Wednesday, 11th December 2024

ಮನಸ್ಸು ಎಂಬುದು ಮಾಯೆಯ ಮಾಟ

ದಾಸ್ ಕ್ಯಾಪಿಟಲ್‌

dascapital1205@gmail.com

ಸ್ವಾಮಿ ಜಗದಾತ್ಮಾನಂದರೆಂದಂತೆ, ಅಸಂಖ್ಯ ಯೋಚನೆ, ಭಾವನೆ, ಕಲ್ಪನೆ, ಸಂಕಲ್ಪ ಇವುಗಳಿಂದ ಅಥವಾ ಇಚ್ಛಾ, ಕ್ರಿಯಾ, ಜ್ಞಾನಾತ್ಮಕ ಯೋಚನೆಗಳಿಂದ ಕೂಡಿದ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಜಟಿಲವೂ, ಅತ್ಯಂತ ಸೂಕ್ಷ್ಮವೂ, ಸಂಕೀರ್ಣವೂ ಆದ ವಿಶಿಷ್ಟ ಶಕ್ತಿಯೇ ಮನಸ್ಸು. ಇದೊಂದು ಸಂಕೀರ್ಣ ವ್ಯವಸ್ಥೆಯೆಂದೂ, ಅದ್ಭುತ ಶಕ್ತಿಯನ್ನೂ ಹೊಂದಿದೆ ಯೆಂದೂ ವಿಜ್ಞಾನಿಗಳು ಹೇಳುತ್ತಾರೆ.

ಮಹಾಮೇಧಾವಿಯೊಬ್ಬನ ಒಟ್ಟೂ ಮನೋಶಕ್ತಿಯಲ್ಲಿ ಶೇ. ೧೦ರಷ್ಟು ಮಾತ್ರ ಬಳಸಲ್ಪಡುತ್ತದೆಂದರೆ ಮನಸ್ಸಿನ ಶಕ್ತಿಯ ಅಗಾಧತೆ ಎಷ್ಟಿರಬಹುದು? ಕ್ರಿಯಾಶೀಲವಾಗೇ ಇರುವ ಮನಸ್ಸಿಗೆ ಏಕಾಗ್ರತೆಯೆಂಬುದು ಅವಿಚ್ಛಿನ್ನವಾಗಿ ಸುಪ್ತವಾಗಿರುತ್ತದೆ. ಆದ್ದರಿಂದ, ಸದಾ ಚೈತನ್ಯ ಶೀಲವಾಗಿರುವ ಮನಸ್ಸಿಗೆ ದಕ್ಕದ್ದು ಯಾವುದೂ ಇಲ್ಲವೆನ್ನುತ್ತದೆ ಮನೋವಿಜ್ಞಾನ. ‘ಬದುಕಿನ ಎಲ್ಲ ಬಂಧನ-ಮೋಕ್ಷಗಳಿಗೂ ಮನಸ್ಸೇ ಮೂಲ’ ಎಂದಿದೆ ಉಪನಿಷತ್ತು. ಸುಖ-ದುಃ
ಖಕ್ಕೂ, ನೋವು-ನಲಿವಿಗೂ ಮನಸ್ಸೇ ಮೂಲಾಧಾರವಾದ್ದರಿಂದ, ಮನಸ್ಸಿನ ಸೂತ್ರವೇ ವಿಭಿನ್ನವಾದುದು, ವಿಶಿಷ್ಟವಾದುದು.

