Friday, 13th December 2024

ನನಗೇನು ಗೊತ್ತಿದೆ? – ಮಿಶೆಲ್‌ ಡು ಮಾಂಟೇನಿಯ

ಹಿಂದಿರುಗಿ ನೋಡಿದಾಗ

ಮಾಂಟೆನೇರ್ ಬದುಕಿದ್ದ ಕಾಲದಲ್ಲಿ ಕ್ಯಾಥೋಲಿಕ್ ಮತ್ತು ಪ್ರಾಟಿಸ್ಟಾಂಟ್ ಅನುಯಾಯಿಗಳ ನಡುವೆ ತೀವ್ರ ಘರ್ಷಣೆ ನಡೆಯುತ್ತಿತ್ತು. ಧರ್ಮದ ಹೆಸರಿನಲ್ಲಿ ಯುದ್ಧಗಳು ನಡೆಯುತ್ತಿದ್ದವು. ಧರ್ಮದ ಹೆಸರಿನಲ್ಲಿ ಮಾರಣಹೋಮ ನಡೆಯು ತ್ತಿತ್ತು.

ಪಾಶ್ಚಾತ್ಯ ಜಗತ್ತಿನ ಬೌದ್ಧಿಕತೆಯ ಎಲ್ಲ ಆಯಾಮಗಳು ಗ್ರೀಕ್ ಮತ್ತು ರೋಮನ್ನರ ಅವಧಿಯಲ್ಲಿ ಉದಯಿಸಿದವು. ಕ್ರಿ.ಶ. ೪೭೬ರಲ್ಲಿ ರೋಮ್ ಸಾಮ್ರಾಜ್ಯದ ಸರ್ವ ಪತನ ವಾಯಿತು. ಯೂರೋಪಿನಲ್ಲಿ ಕ್ರೈಸ್ತ ಧರ್ಮ ಬಲವಾಗಿ ಬೇರೂರಿತು. ಚರ್ಚ್ ಬೌದ್ಧಿಕತೆ ಯನ್ನು ಮೆಟ್ಟಿನಿಂತ ಕಾರಣ, ಯೂರೋಪಿನಲ್ಲಿ ಕಗ್ಗತ್ತಲ ಯುಗ ಆರಂಭವಾಯಿತು. ಈ ಅಂಧಕಾರವು ಕಳೆದು ಮತ್ತೆ ನವಯುಗವು ಆರಂಭವಾದ ಕಾಲವನ್ನು, ಎಲ್ಲ ಜ್ಞಾನಕ್ಷೇತ್ರ ಗಳಲ್ಲಿ ಬೌದ್ಧಿಕತೆಯು ಮೊಳಕೆಯೊಡೆದು ಬೃಹತ್ತಾಗಿ ಬೆಳೆದು, ಸಮಕಾಲೀನ ಸಮಾಜಕ್ಕೆ ಜನ್ಮ ನೀಡಿದ ದಿಟ್ಟ ಕಾಲವನ್ನು ಪುನರುತ್ಥಾನ ಅಥವಾ ರಿನೇಸಾನ್ಸ್ ಎಂದು ಕರೆಯುವು ದುಂಟು.

ಬೌದ್ಧಿಕತೆಯು ಯೂರೋಪಿನ ಎಲ್ಲ ದೇಶಗಳಲ್ಲಿ ಆರಂಭವಾದಂತೆ, ಫ್ರಾನ್ಸ್‌ನಲ್ಲೂ ಆರಂಭವಾಯಿತು. ೧೬ನೆಯ ಶತಮಾನ ದಲ್ಲಿ ಜನಿಸಿದ ದೈತ್ಯ ಪ್ರತಿಭೆಗಳಲ್ಲಿ ಒಬ್ಬ ಮಿಶೆಲ್ ಡು ಮಾಂಟೇನಿಯ (೧೫೩೩-೧೫೯೨). ಈತನು ಪ್ರಬಂಧಕಾರನಾಗಿ ಹಾಗೂ ದಾರ್ಶನಿಕ ನಾಗಿ ಮುಂದಿನ ತಲೆಮಾರುಗಳ ಮೇಲೆ ಅಪಾರ ಪ್ರಭಾವ ಬೀರಿದ. ಈತ ದಾರ್ಶನಿಕ ಎಂದು ಹೆಸರಾಗಿದ್ದರೂ, ಯಾವುದೇ ದಾರ್ಶನಿಕ ಗ್ರಂಥಗಳನ್ನು ಬರೆಯಲಿಲ್ಲ.

