Wednesday, 11th December 2024

ಕನ್ನಡ ವೈದ್ಯಕೀಯ ಸಾಹಿತ್ಯ ನಡೆದು ಬಂದ ದಾರಿ

ಸ್ವಾಸ್ಥ್ಯ ಸಂಪದ

yoganna55@gmail.com

ವೈದ್ಯಕೀಯ ವಿಜ್ಞಾನವು ಮನುಷ್ಯನ ಜೀವ ಮತ್ತು ಜೀವನವನ್ನು ರಕ್ಷಿಸುವ ಮತ್ತು ಪೋಷಿಸುವ ವೈಜ್ಞಾನಿಕ ಮತ್ತು ತಾತ್ವಿಕ ಅಂಶಗಳನ್ನೊಳಗೊಂಡ, ಮನುಷ್ಯನ ಬದುಕಿಗೆ ಹತ್ತಿರವಾದ ಮತ್ತು ಅವಶ್ಯಕವಾದ ಜ್ಞಾನ.

ಪ್ರತಿಯೊಬ್ಬರಿಗೂ ಅವರವರ ದೇಹರಚನೆ, ಕಾರ್ಯಗಳು, ಆರೋಗ್ಯವನ್ನು ನಿಯಂತ್ರಿಸುವ ಅಂಶಗಳು ಮತ್ತು ತಗಲಬಹುದಾದ ಕಾಯಿಲೆಗಳ ಬಗ್ಗೆ ಅರಿವಿದ್ದಲ್ಲಿ ದೇಹವನ್ನು ರಕ್ಷಿಸಿ ಕೊಳ್ಳಲು ಸಹಕಾರಿಯಾಗುತ್ತದೆ. ಮಾತೃಭಾಷೆಯಲ್ಲಿ ವೈದ್ಯವಿಜ್ಞಾನ ಲಭ್ಯವಿದ್ದಲ್ಲಿ ಮಾತ್ರ ಇದು ಸಾಧ್ಯವಾದುದರಿಂದ ಕನ್ನಡ ಭಾಷೆಯಲ್ಲಿ ವೈದ್ಯ ವಿಜ್ಞಾನ ಸಾಹಿತ್ಯದ ಸೃಷ್ಟಿ ಅತ್ಯವಶ್ಯಕ. ಈ ದಿಕ್ಕಿನಲ್ಲಿ ಹಲವಾರು ಪ್ರಯತ್ನಗಳು ನಿರಂತರ ನಡೆದುಕೊಂಡು ಬಂದಿವೆ.

ಕನ್ನಡ ವೈದ್ಯ ಬರಹಗಾರರ ಸಮ್ಮೇಳನ

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯಶಾಖೆ ಕನ್ನಡದಲ್ಲಿ ವೈದ್ಯವಿಜ್ಞಾನ ಬೆಳೆಸುವ ಅವಶ್ಯಕತೆಯನ್ನು ಮನ ಗಂಡು ಕನ್ನಡ ವೈದ್ಯ ಬರಹಗಾರರ ಬಳಗ ರಚಿಸಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. 2019ರಲ್ಲಿ ಪ್ರಾರಂಭ ವಾದ ಈ ಬಳಗದಡಿಯಲ್ಲಿ ಮಂಗಳೂರಿನಲ್ಲಿ ಡಾ.ಎಸ್.ಪಿ. ಯೋಗಣ್ಣನವರ ಅಧ್ಯಕ್ಷತೆಯಲ್ಲಿ ಪ್ರಥಮ ಕನ್ನಡ ವೈದ್ಯ ಬರಹಗಾರರ ರಾಜ್ಯಮಟ್ಟದ ಸಮ್ಮೇಳನ ಜರುಗಿತು.

ಬೆಂಗಳೂರಿನಲ್ಲಿ ಕ್ಷಕಿರಣ ಪ್ರಾಧ್ಯಾಪಕರಾದ ಡಾ. ಸರೋಜ ಅಧ್ಯಕ್ಷತೆಯಲ್ಲಿ 2ನೇ ಸಮ್ಮೇಳನ ಜರುಗಿತು. ಇದೇ ಆಗಸ್ಟ್ 27, 28 ರಂದು ಧಾರವಾಡದಲ್ಲಿ ಹಿರಿಯ ವೈದ್ಯ ಸಾಹಿತಿ ಡಾ. ಪಿ.ಎಸ್. ಶಂಕರ್ ಅವರ ಅಧ್ಯಕ್ಷತೆಯಲ್ಲಿ 3ನೇ ಸಮ್ಮೇಳನ ಜರುಗಲಿದೆ.