ವಿಚಿತ್ರವೂ ಅಹುದು. ಸೂಕ್ಷ್ಮವಾಗಿ ಅವಲೋಕಿಸಿದರೆ ಮನಸ್ಸಿನ ಅಸ್ತಿತ್ವವೇ ಬೆರಗನ್ನು ಹುಟ್ಟಿಸುವಂಥದ್ದು. ಇಂಥ ಮನಸ್ಸಿಗೂ ಒಂದು ಕರ್ತೃತ್ವ ವಿದೆಯೇ ಅಥವಾ ಕರ್ತೃ ಇದ್ದಾನೆಯೇ? ಆಲೋಚಿಸಿ ನೋಡಿ: ‘ಮನಸ್ಸು ಒಪ್ಪುವು ದಿಲ್ಲ’ ಅನ್ನುತ್ತೇವೆ. ಹಾಗಾದರೆ ಮನಸ್ಸು ಯಾರ ಅಥವಾ ಯಾವುದರ ಅಧೀನ? ನಾನು ಹೇಳಿದಂತೆ ನನ್ನ ಮನಸ್ಸು ಕೇಳುವುದಿಲ್ಲವೆಂದಾದರೆ, ಮನಸ್ಸಿಗೆ ಒಪ್ಪಿತವಾದದ್ದನ್ನೇ ನಾನು ಹೇಳಬೇಕು ಅಂತಾಯಿತು. ನನ್ನನ್ನೂ ಮೀರಿ ನನ್ನ ಮನಸ್ಸನ್ನು ನಿಯಂತ್ರಿಸುವವ ರಾರು? ಮನೋಮಯವಾದ ಈ ಬದುಕಿನ ಎಲ್ಲ ಕರ್ಮಗಳೂ ಮನಸ್ಸಿನ ಒಪ್ಪಿಗೆಯನ್ನು ಪಡೆದಿರುತ್ತವೆಯೇ? ನಮ್ಮ ಮನಸ್ಸನ್ನೇ ನಿಯಂತ್ರಿಸಲಾಗದ ನಾವು ಅನ್ಯರ ಮನಸ್ಸನ್ನು ನಿಯಂತ್ರಿಸಲು ಯತ್ನಿಸುತ್ತೇವೆ,

ಅವರಿಗೊಂದು ಉಪದೇಶ ನೀಡುತ್ತೇವೆ. ನಿಯಂತ್ರಿಸಬೇಕೆಂದು ಪಾಠ ಮಾಡುತ್ತಿರುತ್ತೇವೆ. ಇದು ಸಾಧ್ಯವೇ? ಸಾಧ್ಯವಾಗುವುದಾದರೂ ಹೇಗೆ? ಒಳ್ಳೆಯದಕ್ಕೆ ಒಗ್ಗದ ಜಗ್ಗದ ಈ ಮನಸ್ಸಿಗೆ, ಕೆಟ್ಟದ್ದು ಬೇಗ ಒಗ್ಗುತ್ತದೆಂದಾದರೆ ಮನಸ್ಸಿನ ಒಟ್ಟೂ ರಚನೆಯ ಸ್ವರೂಪವೆಂಥದ್ದು? ‘ಇವತ್ತು ಮನಸ್ಸಿಲ್ಲ’ ಅನ್ನುತ್ತೇವೆ. ಅಂದರೆ, ಮನಸ್ಸು ನಮ್ಮ ಅಽನವನ್ನೂ ಲಗಾ ಮನ್ನೂ ಕಳಚಿಕೊಂಡು ಸ್ವೇಚ್ಛೆಯಾಗಿರಲು ಬಯಸುತ್ತದೆಯೇ? ಮನಸ್ಸಿನೊಳಗೇ ಇದ್ದು ಹೀಗೆಲ್ಲ ವರ್ತಿಸುವ ಮೂಲಮನಸ್ಸಾದರೂ ಹೇಗಿದೆ? ಬದುಕಿನುದ್ದಕ್ಕೂ ಏನೇನೆಲ್ಲಾ ಹಂಬಲಿಸುವ, ತಿರಸ್ಕರಿಸುವ, ಹಠಮಾಡುವ, ಪ್ರೀತಿಸುವ, ಧಾರ್ಷ್ಟ್ಯದಿಂದ ವರ್ತಿಸುವ ಮನಸ್ಸಿಗೆ ದಣಿವೆಂಬುದಿಲ್ಲವೇ? ಪ್ರೀತಿಗೆ ಸೋಲುವ ಮನಸ್ಸು, ದ್ವೇಷವನ್ನು ಗೆಲ್ಲುವ ಹುಂಬತನಕ್ಕೆ ಸೆಟೆದು ನಿಲ್ಲುತ್ತದೆ. ಇದೆಂಥಾ ವಿಚಿತ್ರ ಮನಸ್ಸು!