ಬದಲಿಗೆ ಪ್ರಬಂಧವನ್ನು ಬರೆದ. ಇಂದು ನಾವು ಯಾವ ಸಾಹಿತ್ಯ ಪ್ರಕಾರವನ್ನು ಪ್ರಬಂಧ ಎಂದು ಕರೆಯುತ್ತೇವೆಯೋ, ಅಂತಹ ಪ್ರಬಂಧಗಳನ್ನು ಮೊದಲ ಬಾರಿಗೆ ರಚಿಸಿದವನೇ ಮಾಂಟೇನಿಯ. ಹಾಗಾಗಿ ಈತನನ್ನು ಪ್ರಬಂಧ ಸಾಹಿತ್ಯದ ಅಧ್ವರ್ಯು ಎಂದು ಕರೆದರೆ ತಪ್ಪಾಗಲಾರದು. ಈತನ ಪ್ರಬಂಧಗಳು ಮುಂದಿನ ದಿನಗಳಲ್ಲಿ ಫ್ರಾನ್ಸಿಸ್ ಬೇಕನ್, ಆಲ್ಬರ್ಟ್ ಕಾಮು, ಚಾರ್ಲ್ಸ್ ಡರ್ವಿನ್, ರೆನೆ ಡೆಸ್ಕಾರ್ಟೆ, ಎಮರ್ಸನ್, ಸಿಗ್ಮಂಡ್ ಫ್ರಾಯ್ಡ್, ಕಾರ್ಲ್ ಮಾರ್ಕ್ಸ್, ಅಲೆಗ್ಸಾಂಡರ್ ಪುಷ್ಕಿನ್, ಜೀನ್ ಜಾಕ್ವೆಸ್ ರೂಸೊ, ವಿಲಿಯಂ ಶೇಕ್ಸ್‌ಪಿಯರ್, ಮಾರ್ಕ್‌ಟ್ವೈನ್, ವರ್ಜೀನಿಯ ವೂಲ್, ವೋಲ್ಟೇರ್ ಮುಂತಾದ ಪ್ರತಿಭಾವಂತರ ಮೇಲೆ ಪ್ರಭಾವ ಬೀರಿತು ಎಂದರೆ, ಮಾಂಟೇನಿಯ ಬರಹಗಳು ಯೂರೋಪಿನ ಬೌದ್ಧಿಕ ಲೋಕದ ಮೇಲೆ ಎಂತಹ ಪ್ರಭಾವ ಬೀರಿರಬಹುದು ಎನ್ನುವುದನ್ನು ನಾವು ಊಹಿಸಬಹುದು.

