ತಿಳಿರು ತೋರಣ
srivathsajoshi@yahoo.com
ಕಥೆ ಕಾವ್ಯ ಕವಿತೆ ಹೀಗೆ ಸಾಹಿತ್ಯಪ್ರಕಾರಗಳಲ್ಲಿ ಕಂಡುಬರುವ ಮಿಡುಕು ಪದ ಆಡುಮಾತಿನಲ್ಲಿ ಅಷ್ಟೇನೂ ಬಳಕೆ ಯಿಲ್ಲ. ವೆಂಕಟಸುಬ್ಬಯ್ಯನವರು ವಿವರಿಸಿದಂತೆ ಅಷ್ಟೆಲ್ಲ ಅರ್ಥಗಳನ್ನು ಕೊಡಬಲ್ಲದ್ದಾದ್ದರಿಂದ ಕವಿಗಳಿಗೆ ಕಥೆಗಾರ ರಿಗೆ ಸಹಜವಾಗಿಯೇ ಹೆಚ್ಚು ಉಪಯೋಗಕ್ಕೆ ಬರುವುದಿರಬಹುದು. ಮತ್ತೆ ಕೆಲವು ಮಿಡುಕಾಟಗಳನ್ನು ಮೆಲುಕು ಹಾಕಿದಾಗ ಮೋಜೆನಿಸುವುದೂ ಇದೆ.
‘ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ… ಬರಲಾಗದೆ ರಾವಣ ಮಿಡುಕಿದನು… ಲಿಂಗವು ಧರೆಯನು ಸೇರಿತು…’ ನೀವು ಗೋಕರ್ಣದ ಪುರಾಣ ಕಥನವನ್ನು ಆಲಿಸಿ ಜೀವನ ಪಾವನಗೊಳಿಸಿದ್ದೀರಾದರೆ ನಿಮಗೆ ಈ ಸಾಲು ಗಳು ನೆನಪಿ ರುತ್ತವೆ.
ಎಪ್ಪತ್ತು-ಎಂಬತ್ತರ ದಶಕದಲ್ಲಿ ಬಂದ ಇವೆಲ್ಲ ಕೆಲವು ಎವರ್ಗ್ರೀನ್ ಭಕ್ತಿಗೀತೆಗಳು, ಲಾವಣಿಯ ರೂಪದಲ್ಲಿ ಕಥೆ ಹೇಳು ವಂಥವು, ಆಗಿನ ಚಿತ್ರಗೀತೆಗಳಂತೆಯೇ ಪ್ರಸಿದ್ಧವಾಗಿ ಜನಮಾನಸದಲ್ಲಿ ನೆಲೆನಿಂತವುಗಳು. ಗೋಕರ್ಣದ ಪುರಾಣ ಕಥನ, ವಿನಾಯಕ ಚೌತಿ ಯಂದು ತಪ್ಪದೇ ಕೇಳಿಬರುವ ಸ್ಯಮಂತಕೋಪಾಖ್ಯಾನ ಗೀತೆ, ಧರ್ಮಸ್ಥಳದ ಮಂಜು ನಾಥಸ್ವಾಮಿಗೆ ಸುಪ್ರಭಾತ ಹೇಳುವ ಎದ್ದೇಳು ಮಂಜುನಾಥ… ಅದೇ ಥರದ ಮತ್ತೂ ಕೆಲವಾರು ಒಳ್ಳೊಳ್ಳೆಯ ಹಾಡುಗಳು.
ಅವೆಲ್ಲವನ್ನೂ ಅಜರಾಮರವಾಗಿಸಿದ್ದು ಆಕಾಶವಾಣಿ. ಅದಕ್ಕಿಂತಲೂ ಹೆಚ್ಚಾಗಿ ದೇವಸ್ಥಾನಗಳಲ್ಲಿ, ಸಿನಿಮಾ ಟೆಂಟ್ಗಳಲ್ಲಿ ಮತ್ತು ಸಮಾರಂಭಗಳ ಚಪ್ಪರಗಳಲ್ಲಿ ಮೊಳಗುತ್ತಿದ್ದ ಲೌಡ್ಸ್ಪೀಕರ್ ಗಳು. ಈಗಲೂ ಇಂತಹ ಹಾಡುಗಳನ್ನು ಕೇಳುವುದೆಂದರೆ, ಜತೆಯಲ್ಲೇ ಗುನುಗುನಿಸುವುದೆಂದರೆ ಹಾಯೆನಿಸುವ ವಿಶಿಷ್ಟ ಅನುಭವ. ಒಂಥರದ ನೊಸ್ಟಾಲ್ಜಿಕ್ ರೋಮಾಂಚನ.
