Wednesday, 11th December 2024

ಮೆಡಿಕಲ್ ಮಿನಿಸ್ಟರ್‌ ವಿರುದ್ದ ಗೆದ್ದ ಮೆಡಿಕಲ್ ಮಾಸ್ಟರ್‌

ವ್ಯಕ್ತಿ ಚಿತ್ರಣ

ಡಾ.ಜಗದೀಶ್ ಮಾನೆ

ಸಾಧನೆ ಕೇವಲ ಯಾರೊಬ್ಬರ ಸ್ವತತ್ತೂ ಅಲ್ಲ. ಯಾವುದೋ ದೊಡ್ಡ ಶ್ರೀಮಂತರ ಪ್ರಾಪರ್ಟಿ ಅಂತೂ ಖಂಡಿತವಾಗಿ ಅಲ್ಲ. ಸಾಧನೆ ಎನ್ನುವುದು ಜೀವನದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸ ಇರುವವರ ಆಸ್ತಿ. ಸಾಧಿಸಿಯೇ ತೀರುತ್ತೇನೆ ಎನ್ನುವವರ ಸ್ವತ್ತು. ಯಾರ್ ಏನ್ ಬೇಕಾದ್ರೂ ಅಂದುಕೊಳ್ಳಲಿ, ಏನ್ ಬೇಕಾದ್ರೂ ಆಗಲಿ, ಅದೆಷ್ಟೇ ಕಷ್ಟ-ನೋವುಗಳು ಬಂದು ಮೈಮೇಲೆ ಬೀಳಲಿ, ಅದಕ್ಕೆ ಡಿಚ್ಚಿಕೊಟ್ಟು ಚಿಂದಿ ಉಡಾಯಿಸಿದಂತೆ ಪಟ್ಟು ಬಿಡದೆ ಮುನ್ನುಗ್ಗುತ್ತೇನೆ ಎನ್ನುವ ಹಠ, ಛಲ, ಧಮ್ ಇರುವವರ ಸ್ವತ್ತಂತೂ ಖಂಡಿತವಾಗಿ ಹೌದು.

ಆ ಹಠ, ಛಲ ಆತ್ಮವಿಶ್ವಾಸ ಇರೋ ಸಾಧಕರೇ ನಮ್ಮ ಪ್ರದೀಪ್ ಈಶ್ವರ್. ಒಬ್ಬ ಸಾಧಕನಲ್ಲಿ ಆತ್ಮವಿಶ್ವಾಸ ಅನ್ನೋದು ಕಷ್ಟದ ಮರೆಯಲ್ಲಿ ಸೃಜನಶೀಲತೆಯಿಂದ ಬರುವಂಥದ್ದು. ಕಷ್ಟ ಬಂತು ಅಂತ ಕುಗ್ಗಿ ಹೋದರೆ ಯಾವ ಸಾಧನೆಯೂ ಆಗುವುದಿಲ್ಲ. ಕಷ್ಟ ಬಂದಾಗ ಹೇಗಿರಬೇಕೆಂದರೆ ಟೆನ್ನಿಸ್ ಬಾಲ್ ಹಾಗೆ, ಅದನ್ನು ನಿಧಾನಕ್ಕೆ ಬಿಟ್ಟರೆ ಸ್ವಲ್ಪ ಪುಡಿಯುತ್ತದೆ. ಜೋರಾಗಿ ನೆಲಕ್ಕೆ ಅಪ್ಪಳಿಸಿದರೆ ಅಷ್ಟೇ ವೇಗದಲ್ಲಿ ಎತ್ತರಕ್ಕೆ ಬರುತ್ತದೆ. ಹಾಗೇ ಕಷ್ಟಗಳು ನಮ್ಮನ್ನು ಬಹಳಷ್ಟು ಕೆಳಕ್ಕೆ ತಳ್ಳಿದಾಗ ಟೆನಿಸ್ ಬಾಲ್ ಹಾಗೆ ಪುಟಿದೆದ್ದು ಮೇಲೆ ಬರಬೇಕು.

