ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ಯಾವುದೇ ಕ್ರೀಡೆಯಲ್ಲಿ ಗೆಲುವು ಒಬ್ಬರಿಗೆ ಇಲ್ಲವೇ ಒಂದು ತಂಡಕ್ಕೆ ಮೀಸಲು. ಸೋಲು ಹಾಗಲ್ಲ, ಅದು ಹಲವರನ್ನು ಮಣಿಸುತ್ತದೆ; ಹಲವರನ್ನು ಮಲಗಿಸುತ್ತದೆ; ಹಲವರನ್ನು ಮಣ್ಣು ಮುಕ್ಕುವಂತೆ ಮಾಡುತ್ತದೆ. ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಅದರ ಗೆಲುವು ಭಾರತದ ಸೋಲಿನ ಕಹಿಯನ್ನು ಹೆಚ್ಚಿಸಿದೆ.
‘ಹನ್ನೊಂದು ಜನ ಮುಟ್ಠಾಳರು ಆಡುವ, ಹನ್ನೊಂದು ಸಾವಿರ ಜನ ಮುಟ್ಠಾಳರು ನೋಡುವ ಆಟವೇ ಕ್ರಿಕೆಟ್’- ಇದು ಖ್ಯಾತ ಐರಿಷ್ ನಾಟಕಕಾರ
ಜಾರ್ಜ್ ಬರ್ನಾರ್ಡ್ ಶಾ ವ್ಯಕ್ತಪಡಿಸಿದ ಪ್ರತಿಕ್ರಿಯೆ. ಈಗಲೂ ಅದು ೧೧ ಜನ ಆಡುವ ಆದರೆ ಕೋಟ್ಯಂತರ ಜನ ನೋಡುವ ಪಂದ್ಯವಾಗಿದೆ. ಮೊನ್ನೆಮೊನ್ನೆ ಮುಕ್ತಾಯಗೊಂಡ ವಿಶ್ವಕಪ್ ಹಣಾಹಣಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋಲುಂಡಿದೆ. ಭಾರತ ತಂಡವನ್ನು ಬಗ್ಗು ಬಡಿಯಲು ಸಿದ್ಧತೆ ಮಾಡಿಕೊಂಡೇ ಮೈದಾನಕ್ಕೆ ಇಳಿದಿದ್ದ ಆಸ್ಟ್ರೇಲಿಯಾ ಕಪ್ಪನ್ನು ಮಡಿಲಿಗೆ ಹಾಕಿಕೊಂಡು ಸ್ವದೇಶಕ್ಕೆ ಮರಳಿದೆ.
ಹಾಗೆ ಹೋದ ತಂಡಕ್ಕೆ ವಿಶ್ವಕಪ್ ಅಷ್ಟೊಂದು ಮಹತ್ವದ್ದೆನಿಸಿದೆಯೆ? ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದಲೇ ಸ್ವೀಕರಿಸಿದ ಕಪ್ಪನ್ನು ಅಲ್ಲಿಯ ಆಟಗಾರನೊಬ್ಬ ತನ್ನ ಪಾದಗಳ ವಿಶ್ರಾಂತಿಗೆ ಬಳಸಿರುವ ಚಿತ್ರ ನೋಡಿದರೆ, ತಾನು ಅಷ್ಟೆಲ್ಲ ಬಡಿದಾಡಿ ಗೆದ್ದ ಕಪ್‌ಗೆ ಆಸ್ಟ್ರೇಲಿಯಾ ನೀಡಿರುವ ಮಹತ್ವ ಮತ್ತು ಗೌರವ ಎಷ್ಟೆನ್ನುವುದು ಗೊತ್ತಾಗುತ್ತದೆ. ಕಪ್ ಯಾವುದೇ ಕಾರಣಕ್ಕೂ ಭಾರತ ತಂಡದ ಕೀರ್ತಿ ಹೆಚ್ಚಿಸುವುದಕ್ಕೆ ಕಾರಣವಾಗಬಾರದು ಎಂಬ ಭಾವದಲ್ಲಿ ಅದನ್ನು ಆಸ್ಟ್ರೇಲಿಯಾ ತಂಡ ಗೆದ್ದಂತೆನಿಸುತ್ತದೆ. ಅದೇನೇ ಇರಲಿ ಆಸ್ಟ್ರೇಲಿಯಾ ತನ್ನ ಗುರಿ ಮುಟ್ಟಿದೆ, ಅದಕ್ಕೆ ಭಾರತ ತಂಡ ಸಹಕರಿಸಿದೆ. ಇದು ವ್ಯಂಗ್ಯವಲ್ಲ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಹಣಾಹಣಿಯನ್ನು ಕಣ್ತುಂಬಿಕೊಂಡವರಿಗಾಗಲೀ, ಜಗತ್ತಿನ ಉದ್ದಗಲಕ್ಕೆ ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಿಸಿದವರಿಗಾಗಲೀ ಮನವರಿಕೆಯಾದ ಸತ್ಯವೆಂದರೆ ಔಟಾಗಲೆಂದೇ ಕ್ರೀಡಾಂಗಣಕ್ಕೆ ರೋಹಿತ್ ಶರ್ಮಾ ನೇತೃತ್ವದ ತಂಡ ಬಂತು ಎನ್ನುವುದು! ಯಾವುದೇ ಕ್ರೀಡೆಯಲ್ಲಿ ಗೆಲುವು ಒಬ್ಬರಿಗೆ ಇಲ್ಲವೇ ಒಂದು ತಂಡಕ್ಕೆ ಮೀಸಲು. ಸೋಲು ಹಾಗಲ್ಲ, ಅದು ಹಲವರನ್ನು ಮಣಿಸುತ್ತದೆ; ಹಲವರನ್ನು ಮಲಗಿಸುತ್ತದೆ; ಹಲವರನ್ನು ಮಣ್ಣು ಮುಕ್ಕುವಂತೆ ಮಾಡುತ್ತದೆ. ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಅದರ ಗೆಲುವು ಭಾರತದ ಸೋಲಿನ ಕಹಿಯನ್ನು ಹೆಚ್ಚಿಸಿದೆ.
ಕ್ರಿಕೆಟ್ ವಿಚಾರದಲ್ಲಿ ಬರ್ನಾರ್ಡ್ ಶಾ ಹೇಳಿದ ಮಾತನ್ನು ಮೆಲುಕುಹಾಕುತ್ತ ಈಗಿನ ಸ್ಥಿತಿಯನ್ನು ಗಮನಿಸೋಣ. ಬ್ರಿಟಿಷ್ ವಸಾಹತುಶಾಹಿ ಎಲ್ಲೆಲ್ಲಿ
ಆಕ್ರಮಣಕಾರಿ ಪಾದವನ್ನೂರಿತೋ ಆ ದೇಶಗಳಲ್ಲೆಲ್ಲ ಕ್ರಿಕೆಟ್‌ನ ಬೀಜಾಂಕುರವಾಯಿತು ಎನ್ನುವುದು ಇತಿಹಾಸ. ಭಾರತ ಒಂದಲ್ಲ ಎರಡಲ್ಲ ೨೦೦ ವರ್ಷ -ರಂಗೀಯರ ಆಡಳಿತದಲ್ಲಿ ನಲುಗಿದ ಬಳಿಕ ಇನ್ನು ದೋಚಲು ಇಲ್ಲಿ ಇನ್ನೇನೂ ಇಲ್ಲ ಎನ್ನುವುದನ್ನು ಮನಗಂಡ ಬ್ರಿಟಿಷರು ಭಾರತಕ್ಕೆ
ಸ್ವಾತಂತ್ರ್ಯ ನೀಡಿ ಗಂಟುಮೂಟೆ ಕಟ್ಟಿ ಹಡಗು ಏರಿದರು. ಹೋಗುವಾಗ ತಾವು ಬೀಜವಾಗಿ ಬಿತ್ತಿದ ಕಿಕೆಟ್ ಹೆಮ್ಮರವಾಗಿ ಬೆಳೆದುದನ್ನು ಕಣ್ತುಂಬಿ
ಕೊಂಡು ಹೊರಟರು. ಈ ಹೊತ್ತು ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಎಂದರೆ ಕ್ರಿಕೆಟ್.
