Wednesday, 11th December 2024

ದೂರಕೆ ಹಕ್ಕಿಯು ಹಾರುತಿದೆ…

ವಿದೇಶವಾಸಿ

dhyapaa@gmail.com

ಇಪ್ಪತ್ತನೆಯ ಶತಮಾನದ ಆವಿಷ್ಕಾರಗಳಲ್ಲಿ ಮನರಂಜನೆಗೆ ಸಂಬಂಧಿಸಿದಂತೆ ರೇಡಿಯೊ, ಟೆಲಿವಿಷನ್, ಆರೋಗ್ಯಕ್ಕೆ ಸಂಬಂಧಿಸಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಂಟಿಬಯೋಟಿಕ್, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್, ಇಂಟರ್ನೆಟ್ ಇತ್ಯಾದಿಗಳ ನಡುವೆ ಎದ್ದು ಕಾಣುವುದು ವಿಮಾನ ವಿಜ್ಞಾನ.

ಒಂದು ಮಾತಿದೆ, ‘ಒಮ್ಮೆ ನಿಮಗೆ ಹಾರಾಟದ ಅನುಭವವಾದರೆ ಸಾಕು, ಮುಂದೆ ನೆಲದ ಮೇಲೆ ನಡೆಯುತ್ತಿದ್ದರೂ ನಿಮ್ಮ ಕಣ್ಣು ಆಗಾಗ ಆಕಾಶ ನೋಡುತ್ತಿರುತ್ತದೆ, ಏಕೆಂದರೆ ನೀವು ಮತ್ತೆ ಮತ್ತೆ ಹಾರಲು ಬಯಸುತ್ತೀರಿ’. ಇದು ಸತ್ಯ. ಕೆಲವರಿಗೆ ಮೊದಲ ಬಾರಿ ವಿಮಾನಯಾನವೆಂದರೆ ಭಯ,
ಆತಂಕಗಳಿದ್ದರೂ, ಅದು ಮೊದಲನೆಯ ಪ್ರಯಾಣಕ್ಕೆ ಮಾತ್ರ ಸೀಮಿತ. ವಿಮಾನದ ಮಹಿಮೆಯೇ ಹಾಗೆ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬನಿಗೂ ವಿಮಾನವೆಂದರೆ ಕೌತುಕ, ಉಲ್ಲಾಸ, ಸಂತಸ. ಆದ್ದರಿಂದಲೇ ದೂರದ ಬಾನಿನಲ್ಲಿ ವಿಮಾನದ ಸದ್ದು ಕೇಳಿದರೆ ಸಾಕು, ಮನೆಯಿಂದ ಹೊರಗೆ ಓಡಿಬಂದು ಕಣ್ಣಿಗೆ ಕಾಣುವ ಸಣ್ಣ ವಿಮಾನದೆಡೆಗೆ ಕೈಬೀಸುವ ಮಕ್ಕಳನ್ನು ಇಂದಿಗೂ ಕಾಣಬಹುದು.

ನೂರಾರು ಬಾರಿ ವಿಮಾನದಲ್ಲಿ ಓಡಾಡಿದವನೂ ಆಕಾಶದಂದು ವಿಮಾನ ಹಾರುವಾಗ ನೋಡದೇ ಇರಲಾರ. ಇದು ಲೋಹದ, ಯಂತ್ರದ ಹಕ್ಕಿಯ ಎಳೆತ-ಸೆಳೆತ. ವಿಮಾನದ ಕಲ್ಪನೆ ನಮಗೆ ಹೊಸದಲ್ಲ, ನಮ್ಮ ಪುರಾಣದಲ್ಲಿ, ಕಥೆಗಳಲ್ಲಿ ಈ ರೀತಿಯ ವಿಮಾನಗಳು ಸಾಕಷ್ಟು ಸಲ ಬಂದುಹೋಗಿವೆ. ದೇವೇಂದ್ರನಂಥ ದೇವತೆಗಳು, ರಾವಣನಂಥ ರಾಕ್ಷಸರು ಬಾನ ಮಾರ್ಗದಲ್ಲಿ ವಿಮಾನಯಾನ ಮಾಡಿದ ಕಥೆಗಳು ಎಲ್ಲರಿಗೂ ಗೊತ್ತು. ಅಂಥ ಮಾಯಾ ಲೋಕದ ಕನಸನ್ನು ವಾಸ್ತವಿಕತೆಗೆ ಇಳಿಸಿದವರು ಅಮೆರಿಕದ ಆರ್ವಿಲ್ ಮತ್ತು ವಿಲ್ಬರ್ ರೈಟ್ ಸಹೋದರರು.