ಭಾಷೆ ಮತ್ತು ಕಲಿಕಾ ಹಂತ

ಮಾತೃಭಾಷೆಯಲ್ಲಿ ವೈದ್ಯ ವಿಜ್ಞಾನದ ಕಲಿಕೆಯ ಅವಶ್ಯಕತೆ ಮತ್ತು ಉಪಯೋಗವನ್ನು ಅರ್ಥ ಮಾಡಿಕೊಳ್ಳಲು ಕಲಿಕೆಯಲ್ಲಿ ಭಾಷೆಯ ಪ್ರಾಮುಖ್ಯವನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕ.

ಮನುಷ್ಯನ ಭಾವನೆಗಳು, ಸೃಷ್ಟಿಯ ವಿಚಾರಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅಭಿವ್ಯಕ್ತಗೊಳಿಸುವ ಮಾಧ್ಯಮ ಭಾಷೆ. ಭಾಷೆಯಲ್ಲಿ ಮಿದುಳಿನ ಹಂತದಲ್ಲಿ ಶ್ರವ್ಯ ಮತ್ತು ದೃಶ್ಯ ಅಂಗಗಳಿಂದ ಒಳಬರುವ ಸಂವೇದನೆಗಳನ್ನು ಅರ್ಥಮಾಡಿಕೊಳ್ಳುವ ‘ಗ್ರಹಿಕಾಹಂತ’ (ರಿಸೆಪ್ಟೀವ್ -ಸ್) ಮತ್ತು ಈ ಸಂವೇದನೆಗಳಿಗನುಗುಣವಾಗಿ ಮಾತಿನ ಮೂಲಕ, ಬರವಣಿಗೆಯ ಮೂಲಕ ಅಥವಾ ಸಂeಗಳ ಮೂಲಕ ಪ್ರಚುರಪಡಿಸುವ ‘ಅಭಿವ್ಯಕ್ತಿಯ ಹಂತ’ (ಎಕ್ಸ್‌ಪ್ರೆಸಿವ್ ಫೇಸ್) ಎಂಬ ಎರಡು ಹಂತಗಳಿದ್ದು ಇವೆಲ್ಲಕ್ಕೂ ಸಂವಹನಾಶೀಲ ಸಶಕ್ತ ಮಾಧ್ಯಮ ಭಾಷೆ. ಭಾಷೆ ಹೇಗೆ ಉಗಮವಾತು? ಸೃಷ್ಟಿಕರ್ತ ಯಾರು? ಮನುಷ್ಯನೇ ಭಾಷೆಯನ್ನು
ಕಂಡುಕೊಂಡನೋ ಅಥವಾ ಇವೆಲ್ಲವೂ ಸೃಷ್ಟಿಕರ್ತನಿಂದಲೇ ಪೂರ್ವ ನಿಗದಿತವಾಗಿ ಸೃಷ್ಟಿಯಾಗಿವೆಯೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನಿಗೂಢವಾದರೂ ಇಂದು ಪ್ರಪಂಚಾದ್ಯಂತ ಮಾತನಾಡುವ ಭಾಷೆಗಳು ಸುಮಾರು 6500ದಷ್ಟಿವೆ.

ಅನಧಿಕೃತವಾಗಿ ಚಾಲ್ತಿಯಲ್ಲಿರುವ ಭಾಷೆಗಳ ಸಂಖ್ಯೆ ಇನ್ನೂ ನಿಗೂಢ. ಭಾರತದಲ್ಲಿಯೇ ಮಾತನಾಡುವ ಭಾಷೆಗಳು ಸುಮಾರು 1800. ಇವುಗಳಲ್ಲಿ ಸುಮಾರು 120 ಭಾಷೆಗಳು ವ್ಯಾಪಕವಾಗಿದ್ದು, ಇವುಗಳಲ್ಲಿ 22 ಭಾಷೆಗಳು ಸಾಂವಿಧಾನಿಕ ಅನುಮೋದನೆ ಪಡೆದಿವೆ. ಅವುಗಳಲ್ಲಿ ಕನ್ನಡವೂ ಒಂದು.

