ಸಂಡೆ ಸಮಯ
ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ
ವನ್ಯಜೀವಿಗಳ ಬಗ್ಗೆ ಹುಚ್ಚು ಹಿಡಿಸಿಕೊಂಡವರಿಗೆ ಆಫ್ರಿಕಾ ಮುಗಿಯದ ಸೆಳೆತ. ಕಣ್ಣು ಹಾಯಿಸಿದಷ್ಟೂ ವಿಶಾಲವಾಗಿ ಹರಡಿ ಕೊಳ್ಳುವ ಸವಾನಾಗಳಲ್ಲಿ ನಮ್ಮ ಜತೆ ಭೂಮಿಯನ್ನು ಹಂಚಿಕೊಳ್ಳುವ ಬೇರೆ ಪ್ರಾಣಿಗಳನ್ನು ನೋಡುತ್ತಾ, ಅವುಗಳ ವರ್ತನೆ ಗಮನಿಸುತ್ತಾ ಕಳೆದು ಹೋದಾಗಲೆಲ್ಲಾ ಸಮಯದಲ್ಲಿ ಹಿಂದಕ್ಕೆ ಚಲಿಸಿದ ಅನುಭೂತಿ.
ಕೇವಲ ಮನುಷ್ಯ ಪ್ರಪಂಚದ ವಿವರಗಳಲ್ಲೇ ಕಳೆದುಹೋಗುವ ನಾವು, ನಾವೂ ಪ್ರಾಣಿ ಗಳೇ ಎಂಬುದನ್ನು ಮರೆಯುತ್ತೇವೆ. ಬಹುಷಃ ಕಾಡುಗಳಿಗೆ ಮರಳಿದಾಗಲೇ ನಾವು ಪ್ರಕೃತಿಯಿಂದ ಎಷ್ಟು ವಿಮುಖರಾದಂತೆ ಬದುಕುತ್ತಿರುತ್ತೇವೆ ಎಂಬ ಅರಿವಾಗು ವುದು. ಇರಲಿ. ಕಡಿಮೆ ವೆಚ್ಚದಲ್ಲಿ ಆದಷ್ಟೂ ಪ್ರಪಂಚ ನೋಡಬೇಕು ಎಂದು ‘ಬಜೆಟ್ ಟ್ರಾವೆಲ್’ ಮಾಡುವವರಿಗೆ ಬೇರೆಬೇರೆ ದೇಶಗಳಿಗೆ ಹೋದಾಗ ನಮ್ಮಂತೆಯೇ ಬಜೆಟ್ ಟ್ರಾವೆಲ್ ಮಾಡುವ ಸಹೃದಯ ವಿದೇಶೀಯರು ಸಿಕ್ಕರೆ ಅದೊಂದು ಚಂದದ ಅನುಭವ. ಹೀಗೆ ನನ್ನ ಮತ್ತು ನನ್ನ ಕಸಿನ್ ಜೊತೆಗೆ ಟಾಂಜ್ಹನಿಯಾದಲ್ಲಿ ಎರಡು ವರ್ಷಗಳ ಹಿಂದೆ ಸೇರಿಕೊಂಡಿದ್ದು ಆಗ ಇಂಗ್ಲೆಂಡಿನಲ್ಲಿ ವಾಸಿಸುತ್ತಿದ್ದ ಪೋಲೆಂಡ್ ದೇಶದ ಇಬ್ಬರು ಹುಡುಗಿಯರು.
