Friday, 13th December 2024

ಮೆಲಾಂಕಲಿಯೆಂಬ ಮನೋರೋಗಕ್ಕೆ ಮದ್ದುಂಟು

ಹಿಂದಿರುಗಿ ನೋಡಿದಾಗ

ನಮ್ಮ ದೇಹಕ್ಕೆ ರೋಗಗಳು ಬರುವ ಹಾಗೆ ಮನಸ್ಸಿಗೂ ರೋಗಗಳು ಬರುತ್ತವೆ. ಮನಸ್ಸಿಗೆ ರೋಗಗಳು ಬಂದಾಗ, ಸೂಕ್ತ ಉಪಚಾರ ದಿಂದ ಅವನ್ನೂ ಗುಣ ಪಡಿಸಲು ಸಾಧ್ಯವಿದೆ. ಈ ತಿಳಿವಳಿಕೆಯಿಲ್ಲದ ಮನುಷ್ಯ ಮನೋ ರೋಗಕ್ಕೆ ಮದ್ದಿಲ್ಲ ಎಂದು ಗಾದೆ ಯನ್ನು ಮಾಡಿದ್ದುಂಟು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಗಾದೆಯಿದೆ. ಅಂತಹ ಗಾದೆಯು ಸುಳ್ಳಾದುದನ್ನು ತಿಳಿಯಲು ಮೆಲಾಂಕಲಿಯ ಸ್ವರೂಪವನ್ನು ಅರಿಯುವುದೊಳ್ಳೆಯದು.

ಮೆಲಾಂಕಲಿ ಎನ್ನುವ ಶಬ್ದವು ಮೆಲೀನ ಮತ್ತು ಕೋಲ್ ಎಂಬ ಎರಡು ಶಬ್ದಗಳಿಂದ ರೂಪುಗೊಂಡಿದೆ. ಮೆಲೀನ ಎಂದರೆ ಕಪ್ಪು. ಕೋಲ್ ಎಂದರೆ ಪಿತ್ತ. ಹಾಗಾಗಿ ಮೆಲಾಂಕಲಿ ಎಂದರೆ ಕಪ್ಪು ಪಿತ್ತ ಎಂಬ ಅರ್ಥವು ಹೊಮ್ಮುತ್ತದೆ. ಈ ಹೆಸರನ್ನು ಸೂಚಿಸಿ ದವನು ಹಿಪ್ಪೋಕ್ರೇಟ್ಸ್. ಅವನ ಕಾಲದಲ್ಲಿ ಮನುಷ್ಯನ ಶರೀರದಲ್ಲಿ ನಾಲ್ಕು ರಸಗಳು (ಹ್ಯೂಮರ್ಸ್) ಇರುತ್ತವೆ. ರಕ್ತ, ಕಪ್ಪು ಪಿತ್ತ, ಹಳದಿ ಪಿತ್ತ ಮತ್ತು ಕರ್ಫ್ಯೂ. ಇವು ವ್ಯಕ್ತಿಯ ಆರೋಗ್ಯವನ್ನು ನಿರ್ಧರಿಸುವುರ ಜತೆಯಲ್ಲಿ ಗುಣ ಲಕ್ಷಣ, ಸ್ವಭಾವ ಮತ್ತು ವ್ಯಕ್ತಿತ್ವ ವನ್ನು ನಿರ್ಣಯಿಸುತ್ತವೆ ಎಂಬ ನಂಬಿಕೆಯಿತ್ತು. ಇವುಗಳ ನಡುವೆ ಸಮತೋಲನೆ ಇದ್ದಾಗ ವ್ಯಕ್ತಿಯು ಆರೋಗ್ಯ ವಾಗಿರುತ್ತಾನೆ; ಅಸಮತೋಲನೆಯುಂಟಾದಾಗ ವ್ಯಕ್ತಿಯು ರೋಗಗ್ರಸ್ತಾನಾಗುತ್ತಾನೆ – ಇದು ಅಂದಿನ ನಾಲ್ಕು ರಸಗಳ ಸಿದ್ಧಾಂತದ ಸಾರ.