‘ನನ್ನ ಮನಸ್ಸಿಗೆ ಅನಿಸಿತು’ ಅನ್ನುತ್ತೇವೆ. ಹಾಗಾದರೆ, ಮನಸ್ಸಿಗನಿಸಿದ್ದು ನಮ್ಮ ಅನುಭವಕ್ಕೆ ಬರುವುದು ಹೇಗೆ? ನಿದ್ರೆಯಲ್ಲಿ ಮನಸ್ಸು ಸುಪ್ತಸ್ಥಿತಿ ಜಾಗೃತವಾಗಿರುತ್ತದೆ ಎನ್ನುತ್ತಾರೆ. ನಿದ್ರೆಯಲ್ಲಿ ಕಂಡ ಕನಸಿಗೆ ಎದ್ದ ಮೇಲೆ ಜೀವ ತುಂಬುವ ಮನಸ್ಸು, ಕನಸು ಕಾಣುವಾಗ ಎಲ್ಲಿ ಸುಪ್ತವಾಗಿತ್ತು? ಆಗ ಅದು ಯಾವ, ಯಾರ ಅಧೀನದಲ್ಲಿತ್ತು? ಕೆಲವೊಮ್ಮೆ ನನ್ನ ಮನಸ್ಸು ಒಪ್ಪುವುದಿಲ್ಲವೆಂದು ಹೇಳುತ್ತೇವೆ. ಅದು ಹೇಗೆ ಸಾಧ್ಯ? ‘ಮನಸ್ಸಿಲ್ಲ, ಮನ ಸ್ಸೊಪ್ಪುವುದಿಲ್ಲ’ ಎಂದು ಹೇಳಿಸುವ ಆ ಮನಸ್ಸಾದರೂ ಯಾವುದು? ಒಪ್ಪಿತಕ್ಕೂ ಒಪ್ಪದಿರುವಿಕೆಗೂ ಮನಸ್ಸೇ ಮೂಲವಾಗುವು ದಾದರೆ ಮನಸ್ಸನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲವೇಕೆ? ಅಂದರೆ, ಮನಸ್ಸಿನೊಳಗಿದ್ದು ಮನಸ್ಸನ್ನು ನಿಯಂತ್ರಿಸುವ ಬೇರೆಯದೇ ಆದ ಕರ್ತೃವಿದ್ದಾ ನೆಂತಲೇ ಅರ್ಥವಲ್ಲವೇ? ಹಾಗೆ ಇರುವುದಾದರೂ ಅಹುದೇ? ಮನಸ್ಸು ಅಮೃತವನ್ನೂ ಹುಟ್ಟಿಸಬಹುದು, ವಿಷವನ್ನೂ ಹುಟ್ಟಿಸಬಹುದು.