ಒಬ್ಬರು ಮಾಂಟೇನಿಯನನ್ನು ದಿ ಫ್ರೆಂಚ್ ಥೇಲ್ಸ್ ಎಂದು ಕರೆದ. (ಥೇಲ್ಸ್ ಗ್ರೀಕ್ ಸಂಸ್ಕೃತಿಯ ಬಹು ದೊಡ್ಡ, ಸಾಕ್ರಟಿಸ್ ಪೂರ್ವ ಯುಗದ ಮಹಾನ್ ಮೇಧಾವಿ) ಮತ್ತೊಬ್ಬರು ಮಾಂಟೇನಿಯನನ್ನು ‘ದಿ ಫ್ರೆಂಚ್ ಸಾಕ್ರಟಿಸ್’ ಎಂದು ಕರೆದರು (ಸಾಕ್ರಟಿಸ್
ಗ್ರೀಕ್ ಸಾಮ್ರಾಜ್ಯದ ಮಹಾನ್ ಪ್ರತಿಭಾಶಾಲಿ. ಮನುಕುಲವು ಕಂಡ ಮಹಾನ್ ಮೇಧಾವಿಗಳಲ್ಲಿ ಒಬ್ಬ) ಹಾಗಾಗಿ ಮಾಂಟೆನೇರ್ ವೈದ್ಯನೂ ಅಲ್ಲ. ಆದರೂ ಮನುಷ್ಯನಿಗೆ ಮನಸ್ಸಿಗೆ ಸಂಬಂಧಿಸಿದ ಈತನ ಪ್ರಬಂಧಗಳು, ಮನೋವಿಜ್ಞಾನದ ಬೆಳವಣಿಗೆಯಲ್ಲಿ
ಪ್ರಮುಖ ಪಾತ್ರ ವಹಿಸಿದವು. ಹಾಗಾಗಿ ಇಂದಿಗೂ ಮನೋ ವಿಜ್ಞಾನಿಗಳು ಆತನನ್ನು ಸ್ಮರಿಸುವುದುಂಟು.

ಮಿಶೆಲ್ ಎಕ್ಯುಮ್ ಡು ಮಾಂಟೇನಿಯ ಫ್ರಾನ್ಸಿನ ಬೋರ್ಡೋ ಪ್ರಾಂತದ ಷಾಟು ಮಾಂಟೇನ್ ಎಂಬ ಹಳ್ಳಿಯಲ್ಲಿ ಹುಟ್ಟಿದ. ತಂದೆ ಪಿಯರಿ ಎಕ್ಯುಮ್. ಫ್ರಾನ್ಸ್ ದೇಶದ ಅರಸ ಮೊದಲನೆಯ ಕಿಂಗ್ ಫ್ರಾನ್ಸಿಸ್ ಸೈನ್ಯದಲ್ಲಿ ಅಧಿಕಾರಿ ಹಾಗೂ ಶ್ರೀಮಂತ ಕುಲೀನನಾಗಿದ್ದ. ತಾಯಿ ಆಂಟೋಯ್ನೆಟ್ ಡು ಲೋಪಸ್ ವಿಲಿನೋವ ಶ್ರೀಮಂತ ಬೂರ್ಜ್ವಾ ಕುಟುಂಬಕ್ಕೆ ಸೇರಿದವಳಾಗಿದ್ದಳು. ಮಾಂಟೇನ್ ತನ್ನ ಬರಹಗಳಲ್ಲಿ ತಂದೆಯನ್ನು ಎರಡು ಕಡೆ ಸ್ಮರಿಸಿರುವುದುಂಟು. ಆದರೆ ತಾಯಿಯ ಪ್ರಸ್ತಾಪವನ್ನು ಎಲ್ಲೂ ಮಾಡಿಲ್ಲ. ಈ ದಂಪತಿಗೆ ಈತ ಹಿರಿಯ ಮಗ. ಏಳು ಜನ ಕಿರಿಯ ಸೋದರರು.

