಿನಲ್ಲಿ ಸಾಲದ ಸುಳಿಯಲ್ಲಿ ಸಿಕ್ಕು ಗಿರಿ ಗಿರಿ ತಿರುಗುತ್ತಿರು ತ್ತಾನೆ ಹೊರಬರುವ ದಾರಿ ಕಾಣದೆ. ಸರಕಾರ ಸಣ್ಣ ಕೈಗಾರಿಕೆ ಉದ್ದಿಮೆ ಪ್ರಾರಂಭಿಸುವವರಿಗೆ ಎಲ್ಲ ಹಂತದಲ್ಲೂ ಸಬ್ಸಿಡಿ ಸಿಗುತ್ತದೆ. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಇವುಗಳಿಗೆ ಅವಕಾಶವೇ ಇಲ್ಲ. ಸರಕಾರ ಸಕ್ಕರೆ ಲೇಪಿತ ಕಹಿ ಗುಳಿಗೆಗಳನ್ನು ನಿತ್ಯ ನೂರಾರು ಆಶ್ವಾಸನೆಗಳ ರೂಪದಲ್ಲಿ ಜನರಿಗೆ ನೀಡುತ್ತಿದೆ. ವೈದ್ಯಕೀಯ ಶಿಕ್ಷಣದ ವೆಚ್ಚ ತಗ್ಗಿಸುವ, ವೈದ್ಯರಿಗೂ ಸಬ್ಸಿಡಿ ಕೊಡುವ ಬಗ್ಗೆ ಕಿಂಚತ್ತೂ ಯೋಚಿಸದೇ ಇರುವುದು ದೊಡ್ಡ ದುರಂತವೇ ಸರಿ.

ಇವುಗಳತ್ತ ನಮ್ಮ ಜನಪ್ರತಿನಿಧಿಗಳು ಬಾಯಿ ಬಿಡುವುದಿಲ್ಲ. ಏಕೆಂದರೆ, ಬಹುತೇಕ ವೈದ್ಯಕೀಯ ಕಾಲೇಜುಗಳ ಮಾಲೀಕರು
ಅವರೇ ಆಗಿರುತ್ತಾರೆ. ವೈದ್ಯಕೀಯ ಸೇವೆ ಜನಸಾಮಾನ್ಯರಿಗೆ ಹೊರೆ ಆಗುತ್ತಿದೆ ಎಂಬ ಅರಿವು ನಮ್ಮನ್ನಾಳುವ ಪ್ರಭುಗಳಿಗೆ
ಇದೆ. ಇದರ ಬಗ್ಗೆ ಗಂಟೆಗಟ್ಟಲೇ ಬಡಾಯಿ ಕೊಚ್ಚುತ್ತಾರೆ. ವೈದ್ಯಕೀಯ ಸೇವೆಯು ದುಬಾರಿಯಾಗಿರುವುದರ ಹಿನ್ನೆಲೆ ಅವರಿಗೆ ಸಂಪೂರ್ಣಗೊತ್ತಿದೆ. ಆದರೆ, ಅದನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಅವರೆಂದೂ ಬಾಯಿ ಬಿಡುವುದಿಲ್ಲ. ಸ್ವಲ್ಪವೂ ತಲೆ ಬಿಸಿ ಮಾಡಿಕೊಳ್ಳುವುದಿಲ್ಲ.

ಅಂಗೈಯಲ್ಲಿ ಅರಮನೆ: ಅಂಗೈಯಲ್ಲಿ ಅರಮನೆ ತೋರಿಸುವಲ್ಲಿ ಅವರು ನಿಸ್ಸೀಮರು. ಅಷ್ಟೇ ಅಲ್ಲ ಪರದೇಶಕ್ಕೆ ಹೋದಾಗ ವೈದ್ಯರನ್ನು ಹಿಗ್ಗಾ ಮುಗ್ಗ ಬೈಯ್ಯುವುದು, ಅವಹೇಳನ ಮಾಡುವುದರಲ್ಲೂ ನಿಸ್ಸೀಮರು. ಉತ್ತಮ ವೈದ್ಯಕೀಯ ಸೇವೆಯ ಹೆಸರಿನಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳು ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ಬೆಳೆಯುತ್ತಿದೆ.