ಅದಕ್ಕೋಸ್ಕರವೇ ನನ್ನ ಡಿಜಿಟಲ್ ಸಂಗೀತ ಉಗ್ರಾಣದಲ್ಲಿ ಇವಕ್ಕೆ ಒಂದಿಷ್ಟು ಗಿಗಾಬೈಟ್ಗಳ ಮೀಸಲು ಸ್ಥಾನ. ಗೋಕರ್ಣದ ಪುರಾಣಕಥನ ಹಾಡಿನಿಂದ ಇದೇ ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುವುದಕ್ಕೆ ಅ ಅಕ್ಷರವೊಂದೇ ಕಾರಣವಲ್ಲ. ಇದರಲ್ಲಿ ‘ಬರಲಾಗದೆ ರಾವಣ ಮಿಡುಕಿದನು…’ ಎಂದು ಬರುತ್ತದಲ್ಲ, ಈ ‘ಮಿಡುಕಿದನು’ ಪದ ನನಗೆ ಯಾವತ್ತಿಗೂ ವಿಶೇಷವಾಗಿ, ಸ್ವಾರಸ್ಯ ಕರವಾಗಿ ಕೇಳಿಸುತ್ತದೆ. ಹಾಗಂತ ಇದೇನೂ ಅರ್ಥವಾಗದ ಕಠಿನ ಪದವೇನಲ್ಲ. ಸಂದರ್ಭ ಸನ್ನಿವೇಶದಿಂದಲೇ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ವಟುರೂಪಿ ಗಣಪನ ಕೈಯಲ್ಲಿ ಆತ್ಮಲಿಂಗವನ್ನು ಕೊಟ್ಟು ರಾವಣನು ಸಂಧ್ಯಾವಂದನೆಗೆ ಕುಳಿತಿದ್ದಾನೆ. ಗಾಯತ್ರೀಮಂತ್ರ ಉಚ್ಚರಿಸುತ್ತ ಅರ್ಘ್ಯವನ್ನು ಸಮರ್ಪಿಸುವ ವೇಳೆಗೆ ಸರಿಯಾಗಿ ಗಣಪ ರಾವಣನನ್ನು ಕರೆದಿದ್ದಾನೆ. ನಿಜವಾಗಿಯಾದರೆ, ನಾರದರ ಸಲಹೆಯಂತೆ ಕಾರ್ಯಕ್ಕಿಳಿದಿದ್ದ ಗಣಪನದು ಪೂರ್ವ ನಿಯೋಜಿತ ಕೃತ್ಯ, ಆದರೆ ರಾವಣ ತಬ್ಬಿಬ್ಬು. ಸಂಧ್ಯಾವಂದನೆ ಅರ್ಧ ದಲ್ಲಿ ಬಿಟ್ಟುಬರುವಂತಿಲ್ಲ, ಬರದೇ ಇದ್ದರೆ ಕಿಲಾಡಿ ಗಣಪ ಆತ್ಮಲಿಂಗವನ್ನು ನೆಲದ ಮೇಲಿಡದೆ ಬಿಡುವುದಿಲ್ಲ. ಒಮ್ಮೆ ನೆಲದ ಮೇಲೆ ಕೂತಿತೋ ಆಮೇಲೆ ಆ ಆತ್ಮಲಿಂಗವನ್ನು ಜಪ್ಪಯ್ಯ ಎಂದರೂ ಅಲ್ಲಿಂದ ಎಬ್ಬಿಸಲಿಕ್ಕಾಗುವುದಿಲ್ಲ- ಎಂದು ಎಚ್ಚರಿಕೆ ಕೊಟ್ಟೇ ಪರಮೇಶ್ವರನು ರಾವಣನಿಗೆ ಅದನ್ನು ಅನುಗ್ರಹಿಸಿದ್ದಾಗಿತ್ತು.
ತಾನು ಮೂರು ಬಾರಿಯಷ್ಟೇ ಕರೆಯುವುದಾಗಿಯೂ, ಬರದಿದ್ದರೆ ಲಿಂಗವು ಧರೆಪಾಲಾಗುವುದಾಗಿಯೂ ಗಣಪ ಮೊದಲೇ ಕಟ್ಟಳೆ ಅರುಹಿದ್ದಾಗಿತ್ತು. ಅಂಥದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ರಾವಣ ಮಿಡುಕಿದನು. ಅಂದರೆ, ಚಡಪಡಿಸಿದನು, ಪೇಚಾಡಿದನು, ಕೈಕೈ ಹಿಸುಕಿಕೊಂಡನು. ನಾವಾಗಿದ್ರೆ ‘ಅಯ್ಯೋ ರಾಮಾ…’ ಎನ್ನುತ್ತ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಿದ್ದೆವೋ ಏನೋ. ಆದರೆ ರಾವಣ ಹಾಗೆ ಹೇಳಿರಲಿಕ್ಕಿಲ್ಲವೆನ್ನಿ. ಆಗಿನ್ನೂ ಅವನಿಗೆ ರಾಮನ ಪರಿಚಯವೂ ಆಗಿರಲಿಲ್ಲವಲ್ಲ.
ಬದಲಿಗೆ ಅವನೇನು ಮಾಡಿದನೆಂದರೆ ‘ಓಡಿ ಬಂದು ವಟು ಮಾಡಿದ ಕಾರ್ಯಕೆ ರೋಷಾವೇಷದಿ ಕುಟ್ಟಿದನು… ರಾವಣೇಶ್ವರನು ಗಣಪತಿ ಶಿರವನು ಮುಷ್ಟಿಯಿಂದ ತಾ ಗುದ್ದಿದನು…’ ಮುಂದಿನ ಕಥೆ ಗೊತ್ತಿದ್ದದ್ದೇ. ನೆಲದಲ್ಲೂರಿದ್ದನ್ನು ಕೀಳಲಿಕ್ಕೆ ರಾವಣನು ಪ್ರಯತ್ನಿಸಿದನು. ಸೆಜ್ಜೇಶ್ವರ, ಗುಣವಂತೇಶ್ವರ, ಮುರುಡೇಶ್ವರ, ಧಾರೇಶ್ವರ, ಮತ್ತು ಮಹಾಬಲೇಶ್ವರ – ಹೀಗೆ ಐದು ಕಡೆಗಳಲ್ಲಿ ಐದು ಲಿಂಗಗಳು ನೆಲೆಯೂರಿ ನಮ್ಮ ಕರುನಾಡ ಕರಾವಳಿಯು ಪಾವನವಾಯಿತು.