ಒಬ್ಬ ವ್ಯಕ್ತಿಯು ಮೆಲಾಂಕೋಲಿಯಕ್ಕೆ ತುತ್ತಾದಾಗ, ಅವನಲ್ಲಿ ಕಪ್ಪು ಪಿತ್ತವು ಅಧಿಕವಾಗಿರುತ್ತದೆ ಎನ್ನುವುದು ಪ್ರಾಚೀನ ಗ್ರೀಕರ ವಿವರಣೆ. ಹಿಪ್ಪೋಕ್ರೇಟ್ಸ್ ತನ್ನ ಸೂತ್ರಗಳಲ್ಲಿ (ಅಫ್ರೋಯಿಸಂ) ಮೆಲಾಂಕೋಲಿಯ ಪೀಡಿತ ವ್ಯಕ್ತಿಯಲ್ಲಿ ಕಂಡುಬರುವ ೬
ಲಕ್ಷಣ ಗಳನ್ನು ವಿವರಿಸುತ್ತಾನೆ. ಭಯ, ಹತಾಶೆ, ಹಸಿವಿಲ್ಲದಿರುವಿಕೆ, ತಿನ್ನುವ ಇಚ್ಛೆಯಿಲ್ಲದಿರುವಿಕೆ, ನಿದ್ರಾಹೀನತೆ, ಸಿಡುಕುತನ ಮತ್ತು ತಳಮಳ. (ಆಧುನಿಕ ವೈದ್ಯಕೀಯವು ಮೇಜರ್ ಡೆಪ್ರೆಶನ್ನಿಗೆ ಸಂಬಂಧಿಸಿದಂತೆ ನೀಡುವ ೯ ಲಕ್ಷಣಗಳಲ್ಲಿ ೬ ಲಕ್ಷಣಗಳನ್ನು ಹಿಪ್ಪೋಕ್ರೇಟ್ಸ್ ನೀಡಿರುವನು) ಹೀಗೇ ಮೆಲಾಂಕೋಲಿಯ ಪೀಡಿತ ವ್ಯಕ್ತಿಯಲ್ಲಿ ಮಾನಸಿಕ ಹಾಗೂ ಶಾರೀರಿಕ ಲಕ್ಷಣಗಳು ಕಂಡು ಬರುತ್ತವೆ.

ಮೆಲಾಂಕಲಿ ಪೀಡಿತರಲ್ಲಿ ಎರಡು ಭಾವನಾತ್ಮಕ ವೈಪರೀತ್ಯಗಳು (ಅ-ಕ್ಟಿವ್ ಡಿಸಾರ್ಡರ್ಸ್) ಪದೇ ಪದೇ ಪುನರಾವರ್ತನೆ ಯಾಗುತ್ತವೆ ಎನ್ನುವುದನ್ನು ಹಲವು ವೈದ್ಯರು ಗಮನಿಸಿದರು. ಮೊದಲನೆಯದು ಅತೀವ ಖಿನ್ನತೆ ಹಾಗೂ ಎರಡನೆಯದು ಅಸಹಜ ನಂಬಿಕೆಗಳು. ಗ್ಯಾಲನ್ ಸಹ ಹಿಪ್ಪೋಕ್ರೇಟ್ಸ್ ಹೇಳಿದ ಹಾಗೆ, ಮೆಲಾಂಕೋಲಿಯಕ್ಕೆ ತುತ್ತಾದ ಜನರಲ್ಲಿ ಪ್ರಧಾನವಾಗಿ ಭಯ ಮತ್ತು ಹತಾಶೆ ಕಂಡುಬರುತ್ತದೆ. ಜತೆಗೆ ಅಸಹಜ ನಂಬಿಕೆಗಳನ್ನು ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ಖಚಿತ ಪಡಿಸಲು ಎರಡು ಉದಾಹರಣೆಗಳನ್ನೂ ಕೊಡುತ್ತಾನೆ.