ಅಲ್ಲಿಯ ಸೌಲಭ್ಯಗಳು, ಸೌಕರ್ಯಗಳು ಸಾಕಷ್ಟು. ಶ್ರೀಮಂತರಿಗೆ ಟೂರಿಸ್ಟ್ ತಾಣಗಳಾದರೆ, ಬಡವರಿಗೆ ಟೆರರಿಸ್ಟ ತಾಣಗಳಾಗಿವೆ. ಬಡವರಿಗೆ ಇಲ್ಲಿಯ ವೈದ್ಯಕೀಯ ಸೇವೆ ಗಗನಕುಸುಮವೇ ಸೈ. ಇತ್ತೀಚೆಗೆ ಅಳವಡಿಸಲಾಗಿರುವ ಕ್ಯಾಷ್‌ಲೆಸ್ ಎನ್ನುವ ಇನ್ಸೂರೆನ್ಸ್ ಆಧಾರಿತ ವೈದ್ಯಕೀಯ ಚಿಕಿತ್ಸೆವೈದ್ಯಕೀಯ ಸೇವೆಯನ್ನು ಇನ್ನಷ್ಟು ತುಟ್ಟಿಯಾಗಿಸಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಒಟ್ಟಾರೆ ‘ವೈದ್ಯಕೀಯ ಸೇವೆ ’ಯನ್ನು ‘ಸುಲಿಗೆ ’ಎಂಬ ಪಟ್ಟಕ್ಕೆ ಕಟ್ಟುವ ಮೊದಲು ಇದಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ ಚರ್ವಿತ ಚರ್ವಿತ ಚರ್ಚಿಸಿ, ಅವುಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸರಕಾರ ಮುಂದಾಗ ಬೇಕು.

ಇಲ್ಲದೇ ಹೋದಲ್ಲಿ ವೈದ್ಯ ಖಳನಾಯಕನಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪವಿತ್ರ ವೈದ್ಯಕೀಯ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸವನ್ನು ಸರಕಾರ ಕೈಬಿಡಬೇಕು. ಮೊಸಳೆ ಕಣ್ಣೀರಿನ ನಾಟಕಕ್ಕೆ ನಾಂದಿ ಹಾಡಬೇಕು.
ವೈದ್ಯೋ ರಕ್ಷಿತೊ ರಕ್ಷಿತಃ. ಆದರೆ, ವೈದ್ಯರ ಮೇಲೆ ಹಲ್ಲೆ ಮಾಡಿದ ಜನಪ್ರತಿನಿಧಿಗಳ ದೊಡ್ಡ ಪಟ್ಟಿಯೇ ಇದೆ.

ಅವರು ಎಲ್ಲ ಪಕ್ಷಗಳಲ್ಲೂ ಇzರೆ. ಕಾನೂನು ಕೈಗೆತ್ತಿಕೊಳ್ಳಬಾರದು ಎಂಬುದು ಎಲ್ಲರಿಗೂ ಗೊತ್ತಿದ್ದರೂ, ಸಮಸ್ಯೆಯ ದೂರು,
ವಿಚಾರಣೆಯನ್ನು ಸಹನೆ, ಸಂಯಮದಿಂದ ನೋಡುವ ದೃಷ್ಟಿಗೆ ಪೊರೆ ಬಂದಿದೆ. ಅವುಗಳಿಗೆ ಇಂದು ಸಮಾಜದಲ್ಲಿ ಸ್ಥಾನವಿಲ್ಲ.
ಎದುರಿಗೆ ಇದ್ದವನಿಗೆ ನಾಲ್ಕು ಬಿಗಿಯುವುದೇ ಎಲ್ಲದಕ್ಕೂ ಪರಿವಾರ ಎನ್ನುವ ಪೋಲಿಸ ವ್ಯವಸ್ಥೆಯ ಮೂಲ ಸೂತ್ರವನ್ನೇ,
ಈಗ ಭವ್ಯ ಭಾರತದ ಸಮಾಜವು ತಾರಕ ಮಂತ್ರವಾಗಿ ಸ್ವೀಕರಿಸಿದಂತಿದೆ.

