Saturday, 14th December 2024

ಅವನು ವೈದ್ಯಕೀಯ ಗ್ರಂಥಗಳನ್ನು ಸುಟ್ಟುಬಿಟ್ಟ !

ಹಿಂದಿರುಗಿ ನೋಡಿದಾಗ

ಫಿಲಿಪಸ್ ಔರೀಲಿಯಸ್ ಥಿಯೋಫ್ರೇಸ್ಟಸ್ ಬೊಂಬಾಸ್ಟಸ್ ವಾನ್ ಹೋಹೆನ್‌ಹೀಮ್ (1493-1541) ಎಂಬ ಉದ್ದ ಹೆಸರಿನ ಸ್ವಿಸ್ -ಜರ್ಮನ್ ವೈದ್ಯ, ರಸವಾದಿ, ದೈವತಾಶಾಸ್ತ್ರಜ್ಞ ಮತ್ತು ಜರ್ಮನ್ ಪುನರುತ್ಥಾನ ಕಾಲದ ದಾರ್ಶನಿಕನ ಕಥೆಯಿದು.

ನಮ್ಮ ಗದುಗಿನ ನಾರಣಪ್ಪ, ತನ್ನನ್ನು ತಾನು ‘ಕುಮಾರವ್ಯಾಸ’ ಎಂದು ಕರೆದುಕೊಂಡ. ತಾನು ‘ವ್ಯಾಸ ಮಹರ್ಷಿಯಷ್ಟು ದೊಡ್ಡವನಲ್ಲ, ಅವನ ಮಗನ ಸಮಾನ’ ಎಂದು ನಮ್ರತೆಯಿಂದ ಹೇಳಿಕೊಂಡ. ಆದರೆ ಈ ಸ್ವಿಸ್-ಜರ್ಮನ್ ವೈದ್ಯ ತನ್ನನ್ನು ‘ಪ್ಯಾರಸೆಲ್ಸಸ್’ ಎಂದು ಹೆಮ್ಮೆಯಿಂದ ಕರೆದುಕೊಂಡ. ಸೆಲ್ಸಸ್ ಎಂದು ಖ್ಯಾತನಾದ ರೋಮನ್ ವೈದ್ಯ ಔಲಸ್ ಕಾರ್ನೀಲಿಯಸ್ ಸೆಲ್ಸಸ್ (ಕ್ರಿ.ಪೂ. 25-ಕ್ರಿ. ಶ. 50) ‘ಡಿ ಮೆಡಿಸಿನ’ ಎಂಬ ಅದ್ಬುತ ವೈದ್ಯಕೀಯ ಗ್ರಂಥ ಬರೆದ ಪ್ರತಿಭಾಶಾಲಿ. ಪ್ರತಿಭೆಯಲ್ಲಿ ತಾನು ಆ ಸೆಲ್ಸಸ್‌ನನ್ನು ಮೀರಿಸಿದವನು ಎಂಬ ಗ್ರಹಿಕೆಯಲ್ಲಿ ಪ್ಯಾರಸೆಲ್ಸಸ್ ಎಂಬ ಹೆಸರಿಟ್ಟುಕೊಂಡ ಈ ಸ್ವಿಸ್-ಜರ್ಮನ್ ವೈದ್ಯ. ಹೀಗಾಗಿ ವೈದ್ಯಕೀಯ ಇತಿಹಾಸ ದಲ್ಲಿ ಈತ ತನ್ನ ಮೂಲ ಹೆಸರಿಗಿಂತ ಪ್ಯಾರಸೆಲ್ಸಸ್ ಎಂದೇ ಹೆಸರಾಗಿದ್ದಾನೆ.