ಇಪ್ಪತ್ತನೆಯ ಶತಮಾನದ ಆವಿಷ್ಕಾರಗಳಲ್ಲಿ ಮನರಂಜನೆಗೆ ಸಂಬಂಧಿಸಿದಂತೆ ರೇಡಿಯೊ, ಟೆಲಿವಿಷನ್, ಆರೋಗ್ಯಕ್ಕೆ ಸಂಬಂಧಿಸಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಂಟಿಬಯೋಟಿಕ್, ಆಹಾರಕ್ಕೆ ಸಂಬಂಧಪಟ್ಟ ಮೈಕ್ರೊವೇವ್ ಓವನ್, ಟೀ ಬ್ಯಾಗ್, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್, ಇಂಟರ್ನೆಟ್ ಇತ್ಯಾದಿಗಳ ನಡುವೆ ಎದ್ದು ಕಾಣುವುದು ವಿಮಾನ ವಿಜ್ಞಾನ. ಬಹುಶಃ ಆ ಶತಮಾನದಲ್ಲಿ ಕಂಪ್ಯೂಟರ್, ಅಂತರ್ಜಾಲ ಹೊರತು ಪಡಿಸಿದರೆ ವಿಮಾನದಷ್ಟು ಕ್ರಾಂತಿ ಮಾಡಿದ ವಸ್ತು ಇನ್ನೊಂದಿರಲಿಕ್ಕಿಲ್ಲ.

ಹೇಗೆ ಅಂತರ್ಜಾಲ ಜಗತ್ತನ್ನೇ ಕುಗ್ಗಿಸಿತೋ, ಹಾಗೆಯೇ ವಿಮಾನವೂ ವಿಶ್ವವನ್ನು ಸಣ್ಣದಾಗಿಸಿತು. ಈಗ ವಿಶ್ವದ ಯಾವ ಮೂಲೆಯಿಂದ ಯಾವ ಮೂಲೆಗೆ ಬೇಕಾದರೂ ಕೆಲವೇ ಗಂಟೆಗಳಲ್ಲಿ ಪ್ರಯಾಣಿಸಬಹುದು. ವಿಮಾನಯಾನ ಇಲ್ಲವಾಗಿದ್ದರೆ ಇಂದೂ ದಿನಗಟ್ಟಲೆ, ತಿಂಗಳುಗಟ್ಟಲೆ ಪ್ರಯಾಣ ಮಾಡ ಬೇಕಾಗುತ್ತಿತ್ತು. ಇಂದು ವಿಮಾನ ಯಾನವಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಕಷ್ಟ. ಅದಕ್ಕಾದರೂ ರೈಟ್ ಸಹೋದರರಿಗೆ ಒಂದು ಮನಃಪೂರ್ವಕ ಧನ್ಯವಾದ ಹೇಳಲೇಬೇಕು.