ಮಾತೃಭಾಷೆ ಮತ್ತು ಕಲಿಕೆ

ಮನುಷ್ಯನ ಮಿದುಳಿಗೆ ಅಸಂಖ್ಯಾತ ಭಾಷೆಗಳನ್ನು ಕಲಿಯುವ ಜನ್ಮದತ್ತವಾದ ಅದಮ್ಯ ಶಕ್ತಿಯಿದ್ದರೂ ಪ್ರತಿಯೊಬ್ಬರಿಗೂ ತಾಯಿಯ ಗರ್ಭದಿಂದಲೇ ಮೊದಲು ಅಭ್ಯಾಸವಾಗುವುದು ಅವರವರ ಮಾತೃಭಾಷೆ. ಗರ್ಭಕೂಸಿಗೆ ತಾಯಿ ಆಡುವ ಭಾಷೆ ಮತ್ತು ಪರಿಸರದಲ್ಲಿ ಮತ್ತಿತರರು ಆಡುವ ಭಾಷೆ ಅರ್ಥವಾಗುತ್ತದೆಯೆಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವುದು ಮಾತೃಭಾಷೆಯ ಪ್ರಾಮುಖ್ಯವನ್ನು ಸಾದರಪಡಿಸುತ್ತದೆ. ಮಾತೃಭಾಷೆಯಲ್ಲಿ ವಿಷಯ ಗ್ರಹಿಸುವುದು, ಮಂಥನಮಾಡುವುದು ಮತ್ತು ಅಭಿವ್ಯಕ್ತಗೊಳಿಸುವುದು ಸುಲಭ. ಭಾವದ ಭಾಷೆ ಮಾತೃಭಾಷೆ.

ಮನುಷ್ಯನ ಭಾವದ ಎರಡು ಉತ್ತುಂಗ ತುದಿಗಳಾದ ಸಂತೋಷ ಮತ್ತು ಅಸಂತೋಷಗಳೆರಡರ ಸ್ಥಿತಿಗಳಲ್ಲೂ ಅವನ ಭಾವ ದಿಢೀರನೆ ಸ್ವಯಂಪ್ರೇರಿತವಾಗಿ ವ್ಯಕ್ತವಾಗುವುದು ಮಾತೃಭಾಷೆಯಲ್ಲಿಯೇ. ಮಾತೃಭಾಷೆ ರಕ್ತಗತ ಭಾಷೆ. ಬದುಕುವ ಜ್ಞಾನವನ್ನು ಸುಲಭವಾಗಿ ತಿಳಿಯಲು ಸಾಧ್ಯವಾಗುವುದೂ ಮಾತೃಭಾಷೆಯಲ್ಲಿಯೇ. ಭಾವ ಮತ್ತು ಬದುಕುಗಳೆರಡರ ಭಾಷೆ ಮಾತೃಭಾಷೆ ಯಾದಾಗ ಮಾತ್ರ ಮನುಷ್ಯನ ಬದುಕು ಹಸನಾಗಲು ಸಾಧ್ಯ. ಈ ಕಾರಣಕ್ಕಾಗಿಯೇ ಮಾತೃಭಾಷೆಯಲ್ಲಿಯೇ ಎಲ್ಲ ಶಿಕ್ಷಣವನ್ನು ನೀಡಬೇಕು.

ಆರೋಗ್ಯ ಸಾಹಿತ್ಯದ ವ್ಯಾಪ್ತಿ 

ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯವನ್ನು “ಅದು ಕಾಯಿಲೆ ಇಲ್ಲದ ಅಥವಾ ಊನತೆ ಇಲ್ಲದ ಸ್ಥಿತಿಯಾಗಿರದೆ, ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಲೈಂಗಿಕವಾಗಿ, ಆಧ್ಯಾತ್ಮಿಕವಾಗಿ ಇರುವ ಸುಸ್ಥಿತಿ” ಎಂದು ವ್ಯಾಖ್ಯಾನಿಸಿದೆ. ಆರೋಗ್ಯ ಸಾಹಿತ್ಯವೂ ದೇಹದ ರಚನೆ, ಕಾರ್ಯಗಳು, ಮನಸ್ಸಿನ ಕಾರ್ಯ ಮತ್ತು ಅವ್ಯವಸ್ಥೆಗಳು, ಸಾಮಾಜಿಕ ವ್ಯವಸ್ಥೆಗಳು ಮತ್ತು ಪರಿಸರ, ಲೈಂಗಿಕ ವಿಚಾರಗಳು ಹಾಗೂ ಅಧ್ಯಾತ್ಮಕ್ಕೆ ಸಂಬಂಧಿಸಿದ ಸಾಹಿತ್ಯಗಳನ್ನು ಒಳಗೊಂಡಿದ್ದು, ಇದರ ವ್ಯಾಪ್ತಿ ಇನ್ನಿತರ ಸಾಹಿತ್ಯ ಗಳಿಗಿಂತ ವಿಸ್ತಾರವಾದುದು.