ಮುಖ್ಯವಾಗಿ ಕಷ್ಟಗಳು ಬರುವುದು ಸಹಜ, ಆದರೆ ಎಂತಹದ್ದೇ ಕಷ್ಟ ನೋವುಗಳು ಬಂದಂತ ಸಂದರ್ಭದಲ್ಲಿ ಅವುಗಳನ್ನು ರಕ್ತ ಸಂಬಂಽಗಳ ಬಳಿಯಾಗಲಿ, ಆತ್ಮೀಯ ಸ್ನೇಹಿತರ ಬಳಿಯಾಗಲಿ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು. ಯಾಕಂದ್ರೆ, ಇವತ್ತು ನಮ್ಮ ಕಷ್ಟ ನೋವುಗಳಿಗೆ ಸ್ಪಂದಿಸುವುದಕ್ಕಿಂತ ಆ ನೋವುಗಳನ್ನು ನೋಡಿ ನಗುವವರೇ ಹೆಚ್ಚು. ಹಾಗಾಗಿ ಎಷ್ಟೇ ತೊಂದರೆಯಾದರೂ ಅವುಗಳನ್ನು ನಾವೇ ಎದುರಿಸಬೇಕು. ನಮ್ಮ ಸತತ ಪ್ರಯತ್ನ ಒಂದೊಮ್ಮೆ ಎತ್ತರಕ್ಕೆ ಕೊಂಡೊಯ್ಯುತ್ತದೆ…. ಹೌದು, ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಂತಹ ವ್ಯಕ್ತಿ, ಬಡತನದ ಬೇಗೆಯಲ್ಲಿ ಬೆಂದು ಸಾಕಷ್ಟು ಕಷ್ಟ ನೋವುಗಳನ್ನ ಅನುಭವಿಸಿ ಕೊನೆಗೆ ಯಶಸ್ಸು ಸಾಧಿಸಿ ಎಲ್ಲರಿಗೂ ಆದರ್ಶವಾದ ವ್ಯಕ್ತಿಯ ರೋಚಕ ಕಹಾನಿಯ ಕಥೆ ಇದು.

ಆತ ಯಾವತ್ತಿಗೂ ಕೂಡ ಅದೃಷ್ಟದಲ್ಲಿ ನಂಬಿಕೆ ಇಟ್ಟವನಲ್ಲ, ಬದಲಿಗೆ ಪರಿಶ್ರಮದಲ್ಲಿ ನಂಬಿಕೆ ಇಟ್ಟಿದ್ದ. ಪರಿಶ್ರಮದಲ್ಲಿ ಪರಮಾತ್ಮನಿದ್ದಾನೆ ಎಂಬು ದನ್ನು ಸತತ ಪ್ರಯತ್ನದ ಮೂಲಕ ತನ್ನದೇ ಅನುಭವದಲ್ಲಿ ಕಂಡು ಈಶ್ವರ ಆದ. ಪ್ರದೀಪ್ ಈಶ್ವರ ’ಪರಿಶ್ರಮ’ ನೀಟ್ ಅಕಾಡೆಮಿಯನ್ನು ಆರಂಭಿಸಿ ತನ್ನ ಮೊದಲ ಪ್ರಯತ್ನದಲ್ಲಿಯೇ ಯಶಸ್ಸನ್ನು ಕಂಡು ಕೋಟ್ಯಂತರ ರುಪಾಯಿ ಹಣ ಸಂಪಾದಿಸಿದ. ಆತನನ್ನು ನೋಡಿ ಆಡಿ ನಗಾಡುವವರ ಮುಂದೆ ಪುಟಿದೆದ್ದು ನಿಂತ. ಆದರೆ, ವಿಧಿ ಆತನನ್ನು ಇಷ್ಟಕ್ಕೆ ಕೈಕಟ್ಟಿ ಕೂರಿಸಲಿಲ್ಲ. ಸಾಧನೆಯ ರುಚಿ ಆತನಲ್ಲಿ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿ ಇನ್ನಷ್ಟು ಮೇಲಕ್ಕೆ ಬರಲು ಪ್ರೇರೇಪಿಸಿತು.