ಪ್ಯಾರಸೆಲ್ಸಸನಿಗೆ ರಸಾಯನ ಶಾಸ್ತ್ರದ ಪಿತಾಮಹ, ಔಷಧ ವಿಜ್ಞಾನದ ಸುಧಾರಕ, ವೈದ್ಯಕೀಯ ಕ್ಷೇತ್ರದ ಲ್ಯೂಥರ್, ಆಧುನಿಕ ರಸಾಯನ ಚಿಕಿತ್ಸೆಯ ಪಿತಾಮಹ, ವಿಷ ವೈದ್ಯಕೀಯದ ಪಿತಾಮಹ ಎಂಬ ಅನೇಕ ಬಿರುದುಗಳು ಸಂದಿವೆ. ಈತ ಲಿಯೋನಾರ್ಡೊ ಡ ವಿಂಚಿ, ಮಾರ್ಟಿನ್ ಲ್ಯೂಥರ್ (ರೋಮನ್ ಕ್ಯಾಥೋಲಿಕ್ ಧರ್ಮದಲ್ಲಿದ್ದ ದೋಷಗಳನ್ನು ಎತ್ತಿ ತೋರಿಸಿ, ಅದರಿಂದ ಹೊರಬಂದು ‘ಪ್ರಾಟೆಸ್ಟಾಂಟ್ಸ್’ ಎಂಬ ಪ್ರತ್ಯೇಕ ಪಂಗಡ ಸ್ಥಾಪಿಸಿದವನು) ಮತ್ತು ನಿಕೋಲಸ್ ಕೋಪರ್ನಿಕಸ್ ಮುಂತಾದವರ ಸಮಕಾಲೀನ.

ಪ್ಯಾರಸೆಲ್ಸಸ್ ಸ್ವಿಜರ್ಲೆಂಡಿನ ಜ಼ುರಿಕ್ ಬಳಿಯ ಒಂದು ಹಳ್ಳಿಯಲ್ಲಿ ಹುಟ್ಟಿದ. ತಂದೆ ವಿಲ್‌ಹೆಲ್ಮ್ ಬೊಂಬಾಸ್ಟ್ ವಾನ್ ಹೋಹೆನ್‌ಹೀಮ್. ಈತ ವೈದ್ಯನೂ ರಸವಾದಿಯೂ ಆಗಿದ್ದ. ತಾಯಿ ಸ್ವಿಸ್ ಮೂಲದವಳು. ಈಕೆ ೧೫೦೨ರಲ್ಲಿ ತೀರಿಕೊಂಡಾಗ, ದಕ್ಷಿಣ ಆಸ್ಟ್ರಿಯ ಸಾಮ್ರಾಜ್ಯದ, ಕಾರಿಂಥಿಯ ಪ್ರದೇಶದ ವೆಲ್ಲಾಚ್ ಎಂಬಲ್ಲಿಗೆ ಬಂದು ಅಲ್ಲಿನ ಮುನಿಸಿಪಲ್ ನಗರಸಭೆಯ ವೈದ್ಯನಾಗಿ ರಸಾಯನ ವಿಜ್ಞಾನವನ್ನು ಬೋಧಿಸಲಾರಂಬಿಸಿದ.

ಅಪ್ಪನ ಪ್ರಭಾವದಿಂದಾಗಿ ರಸಾಯನ-ಜೀವವಿಜ್ಞಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಪ್ಯಾರಸೆಲ್ಸಸ್, ಸ್ವತಂತ್ರ ಚಿಂತನೆಯುಳ್ಳವನಾಗಿ, ಹಟಮಾರಿಯಾಗಿ, ತಾನು ನಂಬಿರುವುದೇ ಸತ್ಯ ಎಂದು ವಾದಿಸಬಲ್ಲ ಯುವಕನಾಗಿ ಬೆಳೆದ. ಅಪ್ಪನಂತೆ ತಾನೂ ವೈದ್ಯನೂ ರಸಾಯನ ವಿಜ್ಞಾನಿಯೂ ಆಗಲು ನಿರ್ಧರಿಸಿ, 16ನೇ ವಯಸ್ಸಿನಲ್ಲಿ ವೈದ್ಯಕೀಯ ಅಧ್ಯಯನ ಆರಂಭಿಸಿದ.