ಸರಿ, ‘ಮಿಡುಕು’ ಪದ ಸ್ವಾರಸ್ಯಕರವಾಗಿ ಕಾಣುವುದಕ್ಕೆ ಮುಖ್ಯ ಕಾರಣ ಅದರ ಅರ್ಥವ್ಯಾಪ್ತಿ. ರಾವಣನ ಸಂದರ್ಭದಲ್ಲಾದರೋ ಅದಕ್ಕೆ ಚಡಪಡಿಸು, ಪೇಚಾಡು, ಕೈಕೈ ಹಿಸುಕಿಕೊಳ್ಳು ಎಂಬ ಅರ್ಥವೆಂದು ನೋಡಿದೆವು. ಆದರೆ ಅದಷ್ಟೇ ಅಲ್ಲ. ಜಿ.ವೆಂಕಟ ಸುಬ್ಬಯ್ಯನವರ ನಿಘಂಟು ತೆರೆದುನೋಡಿದರೆ ಮಿಡುಕು ಪದಕ್ಕೆ ಅಲುಗು, ಕದಲು, ಮಿಸುಕು, ಕಂಪಿಸು, ನಡುಗು, ಅದುರುವಂತೆ ಮಾಡು, ನಡುಗಿಸು, ಬೆಚ್ಚಿಬೀಳು, ಮೆಟ್ಟಿಬೀಳು, ಚಲಿಸು, ಸುಳಿ, ಸಂಚರಿಸು, ಚಂಚಲವಾಗು, ಅಸ್ಥಿರಗೊಳ್ಳು, ದಾಳಿ ಮಾಡಲು ಮುನ್ನುಗ್ಗು, ಧಾವಿಸು, ಆತುರಪಡು, ತವಕಿಸು, ಹಾರು, ಜಿಗಿ, ನೆಗೆ, ಹಿಂದಕ್ಕೆ ಸರಿ, ತೆರಳು, ಕೊರಗು, ಪರಿತಪಿಸು, ಚಡಪಡಿಸು, ಒದ್ದಾಡು, ಪಶ್ಚಾತ್ತಾಪ ಪಡು – ಹೀಗೆ ಬರೋಬ್ಬರಿ ಇಪ್ಪತ್ತೆಂಟು ಕ್ರಿಯಾಪದಗಳನ್ನು ಸಮಾನಾರ್ಥಕವಾಗಿ ಸೂಚಿಸಿದ್ದಾರೆ! ಅಷ್ಟು ಸಾಲ ದೆಂಬಂತೆ- ಕಣ್ಣುರೆಪ್ಪೆಯ ಅಲುಗಾಟ, ಚಲನೆ, ನಡುಕ, ಕಂಪನ, ಮಿಡಿತ, ತುಡಿತ, ಸ್ಪಂದನ, ಕನಿಕರ, ಅನುಕಂಪ, ಪರಾಕ್ರಮ, ಶೌರ್ಯ, ಕಸುವು, ಶಕ್ತಿ – ಹೀಗೆ ಹದಿಮೂರು ನಾಮಪದಗಳನ್ನೂ ತಿಳಿಸಿದ್ದಾರೆ.
ಕಿಟ್ಟೆಲ್ ಕೋಶದಲ್ಲಂತೂ ಮಿಡುಗು, ಮಿಡುಂಕು, ಮಿಡುಕ್ಕು, ಮುಡುಕ್ಕು, ಮುಡುಗು ಮುಂತಾದ ರೂಪಭೇದಗಳನ್ನೂ, ‘ಮಿಟ್ಟನೆ ಮಿಡುಕು’ ಎಂಬ ಪದಪ್ರಯೋಗವನ್ನೂ ತಿಳಿಸಿದ್ದಾರೆ. ಇವೆಲ್ಲ ಬಹುಶಃ ಹಳಗನ್ನಡದಲ್ಲಿ ಹೆಚ್ಚು ಬಳಕೆಯಲ್ಲಿದ್ದವೋ ಏನೋ. ಈಗಲಾದರೂ ಅಷ್ಟೇ- ಕಥೆ ಕಾವ್ಯ ಕವಿತೆ ಹೀಗೆ ಸಾಹಿತ್ಯ ಪ್ರಕಾರಗಳಲ್ಲಿ ಕಂಡುಬರುವ ಮಿಡುಕು ಪದ ಆಡುಮಾತಿನಲ್ಲಿ
ಅಷ್ಟೇನೂ ಬಳಕೆಯಿಲ್ಲ. ವೆಂಕಟಸುಬ್ಬಯ್ಯನವರು ವಿವರಿಸಿದಂತೆ ಅಷ್ಟೆಲ್ಲ ಅರ್ಥಗಳನ್ನು ಕೊಡಬಲ್ಲದ್ದಾದ್ದರಿಂದ ಕವಿಗಳಿಗೆ ಕಥೆಗಾರರಿಗೆ ಸಹಜವಾಗಿಯೇ ಹೆಚ್ಚು ಉಪಯೋಗಕ್ಕೆ ಬರುವುದಿರಬಹುದು.