ಮಾಂಟೇನ್ ಸೋದರರಲ್ಲಿ ಮೂವರು ಪ್ರಾಟಿಸ್ಟಾಂಟ್ ಆಗಿ ಪರಿವರ್ತಿತರಾದರೂ ಸಹ, ಮಾಂಟೇನ್ ಮಾತ್ರ ತನ್ನ ಜೀವಮಾನ ಪೂರ್ಣ ರೋಮನ್ ಕ್ಯಾಥೋಲಿಕ್ ಆಗಿ ಉಳಿದ. ಎಕ್ಯುಮ್, ಶೈಶವದಲ್ಲಿಯೇ ಮಾಂಟೇನ್‌ನನ್ನು ಒಂದು ರೈತ ಕುಟುಂಬದಲ್ಲಿ ಬೆಳೆಯಲು ಬಿಟ್ಟ. ಬಡತನ ಎಂದರೆ ಏನು, ಅವರಿಗೆ ತಮ್ಮಂತಹ ಶ್ರೀಮಂತರು ಹೇಗೆ ನೆರವಾಗಬಹುದು ಎನ್ನುವ ಪರಿಕಲ್ಪನೆಯು ಮಗನಿಗೆ ಬರಲೆಂದು ಅವನ ಆಶಯವಾಗಿತ್ತು. ಅಂದು ಜನಸಾಮಾನ್ಯರ ಭಾಷೆಯು -ಂಚ್ ಆಗಿದ್ದರೆ, ಪಂಡಿತರ ಭಾಷೆ ಲ್ಯಾಟಿನ್ ಆಗಿತ್ತು. ಹಾಗಾಗಿ ಮಗನನ್ನು ಲ್ಯಾಟಿನ್ ಭಾಷೆಯಲ್ಲಿ ಪ್ರತಿಭಾವಂತನನ್ನು ಮಾಡಲು, ಮನೆಯಲ್ಲಿ ಪ್ರತಿಯೊಬ್ಬರೂ ಲ್ಯಾಟಿನ್ ಭಾಷೆಯಲ್ಲಿಯೇ ಮಾತನಾಡ ಬೇಕೆಂದು ಅಣತಿಯನ್ನು ನೀಡಿದ್ದ.

ಮನೆಯಲ್ಲಿ ಕೆಲಸ ಮಾಡಲು ಆಳುಗಳನ್ನು ಆರಿಸುವಾಗ, ಅವರು ಲ್ಯಾಟಿನ್ ಭಾಷೆಯನ್ನು ಮಾತನಾಡಬಲ್ಲರು ಎನ್ನುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದ. ಹೀಗೆ ಆರು ವರ್ಷಗಳವರೆಗೆ ಕೇವಲ ಲ್ಯಾಟಿನ್ ಭಾಷೆಯನ್ನು ಕಲಿತ ಮಾಂಟೇನ್ ಆನಂತರವಷ್ಟೇ ಫ್ರೆಂಚ್ ಭಾಷೆಯ ಪರಿಚಯವನ್ನು ಮಾಡಿಕೊಳ್ಳಲಾರಂಭಿಸಿದ. ಮಾಂಟೆನೇರ್‌ನ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ತಿಳಿದಿಲ್ಲ. ಬಹುಶಃ ಈತನು ಕಾನೂನನ್ನು ಅಭ್ಯಾಸ ಮಾಡಿರಬೇಕು.

ತನ್ನ ೨೦ರ ವಯಸ್ಸಿನಲ್ಲಿಯೇ ಇವನು ಬೋರ್ಡೋ ಪ್ರಾಂತದ ನ್ಯಾಯಾಧೀಶನಾಗಿ ಆಯ್ಕೆಯಾದ. ಅಲ್ಲಿ ನ್ಯಾಯಾಧೀಶನು, ಕವಿಯು, ಲೇಖಕನು ಆಗಿದ್ದ ಈಟಿಯೆನ್ನ ಡಿ ಲ ಬೋಯಿಸಿ (೧೫೩೦-೧೫೬೩) ಜತೆ ಅತ್ಯಂತ ನಿಕಟ ಗೆಳೆತನವನ್ನು ಬೆಳೆಸಿಕೊಂಡ. ಈ ಗೆಳೆತನವು ಯೂರೋಪಿನ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ. ಮಾಂಟೆನೇರ್ ತನ್ನ ಮನಸ್ಸಿನ ಅಷ್ಟೂ ಭಾವನೆಗಳನ್ನು
ಮುಕ್ತವಾಗಿ ಬೋಯಿಸಿಯ ಜತೆಯಲ್ಲಿ ಹಂಚಿಕೊಳ್ಳುತ್ತಿದ್ದ. ಆದರೆ ಬೋಯಿಸಿ ತನ್ನ ೩೨ನೆಯ ವಯಸ್ಸಿನಲ್ಲಿ (೧೫೬೩) ಹಠಾತ್ತನೆ ಮರಣಿಸಿದ. ಅದು ಮಾಂಟೆನೇರ್ ಮೇಲೆ ಅತೀವ ಪರಿಣಾಮ ಬೀರಿತು.