ನಾನೊಬ್ಬ ಬಸವನ ಹುಳು. ಜನರ ನಡುವೆ ಓಡಾಡುತ್ತಿದ್ದರೆ, ಅವರು ನನ್ನನ್ನು ತುಳಿದು ನನ್ನ ಚಿಪ್ಪನ್ನು ಒಡೆದುಹಾಕುತ್ತಾರೆ.
ಹಾಗಾಗಿ ನಾನು ಜನರ ನಡುವೆ ಇರುವುದಿಲ್ಲ ಎಂದು ಒಬ್ಬನು ಭಾವಿಸಿದರೆ ಮತ್ತೊಬ್ಬ ಭೂಮಂಡಲವನ್ನು ಹೊತ್ತು ಕೊಂಡಿರು ವವನು ಅಟ್ಲಾಸ್ ಎಂಬ ಮಹಾ ಬಲಶಾಲಿ. ಅವನಿಗೆ ವಯಸ್ಸಾಗಿ, ದುರ್ಬಲನಾದರೆ ಭೂಮಿಯ ಗತಿಯೇನು? ಎಂದು ಮತ್ತೊಬ್ಬನು ಕೊರಗುತ್ತಾನೆ. ೧೦ನೆಯ ಶತಮಾನದ ಪರ್ಷಿಯದಲ್ಲಿ ವಾಸವಾಗಿದ್ದ ಅಲ್ ಅಖಾವಾಯ್ನಿ ಬುಖಾರಿ ಸಹ, ಕಪ್ಪು ಪಿತ್ತವು ಮಿದುಳಿನಲ್ಲಿ ಅತಿಯಾಗಿ ಸಂಗ್ರಹವಾದಾಗ ಮೆಲಾಂಕಲಿಯು ತಲೆ ದೋರುತ್ತದೆಯೆಂದ.

ಅವನ ವರ್ಣನೆಯಂತೆ ವ್ಯಕ್ತಿಯು ಅಜ್ಞಾತ ಭಯದಿಂದ ನರಳುತ್ತಾನೆ. ಕೇಳಿದ ಪ್ರಶ್ನೆಗೆ ಉತ್ತರ ನೀಡಲಾರ; ಹಾಗೆ ನೀಡಿದರೂ ಅದು ತಪ್ಪು ತಪ್ಪಾಗಿರುತ್ತದೆ. ಇದ್ದಕ್ಕಿದ್ದ ಹಾಗೆ ನಗುತ್ತಾನೆ. ಇದ್ದಕ್ಕಿದ್ದ ಹಾಗೆ ಅಳುತ್ತಾನೆ. ಅರ್ಥವಿಲ್ಲದ ಮಾತುಗಳನ್ನಾಡುತ್ತಾನೆ. ಆದರೆ ಜ್ವರದ ಲಕ್ಷಣವು ಲವಲೇಶವೂ ಇರುವುದಿಲ್ಲ. ಗುಣಪಡಿಸಲಾಗದ ಈ ಮೆಲಾಂಕೋಲಿಯವನ್ನು ದೆವ್ವ ಮೆಟ್ಟಿಕೊಂಡಿರುವ ಸ್ಥಿತಿ (ಡೆಮಾನಿಕ್ ಪೊಸೆಶನ್) ಎಂದು ಕರೆದ.

ರಾಬರ್ಟ್ ಬರ್ಟನ್ (೧೫೭೭-೧೬೪೦) ಇಂಗ್ಲಿಷ್ ಭಾಷೆಯ ವಿದ್ವಾಂಸ, ಲೇಖಕ ಮತ್ತು ಪಾದ್ರಿಯಾಗಿದ್ದ. ಇವನು ೧೬೨೧ರಲ್ಲಿ ಅನಾಟಮಿ ಆ- ಮೆಲಾಂಕಲಿ ಎನ್ನುವ ಪುಸ್ತಕವನ್ನು ಬರೆದು ಪ್ರಕಟಿಸಿದ. ಮೇಲುನೋಟಕ್ಕೆ ಈ ಪುಸ್ತಕವು ಮನೋವೈದ್ಯಕೀಯ ಪುಸ್ತಕದ ಹಾಗೆ ಕಂಡರೂ, ಇದರಲ್ಲಿ ಸಾಹಿತ್ಯಾಂಶಗಳು ಅಪಾರ ಪ್ರಮಾಣದಲ್ಲಿ ಹಾಸುಹೊಕ್ಕಾಗಿವೆ. ಈತನು ಮೆಲಾಂಕಲಿಗೆ ಸಂಬಂಧಿಸಿದ ಪ್ರಾಚೀನ ಹಾಗೂ ಸಮಕಾಲೀನ ಲಭ್ಯ ಮಾಹಿತಿಯನ್ನೆಲ್ಲ ನಾನಾ ಮೂಲಗಳಿಂದ ಸಂಗ್ರಹಿಸಿದ್ದಾನೆ.