ಬಾಸೆಲ್ ವಿ.ವಿ.ಯಿಂದ ವೈದ್ಯಕೀಯ ಪದವಿ, ಫೆರಾರ ವಿ.ವಿ.ಯಿಂದ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದ. ಪ್ಯಾರಸೆಲ್ಸಸ್ ಬದುಕಿದ್ದ ಅವಧಿ ಯು ನವೋದಯ ಮಾನವತಾವಾದದ ಕಾಲ (ರಿನೇಸಾನ್ಸ್ ಹ್ಯೂಮನಿಸಮ್ ಪೀರಿಯಡ್) ಆಗಿತ್ತು. ಆಗಿನ ವಿದ್ವಾಂಸರು-ಬುದ್ಧಿಜೀವಿಗಳು ಮನುಕುಲ ಅದುವರೆಗೂ ಸತ್ಯವೆಂದು ನಂಬಿದ್ದ, ತಲೆಮಾರಿನಿಂದ ಹರಿದುಬಂದಿದ್ದ ಎಲ್ಲ ಜ್ಞಾನಪ್ರಕಾರಗಳನ್ನು ಪ್ರಶ್ನಿಸಲಾರಂಭಿಸಿದರು. ಈ ಹಿನ್ನೆಲೆಯಲ್ಲೇ ಮಾರ್ಟಿನ್ ಲ್ಯೂಥರ್, ಕ್ರೈಸ್ತಧರ್ಮದ ರೋಮನ್ ಕ್ಯಾಥೋಲಿಕ್ ದೃಷ್ಟಿಕೋನವನ್ನು ಪ್ರಶ್ನಿಸಿ, ಪ್ರಾಟಿಸ್ಟಾಂಟ್ ಧರ್ಮ ಹುಟ್ಟಲು ಕಾರಣನಾಗಿ, ಕ್ರೈಸ್ತ ಧರ್ಮದಲ್ಲಿ ಹೊಸ ಸಂಚಲನ ಮೂಡಿಸಿದ.

ಪ್ಯಾರಸೆಲ್ಸಸ್ ಹುಟ್ಟಿನಿಂದ ತಾನು ನಂಬಿರುವುದನ್ನು ಧೈರ್ಯವಾಗಿ ಪ್ರತಿಪಾದಿಸಬಲ್ಲವನೂ ಹೊಂದಾಣಿಕೆ ಮಾಡಿಕೊಳ್ಳದವನೂ ಆಗಿದ್ದರಿಂದ ಎಲ್ಲವನ್ನೂ ಪ್ರಶ್ನಿಸತೊಡಗಿದ. ಮೊದಲಿಗೆ ‘ಈ ವಿಶ್ವವಿದ್ಯಾಲಯಗಳು ಜ್ಞಾನದ ಎಲ್ಲ ಆಯಾಮಗಳನ್ನು ಕಲಿಸುವುದಿಲ್ಲ’ ಎಂದು ಘೋಷಿಸಿದ.
ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ ದೇಶ- ವಿದೇಶ ಸುತ್ತಿ ಪಠ್ಯಗಳಲ್ಲಿ ಇಲ್ಲದ, ಅಧ್ಯಾಪಕರು ಕಲಿಸಲಾಗದ ಹೊಸ ವಿಚಾರಗಳನ್ನು ಕಲಿಯಬೇಕು ಎಂದ.