ಆತನಿಗೆ ಮೊದಲ ಪ್ರಯತ್ನದ ಯಶಸ್ಸಿಗಿಂತ ಎರಡನೆಯ ಯಶಸ್ಸು ಬಹಳ ದೊಡ್ಡ ಚಾಲೆಂಜ್ ಆಗಿತ್ತು. ಮೊದಲ ಪ್ರಯತ್ನದಲ್ಲಿ ಗೆದ್ದವ ಎರಡನೆಯ ಪ್ರಯತ್ನದಲ್ಲಿ ಯಾವುದೇ ಕಾರಣಕ್ಕೂ ಸೋಲಬಾರದು. ಯಾಕಂದ್ರೆ ಮೊದಲ ಪ್ರಯತ್ನದಲ್ಲಿ ಗೆದ್ದು ಎರಡನೆಯ ಪ್ರಯತ್ನದಲ್ಲಿ ಸೋತರೆ, ಮೊದಲ ಗೆಲುವು ಕೇವಲ ಅದೃಷ್ಟ ಅಂತ ಸಾಕಷ್ಟು ವಿರೋಧಿಗಳು ಹೀಯಾಳಿಸಿ ನಗಾಡುತ್ತಾರೆ. ಹಾಗಾಗಿ ಪ್ರದೀಪ್ ಈಶ್ವರನ ಎರಡನೆಯ ಗೆಲುವು ವಿರೋಧಿ ಗಳನ್ನು ನಿದ್ದೆಗೆಡುವಂತೆ ಮಾಡಿತ್ತು. ಆತನ ಗೆಲುವಿನ ಸಹಿ ಆಟೋಗ್ರಾಫ್ ಆಗಿ ಬದಲಾಗಿದೆ.

ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರದ ಪೆರೆಸಂದ್ರ ಎಂಬ ಗ್ರಾಮದಲ್ಲಿ ಮಧ್ಯಮ ಕುಟುಂಬ ಒಂದರಲ್ಲಿ ಜನಿಸುತ್ತಾನೆ. ತನ್ನ ಪ್ರಾಥಮಿಕ ಹಾಗೂ ಪ್ರೌಢ
ಶಿಕ್ಷಣವನ್ನು ಸಿದ್ಧಗಂಗಾ ಮಠದಲ್ಲಿ ಮುಗಿಸಿದ. ಆತ, ತನ್ನ ಬಾಲ್ಯದ ದಿನಗಳನ್ನು ಬಹಳ ಚೆನ್ನಾಗಿಯೇ ಕಳೆದಿದ್ದ. ಆದರೆ ಅದೇನೋ ವಿಧಿಯಾಟ
ಅಂತ ಅನಿಸುತ್ತದೆ! ದ್ವಿತೀಯ ಪಿಯುಸಿ ಓದುತ್ತಿದ್ದ. ಆ ಸಮಯದಲ್ಲಿ ನಡೆದಂತಹ ರಸ್ತೆ ಅಪಘಾತದಲ್ಲಿ ತಂದೆ-ತಾಯಿ ಇಬ್ಬರೂ ತೀರಿ ಹೋಗುತ್ತಾರೆ. ಅಪ್ಪ ಅಮ್ಮನ ಆಶ್ರಯದಲ್ಲಿ ಸುಖವಾಗಿದ್ದಂತಹ ಪ್ರದೀಪ್ ಈಶ್ವರನ ಹೆಗಲ ಮೇಲೆ ಸಾಕಷ್ಟು ಜವಾಬ್ದಾರಿಗಳು ಬೀಳುತ್ತವೆ. ಬಹಳ ಕಷ್ಟದ ಜೀವನ ವನ್ನು ಕಳೆಯಬೇಕಾಗುತ್ತದೆ, ಅದು ಯಾವ ಮಟ್ಟಿನ ಕಷ್ಟ ಅಂದ್ರೆ, ತನ್ನ ತಂದೆ ತಾಯಿಯ ಪಾರ್ಥಿವ ಶರೀರ ವನ್ನು ಸ್ವಗ್ರಾಮಕ್ಕೆ ಕೊಂಡೊ ಯ್ದಾಗ ಗಾಡಿ ಬಾಡಿಗೆ ಕೊಡಲು ಆತನ ಬಳಿ ಏಳುನೂರು ರುಪಾಯಿ ಹಣ ಇರಲಿಲ್ಲ.