ಮಿಡುಕು ಪದಬಳಕೆಯನ್ನು ಹುಡುಕು ಎಂದು ಗೂಗಲ್ಗೆ ಆಣತಿಯಿತ್ತರೆ ಗೂಗಲ್ ಕೂಡ ಅದನ್ನೇ ದೃಢಪಡಿಸುತ್ತದೆ.
ಮಿಡುಕಿದನು ಎಂದು ಹುಡುಕಿದರಂತೂ ಗೋಕರ್ಣದ ಪುರಾಣಕಥನದ ಲಿಂಕ್ಅನ್ನೇ ಮೊದಲಿಗೆ ತೋರಿಸುತ್ತದೆ. ಹಾಗೆಯೇ ಪಂಡರೀನಾಥಾಚಾರ್ಯ ಗಲಗಲಿಯವರು ‘ಪೇಜಾವರ ಶ್ರೀಗಳವರಿಗೆ ಪರ್ಯಾಯಪುಷ್ಪ’ ಎಂಬ ಕವಿತೆಯ ರೂಪದ ಗೌರವಾ ರ್ಪಣೆಯಲ್ಲಿ ‘ಗೀತೆಯ ಪೇಳಿದ ಪೀತಾಂಬರಹರಿ ಅದರೀ ಗತಿಗೆ ಮಿಡುಕಿದನು; ಗೀತೆಯ ಸೊಲ್ಲನು ಎಲ್ಲೆಡೆ ಕೇಳಿಸಬಲ್ಲವನಾತನ ಹುಡುಕಿದನು’ ಎಂದಿರುವುದನ್ನೂ ತೋರಿಸುತ್ತದೆ.
ಅಂದರೆ, ಜಗನ್ನಿಯಾಮಕನಾದ ಕೃಷ್ಣ ಪರಮಾತ್ಮನೂ ಮಿಡುಕುತ್ತಾನೆ ಅಂತಾಯ್ತು. ಕೃಷ್ಣಕಥೆಯೆಂದೇ ಮಹಾಭಾರತವನ್ನು ಬರೆದ ಕುಮಾರವ್ಯಾಸನೂ ಅಲ್ಲಲ್ಲಿ ಮಿಟ್ಟನೆ ಮಿಡುಕಿದ್ದಾನೆ, ಅರ್ಥಾತ್ ಮಿಡುಕು ಪದವನ್ನು ಬಳಸಿದ್ದಾನೆ. ಉದಾಹರಣೆಗೆ ಸಭಾ ಪರ್ವದ ಈ ಷಟ್ಪದಿ: ‘ಈಯವಸ್ಥೆಗೆ ತಂದ ಕೌರವ| ನಾಯಿಗಳ ನಿಟ್ಟೆಲುವ ಮುರಿದು ನ| ವಾಯಿ ಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ| ವಾಯುಸಖನಲಿ ಸುಡುವೆನೀಗಳೆ| ಬೀಯವಾಗಲಿ ದೇಹವಾಚಂ| ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ’ – ಇದು ಭೀಮನು ರೋಷದಿಂದ ಮಿಡುಕಿದ ಪರಿ.
‘ನಮಗೆ ಈ ದುರವಸ್ಥೆಯನ್ನು ತಂದ ಕೌರವನಾಯಿಗಳ ಬೆನ್ನುಮೂಳೆಗಳನ್ನು ಮುರಿದು, ಹೊಸ ಠೀವಿಯಲ್ಲಿ ಬಡಿಯದಿದ್ದರೆ ನನ್ನ ತೋಳುಗಳು ಕೊಬ್ಬಿದ್ದು ಏನು ಪ್ರಯೋಜನ? ಆದುದರಿಂದ ನನ್ನ ತೋಳುಗಳನ್ನೇ ಸುಟ್ಟು ಹಾಕುತ್ತೇನೆ. ಈ ಪ್ರಾಣವು
ಸೂರ್ಯಚಂದ್ರರಿರುವರಗೇನೂ ಇರುವುದಿಲ್ಲ. ಈಗಲೇ ಈ ಪ್ರಾಣವು ಹೋಗಲಿ’ ಎಂದು ಭೀಮನು ಹೆಜ್ಜೆಹೆಜ್ಜೆಗೂ ಕೋಪದಿಂದ ನುಡಿಯುತ್ತಾನೆ. ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನ ಹರಾಜಾಗುತ್ತಿರುವಾಗ ಬೇರೆಯವರೆಲ್ಲ ತಲೆತಗ್ಗಿಸಿ ಕೂತಿದ್ದಾರೆ.
ಭೀಮ ಮಾತ್ರ ರೋಷದಿಂದ ಮಿಡುಕುತ್ತಿದ್ದಾನೆ ಎಂದು ಬಣ್ಣಿಸುತ್ತಾನೆ ಕುಮಾರವ್ಯಾಸ. ಕೌರವರನ್ನು ನಾಯಿಗಳೆಂದು ಭೀಮನ ಬಾಯಿಯಿಂದ ಹೇಳಿಸುವುದಕ್ಕೂ ಧೈರ್ಯ ಬೇಕು! ಭೀಮಸೇನನಿಂದಾಗಿ ಹನೂಮಂತ ಮಿಡುಕಿದ ಸಂದರ್ಭವನ್ನೂ ಕುಮಾರ ವ್ಯಾಸ ಅರಣ್ಯಪರ್ವದಲ್ಲಿ ಬಣ್ಣಿಸಿದ್ದಾನೆ.