ಇದು ವೈದ್ಯವಿಜ್ಞಾನ ಮತ್ತು ಪರಿಸರಜ್ಞಾನ, ಆರೋಗ್ಯ ಮತ್ತು ಅನಾರೋಗ್ಯದ ಸ್ಥಿತಿಗಳು, ಆಧ್ಯಾತ್ಮ ಮತ್ತು ತತ್ವಶಾಸಗಳನ್ನು ಒಳಗೊಂಡಿದೆ. ಕನ್ನಡ ಆರೋಗ್ಯ ಸಾಹಿತ್ಯದ ಬೆಳವಣಿಗೆಯನ್ನು ಕ್ರಿಶ. 17-18ನೇ ಶತಮಾನಕ್ಕೂ ಹಿಂದೆ ಆಯುರ್ವೇದ, ಯೋಗ, ಪ್ರಕೃತಿ ವಿಜ್ಞಾನ, ಹೋಮಿಯೋಪತಿ, ಯುನಾನಿ ಇತ್ಯಾದಿ ಪದ್ಧತಿಗಳ ಸಾಹಿತ್ಯಗಳನ್ನು ಮಾತ್ರ ಒಳಗೊಂಡ ‘ಪ್ರಾಚೀನ ಕನ್ನಡ ಆರೋಗ್ಯ ಸಾಹಿತ್ಯ’ ಮತ್ತು 17-18ನೇ ಶತಮಾನದ ನಂತರ ಬೆಳವಣಿಗೆಯಾದ ‘ಆಧುನಿಕ ಕನ್ನಡ ಆರೋಗ್ಯ ಸಾಹಿತ್ಯ’ದ ಬೆಳವಣಿಗೆ ಎಂದು ಗುರುತಿಸಬಹುದು 17-18ನೇ ಶತಮಾನದ ನಂತರವೂ ಪ್ರಾಚೀನ ಕನ್ನಡ ಆರೋಗ್ಯ ಸಾಹಿತ್ಯದ ಬೆಳವಣಿಗೆ ಮುಂದುವರಿದಿದೆ.

ಆಧುನಿಕ ಕನ್ನಡ ಆರೋಗ್ಯ ಸಾಹಿತ್ಯದ ಪ್ರಾರಂಭಿಕ ಬೆಳವಣಿಗೆ ಯನ್ನು 17-18ನೇ ಶತಮಾನದಿಂದೀಚೆಗೆ ಗುರುತಿಸಬಹು ದಾಗಿದೆ. ಸಮಗ್ರ ಆರೋಗ್ಯ ಸಾಹಿತ್ಯ ಮನುಷ್ಯನ ದೇಹ ಮತ್ತು ಅದರ ಕ್ರಿಯೆಗಳನ್ನು ಅರ್ಥಮಾಡಿಕೊಂಡು ಆರೋಗ್ಯವನ್ನು ವೃದ್ಧಿಸುವ, ಅನಾರೋಗ್ಯವನ್ನು ನಿವಾರಿಸುವ ವೈಜ್ಞಾನಿಕ ಮಾಹಿತಿಗಳು, ಮನುಷ್ಯನ ಹುಟ್ಟಿನಿಂದಲೆ ಪ್ರಾರಂಭವಾಗಿವೆ ಎಂಬುದಕ್ಕೆ ನಿದರ್ಶನಗಳಿವೆ.