ಆ ಸಂದರ್ಭದಲ್ಲಿ ಆತನಿಗೆ ಯಾರೆಲ್ಲ ರಕ್ತ ಸಂಬಂಧಿಗಳು ನೆಂಟರಿದ್ದರೋ ಅವರ್ಯಾರೂ ಕೂಡಾ ಆತನ ಸಹಾಯಕ್ಕೆ ನಿಲ್ಲಲಿಲ್ಲ. ತುತ್ತು ಅನ್ನಕ್ಕೂ ಬೀದಿ ಬೀದಿ ಅಲೆಯುತ್ತಾ, ಸಿಕ್ಕಂತಹ ಸಣ್ಣ ಪುಟ್ಟ ಕೆಲಸಗಳೆಲ್ಲವನ್ನು ಮಾಡಲಾರಂಭಿಸಿದ. ಆದರೆ ಆತನ ಒಳಗೆ ಅಡಗಿದ್ದ ಸಾಧಕ ಹೊರ ಬರುವ ಸಮಯ ಅದಾಗಿತ್ತು, ಆತನಲ್ಲಿರುವ ಅಚಲ ಆತ್ಮವಿಶ್ವಾಸ ಆತನನ್ನು ಸುಮ್ಮನೆ ಕೂಡಿಸದೆ ಪ್ರಯತ್ನದಲ್ಲಿ ಮುನ್ನುಗ್ಗುವಂತೆ ಮಾಡಿತು. ತಂದೆ ತಾಯಿಯನ್ನು ಕಳೆದುಕೊಂಡ ನೋವಲ್ಲಿ ದಿನ ಕಳೆಯುತ್ತಿದ್ದ ಪ್ರದೀಪ್ ಈಶ್ವರನಿಗೆ ಪ್ರೇರಣೆ ನೀಡಿ ಆತನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಹಿರಿಯ ಪತ್ರಕರ್ತ ಹಾಗೂ ವಿಶ್ವವಾಣಿಯ ಸಂಪಾದಕರಾದ ಶ್ರೀಯುತ ವಿಶ್ವೇಶ್ವರ ಭಟ್. ಅವರ ಸಂಪರ್ಕಕ್ಕೆ ಬಂದ ಪ್ರದೀಪ್ ಅವರ ಎಲ್ಲಾ ಕೃತಿಗಳನ್ನು ಅಧ್ಯಯನ ಮಾಡಿದ. ಜತೆಗೆ ಸಂಸದ ಪ್ರತಾಪ್ ಸಿಂಹ ರವರ ಹರಿತವಾದ ಬರಹಗಳು ಆತನ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದ್ದವು.

ಆ ಓದಿನಿಂದ ಅವನೊಳಗೊಬ್ಬ ಅಗ್ರೆಸ್ಸಿವ್ ಪರ್ಸನ್ ಹುಟ್ಟಿದ. ಅತಿ ಹೆಚ್ಚು ಓದನ್ನು ಮೈಗೂಡಿಸಿಕೊಂಡ ಪ್ರದೀಪ್ ವಿಶ್ವವಾಣಿ ಪತ್ರಿಕೆಯಲ್ಲಿ ಸಾಕಷ್ಟು ಲೇಖನಗಳನ್ನು ಬರೆಯಲಾರಂಭಿಸಿದ. ಹೀಗೆ ವಿಶ್ವೇಶ್ವರ ಭಟ್ಟರ ಗರಡಿಯಲ್ಲಿ ಬೆಳೆದು ಒಬ್ಬ ಅದ್ಭುತ ವ್ಯಕ್ತಿಯಾಗಿ ಹೊರಹೊಮ್ಮಿದ. ಪ್ರದೀಪ್ ಈಶ್ವರ್
ಮೊದಲ ವರ್ಷದ ಬಿಎಸ್‌ಸಿ ಪದವಿ ಓದುತ್ತಿದ್ದಂತಹ ಸಂದರ್ಭದಲ್ಲಿಯೇ ಟ್ಯೂಷನ್ ಕ್ಲಾಸ್ ಗಳನ್ನು ಆರಂಭಿಸುತ್ತಾನೆ.

