ಪ್ರಚಲಿತ
ಎಸ್.ಗುರುಮೂರ್ತಿ, ಆರ್ಥಿಕ ಮತ್ತು ರಾಜಕೀಯ ವ್ಯವಹಾರಗಳ ವಿಶ್ಲೇಷಕ
ಕಳೆದ ಏಳು ದಿನಗಳಲ್ಲಿ ಭಾರತದ ಐದನೇ ಒಂದರಷ್ಟು ಜಿಲ್ಲೆಗಳಲ್ಲಿ ಯಾವುದೇ ಕೋವಿಡ್-19 ಪ್ರಕರಣಗಳು ವರದಿಯಾಗಿಲ್ಲ. ಕೊನೆಗೂ ನಾವು ಕರೋನಾ ಏರಿಕೆಯನ್ನು ಯಶಸ್ವಿಯಾಗಿ ತಡೆದಂತೆ ಕಾಣಿಸುತ್ತಿದೆ. ಹೀಗೆಂದು ಎರಡು ತಿಂಗಳ ಹಿಂದೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಘೋಷಿಸಿದ್ದರು. ಅಂದು ಫೆಬ್ರವರಿ 15.
ಕಳೆದ ವರ್ಷ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 90000ಕ್ಕೆ ಹೋಗಿ ತಲುಪಿತ್ತು. ಅದು -.15ರ ವೇಳೆಗೆ 9000ಕ್ಕೆ ಇಳಿದಿತ್ತು. ಆದರೆ, ಈಗ ಮತ್ತೆ ಪರಿಸ್ಥಿತಿ ಸಂಪೂರ್ಣ ನಾಟಕೀಯವಾಗಿ ಬದಲಾಗಿದೆ. ಹಿಂದೆಂದೂ ಕೇಳರಿಯದ ವಿಪತ್ತಿನ ಪರಿಸ್ಥಿತಿಯಲ್ಲಿ ದೇಶ ಬಂದು ನಿಂತಿದೆ. ಏಪ್ರಿಲ್ ತಿಂಗಳಿನಲ್ಲಿ ಭಾರತದ ಕೋವಿಡ್ ಪ್ರಕರಣಗಳ ಸಂಖ್ಯೆ ದಿಗಿಲು ಹುಟ್ಟಿಸುವಂತಿದೆ. ಈ ರಾಷ್ಟ್ರೀಯ ವಿಪತ್ತನ್ನು ಎದುರಿಸಲು ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಪ್ರಯತ್ನವನ್ನೇ ಮಾಡಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ.
ಆದರೆ, ಆಕ್ಸಿಜನ್ ಕೊರತೆಯಿಂದ ದೆಹಲಿಯಲ್ಲಿ ಸಂಭವಿಸಿದ ದುರದೃಷ್ಟಕರ ಸಾವುಗಳು ಈಗಿನ ಪರಿಸ್ಥಿತಿ ಯನ್ನು ಹೇಗೆ ಭಾವನಾತ್ಮಕವಾಗಿ ಬದಲಿಸಿಬಿಟ್ಟಿವೆ ಅಂದರೆ, ಅದರ ನಡುವೆ ವಾಸ್ತವಾಂಶಗಳು ಹಾಗೂ
ತಾರ್ಕಿಕ ಸಂಗತಿಗಳೆಲ್ಲ ಅಪ್ರಸ್ತುತ ಎಂಬಂತಾಗಿವೆ. ಹೊರಗೆ ಕಾಣಿಸದ ಒಂದಷ್ಟು ಸಂಗತಿಗಳು ದೇಶದ
ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಕೋವಿಡ್ ನಿರ್ವಹಣೆಯ ಬಗ್ಗೆ ಅವರ ದೃಷ್ಟಿಕೋನವನ್ನೇ ಈ
ಸಂಗತಿಗಳು ಬದಲಿಸುತ್ತಿವೆ. ಇದು ಈ ವಿಪತ್ತನ್ನು ಎದುರಿಸಲು ದೇಶಕ್ಕೆ ಬೇಕಾದ ಚೈತನ್ಯಕ್ಕೆ ಹೊಡೆತ
ನೀಡುತ್ತಿದೆ. ಹಾಗಿದ್ದರೆ ನಮ್ಮ ಕಣ್ಣಿಗೆ ಕಾಣಿಸದೆ ತಪ್ಪಿಸಿಕೊಂಡಿರುವ ವಾಸ್ತವಗಳು ಯಾವುವು? ಇಲ್ಲಿ
ನೋಡಿ.
ಲಾಭಕೋರರ ದೂರು: ಆಕ್ಸಿಜನ್ ಸಿಗದೆ ಮೊದಲು ಸಾವು ಸಂಭವಿಸಿದ್ದು ದೆಹಲಿಯ ದೊಡ್ಡ ಕಾರ್ಪೊರೇಟ್
ಆಸ್ಪತ್ರೆಗಳಲ್ಲಿ. ಕೋವಿಡ್ನಿಂದಾಗಿಯೇ ಈ ಆಸ್ಪತ್ರೆಗಳು ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಲಾಭ ಮಾಡಿ ಕೊಂಡದ್ದವು. ಅದನ್ನು ನೋಡಿದ ನ್ಯಾಷನಲ್ ಹೆರಾಲ್ಡ್ ವೆಬ್ಸೈಟ್ 20.06.2020 ರಂದು ಕೋವಿಡ್ ಸಮಯ ದಲ್ಲಿ ಲಾಭಕೋರತನ, ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ತೆಗೆದುಕೊಳ್ಳಲು ಕಾಲ ಕೂಡಿಬಂದಿದೆಯೇ?’
ಎಂಬ ಲೇಖನ ಬರೆದಿತ್ತು. ಆ ವರದಿಯಲ್ಲಿ ‘25,090 ರು., 53,090ರು., 75590ರು., 500000 ರು., 600000 ರು., 1200000 ರು. – ಇವೆಲ್ಲ ಬರೀ ಸಂಖ್ಯೆಗಳಲ್ಲ.