ಅಂದರೆ, ಎಲ್ಲವನ್ನೂ ದಕ್ಕಿಸಿಕೊಳ್ಳುವ, ತಿರಸ್ಕರಿಸುವ, ನಿರ್ಲಕ್ಷಿಸುವ ಮನಸ್ಸಿನ ವ್ಯಾಪಕತೆ ಊಹಿಸಲ ಸಾಧ್ಯ. ‘ಮನಸ್ಸು ಹುಟ್ಟು ಚಂಚಲ ಸ್ವಭಾವದ್ದು’ ಎನ್ನುತ್ತದೆ ಮನೋವಿಜ್ಞಾನ. ಅಂಥ ಮನಸ್ಸನ್ನು ನಿಯಂತ್ರಿಸಿ ತದೇಕಚಿತ್ತವಾಗಿ ಧ್ಯಾನಿಸುವುದು ಮನಸ್ಸಿಗಿರುವ ಗಾಢ ಅಂತಃಶ್ಶಕ್ತಿಯೇ ಅಲ್ಲವೇ? ಇದರಿಂದಾಗಿ ನಮ್ಮ ಋಷಿ-ಮುನಿಗಳು ಅಂತರ್ದೃಷ್ಟಿಯಲ್ಲಿ ಆಕಾಶಮಂಡಲದ ರಚನೆ ಮತ್ತು ಕಾರ್ಯಗತಿಯನ್ನು ಕಂಡುಕೊಂಡರು. ಭೌತಿಕವಾಗಿ ಇಲ್ಲದ ಗುರುವನ್ನು ಮನಸ್ಸಲ್ಲೇ ನೆಲೆಯೂರಿಸಿಕೊಂಡು ಏಕಲವ್ಯ ಶಬ್ದವೇದಿಯನ್ನು ಕಲಿತದ್ದು. ಶಬರಿಯ ಮುಗ್ಧಮನಸ್ಸಿಗೇ ಅಲ್ಲವೇ ರಾಮನ ಮೃದುಸ್ಪರ್ಶವಾದದ್ದು? ಕಂಸ, ಮಾಗಧ, ಕೌರವರಿಂದ ಗೆಲ್ಲಲಾಗದ ಶ್ರೀಕೃಷ್ಣನ ಮನಸ್ಸನ್ನು ಗೋಪಿಕೆಯರು ಗೆದ್ದರು.

ಗೆಲ್ಲಲಾಗದ ವಸ್ತುವೆಂದು ತಿಳಿದೂ ಯತ್ನಿಸಿದ ಪೂತನಿ, ಕೃಷ್ಣನಿಂದಲೇ ಮುಕ್ತಿ ಪಡೆದಳು. ಕಿತ್ತುತಿನ್ನುತ್ತಿದ್ದ ಬಡತನ ನಿವಾರಿಸಿಕೊಳ್ಳಲು ಬಂದ ಸುದಾಮನ ಮನಸ್ಸನ್ನು ಅರಿತ ಕೃಷ್ಣ ‘ಕುಚೇಲ’ ಎಂದು ಹಂಗಿಸಿ ಕಷ್ಟ ನೀಗಿದ. ಸಂಧಾನಕ್ಕೆ ಹೊರಟ ಕೃಷ್ಣನಲ್ಲಿ ‘ಯುದ್ಧವನ್ನೇ ಗಂಟಿಕ್ಕಿಕೊಂಡು ಬಾ’ ಎಂದು ಕಡ್ಡಿತುಂಡಾಗುವಂತೆ ಹೇಳಿದ ದ್ರೌಪದಿಯ ಮನಸ್ಸನ್ನು ಕೃಷ್ಣ ಮೊದಲೇ ಅರಿತಿದ್ದನೆನಿಸುವುದಿಲ್ಲವೇ? ಯುದ್ಧದಲ್ಲಿ ಅಜ್ಜ, ಗುರು, ಬಂಧು ಗಳನ್ನು ಕಂಡು ಸಾಯಿಸಲು ಮನಸ್ಸೊಪ್ಪದೆ ‘ಯುದ್ಧಮಾಡಲು ಸಾಧ್ಯವಿಲ್ಲ’ ಎಂದು ಶಸ್ತ್ರಗಳನ್ನು ಕೈಚೆಲ್ಲಿ ಕೂತ ಅರ್ಜುನನ ಮನಸ್ಸನ್ನು ಧರ್ಮ ಸಂರಕ್ಷಣೆಗಾಗಿ ಯುದ್ಧಮಾಡುವಂತೆ ಮಾಡಿದ ಕೃಷ್ಣನನ್ನು ಜಗತ್ತಿನ ಮೊದಲ ಸೈಕಿಯಾಟ್ರಿಸ್ಟ್ ಎಂದೇ ಜಗತ್ತು ಗುರುತಿಸಿತು.