2018 ಅಕ್ಟೋಬರ್. ದಾರ್ ಎಸ್ ಸಲಾಂ ನಗರದಿಂದ ಶುರುವಾದ ನಮ್ಮ ಪಯಣ ಟಾಂಜ್ಹನಿಯಾ ದೇಶದ ಬೇರೆ ಬೇರೆ ಮುಖಗಳ ಪರಿಚಯ ಮಾಡಿಕೊಡುತ್ತಾ ಮಿಕುಮಿ ರಾಷ್ಟ್ರೀಯ ಉದ್ಯಾನವನದ ಕಡೆಗೆ ಚಲಿಸಿದೆ. ವನ್ಯಜೀವಿಗಳನ್ನು ನೋಡುವುದಕ್ಕೆ ಈ ದೇಶದಲ್ಲಿ ಸೆರೆಂಗೆಟಿ ಅತ್ಯಂತ ಪ್ರಸಿದ್ಧ ಸ್ಥಳವಾದರೂ, ನಾವು ಮಿಕುಮಿಗೆ ಬರಲು ಕಾರಣ ಸೆರೆಂಗೆಟಿ ಜೊತೆ ಕೆಲವು ಬೇರೆ ವನ್ಯಜೀವಿ ಧಾಮಗಳನ್ನೂ ನೋಡಲು ಜಾಸ್ತಿ ಸಮಯ ಬೇಕು ಎಂದು ಮತ್ತೊಂದು ದಿನಕ್ಕೆ ಜೋಪಾನ ಮಾಡಿಟ್ಟುಕೊಂಡ ದುರಾಸೆ. ಈ ಪಯಣಕ್ಕಾಗಿ (ದಾರ್ ಎಸ್ ಸಲಾಂ ಮತ್ತು ಝಾನ್ಝಿರ್ಬಾ ಸೇರಿದಂತೆ) ತೆಗೆದುಕೊಂಡಿರುವ ರಜೆಗಳಿಗೆ ತಕ್ಕಂತೆ ಮಿಕುಮಿ ನಮ್ಮ ಪ್ರವಾಸದ ನಕ್ಷೆಯಲ್ಲಿದೆ. ಈಗ ತೆರೆದ ಮನಸ್ಸಿನಂತೆ ಆಫ್ರಿಕಾದ ಪ್ರಾಕೃತಿಕ ಸೌಂದರ್ಯ ನಿಧಾನವಾಗಿ ಕಣ್ಣ ಮುಂದೆ ಒಡ್ಡಿಕೊಳ್ಳುತ್ತಿದೆ.
ಮಿಕುಮಿ ಇನ್ನೂ ಒಂದು ಕಿಲೋಮೀಟರ್ ದೂರದಲ್ಲಿರುವಾಗಲೇ ರಸ್ತೆಯಿಂದ ಎಡಕ್ಕೆ ಕೆಲವೇ ಅಡಿ ದೂರದಲ್ಲಿ ಒಂದು ಮಾಸಾಯ್ ಜಿರಾಫ್ ಕತ್ತು ಬಳುಕಿಸುತ್ತಾ ತನ್ನ ಎತ್ತರದ ಗಂಭೀರ ನಿಲುವಿನಲ್ಲಿ ಹಬ್ಬದಂತೆ ಕಾಣುತ್ತಿದೆ. ಅದರ ಸುತ್ತ ಹತ್ತಾರು ಚಿಗರೆಗಳು. ಪೋಲಿಷ್ ಹುಡುಗಿಯರ ಜೊತೆ ಔಷ್ವಿಟ್ಜ್, ಜಿಮ್ಬೋಸ್ಕಾರ್, ಮಿಲೋಜ್ ಹೀಗೆ ಅವರ ಇತಿಹಾಸ, ಬರಹಗಾರರು, ಕವಿಗಳ ಬಗ್ಗೆ ಮಾತನಾಡುತ್ತಿದ್ದ ನಾವು ಮಿಕುಮಿ ಉದ್ಯಾನವನದ ಒಳಗೆ ಹೊಕ್ಕುವ ಮುನ್ನವೇ ಆ ಜಿರಾಫ್ ಮತ್ತು ಚಿಗರೆಗಳನ್ನು ಕಂಡು ತೆಪ್ಪಗಾಗಿದ್ದೇವೆ.