ತನ್ನ ಆಳ್ವಿಕೆಗೆ ಒಳಪಟ್ಟ ದೇಶಗಳನ್ನೆಲ್ಲ ‘ಕಾಮನ್ ವೆಲ್ತ್ ಕಂಟ್ರೀಸ್’ ಎಂದು ಬ್ರಿಟನ್ನು ಕರೆಯಿತು. ಹಲವರು ವ್ಯಾಖ್ಯಾನಿಸಿರುವಂತೆ ಬೇರೆ ಬೇರೆ
ದೇಶಗಳಿಂದ ತಾನು ಅಲ್ಲಿ ಇದ್ದಷ್ಟೂ ಕಾಲ ದೋಚಿದ್ದೇ ಬ್ರಿಟನ್ನಿನ ಸಂಪತ್ತನ್ನು ವೃದ್ಧಿಸಿರುವ ಕಾಮನ್ ವೆಲ್ತ್! ಸುಮಾರು ೧೪೦ ಕೋಟಿ ಜನಸಂಖ್ಯೆ ಯುಳ್ಳ ಭಾರತದಲ್ಲಿ ಕ್ರಿಕೆಟ್ ವಿಜೃಂಭಿಸುತ್ತಿದೆ. ಹೆಚ್ಚೂ ಕಡಿಮೆ ಇಷ್ಟೇ ಜನಸಂಖ್ಯೆಯುಳ್ಳ ಚೀನಾದಲ್ಲಿ ಕ್ರಿಕೆಟ್‌ನ ಸೊಲ್ಲಿಲ್ಲ. ಅತ್ಯಂತ ಮುಂದುವರಿದ
ಜಪಾನ್ ಸೇರಿದಂತೆ ಹಲವಾರು ದೇಶಗಳಲ್ಲಿ ಜನ ಕ್ರಿಕೆಟ್ ನೋಡುವುದಕ್ಕೂ ಹೇಸುತ್ತಾರೆ.
ಅವರೆಲ್ಲರ ಪ್ರಕಾರ ಅದು ‘ಟೈಂ ವೇಸ್ಟ್ ಗೇಮ್’. ಬರ್ನಾರ್ಡ್ ಶಾ ಹೇಳಿದ ಹನ್ನೊಂದು ಸಾವಿರ ಮುಟ್ಠಾಳರ ಸಂಖ್ಯೆ ಹೆಚ್ಚುವುದಕ್ಕೆ ತಮ್ಮ ಸಹಕಾರವಿಲ್ಲ
ಎಂದು ಅವರೆಲ್ಲ ಹೇಳಿದ್ದಾಗಿದೆ. ಆದರೆ ಭಾರತೀಯರು ಆ ಹನ್ನೊಂದು ಸಾವಿರಕ್ಕೆ ತಮ್ಮ ಕೈಲಾದಷ್ಟೂ ಸೊನ್ನೆಗಳನ್ನು ಸೇರಿಸುತ್ತ ಮುಂದು ವರಿದಿದ್ದಾರೆ. ಸೊನ್ನೆ ಎಷ್ಟೆಂದರೂ ನಮ್ಮ ಆಸ್ತಿ, ವಿಶ್ವಕ್ಕೆ ಭಾರತ ನೀಡಿದ ಕೊಡುಗೆ. ಒಂದರಿಂದ ೯ರ ಸಂಖ್ಯೆಯನ್ನು ಹತ್ತನ್ನಾಗಿಸುವ ಸೊನ್ನೆ ಸೇರಿಸಿದವನು ನಮ್ಮ ಹೆಮ್ಮೆಯ ಗಣಿತಜ್ಞ ಆರ್ಯಭಟ ತಾನೇ? ವಿಶ್ವಕಪ್ ಟೂರ್ನಿಯ ಫೈನಲ್ಸ್‌ಗೆ ಪೂರ್ವದಲ್ಲಿ ವಿವಿಧ ದೇಶಗಳ ತಂಡದೊಂದಿಗೆ ಸೆಣೆಸಿದ ಭಾರತ ತಂಡ ಎಲ್ಲೂ ಮುಗ್ಗರಿಸದೆ ಸತತ ೯ ಜಯ ಗಳಿಸಿದ್ದು ಸಾಮಾನ್ಯ ಸಂಗತಿಯೇನೂ ಅಲ್ಲ.