ಈಗ ಮಾಂಟೆನೇರ್‌ಗೆ ತನ್ನ ಆತ್ಮನಿವೇದನೆ ಮಾಡಿಕೊಳ್ಳಲು ಯಾರೂ ಇರಲಿಲ್ಲ. ಆತ ಒಂದು ರೀತಿಯಲ್ಲಿ ಅಂತರ್ಮುಖಿಯಾದ. ಮಾಂಟೆನೇರ್ ಮುಂದೆ ಹೌಸ್ವಾ ದೆ ಲ ಚಾಸೇನ್ ಎನ್ನುವವಳನ್ನು ಮದುವೆಯಾದ. ಅವರಿಗೆ ಆರು ಹೆಣ್ಣು ಮಕ್ಕಳು ಹುಟ್ಟಿದವು. ಒಂದು ಮಗುವು ಮಾತ್ರ ಬದುಕುಳಿದು ಉಳಿದ ಮಕ್ಕಳೆಲ್ಲ ಶೈಶವದಲ್ಲಿಯೇ ಮರಣಿಸಿದವು. ಬಹುಶಃ ಆತನ ದಾಂಪತ್ಯ ಬದುಕು ಹೆಚ್ಚು ಏರಿಳಿತಗಳಿಲ್ಲದೆ ನಡೆಯಿತೆಂದು ಕಾಣುತ್ತದೆ.

ಮಾಂಟೆನೇರ್ ತನ್ನ ೩೮ನೆಯ ವಯಸ್ಸಿನಲ್ಲಿ ತನ್ನ ನ್ಯಾಯಾಧೀಶ ವೃತ್ತಿಯಿಂದ ನಿವೃತ್ತಿ ಪಡೆದ. ತಾನು ಹುಟ್ಟಿದ ಊರಿಗೆ ಮರಳಿದ. ಷಾಟು ಮಾಂಟೇನ್‌ನಲ್ಲಿ ಒಂದು ಮನೆ ಕಟ್ಟಿಸಿದ. ಸಮಕಾಲೀನ ಜಗತ್ತಿನ ಅತ್ಯಂತ ಪ್ರಮುಖ ೧೫೦೦ ಗ್ರಂಥಗಳನ್ನು ತರಿಸಿ ಮನೆಯಲ್ಲಿ ಜೋಡಿಸಿದ. ಎಲ್ಲ ಸಾಮಾಜಿಕ ಸಂಪರ್ಕಗಳಿಂದ ದೂರವಾದ. ಹತ್ತು ವರ್ಷಗಳ ಸುದೀರ್ಘ ಕಾಲದವರೆಗೆ
ತನ್ನನ್ನು ತಾನು ಸಂಪೂರ್ಣವಾಗಿ ಆಳವಾದ ಅಧ್ಯಯನಗಳಲ್ಲಿ ತೊಡಗಿಸಿಕೊಂಡ. ಬೋಯಿಸಿ ಮರಣದಿಂದ ಅವನ ಭಾವನೆಗಳೆಲ್ಲ ಅವನಲ್ಲೇ ಹೆಪ್ಪುಗಟ್ಟಿದ್ದವು. ಹಾಗಾಗಿ ಆ ಭಾವನೆಗಳೆಲ್ಲ ಬರಹದ ರೂಪದಲ್ಲಿ ಪ್ರಕಟವಾಗಲಾರಂಭಿಸಿದವು.