ನಮ್ಮ ಸಫಾರಿ ಜೀಪ್ ಏರಿ ಉದ್ಯಾನವನದ ಒಳಗೆ ಹೋಗುತ್ತಿದ್ದಂತೆ ಈ ಭಾಗದ ಪ್ರಪಂಚ ಸಂಜೆ ಬೆಳಕಿನಲ್ಲಿ ಚಿನ್ನದ ಕವಿತೆಯಂತೆ ಬೆಳಗುತ್ತಿದೆ. ಎತ್ತರದ ಹುಲ್ಲಿನ ಒಣಗಿದ ತೆಳುಹಳದಿ ಬಣ್ಣದ ಮಧ್ಯ ಮೆಲ್ಲಗೆ ಕಪ್ಪುು – ಬಿಳಿ ಪಟ್ಟೆಗಳನ್ನು ಹೊದ್ದು ತಿರುಗುವ ಮುದ್ದಾದ ಹೇಸರಗತ್ತೆಗಳು – ಒಮ್ಮೊಮ್ಮೆ ಜಗತ್ತು ಅವುಗಳ ಎರಡೇ ಬಣ್ಣಗಳಲ್ಲಿ, ನಡುವಿನ ಅಲೆಗಳಿಲ್ಲದಿದ್ದರೂ ಸೌಂದರ್ಯ ದಲ್ಲಿ ಅದ್ದಿತೆಗೆದಂತೆ.
ನಾವು ನಾಲ್ವರು, ನಮ್ಮ ಸಫಾರಿ ಗೈಡ್ ಬಿಟ್ಟರೆ ಜನರೇ ಕಾಣದ ಪ್ರಕೃತಿಯ ಮಡಿಲಲ್ಲಿ ನಾವು ಖುಷಿಯಿಂದ ಮಕ್ಕಳಂತಾಗಿದ್ದೇವೆ. ಒಂದು ಮಿಡತೆ, ಒಂದು ಚಿಟ್ಟೆೆ ಕಂಡರೂ ಹಿಗ್ಗು. ಇದ್ದಕ್ಕಿದ್ದ ಹಾಗೆಯೇ ರಿಚರ್ಡ್ ಡಾಕಿನ್ಸ್ ಅವರು ಒಮ್ಮೆ We Are All Africans! ಎಂಬ ಸಾಲು ಇದ್ದ ಟೀಶರ್ಟ್ ಹಾಕಿಕೊಂಡಿದ್ದದು ನೆನಪಾಗಿ, ಮನುಷ್ಯರಾದ ನಾವು ಇಲ್ಲಿಂದಲೇ ಅಲ್ಲವಾ ಆರಂಭ ವಾಗಿದ್ದು ಎಂದು ನೆನಪಾಗಿ ಆ ಸತ್ಯದ ಗುರುತ್ವದಿಂದ ಒಂದು ಕ್ಷಣ ಕಂಪಿಸಿದ್ದೇನೆ. ಆಫ್ರಿಕಾಗೆ ಮೊದಲ ಬಾರಿ ಬಂದಿದ್ದೇನೆ ಅಲ್ಲ, ಆಫ್ರಿಕಾಗೆ ಮೊದಲ ಬಾರಿ ಮರಳಿದ್ದೇನೆ ಎಂದು ತಿದ್ದಿಕೊಳ್ಳುತ್ತೇನೆ.