ಇದು ದೆಹಲಿಯ ಖಾಸಗಿ ಆಸ್ಪತ್ರೆ ಯಲ್ಲಿ ನೀವು ಕೋವಿಡ್ ಚಿಕಿತ್ಸೆ ಪಡೆಯಬೇಕೆಂದರೆ ಒಂದು ದಿನಕ್ಕೆ ಹಾಗೂ ಎರಡು ವಾರಕ್ಕೆ ತೆರಬೇಕಾದ ಹಣ’ ಎಂದು ಬರೆಯಲಾಗಿತ್ತು. ಇದಕ್ಕೆ ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ಮೆಂಟ್ (ಪಿಪಿಇ), ಕೋವಿಡ್ ಪರೀಕ್ಷೆಗಳು ಹಾಗೂ ಔಷಧ ವೆಚ್ಚವನ್ನೂ ಸೇರಿಸಿದರೆ ಬಿಲ್ನ ಮೊತ್ತ ಒಬ್ಬ ಭಾರತೀಯ ನ ಒಂದು ವರ್ಷದ ದುಡಿಮೆಯಷ್ಟಾಗುತ್ತದೆ ಎಂದು ಲೇಖನದಲ್ಲಿ ತಿಳಿಸಲಾಗಿತ್ತು. ಇನ್ನು, ಮನೆಯಲ್ಲೇ ಚಿಕಿತ್ಸೆ ಪಡೆಯುವುದರ ಖರ್ಚು ಕೂಡ ಕಡಿಮೆ ಯಿರಲಿಲ್ಲ. 5700 ರು.ನಿಂದ ಆರಂಭಿಸಿ 21900 ರು. ವರೆಗೆ ಒಂದು ದಿನಕ್ಕೆ ಖರ್ಚಾಗುತ್ತಿತ್ತು.
ಪರೀಕ್ಷೆಗಳ ವೆಚ್ಚ ಪ್ರತ್ಯೇಕ. ನ್ಯಾಷನಲ್ ಹೆರಾಲ್ಡ್ ವರದಿಯಿಂದಾಗಿ ಸುಪ್ರೀಂಕೋರ್ಟ್ನಲ್ಲಿ ಖಾಸಗಿ
ಆಸ್ಪತ್ರೆಗಳ ಲೂಟಿಯ ವಿರುದ್ಧ ರಿಟ್ ಅರ್ಜಿ ಸಲ್ಲಿಕೆಯಾಯಿತು. ರಿಟ್ ಅರ್ಜಿ ಸಲ್ಲಿಕೆಯಾಗಿದ್ದನ್ನು ನೋಡಿ ಕಂಗಾಲಾದ ಅಸೋಸಿಯೇಷನ್ ಆಫ್ ಹೆಲ್ತ್ಕೇರ್ ಪ್ರೊವೈಡರ್ಸ್ (ಎಎಚ್ಪಿ) ಹಾಗೂ ಫಿಕ್ಕಿ ಸದಸ್ಯರು ತಾವೇ ದರಕ್ಕೆ ಸ್ವಯಂ ನಿಯಂತ್ರಣ ವಿಽಸಿಕೊಳ್ಳುವುದಾಗಿ ಹೇಳಿದರು.
ಆ ಸ್ವಯಂ ನಿಯಂತ್ರಣವಾದರೂ ಎಂಥದ್ದು? ಜನರಲ್ ವಾರ್ಡ್ಗೆ ಎಎಚ್ಪಿ ನಿಗದಿಪಡಿಸಿದ ಒಂದು ದಿನದ
ಶುಲ್ಕ 15000 ರು., ಆಕ್ಸಿಜನ್ ಬೇಕಿದ್ದರೆ ಇದಕ್ಕೆ 5000 ರು. ಸೇರಿಸಬೇಕು, ಐಸಿಯುಗೆ 25000 ಮತ್ತು
ವೆಂಟಿಲೇಟರ್ ಅಗತ್ಯಬಿದ್ದರೆ ಇದಕ್ಕೆ ಹೆಚ್ಚುವರಿಯಾಗಿ 10000 ರು. ಪಾವತಿಸಬೇಕು. ಫಿಕ್ಕಿ ನಿಗದಿಪಡಿಸಿದ ದರ ಇನ್ನೂ ಹೆಚ್ಚಿತ್ತು. ಅದು ಒಂದು ದಿನಕ್ಕೆ ಒಬ್ಬ ಕೋವಿಡ್ ರೋಗಿಗೆ 17000 ರು.ನಿಂದ 45000ರು.ವರೆಗೆ ದರ ನಿಗದಿಪಡಿಸಿತ್ತು.
ಇದಕ್ಕೆ ಇನ್ನಷ್ಟು ವೆಚ್ಚಗಳನ್ನು ಆಮೇಲೆ ಸೇರಿಸಲಾಗುತ್ತಿತ್ತು. ಆಸ್ಪತ್ರೆಗಳು 375-500 ರು.ಗೆ ಒಂದು ಪಿಪಿಇ ಕಿಟ್ ಖರೀದಿಸಿ ರೋಗಿಗಳಿಗೆ 10-12 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದವು. ಚೆನ್ನೆ ಮತ್ತು ಮುಂಬೈನ ಪರಿಸ್ಥಿತಿ ಯಾವ ರೀತಿಯಲ್ಲೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಇವೇ ಆಸ್ಪತ್ರೆಗಳು ಈಗ ಪ್ರತಿಯೊಬ್ಬರಿಗೂ ಸಂವಿಧಾನಬದ್ಧವಾಗಿ ಬದುಕುವ ಹಕ್ಕಿದೆಯೆಂದೂ, ಸರಕಾರವೇ ಆಕ್ಸಿಜನ್ ಪೂರೈಕೆ ಮಾಡಬೇಕೆಂದೂ ಕೋರಿ ರಿಟ್ ಅರ್ಜಿ ಸಲ್ಲಿಸಿವೆ. ಈ ಆಕ್ಸಿಜನ್ಗೆ ಇವೇ ಆಸ್ಪತ್ರೆಗಳು ದಿನಕ್ಕೆ ಒಬ್ಬ ರೋಗಿಗೆ ೫೦೦೦ ರು. ಶುಲ್ಕ ವಿಧಿಸುತ್ತವೆ!