ಅದಕ್ಕಿಂತ ಮುಂಚೆ ಹಾರಾಟದ ಪ್ರಯೋಗ ನಡೆದಿಲ್ಲ ಎಂದಲ್ಲ. ೧೭೮೩ರಲ್ಲಿ ಮೊದಲ ಬಾರಿ ಹಾಟ್ ಏರ್ ಬಲೂನ್ ಮುಖೇನ ಗಾಳಿಯಲ್ಲಿ ಹಾರಲಾಯಿತು ಎಂದು ಇತಿಹಾಸ ಹೇಳುತ್ತದೆ. ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‌ನಲ್ಲಿ ಮೊದಲ ಉಡಾವಣೆ ಕಂಡ ಈ ಪುಗ್ಗೆಯ ಜನಕರು ಮಾಂಟ್ಗಾಲಿ
ಯರ್ ಸಹೋದರರು. ೧೮೫೩ರಲ್ಲಿ ಜಾರ್ಜ್ ಕೇಲಿ ಎಂಬ ಹೆಸರಿನ ಬ್ರಿಟಿಷ್ ಎಂಜಿನಿಯರ್ ಗ್ಲೆ ಡರ್ ನಿರ್ಮಿಸಿ, ಹಾರಾಟದ ಮೊದಲ ವಿಫಲ ಪ್ರಯತ್ನ
ಮಾಡಿದ್ದ ಎಂದು ಇತಿಹಾಸ ಹೇಳುತ್ತದೆ. ನಂತರ ೧೮೯೦ರಲ್ಲಿ ಜರ್ಮನಿಯ ಒಟ್ಟೊ ಲಿಲಿಯೆಂಥಾಲ್ ಎಂಬ ವ್ಯಕ್ತಿ ಹದಿನೆಂಟು ವಿವಿಧ ಬಗೆಯ ಗ್ಲೆ ಡರ್
ಗಳನ್ನು ನಿರ್ಮಿಸಿದ್ದ, ತಾನೇ ನಿರ್ಮಿಸಿದ್ದ ಗ್ಲೆ ಡರ್ ನಲ್ಲಿ ಮುನ್ನೂರ ಐವತ್ತು ಮೀಟರ್ ದೂರ ಹಾರಿದ್ದ ಎಂಬ ವಿಷಯವೂ ದಾಖಲೆಯ ಪುಟಗಳನ್ನು
ಸೇರಿದೆ. ಈತನ ಪ್ರಯೋಗವೂ ರೈಟ್ ಸಹೋದರರಿಗೆ ಪ್ರೇರಣೆ ನೀಡಿತು ಎಂಬ ಮಾತೂ ಇದೆ. ರೈಟ್ ಸಹೋದರರು ಯಶಸ್ವಿಯಾಗುವುದಕ್ಕೆ ಮುಂಚೆ
ಹತ್ತಕ್ಕೂ ಹೆಚ್ಚು ಜನ ಆಕಾಶದಲ್ಲಿ ಹಾರುವ ಪ್ರಯೋಗಕ್ಕೆ ಕೈಹಾಕಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಆದರೆ ಅನ್ವೇಷಣೆಯ ನಂತರದ ಬೆಳವಣಿಗೆಗೆ ‘ವಾವ್!’ ಎನ್ನಲೇಬೇಕು. ಆರಂಭದ ದಿನಗಳಲ್ಲಿ ನೂರರಿಂದ ನೂರ ಇಪ್ಪತ್ತು ಅಡಿ ಎತ್ತರದಲ್ಲಿ ಹಾರು
ತ್ತಿದ್ದ ವಿಮಾನ ಹತ್ತು ವರ್ಷಗಳ ಒಳಗಾಗಿ ಹತ್ತು ಸಾವಿರ ಅಡಿ ಎತ್ತರಕ್ಕೆ ಹಾರುವಷ್ಟು ಬೆಳೆಯಿತು. ಇದು ರಾಕೆಟ್ ತಂತ್ರಜ್ಞಾನಕ್ಕೂ ಮೆಟ್ಟಿಲಾಯಿತು.
ವಿಮಾನ ಹಾರಾಟ ಆರಂಭಿಸಿದ ಎಪ್ಪತ್ತು ವರ್ಷಗಳ ಒಳಗೆ, ಭೂಮಿಯಿಂದ ಸುಮಾರು ಮೂರು ಲಕ್ಷ ಎಂಬತ್ತನಾಲ್ಕು ಸಾವಿರ ಕಿಲೋಮೀಟರ್ ದೂರವಿರುವ ಚಂದ್ರನಲ್ಲಿಗೆ ಪ್ರಯಾಣಿಸುವುದೆಂದರೆ ಹುಡುಗಾಟವಲ್ಲ. ಆದರೆ, ಯಾವ ಅನ್ವೇಷಣೆಯೇ ಆದರೂ ಕಾಲಕ್ರಮೇಣ ವ್ಯವಹಾರವಾಗಿ ಬದಲಾಗುತ್ತದೆ. ಅದಕ್ಕೆ ವಾಯುಯಾನವೂ ಹೊರತಲ್ಲ.