ವಿಶ್ವದ ಅನಂತತೆಯಲ್ಲಿ ನಾವು ಯಕಃಶ್ಚಿತ್ ಬಿಂದುಗಳು, ಆದರೂ ಅಸ್ತಿತ್ವ ಪಡೆದಿದ್ದೇವೆ. ನಮ್ಮದೇ ಅಸ್ತಿತ್ವವನ್ನು ಅರ್ಥ ಮಾಡಿ ಕೊಳ್ಳುವ ಪ್ರಯತ್ನ ಮಾಡುವುದೇ ಒಂದು ಸೋಜಿಗ, ಅದು ಆಫ್ರಿಕಾದಲ್ಲಿ ಒಂದು ಹೊಸ ಆಳಕ್ಕಿಳಿದು ಎಂದೂ ಅನುಭವಿ ಸಿರದ ಸಂವೇದನೆಗೆ ಕಾರಣವಾಗಿದೆ. ಇದ್ದಕ್ಕಿಂದಂತೆಯೇ ನಮ್ಮ ಡ್ರೈವರ್ – ಗೈಡ್ ಜೀಪನ್ನು ಬಲಕ್ಕೆ ತಿರುಗಿಸಿದಾಗ ಈ ಯೋಚನೆ ಗಳಿಂದ ಹಠಾತ್ತಾಗಿ ಮರಳಿ ಮಿಕುಮಿಗೆ! ನೋಡಿದರೆ ನಮ್ಮ ಮುಂದೆ ಸಣ್ಣ ತೆರವಿನಲ್ಲಿ ಒಂದು ಸಿಂಹ ಮತ್ತು ಒಂದು ಸಿಂಹಿಣಿ ರಾಜಗಾಂಭೀರ್ಯದಲ್ಲಿ ಕೂತಿದ್ದಾರೆ.
ಮೊದಲ ಸಲ ಆಫ್ರಿಕಾದ ಸಿಂಹಗಳನ್ನು ನೋಡುತ್ತಿದ್ದೇವೆ! ನಮ್ಮನ್ನು ಕ್ಯಾರೇ ಎನ್ನದೆ ತಮ್ಮ ಪಾಡಿಗೆ ತಾವು ಕೂತಿರುವ ಆ ಸಿಂಹ ದಂಪತಿ ತಮ್ಮ ಅಸಡ್ಡೆಯಿಂದಲೇ ನಮ್ಮನ್ನು ಆಶೀರ್ವದಿಸಿದಂತಿದೆ. ಒಂದಷ್ಟು ನಿಮಿಷಗಳು ಅವರನ್ನು ಕಣ್ತುಂಬ ನೋಡಿ ಕೊಂಡು ಮುಂದೆ ಹೋದರೆ ಮತ್ತಷ್ಟು ಹೇಸರಗತ್ತೆಗಳ ಮತ್ತು ವಿಲ್ಡಬೀಸ್ಟ್ ಹಿಂಡುಗಳು. ಮಾಸಾಯ್ ಮಾರಾ ಮತ್ತು ಸೆರೆಂಗೆಟಿ ಯಲ್ಲಿ ಕಾಣಸಿಗುವ ಪ್ರಕೃತಿಯ ರುದ್ರರಮಣೀಯ ದೃಶ್ಯಗಳಲ್ಲಿ ಒಂದಾದ ‘ದ ಗ್ರೇಟ್ ಮೈಗ್ರೇಶನ್’ ನೋಡುವ ಹೆಬ್ಬಯಕೆ ಇಲ್ಲಿ ಮತ್ತಷ್ಟು ತೀವ್ರವಾಗಿದೆ. ಆದರೆ ಆ ಪಯಣ ಮತ್ತೊಂದು ದಿನಕ್ಕೆ. ಸದ್ಯಕ್ಕೆ ಇಲ್ಲಿ ತಮ್ಮ ಪಾಡಿಗೆ ತಾವು ಯಾವ ಹೆಸರು, ಗುರುತು, ಹಣ, ಪ್ರಸಿದ್ಧಿಗಳ ಗೊಡವೆಯಿಲ್ಲದೇ ಬದುಕುವ ಬೇರೆ ಪ್ರಾಣಿಗಳನ್ನು ನೋಡುತ್ತಾ ನಾವೂ ಮುಕ್ತ. ಇಂಥ ಕ್ಷಣಗಳಲ್ಲೇ ಮನುಷ್ಯ ಪ್ರಾಣಿಗಳು ಈ ಬೇರೆ ಪ್ರಾಣಿಗಳ ಮುಂದೆ ಮೂರ್ಖರಂತೆ ಕಾಣುವುದು ಅನಿಸುತ್ತಿದೆ.