ಮೆಲಾಂಕಲಿಯು ದೇವರ ಶಾಪದಿಂದ, ದೆವ್ವಗಳ ಕೋಪದಿಂದ, ಗ್ರಹಗತಿಗಳ ಪ್ರಭಾವದಿಂದ ಸಂಭವಿಸುತ್ತದೆ. ೭೦ ವರ್ಷಗಳಾದ ಮೇಲಂತೂ ಸರ್ವಸಾಮಾನ್ಯ. ಇದೊಂದು ಆನುವಂಶಿಕ ಶಾಪ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಆಹಾರಕ್ಕೂ ಮೆಲಾಂಕಲಿಗೂ ಸಂಬಂಧವುಂಟು. ಕೆಲವು ಮೀನುಗಳು, ಕೆಲವು ಹಕ್ಕಿಗಳು ಹಾಗೂ ಎಲೆಕೋಸು, ಕಪ್ಪು ಹೊಗೆಯನ್ನು ಮಿದುಳಿಗೆ ರವಾನಿಸಿ, ಅದನ್ನು ಮಂದಗೊಳಿಸುತ್ತವೆ. ಪೈಥಾಗೊರನು ಹೇಳಿದಂತೆ ಬಟಾಣಿಯನ್ನು, ಅವರೆ ಯನ್ನು ತಿನ್ನಬಾರದು.

ಮೆಲಾಂಕಲಿ ಪೀಡಿತ ಬಹುಪಾಲು ಜನರಲ್ಲಿ ಭಯವು ಹಾಗೂ ದುಃಖವೂ ಜತೆಗೂಡಿ ಬರುತ್ತವೆ. ಅವರು ಕೊಲೆ ಮಾಡಿದವರಂತೆ ತೊಳಲಬಹುದು. ಹೊಟ್ಟೆಯಲ್ಲಿರುವ ಕಪ್ಪೆಯನ್ನು, ಹಾವೊಂದು ಬೇಟೆಯಾಡುವಂತಹ ಅನುಭವ. ಕಪ್ಪೆಯ ನೋವಿನ ಕೂಗು ನಿಮಗೆ ಕೇಳಿಸದೆ?… ನಾನು ನೀಡಿದ ಸೂಚನೆಗಳನ್ನು ಪಾಲಿಸಿ. ಭಗವಂತನನ್ನು ಧ್ಯಾನಿಸಿ. ಮೂಲಿಕೆಗಳನ್ನು ಸೇವಿಸಿ, ಮಧುವನ್ನು ಸವಿಯಿರಿ ಇತ್ಯಾದಿಯಾಗಿ ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಮೆಲಾಂಕಲಿಗೆ ಕಾರಣ, ಲಕ್ಷಣ ಮತ್ತು ಚಿಕಿತ್ಸೆ ಯನ್ನೆಲ್ಲ ವಿವರಿಸಿರುವನು.