ಆಕ್ಸಿಜನ್ ಸಿಗದೆ ಜನರು ಸಾಯುತ್ತಿದ್ದಾರೆ ಎಂಬ ಕಿವಿಗಡಚಿಕ್ಕುವ ಕೂಗಿನ ನಡುವೆ ಯಾರಿಗಾದರೂ ಈ
ಆಘಾತಕಾರಿ ವಿಷಯ ಅಲ್ಪಸ್ವಲ್ಪವಾದರೂ ಕಿವಿಗೆ ಬಿದ್ದಿದೆಯೇ? ಇದು ಏಕೆ ಮುಖ್ಯ ಅಂದರೆ, ದುಡ್ಡು
ಮಾಡುವ ದಂಧೆಯ ಕಾರ್ಪೊರೇಟ್ ಆಸ್ಪತ್ರೆಗಳು ಅದರಲ್ಲಿ ಸಣ್ಣ ಪ್ರಮಾಣದ ಹಣ ಖರ್ಚು ಮಾಡಿದರೂ
ತಮ್ಮದೇ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿಕೊಳ್ಳಬಹುದು. ಇನ್ನೂ ಇದೆ ಓದಿ.
ಆಮ್ಲಜನಕ ಖಾಸಗೀಕರಣ: ನಮ್ಮ ದೇಶದಲ್ಲಿ ಆಮ್ಲಜನಕದ ಉತ್ಪಾದನೆ, ವ್ಯಾಪಾರ, ದಾಸ್ತಾನು ಹಾಗೂ
ಬಳಕೆಯನ್ನು ಖಾಸಗೀಕರಣಗೊಳಿಸಲಾಗಿದೆ. ವೈದ್ಯಕೀಯ ಆಮ್ಲಜನಕದ ಮಾರಾಟದ ಮೇಲೆ ಸರಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ. ಆದರೆ, ಇದರ ದರವನ್ನು ಮಾತ್ರ ನ್ಯಾಷನಲ್ ಫಾರ್ಮಾ ಪ್ರೈಸಿಂಗ್ ಅಥಾರಿಟಿ (ಎನ್ಪಿಪಿಎ) ನಿಗದಿಪಡಿಸುತ್ತದೆ.
ಒಟ್ಟಾರೆಯಾಗಿ ವೈದ್ಯಕೀಯ ಆಮ್ಲಜನಕದ ವ್ಯವಹಾರ ಸರಕಾರದ ಸುಪರ್ದಿಯಲ್ಲಿ ಇಲ್ಲ. ಎನ್ಪಿಪಿಎ
ಎಂಬುದು ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವಾಲಯದಡಿ ಬರುವ ಒಂದು ಸ್ವಾಯತ್ತ ಸಂಸ್ಥೆ. ಇದು ದರ ಮಾತ್ರ ನಿಗದಿಪಡಿಸುತ್ತದೆ. ಆಮ್ಲಜನಕ ಮಾರಾಟ ಮಾಡುವವರು ಉದ್ದಿಮೆಗಳು, ಆಸ್ಪತ್ರೆಗಳು
ಹಾಗೂ ಸರಕಾರದ ಜೊತೆಗೂ ಪ್ರತ್ಯೇಕ ಒಪ್ಪಂದವನ್ನೇ ಮಾಡಿಕೊಳ್ಳುತ್ತಾರೆ.
ತುರ್ತು ಸಂದರ್ಭಗಳಲ್ಲಿ ತಮಗೆ ಎಷ್ಟು ಆಮ್ಲಜನಕ ಬೇಕಾಗುತ್ತದೆ ಎಂಬುದನ್ನು ಆಸ್ಪತ್ರೆಗಳೇ ಅಂದಾಜಿಸಿ, ಅದಕ್ಕೆ ತಕ್ಕಂತೆ ಒಪ್ಪಂದ ಮಾಡಿಕೊಂಡಿರುತ್ತವೆ. ಒಮ್ಮೆ ಆರ್ಡರ್ ನೀಡಿದರೆ ಆಮ್ಲಜನಕ ಬಂದು ತಲುಪಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಆಸ್ಪತ್ರೆಗಳಿಗೆ ಗೊತ್ತಿರುತ್ತದೆ.
ಅದಕ್ಕೆ ತಕ್ಕಂತೆಯೇ ಆರ್ಡರ್ ಮಾಡುತ್ತವೆ. ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಾಗುವ ಸರಣಿ ಸಾಮಾನ್ಯ ವಾಗಿ ಸುದೀರ್ಘವಾಗಿರುತ್ತದೆ. ಹೀಗಾಗಿ ಆಮ್ಲಜನಕ ಬಂದು ತಲುಪಲು ಹೆಚ್ಚು ಸಮಯ ಹಿಡಿಯುತ್ತದೆ. ಅದರಲ್ಲೂ ದೆಹಲಿಯ ಆಸ್ಪತ್ರೆಗಳು ಆಮ್ಲಜನಕ ಉತ್ಪಾದನಾ ಘಟಕಗಳಿಂದ ಸಾವಿರಾರು ಕಿ.ಮೀ. ದೂರದಲ್ಲಿವೆ.