ಕತ್ತಲಾಗುತ್ತಿದೆ. ಸದ್ಯಕ್ಕೆ ಕ್ಯಾಂಪ್ ಸೈಟ್ ಕಡೆಗೆ ಹೊರಡುತ್ತಿದ್ದಂತೆ ಸೂರ್ಯ ಕ್ಷಿತಿಜದಲ್ಲಿ ಜಾರಿಹೋಗುತ್ತಿದ್ದಾನೆ. ಸಫಾರಿ ಜೀಪ್ ನಿಂತ ಕ್ಷಣದಿಂದಲೇ ಮಿಕುಮಿಯ ಮೌನ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಹೀಗೆ ಕಾಡಿನೊಳಗೇ ಡೇರೆ ಹಾಕಿ ಉಳಿದುಕೊಳ್ಳ ಬಹುದಾದ ವ್ಯವಸ್ಥೆ ಕೆಲವೇ ವನ್ಯಜೀವಿ ಧಾಮಗಳಲ್ಲಿ ಸಿಗುವ ಐಶ್ವರ್ಯ. ರಾತ್ರಿ ಬೆಳಕಿಗೇನು ಮಾಡುವುದು? ಬಯಲುರಿ (ಬಾನ್ ಫೈರ್)ಗಾಗಿ ಒಣಗಿ ಬಿದ್ದಿರುವ ಸೌದೆಗಳನ್ನು ಆಯಲು ಕ್ಯಾಂಪ್ ಸುತ್ತ ಒಬ್ಬೊಬ್ಬರು ಒಂದೊಂದು ದಾರಿ ಹಿಡಿದಿದ್ದೇವೆ. ಜೋರಾಗಿ ಬೀಸುತ್ತಿರುವ ಗಾಳಿಯಲ್ಲಿ ಕಟ್ಟಿಗೆಗಳನ್ನು ನುಂಗಲು ಬೆಂಕಿ ಸ್ವಲ್ಪ ಹಠ ಮಾಡಿ ಈಗ ಬೆಳಕು ಕೊಡಲು ನಿರ್ಧರಿಸಿದಂತೆ
ಜೋರಾಗಿ ಉರಿಯುತ್ತಿದೆ.
ಎಂಟಿಆರ್ ಪೊಟ್ಟಣಗಳನ್ನು ಬಿಸಿನೀರಿನಲ್ಲಿ ಮುಳುಗಿಸಿ ಆಫ್ರಿಕಾದ ನೆಲದಲ್ಲಿ ದಕ್ಷಿಣ ಭಾರತದ ತಿಂಡಿಗಳನ್ನು ಇನ್ಸ್ಟೆೆಂಟ್ ಆಗಿ ಮಾಡಿಕೊಳ್ಳುತ್ತಿದ್ದೇವೆ, ಪೋಲಿಷ್ ಹುಡುಗಿಯರಿಗೆ ನಮ್ಮ ಖಾದ್ಯಗಳ ಬಗ್ಗೆ ಪರಿಚಯ ಮಾಡಿಕೊಡುತ್ತಾ. ಸುತ್ತಲೂ ಗೂಡುಗಳಿಗೆ
ಮರಳುತ್ತಿರುವ ಹಕ್ಕಿಗಳ ಮುಗಿಯದ ಚಿಲಿಪಿಲಿ, ದೂರದೆಲ್ಲೆಲ್ಲೂ ಕಾಡುಹಂದಿಯೊಂದರ ಕೂಗು. ಸದ್ಯಕ್ಕೆ ಕಾಡಿನಲ್ಲಿ ನಮಗೆ ರಾತ್ರಿಯೇ ಅತಿಥಿ! ನಿಶೆ ತರುವ ಕಾಡಿನ ಸದ್ದುಗಳ ಸಂಭ್ರಮವೇ ಹಬ್ಬ.