ಯೂರೋಪಿನಲ್ಲಿ ಅದುವರೆಗೂ ಪ್ರಕಟವಾಗಿದ್ದ ಪುಸ್ತಕಗಳೆಲ್ಲ ಧರ್ಮ, ದರ್ಶನ, ಕಾನೂನು, ಸಾಹಿತ್ಯ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಿದ್ದವು. ಆದರೆ ಮಾಂಟೇನೇರ್ ಭಿನ್ನಹಾದಿಯನ್ನು ತುಳಿದ. ನನ್ನ ಪುಸ್ತಕದ ವಿಷಯ ನಾನೇ ಎಂದು ಘೋಷಿಸಿದ. ರೋಪಿಯನ್ ಸಾಹಿತ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ, ವ್ಯಕ್ತಿಯೊಬ್ಬ ತನ್ನನ್ನು ತಾನೇ ಕೇಂದ್ರವನ್ನಾಗಿ
ಇಟ್ಟುಕೊಂಡು ತನ್ನ ಸುತ್ತಲೇ ಬರಹವನ್ನು ಬರೆದ ಮೊದಲ ಉದಾಹರಣೆಯಾದ. ನನ್ನ ಸಮಕಾಲೀನ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಓದಿರುವವನು ನಾನೇ ಎಂದು ಹೇಳಿಕೊಂಡ. ನಾನು ಎಂಬ ಸಂಬೋಧನೆಯು ಯೂರೋಪಿಯನ್ ಸಾಹಿತ್ಯಕ್ಕೆ ಹೊಸದಾಗಿತ್ತು. ಆಧುನಿಕ ಸಾಹಿತ್ಯದಲ್ಲಿ ‘ನಾನು’, ‘ನನ್ನ ಖಾಸಗೀ ಬದುಕು’, ‘ನನ್ನ ಭಾವನೆಗಳು’ ಇತ್ಯಾದಿಗಳಿಗೆ ಸ್ಥಾನವಿದೆ. ನಾನು ಎನ್ನುವುದರ ಸುತ್ತಲೂ ಹೊಸ ದರ್ಶನ, ಹೊಸ ವಿಜ್ಞಾನ, ಹೊಸ ಧರ್ಮ, ಹೊಸ ಬದುಕು ದಶದಿಕ್ಕುಗಳಲ್ಲಿ ಬೆಳೆದಿದೆ.

ವ್ಯಕ್ತಿ ಕೇಂದ್ರಿತ ಅನುಭವಗಳಿಗೆ ಸಂಬಂಧಿಸಿದ ಹಾಗೆ ಆತ್ಮಕಥನಗಳು ಅಪಾರವಾಗಿ ಪ್ರಕಟವಾಗಿವೆ. ಆದರೆ ೧೫೮೦ರಲ್ಲಿ ಮಾಂಟೇನೇರ್ ತನ್ನ ಚಿಂತನ- ಮಂಥನಗಳ ಬರಹವನ್ನು ಎಸ್ಸೇಸ್ – ಪ್ರಬಂಧಗಳು ಎನ್ನುವ ಹೆಸರಿನಲ್ಲಿ ಪ್ರಕಟಿಸಿದಾಗ, ಆ ರೀತಿಯ ಪರಿಕಲ್ಪನೆ ಯೂರೋಪಿಯನ್ನರಿಗೆ ತೀರಾ ಹೊಸ ವಿಚಾರವಾಗಿತ್ತು. ಮಾಂಟೆನೇರ್ ಬದುಕಿದ್ದ ಕಾಲದಲ್ಲಿ ಕ್ಯಾಥೋಲಿಕ್
ಮತ್ತು ಪ್ರಾಟಿಸ್ಟಾಂಟ್ ಅನುಯಾಯಿಗಳ ನಡುವೆ ತೀವ್ರ ಘರ್ಷಣೆ ನಡೆಯುತ್ತಿತ್ತು. ಧರ್ಮದ ಹೆಸರಿನಲ್ಲಿ ಯುದ್ಧಗಳು ನಡೆಯು ತ್ತಿದ್ದವು. ಧರ್ಮದ ಹೆಸರಿನಲ್ಲಿ ಮಾರಣಹೋಮ ನಡೆಯುತ್ತಿತ್ತು.