ದೆಹಲಿಗೆ ಆಮ್ಲಜನಕ ಪೂರೈಸುವ ಕಾರ್ಖಾನೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಹರಡಿಕೊಂಡಿವೆ. ಸಾಮಾನ್ಯವಾಗಿ
ದೆಹಲಿಗೆ ಆಮ್ಲಜನಕ ಬೇಕು ಅಂದರೆ ಅದನ್ನು ಪೂರ್ವ ಭಾರತದಿಂದ ಕಳುಹಿಸಬೇಕು. ಹೀಗಾಗಿ ಈ ವಿಷಯ ದಲ್ಲಿ ಸೂಕ್ಷ್ಮವಾದ ಪ್ಲಾನಿಂಗ್ ಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲೇ ಹೀಗೆ ಆಮ್ಲಜನಕ ತರಿಸಿ ಕೊಳ್ಳಲು ಆಸ್ಪತ್ರೆಗಳು ಸಾಕಷ್ಟು ದಿನ ಮೊದಲು ಸರಿಯಾದ ಪ್ಲಾನ್ ಮಾಡಿಕೊಳ್ಳುವ ಪರಿಸ್ಥಿತಿ ಇರುವಾಗ ಈಗಿನ ಕರೋನಾದಂಥ ಸಾಂಕ್ರಾಮಿಕ ತುರ್ತು ಸ್ಥಿತಿಯಲ್ಲಿ ಕೇಳಬೇಕೇ? ಆಸ್ಪತ್ರೆಗಳು ಹಣ ಉಳಿಸಲು ಹೋಗಿ ಮೊದಲೇ ಆಮ್ಲಜನಕ ತಂದು ದಾಸ್ತಾನು ಮಾಡಿಕೊಳ್ಳಲಿಲ್ಲ. ಹೀಗಾಗಿ ಏಕಾಏಕಿ ಹಾಹಾಕಾರ ಎದ್ದಿತು. ಕಳೆದ ಹತ್ತು ದಿನಗಳ ಗದ್ದಲದಲ್ಲಿ ಯಾರಿಗಾದರೂ ಈ ಮಾಹಿತಿ ಕಿವಿಗೆ ಬಿದ್ದಿದೆಯೇ?
ಆಕ್ಸಿಜನ್ ಕೊರತೆ ಇಲ್ಲ : ಎರಡನೆಯದಾಗಿ, ಆಕ್ಸಿಜನ್ ಕೊರತೆ ಎಂಬುದು ಇಲ್ಲ. ನಮ್ಮ ದೇಶ ನಿತ್ಯ
100000 ಟನ್ ಆಕ್ಸಿಜನ್ ತಯಾರು ಮಾಡುತ್ತದೆ. ಗುಜರಾತ್ನಲ್ಲಿರುವ ಆಕ್ಸಿಜನ್ ಘಟಕಗಳೇ ಇದರಲ್ಲಿ
ಐದನೇ ಒಂದರಷ್ಟು ಆಕ್ಸಿಜನ್ ತಯಾರು ಮಾಡುತ್ತವೆ. ಹೀಗೆ ತಯಾರಿಸಿದ ಆಕ್ಸಿಜನ್ನಲ್ಲಿ ವೈದ್ಯಕೀಯ
ಉದ್ದೇಶಕ್ಕೆ ಬಳಕೆಯಾಗುವ ಆಕ್ಸಿಜನ್ ಪ್ರಮಾಣ ಅತ್ಯಲ್ಪ. ಬಹುಶಃ ಶೇ.1ರಷ್ಟು ಬಳಕೆಯಾಗಬಹುದು. ಈಗಿನ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲೂ ವೈದ್ಯಕೀಯ ಆಮ್ಲಜನಕದ ಬಳಕೆಯ ಪ್ರಮಾಣ ಒಟ್ಟು ಆಮ್ಲಜನಕ ಉತ್ಪಾದನೆಯ ಶೇ.5-6ರಕ್ಕಿಂತ ಹೆಚ್ಚಾಗಿಲ್ಲ.
ಬಹುತೇಕ ಆಕ್ಸಿಜನ್ ಕೈಗಾರಿಕೆಗಳಲ್ಲೇ ಬಳಕೆ ಯಾಗುತ್ತದೆ. ಆಕ್ಸಿಜನ್ ಉತ್ಪಾದನಾ ಘಟಕಗಳು ಸಾಮಾನ್ಯವಾಗಿ ದೂರದ ಪ್ರದೇಶದಲ್ಲಿರುತ್ತವೆ. ದ್ರವ ರೂಪದ ಆಮ್ಲಜನಕವನ್ನು ಸುರಕ್ಷಿತ ಟ್ಯಾಂಕರ್ಗಳ ಮೂಲಕ ಸಾಗಾಟ
ಮಾಡಲಾಗುತ್ತದೆ ಮತ್ತು ಅದರ ಮೂಲಕವೇ ವ್ಯಾಪಾರ ನಡೆಯುತ್ತದೆ. ಒಂದೊಂದು ಟ್ಯಾಂಕರ್ಗೂ ಸುಮಾರು 45 ಲಕ್ಷ ರು. ಬೆಲೆಯಿರುತ್ತದೆ. ವಿಷಾದದ ಸಂಗತಿ ಏನೆಂದರೆ ಆಸ್ಪತ್ರೆಗಳಲ್ಲಿ 300 ರು. ಬೆಲೆಯ
ಆಮ್ಲಜನಕವನ್ನು 10000 ರು. ಬೆಲೆಯ ಸಿಲಿಂಡರ್ನಲ್ಲಿ ಶೇಖರಿಸಲಾಗುತ್ತದೆ.
ದೂರದ ಪ್ರದೇಶದಲ್ಲಿ ಆಗುವ ಉತ್ಪಾದನೆ ಮತ್ತು ಮಾರಾಟದ ಸರಣಿಯಲ್ಲಿರುವ ವಿವಿಧ ಕೊಂಡಿಗಳು, ಟ್ಯಾಂಕರ್ನಲ್ಲಿ ಸಾಗಾಟ, ಸಿಲಿಂಡರ್ನಲ್ಲಿ ಶೇಖರಣೆ ಇವುಗಳಿಂದಾಗಿ ಸಾಮಾನ್ಯ ದಿನಗಳಲ್ಲೇ ವೈದ್ಯಕೀಯ ಆಕ್ಸಿಜನ್ನ ನಿರ್ವಹಣೆ ಎಂಬುದು ದೊಡ್ಡ ತಲೆನೋನ ಕೆಲಸ. ಈಗಿನ ಸಾರ್ವತ್ರಿಕ ಸಾಂಕ್ರಾಮಿಕ ರೋಗದ ಸಮಯದಲ್ಲಂತೂ ಇದರ ಪೂರೈಕೆ ಸರಣಿಯು ತನ್ನ ಮೇಲಿನ ಒತ್ತಡ ತಾಳಿಕೊಳ್ಳಲಾಗದೆ ನಲುಗುತ್ತಿದೆ.