ವಿಶ್ವಕ್ಕೆ ಕ್ರಿಕೆಟ್ ಕೊಟ್ಟ ದೇಶ ತಾನೆಂದು ಕೊಚ್ಚಿಕೊಳ್ಳುವ ಇಂಗ್ಲೆಂಡ್‌ನ ತಂಡ ಮೂಲೆಗುಂಪಾಗಿದ್ದು ಕೂಡಾ ಸಾಮಾನ್ಯ ಸಂಗತಿಯಲ್ಲ. ಭಾರತ ನೆಲದಲ್ಲೇ ಭಾರತ ತಂಡವನ್ನು ಮಣಿಸಿ ತನ್ನ ತಾಯ್ನೆಲದಲ್ಲಿ ‘ಉಘೇ ಉಘೇ’ ಎಂದೆನ್ನಿಸಿಕೊಳ್ಳುವ ಕನಸಿನೊಂದಿಗೆ ಬಂದ ಪಾಕಿಸ್ತಾನ ತಂಡ ಹೇಳಹೆಸರಿಲ್ಲದಂತೆ ಹೋಗಿದ್ದೂ ಸಾಮಾನ್ಯ ಸಂಗತಿಯಲ್ಲ. ಯಾವಾಗ ಭಾರತ ತನ್ನೆದುರು ಆಡಿದ ತಂಡಗಳನ್ನು ಒಂದೊಂದಾಗಿ ಸದೆಬಡಿಯಿತೋ ಅದೇ ಕ್ಷಣದಲ್ಲಿ ಅದರಲ್ಲಿ ಒಳ ಅಹಂಕಾರವೊಂದು ಮೊಳಕೆಯೊಡೆಯಿತು ಎಂಬ ವ್ಯಾಖ್ಯಾನವಿದೆ.
‘ತಾನುಂಟೋ ಮೂಲೋಕವುಂಟೋ’ ಎನ್ನುವುದು ಮನುಷ್ಯಸಹಜ ಗುಣ, ಅದೊಂದು ಬಗೆಯ ರೋಗ ಎನ್ನುವುದೇ ಹೆಚ್ಚು ಸರಿ ಮತ್ತು ಸೂಕ್ತ.
ತಥಾಕಥಿತ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಸ್ಥಳೀಯವೂ ಪಾರಂಪರಿಕವೂ ಆದ ಕ್ರೀಡೆಗಳನ್ನು ಸಮಾಧಿ ಮಾಡಿದ್ದು ಕ್ರಿಕೆಟ್. ಭಾರತದಲ್ಲಂತೂ ಅದು ಹೆಚ್ಚು ಬಿರುಸಿನಿಂದ ನಡೆಯಿತು. ಭಾರತದಲ್ಲಿ ಕ್ರಿಕೆಟ್ ಅಲ್ಲದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ.
ಕ್ರಿಕೆಟ್ ಆಟಗಾರರನ್ನು ಮೆರೆಸುವ, ಕ್ರಿಕೆಟ್ಟನ್ನು ವೈಭವೀಕರಿಸುವ ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ಥಳೀಯ ಕ್ರೀಡೆಗಳಿಗೆ ಸಿಗುವ
ಸುದ್ದಿಜಾಗ ಅಷ್ಟಕ್ಕಷ್ಟೇ. ಈಗ ಇನ್ನೊಂದು ಅಧ್ಯಾಯ ಕ್ರಿಕೆಟ್‌ಗೆ ಪೂರಕವಾಗಿ ಸೇರಲಿದೆ. ಈ ವರೆಗೆ ಕ್ರಿಕೆಟ್ಟನ್ನು ಒಲಿಂಪಿಕ್ ಕ್ರೀಡಾಕೂಟದ ಒಳಗೆ
ಬಿಟ್ಟುಕೊಂಡಿರಲಿಲ್ಲ.
ಅದೊಂದು ಕ್ರೀಡಾಕೂಟವಾದರೂ ‘ಕ್ರಿಕೆಟ್-ಮುಕ್ತ’ ಎಂದು ಲಕ್ಷಾಂತರ ಜನ ಸಮಾಧಾನದಲ್ಲಿದ್ದರು. ಆದರೆ ಈಗ ಅಲ್ಲೂ ಕ್ರಿಕೆಟ್‌ನ ಪ್ರವೇಶವಾಗಿದೆ. ಬರಲಿರುವ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ವಿಜೃಂಭಿಸಲಿದೆ. ಹೀಗಾದರೆ ಡೇರೆಯೊಳಗೆ ಒಂಟೆ ನುಗ್ಗಿದಂತಾಗದೇ? ಈ ಪ್ರಶ್ನೆಗೆ ಯಾರು ಉತ್ತರ ಕೊಡಬೇಕು?