ಜ್ಞಾನವೆನ್ನುವುದು ಕೇವಲ ಧರ್ಮಗಳಲ್ಲಿ ಮಾತ್ರ ಇರುತ್ತದೆ ಎನ್ನುವ ನಿಲುವನ್ನು ಪ್ರತಿಭಟಿಸಿದ. ಧರ್ಮದಲ್ಲೇನಿದೆ, ಧರ್ಮ
ಗ್ರಂಥಗಳಲ್ಲಿ ಏನಿದೆ ಎನ್ನುವುದು ಮುಖ್ಯವಲ್ಲವೇ ಅಲ್ಲ. ಅಲ್ಲಿ ಬರೆದಿರುವುದೆಲ್ಲ ನನ್ನದಾಗಬೇಕಾಗಿಲ್ಲ. ನನ್ನ ಅನುಭವಕ್ಕೆ ಏನು ಬಂದಿದೆ, ನನ್ನ ಚಿಂತನ-ಮಂಥನಗಳು ಯಾವ ಯಾವ ತೀರ್ಮಾನಕ್ಕೆ ಬಂದಿವೆ, ಈ ಜಗತ್ತಿನ ಬಗ್ಗೆ ನನಗೇನು ಗೊತ್ತಿದೆ ಎನ್ನುವು  ದಷ್ಟೇ ಮುಖ್ಯವಾಗುತ್ತದೆ.

ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ತನ್ನ ಅನುಭವ ಮತ್ತು ವಿಚಾರಗಳ ಮೂಲಕ, ಜ್ಞಾನ ಗಳಿಸಬಲ್ಲ. ಒಬ್ಬೊಬ್ಬ ಮನುಷ್ಯನ ಅನುಭವಗಳು ಒಂದೊಂದು ರೀತಿಯಲ್ಲಿ ಇರುತ್ತವೆ. ಮನುಷ್ಯನ ಅನುಭವಗಳು ಸದಾ ಕಾಲ ಬದಲಾಗುತ್ತಿರುತ್ತವೆ. ಹಾಗಾಗಿ ಜ್ಞಾನ ಎನ್ನುವುದೂ ಬದಲಾಗುತ್ತಿರುತ್ತದೆ. ಹಾಗಾಗಿ ಧಾರ್ಮಿಕ ಗ್ರಂಥಗಳು ನೀಡುವ ಜ್ಞಾನವೇ ಅಂತಿಮವಾಗಬೇಕಿಲ್ಲ ಎಂದು
ವಾದಿಸಿದ. ಧರ್ಮದ ಬಗ್ಗೆ, ಸರಕಾರದ ಬಗ್ಗೆ, ಆಚರಣೆಗಳ ಬಗ್ಗೆ, ಮನುಷ್ಯನ ಸರ್ವಶ್ರೇಷ್ಠತ್ವದ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ. ಇದು ಸಂದೇಹವಾದಕ್ಕೆ (ಸ್ಕೆಪ್ಟಿಸಮ್) ಎಡೆ ಮಾಡಿಕೊಟ್ಟಿತು.

ಇಂದಿಗೂ ಮನೋವೈದ್ಯರು ಮಾಂಟೆನೇರ್ ಕೃತಿಗಳನ್ನು ಈ ಸಂದೇಹವಾದ ಹಿನ್ನೆಲೆಯಲ್ಲಿಯೇ ಅಧ್ಯಯನ ಮಾಡುತ್ತಿರುವುದು ಗಮನೀಯ. ಮಾಂಟೆನೇರ್ ೧೫೭೧ರಲ್ಲಿ ತನ್ನ ಪ್ರಬಂಧಗಳು ಎನ್ನುವ ಕೃತಿಯ ಮೊದಲ ಪ್ರಬಂಧವನ್ನು ಬರೆದ. ೧೫೮೦ರ
ಹೊತ್ತಿಗೆ ಅವನು ತನ್ನ ಎಲ್ಲ ಪ್ರಬಂಧಗಳನ್ನು ಬರೆದು ಪೂರ್ಣಗೊಳಿಸಿದ.