ಅದರಲ್ಲೂ ದೆಹಲಿಯಲ್ಲಿ ಸಮಸ್ಯೆ ಹೆಚ್ಚಾಗಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿವೆ. ಏಕೆಂದರೆ ಅಲ್ಲಿಗೆ ಆಕ್ಸಿಜನ್ ಪೂರೈಕೆಯಾಗುವುದು ಎಷ್ಟೋ ನೂರು ಕಿಲೋ ಮೀಟರ್ ದೂರದಲ್ಲಿರುವ ಆಕ್ಸಿಜನ್ ಉತ್ಪಾದನಾ ಘಟಕಗಳಿಂದ.
ಲಾಭಕೋರರು ಸೋತರು, ಆದರೆ ಬೇರೆಯವರನ್ನು ಬೈದರು: ಕಳೆದ ವರ್ಷ ಕೋವಿಡ್ನ ಮೊದಲ ಅಲೆ ಬಂತು. ಅದು ಮುಗಿದ ಮೇಲೆ ದೆಹಲಿಯ ಒಂದೊಂದು ಆಸ್ಪತ್ರೆಯೂ ತನ್ನದೇ ಆದ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಕೊಳ್ಳ ಬೇಕಿತ್ತು. ‘ದಿ ಪ್ರಿಂಟ್’ ವರದಿಯ ಪ್ರಕಾರ 240 ಬೆಡ್ ಗಳ ಒಂದು ಆಸ್ಪತ್ರೆಯಲ್ಲಿ 40 ಐಸಿಯು ಬೆಡ್ಗಳಿದ್ದರೆ ಸಾಮಾನ್ಯ ದಿನಗಳಲ್ಲಿ ಆ ಆಸ್ಪತ್ರೆ ಒಂದು ತಿಂಗಳಿಗೆ ಸುಮಾರು 5 ಲಕ್ಷ ರು. ಮೌಲ್ಯದ ಆಕ್ಸಿಜನ್ ಬಳಕೆ ಮಾಡುತ್ತದೆ.
ಒಂದು ಪ್ರೆಷರ್ ಸ್ವಿಂಗ್ ಅಬ್ಸಾರ್ಪ್ಷನ್ (ಪಿಎಸ್ಎ) ಆಕ್ಸಿಜನ್ ಘಟಕ ಸ್ಥಾಪಿಸಲು 50 ಲಕ್ಷ ರು. ವೆಚ್ಚವಾಗು ತ್ತದೆ. ಈ ಹಣವನ್ನು 18 ತಿಂಗಳಲ್ಲೇ ಹಿಂಪಡೆಯಬಹುದು. ದೆಹಲಿಯಲ್ಲಿರುವ ಯಾವ ಖಾಸಗಿ ಆಸ್ಪತ್ರೆಗೂ ಇದು ದೊಡ್ಡ ಮೊತ್ತವಲ್ಲ. ಆದರೆ ಯಾವ ಆಸ್ಪತ್ರೆಯೂ ಇದಕ್ಕೆ ಮನಸ್ಸು ಮಾಡಲಿಲ್ಲ.
ಏಕೆಂದರೆ ಇದಕ್ಕೆ ಬೇಕಾದ ಅಮೂಲ್ಯ ಜಾಗವನ್ನು ತ್ಯಾಗ ಮಾಡಲು ಯಾವ ಆಸ್ಪತ್ರೆಯೂ ಸಿದ್ಧರಲಿಲ್ಲ. ಹೀಗಾಗಿ ಹಿಂದಿನ ಮಾದರಿಯಲ್ಲೇ ಸಾವಿರಾರು ಕಿಲೋಮೀಟರ್ ದೂರದಿಂದ ಆಕ್ಸಿಜನ್ ಖರೀದಿಸಿ ತರುವುದಕ್ಕೇ ಶರಣಾದವು. ಆಸ್ಪತ್ರೆಯ ಅಂಗಳದಲ್ಲೇ ಒಂದು ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪಿಸುವ ಬಗ್ಗೆ ಯಾವ ಯೋಚನೆಯನ್ನೂ ಮಾಡಲಿಲ್ಲ. ಆಕ್ಸಿಜನ್ ಪೂರೈಕೆ ಯಲ್ಲಿರುವ ಸಮಸ್ಯೆ ಹಾಗೂ ಭವಿಷ್ಯದಲ್ಲಿ
ಎದುರಾಗಬಹುದಾದ ಅಪಾಯಗಳ ಬಗ್ಗೆ ಕಳೆದ ವರ್ಷವೇ ಕೇರಳದ ತ್ರಿಶೂರ್ನಲ್ಲಿರುವ ಜುಬ್ಲಿ ಮಿಷನ್
ಮೆಡಿಕಲ್ ಕಾಲೇಜ್ ಮತ್ತು ರೀಸರ್ಚ್ ಇನ್ಸ್ಟಿಟ್ಯೂಟ್ನ ಅನಸ್ತೇಯಾ ಹಾಗೂ ಕ್ರಿಟಿಕಲ್ ಕೇರ್ ವಿಭಾಗದ ಚೆರಿಶ್ ಪಾಲ್, ಜಾನ್ ಪಾಲ್ ಹಾಗೂ ಅಖಿಲ್ ಬಾಬು ಎಚ್ಚರಿಕೆ ನೀಡಿದ್ದರು.
‘ಇಂಡಿಯನ್ ಜರ್ನಲ್ ಆಫ್ ರೆಸ್ಪಿರೇಟರಿ ಕೇರ್’ನಲ್ಲಿ ಪ್ರಕಟವಾದ ‘ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ: ಭಾರತದ ಆಸ್ಪತ್ರೆಗಳಲ್ಲಿ ವಿಪತ್ತುಗಳಿಗೆ ಯಾವ ಪ್ರಮಾಣದಲ್ಲಿ ಸನ್ನದ್ಧ ಸ್ಥಿತಿ ಇದೆ’ ಎಂಬ ಲೇಖನದಲ್ಲಿ ಮೂವರು ತಜ್ಞರು ಈ ಬಗ್ಗೆ ಮಾತನಾಡಿದ್ದರು. ಹೆಚ್ಚಿನ ಆಸ್ಪತ್ರೆಗಳು ಒಂದೇ ಮೂಲದಿಂದ ಒಂದೇ ಪೈಪ್ಲೈನ್ ಮೂಲಕ ಆಕ್ಸಿಜನ್ ಪಡೆಯುವ ವ್ಯವಸ್ಥೆ ಮಾಡಿಕೊಂಡಿರುತ್ತವೆ. ವಿಪತ್ತು ಎದುರಾದ
ಸಂದರ್ಭದಲ್ಲಿ ಇದರಿಂದ ಸಮಸ್ಯೆಗಳನ್ನು ಆಹ್ವಾನಿಸಿದಂತಾಗುತ್ತದೆ.