ಇಂದು ವಿಶ್ವದಾದ್ಯಂತ ಬಾನಂಗಳದಲ್ಲಿ ಹಾರಾಡುವ ಪ್ರಮುಖವಾದ ಎರಡು ಯಂತ್ರದ ಹಕ್ಕಿಗಳ ವಂಶ ಎಂದರೆ ಬೋಯಿಂಗ್ ಮತ್ತು ಏರ್‌ಬಸ್.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇಕಡ ತೊಂಬತ್ತಕ್ಕೂ ಹೆಚ್ಚು ಪಾಲನ್ನು ಇದೇ ಎರಡು ಸಂಸ್ಥೆಯ ವಿಮಾನಗಳು ಆವರಿಸಿಕೊಂಡಿವೆ. ಬೇರೆ ಯಾವ ಸಂಸ್ಥೆಗಳೂ ಇವೆರಡರ ಹತ್ತಿರಕ್ಕೆಲ್ಲೂ ಸುಳಿಯುವುದಿಲ್ಲ. ಈ ಸಂಸ್ಥೆಗಳು ಅನ್ಯರು ತಮ್ಮ ಸ್ಥಳವನ್ನು ಆಕ್ರಮಿಸಿಕೊಳ್ಳದಂತೆ ವ್ಯವಹಾರವನ್ನು ತಮ್ಮ ಹತೋಟಿಯಲ್ಲಿ ಹಿಡಿದಿಟ್ಟುಕೊಂಡಿವೆ. ಮೊದಲು ಈ ಕಂಪನಿಗಳ ಬಯೋಡಾಟಾದ ಕಡೆಗೆ ಕಣ್ಣಾಡಿಸಿದರೆ ಅದರ ಅಗಾಧತೆ ಅರ್ಥವಾಗುತ್ತದೆ.

ಬೋಯಿಂಗ್ ಸಂಸ್ಥೆ ಆರಂಭವಾದದ್ದು ೧೯೧೬ ರಲ್ಲಿ, ಅಮೆರಿಕದ ವಾಷಿಂಗ್ಟನ್‌ನಲ್ಲಿ. ಸ್ಥಾಪಕ ವಿಲಿಯಮ್ ಬೋಯಿಂಗ್. ಈಗ ಶಿಕಾಗೊದಲ್ಲಿ ಕೇಂದ್ರ
ಕಾರ್ಯಾಲಯ. ಅಂದಿನಿಂದ ಇಂದಿನವರೆಗೆ ಸಂಸ್ಥೆ ಯ ಸಾಧನೆ ಅಭೂತಪೂರ್ವ. ಈ ಸಂಸ್ಥೆ ೨೦೧೯ರಲ್ಲಿ ತಯಾರಿಸಿದ ಕಮರ್ಷಿಯಲ್ ಏರ್‌ಕ್ರಾಫ್ಟ್ (ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಯೋಗ್ಯವಾದ ವಿಮಾನಗಳು) ಸಂಖ್ಯೆ ಮುನ್ನೂರ ಎಂಬತ್ತು (೨೦೧೮ ರಲ್ಲಿ ಈ ಸಂಸ್ಥೆ ಎಂಟು ನೂರಕ್ಕೂ ಅಧಿಕ ವಿಮಾನಗಳನ್ನು ತಯಾರಿಸಿತ್ತು). ಅದರೊಂದಿಗೆ ಆ ವರ್ಷ ಎರಡುನೂರ ಮೂವತ್ತು ಯುದ್ಧ ವಿಮಾನಗಳು ಮತ್ತು ಎರಡು ಉಪಗ್ರಹಗಳನ್ನೂ ತಯಾರಿ ಸಿದೆ. ಈ ಸಂಸ್ಥೆಗೆ ಇನ್ನೂ ಮೂರು ಸಾವಿರದ ನಾಲ್ಕು ನೂರು ವಿಮಾನ ತಯಾರಿಸಲು ಬೇಡಿಕೆ ಇದೆ. ಸಂಸ್ಥೆಯಲ್ಲಿ ಒಂದು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚು ನೌಕರರಿದ್ದಾರೆ. ಸಂಸ್ಥೆಯ ವಾರ್ಷಿಕ ಆದಾಯ ಎಪ್ಪತ್ತೈದು ಬಿಲಿಯನ್ ಡಾಲರ್ (೨೦೧೮ರಲ್ಲಿ ಇದು ನೂರು ಬಿಲಿಯನ್ ದಾಟಿತ್ತು). ಕಳೆದ ಹತ್ತು ವರ್ಷಗಳಿಂದಲೂ ಸಂಸ್ಥೆ ಸರಾಸರಿ ಆರು ಸಾವಿರ ಮಿಲಿಯನ್ ಡಾಲರ್ ನಷ್ಟು ನಿವ್ವಳ ಲಾಭ ಗಳಿಸುತ್ತಿದೆ.