ಕುಂತಿಯ ಮನಸ್ಸನ್ನು ಅರಿಯಲು ಕೃಷ್ಣನಿಗೆ ಆಗಲೇ ಇಲ್ಲವೆನ್ನುತ್ತದೆ ಮಹಾಭಾರತ. ಕುರುಕ್ಷೇತ್ರ ಯುದ್ಧ ಮುಗಿದು ತನ್ನೆಲ್ಲಾ ಮಕ್ಕಳನ್ನೂ ಕಳೆದು ಕೊಂಡು ದುಃಖಿತಳಾಗಿ, ನಡೆದುದಕ್ಕೆಲ್ಲಾ ಕೃಷ್ಣನನ್ನೇ ಗುರಿಯಾಗಿಸಿ ಶಾಪವೀಯುವಾಗ ಗಾಂಧಾರಿಯ ಮನಸ್ಸು ಎಷ್ಟು ಕುದ್ದಿರಬಹುದು! ಹೊರಗೆ ಕಂಡಂತೆ ಮನಸ್ಸಿನ ಒಳ ಅಸ್ತಿತ್ವದಲ್ಲಿರುವುದಿಲ್ಲ. ಮಾತು ವಿಷವಾಗುವುದಾದರೆ ಅಮೃತವೂ ಆಗಬಹುದು. ಪ್ರೀತಿಯನ್ನು ಅಂಕುರಿಸುವ ಮನಸ್ಸೇ ದ್ವೇಷವನ್ನೂ ಸೃಜಿಸುತ್ತದೆ. ಸ್ವಭಾವಕ್ಕೂ ಮನಸ್ಸಿಗೂ ಸಂಬಂಧವಿದೆಯೇ? ಸ್ವಭಾವವೂ ಮನಸ್ಸನ್ನು ಆಧರಿಸಿ ರಚಿತವಾಗುವುದಾದರೆ, ಮನಸ್ಸಿನ ಮೇಲೂ ಸ್ವಭಾವದ ಪ್ರಭಾವ ಬೀರಬಹುದಲ್ಲವೇ? ಸ್ಥಾಯಿ ಭಾವ ಮತ್ತು ಸಂಚಾರಿಭಾವಗಳು ಮನಸ್ಸಿನ ವ್ಯಾಪಾರ ಗಳನ್ನು ವಿಘಟಿಸು ತ್ತವೆಯೇ? ಭಾವನೆ, ಚಿಂತನೆ, ಆಲೋಚನೆ ಗಳಿಗೆ ಮೂಲವಾದ ಮನಸ್ಸು ವಿಕಾಸಗೊಳ್ಳುವುದು ಹೇಗೆ? ಮನಸ್ಸಿನ ಸ್ವಭಾವದಲ್ಲಿ ವ್ಯತ್ಯಯಗಳಾಗುವುದು ಹೇಗೆ? ಪ್ರಜ್ಞೆನ್ನೂ ಮನಸ್ಸು ನಿಯಂತ್ರಿಸುತ್ತದೆಯೇ? ಕಲ್ಪನೆಗೂ ಮನಸ್ಸಿಗೂ ಏನು ಸಂಬಂಧ? ಮನಸ್ಸಿನ ಕಲ್ಪನೆಗಳೇ ಮೂರ್ತ ರೂಪವನ್ನು ಪಡೆಯುತ್ತವೆಯೇ? ಹಾಗಾದರೆ ಈ ಮನಸ್ಸಿನಲ್ಲಿ ಹುದುಗಿರುವುದು ಏನು? ಒಂದೇ ವಿಷಯದ ಬಗ್ಗೆ ಭಿನ್ನ ನೆಲೆಯಲ್ಲಿ ಮನಸ್ಸು ಅಭಿವ್ಯಕ್ತವಾಗುತ್ತದಲ್ಲ!