ಅನಾಟಮಿ ಆಫ್ ಮೆಲಾಂಕಲಿಯಂತಹ ಪುಸ್ತಕವು ಮತ್ತೊಂದು ರೋಗದ ಬಗ್ಗೆ ರಚಿತವಾದ ಉದಾಹರಣೆಯು ವಿರಳ. ಕೊನೆಗೆ ಬರ್ಟನ್ “The tower of Babel never yielded such confusion of tongues as the chaos of melancholy doth variety of symptoms” ಎಂಬ ತೀರ್ಮಾನಕ್ಕೆ ಬರುತ್ತಾನೆ. ಬೇಬಲ್ ಗೋಪುರವನ್ನು ಕಟ್ಟುವ ಕಾರ್ಮಿಕರು ಭಿನ್ನ ಭಿನ್ನ ಭಾಷೆಗಳನ್ನು ಮಾತನಾಡುತ್ತಿದ್ದ ಕಾರಣ, ಅವರಲ್ಲಿ ಸಂವಹನವು ಅತೀವ ಗೊಂದಲಕ್ಕೆಡೆ ಮಾಡಿಕೊಡುತ್ತದೆ. ಹಾಗೆಯೆ ಮೆಲಾಂಕೋಲಿಯದ ವೈವಿಧ್ಯಮಯ ಲಕ್ಷಣಗಳೂ ಸಹ ಎನ್ನುತ್ತಾನೆ.

ಮಾನವ ಇತಿಹಾಸದಲ್ಲಿ ಮೆಲಾಂಕಲಿ ಎನ್ನುವುದು ಮನುಷ್ಯನ ತಿಳಿವಿಗೆ ಒಂದು ಸವಾಲಾಗಿ ಪರಿಣಮಿಸಿತು. ಹಿಪ್ಪೋಕ್ರೇಟ್ಸ್ ಕಾಲದಲ್ಲಿ, ಮೆಲಾಂಕಲಿ ಪೀಡಿತನಲ್ಲಿ ಕೇವಲ ಭಾವನಾತ್ಮಕ ಲಕ್ಷಣಗಳು (ಅ-ಕ್ಟಿವ್ ಸಿಂಪ್ಟಮ್ಸ್) ಇರುತ್ತವೆ ಎಂಬ ನಂಬಿಕೆ ಯಿತ್ತು. ಹಿಪ್ಪೋಕ್ರೇಟ್ಸ್ ಕಾಲದ ನಂತರದಿಂದ ೧೮ನೆಯ ಶತಮಾನದವರೆಗೆ, ಮೆಲಾಂಕಲಿ ಪೀಡಿತರಲ್ಲಿ ಭಾವನಾತ್ಮಕ ಲಕ್ಷಣಗಳ ಜತೆಯಲ್ಲಿ ಅನೇಕ ಅಸಹಜ ವರ್ತನೆಗಳು ಕಂಡುಬರುತ್ತವೆ ಎಂಬ ಅನಿಸಿಕೆ ಬಲವಾಯಿತು.

೧೮ ಮತ್ತು ೧೯ನೆಯ ಶತಮಾನಗಳಲ್ಲಿ ಮನುಷ್ಯನ ಅಸಹಜ ವರ್ತನೆಗಳಿಗೆಲ್ಲ ಮೆಲಾಂಕಲಿಯೇ ಕಾರಣ ಎಂಬ ಭಾವನೆಯು ಬಲವಾಗಿ ಬೇರೂರಿತು. ೨೦ನೆಯ ಶತಮಾನದಲ್ಲಿ ಮೆಲಾಂಕಲಿ ಪೀಡಿತರಲ್ಲಿ ಕೇವಲ ಭಾವನಾತ್ಮಕ ಲಕ್ಷಣಗಳು ಮಾತ್ರ ಕಂಡುಬರುತ್ತವೆ ಎಂಬ ತೀರ್ಮಾನಕ್ಕೆ ಬಂದರು. ಹೀಗೆ ಕಳೆದ ೨೦೦೦ ವರ್ಷಗಳ ಅವಧಿಯಲ್ಲಿ ಮೆಲಾಂಕಲಿಯ ಸ್ವರೂಪವು ಅಸ್ಪಷ್ಟವಾಗಿಯೇ ಉಳಿಯಿತು.