ವೈದ್ಯನೊಬ್ಬನು ಅಡಗೂಲಜ್ಜಿ, ಅಲೆಮಾರಿ, ಮಂತ್ರವಾದಿ, ಕಳ್ಳ ಹೀಗೆ ಪ್ರತಿಯೊಬ್ಬ ವ್ಯಕ್ತಿಯಿಂದ ಒಂದಲ್ಲ ಒಂದು ವಿಚಾರ ಕಲಿಯಬಹುದು; ಹಾಗಾಗಿ ಕೋಶ ಓದಿದರೆ ಸಾಲದು, ದೇಶವನ್ನೂ ಸುತ್ತಿ ಕಲಿಯಬೇಕು, ಅನುಭವವೇ ನಿಜವಾದ ಜ್ಞಾನ ಎಂದು ಘೋಷಿಸಿದ. 1517-1524ರವರೆಗೆ ಇಟಲಿ, ಫ್ರಾನ್ಸ್, ಸ್ಪೇನ್, ಪೋರ್ಚುಗಲ್, ಇಂಗ್ಲೆಂಡ್, ಜರ್ಮನಿ, ಸ್ಕ್ಯಾಂಡಿನೇವಿಯ, ಪೋಲೆಂಡ್, ರಷ್ಯಾ, ಹಂಗರಿ, ಕ್ರೊಯೇಶಿಯ, ರೋಡ್ಸ್, ಕಾನ್‌ಸ್ಟಾಂಟಿ ನೋಪಲ್ ಮುಂತಾದ ದೇಶಗಳಲ್ಲಿ ಸಂಚರಿಸಿ, ರಸಾಯನ ವಿಜ್ಞಾನ ಮತ್ತು ವೈದ್ಯಕೀಯದಲ್ಲಿ ಅಲ್ಲಿ ನಡೆದಿರುವ ಹೊಸ ಬೆಳವಣಿಗೆಗಳನ್ನು ಗ್ರಹಿಸಿದ.

ಪ್ಯಾರಸೆಲ್ಸಸ್ ತನ್ನ ಲೋಕಪಯಣದಲ್ಲಿ ಮಾನವ ಬದುಕಿನ ಮೂಲಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ ಅವಕ್ಕೆ ಉತ್ತರ ಕಂಡುಕೊಳ್ಳಲು ಯತ್ನಿಸಿದ. ಹುಟ್ಟು, ಸಾವು, ಆರೋಗ್ಯ ಎಂದರೇನು? ಆರೋಗ್ಯ ಮತ್ತು ರೋಗಗಳಿಗೆ ಕಾರಣವಾದ ಆಂತರಿಕ-ಬಾಹ್ಯಶಕ್ತಿಗಳು ಯಾವವು? ಬ್ರಹ್ಮಾಂಡ ವೆಂದರೇನು, ಇದನ್ನು ನಿರ್ಮಿಸಿದ್ದು ದೇವರೇ? ಅವನೆಲ್ಲಿದ್ದಾನೆ? ಬ್ರಹ್ಮಾಂಡದಲ್ಲಿ ನನ್ನ ಸ್ಥಾನವೇನು? ಹೀಗೆ ತನ್ನದೇ ದಾರ್ಶನಿಕತೆಯ ಹಿನ್ನೆಲೆಯಲ್ಲಿ, ಸಿದ್ಧಸೂತ್ರ ಮೂರ್ತಿಭಂಜಕನಾಗಿ, ಬ್ರಹ್ಮಾಂಡ ವಿಜ್ಞಾನಗಳ (ಥಿಯಾಲಜಿ) ಹಿನ್ನೆಲೆಯಲ್ಲಿ ಪ್ಯಾರಸೆಲ್ಸಸ್ ತನ್ನದೇ ಆದ ಚಿಕಿತ್ಸಾ ವಿಧಾನವನ್ನು ರೂಪಿಸಿಕೊಂಡ. ಹಾಗಾಗಿ ಸಮಕಾಲೀನ ಜಗತ್ತು ಈತನನ್ನು ವೈದ್ಯವಿಜ್ಞಾನದ ಮಾರ್ಟಿನ್ ಲ್ಯೂಥರ್ ಎನ್ನಲಾರಂಭಿಸಿತು.

