Wednesday, 11th December 2024

ಆರೋಗ್ಯಕರ ಮಧ್ಯಮ ವರ್ಗ

ಪ್ರಸ್ತುತ

ಡಾ.ವೆಂಕಟೇಶ್ ಮೂರ್ತಿ ಕೆ.

ಒಂದು ರಾಷ್ಟ್ರದ ಜನಸಂಖ್ಯೆಯನ್ನು ಶ್ರೀಮಂತ, ಮಧ್ಯಮ ಮತ್ತು ಬಡವರೆಂದು ವರ್ಗಿಕರಿಸುವುದು ಸರ್ವೆ ಸಾಮಾನ್ಯ. ಈ ಹಿಂದೆ ೨೦೦೯ರಿಂದ ನೋಡಿದರೆ ಆರ್ಥಿಕತೆಯ ೫೦ ಪ್ರತಿಶತದಷ್ಟು ಜನರು ಮಧ್ಯಮ ಆದಾಯದ ಗುಂಪಿಗೆ ಪ್ರವೇಶಿಸುತ್ತಿದ್ದರೆ ಎಂದು ಇತ್ತೀಚಿಗೆ ಸಂಶೋಧನೆಗಳಿಂದ ಬಹಿರಂಗವಾಗಿದೆ. ಈ ವರ್ಗವು ಈಗ ವಿಶ್ವಾದ್ಯಾಂತ ಆರ್ಥಿಕ ಬೆಳವಣಿಗೆಗೆ ಮತ್ತು ಆರೋಗ್ಯಕರ ಸಮಾಜವನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರ ವನ್ನು ವಹಿಸುತ್ತಿರುವುದನ್ನು ಗಮನಿಸಬಹುದಾಗಿದೆ. ಮಧ್ಯಮ ವರ್ಗ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ ಬ್ರಿಟನ್ ಯು.ಕೆ ರಿಜಿಸ್ಟ್ರಾರ್-ಜನರಲ್ ವರದಿಯಲ್ಲಿ ೧೯೧೩ ರಲ್ಲಿ ಬಳಸಲಾಯಿತು.

ಅರ್ಥಶಾಸ್ತ್ರಜ್ಞ ಫ್ರೆಡ್ರಿಕ್ ಎಂಗೆಲ್ಸ ಸಮಾಜದಲ್ಲಿ ಮಧ್ಯಮ ವರ್ಗವನ್ನು ಶ್ರೀಮಂತರು ಮತ್ತು ರೈತರ ನಡುವಿನ ಸಾಮಾಜಿಕ ವರ್ಗವೆಂದು ವ್ಯಾಖ್ಯಾನಿಸಿ ದರೆ, ಸಂಖ್ಯಾಶಾಸ್ತ್ರಜ್ಞ ಸ್ಟೀವನ್ಸನ್, ಮಧ್ಯಮ ವರ್ಗವನ್ನು ಮೇಲ್ವರ್ಗದ ಮತ್ತು ಕಾರ್ಮಿಕರ ನಡುವೆಯಿರುವ ವ್ಯಕ್ತಿಗಳು ಎಂದು ವ್ಯಾಖ್ಯಾನಿಸಿದ್ದರು. ಸಾಮಾನ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನರು ತಮ್ಮ ಆದಾಯದ ಸರಿಸುಮಾರು ಮೂರನೇ ಒಂದು ಭಾಗದಷ್ಟು ಹಣವನ್ನು ಆಹಾರ, ಆರೋಗ್ಯ ಹಾಗೂ ಮಕ್ಕಳ ಶಿಕ್ಷಣಕ್ಕೆ ಮೀಸಲಿಡುವುದು ಸಾಮಾನ್ಯ. ೨೦೧೭ರಲ್ಲಿ ಪ್ರಕಟಗೂಂಡ ಪೀಟರ್ ಟೆಮಿನ್ ಅವರ ‘ದಿ ವ್ಯಾನಿಶಿಂಗ್ ಮಿಡಲ್ ಕ್ಲಾಸ್’ ಎನ್ನುವ ಪುಸ್ತಕದಲ್ಲಿ ಜಾಗತೀಕರಣ, ಆಟೋಮೇಷನ್ ಮತ್ತು ಹೊಸ ತಂತ್ರಜ್ಞಾನಗಳು ಬಂಡವಾಳಶಾಯಿಗಳಿಗೆ ಲಾಭದಾಯಕವಾಗಿ ಪರಿಣಮಿಸಿದರೆ. ಆದರೆ ಇದೇ ತಂತ್ರಜ್ಞಾನಗಳು ಶ್ರಮಿಕ ವರ್ಗಕ್ಕೆ ಶಾಪವಾಗಿ ಶ್ರೀಮಂತ ಮತ್ತು ಬಡವರ ನಡುವೆ ಅಂತರ ದಿನದಿಂದ ದಿನಕ್ಕ ಹೆಚ್ಚಾಗಲು ಕಾರಣವಾಗಿದೆ ಎಂದಿದ್ದಾರೆ.