ತಮ್ಮ ಸಂಸ್ಥೆಯ ವಿಮಾನಗಳು ಇತರರಿಗಿಂತ ಶೇ.೮ರಷ್ಟು ಕಡಿಮೆ ಇಂಧನ ಬಳಸುತ್ತವೆ ಎಂದು ಸಂಸ್ಥೆ ಹೇಳಿಕೊಳ್ಳುತ್ತದೆ. ೭೪೭, ೭೭೭, ೭೮೭ ಹೆಸರು ಮಾಡಿದ ಮಾಡೆಲ್‌ಗಳು. ೨೦೧೮ರಲ್ಲಿ ೭೩೭ ಮಾಡೆಲ್‌ನ ಎರಡು ವಿಮಾನಗಳು ದುರಂತಕ್ಕೊಳಗಾದ್ದರಿಂದ ವಿಶ್ವದಾದ್ಯಂತ ಆ ಮಾಡೆಲ್‌ನ ಮುನ್ನೂರ ಎಂಬತ್ತೇಳು ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿತ್ತು. ಅದಕ್ಕೇ ಹೇಳುವುದು, Flying is not dangerous, crashing is dangerous! ಇನ್ನೊಂದು ಅಸಾಮಾನ್ಯ ಸಂಸ್ಥೆಯೆಂದರೆ ಏರ್ ಬಸ್. ೧೯೭೦ರ ಕೊನೆಯಲ್ಲಿ ಯುರೋಪ್ ರಾಷ್ಟ್ರಗಳು, ಅದರಲ್ಲೂ ಫ್ರಾನ್ಸ್, ಜರ್ಮನಿ, ಸ್ಪೇನ್ ಮೊದ
ಲಾದ ದೇಶಗಳು ಪ್ರಮುಖ ಪಾತ್ರವಹಿಸಿ ಸ್ಥಾಪಿಸಿದ ಏರ್‌ಬಸ್ ಇಂಡಸ್ಟ್ರೀಸ್‌ನ ಕೇಂದ್ರ ಕಾರ್ಯಾಲಯ ನೆದರ್ಲ್ಯಾಂಡ್‌ನ ಲೇಡನ್‌ನಲ್ಲಿದ್ದರೂ, ವಿಮಾನಗಳನ್ನು ತಯಾರಿಸುವ ಕಾರ್ಖಾನೆ ಇರುವುದು ಫ್ರಾನ್ಸ್‌ನ ಟೊಲೌಸ್‌ನಲ್ಲಿ.