ಅರಿಸ್ಟಾಟಲ್, ಗ್ಯಾಲನ್ ಮುಂತಾದ ಗ್ರೀಕ್ ಮತ್ತು ರೋಮನ್ ವೈದ್ಯರು ಮನುಷ್ಯನ ಆರೋಗ್ಯವನ್ನು 4 ರಸಗಳು (ಕಫ, ರಕ್ತ, ಕಪ್ಪುರಕ್ತ, ಹಳದಿ ರಕ್ತ) ನಿಯಂತ್ರಿಸುತ್ತವೆ ಎಂದು ನಂಬಿದ್ದರು. ಇದನ್ನು ಇಡೀ ಯೂರೋಪಿನ ವೈದ್ಯಕೀಯ ಸಮುದಾಯವೂ ನಂಬಿತ್ತು. ಪ್ಯಾರಸೆಲ್ಸಸ್ ಇದನ್ನು ಅಲ್ಲಗಳೆದು, ಲವಣ (ಸ್ಥಿರತೆಯ ಸೂಚಕ), ಗಂಧಕ (ದಹನಶೀಲ ಗುಣಸೂಚಕ) ಮತ್ತು ಪಾದರಸ (ದ್ರವ್ಯತೆಯ ಸೂಚಕ) ಎಂಬ 3 ರಸಗಳ ತನ್ನದೇ ಆದ ಹೊಸ
ಸಿದ್ಧಾಂತವನ್ನು ಮಂಡಿಸಿದ. ಇವುಗಳ ನಡುವಿನ ಸಂತುಲನ ತಪ್ಪಿದಾಗ ಅನಾರೋಗ್ಯ ಉಂಟಾಗುತ್ತದೆ ಎಂದ.

ಆ ಕಾಲದಲ್ಲಿ, ಮನುಷ್ಯನ ಆರೋಗ್ಯ ಹಾಗೂ ಭವಿಷ್ಯವನ್ನು ಗ್ರಹ-ನಕ್ಷತ್ರಗಳು ನಿರ್ಧರಿಸುತ್ತವೆಯೆಂದು ಜನಸಾಮಾನ್ಯರು ಮಾತ್ರವಲ್ಲದೆ ವೈದ್ಯರೂ ನಂಬಿದ್ದರು. ಅದನ್ನು ಸುಳ್ಳೆಂದ ಪ್ಯಾರಸೆಲ್ಸಸ್, ನಮ್ಮ ದೇಹದ ಆರೋಗ್ಯದ ಏರುಪೇರಿಗೆ ಶರೀರದ ಹೊರಗಿನ ಹಲವು ಘಟಕಗಳು ಕಾರಣವಾಗುತ್ತದೆ ಎಂದು ರೋಗಜನಕ ಸಿದ್ಧಾಂತದ ಪರಿಕಲ್ಪನೆಗೆ ಇಂಬುಕೊಟ್ಟ. ಆಗೆಲ್ಲಾ ಗಾಯಗಳಲ್ಲಿ ಕೀವು ತುಂಬುವುದು ರೋಗಿಯ ಒಳ್ಳೆಯದಕ್ಕೇ ಎಂದು ಭಾವಿಸಿದ್ದ
ಜನರು, ಗಾಯಗಳಿಗೆ ಒಣಗಿದ ಹಾವಸೆ ಇಲ್ಲವೇ ಸಗಣಿ ಕಟ್ಟುತ್ತಿದ್ದರು. ರಕ್ತವಿಮೋಚನೆ ಮಾಡುತ್ತಿದ್ದರು. ಇದನ್ನು ಪ್ರತಿಭಟಿಸಿದ ಪ್ಯಾರಸೆಲ್ಸಸ್, ಗಾಯದಲ್ಲಿ ಸಂಗ್ರಹವಾಗಿರುವ ಕೀವನ್ನು ಹೊರಹರಿಸಬೇಕು, ಗಾಯವನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕೆಂದ. ಗಾಯಗಳಲ್ಲಿ ಸೋಂಕಾಗುವುದನ್ನು ತಪ್ಪಿಸಿದರೆ, ಯಾವ ಚಿಕಿತ್ಸೆಯಿಲ್ಲದೆಯೇ ಪ್ರಕೃತಿ ಗಾಯವನ್ನು ಮಾಯಿಸುವುದೆಂದ.