ಸುಮಾರು 20 ಕೋಟಿ ವರ್ಷಗಳ ಹಿಂದೆ ಪ್ರಾರಂಭವಾದ ಮಾನವ ಸಂತತಿ ಹಿಂದಿನ ಆದಿಮಾನವನಿಂದ ಹಿಡಿದು ಇಂದಿನ ಆಧುನಿಕ ಮಾನವನ ಹಂತದವರೆಗೆ ಉನ್ನತಿಯ ಹಾದಿಯಲ್ಲಿಯೇ ವಿಕಾಸಗೊಂಡಿರುವುದು ಇದಕ್ಕೆ ಜ್ವಲಂತ ಸಾಕ್ಷಿ. ಆಧುನಿಕ ವೈದ್ಯವಿಜ್ಞಾನದ ಅಲೋಪತಿಯ ಆಯಸ್ಸು ಗರಿಷ್ಠ ಸುಮಾರು 600 ರಿಂದ 700ವರ್ಷಗಳಾಗಿದ್ದು, ಅದಕ್ಕೂ ಹಿಂದಿನಿಂದ ಇದ್ದ ಆಯುರ್ವೇದ, ಯೋಗ, ನ್ಯಾಚುರೋಪತಿ, ನಾಟಿವೈದ್ಯ, ಸಿದ್ಧವೈದ್ಯ, ಗ್ರೀಕ್ ಪದ್ಧತಿ, ಚೈನೀಸ್ ವೈದ್ಯಪದ್ಧತಿಗಳೆಲ್ಲವೂ ಆಯಾಯ ಕಾಲಘಟ್ಟದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವ ಕಾರಣದಿಂದಲೆ ಮಾನವ ಇಂದಿನ ಉನ್ನತ ವಿಕಾಸಸ್ಥಿತಿ ತಲುಪಿರು ವುದು.

ಯಾವ ವೈದ್ಯಪದ್ಧತಿಯನ್ನೂ ಅಲ್ಲಗಳೆಯುವಂತಿಲ್ಲ. ಎಲ್ಲ ವೈದ್ಯಪದ್ಧತಿಗಳ ಒಳಿತುಗಳನ್ನು ಆಯ್ದುಕೊಂಡ ಸಮಗ್ರ ವೈದ್ಯ
ಪದ್ಧತಿಯ ನೀತಿ ಇಂದಿನ ಅಗತ್ಯವಾಗಿದ್ದು, ಈ ದಿಕ್ಕಿನಲ್ಲಿ ವೈಜ್ಞಾನಿಕ ದೃಷ್ಟಿಕೋನದ ಸಮಗ್ರ ಆರೋಗ್ಯ ಸಾಹಿತ್ಯದ ಸೃಷ್ಟಿ ಅತ್ಯಗತ್ಯವಾಗಿದೆ. ಸಕಾರಾತ್ಮಕ ಆರೋಗ್ಯವೃದ್ಧಿಗೆ ಭಾರತೀಯ ಪ್ರಾಚೀನ ವೈದ್ಯಪದ್ಧತಿಗಳು ಮತ್ತು ತುರ್ತುಸಂದರ್ಭದಲ್ಲಿ ಆಧುನಿಕ ವೈದ್ಯವಿಜ್ಞಾನದ ಅಲೋಪತಿ ನೀತಿಗನುಸಾರವಾಗಿ ಈ ವೈದ್ಯಪದ್ಧತಿಗಳೆರಡರ ಸಮಯೋಚಿತ, ಸಂಯೋಜಿತ, ಸಮಗ್ರ ವೈದ್ಯ ಪದ್ಧತಿಯ ಅನುಷ್ಠಾನ ಅತಿಮುಖ್ಯವಾಗಿದ್ದು, ಈ ದಿಕ್ಕಿನಲ್ಲಿ ವೈದ್ಯಕೀಯ ಸಾಹಿತ್ಯ ಸೃಷ್ಟಿಯಾಗಿ ವೈದ್ಯಕೀಯ ಶಿಕ್ಷಣ ರೂಪುಗೊಳ್ಳುವುದು ಅತ್ಯವಶ್ಯಕ.