ಇಂದು ಮೆಲಾಂಕಲಿ ಎನ್ನುವುದು ಒಂದು ನಿರ್ದಿಷ್ಟ ಮಾನಸಿಕ ಕಾಯಿಲೆಯಾಗಿ ಉಳಿದಿಲ್ಲ. ಅಮೆರಿಕದ ಮನೋವೈದ್ಯರ ಸಂಘವು ಮಾನಸಿಕ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಅಂಕಿ ಅಂಶಗಳ ಕೈಪಿಡಿಯನ್ನು (ಡಯಾಗ್ನೋಸ್ಟಿಕ್ ಅಂಡ್ ಸ್ಟಾಟಿಸ್ಟಿ ಕಲ್ ಮ್ಯಾನ್ಯುವಲ್ ಆಫ್ ಮೆಂಟಲ್ ಡಿಸಾರ್ಡರ್ = ಡಿಎಸ್‌ಎಂ) ಪ್ರಕಟಿಸಿದೆ. ಈ ಕೈಪಿಡಿಯ ವರ್ಗೀಕರಣದ ಅನ್ವಯ, ಮೆಲಾಂಕಲಿ ಎನ್ನುವುದು ಯಾರಿಗಾದರೂ ಇದ್ದರೆ, ಅದು ಪ್ರಧಾನ ಖಿನ್ನತೆಯ ವೈಪರೀತ್ಯದ (ಎಂ.ಡಿ.ಡಿ=ಮೇಜರ್ ಡೆಪ್ರೆಸಿವ್ ಡಿಸಾರ್ಡರ್) ಒಂದು ಲಕ್ಷಣವಾಗಿ ಮಾತ್ರ ಇರುತ್ತದೆ ಎಂದು ಹೇಳುತ್ತದೆ.

(ಮೆಲಾಂಕಲಿ ಎನ್ನುವುದಕ್ಕೆ ಕನ್ನಡದಲ್ಲಿ ಸೂಕ್ತ ಪದವಿಲ್ಲ. ಇದನ್ನು ವಿಷಣ್ಣತೆ, ದುಮ್ಮಾನ, ವ್ಯಾಕುಲತೆ ಎಂದೆಲ್ಲ ವರ್ಣಿಸಿ ರುವುದುಂಟು. ಆದರೆ ಈ ಶಬ್ದಗಳು ಮೆಲಾಂಕಲಿಯ ಸ್ವರೂಪವನ್ನು ಸಮಗ್ರವಾಗಿ ಹಿಡಿದಿಡಲಾರವು) ಇಂದಿನ ದಿನಗಳಲ್ಲಿ ವಿಷಣ್ಣತೆಯಿಂದ ಒಡಗೂಡಿದ ಪ್ರಧಾನ ಖಿನ್ನತೆ (ಮೇಜರ್ ಡಿಪ್ರೆಶನ್ ವಿತ್ ಮೆಲಾಂಕಲಿಕ್ ಫೀಚರ್ಸ್) ಎಂದು ರೋಗ ನಿರ್ಣಯವನ್ನು ಮಾಡುವರು. ಈ ವಿಷಣ್ಣತೆಯು ಬೈಪೋಲಾರ್ ಡಿಸಾರ್ಡರ್ ಎನ್ನುವ ಮಾನಸಿಕ ರೋಗದ ಖಿನ್ನತೆಯ ಅವಧಿಯಲ್ಲೂ ಕಂಡುಬರಬಹುದು.

ಇಂದು ಒಬ್ಬರು ವಿಷಣ್ಣ ಸಹಿತದ ಖಿನ್ನತೆಯಿಂದ (ಮೆಲಾಂಕಲಿಕ್ ಡಿಪ್ರೆಶನ್) ನರಳುತ್ತಿದ್ದಾರೆ ಎಂದು ರೋಗ ನಿಧಾನವನ್ನು ಮಾಡಬೇಕಾದರೆ, ಅವರಲ್ಲಿ ಪ್ರಧಾನವಾಗಿ ಎರಡು ಲಕ್ಷಣಗಳು ಇರಬೇಕು. ಅವರು, ಯಾವುದೇ ರೀತಿಯ ಖುಷಿಯನ್ನು, ಆನಂದ ವನ್ನು, ಸಂತೋಷವನ್ನು ಅನುಭವಿಸಲಾಗದ ಸ್ಥಿತಿಯಲ್ಲಿರ ಬೇಕಾಗುತ್ತದೆ. ಎಲ್ಲ ರೀತಿಯ ಸುಖದಾಯಕ ಚಟುವಟಿಕೆ ಗಳಿಗೆ ವಸ್ತುನಿಷ್ಟವಾಗಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಲಾಗದಂತಹ ಸ್ಥಿತಿಯಲ್ಲಿರಬೇಕಾಗುತ್ತದೆ.