ವೈದ್ಯರು ದೇವಮಾನವರಲ್ಲ: ಯಾವ ವೈದ್ಯನೂ ತನ್ನ ರೋಗಿ ಸಾಯಬೇಕೆಂದು ಕನಸಿನಲ್ಲೂ ಎನಿಸುವುದಿಲ್ಲ. ವೈದ್ಯರ
ನಿಯಂತ್ರಣದಲ್ಲಿರದ ಕಾರಣದಿಂದಾಗಿ, ಏನಾದರೂ ಅನಾಹುತ ಸಂಭವಿಸಿದಲ್ಲಿ ರೋಗಿಯ ಸಂಬಂಧಿಕರು ಮತ್ತು ಹಿತೈಷಿಗಳು ವೈದ್ಯರ ಮೇಲೆ ಹ ಮಾಡುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿವೆ. ರೋಗವನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನೀಡುವ ಔಷಧಿಗಳು ಎಷ್ಟು ಮುಖ್ಯವೋ, ವೈದ್ಯರ ಮೇಲಿನ ನಂಬಿಕೆ, ವಿಶ್ವಾಸವೂ ಅಷ್ಟೇ ಮುಖ್ಯ.

ವೈದ್ಯರು ದೇವಮಾನವರಲ್ಲ.ಅವರೂ ನಮ್ಮಂತೆ ಮನುಷ್ಯರು. ಅವರಿಗೂ ಅವರದೇ ಆದ ಇತಿಮಿತಿಗಳಿವೆ ಎಂಬುದನ್ನು ಸಮಾಜ ಅರಿಯಬೇಕು. ಆಗ ವೈದ್ಯ – ರೋಗಿಗಳ ನಡುವಿನ ಅನಾವಶ್ಯಕ ಸಂಘರ್ಷ ಅಂತ್ಯಗೊಳ್ಳಬಹುದು. ನಮ್ಮೆಲ್ಲರ ಒಳಿತು ಅಲ್ಲಿಯೇ ಅಡಗಿದೆ ಎಂಬುದನ್ನು ಮರೆಯಬಾರದು.

ಮುಷ್ಕರ ಸಮಂಜಸವೇ?: ವೈದ್ಯರು ಮತ್ತು ಸಿಬ್ಬಂದಿಗಳ ಮೇಲಿನ ಹಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇವು ವೈದ್ಯರ ಮತ್ತು ಸಿಬ್ಬಂದಿಗಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿವೆ. ಸರಕಾರ ಈ ಘಟನೆಗಳನ್ನು ಸಮಾಧಾನವಾಗಿ ನಿಭಾಯಿಸದಿರುವುದರ ಫಲವಾಗಿ ವೈದ್ಯ ಸಮುದಾಯ ಇಂದು ಬೀದಿಗಿಳಿದು ಸೇವೆಯನ್ನು ಸ್ಥಗಿತಗೊಳಿಸಿ ರೋಗಿಗಳ ಜೀವಹಾನಿಗಳಿಗೆ ಕಾರಣವಾಗುವುದು ಎಷ್ಟು ಸಮಂಜಸ? ಎಂಬ ಸಮಾಜದ ವಾದ ಒಂದು ಕಡೆಯಾದರೆ, ವೈದ್ಯರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಿ, ಅವರುಗಳು ನೆಮ್ಮದಿ ಯಿಂದ ಕಾರ್ಯನಿರ್ವಹಿಸುವ ಪರಿಹಾರವನ್ನು ನಿರ್ಮಾಣ ಮಾಡಬೇಕಾದ ಸರಕಾರಗಳು ವಿಫಲವಾಗಿರುವಾಗ, ಸಮಾಜ
ಕಣ್ಮುಚ್ಚಿ ಕುಳಿತಿರುವಾಗ ಈ ಘೋರ ಸಮಸ್ಯೆಯ ಆಳವನ್ನು ಸರಕಾರ ಮತ್ತು ಸಮಾಜಕ್ಕೆ ಮನದಟ್ಟು ಮಾಡಿಕೊಳ್ಳಲು ಇಂಥ ಮುಷ್ಕರ ಅನಿವಾರ್ಯವಲ್ಲವೆ? ಎಂಬುದು ವೈದ್ಯರ ವಾದ.