‘ಏನಿದೆತ್ತಣ ರಭಸವೀ ಗಿರಿ| ಸಾನುವಿದಮಾನುಷ ವಿಹಾರ|
ಸ್ಥಾನವಿವನಾರೋ ಮಹಾದೇವಾ ಪ್ರಚಂಡನಲ| ಈ ನಿನದವೆಮ್ಮಂದಿನಗ್ಗದ| ವಾನರರ ಗರ್ಜನೆಗೆ ಗುರುವಾ| ಯ್ತೇನನೆಂಬೆ
ನೆನುತ್ತ ಮೆಲ್ಲನೆ ಮಿಡುಕಿದನು ಹನುಮ’- ಅದು ಸೌಗಂಧಿಕಾ
ಪುಷ್ಪ ಹರಣ ಪ್ರಸಂಗ. ಭೀಮನ ಗರ್ಜನೆಯನ್ನು ಕೇಳಿ ಹನುಮಂತನು, ಈ ಸದ್ದಿನ ರಭಸ ಇಲ್ಲಿಗೆ ಎಲ್ಲಿಂದ ಬಂತು? ಈ
ಪರ್ವತ ಪ್ರದೇಶದ ಅರಣ್ಯವು ಮನುಷ್ಯರು ಓಡಾಡುವ ಪ್ರದೇಶವಲ್ಲ, ಹೀಗೆ ಗರ್ಜಿಸುವ ಇವನಾರೋ ಮಹಾಪ್ರಚಂಡನಿರಬೇಕು, ಹಿಂದೆ ತ್ರೇತಾಯುಗದಲ್ಲಿ ನನ್ನೊಡನಿದ್ದ ವಾನರರ ಗರ್ಜನೆಗೆ ಇವನ ಗರ್ಜನೆಯು ಗುರುವಿನಂತಿದೆ, ಎಂದು ಆಶ್ಚರ್ಯಚಕಿತನಾಗಿ ಮಿಡುಕಿದನಂತೆ. ಅರಣ್ಯಪರ್ವದಲ್ಲೇ ಇನ್ನೊಂದು ಷಟ್ಪದಿ, ಅರ್ಜುನ-ಊರ್ವಶಿ ಭೇಟಿಯ ಸಂದರ್ಭದ್ದು.
ಅಲ್ಲಿ ಮಿಡುಕುವ ಸರದಿ ಊರ್ವಶಿಯದು. ‘ನುಡಿಗೆ ಬೆರಗಾದಳು ಮನೋಜನ| ಸಡಗರಕೆ ತೆಕ್ಕಿದಳು ಪಾರ್ಥನ| ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ| ಕಡುಗಿದಳು ಖಾತಿಯುಲಿ ಲಜ್ಜೆಯ| ಬಿಡೆಯದಲಿ ಭಯಗೊಂಡಳಂಗನೆ| ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ’ – ಅರ್ಜುನನ ಮಾತನ್ನು ಕೇಳಿ ಊರ್ವಶಿಯು ಬೆರಗಾದಳು, ಮನ್ಮಥನ ತಾಪದಿಂದ ತಗ್ಗಿದಳು, ಅರ್ಜುನನ ನಡವಳಿಕೆಗೆ ಮೆಚ್ಚಿದಳು, ಆದರೆ ಕಾಮಶರದ ಕಾಟಕ್ಕೆ ಬೆಚ್ಚಿದಳು, ಸಿಟ್ಟಿನಿಂದ ಸಿಡಿಮಿಡಿಗೊಂಡು ಕೆರಳಿದಳು, ಲಜ್ಜೆ ದಾಕ್ಷಿಣ್ಯದಿಂದ ಭಯಪಟ್ಟಳು, ಹೀಗೆ ಹಲವು ಭಾವಗಳ ತಾಕಲಾಟಕ್ಕೆ ಊರ್ವಶಿಯು ಒಳಗಾದಳು- ಅಂದರೆ ‘ಮಿಡುಕಿದಳು’ ಎಂದು ಬಣ್ಣನೆ.
ಮಿಡುಕುವುದಕ್ಕೆ ವೆಂಕಟಸುಬ್ಬಯ್ಯನವರು ಇಪ್ಪತ್ತೆಂಟು ವಿವಿಧಾರ್ಥಗಳನ್ನು ಸೂಚಿಸಿದ್ದು ಸುಮ್ಮನೆ ಅಲ್ಲ! ಹಾಗಾಗಿ ಗಂಡಸರಷ್ಟೇ ಅಲ್ಲ, ಹೆಂಗಸರೂ ಮಿಡುಕುತ್ತಾರೆ ಅಂತಾಯ್ತು. ಇಲ್ಲಿ ನೋಡಿ ಸ್ವಯಂವರಕ್ಕೆ ಸಿದ್ಧಳಾದ ಸೀತೆ ಮಿಡುಕಿದ ಪರಿಯನ್ನು: ‘ಏನ ಪೇಳಲಿ ಕೇಳು ರಾಯರ| ಮಾನ ಪೋದುದು ಜನಕ ಭೂಪತಿ| ತಾನು ಮಾಡಿದ ಪಾಪವೇನಿಹುದೆಂದು ಯೋಚಿಸಿರೆ| ಜಾನಕಿಗೆ ಪರಿತಾಪ ಹೆಚ್ಚಿತು| ಸಾನುರಾಗದಿ ರಾಮಚಂದ್ರನ-| ದೇನು ಶಿವಧನುವೆಡೆಗೆ ಪೋಗನೆ ನುತ್ತ ಮಿಡುಕಿದಳು’- ಜನಕ ಮಹಾರಾಜನ ಪಂಥಾಹ್ವಾನದ ಮೇರೆಗೆ ಒಬ್ಬರಾದ ಮೇಲೆ ಒಬ್ಬ ರಾಜರು, ಶಿವಧನುಸ್ಸನ್ನು ಎತ್ತಿ
ಹೆದೆಯೇರಿಸಲು ಹೋಗಿದ್ದಾರೆ.