ಅಂದರೆ ಮನಸ್ಸಿಗೂ ಆಳದಲ್ಲಿ ಒಂದು ಮನಸ್ಸಿದೆಯೇ? ‘ಒಳ್ಳೆಯ ಮನಸ್ಸು’ ಅನ್ನುತ್ತೇವೆ. ಕೆಟ್ಟ ಮನಸ್ಸಿಗೂ ಅದೇ ಒಳ್ಳೆಯ ಮನಸ್ಸು ಪ್ರಚೋದನೆ
ನೀಡಬೇಕು ತಾನೇ? ನೀಡುತ್ತದೆ ಎಂದಾದರೆ, ಒಳ್ಳೆಯ ಮನಸ್ಸೂ ಆಂತರ್ಯದಲ್ಲಿ ಕೆಟ್ಟದ್ದನ್ನು ಹೊಂದಿರುತ್ತದೆಂದಾಯಿತು. ಹೊರಗಿನ ಕ್ರಿಯೆಗಳಿಗೆ ಸ್ಪಂದಿಸುವಾಗ ಮನಸ್ಸು ತನ್ನ ಮೂಲಸ್ವರೂಪವನ್ನು ಮರೆಮಾಚಿಕೊಳ್ಳುತ್ತದೆ. ಬೇಡನ ಬಾಣಕ್ಕೆ ತುತ್ತಾಗಿ ಬಿದ್ದ ಕ್ರೌಂಚದ ಮೇಲೆ ಕರುಣೆ ತೋರಿದ
ರತ್ನಾಕರನ ಮನಸ್ಸು, ಬೇಡನ ಮೇಲೆ ಅಪರಿಮಿತ ಕ್ರೋಧ ವನ್ನು ತಳೆಯುತ್ತದೆ. ವ್ಯಕ್ತಿಯೊಬ್ಬನ ಮನಸ್ಸನ್ನು ಬಾಹ್ಯ ವ್ಯಾಪಾರಗಳು ನಿಯಂತ್ರಿಸುವು ದಾದರೆ, ಆ ಮನಸ್ಸಿನ ಸ್ವಭಾವ ಎಂಥದ್ದು? ಬದುಕಿನುದ್ದಕ್ಕೂ ಹೀಗೆ ಪಲ್ಲಟವಾಗುತ್ತಲೇ ಇರುವ ಅಪಾರ ಅದಮ್ಯಶಕ್ತಿ ಅದರಲ್ಲಿ ಸಂಚಯವಾಗು
ವುದಾದರೂ ಹೇಗೆ? ‘ಜೈಸಾ ಖಾವೇ ಅನ್, ವೈಸಾ ಆವೇ ಮನ್’ ಎನ್ನುತ್ತಾರೆ.

ತಿನ್ನುವ ಆಹಾರಕ್ಕೂ ಮನಸ್ಸಿಗೂ ಸಂಬಂಧವಿದೆಯಾ? ಸಾತ್ವಿಕ ಆಹಾರ ತಿಂದವರೂ ಅಮಾ ನುಷರಾಗಿ ಮೆರೆದಿಲ್ಲವೇ? ತಾಮಸ ಆಹಾರವನ್ನು ತಿಂದ
ವರೂ ಸಾತ್ವಿಕತೆಯನ್ನು ಮೆರೆದಿಲ್ಲವೇ? ಇದೆಂಥಾ ವ್ಯತಿರಿಕ್ತತೆ! ಪ್ರಜ್ಞೆ, ಬುದ್ಧಿ, ವಿವೇಕಗಳು ಮನಸ್ಸನ್ನು ನಿಯಂತ್ರಿಸುತ್ತವೆ ಎಂದಾದರೆ, ಮನಸ್ಸು ಸ್ವತಂತ್ರವಾಗಿ ವರ್ತಿಸುವಾಗಲೂ ಪಾರತಂತ್ರವಾಗಿರುತ್ತದೆ. ಹಾಗೆಯೇ ಪಾರತಂತ್ರವಾಗಿ ದ್ದಾಗಲೂ ಸ್ವತಂತ್ರವಾಗಿರುತ್ತದೆ. ಆದ್ದರಿಂದ ಮನಸ್ಸು
ಮಾಯೆ. ಮನಸ್ಸೇ ಮಾಯೆ ಅಥವಾ ಮಾಯೆಯೊಳಗೆ ಮನಸ್ಸು ಬಂದಿ. ಈ ಬಂಧದೊಳಗಿದ್ದೇ ಮನಸ್ಸಿನ ವ್ಯಾಪಾರ ಗಳು ನಡೆಯುವುದು. ಬದುಕಿನಂತೆ ಮನಸ್ಸು ಕೂಡ ದ್ವಂದ್ವ ಗಳ ಸಮ್ಮಿಲನ. ಈ ಸಮ್ಮಿಲನದಲ್ಲಿನ ನಿರಂತರ ಏರುಪೇರು ಗಳೇ ಬದುಕಿನ ಮೇಲೆ ಪ್ರಭಾವ ಬೀರುತ್ತವೆ.