ಒಂದು ಕಾಲದಲ್ಲಿ ಅಮೆರಿಕದ ಬಹುಪಾಲು ಜನಸಂಖ್ಯೆ ಮಧ್ಯಮ ವರ್ಗದಲ್ಲಿತ್ತು. ಆದರೆ ಕಳೆದ ಐದು ದಶಕಗಳಲ್ಲಿ ಇದು ಕುಸಿಯವಾಗಿದೆ. ೧೯೭೧ರಲ್ಲಿ ಶೇ.೬೧ರಷ್ಟಿದ್ದ ಮಧ್ಯಮವರ್ಗ, ೨೦೨೧ರ ವೇಳೆಗೆ ಶೇ.೫೦ಕ್ಕೆ ಕುಸಿತವಾಯಿತು. ಆದರೆ ಇತರ ಹಲವು ದೇಶಗಳಲ್ಲಿ, ವಿಶೇಷವಾಗಿ ಭಾರತದಲ್ಲಿ ವಿಭಿನ್ನ ವಾಗಿದೆ. ಪೀಪಲ್ ರಿಸರ್ಚ್ ಆನ್ ಇಂಡಿಯಾಸ್ ಕನ್ಸ್ಯೂಮರ್ ಎಕಾನಮಿ ಎಂಬ ವಿಚಾರ ವೇದಿಕೆ ೨೦೨೩ರಲ್ಲಿ ‘ದಿ ರೈಸ್ ಆಫ್ ಇಂಡಿಯಾಸ್ ಮಿಡಲ್ ಕ್ಲಾಸ್’ ಎಂಬ ವರದಿಯನ್ನು ಪ್ರಕಟಿಸಿತು. ಇದರ ಅದ್ಯಾಯನದ ಪ್ರಕಾರ ೧೯೯೧ರಲ್ಲಿ ಆರ್ಥಿಕ ಉದಾರೀಕರಣದ ನಂತರ ಭಾರತದಲ್ಲಿ ಮಧ್ಯಮ ವರ್ಗವು ದ್ವಿಗುಣಗೊಂಡು ಒಟ್ಟು ಜನಸಂಖ್ಯೆಯ ೩೦ ಪ್ರತಿಶತದಷ್ಟು ತಲುಪಿ ನಗರೀಕರಣ ಮತ್ತು ಸಾಮಾಜಿಕ ನೀತಿಗಳ ಮೇಲೆ  ಅನುಕೂಲಕರ ಪರಿಣಾಮ ಬಿರಿದೆ ಎಂದು ಅಭಿಪ್ರಾಯಪಟ್ಟಿದೆ.

ವಿಶ್ವಬ್ಯಾಂಕ್ ಹಾಗೂ ಭಾರತದ ಅರ್ಥಶಾಸಜ್ಞರ ಸಂಶೋಧನಾ ಅಧ್ಯಯನದ ಪ್ರಕಾರ, ಮಧ್ಯಮ ವರ್ಗದ ಪ್ರತಿವ್ಯಕ್ತಿ ದಿನ ಒಂದಕ್ಕೆ ಮೆಟ್ರೋ
ನಗರ ದಲ್ಲಿ ೧೦ ಮತ್ತು ೧೦೦, ಸಾಮಾನ್ಯ ನಗರದಲ್ಲಿ ೨ ಮತ್ತು ೧೦ ಡಾಲರ್ ದೈನಂದಿನ ವೆಚ್ಚಗಳಿಗಾಗಿ ಖರ್ಚು ಮಾಡುತ್ತಾನೆ ಎಂದು ಅಂದಾಜಿಸಿದ್ದಾರೆ. ಈ ಅಳತೆಯಂತೆ ಮಧ್ಯಮ ವರ್ಗವು ಪ್ರಸ್ತುತ ಭಾರತೀಯ ಜನಸಂಖ್ಯೆಯ ಅರ್ಧದಷ್ಟು ಭಾಗವನ್ನು ಒಳಗೊಂಡಿದೆ ಎಂದು ಉಹಿಸಿದೆ. ಖ್ಯಾತ ಅರ್ಥ ಶಾಸ್ತ್ರಜ್ಞ ಲೆಸ್ಟರ್ ಥುರೊ ಪ್ರಕಾರ ಪ್ರಕಾರ ಆರೋಗ್ಯಕರ ರಾಜಕೀಯ ಪ್ರಜಾಪ್ರಭುತ್ವವನ್ನು ಹೊಂದಲು ಆರೋಗ್ಯಕರ ಮಧ್ಯಮ ವರ್ಗದ ಅಗತ್ಯವಿದೆ ಎಂದ್ದಿzರೆ. ದೇಶವು ಅಗತ್ಯವಾದ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಿದರೆ ೨೦೪೭ ರ ವೇಳೆಗೆ ೬೩ ಪ್ರತಿಶತ ಭಾರತೀಯ ಕುಟುಂಬಗಳು ಮಧ್ಯಮ ವರ್ಗಕ್ಕೆ ಸೇರುವ ಸಂಭವವಿದೆ ಎಂದು ಪ್ರೈಸ್ ವೇದಿಕೆ ಭವಿಷ್ಯ ನುಡಿದಿದೆ.

(ಲೇಖಕರು : ಉಪನ್ಯಾಸಕರು, ಸರಕಾರಿ ಪದವಿ ಪೂರ್ವ
ಕಾಲೇಜು, ಭದ್ರಾವತಿ)