ಬೆವರಿಳಿಸಿಯೂ ವಿಫಲರಾಗಿ ಹಿಂದಿರುಗಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಸೋಲುತ್ತಿದ್ದಂತೆ ಒಂದೆಡೆ ಜನಕನಿಗೂ, ಇನ್ನೊಂದೆಡೆ ಸೀತೆಗೂ ಮನದಲ್ಲಿ ದುಗುಡ. ಸಭೆಯಲ್ಲಿ ಬಂದುಕುಳಿತಿರುವ ಶ್ರೀರಾಮಚಂದ್ರನು ಈಗಲಾದರೂ ಶಿವಧನು ವಿದ್ದೆಡೆಗೆ ಹೋಗಬಾರದೇ ಎಂದು ಸೀತೆ ಮಿಡುಕುತ್ತಾಳೆ. ಸೀತಾಕಲ್ಯಾಣ ಷಟ್ಪದಿಗಳು ಎಂಬ ಕಾವ್ಯಮಾಲೆಯಲ್ಲಿ ಇದನ್ನು ಹೆಣೆದವರು ಕ್ಯಾಲಿಫೋರ್ನಿಯಾದಲ್ಲಿರುವ ಸ್ನೇಹಿತ ರಾಮಪ್ರಸಾದ್.
ತನಗೊದಗಿರುವ ಅವಸ್ಥೆಯನ್ನು ಕಂಡು ಕನ್ನಡಮ್ಮನೂ ಮಿಡುಕಿದ್ದಾಳೆಂದವರು ಹುಯಿಲಗೋಳ ನಾರಾಯಣರಾಯರು. ‘ನಾರಾಯಣರಾಯರು ತಮ್ಮ ಕಥನಕವನಗಳಿಗಾಗಿ ಪಾರಂಪರಿಕ ಷಟ್ಪದಿಯ ಛಂದೋರೂಪವನ್ನು ಬಳಸಿಕೊಂಡಿದ್ದಾರೆ. ಈ ಕಥನಕವನಗಳ ಸ್ವರೂಪ ಸಾಂಪ್ರದಾಯಿಕವಾದರೂ ಉದ್ದೇಶ ಆಧುನಿಕವಾಗಿದೆ. ನಾಡು-ನುಡಿಗಳ ಆಗುಹೋಗುಗಳೇ ಈ ಕವನಗಳಿಗೆ ವಸ್ತುವನ್ನೊದಗಿಸಿವೆ. ನಾಡು ಹಾಗೂ ನುಡಿ ಎದುರಿಸುತ್ತಿರುವ ಸಂಕಟಗಳನ್ನು ಅವರು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಕನ್ನಡಿಗರ ಸಾಹಿತ್ಯ ಸಮ್ಮೇಲನ(1915) ಎಂಬ ಕಥನಕವನದ ವಸ್ತು ಕೂಡ ಕನ್ನಡದ ದುರ್ದೆಶೆಯೇ ಆಗಿರುವುದು ನಾರಾಯಣರಾಯರಿಗೆ ಕನ್ನಡ ನುಡಿಯ ಬಗ್ಗೆ ಇದ್ದ ಪುರಾವೆಯಾಗಿದೆ. ತನ್ನ ಪೂರ್ವದ ವೈಭವಗಳನ್ನು ಕಳೆದುಕೊಂಡು ಅವನತಿಯಲ್ಲಿರುವ ಕನ್ನಡ ತಾಯಿಯ ವರ್ಣನೆಯೊಂದಿಗೆ ಕಥನಕವನ ಪ್ರಾರಂಭವಾಗುತ್ತದೆ…’ ಎಂದು ವಿಮರ್ಶಕ ಜಿ.ಎಸ್.ಆಮೂರರು ‘ನಿರಂತರ’ ಎಂಬ ಸಾಹಿತ್ಯವಿಮರ್ಶೆ ಗ್ರಂಥದ ಲೇಖನವೊಂದರಲ್ಲಿ ಬರೆದಿದ್ದಾರೆ.
ಕನ್ನಡಮ್ಮನು ಮಿಡುಕಾಡಿದ ಆ ಷಟ್ಪದಿ ಹೀಗಿದೆ: ‘ಒಡನೆ ವಿಧಿವಶಳಾಗಿ ತಾಯ್ಮಿಡು| ಮಿಡುಕಿದಳು ತಡೆಯದಲೆ ಮೊಗಸಿರಿ| ಯಡಗಿ ಕಂಗಳು ಗುಡಿಯ ಸೇರ್ದುವು ಬಹಳ ಬಡವಾಗಿ| ನಡುಗತೊಡಗಿತು ಮೈಯ ಕಟ್ಟದು| ಸಡಲಿದವು ಕೈಕಾಲ್ಗಳಡಿಗಡಿ| ಗೆಡವಿ ಮುಗ್ಗರಿಸುತ್ತ ನಡೆಯದಲಾದಳಾ ತಾಯಿ’ ನೆನಪಿರಲಿ ಇದನ್ನು ಹುಯಿಲಗೋಳ ನಾರಾಯಣರಾಯರು ಬರೆದದ್ದು ೧೯೧೫ರಲ್ಲಿ.