ಈ ಎರಡು ಮುಖ್ಯ ಲಕ್ಷಣಗಳ ಜತೆಯಲ್ಲಿ ಈ ಕೆಳಗಿನ ಲಕ್ಷಣಗಳಲ್ಲಿ ಕನಿಷ್ಠ ಮೂರು ಲಕ್ಷಣಗಳಾದರೂ ಇರಬೇಕು. ಯಾವುದೇ ದುಃಖಕರ ಘಟನೆಯು ನಡೆಯದಿದ್ದರೂ, ಅವರನ್ನು ಹತಾಶೆಯು ವಿನಾ ಕಾರಣ ಕಾಡುತ್ತಿರುತ್ತದೆ. ಹಸಿವಿಲ್ಲದಿರುವಿಕೆ ಅಥವ ಶರೀರ ತೂಕವು ಕಡಿಮೆ ಯಾಗಿರುವುದು. ವಿಪರೀತ ಚಡಪಡಿಕೆಯು ಅಥವ ಅಸಹಜ ರೀತಿಯಲ್ಲಿ ನಿಧಾನವಾದ ಚಲನೆಗಳು ಕಂಡುಬರಬಹುದು. ದಿನನಿತ್ಯದ ಮನಸ್ಥಿತಿಯಲ್ಲಿ (ಮೂಡ್) ಏರುಪೇರು. ಬೆಳಗ್ಗೆ ಎದ್ದ ಕೂಡಲೇ ಅತ್ಯಂತ ಕೆಟ್ಟ ಮನಸ್ಥಿತಿಯು
ತೀವ್ರವಾಗಿ ಕಾಡುವುದು. ಪ್ರತಿದಿನ, ನಿತ್ಯ ಏಳುವುದಕ್ಕಿಂತ ಕನಿಷ್ಠ ೨ ಗಂಟೆಗಳ ಮೊದಲೇ ಎಚ್ಚರವಾಗುವುದು.

ವಿಪರೀತ ಪಾಪಪ್ರಜ್ಞೆ ಅಥವ ಅಪರಾಧಿ ಮನೋಭಾವ (ಗಿಲ್ಟ್) ಸಾಮಾನ್ಯ ಖಿನ್ನತೆಗೂ ಹಾಗೂ ವಿಷಣ್ಣ ಸಹಿತದ ಖಿನ್ನತೆಗೂ ವ್ಯತ್ಯಾಸಗಳಿರುತ್ತವೆ. ವಿಷಣ್ಣ ಸಹಿತದ ಖಿನ್ನತೆಯು ಸಾಮಾನ್ಯವಾಗಿ ಹಿರಿಯರಲ್ಲಿ ಅಧಿಕ. ಲಕ್ಷಣಗಳು ತೀವ್ರಸ್ವರೂಪದಲ್ಲಿ ಕಂಡುಬರಬಹುದು. ಅವರ ಬದುಕಿನಲ್ಲಿ ಸಂತೋಷ ಎನ್ನುವುದು ಪರಿಪೂರ್ಣವಾಗಿ ಮಾಯವಾಗಿ ಹೋಗಿರಬಹುದು. ವಿಪರೀತ ಚಡಪಡಿಕೆ ಅಥವ ಜಡತ್ವ ಕಂಡುಬರಬಹುದು. ಆತ್ಮಹತ್ಯೆಯ ವಿಚಾರಗಳು ಪದೇ ಪದೇ ಸುಳಿಯಬಹುದು. ವಿಷಣ್ಣ ಸಹಿತದ ಖಿನ್ನತೆಯು ಋತುಗಳಿಗೆ ಅನುಗುಣವಾಗಿ ತೀವ್ರವಾಗಬಹುದು.