ಕನ್ನಡಭಾಷೆಯ ಹಿರಿಮೆ-ಗರಿಮೆ
ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸದ್ದು, ಇಂದು ಆಧುನಿಕ ವೈದ್ಯವಿಜ್ಞಾನ ಪ್ರಚಲಿತವಾಗಿರುವ ಆಂಗ್ಲಭಾಷೆಗಿಂತಲೂ ಸುಮಾರು 10 ಶತಮಾನಗಳಷ್ಟು ಕನ್ನಡಭಾಷೆ ಪ್ರಾಚೀನವಾದುದು. ಆಂಗ್ಲಭಾಷೆಯ ಉಗಮವನ್ನು ಸುಮಾರು 10ನೇ ಶತಮಾನಕ್ಕೆ ಗುರುತಿಸಬಹುದಾಗಿದ್ದು, ಆಂಗ್ಲಭಾಷೆ ಯಲ್ಲಿ ವೈದ್ಯವಿಜ್ಞಾನದ ಮಹತ್ತರ ಬೆಳವಣಿಗೆಯನ್ನು
ಗರಿಷ್ಠ 12ನೇ ಶತಮಾನದಿಂದೀಚೆಗೆ ಗುರುತಿಸಬಹುದಾಗಿದೆ. ಅಂದರೆ ಆಂಗ್ಲಭಾಷೆಯಲ್ಲಿನ ಆಧುನಿಕ ವೈದ್ಯವಿಜ್ಞಾನದ ಆಯಸ್ಸು ಗರಿಷ್ಠ ೮೦೦ ವರ್ಷಗಳು.

ಆದರೆ ಭಾರತೀಯ ಪ್ರಾಚೀನ ವೈದ್ಯಪದ್ಧತಿಯ ಉಗಮಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸ, ಕನ್ನಡ ಭಾಷೆಯಲ್ಲಿ ಇದರ ಉಗಮಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಆಂಗ್ಲಭಾಷೆಯ ವೈದ್ಯವಿಜ್ಞಾನಕ್ಕಿಂತ ಕನ್ನಡದ ವೈದ್ಯವಿಜ್ಞಾನಕ್ಕೆ ಹೆಚ್ಚಿನ ಆಯಸ್ಸಾಗಿದೆ ಎಂಬುದು ನಿರ್ವಿವಾದ. ಕನ್ನಡ ಭಾಷೆಗೆ ವೈದ್ಯವಿಜ್ಞಾನವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಇದೆ ಎಂಬುದಕ್ಕೆ ಈ ಐತಿಹಾಸಿಕ ಸಂಗತಿಯೇ ಸಾಕ್ಷಿ.

ಪ್ರಾಚೀನ ಆರೋಗ್ಯ ಸಾಹಿತ್ಯ

ಭಾರತೀಯ ಭಾಷೆಗಳಲ್ಲಿ ಪ್ರಕೃತಿಗೆ ಹತ್ತಿರವಾಗಿರುವ ಪ್ರಾಕೃತ ಭಾಷೆ ಮೊಟ್ಟಮೊದಲ ಭಾಷೆಯಾಗಿದ್ದು, ಇದು ಪರಿಷ್ಕೃತ ಗೊಂಡು ಸಂಸ್ಕೃತದ ಉಗಮವಾತು. ಎಲ್ಲ ಜ್ಞಾನಗಳು ಪ್ರಾರಂಭದಲ್ಲಿ ಸಂಸ್ಕೃತದಲ್ಲಿ ಲಭ್ಯವಿದ್ದು, ವೈದ್ಯವಿಜ್ಞಾನವೂ ಇದಕ್ಕೆ  ಹೊರತಾಗಿಲ್ಲ. ಕ್ರಿ.ಶ. 11ನೇ ಶತಮಾನದ ಚಾಲುಕ್ಯ ರಾಜಕುಮಾರ ಕೀರ್ತಿವರ್ಧನನ ‘ಗೋವೈದ್ಯ’ ಕೃತಿ ಸಂಸ್ಕೃತದ ಪ್ರಾಚೀನ ವೈದ್ಯಗ್ರಂಥವೆಂದು ಉಲ್ಲೇಖಿಸಲಾಗಿದೆ.