ಈಗ ನೂರು ವರ್ಷಗಳಲ್ಲಿ ಕನ್ನಡತಾಯಿಯು ಮತ್ತಷ್ಟು ‘ಮಾಸಿದ ಸೀರೆಯ ಮ್ಲಾನವದನೆ’ ಆಗಿರುವುದನ್ನು ಕಂಡಿದ್ದರೆ ಅವರು ಇನ್ನೆಷ್ಟು ತೀವ್ರವಾಗಿ ಪರಿತಪಿಸುತ್ತಿದ್ದರೋ. ದ. ರಾ. ಬೇಂದ್ರೆಯವರ ‘ಅನ್ನಾವತಾರ’ ಎಂಬ ಮನೋಜ್ಞ ಕವಿತೆಯೊಂದರಲ್ಲೂ ಮಿಡುಕು ಬರುತ್ತದೆ. ಆ ಕವಿತೆಯು ರತ್ನಾಕರ (ಸಮುದ್ರ) ಮತ್ತು ವಸುಂಧರಾ (ಭೂಮಿ) ನಡುವಿನ ಸಂವಾದದಂತೆ ಇದೆ. ನಡುವೆ ಪ್ರಾಣದೇವನು ಅನ್ನಾಹಾರವಿಲ್ಲದೆ ನಿತ್ರಾಣವಾಗಿ ಬಿದ್ದಿದ್ದಾನೆ. ‘ಹೆಸರು ರತ್ನಾಕರ| ಕುಡಿಯುವೆ ಕಣ್ಣೀರಾ| ಅಯ್ಯೋ ನನ್ನ ತೀರ-ತೀರದು ದುಃಖಾ… ನೀರ ದೇವನು ಬಂದಾ| ತೀರ ದೇವನು ಬಂದಾ| ಯಾರು ಬಂದರೂ ಆಹಾರಾ ತರಲಿಲ್ಲ, ಹಾರಾ ತರಲಿಲ್ಲ…’ ಎಂದು ರತ್ನಾಕರನೆಂದರೆ ‘ಮಗುವು ನಿರಾಧಾರಾ| ಹೆಸರು ವಸುಂಧರಾ| ಇಟ್ಟಾರ ಯಾರು ನಿಟ್ಟುಸಿರಿನ ಲೆಕ್ಕಾ?… ಕಾಡೋ ದೇವನು ಬಂದಾ| ಬೇಡೋ ದೇವನು ಬಂದಾ| ನೀಡದೆ ಈ ಹೊಟ್ಟೆ ಇನ್ನೂ ತುಂಬಿಲ್ಲಾ…’ ಎಂದು ವಸುಂಧರೆಯೆನ್ನುತ್ತಾಳೆ.
ರತ್ನಾಕರ ಮುಂದುವರಿಸಿ ‘ದುಡುಕು ದೇವನು ಬಂದಾ| ಮಿಡುಕು ದೇವನು ಬಂದಾ| ಬಡವರ ಬಡಹೊಟ್ಟೆ ತಣ್ಣಗಿರಲಿಲ್ಲಾ ತಣ್ಣಗಿರಲಿಲ್ಲಾ…’ ಎನ್ನುತ್ತಾನೆ. ‘ಪ್ರಾಣದೇವನು ನಿತ್ರಾಣನಾಗುತ ಅಂದಾ: ಅನ್ನದೇವರು ಮಾತ್ರ ಇನ್ನನೂ ಬರಲಿಲ್ಲೋ ಇನ್ನೂ ಬರಲಿಲ್ಲಾ’ ಎಂಬ ಸಾಲುಗಳ ಕರಾಳ ಛಾಯೆಯೊಂದಿಗೆ ಕವಿತೆ ಮುಗಿಯುತ್ತದೆ. ಓದಿ ಮಿಡುಕದಿರಲು ಸಾಧ್ಯವೇ ಇಲ್ಲ.
ಆದರೆ ಸಾಹಿತ್ಯಿಕವಾಗಿಯಷ್ಟೇ ಮಿಡುಕಬೇಕು ಅಂತೇನಿಲ್ಲ. ಮಿಡುಕುವ ಸಂದರ್ಭಗಳು ನಮ್ಮೆಲ್ಲರ ಜೀವನದಲ್ಲಿ ಎಷ್ಟೋ ಸರ್ತಿ ಬಂದುಹೋಗುತ್ತವೆ. ಕೆಲವು ನಿಜಕ್ಕೂ ಗಂಡಾಂತರದವಾಗಿರಬಹುದು- ‘ಶೋಲೆ’ ಚಿತ್ರದಲ್ಲಿ ಅದೊಂದು ದೃಶ್ಯವಿತ್ತಲ್ವಾ,
ಗಬ್ಬರ್ಸಿಂಗ್ನಿಂದಾಗಿ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಬಲದೇವ್ಸಿಂಗ್ ಠಾಕೂರ್ (ಸಂಜೀವ ಕುಮಾರ್) ಶಾಲುಹೊದ್ದು ನಿಂತಿದ್ದಾನೆ. ಕಾಲಿನಡಿಗೇ ಬಂದೂಕು ಬಂದು ಬಿದ್ದಿದೆ.