ಯಾವುದೇ ಒಂದು ಕ್ರೀಡೆ ವಿಚಾರದಲ್ಲಿ ಪ್ರೇಮ, ಅಭಿಮಾನ ಇರುವುದು ತಪ್ಪಲ್ಲ. ಆದರೆ ಹುಚ್ಚಾಟ, ಉನ್ಮಾದಕ ಸ್ಥಿತಿ ಖಂಡಿತವಾಗಿಯೂ ತಪ್ಪು. ಅಹಮದಾಬಾದ್ ಕ್ರೀಡಾಂಗಣದಲ್ಲಿ ೯೦,೦೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಜನರ ಉನ್ಮಾದಕ ಸ್ಥಿತಿ ನೋಡಿದ ಕೆಲವರಲ್ಲಾದರೂ ‘ಹೀಗೂ ಉಂಟೆ?’ ಎನಿಸಿದ್ದರೆ ಅದು ಸಮರ್ಥನೀಯವೇ. ಬರ್ನಾರ್ಡ್ ಶಾ ಹೇಳಿದಂತೆ ಹಲವರಲ್ಲಿ ಕ್ರಿಕೆಟ್ ಬಗೆಗಿನ ಹುಚ್ಚಾಟದ ವಿಚಾರದಲ್ಲಿ ಹೇವರಿಕೆ ಇದೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮುಖ್ಯಸ್ಥರಾಗಿದ್ದ ಡಾ. ಎಚ್. ನರಸಿಂಹಯ್ಯ ಕ್ರಿಕೆಟ್ ವಿರೋಧಿ ಸಂಘವೊಂದನ್ನು ಹುಟ್ಟು ಹಾಕಿದ್ದರು.
ಅನೇಕರು ಅದರ ಸದಸ್ಯರಾಗಿದ್ದರು. ಕ್ರಿಕೆಟ್ ಪರವಾದ ಗಾಳಿಯಲ್ಲಿ ಎಚ್ಚೆನ್ ಊರಿದ ಟೆಂಟು ಹಾರಿಹೋಯಿತು. ಆ ನಂತರದಲ್ಲಿ ಅಂಥ ಯತ್ನಕ್ಕೆ
ಕೈಹಾಕುವ ಸಾಹಸ ಯಾರಿಂದಲೂ ಆಗಲಿಲ್ಲ. ದಶಕಗಳ ಹಿಂದಿನ ಮಾತು. ಐ.ಎಸ್.ಜೋಹರ್ ಎಂಬ ಹಾಸ್ಯನಟ ಹಿಂದಿ ಚಿತ್ರರಂಗದಲ್ಲಿದ್ದರು. ಅವರದು ಕ್ರಿಕೆಟ್ ವಿಚಾರದಲ್ಲಿ ಉನ್ಮಾದಕ ಹುಚ್ಚು. ಎಲ್ಲೇ ಆಡಲಿ ಭಾರತ ತಂಡ ಮಾತ್ರವೇ ಗೆಲ್ಲಬೇಕೆಂಬ ಕ್ರೀಡಾಸೂರ್ತಿ ಇಲ್ಲದ ಆಸೆ ಅವರದು. ಅದೊಂದು ವರ್ಷ ಭಾರತ ತಂಡ ವಿದೇಶೀ ನೆಲದಲ್ಲಿ ಸೋತು ಭಾರತಕ್ಕೆ ಮರಳಿತು.