ಪರಿಸರದಲ್ಲಿ ಬಿಸಿಲು ಕಡಿಮೆಯಾಗಿ ಉಷ್ಣತೆಯು ಇಳಿದಾಗ ವಿಷಣ್ಣ ಸಹಿತದ ಖಿನ್ನತೆಯು ಹೆಚ್ಚು ಕಾಡಬಹುದು. ಕೆಲವು
ಸಹ ಪ್ರಸವವಾದ ಮೇಲೆ ಕೆಲವು ಮಹಿಳೆಯರಲ್ಲಿ ಕಂಡುಬರಬಹುದು. ವಿಷಣ್ಣ ಸಹಿತದ ಖಿನ್ನತೆಯನ್ನು ಅಂತರ್ಜನಿತ ಖಿನ್ನತೆ
(ಎಂಡೋಜಿನಸ್ ಡಿಪ್ರೆಶನ್) ಎನ್ನುವರು. ಎಲ್ಲ ರೀತಿಯ ರೋಗಲಕ್ಷಣಗಳಿಗೆ, ಮನುಷ್ಯನ ದೇಹದ ಇನ್ಸುಲ, ಹೈಪೋಥಲಾಮಸ್, ಪಿಟ್ಯೂಟರಿ, ಅಡ್ರಿನಲ್ಸ್ ಮುಂತಾದ ಅಂಗಗಳ ಕ್ರಿಯಾ ವೈಪರೀತ್ಯಗಳೇ ಮುಖ್ಯ ಕಾರಣವಾಗಿರುತ್ತವೆ. ಹಾಗಾಗಿ ಈ ಸ್ಥಿತಿಯು ಆನುವಂಶಿಕವಾಗಿ ಬರಬಹುದು. ಇವರ ನಿದ್ರೆಯಲ್ಲಿ ಲಘುನಿದ್ರೆಯೇ ಪದೇ ಪದೆ ಪುನರಾವರ್ತನೆಯಾಗಿ ಆಳ ನಿದ್ರೆಯ ಕೊರತೆ ಯಾಗಿ, ಮಿದುಳು-ಮನಸ್ಸಿಗೆ ವಿಶ್ರಾಂತಿ ದೊರೆಯದೇ ಹೋಗಬಹುದು. ಆಗ ಅವರಲ್ಲಿ ಚಡಪಡಿಕೆಯು ತೀವ್ರವಾಗುತ್ತದೆ.

ಇವರಲ್ಲಿ ಕಾರ್ಟಿಸಾಲ್ ಎನ್ನುವ ರಾಸಾಯನಿಕದ ಪ್ರಮಾಣವು ಹೆಚ್ಚುವ ಕಾರಣ ಒತ್ತಡದ ಲಕ್ಷಣಗಳು ತೀವ್ರವಾಗಿ ಕಾಡಬಹುದು. ಕಲಿಕೆಯ ವೇಗವು ಮಂದವಾಗುತ್ತದೆ. ಸರಳ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳಲಾರರು. ವೃತ್ತಿಯನ್ನು ನಿರ್ಲಕ್ಷಿಸ ಬಹುದು. ಮಾನವ ಸಂಬಂಧಗಳನ್ನು ಮೌಲ್ಯವನ್ನು ಅರಿಯಲಾರರು. ಸ್ವಂತ ಆರೋಗ್ಯದ ಕಾಳಜಿಯನ್ನು ಮರೆಯಬಹುದು. ಈ ಲಕ್ಷಣಗಳೆಲ್ಲ ಅಂಕೆ ಮೀರಿದಾಗ ಆತ್ಮಹತ್ಯೆಯ ಪ್ರಯತ್ನಿಸಬಹುದು.

ಇಂದು ವಿಷಣ್ಣ ಸಹಿತದ ಖಿನ್ನತೆಗೆ ಚಿಕಿತ್ಸೆಯು ದೊರೆಯುತ್ತದೆ. ರೋಗ ಲಕ್ಷಣಗಳು ಕಂಡುಬರುತ್ತಿರುವಂತೆಯೇ, ಮನೋ ವೈದ್ಯರ ಬಳಿ ಕರೆತಂದರೆ, ಸುಲುಭವಾಗಿ ಈ ವಿಷಣ್ಣತೆಯನ್ನು ನಿವಾರಿಸಬಹುದು.

 
Read E-Paper click here