ಆಗಸದಲ್ಲಿ ಕಡೆಯ ಬೆಳಕನ್ನು ಕತ್ತಲು ಮೆಲ್ಲಗೆ ತೊಳೆದುಬಿಟ್ಟಿದೆ. ಬೆಂಕಿಯ ಸುತ್ತ ಆಫ್ರಿಕಾದ ಮಣ್ಣಿನ ಮೇಲೆ ಕೂತಿದ್ದೇವೆ ಆಗೊಮ್ಮೆ ಈಗೊಮ್ಮೆ ಮಾತ್ರ ಮಾತನಾಡುತ್ತಾ, ಹೆಚ್ಚಾಗಿ ಕಾಡಿನ ಮೌನವನ್ನು ಆಲಿಸುತ್ತಾ. ಎರಡೂ ಹಸ್ತಗಳನ್ನು ಮಣ್ಣಿನ ಮೇಲಿಟ್ಟು ಒಂದೆರಡು ಕ್ಷಣ ಸುಮ್ಮನೆ ಕೂತಿದ್ದೇನೆ, ಕೊರಳಲ್ಲಿ ಗದ್ಗದ ಮೌನ. ಆಫ್ರಿಕಾ, ನಮ್ಮ ತವರು. ಊಟ ಮುಗಿಸಿ ಡೇರೆ ಕಟ್ಟುವಾಗ ನಮ್ಮ ಗೈಡ್ ರಾತ್ರಿ ಅಕಸ್ಮಾತ್ ನೀರಾನೆ ಬಂದರೆ ಏನು ಮಾಡಬೇಕು, ಸಿಂಹ ಬಂದರೆ ಏನು ಮಾಡಬೇಕು ಎಂದು ಅದೇನು ಮಹಾ ದೊಡ್ಡ ವಿಷಯವಲ್ಲ ಎಂಬಂತೆ ವಿವರಿಸುತ್ತಿದ್ದಾರೆ.
ಅದುವರೆಗೂ ಭಾವುಕರಾಗಿ ಮೈಮರೆತಿದ್ದ ನಮ್ಮ ಮುಖಗಳ ಮೇಲೆ ಭಯ ಆವರಿಸುತ್ತಿರುವುದು ಕಂಡು ತುಂಟ ನಗು ನಗುತ್ತಾ, ಯೋಚಿಸಬೇಡಿ, ಅನಾಹುತವೇನೂ ಆಗುವುದಿಲ್ಲ. ಪ್ರಾಣಿಗಳು ಮನುಷ್ಯರಿಂದ ದೂರವೇ ಇರಲು ಬಯಸುತ್ತವೆ. ಇದು ಮುನ್ನೆ ಚ್ಚರಿಕೆಯ ಕ್ರಮಗಳು ಮತ್ತು ಅಕಸ್ಮಾತ್ ದೊಡ್ಡ ಪ್ರಾಣಿ ಮುಖಾಮುಖಿಯಾದರೆ ಹೆದರದೇ ಸಮಯಪ್ರಜ್ಞೆ ಹೇಗೆ ಕಾಪಾಡಿಕೊಳ್ಳ ಬೇಕು ಎಂಬುದರ ಬಗ್ಗೆ ಚರ್ಚೆ, ಎಂದು ಸಮಾಧಾನ ಮಾಡುತ್ತಿದ್ದಾರೆ.
ಗಮನವಿಟ್ಟು ಕೇಳಿಸಿಕೊಂಡು ನಮ್ಮ ನಮ್ಮ ಡೇರೆಯೊಳಗೆ ಸೇರಿಕೊಂಡಿದ್ದೇವೆ. ಸ್ವಲ್ಪವೇ ದೂರದಲ್ಲಿ ಬೆಂಕಿ ಇನ್ನೂ ಉರಿಯು ತ್ತಿದೆ. ಹೊರಗಿನ ಪ್ರಪಂಚದಲ್ಲಿ ನಾವು ಸಾಮಾಜಿಕ ನಾಟಕಗಳ ವೇಷಗಳನ್ನೆಲ್ಲಾ ಕಳಚಿಟ್ಟು ಮಲಗುವ ಅನುಭವ ಕ್ಕಿಂತಲೂ, ಈ ಕಾಡಿನ ಮಣ್ಣಿನ ಮೇಲೆ ಪ್ರಾಣಿ-ಪಕ್ಷಿಗಳ ಸದ್ದುಗಳನ್ನು ಕೇಳುತ್ತಾ ಮಲಗುವ ಅನುಭವ ಭೂಮಿಯ ಜೊತೆ ಆತ್ಮಿಕ ಸಂಬಂಧ ವೊಂದನ್ನು ಹೊಸದಾಗಿ ಬೆಸೆಯುತ್ತಿದೆ. ಪಕ್ಕದ ಡೇರೆಯಿಂದ ಪೋಲಿಷ್ ಹುಡುಗಿಯ ಗೊರಕೆ ನಿಂತರೆ ಸಾಕಪ್ಪಾ ಎಂಬ ನನ್ನ ಪ್ರಾರ್ಥನೆಯನ್ನು ಯಾರು ಎಲ್ಲಿ ಆಲಿಸಿದರೋ, ಕಡೆಗೂ ಗೊರಕೆ ಸದ್ದು ನಿಂತಿದೆ.