ಎಲ್ಲಿ ಹೋದರೂ ಸೈ, ಆ ಆಟಗಾರರು ತವರಿಗೆ ಮರಳಲೇಬೇಕಲ್ಲವೆ. ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವುದನ್ನು ಪಕ್ಕಾ ಮಾಡಿ ಕೊಂಡಿದ್ದ ಜೋಹರ್, ಅವರನ್ನು ಸ್ವಾಗತಿಸಲು ಚಪ್ಪಲಿ ಹಾರ ಹಿಡಿದು ಅಲ್ಲಿಗೆ ಹೋಗಿದ್ದರು. ಆಟವೆಂದರೆ ಸೋಲು ಗೆಲುವು ಸಹಜವೂ ಹೌದು ಸಾಮಾನ್ಯವೂ ಹೌದೆಂಬ ನಿರ್ವಿಕಾರ, ನಿರ್ಮಮಕಾರ ಸ್ಥಿತಿ ಎಲ್ಲಿ, ಇಂಥ ಸ್ಥಿಮಿತ ಕಳೆದುಕೊಂಡ ಹುಚ್ಚಾಟವೆಲ್ಲಿ! ಈ ಸಲದ ವಿಶ್ವಕಪ್ ಸೋತ ಭಾರತ
ತಂಡಕ್ಕೆ ಈ ಬಗೆಯ ಮಂಗಳಾರತಿ ಆಗಲಿಲ್ಲ. ಆಟ ನೋಡಲೆಂದು ಕ್ರೀಡಾಂಗಣಕ್ಕೆ ಬಂದ ಪ್ರಧಾನಿ ಮೋದಿಯವರೇ ಎಲ್ಲ ನಿಯಮಗಳನ್ನೂ ಎಲ್ಲ ಶಿಷ್ಟಾಚಾರವನ್ನೂ ಪಕ್ಕಕ್ಕೆ ಸರಿಸಿ ಡ್ರೆಸ್ಸಿಂಗ್ ರೂಮಿಗೆ ತೆರಳಿ ಭಾರತದ ಆಟಗಾರರನ್ನು ಸಂತೈಸಿದ್ದು ಬಹುತೇಕ ಟೀಕಾಕಾರರ ಬಾಯಿ ಮುಚ್ಚಿಸಿರುವ ಆದರೆ ರಾಜಕಾರಣಿಗಳಿಗೆ ಟೀಕೆಗೋ ಹೊಗಳಿಕೆಗೋ ಅವಕಾಶ ಕಲ್ಪಿಸಿರುವ ಬೆಳವಣಿಗೆ. ಮೋದಿ ವರ್ತನೆ ವಿಚಾರದಲ್ಲಿ ಈಗ ದೊಡ್ಡ ಚರ್ಚೆಯೇ
ಸಾಗಿದೆ. ಕಡೇ ಪಕ್ಷ ಪಂಚರಾಜ್ಯ ಚುನಾವಣೆ ಮತದಾನ ಪ್ರಕ್ರಿಯೆ ಪೂರೈಸು ವವರೆಗೂ ಟೀಕೆ ಮುಂದುವರಿಯುತ್ತದೆ, ಅನುಮಾನ ಬೇಡ.
ಭಾರತ ತಂಡವು ಕ್ರೀಡಾಂಗಣದಲ್ಲಿ ವರ್ತಿಸಿದ ರೀತಿ, ಕ್ರಿಕೆಟ್ ವಿಚಾರದಲ್ಲಿ ಅಷ್ಟೇನೂ ಮಮಕಾರವಿರದ ನನ್ನಂಥವರಿಗೂ ಸರಿ ಎನಿಸಲಿಲ್ಲ. ಈಗ ನಡೆದಿರುವ ವ್ಯಾಖ್ಯಾನ, ವಿಮರ್ಶೆ, ವಿಶ್ಲೇಷಣೆ ನೋಡಿದರೆ ಆಸ್ಟ್ರೇಲಿಯಾ ತಂಡದವರು ಆಟ ಗೆಲ್ಲುವ ಛಲದಲ್ಲಿ ಪಂದ್ಯದ ಮೇಲೆ ದೃಷ್ಟಿನೆಟ್ಟು ಮೈದಾನಕ್ಕೆ ಬ್ಯಾಟು ಹಿಡಿದು ಬಂದರು. ಭಾರತ ತಂಡದ ಆಟಗಾರರು ವಿಶ್ವಕಪ್ ಮೇಲೆ ದೃಷ್ಟಿನೆಟ್ಟು ಮೈದಾನಕ್ಕೆ ಇಳಿದರು. ಕಣ್ಣು ನೆತ್ತಿಯ ಮೇಲಿದ್ದರೆ ನೆಲ ಕಾಣಿಸುವುದಿಲ್ಲ ಎಂಬ ಮಾತು ಸುಳ್ಳಲ್ಲ