ಹೀಗಾಗಿ ಈ ಆಸ್ಪತ್ರೆಗಳು ಬೇರೆ ಬೇರೆ ಮೂಲಗಳಿಂದ ಆಕ್ಸಿಜನ್ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆಸ್ಪತ್ರೆ ಎಲ್ಲಿದೆ, ಅಲ್ಲಿಗೆ ಎಷ್ಟು ಆಕ್ಸಿಜನ್ ಬೇಕು, ಲಿಕ್ವಿಡ್ ಆಕ್ಸಿಜನ್ ಘಟಕ ಎಲ್ಲಿದೆ, ಅಲ್ಲಿಂದ ಇಲ್ಲಿಗೆ ಆಕ್ಸಿಜನ್ ತರಲು ಎಷ್ಟು ಸಮಯ ಬೇಕು ಎಂಬುದರ ಆಧಾರದ ಮೇಲೆ ಬೇರೆ ಬೇರೆ ಮೂಲಗಳನ್ನು ಗುರುತಿಸಿಕೊಳ್ಳಬೇಕು ಎಂದು ಆ ಲೇಖನದಲ್ಲಿ ಹೇಳಿದ್ದರು.
ದೆಹಲಿಯ ಆಸ್ಪತ್ರೆಗಳಿಗೆ ಈ ಎಚ್ಚರಿಕೆಯನ್ನು ಅನ್ವಯಿಸಿ ನೋಡಿ. ಅವು ಖುದ್ದಾಗಿ ತಾವೇ ಆಕ್ಸಿಜನ್ ತಯಾರು ಮಾಡಬಹುದಿತ್ತು, ಆದರೆ ಮಾಡಿಕೊಳ್ಳಲಿಲ್ಲ. ಅದು ಹೋಗಲಿ, ಕರೋನಾ ಇನ್ನೂ ಹೋಗಿಲ್ಲ, ಮುಂದೆ
ಹೆಚ್ಚಾಗಬಹುದು ಎಂದು ಯೋಚಿಸಿ ಆಕ್ಸಿಜನ್ ಪೂರೈಕೆಯನ್ನು ಬೇರೆ ಬೇರೆ ಮೂಲಗಳಿಂದ ಮಾಡಿಸಿ ಕೊಳ್ಳುವ ಬಗ್ಗೆಯೂ ಯೋಚಿಸಲಿಲ್ಲ. ಯಾವಾಗ ತಾವು ನಂಬಿಕೊಂಡಿದ್ದ ಏಕೈಕ ಆಮ್ಲಜನಕ ಪೂರೈಕೆಯ ದಾರಿ ಬಂದ್ ಆಯಿತೋ ಆಗ ಜನರಿಗೆ ಸಂವಿಧಾನದಲ್ಲಿರುವ ಬದುಕುವ ಹಕ್ಕಿನ ಬಗ್ಗೆ ಮಾತನಾಡ ತೊಡಗಿದವು. ನಂತರ ಆಕ್ಸಿಜನ್ ನೀಡುವಂತೆ ಸರಕಾರಕ್ಕೆ ಸೂಚಿಸಬೇಕೆಂದು ಕೋರಿ ಕೋರ್ಟ್ಗೆ ಹೋದವು!
ಅದಕ್ಕೆ ಸರಿಯಾಗಿ ಕೋರ್ಟ್ ಕೂಡ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ ದೂಷಣೆಯನ್ನು ಸರಕಾರದ ತಲೆಗೆ ಕಟ್ಟಿತು. ಅದು ಕೋವಿಡ್ ನಿರ್ವಹಣೆಯ ಕಲ್ಪನೆಯನ್ನೇ ಬದಲಾಯಿಸಿಬಿಟ್ಟಿತು. ಎಲ್ಲರೂ ಸರಕಾರಕ್ಕೆ ಬೈಯತೊಡಗಿದರು. ಕಳೆದ ಕೆಲವೇ ದಿನಗಳಲ್ಲಿ ಆದ ಈ ಬದಲಾವಣೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದೆಯೇ?
೧೨೯ ಆಕ್ಸಿಜನ್ ಘಟಕ ಸ್ಥಾಪನೆಯಾಗುವುದನ್ನು ಆಸ್ಪತ್ರೆಗಳೇ ತಪ್ಪಿಸಿದವು: ಸರಿಯಾದ ಹಿನ್ನೆಲೆ ಗೊತ್ತಿಲ್ಲದೆ, ವಾಸ್ತವಾಂಶ ಹಾಗೂ ಅಂಕಿ ಅಂಶಗಳು ಗೊತ್ತಿಲ್ಲದೆ ಎಲ್ಲದಕ್ಕೂ ಸರಕಾರವೇ ಕಾರಣ ಎಂದು ದೂಷಿಸುವುದು ಸುಲಭ. ಆದರೆ ಅದು ಸರಿಯಲ್ಲ. ಇಂತಹ ಸನ್ನಿವೇಶ ಎದುರಾಗಬಹುದು ಎಂದು ನಿರೀಕ್ಷಿಸಿಯೇ ಮೋದಿ ಸರಕಾರ 162 ಪಿಎಸ್ಎ ಪ್ಲಾಂಟ್ಗಳನ್ನು ಕಳೆದ ಅಕ್ಟೋಬರ್ನಲ್ಲೇ 200 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಆದೇಶ ಹೊರಡಿಸಿತ್ತು.