ಆಂಗ್ಲ ತತ್ತ್ವಜ್ಞಾನಿ ಹಾಬ್ಸನ ಮಾತುಗಳಿವು: ಮನುಷ್ಯ ಜನ್ಮತಃ ಪಶುಸ್ವಭಾವದವನೇ- ನೀತಿವಿರೋಽ. ಶಿಸ್ತು, ಶಿಕ್ಷಣ, ತರಬೇತಿಗಳನ್ನು ಅವನ ಮೇಲೆ ಹೇರಿದರೆ, ಅವನು ಸ್ವಲ್ಪ ಒಳ್ಳೆಯ ರೀತಿಯಿಂದ ವರ್ತಿಸುವ ಪ್ರಾಣಿಯಾಗುತ್ತಾನೆ. ಗ್ರೀಕ್ ತತ್ತ್ವಜ್ಞಾನಿ ಪ್ಲೆಟೋ ಸಂವಾದವೊಂದರಲ್ಲಿ ಹೀಗೆನ್ನುತ್ತಾನೆ: ಮನುಷ್ಯ ಹುಟ್ಟು ಬಂಡುಗಾರ, ಒಬ್ಬಾತ ಯಾವುದಾದರೂ ರೀತಿಯಿಂದ ಎಣಿಸಿದಾಗಲೆಲ್ಲ ಮಾಯವಾಗುವ ಸಿದ್ಧಿಯನ್ನು ಪಡೆದುಕೊಂಡಿದ್ದಾನೆನ್ನಿ. ಆಗ ಯಾವುದೇ ಖಜಾನೆ ದರೋಡೆಯಾಗದೇ ಉಳಿದೀತೇ? ಯಾವ ಹೆಂಗಸೂ ಮಾನಭಂಗವಾಗದೇ ಉಳಿದಾಳೇ? ನಮ್ಮಲ್ಲಿ ಎಷ್ಟೋ ಮಂದಿ
ಸಜ್ಜನರಾಗಿರುವುದು ಸಮಾಜದ ಕಟುಟೀಕೆ ಮತ್ತು ಅಪವಾದಗಳ ಭಯದಿಂದ, ಕಾನೂನಿನ ಏಟಿನಿಂದ.