ತದನಂತರ ಜೈನಪಂಡಿತ ಜಗದ್ದಳ ಸೋಮನಾಥ ಕ್ರಿ.ಶ. 5ನೇ ಶತಮಾನದ ಪೂಜ್ಯಪಾದರ ‘ಕಲ್ಯಾಣಕಾರಕ’ವೆಂಬ ಸಂಸ್ಕೃತ ಗ್ರಂಥವನ್ನು ಪದ್ಯರೂಪದ ‘ಕರ್ನಾಟಕ ಕಲ್ಯಾಣ ಕಾರಕ’ವೆಂದು ಅನುವಾದಿಸಿದ್ದು, ಇದನ್ನು ಕನ್ನಡದ ನರವೈದ್ಯಗಳ ಸಾಲಿನಲ್ಲಿ ಪ್ರಥಮ ಗ್ರಂಥವೆಂದು ಪರಿಗಣಿಸಲಾಗಿದೆ. ಜೈನಕ ಅಮೃತನಂದಿ ಎಂಬುವರು 1300ರಲ್ಲಿ ‘ಅಕಾರಾದಿ ವೈದ್ಯ  ನಿಘಂಟು’ ಎಂಬ ಕೃತಿಯನ್ನು, ಇದು ಕನ್ನಡ ವೈದ್ಯ ಪದಗಳನ್ನೊಳಗೊಂಡ ಪ್ರಥಮ ವೈದ್ಯ ನಿಘಂಟು ಎನ್ನಬಹುದಾಗಿದೆ. ಕನ್ನಡದಲ್ಲಿ ಪ್ರಕಟ ವಾದ ಮೊದಲ ಆರೋಗ್ಯ ಕೃತಿ ಚಂದ್ರರಾಜನ ‘ಮದನ ತಿಲಕ ಕಾಮಶಾಸ್ತ್ರ’.

ಆರೋಗ್ಯ ವಚನ ಸಾಹಿತ್ಯ

12ನೇ ಶತಮಾನದಲ್ಲಿ ವಚನಕಾರರು ಆರೋಗ್ಯದ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ಕಾರ್ಯ ಮಾಡಿದ್ದು, ಈ ಪೈಕಿ ಶರಣ ವೈದ್ಯ ಸಂಗಣ್ಣನಿಗೆ (ಕ್ರಿ.ಶ.1190) ಆರೋಗ್ಯವನ್ನು ಕನ್ನಡದಲ್ಲಿ ಪ್ರಚುರಪಡಿಸಿದ ಪ್ರಥಮವೈದ್ಯ ಎಂಬ ಹೆಗ್ಗಳಿಕೆ ಯಿದೆ. ಕನ್ನಡ ದಲ್ಲಿ ವೈದ್ಯಸಾಹಿತ್ಯದ, ಅದರಲ್ಲೂ ಆಧ್ಯಾತ್ಮಿಕ ಆರೋಗ್ಯ ಸಾಹಿತ್ಯದ ವ್ಯಾಪಕ ಮತ್ತು ಪ್ರಥಮ ಬೆಳವಣಿಗೆ ಯನ್ನು ವಚನ ಸಾಹಿತ್ಯದಲ್ಲಿ ಗುರುತಿಸಬಹುದಾಗಿದ್ದು, ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ ಮತ್ತು ಸಿದ್ದರಾಮ ಮುಂತಾದ ಶರಣರು ಇದರ ಹರಿಕಾರರಾಗಿದ್ದಾರೆ.

ಆಧುನಿಕ ವೈದ್ಯತಜ್ಞರಾದ ಡಾ. ಪಿ.ಎಸ್. ಶಂಕರ್, ಡಾ. ಎಚ್.ಎ. ಪಾರ್ಶ್ವನಾಥ್ ಇತ್ಯಾದಿ ವೈದ್ಯರು ವಚನ ಸಾಹಿತ್ಯದಲ್ಲಿನ ಆರೋಗ್ಯ ವಿಚಾರಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಕೃತಿಗಳನ್ನು ರಚಿಸಿದ್ದಾರೆ.

ಆಯುರ್ವೇದ
ಯೋಗ ಮತ್ತು ಆಯುರ್ವೇದಕ್ಕೆ ೫೦೦೦ ವರ್ಷಗಳ ಇತಿಹಾಸವಿದೆ. 1929ರಿಂದ 1933ರ ಅವಧಿಯಲ್ಲಿ ಆಯುರ್ವೇದ ಪಂಡಿತರು ಗಳಾದ ತಾರಾನಾಥ, ದ.ಕೃ. ಭಾರಧ್ವಾಜ, ಎಂ. ಗೋಪಾಲಕೃಷ್ಣರಾಯರು, ಡಿ. ರಾವ್ ಮೊದಲಾದವರು ವೈದ್ಯಕೀಯ ಸಾಹಿತ್ಯಕ್ಕೆ ಸಂಬಂಧಿಸಿದ ‘ದಾಂಪತ್ಯ ಜ್ಞಾನ’, ‘ಆಹಾರ ಜ್ಞಾನ’, ‘ಜನನ ನಿಯಂತ್ರಣ’ದಂಥ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