ಆಗ ಕೇವಲ ೮೦ ಜನ ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಆತನ ಸಂಸ್ಥೆ ಮುಂದೆ ’ಪರಿಶ್ರಮ’ ನೀಟ್ ಅಕಾಡೆಮಿಯಾಗಿ ಮಾರ್ಪಟ್ಟಿತು. ಇದೀಗ ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರದೀಪ್ ಈಶ್ವರ್ ಸರ್ ಕ್ಲಾಸ್ ಅಂದ್ರೆ ಎಲ್ಲ ವಿದ್ಯಾರ್ಥಿಗಳಿಗೆ ಬಹಳ ಅಚ್ಚು ಮೆಚ್ಚು. ಅವರ ಮೋಟಿವೇಶನ್ ಟಾಕ್ ಪ್ರತಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬಡೆದಬ್ಬಿಸುತ್ತದೆ. ಅವರು ಹೇಳುತ್ತಾರೆ, ’ಸಾಧನೆ-ಪರಿಶ್ರಮ ಅಂದ್ರೆ ನಂಬಿಕೆ, ಧೈರ್ಯ, ಚದುರದ ಏಕಾಗ್ರತೆ, ಅವಮಾನಿಸಿದವರ ಮಧ್ಯೆ ಪುಟಿದೆಳುವುದು, ಸಾಧನೆ ಅಂದ್ರೆ ನಮ್ಮ ಮೊಬೈಲ್ ನಂಬರ್, ಬ್ಯಾಂಕ್ ಬ್ಯಾಲೆ ಆಗಿ ಪರಿವರ್ತಿಸುವುದು, ಪರಿಶ್ರಮ ಅಂದ್ರೆ ಒಂದೊಮ್ಮೆ ಇಡೀ ಕರುನಾಡೆ ನಮ್ಮತ್ತ ತಿರುಗಿ ನೋಡುವಂತೆ ಬೆಳೆದು ನಿಲ್ಲುವುದು’. ಹೀಗೆ ವಿದ್ಯಾರ್ಥಿಗಳಿಗೆ ಹೃದಯಸ್ಪರ್ಶಿಸುವಂತೆ ಹೇಳುತ್ತಿದ್ದರು. ಅವರ ಆ ಮಾತು ಪ್ರತಿಯೊಬ್ಬರಲ್ಲಿಯೂ ಸಾಧನೆಯನ್ನು ಮಾಡಿಯೇ ತೀರಬೇಕೆಂಬ ಗಾಢವಾದ ನಂಬಿಕೆಯನ್ನು ಜಾಗೃತಗೊಳಿಸುತ್ತದೆ.

ಪರಿಣಾಮ, ’ಪರಿಶ್ರಮ’ ನೀಟ್ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಡಾಕ್ಟರ್ ಇದ್ದಾರೆ. ಬೇರೆ ವೃತ್ತಿಯಲ್ಲಿ ಅನೇಕರು ಸಕ್ಸಸ್ ಕಂಡಿzರೆ. ಪ್ರದೀಪ್ ಈಶ್ವರ್ ಅವರ ವಿಶೇಷ ಗುಣ ಅಂದ್ರೆ, ಕಷ್ಟದಲ್ಲಿರುವಂತಹ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು
ಆರ್ಥಿಕ ಸಹಾಯವನ್ನು ಮಾಡುತ್ತ ಬಂದಿದ್ದಾರೆ. ಸುಮಾರು ೧೪ ಜನ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ
ಎಂ.ಬಿ.ಬಿ.ಎಸ್ ಓದಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿ ಮಾಡುತ್ತಿದ್ದಾರೆ. ಇದೀಗ ಪ್ರದೀಪ್ ಈಶ್ವರ್ ೨೫ ಕೋಟಿ ಒಡೆಯ.
ಒಬ್ಬ ವ್ಯಕ್ತಿ ತಾನಂದುಕೊಂಡ ಕ್ಷೇತ್ರದಲ್ಲಿ ಕಷ್ಟಪಟ್ಟು ಸಾಧನೆ ಮಾಡಬೇಕೆಂಬ ಹಟ ಛಲದಿಂದ ಪ್ರಯತ್ನಿಸುತ್ತಾನೆ. ಆ ಪ್ರಯತ್ನದಲ್ಲಿ ಯಶಸ್ಸನ್ನೂ
ಕಾಣುತ್ತಾನೆ. ವಿಽಯಾಟ ಅನ್ನೋದು ಹೇಗಿರುತ್ತದೆ ಅಂದ್ರೆ ನಾವು ಏನೇ ಮಾಡೋದಕ್ಕೆ ಪ್ರಯತ್ನ ಪಟ್ಟರೂ ನಮ್ಮನ್ನದು ಬಿಡುವುದಿಲ್ಲ. ಆ ಕಡೆ ಈ
ಕಡೆ ಸುತ್ತಾಡುವಂತೆ ಮಾಡಿ ಕೊನೆಗೆ ನಮ್ಮನ್ನು ಹಣೆ ಬರಹದ ದಿಕ್ಕಿನತ್ತಲೇ ಕರೆದೊಯ್ದು ಬಿಡುತ್ತದೆ.