ಹೀಗೆ ಅಂದು ಪ್ರಚಲಿತದಲ್ಲಿದ್ದ ಚಿಕಿತ್ಸಾ ವಿಧಾನಗಳೆಲ್ಲ ನಿಷ್ಪ್ರಯೋಜಕವಾದವು ಎಂದು ಉಗ್ರವಾಗಿ ಪ್ರತಿಭಟಿಸಿದ. ಪ್ಯಾರಸೆಲ್ಸಸ್ ಲೋಕಸಂಚಾರ ಮುಗಿಸಿ ಬಂದ ಮೇಲೆ, ೧೯೨೪-೨೭ರವರೆಗೆ ವಲ್ಲಾಚ್ ನಗರಸಭೆಯ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಮತ್ತು ಬಾಸೆಲ್ ವಿ.ವಿ.ಯಲ್ಲಿ ಪಾಠ ಹೇಳುತ್ತಿದ್ದ. ಈತನ ತರಗತಿಗಳು ಪ್ರಖ್ಯಾತವಾದವು. ಯೂರೋಪಿನ ವಿಭಿನ್ನ ಭಾಗಗಳಿಂದ ವಿದ್ಯಾರ್ಥಿಗಳು ಬಂದು ಈತನ ಪಾಠ ಕೇಳುತ್ತಿದ್ದರು.

ವಿಶ್ವವಿದ್ಯಾಲಯದಲ್ಲಿನ ಬೋಧನಾ ವೈಖರಿ ಮತ್ತು ವೈದ್ಯರು ಪರಿಪಾಲಿಸುತ್ತಿದ್ದಾ ಚಿಕಿತ್ಸಾ ಕ್ರಮಗಳಿಂದ ಬೇಸತ್ತ ಪ್ಯಾರಸೆಲ್ಸಸ್ ಜೂನ್ ೨೪,
1527ರಂದು, ವಿ.ವಿ.ಯ ಮುಂಭಾಗದಲ್ಲಿ ವಿದ್ಯಾರ್ಥಿಗಳು, ವೈದ್ಯರು, ಸಾರ್ವಜನಿಕರ ಎದುರು, ಅಂದಿನ ಯೂರೋಪಿನಲ್ಲಿ ಪ್ರಮಾಣಬದ್ಧ ವೈದ್ಯಕೀಯ ಪಠ್ಯಗಳೆಂದು ಹೆಸರಾಗಿದ್ದ ಗ್ಯಾಲನ್, ಅವಿಸೆನ್ನ ಮುಂತಾದವರ ಗ್ರಂಥಗಳನ್ನು ಬಹಿರಂಗವಾಗಿ ಸುಟ್ಟ! ಈ ಕೃತ್ಯದಿಂದ ಆತ ವಿ.ವಿ.ಯಿಂದ ನಿರ್ಗಮಿಸಬೇಕಾಯಿತು.