ಈ ಘಟಕಗಳನ್ನು ದೇಶಾದ್ಯಂತ ಇರುವ ಸರಕಾರಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಿತ್ತು. ಈ ಘಟಕಗಳು ಒಂದು ನಿಮಿಷಕ್ಕೆ 80500 ಲೀಟರ್ ಮೆಡಿಕಲ್ ಆಕ್ಸಿಜನ್ ತಯಾರಿಸುವ ಸಾಮರ್ಥ್ಯ ಹೊಂದಿದ್ದವು. ಅಂದರೆ ಪ್ರತಿ ಘಟಕದಿಂದ ಪ್ರತಿ ದಿನ ಸುಮಾರು 1 ಟನ್ ಆಕ್ಸಿಜನ್ ತಯಾರಾಗುತ್ತಿತ್ತು. ಆದರೆ, ಆರ್ಡರ್ ಮಾಡಿದ 162 ಘಟಕಗಳಲ್ಲಿ ಕೇವಲ 33 ಘಟಕಗಳು ಮಾತ್ರ ಸರಕಾರಿ ಆಸ್ಪತ್ರೆಗಳಲ್ಲಿ ಸ್ಥಾಪನೆಯಾದವು.
ಏಕೆ? ಖುದ್ದು ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳೇಕೇಂದ್ರದ ಈ ಯೋಜನೆಗೆ ಅಡ್ಡಗಾಲು ಹಾಕಿದವು. ‘ದಿ ಪ್ರಿಂಟ್’ ವರದಿ ಪ್ರಕಾರ, ಆಕ್ಸಿಜನ್ ಘಟಕ ಸ್ಥಾಪನೆ ಮಾಡುವ ಗುತ್ತಿಗೆ ಪಡೆದವರು ಸರಕಾರಿ ಆಸ್ಪತ್ರೆಗಳಿಗೆ ಬಂದಾಗ ಅವು ನಮ್ಮಲ್ಲಿ ಜಾಗವಿಲ್ಲ ಎಂಬ ನೆಪ ಹೇಳಿದವು.
ನಿಜವಾದ ಕಾರಣ, ಹೊರಗಿನಿಂದ ಆಕ್ಸಿಜನ್ ತರಿಸುವುದ ರಿಂದ ಅಲ್ಲಿನವರಿಗೆ ಲಾಭವಿತ್ತು. ಹೇಗೆ ಸರಕಾರಿ
ಆಸ್ಪತ್ರೆಗಳೇ ಕೇಂದ್ರ ಸರಕಾರದ ಆಕ್ಸಿಜನ್ ಪೂರೈಕೆ ಯತ್ನಕ್ಕೆ ಕಲ್ಲು ಹಾಕಿದವು ಎಂಬುದು ಇದರಿಂದ ತಿಳಿಯುತ್ತದೆ. ಈಗ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿ ಬಡಿದುಕೊಳ್ಳು ತ್ತಿರುವವರಿಗೆ ಇದು ಗೊತ್ತಿದೆಯೇ?
ಇದು ಹಳೆಯ ಕೋವಿಡ್ ಅಲ್ಲ: ಇನ್ನೊಂದು ಪ್ರಮುಖ ಸಂಗತಿ ಏನೆಂದರೆ, ಈಗ ಎದುರಾಗಿರುವ
ಕೋವಿಡ್ ಸುನಾಮಿ ಈ ಹಿಂದಿನ ಹಳೆಯ ಅಲೆಯ ಮರುಕಳಿಕೆ ಅಲ್ಲ. ಇದು ಹೊಚ್ಚಹೊಸ, ಅನಿರೀಕ್ಷಿತ ನರಕ. ಮಾರ್ಚ್ ಮೊದಲ ವಾರದಲ್ಲಿ ಏರಿಕೆಯಾಗತೊಡಗಿದ ಕೋವಿಡ್ ಪ್ರಕರಣಗಳು ಆ ತಿಂಗಳು ಶರವೇಗದಲ್ಲಿ ಬೆಳವಣಿಗೆಯಾಗಿ ಏಪ್ರಿಲ್ನ ಎರಡು ವಾರಗಳಲ್ಲಿ ಸುನಾಮಿಯ ಸ್ವರೂಪ ಪಡೆದವು. ಕೇವಲ ಏಳು ವಾರಳಲ್ಲಿ ಬಿಹಾರದಲ್ಲಿ ಕೇಸುಗಳ ಸಂಖ್ಯೆ 522 ಪಟ್ಟು, ಉತ್ತರ ಪ್ರದೇಶದಲ್ಲಿ 399 ಪಟ್ಟು, ಆಂಧ್ರ ಪ್ರದೇಶದಲ್ಲಿ 186 ಪಟ್ಟು, ದೆಹಲಿ ಮತ್ತು ಜಾರ್ಖಂಡ್ನಲ್ಲಿ 150 ಪಟ್ಟು, ಪಶ್ಚಿಮ ಬಂಗಾಳದಲ್ಲಿ 142 ಪಟ್ಟು ಹಾಗೂ ರಾಜಸ್ಥಾನದಲ್ಲಿ 123 ಪಟ್ಟು ಏರಿಕೆಯಾಗಿತ್ತು.
ಇದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದು ಅವಳಿ ರೂಪಾಂತರಿ ಹೊಸ ಕೊರೋನಾ ವೈರಸ್ನ ಪರಿಣಾಮ. ಯಾವ ತಜ್ಞರೂ ಇದನ್ನು ಊಹಿಸಿರಲಿಲ್ಲ. ಹೀಗಾಗಿ ಆಸ್ಪತ್ರೆಯ ಐಸಿಯು ಗಳಿಗೆ ರೋಗಿಗಳ ಸಾಗರವೇ ಹರಿಯಿತು.
ರಾಷ್ಟ್ರೀಯ ಬದ್ಧತೆ ಬೇಕು: ಸುನಾಮಿ ರೀತಿಯ ಈ ಅಲೆಯನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯಗಳ
ನಡುವೆ ಹೊಂದಾಣಿಕೆ ಬೇಕೇ ಹೊರತು ಯಾರನ್ನೂ ದೂಷಿಸಿ ಅಥವಾ ದಾರಿತಪ್ಪಿಸಿ ಪ್ರಯೋಜನವಿಲ್ಲ.