ಇದೀಗ ಪ್ರದೀಪ್ ಈಶ್ವರ್ ಅವರ ಬದುಕಿನಲ್ಲಿ ಆಗಿದ್ದು ಕೂಡಾ ಹಾಗೇ. ಪ್ರದೀಪ್ ಈಶ್ವರ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯದ ವ್ಯಕ್ತಿ. ಕಾಂಗ್ರೆಸ್ ಕಚೇರಿಯ ಹಿಂದೆ- ಮುಂದೆ ಅಪ್ಪಿ-ತಪ್ಪಿ ಒಮ್ಮಿಯೂ ಸುಳಿದವರಲ್ಲ. ಕಾರಣ ಅವರೊಬ್ಬ ಉತ್ತಮ ಮಾತುಗಾರ, ಜನರನ್ನು ತನ್ನತ್ತ ಸೆಳೆದುಕೊಳ್ಳುವ ಸಾಮರ್ಥ್ಯ ಇರುವ ವ್ಯಕ್ತಿ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆ ಮೂಲಕವೇ ಆತ ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ಸಾಕಷ್ಟು ಹೆಸರು ಮಾಡಿದ್ದ. ಬಹುಮುಖ್ಯವಾಗಿ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಿರುವ ’ಬಣಜಿಗ’ ಸಮುದಾಯಕ್ಕೆ ಸೇರಿದ ವ್ಯಕ್ತಿ ಈ ಪ್ರದೀಪ್.

ಎದುರಾಳಿ ಡಾ.ಕೆ ಸುಧಾಕರ್ ಅವರು ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಹಳಷ್ಟು ಪವರ್ ಫುಲ್ ವ್ಯಕ್ತಿ. ಆಪರೇಷನ್ ಕಮಲದ ಮೂಲಕ ಚಿಕ್ಕಬಳ್ಳಾಪುರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಹಣ ಬಲ, ಜನ ಬಲ ಹಾಗೂ ಪಕ್ಷದಲ್ಲಿಯೂ ಕೂಡಾ ತನ್ನ ಪ್ರಬಲತೆಯನ್ನು ಹೆಚ್ಚಿಸಿಕೊಂಡ ವ್ಯಕ್ತಿ. ಆದರೆ ಕರೋನಾ ಸಂದಭದಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಡಾ. ಸುಧಾಕರ್ ವಿರುದ್ಧ ಕೇಳಿ ಬಂದಿದ್ದವು. ಆಗ ಡಾ. ಸುಧಾಕರ ಮೇಲಿನ ಭ್ರಷ್ಟಾಚಾರ ಆರೋಪಗಳ ವಿರುದ್ಧ ಪ್ರದೀಪ್ ಈಶ್ವರ್ ಬಹಳ ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿದರು. ಆ ಪರಿಣಾಮ, ಪ್ರದೀಪ್ ಈಶ್ವರ ಮೇಲೆ ಇಪ್ಪತ್ತಕ್ಕೂ ಹೆಚ್ಚು ಕೇಸ್ ಹಾಕಲಾಯಿತು. ಪೊಲೀಸ್ ಠಾಣೆಯ ಮುಂದೆ ಏಕಾಂಗಿಯಾಗಿ ಹೋರಾಟ ಮಾಡಿದ್ದ ಪ್ರದೀಪ್ ಈಶ್ವರ್ ಜಾಮೀನಿನ ಮೇಲೆ ಬಿಡುಗಡೆಯಾಗಿ ದ್ದರು. ಅವರ ಭ್ರಷ್ಟಾಚಾರದ ನಡೆ ಸಿದ್ದರಾಮಯ್ಯ ನವರಲ್ಲೂ ಆಕ್ರೋಶವನ್ನುಂಟು ಮಾಡಿತ್ತು.