1530ರಲ್ಲಿ ಸಿಫಿಲಿಸ್ ಸೋಂಕಿನ ಸ್ವರೂಪವನ್ನು ವರ್ಣಿಸಿದ ಪ್ಯಾರಸೆಲ್ಸಸ್, ಪಾದರಸ ಸಂಯುಕ್ತವನ್ನು ಲೆಕ್ಕಾಚಾರದಲ್ಲಿ ಸೇವಿಸುವುದರಿಂದ ಸಿಫಿಲಿಸ್ ಗುಣವಾಗುತ್ತದೆಯೆಂದ. ಗಣಿಕಾರ್ಮಿಕರಿಗೆ ಬರುವ ಕಾಯಿಲೆಗೆ (ಮೈನರ್ಸ್ ಡಿಸೀಸ್) ಬೆಟ್ಟದ ಅಧಿದೇವತೆಗಳು ಕಾರಣವೆಂದು ನಂಬಿದ್ದ ದಿನಗಳಲ್ಲಿ ಪ್ಯಾರಸೆಲ್ಸಸ್, ಗಣಿಯ ಲೋಹಮಿಶ್ರಿತ ಧೂಳನ್ನು ಉಸಿರಾಡುವುದೇ ಈ ಕಾಯಿಲೆಗೆ ಕಾರಣವೆಂದ. ಇಂದು ಆ ಕಾಯಿಲೆಗೆ ಸಿಲಿಕೋಸಿಸ್ ಎನ್ನಲಾಗುತ್ತದೆ. ಗಳಗಂಡ ಕಾಯಿಲೆ ಬರುವುದಕ್ಕೆ ಕುಡಿಯುವ ನೀರಿನಲ್ಲಿ ಕರಗಿರುವ ಲೋಹಗಳು (ಮುಖ್ಯವಾಗಿ ಸೀಸ) ಕಾರಣವಾಗಿರಬಹುದೆಂದ ಪ್ಯಾರಸೆಲ್ಸಸ್, ರೋಗಗಳು ನಿರ್ದಿಷ್ಟ ಅಂಗಕ್ಕೆ ಮಾತ್ರ ಸೀಮಿತವಾಗಿರಲು ಸಾಧ್ಯ, ಅಂಥ ವೇಳೆ ಇಡೀ ದೇಹಕ್ಕೆ ಚಿಕಿತ್ಸೆ ಅನಗತ್ಯವೆಂದು ಹೇಳಿ ವಿಷವೈದ್ಯಕೀಯಕ್ಕೆ
ನಾಂದಿಹಾಡಿದ.

ಮುಳ್ಳನ್ನು ಮುಳ್ಳಿನಿಂದ ತೆಗೆಯುವಂತೆ ವಿಷವನ್ನು ವಿಷದಿಂದ ನಿವಾರಿಸಬಹುದೆಂದ. ಒಂದು ವಸ್ತುವು ಆಹಾರವೋ ವಿಷವೋ ಎಂಬುದು ನಾವು
ಸೇವಿಸುವ ಪ್ರಮಾಣವನ್ನು ಅವಲಂಬಿಸಿರುತ್ತದೆಯೆಂದ. ಒಂದು ವಿಷದಿಂದ ರೂಪುಗೊಂಡ ಅನಾರೋಗ್ಯವನ್ನು ಅದೇ ವಿಷವನ್ನು ಅತ್ಯಂತ ಸಾರರಿಕ್ತ (ಡೈಲ್ಯೂಟ್) ರೂಪದಲ್ಲಿ ಸೇವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ತೋರಿಸಿ ಇಂದಿನ ಹೋಮಿಯೋಪಥಿ ವೈದ್ಯಪದ್ಧತಿಗೆ ಅಂದೇ ಬುನಾದಿ ಹಾಕಿದ.