ಕೋವಿಡ್ನಂಥ ರಾಷ್ಟ್ರೀಯ ವಿಪತ್ತಿನಲ್ಲೂ ನಾವು ಒಗ್ಗಟ್ಟು ತೋರಿಸುತ್ತಿಲ್ಲ ಎಂಬುದು ಕಳವಳಕಾರಿ ಸಂಗತಿ. ತುರ್ತು ಬಳಕೆಗೆಂದು ಕೋವಾಕ್ಸಿನ್ ಲಸಿಕೆಗೆ ಸರಕಾರ ಅನುಮತಿ ನೀಡಿದಾಗ ವಿರೋಧ ಪಕ್ಷಗಳು ಏನು ಪ್ರಚಾರ ಮಾಡಿದವು? ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲಾ, ಶಶಿ ತರೂರ್, ಮನೀಶ್ ತಿವಾರಿ ಹಾಗೂ ಜೈರಾಂ ರಮೇಶ್ರಂಥವರು ಕೋವಾಕ್ಸಿನ್ ವಿರುದ್ಧ ಗಂಟಲು ಹರಿಯುವಂತೆ ಅರಚಿದರು.
ಆನಂದ್ ಶರ್ಮಾ ಈ ಲಸಿಕೆ ಅಪಾಯಕಾರಿ ಅಂದರು. ರಾಜಸ್ಥಾನವನ್ನು ಹೊರತುಪಡಿಸಿ, ವಿರೋಧ ಪಕ್ಷಗಳ ಆಳ್ವಿಕೆಯಿರುವ ಪಂಜಾಬ್, ಛತ್ತೀಸ್ಗಢ, ಕೇರಳ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡದ ರಾಜ್ಯ ಸರಕಾರ ಗಳು ಜನರ ಮನಸ್ಸಿನಲ್ಲಿ ಲಸಿಕೆಯ ಬಗ್ಗೆ ಅನುಮಾನ ಬಿತ್ತಿದವು.
ಪರಿಣಾಮ, ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಜನವರಿಯಲ್ಲಿ ಕೇವಲ ಶೇ.33ರಷ್ಟು ಜನ
ಲಸಿಕೆ ಪಡೆಯಲು ಸಿದ್ಧರಿದ್ದರು. ಶೇ.40ರಷ್ಟು ಜನರು ಕಾಯುವುದಾಗಿ ಹೇಳಿದ್ದರು. ಶೇ.16ರಷ್ಟು ಜನರು ಲಸಿಕೆ ಪಡೆಯುವುದೇ ಇಲ್ಲ ಎಂದಿದ್ದರು. ಮಾರ್ಚ್ನಲ್ಲಿ ಲಸಿಕೆ ಪಡೆಯಲು ಬಯಸುವವರ ಸಂಖ್ಯೆ ಶೇ.57ಕ್ಕೆ
ಏರಿಕೆಯಾಗಿತ್ತು. ಕಾಯುವವರ ಹಾಗೂ ಬೇಡ ಅನ್ನು ವವರ ಸಂಖ್ಯೆ ಶೇ.6ಕ್ಕೆ ಇಳಿದಿತ್ತು. ಅಂದರೆ ಮೂರು
ಅಮೂಲ್ಯ ತಿಂಗಳು ವ್ಯರ್ಥವಾಗಿದ್ದವು.
ದೇಶದಲ್ಲಿ ದಿನಕ್ಕೆ 30 ಲಕ್ಷದಂತೆ ಲಸಿಕೆ ನೀಡಿದ್ದರೆ ಒಂದು ತಿಂಗಳಿಗೆ 9 ಕೋಟಿ ಲಸಿಕೆ ನೀಡಬಹುದಿತ್ತು. ಆದರೆ, ಮಾರ್ಚ್ ಕೊನೆಯೊಳಗೆ ನೀಡಿದ ಒಟ್ಟು ಮೊದಲ ಡೋಸ್ ಲಸಿಕೆ ಬರೀ 10.8 ಕೋಟಿ. ಎರಡೂ ಡೋಸ್ ಪಡೆದವರ ಸಂಖ್ಯೆ 1.6 ಕೋಟಿ. ಜನರ ಮನಸ್ಸಿನಲ್ಲಿ ಅನುಮಾನ ಇಲ್ಲದಿದ್ದರೆ ಇದರ ದುಪ್ಪಟ್ಟು ಪ್ರಮಾಣದಲ್ಲಿ ಲಸಿಕೆ ಪಡೆಯುತ್ತಿದ್ದರು.
ಒಂದು ದೇಶವಾಗಿ ನಾವೇ ನಮ್ಮ ರಕ್ಷಣೆಯನ್ನು ಕಳೆದುಕೊಂಡೆವು. ಗೂಗಲ್ನ ಮೊಬಿಲಿಟಿ ಡೇಟಾ ಪ್ರಕಾರ ಈಗ ಕೋವಿಡ್ ಹೆಚ್ಚುತ್ತಿದ್ದರೂ ಕೂಡ ನಾವು ಬಹುತೇಕ ಸಾಮಾನ್ಯ ಜೀವನಕ್ಕೇ ಮರಳಿಬಿಟ್ಟಿದ್ದೇವೆ.
ಮನರಂಜನಾ ಕ್ಷೇತ್ರದಲ್ಲಿ ಶೇ.78, ಪಾರ್ಕ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶೇ.87, ಸಾರಿಗೆಯಲ್ಲಿ ಶೇ.92,
ಶಾಪಿಂಗ್ನಲ್ಲಿ ಶೇ.120ರಷ್ಟು ಸಹಜ ಸ್ಥಿತಿ ಮರಳಿದೆ.
ಇಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ಗಳು ಬಹುತೇಕ ಕಾಣೆಯಾಗಿವೆ. ಈಗ ಒಗ್ಗಟ್ಟಿನಿಂದ ದೊಡ್ಡ ಅನಾಹುತವನ್ನು ಎದುರಿಸುವ ಸವಾಲು ನಮ್ಮ ಮುಂದಿದೆ. ಆ ಶಕ್ತಿ ನಮಗಿದೆಯೇ?