ಹೇಗಾದರೂ ಮಾಡಿ ಡಾ. ಸುಧಾಕರ್‌ರನ್ನು ಸೋಲಿಸಿಯೇ ತೀರಬೇಕೆಂದು ಜಿದ್ದಿಗೆ ಬಿದ್ದ ಸಿದ್ದ ರಾಮಯ್ಯನವರು ಸೂಕ್ತ ಅಭ್ಯರ್ಥಿಗಾಗಿ ಹುಡು
ಕಾಟ ನಡೆಸುತ್ತಾರೆ. ಆ ಸಂದರ್ಭದಲ್ಲಿ ’ರೋಗಿ ಬಯಸಿದ್ದು ಅದನ್ನೇ ಡಾಕ್ಟರ್ ಹೇಳಿದ್ದು ಕೂಡಾ ಅದನ್ನೇ ಅನ್ನುವ ಹಾಗೆ ಸ್ಥಳೀಯ ಕಾಂಗ್ರೆಸ್
ಮುಖಂಡರಾದ ಶಿವಶಂಕರ್ ರೆಡ್ಡಿ ಹಾಗೂ ವೀರಪ್ಪ ಮೊಯ್ಲಿ ಅವರ ದೃಷ್ಟಿ ಪ್ರದೀಪ್ ಈಶ್ವರ್ ಮೇಲೆ ಬಿದ್ದಿತ್ತು. ಸಾಮಾನ್ಯವಾಗಿ ಒಬ್ಬ ಜನ ಪ್ರತಿನಿಽ
ಯಾಗಲು ಬಯಸುವವನಲ್ಲಿ ಪ್ರಾಮಾಣಿಕತೆ, ಜನರ ಮೇಲೆ ಪ್ರೀತಿ, ಕಾಳಜಿ, ದೂರ ದೃಷ್ಟಿ ಇರಬೇಕಾಗುತ್ತದೆ.

ಈ ಎಲ್ಲಾ ಗುಣಗಳು ಪ್ರದೀಪ್ ಈಶ್ವರ್ ಅವರಲ್ಲಿವೆ. ಹಾಗಾಗಿ ಅವರು ಅಚ್ಚರಿಯಂತೆ ಕಾಂಗ್ರೆಸ್ ನ ಸರಳ ಆಯ್ಕೆಯಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಡಾಕ್ಟರ್ ಕೆ.ಸುಧಾಕರ್ ಅವರ ವಿರುದ್ಧ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆರಂಭದಲ್ಲಿ ಚುನಾವಣಾ ಪ್ರಚಾರ ಅಷ್ಟೊಂದು ಕಾವು ಪಡೆದುಕೊಂಡಿರಲಿಲ್ಲ. ಇವರ ಪ್ರತಿಸ್ಪರ್ಧಿ ಡಾ. ಕೆ ಸುಧಾಕರ್ ಅವರಂತೂ ತಮಗೆ ಯಾರೂ ಪ್ರತಿಸ್ಪರ್ಧಿಯೇ ಇಲ್ಲ ಎನ್ನುವ ಭ್ರಮೆಯಲ್ಲಿದ್ದರು. ತದನಂತರ ಪ್ರದೀಪ್ ಈಶ್ವರನ ಮಾತುಗಳು ಯುವಕರನ್ನೆಲ್ಲ ಹುರಿದುಂಬಿಸಲಾರಂಬಿಸಿದವು, ಅವರ ಪ್ರಚಾರದ ಭಾಷಣಗಳು, ಕಡಕ್ ಡೈಲಾಗ್ ಗಳು ಸಾಕಷ್ಟು ವೈರಲ್ ಆದವು. ಅವರ ನಮ್ರವಿನಂತಿ ಜನಸಾಮಾನ್ಯರ ಹೃದಯ ತಟ್ಟಿತು.