ಸಂಸ್ಥೆಯು ಒಂದು ಲಕ್ಷ ಮೂವತ್ತನಾಲ್ಕು ಸಾವಿರ ಜನರಿಗೆ ಉದ್ಯೋಗ ನೀಡಿದೆ. ಸಂಸ್ಥೆ ವಾರ್ಷಿಕ ಎಪ್ಪತ್ತು ಬಿಲಿಯನ್ ಡಾಲರ್‌ಗಿಂತ ಅಧಿಕ ಆದಾಯ ಹೊಂದಿದ್ದು, ಮೂರು ಬಿಲಿಯನ್ ಡಾಲರ್‌ಗಿಂತಲೂ ಅಧಿಕ ನಿವ್ವಳ ಲಾಭ ಮಾಡುತ್ತಿದೆ. ಎ-೩೧೯, ಎ-೩೨೦, ಎ-೩೨೧, ಎ-೨೨೦ ಸಫಲ ಮಾಡೆಲ್‌ಗಳು. ಸಾಮಾ ನ್ಯವಾಗಿ ವಿಮಾನದಲ್ಲಿ ಎರಡು ಎಂಜಿನ್‌ಗಳಿರುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಏರ್‌ಬಸ್ ಈ ವರ್ಷ ಮಾರುಕಟ್ಟೆಗೆ ತರುತ್ತಿರುವ ಎ-೩೮೦ ಮಾಡೆಲ್ ವಿಮಾನ ನಾಲ್ಕು ಎಂಜಿನ್ ಹೊಂದಿದ್ದು, ಎಂಟುನೂರ ಐವತ್ತಕ್ಕೂ ಹೆಚ್ಚು ಜನರನ್ನು ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ಸಂಸ್ಥೆ ಕಳೆದ ವರ್ಷ ಎಂಟು ನೂರ ಅರವತ್ತು ವಿಮಾನ ತಯಾರಿಸಿದೆ. ಇದುವರೆಗೆ ಸುಮಾರು ಹದಿನಾಲ್ಕು ಸಾವಿರಕ್ಕೂ ಹೆಚ್ಚು ವಿಮಾನ ತಯಾರಿಸಿದ್ದು, ಐದು ಸಾವಿರಕ್ಕೂ ಹೆಚ್ಚು ವಿಮಾನ ತಯಾರಿಸಿ ಕೊಡಲು ಬೇಡಿಕೆ ಹೊಂದಿದೆ. ಇಷ್ಟಾಗಿಯೂ ಈ ಎರಡೂ ಸಂಸ್ಥೆಗಳು ವಿಮಾನಕ್ಕೆ ಅತ್ಯವಶ್ಯಕವಾದ ಎಂಜಿನ್ ತಯಾರಿಸುವುದಿಲ್ಲ. ವಿಶ್ವದಾದ್ಯಂತ ವಿಮಾನಗಳಿಗೆ ಎಂಜಿನ್ ತಯಾರಿಸುವ ಕಂಪನಿಗಳಲ್ಲಿ ಮೊದಲನೆಯ ಸ್ಥಾನದಲ್ಲಿರುವುದು ಜನರಲ್ ಎಲೆಕ್ಟ್ರಿಕ್ (GE). ಎರಡನೆಯ ಸ್ಥಾನದಲ್ಲಿ ರೋಲ್ಸ್ ರಾಯ್ (RR), ನಂತರದ ಸ್ಥಾನದಲ್ಲಿ ಪ್ರಾಟ್ ಎಂಡ್ ವಿಟ್ನಿ (PW), ಸಿಎ-ಎಂ ಇಂಟರ್ ನ್ಯಾಷನಲ್ ಇತ್ಯಾದಿ ಕಂಪನಿಗಳಿವೆ. ವಾರ್ಷಿಕ ಮೂರು ಬಿಲಿಯನ್‌ನಷ್ಟು (ಸುಮಾರು ಇಪ್ಪತ್ತೊಂದು ಸಾವಿರ ಕೋಟಿ ರುಪಾಯಿ) ಆದಾಯವಿದ್ದು, ಎರಡೂವರೆ ಸಾವಿರಕ್ಕಿಂತಲೂ ಅಧಿಕ ನಿವ್ವಳ ಲಾಭ ಮಾಡುತ್ತಿದೆ.

ಆಕಾಶದಲ್ಲಿ ಒಂದು ವಿಮಾನ ಹಾರಾಡುತ್ತಿದೆಯೆಂದರೆ ಅದರ ಹಿಂದೆ ಲಕ್ಷಾಂತರ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ, ಉದ್ಯೋಗ ಮಾಡುತ್ತಿದ್ದಾರೆ
ಎಂದು ಅರ್ಥ. ವಿಮಾನದ ಪ್ರಮುಖ ಎಂಜಿನ್, ಬಾಡಿ, ಆಸನಗಳು, ಹವಾ ನಿಯಂತ್ರಣ, ಅಲಂಕಾರ ಮೊದಲಾದವುಗಳಿಂದ ವಿಮಾನವನ್ನು ಸಿದ್ಧಪಡಿಸಿ,
ಹಾರಾಟಕ್ಕೆ ಬೇಕಾದ ಪೈಲಟ್‌ಗಳು, ನಿರ್ವಹಣೆ ಸಿಬ್ಬಂದಿ, ವಿಮಾನ ನಿಲ್ದಾಣದ ಸಿಬ್ಬಂದಿ, ಭೂ ಸಿಬ್ಬಂದಿ, ಸಂಕೇತ ನೀಡುವ ಸಿಬ್ಬಂದಿವವರೆಗೆ ಎಲ್ಲರ
ಶ್ರಮವಿದೆ. ಇದರ ಹೊರತಾಗಿ ಪ್ರವಾಸೋದ್ಯಮ, ಹೋಟೆಲ, ಟಿಕೆಟ್ ಬುಕಿಂಗ್, ಕ್ಯಾಟರಿಂಗ್, ಸ್ವಚ್ಛತೆ, ಇತ್ಯಾದಿ ದೊಡ್ಡದೊಂದು ವಿಸ್ತೃತ ಕುಟುಂಬವೇ ಇದೆ. ಆದೇನೇ ಇದ್ದರೂ, ನಿರ್ಮಾಣ ಕಾರ್ಯದಲ್ಲಿ ಬೋಯಿಂಗ್ ಮತ್ತು ಏರ್‌ಬಸ್ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿಯಲು ಇತರರಿಗೆ ಸಾಧ್ಯವಾಗದಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ.