ಇವೆರಡೂ ಇಲ್ಲದಲ್ಲಿ ಅಂಥ ಸೌಜನ್ಯ ಮಾಯವಾಗಿಬಿಡುವುದು. ಆ ಸೌಜನ್ಯ ಮಾಯವಾಗದೇ ಉಳಿಯುವುದು ಬೆರಳೆಣಿಕೆಯಷ್ಟು. ಮನೋವಿಕಾರಗಳಿಗೆ ಅವಕಾಶವಿದ್ದರೂ ಧೀರರ, ಸಂಯಮಿಗಳ ಮನಸ್ಸು ವಿಕಾರ ಹೊಂದುವುದಿಲ್ಲ. ಹಾಗೆ ವಿಕಾರವಾಗದಂತೆ ಅವರಿಗೆ ಪ್ರೇರಕವಾದ ಶಕ್ತಿಯೆಂದರೆ ಧರ್ಮ, ದೇವರು, ನೀತಿ-ನಿಯಮಗಳಲ್ಲಿ ಅವರಿಟ್ಟ ವಿಶ್ವಾಸ ಮತ್ತು ನಿಷ್ಠೆ. ಮನಸ್ಸಿನ ನಿಯಂತ್ರಣವು ಹೇಗೆ ಸಾಧ್ಯವೆಂಬುದನ್ನು ಇವು ಹೇಳುತ್ತವೆ. ಧರ್ಮ, ದೇವರು, ಆಧ್ಯಾತ್ಮಿಕತೆಗಳು ಮನುಷ್ಯನ ಮನಸ್ಸನ್ನು ಸಂಸ್ಕರಿಸುತ್ತವೆ. ಚಂಚಲತೆಯನ್ನು ನಿಗ್ರಹಿಸಿ ಬದುಕಿನ ಗಮ್ಯದೆಡೆಗೆ ಚಲಿಸುವಂತೆ ಮಾಡುತ್ತವೆ.
ಮನುಷ್ಯನ ಔನ್ನತ್ಯವನ್ನು ಉತ್ಕರ್ಷವನ್ನು ಬಲಪಡಿಸುತ್ತವೆ.

ಬದುಕಿನಲ್ಲಿನ ನಮ್ಮ ಎಲ್ಲ ಸಾಧನೆ ಸಿದ್ಧಿಗಳು ಮನಸ್ಸಿನಲ್ಲಿ ಉದಿಸಿದ ಯೋಚನೆ, ಕಲ್ಪನೆ, ಸಂಕಲ್ಪ, ಭಾವನೆಗಳ ಮಾದರಿಯನ್ನು ಅನುಸರಿಸಿಯೇ ಸಾಧ್ಯವಾಗಿರುತ್ತವೆ. ಪಶ್ಚಿಮದವನ ಮಾತಿದು: ‘ಒಂದು ತಿಂಗಳ ಕಾಲ ಪ್ರತಿದಿನವೂ ದಿನದ ಬೇರೆ ಬೇರೆ ಹೊತ್ತಿನಲ್ಲಿ ಐದು ಬಾರಿ ಮನಸ್ಸಿನಲ್ಲಿ ಉದಿಸುವ ಯೋಚನೆ-ಭಾವನೆಗಳನ್ನು ಪರಿಶೀಲಿಸಿದರೆ, ನಿಮ್ಮ ಮುಂದಿನ ಜನ್ಮದ ಜೀವನದ ಆಗುಹೋಗುಗಳನ್ನು ಹೇಗೆ ವ್ಯವಸ್ಥೆ ಮಾಡಿದ್ದೀರಿ ಎಂಬರಿವು ನಿಮಗಾಗುವುದು. ನೀವು ನಿಮ್ಮ ಈ ಸದ್ಯದ ಮನಸ್ಸಿನ ಗತಿಯ ಬಗ್ಗೆ ಪರಿಶೀಲನೆ ಮಾಡಿ ಕಂಡುಕೊಂಡ ಸಂಗತಿಗಳು ನಿಮಗೆ ಹಿಡಿಸದಿದ್ದಲ್ಲಿ, ಇಂದಿ ನಿಂದಲೇ ಭಾವನೆಗಳನ್ನು ಬದಲಿಸಿಕೊಳ್ಳಲು ಪ್ರಾಮಾಣಿಕವಾಗಿ ಯತ್ನಿಸಿ (ಬದುಕಲು ಕಲಿಯಿರಿ). ಈ ಶಕ್ತಿಯಿಂದ ಬದುಕನ್ನು ರೂಪಿಸಿಕೊಳ್ಳ ಬಹುದು’.