ಪರಿಣಾಮ ಚಿಕ್ಕಬಳ್ಳಾಪುರ ಕ್ಷೇತ್ರ ಕೊನೆ ಕೊನೆಗೆ ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸುತ್ತದೆ. ಪ್ರದೀಪ್ ಈಶ್ವರ್ ಗೆಲ್ಲುತ್ತಾರೆ ಅಂತ ಯಾರೊಬ್ಬರೂ ಕೂಡಾ ಭಾವಿಸಿರಲಿಲ್ಲ! ಮತದಾನ ಮುಗಿದ ಕೊನೆ ಕ್ಷಣದವರೆಗೂ ನಾನೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿದ್ದ ಸುಧಾಕರ್ ಅವರಿಗೆ ಪ್ರದೀಪ್ ಈಶ್ವರ್ ವಿರುದ್ಧ ತಾವು ಸೋಲುತ್ತೇವೆ ಎಂಬ ಒಂದೇ ಒಂದು ಸಣ್ಣ ಕಲ್ಪನೆ ಕೂಡ ಅವರಲ್ಲಿರಲಿಲ್ಲ. ಅಚ್ಚರಿ ಅಂದ್ರೆ ಮೇ ೧೩ನೇ
ತಾರೀಕು ಮಧ್ಯಾಹ್ನದ ವೇಳೆ ಫಲಿತಾಂಶದಲ್ಲಿ ಮೆಡಿಕಲ್ ಮಿನಿಸ್ಟರ್ ವಿರುದ್ಧ ಗೆದ್ದು ಬಿಗಿದ್ದ ಮೆಡಿಕಲ್ ಮಾಸ್ಟರ್ ಪ್ರದೀಪ್ ಈಶ್ವರ್!

ಈಗ ಪ್ರದೀಪ್ ಈಶ್ವರ್ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿzರೆ. ಅವರ ಪರಿಶ್ರಮದ ಸಾಧನೆಯನ್ನು ಕಂಡ ಅನೇಕರಿಗೆ ‘ವಾರೆ ವ್ಹಾ! ಹಟ-ಛಲ, ಆತ್ಮವಿಶ್ವಾಸ ಅನ್ನೋದು ಇದ್ರೆ ಹೀಗಿರಬೇಕಪ್ಪಾ’ ಅನ್ನೋ ಹಾಗಾಗಿದೆ. ಪ್ರದೀಪ್ ಈಶ್ವರ್ ಶಾಸಕರಾಗಿ ಆಯ್ಕೆಯಾದ ಕ್ಷಣದಿಂದಲೇ ಪ್ರತಿ ಹಳ್ಳಿಯ ಪ್ರತಿಯೊಂದು ಮನೆಗಳಿಗೂ ಭೇಟಿ ಕೊಟ್ಟು ಅವರ ಕಷ್ಟಗಳನ್ನು ಆಲಿಸುತ್ತ ನೊಂದ ಮನಸ್ಸುಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸುತ್ತಿದ್ದಾರೆ.

ಇಂತಹ ವ್ಯಕ್ತಿಗಳು ಅದು ಯಾವುದೇ ಪಕ್ಷದಲ್ಲಿರಲಿ ಅವರನ್ನು ನಾನೊಬ್ಬ ಅಂಕಣಕಾರನಾಗಿ ಪಕ್ಷಾತೀತವಾಗಿ ಅತ್ಯಂತ ಪ್ರೀತಿಯಿಂದ ಪ್ರದೀಪ್ ಈಶ್ವರರನ್ನು ಗೌರವಿಸುತ್ತೇನೆ. ಅವರು ಮತ್ತಷ್ಟು ಎತ್ತೆತ್ತರಕ್ಕೆ ಬೆಳೆಯಬೇಕು. ಇಂತಹ ನೈಜ ಸೇವೆಯ ದೃಷ್ಟಿ ಇರುವ ಶಾಸಕರ ಸಂಖ್ಯೆ ಮತ್ತಷ್ಟು
ಹೆಚ್ಚಾಗುವ ಮೂಲಕ ರಾಜ್ಯ ಅಭಿವೃದ್ಧಿಯಾಗಲೆಂದು ಆಶಿಸುತ್ತೇನೆ. ನಮ್ಮ ಪಾಡಿಗೆ ನಾವು ಬರೆಯುವ ಬರಹ, ಇನ್ಯಾರದೋ ಬದುಕಿಗೆ ಸ್ಫೂರ್ತಿ ಆಗುತ್ತದೆ ಅಂದ್ರೆ ಅದು ನನಗೆ ಬಹಳ ಸಂತೋಷ Once upon congratulations pradeep sir.