ಮೊದಲನೆಯದು, ವಿಮಾನ ಅಭಿವೃದ್ಧಿ ವೆಚ್ಚ (Development Cost). ಸಾಮಾನ್ಯವಾಗಿ ಒಂದು ಪ್ರಯಾಣಿಕರ ವಿಮಾನವನ್ನು ಅಭಿವೃದ್ಧಿಪಡಿಸಲು ಹತ್ತರಿಂದ ಹದಿನೈದು ಬಿಲಿಯನ್ ಡಾಲರ್ ಬೇಕು. ಏರ್‌ಬಸ್ ಎ-೩೮೦ರಂಥ ಆಧುನಿಕ ವಿಮಾನವನ್ನು ತಯಾರಿಸುವಾಗ ಈ ವೆಚ್ಚ ಇಪ್ಪತ್ತು ಬಿಲಿಯನ್ ಡಾಲರ್‌ವರೆಗೂ ಹೋಗುತ್ತದೆ. ನಂತರದ ನಿರ್ಮಾಣ, ಪರೀಕ್ಷಾ ವೆಚ್ಚ ಇತ್ಯಾದಿಗಳನ್ನೆಲ್ಲ ಸೇರಿಸಿದರೆ ಒಂದು ವಿಮಾನ ಹಾರಾಟಕ್ಕೆ ಸಿದ್ಧವಾಗುವವರೆಗೆ ತಗಲುವ ವೆಚ್ಚ ಸುಮಾರು ಮೂವತ್ತೈದು ಬಿಲಿಯನ್ ಡಾಲರ್‌ಗಳು. ಯಾವುದೇ ದೇಶದ ಸರಕಾರವಾಗಲೀ ಅಥವಾ ಯಾವುದೇ ಸಂಸ್ಥೆಯಾಗಲೀ ಇಷ್ಟೊಂದು ದೊಡ್ಡ ಮೊತ್ತವನ್ನು ತೊಡಗಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಎರಡನೆಯ ಕಾರಣ ತಿಳಿದ ಮೇಲಂತೂ ಈ ಸಾಹಸಕ್ಕೆ ಯಾರೂ ಇಳಿಯುವುದಿಲ್ಲ.

ಎರಡನೆಯ ಕಾರಣ, ಬೋಯಿಂಗ್ ಅಮೆರಿಕ ಸರಕಾರದೊಂದಿಗೂ, ಏರ್‌ಬಸ್ ಯುರೋಪಿಯನ್ ಯೂನಿಯನ್ ದೇಶಗಳೊಂದಿಗೂ ತಮ್ಮ ಬಾಂಧವ್ಯ ವನ್ನು ಗಟ್ಟಿಗೊಳಿಸಿಕೊಂಡಿವೆ. ಮೊದಲನೆಯ ಮತ್ತು ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಆಯಾ ದೇಶಗಳಿಗೆ ಬೇಕಾದ ಯುದ್ಧ ವಿಮಾನ
ತಯಾರಿಸಿಕೊಡುವ ಸಂದರ್ಭದಲ್ಲಿ ಗಟ್ಟಿಗೊಂಡ ಈ ಬೆಸುಗೆ ಇನ್ನೂ ಸುಭದ್ರವಾಗಿದೆ. ಇದು ಕಾಲಕ್ಕೆ ತಕ್ಕಂತೆ ಸರಕಾರದ ನೀತಿ ನಿಯಮಗಳನ್ನು ತಮಗೆ
ಬೇಕಾದಂತೆ ಬದಲಾಯಿಸಿಕೊಳ್ಳುವಷ್ಟರ ಮಟ್ಟಕ್ಕೆ ಬೆಳೆದು ನಿಂತಿದೆ. ಇನ್ನು, ವಾಯುಯಾನದ ನಿಯಮಾವಳಿಗಳನ್ನು ರೂಪಿಸುವ ಎರಡು ಪ್ರಮುಖ
ಸಂಸ್ಥೆಗಳೆಂದರೆ, ಫೆಡರಲ್ ಏವಿಯೇಷನ್ ಅಡ್ಮಿನಿ ಸ್ಟ್ರೇಷನ್ (FAA) ಮತ್ತು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (EASA).