ಎತ್ತಿಕೊಳ್ಳುವಂತೆಯೂ ಇಲ್ಲ, ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಮಿಡುಕುವುದೊಂದೇ ದಾರಿ. ಜಯ್ ಮತ್ತು ವೀರುಗೆ ಸಿಟ್ಟು ಬಂದಿರುತ್ತದೆ. ಬಂದೂಕ್ ಕ್ಯೋಂ ನಹೀ ಉಠಾಯಾ? ಎಂದು ಕೇಳುತ್ತಾರೆ. ವರ್ಷಗಳು ಕಳೆದ ಮೇಲೊಂದು ದಿನ ಶಾಲು ಸರಿಸಿ ತನಗೆ ಕೈಗಳಿಲ್ಲದಿರುವುದನ್ನು ತೋರಿಸುತ್ತಾನೆ ಠಾಕೂರ್.
ಮತ್ತೆ ಕೆಲವು ಮಿಡುಕಾಟಗಳನ್ನು ಮೆಲುಕು ಹಾಕಿದಾಗ ಮೋಜೆನಿಸುವುದೂ ಇದೆ. ಟಿವಿಯಲ್ಲಿ ವಾರ್ತಾವಾಚಕಿ ಕ್ಯಾಮೆರಾ ಮುಂದೆ ಲೈವ್ ನ್ಯೂಸ್ ಓದುತ್ತಿರುವಾಗಲೇ ಕೆಮ್ಮು ಅಥವಾ ಸೀನು ಬಂದರೆ? ಅದನ್ನಾದರೂ ‘ಎಕ್ಸ್ಕ್ಯೂಸ್ ಮೀ’ ಎಂದೋ, ‘ಕ್ಷಮಿಸಿ’ ಎಂದೋ ಹೇಳಿ ನಿಭಾಯಿಸಬಹುದು, ನೊಣ ಬಂದು ಮೂಗಿನ ಮೇಲೆ ಕುಳಿತರೆ? ಮಿಡುಕದೆ ಬೇರೆ ದಾರಿಯಿಲ್ಲ. ಒಮ್ಮೆ ದೂರದರ್ಶನದ ವಾರ್ತಾವಾಚಕಿ ಸಲ್ಮಾಸುಲ್ತಾನ್ಗೆ ಹಾಗೇ ಆಗಿತ್ತಂತೆ. ಗಂಭೀರವಾದ ಸುದ್ದಿಯನ್ನು ಓದುತ್ತಿದ್ದಾಗ ನೊಣ ಬಂದು ಮೂಗಿಗೆ ಕಚಗುಳಿ ಇಟ್ಟಿತಂತೆ.
ಮಿಡುಕದೆ ಇನ್ನೇನುತಾನೆ ಮಾಡಿಯೇನೆಂದು ದೂರದರ್ಶನದ 50ರ ಸಂಭ್ರಮದ ವೇಳೆ ಸಂದರ್ಶನವೊಂದರಲ್ಲಿ ಆಕೆ ಇದನ್ನು ನೆನಪಿಸಿಕೊಂಡಿದ್ದರು. ಒಮ್ಮೆ ಇಲ್ಲಿ ಅಮೆರಿಕದಲ್ಲಿ ಒಂದು ವಾರ್ತಾವಾಹಿನಿಯ ವಾಷಿಂಗ್ಟನ್ ವರದಿಗಾರ್ತಿಯು ಶ್ವೇತಭವನದ ಎದುರಿನ ಹುಲ್ಲುಹಾಸಿನ ಮೇಲೆ ನಿಂತು ಲೈವ್ ರಿಪೋರ್ಟ್ ಮಾಡುತ್ತಿದ್ದಾಗ ಅವಳ ಹಿಂದಿನಿಂದ ಒಂದು ನಾಯಿ ಓಡಿ ಹೋಯ್ತು.
ಅವಳಿಗಾದರೋ ಅದರ ಪರಿವೆಯೇ ಇಲ್ಲ. ಆದರೆ ಕ್ಯಾಮೆರಾಮ್ಯಾನ್ ಮಿಡುಕದೆ ಬೇರೇನು ಮಾಡಬಲ್ಲ? ನಾಯಿ ಓಡಿದ್ದೂ ಲೈವ್ ನ್ಯೂಸ್ನಲ್ಲಿ ಬಂತು. ಅದೂ ಅಂಥಿಂಥ ನಾಯಿ ಅಂದ್ಕೊಂಡ್ರಾ? ಅಮೆರಿಕದ ಪ್ರಥಮಶ್ವಾನ ಪಟ್ಟದ ನಾಯಿ. ಪ್ರೆಸಿಡೆಂಟನೇ ಸಾಕಿದ ಪ್ರೆಸ್ಟೀಜಿಯಸ್ ನಾಯಿ! ನೋಡಿದಿರಾ, ಒಂದು ಪದದ ಬೆನ್ನು ಹತ್ತಿ ಹೋದರೆ ಸಿಗುವ ರಸಾನುಭವ! ಮಿಡುಕುವಿಕೆಗಿಂತ ಮೂರುಪಟ್ಟು ಮೇಲ್ಮಟ್ಟದ್ದು. ಅದರಲ್ಲೂ ಸಾಹಿತ್ಯದ ರಸಘಟ್ಟಿಗಳು, ತಮಾಷೆ ಪ್ರಸಂಗಗಳು ಸಿಕ್ಕವೆಂದರೆ ಕಲ್ಲುಸಕ್ಕರೆ ಮೆದ್ದಂತೆ.