ಹೊರಗೆ ಬೆಂಕಿ ತಣ್ಣಗಾಗಿದೆ. ನನ್ನ ಡೇರೆಯ ಮೇಲ್ಭಾಗ ಸೊಳ್ಳೆಪರದೆಯಂತಿದೆ, ಹಾಗಾಗಿ ಮಲಗಿ ನೂರಾರು ನಕ್ಷತ್ರಗಳನ್ನು ನೋಡುವ ಬೆಲೆಕಟ್ಟಲಾಗದ ಆನಂದ! ಅಮಾವಾಸ್ಯೆ ಹತ್ತಿರವಾದ್ದರಿಂದ ಚಂದ್ರನ ದರ್ಶನವಿಲ್ಲ, ಕೇವಲ ನಕ್ಷತ್ರಗಳ ಬೆಳಕಿನಲ್ಲಿ ಭೂಮಿ ತೊಯ್ಯುತ್ತಿದೆ. ಹಿಂದೊಮ್ಮೆ ಹಿಮಾಲಯದ ನುಬ್ರಾ ಕಣಿವೆಯಿಂದ ಒಂದು ರಾತ್ರಿ ಬರಿಗಣ್ಣಿಗೇ ಕಾಣುವ ನಮ್ಮ ಕ್ಷೀರ ಪಥವನ್ನು ನೋಡಿದ ಸಂಭ್ರಮದ ಹಾಗೆಯೇ ಈ ರಾತ್ರಿಯೂ.
ಇದೆಂಥ ಹುಚ್ಚು ಸೌಂದರ್ಯ ರಾತ್ರಿಯಾಗಸದ್ದು! ನಕ್ಷತ್ರಗಳೂ ತಮ್ಮ ದಾರಿಯಲ್ಲಿ ತಾವು ತೆವಳುತ್ತಿವೆ, ಭೂಮಿಯೂ ಅಲ್ಲೆಲ್ಲೂ ತನ್ನ ಪಾಡಿಗೆ ತಾನು ಗಿರಕಿ ಹೊಡೆಯುತ್ತಿದೆ. ಅದರ ಮೇಲೆ ನಮ್ಮ ಭ್ರಮಣ, ಭ್ರಮೆಗಳು. ಇದನ್ನೆಲ್ಲಾ ಪ್ರತಿ ದಿನ, ಪ್ರತಿ ರಾತ್ರಿ ನೆನಪಿಸಿಕೊಳ್ಳಬೇಕು ಎಂದು ಮನನ ಮಾಡಿಕೊಳ್ಳುತ್ತಾ ಗಡಿಯಾರ ನೋಡುತ್ತೇನೆ, ಮಧ್ಯರಾತ್ರಿ ಕಳೆದಿದೆ. ನಿದ್ದೆಯ ಸುಳಿವಿಲ್ಲ. ಇಷ್ಟೊಂದು ನಕ್ಷತ್ರಗಳು ಕಾಣುವಾಗ ಕಣ್ಮುಚ್ಚುವುದು ಹೇಗೆ?