ರಷ್ಯಾ, ಕೆನಡಾ, ಚೀನಾದಂಥ ಕೆಲವೇ ದೇಶಗಳನ್ನು ಹೊರತುಪಡಿಸಿ, ವಿಶ್ವದ ಬಹುತೇಕ ದೇಶಗಳು ಈ ಸಂಸ್ಥೆಗಳ ಮಾರ್ಗಸೂಚಿಯನ್ನು ಒಪ್ಪಿಕೊಂಡಿವೆ. ಈ ದೇಶಗಳಿಗೆ ದೊಡ್ಡ ಮೊತ್ತ ತೊಡಗಿಸಿ, ಪ್ರಯಾಣಿಕರ ವಿಮಾನಗಳನ್ನು ತಯಾರಿಸುವುದು ಸಾಧ್ಯವೇ ಇಲ್ಲದ ಮಾತು. ತಯಾರಿಸುವ ತಾಕತ್ತಿದ್ದ ರಾಷ್ಟ್ರಗಳು ತಮ್ಮ ವ್ಯವಹಾರದ ಕೋಟೆಯಲ್ಲಿ ನುಗ್ಗದಂತೆ ಈ ಸಂಸ್ಥೆಗಳು ನಿಯಮಗಳನ್ನು ರೂಪಿಸುತ್ತವೆ, ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತಲೂ ಇರುತ್ತವೆ. ಅಲ್ಲಿಗೆ ದೊಡ್ಡ ಮೊತ್ತವನ್ನು ತೊಡಗಿಸಿ ವಿಮಾನ ತಯಾರಿಸಿದರೂ ಅದು ದೇಶದೊಳಕ್ಕೆ ಹಾರಬೇಕೇ ವಿನಾ ಈ ರಾಷ್ಟ್ರಗಳಿಗೆ ಹೋಗಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಭಾರತ, ಚೀನಾ, ಜಪಾನ್, ರಷ್ಯಾದಂಥ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಬಲ್ಲ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದರೂ, ಯುದ್ಧ ವಿಮಾನ ತಯಾರಿಸುವುದರಲ್ಲಿಯೋ, ತಮ್ಮ ದೇಶದ ಒಳಗೆ ಪ್ರಯಾಣಿಕರು ಮತ್ತು ಸರಕು ಸಾಗಿಸುವ ವಿಮಾನ ತಯಾರಿಸುವುದರಲ್ಲಿಯೋ ಸಮಾಧಾನಪಟ್ಟುಕೊಳ್ಳುತ್ತಿವೆ.

ಅಷ್ಟೇ ಅಲ್ಲ, ಭಾರತದ ಎಚ್‌ಎಎಲ್ ಸೇರಿದಂತೆ ಇತರ ರಾಷ್ಟ್ರಗಳ ಕೆಲವು ಸಂಸ್ಥೆಗಳು ವಿಮಾನಕ್ಕೆ ಬೇಕಾದ ಬಿಡಿಭಾಗಗಳನ್ನು ತಯಾರಿಸಿ ಅದೇ ಬೋಯಿಂಗ್ ಮತ್ತು ಏರ್‌ಬಸ್ ಸಂಸ್ಥೆಗೆ ಮಾರಾಟಮಾಡುತ್ತಿವೆ. ಈ ವ್ಯಾಪಾರ, ವ್ಯವಹಾರ, ರಾಜಕೀಯ, ಏಕಸ್ವಾಮ್ಯ, ಪೂರ್ಣಾಧಿಕಾರದ ವಿಷಯಗಳಿಗೆ ನಾವು ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾ? ಬೋಯಿಂಗ್ ಆದರೂ ಸರಿ, ಏರ್‌ಬಸ್ ಆದರೂ ಸರಿ, ಯಂತ್ರದ ಹಕ್ಕಿಯ ರೆಕ್ಕೆಯ ಕೆಳಗಿರುವ ಪಂಖ ತಿರುಗಬೇಕು, ವಿಮಾನದಲ್ಲಿ ಕುಳಿತು ಹಾರಬೇಕು, ತಾಣ ಸೇರಬೇಕು ಅಷ್ಟೇ!

ಕೊನೆಯದಾಗಿ, The propeller is just a big fan in front of the plane used to keep the pilot cool. When it stops, pilot starts sweating.