1972ರಲ್ಲಿ ಕೆ.ಆರ್. ಶ್ರೀಕಂಠಮೂರ್ತಿ ಅವರು ಬರೆದ ‘ಕರ್ನಾಟಕ ಆಯುರ್ವೇದ ಇತಿಹಾಸ’ ಕೃತಿ ಪರಾಮರ್ಶನ ಗ್ರಂಥ ವಾಗಿದ್ದು, ಆಯುರ್ವೇದದ ಆಳವಾದ ಜ್ಞಾನವನ್ನೊಳಗೊಂಡಿದೆ. ಈ ಕ್ಷೇತ್ರದಲ್ಲಿ ಹಲವು ಕೃತಿ ರಚಿಸಿರುವ ವೈದ್ಯರಾದ ಡಾ.ವಸುಂಧರ ಭೂಪತಿ, ಮೈಸೂರಿನ ಡಾ. ಎ.ಎಸ್. ಚಂದ್ರಶೇಖರ್, ವೈದ್ಯರಲ್ಲದಿದ್ದರೂ ಆಯುರ್ವೇದದ ಬಗ್ಗೆ ಆಳಜ್ಞಾನ ಹೊಂದಿದ್ದು, ‘ಸ್ವಯಂವೈದ್ಯ’, ‘ಅಂಗಮರ್ಧನ’ ಎಂಬ ಮಹತ್ಕೃತಿಗಳನ್ನು ಬರೆದ, ‘ತಿರುಕ’ ಕಾವ್ಯನಾಮದಿಂದ ಪ್ರಸಿದ್ಧರಾದ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು, ಜಾನಪದ ವೈದ್ಯಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ‘ಕನ್ನಡ ಜಾನಪದ ವೈದ್ಯ’ ಎಂಬ ಕೃತಿ ಪ್ರಕಟಿಸಿದ ಸಾಹಿತಿ ಡಾ. ಮಳಲಿ ವಸಂತಕುಮಾರ್ ಇವರುಗಳು ೧೯ನೇ ಶತಮಾನದಿಂದೀಚೆಗೆ ಪ್ರಾಚೀನ ಆರೋಗ್ಯ ಸಾಹಿತ್ಯ ವನ್ನು ಬೆಳೆಸಿದ ಅಗ್ರಗಣ್ಯರು.

ಆಧುನಿಕ ವೈದ್ಯ ವಿಜ್ಞಾನದ ವೈದ್ಯರಾಗಿದ್ದರೂ ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಇತ್ಯಾದಿ ಆರೋಗ್ಯ ಸಾಹಿತ್ಯಕ್ಕೂ ಕೊಡುಗೆ ನೀಡಿರುವ ವೈದ್ಯರುಗಳಲ್ಲಿ ಡಾ.ಎಂ. ಶಿವರಾಂ, ಡಾ. ನಾಗರತ್ನ ಮತ್ತು ಡಾ. ಎಸ್.ಪಿ. ಯೋಗಣ್ಣ ಪ್ರಮುಖರು.
ಹೋಮಿಯೋಪತಿ ಆರೋಗ್ಯ ಸಾಹಿತ್ಯ ಯುರೋಪಿನಿಂದ ಭಾರತಕ್ಕೆ ಬಳುವಳಿಯಾಗಿ ಬಂದ ವೈದ್ಯಪದ್ಧತಿ ಇದಾಗಿದ್ದು, ಕರ್ನಾಟಕದಲ್ಲೂ ಜನಪ್ರಿಯವಾಗಿದೆ.

ಹೋಮಿಯೋಪತಿ ಕನ್ನಡ ಆರೋಗ್ಯ ಸಾಹಿತ್ಯವನ್ನು ಸೃಷ್ಟಿಸುತ್ತಿರುವ ವೈದ್ಯರುಗಳಲ್ಲಿ ಡಾ. ಬಿ.ಟಿ. ರುದ್ರೇಶ್, ಡಾ. ಬಿ.ಸಿ. ಸುಬ್ಬರಾವ್, ಡಾ. ಮಾಧವ ಕುಲಕರ್ಣಿ, ಡಾ. ಎಂ.ಸಿ. ಮನೋಹರ ಪ್ರಮುಖರಾಗಿದ್ದಾರೆ.

(ಮುಂದುವರಿಯುತ್ತದೆ)