1534ರಲ್ಲಿ ಪ್ಲೇಗ್ ಯೂರೋಪಿನ ಮೇಲೆ ಅಪ್ಪಳಿಸಿದಾಗ, ಪ್ಲೇಗ್ ಪೀಡಿತರ ಮಲವನ್ನು ಸೂಜಿ ಸಹಾಯದಿಂದ ಸಂಗ್ರಹಿಸಿದ ಪ್ಯಾರಸೆಲ್ಸಸ್ ಅದನ್ನು ಬ್ರೆಡ್‌ನಲ್ಲಿಟ್ಟು ರೋಗಿಗಳಿಗೆ ತಿನ್ನಲು ನೀಡುವ ಮೂಲಕ ಅನೇಕರನ್ನು ಗುಣಪಡಿಸಿದ ಎನ್ನಲಾಗಿದೆ. ಪಾದರಸ, ಕಬ್ಬಿಣ, ಗಂಧಕ, ಕಬ್ಬಿಣ ಮತ್ತು ಕಾಪರ್ ಸಲೇಟ್ ಘಟಕಗಳನ್ನು ಒಳಗೊಂಡ ಅನೇಕ ಹೊಸ ಔಷಧಗಳನ್ನು ರೂಪಿಸಿ, ವೈದ್ಯಕೀಯದಲ್ಲಿ ರಾಸಾಯನಿಕ ವಿಜ್ಞಾನಕ್ಕೆ ಭದ್ರವಾದ ಸ್ಥಾನವನ್ನು ಕಲ್ಪಿಸಿದ ಪ್ಯಾರಸೆಲ್ಸಸ್. ದೈವೀಕ ಶಕ್ತಿ ಮತ್ತು ಮೃಗೀಯ ಶಕ್ತಿ ಎಂಬ ೨ ರೀತಿಯ ಶಕ್ತಿಗಳು ಮನುಷ್ಯನ ಮೇಲೆ ಯಾವಾಗಲೂ ಪ್ರಭಾವ ಬೀರುತ್ತಿರುತ್ತವೆ.

ಅವು ಪರಸ್ಪರ ವಿರುದ್ಧವಾದವು. ಮನೋರೋಗ ತಲೆದೋರಲು ದೆವ್ವಗಳು ಕಾರಣವಲ್ಲ. ಮನಸ್ಸು/ ಇಚ್ಛೆ/ಸ್ಪಿರಿಟ್/ಸೋಲ್ ಎನ್ನುವುದು ದೇಹ ಸಂಬಂಧಿತ ಕಾಯಿಲೆಗಳನ್ನು ಉಂಟುಮಾಡುವುದರ ಜತೆಗೆ ಅವನ್ನು ಗುಣಪಡಿಸಬಲ್ಲವು ಎಂದು ಇಂದಿನ ಮನೋದೈಹಿಕ ಬೇನೆಗಳ ಬಗ್ಗೆ ಹೊಸ ಬೆಳಕನ್ನೇ ಚೆಲ್ಲಿದ ಪ್ಯಾರಸೆಲ್ಸಸ್, ಒಬ್ಬ ವ್ಯಕ್ತಿಯ ಆರೋಗ್ಯವನ್ನು ಉತ್ತಮ ಮಾನಸಿಕ ಆರೋಗ್ಯ ಮತ್ತು ನಿರ್ಮಲ ಚಾರಿತ್ರ್ಯವು ನಿರ್ಧರಿಸುತ್ತವೆ ಎಂದ.
ಮನಸ್ಸು ಆರೋಗ್ಯವಾಗಿರಲು ನಿದ್ರೆ ಮತ್ತು ಶಾಮಕಗಳು (ಸೆಡೇಟಿವ್ಸ್) ಅಗತ್ಯವೆಂದ. ತಾನು ತಯಾರಿಸಿದ್ದ ಗಂಧಕ ಸಂಯುಕ್ತಗಳು ಒಳ್ಳೆಯ ನಿದ್ರೆ ತರುವುದರಿಂದ ಮಾನಸಿಕ ರೋಗಗಳನ್ನು, ಗಾಯಗಳನ್ನು ಗುಣಪಡಿಸುತ್ತವೆ ಎಂದು ನಂಬಿದ್ದ.

ವೈದ್ಯಕೀಯಕ್ಕೆ ಸಂಬಂಧಿಸಿ ಪ್ಯಾರಸೆಲ್ಸಸ್ ೩೦ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ. ಹಾಗಾಗಿ ರಿನೇಸಾನ್ಸ್ ಅವಧಿಯಲ್ಲಿಯೇ ತರ್ಕಬದ್ಧ ಹಾಗೂ ಸಾಕ್ಷ್ಯಾ ಧಾರಿತ ವೈದ್ಯಕೀಯಕ್ಕೆ ಆತ ಮೊದಲ ಅಡಿಗಲ್ಲನ್ನಿಟ್ಟ ಎನ್ನಬಹುದು.