ದಾಸ್ ಕ್ಯಾಪಿಟಲ್
dascapital1205@gmail.com
ಮೊಬೈಲನ್ನು ತರಗತಿಯೊಳಗೆ, ಹೊರಗೆ ಬಳಸುವಾಗಲೂ ಅದರ ಪ್ರತಿಫಲನ ಮಕ್ಕಳ ಮೇಲೆ ಹೇಗೆ ಆದೀತು ಎಂಬ ಎಚ್ಚರ ಶಿಕ್ಷಕರಿಗೆ ಇರುತ್ತದೆ, ಇರಬೇಕು ಕೂಡ! ಕಲಿಕೆ ಮತ್ತು ಬೋಧನೆಗೆ ಸಂಬಂಧಿಸಿದಂತೆ ಅದನ್ನು ಬಳಸುವಾಗಲೂ ಒಂದು ಮಿತಿಯ ಎಚ್ಚರದಲ್ಲಿ ಬುದ್ಧಿ ಮತ್ತು ಪ್ರಜ್ಞೆ ಕೆಲಸ ಮಾಡಬೇಕು.
ಪರಿಸ್ಥಿತಿ ಕೈಮೀರಿ ಹೋದರೂ ಕೈಯಲ್ಲಿ ಮೊಬೈಲಿದೆ. ಆದ್ದರಿಂದ ಯಾವ ಪರಿಸ್ಥಿತಿಯೂ ನಿಜಸ್ಥಿತಿಯನ್ನು ಹೇಳುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಶಾಲೆಗಳಿವೆ, ಮಕ್ಕಳಿದ್ದಾರೆ, ಶಿಕ್ಷಕರಿದ್ದಾರೆ, ಸಮಾಜವಿದೆ. ಗಂತ ನಿಜಸ್ಥಿತಿ ಏನು ಅಂತ ಗೊತ್ತೇ ಇಲ್ಲ ಎನ್ನುವ ಹಾಗಿಲ್ಲ. ಏಕೆಂದರೆ, ಎಲ್ಲರಿಗೂ ಕೈಮೀರಿ ಹೋದ ಪರಿಸ್ಥಿತಿಯ ಬಗ್ಗೆ ಗೊತ್ತಿದೆ. ಅಷ್ಟೇ ಅಲ್ಲದೆ, ಮೊಬೈಲಿಂದ ಮಕ್ಕಳ ಮೇಲಾದ, ಆಗುವ ಅನಾಹುತಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವಷ್ಟು ಸುಲಭದಲ್ಲಿ ಮೊಬೈಲನ್ನು ಬಳಸುವಾಗ ಎಚ್ಚರವಿರುವು ದಿಲ್ಲ.
ಆದರೂ ಏನೂ ಮಾಡಲಾಗದ, ಅಥವಾ ಏನೂ ಮಾಡಬಾರದು ಎಂದೇ ತೀರ್ಮಾನಿಸಿದಂತೆ ಈ ನಿತ್ಯದ ಬದುಕು ನಡೆಯುತ್ತಿದೆ. ಒಂದು ಒಳ ಗುಮಾನಿಯಿಂದ ನಿತ್ಯದ ಬದುಕು ಸಾಗುತ್ತಿದೆಯೇನೋ ಎಂಬಂತೆ ಈ ಪ್ರಪಂಚ ನಡೆಯುತ್ತಿದೆ. ಗುಮಾನಿಯಂತೂ ಎಲ್ಲರಲ್ಲೂ ಇದೆ. ಅದು ಸಾರ್ವತ್ರಿಕವಾಗಿದೆ. ಆದರೆ ಯಾರೂ ಬಾಯಿಬಿಡ ಲಾರರು!
ಕೊರೊನಾ ಎಂಬುದೊಂದು ನೆಪವೋ ನಿಮಿತ್ತವೋ ಎನಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ. 2020ರ ಮಾರ್ಚ್ ಕೊನೆಯಲ್ಲಿ ಆರಂಭವಾದ ಕೊರೊನಾ ಸೋಂಕಿನ ಭಯ ಇಡಿಯ ದೇಶವನ್ನು ಆವರಿಸಿ ಭಯಗೊಳಿಸಿದ್ದೇನೋ ಅಪ್ಪಟ ನಿಜ! ಅನ್ಲಾಕ್ ಅಂತ ನಂತರದಲ್ಲಿ ಬಿಡುಗಡೆ ಹೊಂದುತ್ತ ನಿತ್ಯದ ಬದುಕು ಹೇಳಿಕೊಳ್ಳುವಷ್ಟು ಸವೆಸುವ ದಾರಿಗೆ ಬರದಿದ್ದರೂ ಒಂದು ಹಂತದ ನಿತ್ಯದ ಬದುಕು ಇದ್ದೇ ಇತ್ತು. ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗದಿದ್ದಾಗ ಒಂದು ಆಧುನಿಕವಾದ ಮೊಬೈಲನ್ನು ಕೊಡಿಸುವಷ್ಟು ಮತ್ತು ಅದಕ್ಕೆ ಬೇಕಾದ ಇಂಟರ್ನೆಟ್ ಅನ್ನು ಕಾಲಕಾಲಕ್ಕೆ ಹಾಕಿಸುವಷ್ಟು ಉಳ್ಳವರು ಇದ್ದೇ ಇದ್ದರು. ಈ ಉಳ್ಳವರಲ್ಲಿ ಆರ್ಥಿಕವಾಗಿ ಸಾಮಾನ್ಯರೆನಿಸಿದವರೂ ಇದ್ದರು.
ಭವಿಷ್ಯಕ್ಕಾಗಿ, ಈ ಬದುಕು ಮುಂದೆಯೂ ಹೇಗೋ ಉಳಿಯುವುದಕ್ಕಾಗಿ ಅಂತ ಉಳಿಸಿದ ಹಣ ಇದ್ದೇ ಇತ್ತು. ಇರುವ ಪ್ರಮಾಣದಲ್ಲಿ ಕಮ್ಮಿಯಿರಬಹುದು. ಬೇಡಿಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ದುಡಿತವಿದ್ದರೆ ಯಾವ ಅಸಮತೋಲನವೂ ನಿತ್ಯದ ಬದುಕಿಗಾಗದು ಎಂಬ ಅಗ್ನಿಯಂಥ ಎಚ್ಚರ ಹುಟ್ಟಿದ್ದಂತೂ ಸುಳ್ಳು ಎನ್ನಲಾದೀತೆ? ಹಾಗಂತ ಬಡತನದ ಬದುಕನ್ನು ಸಾಗಿಸುವವರ ಪಾಡಂತೂ ತೀರಾ ಎಂಬಷ್ಟು ಅಧೋಗತಿಯನ್ನು ಮುಟ್ಟಿದ್ದಂತೂ ಕಣ್ಣಾರೆ ಕಂಡ ಸತ್ಯವಾಗೇ ಉಳಿದುಬಿಟ್ಟಿತು.
ಸರಕಾರಗಳು ಇಂಥವರ ಬದುಕನ್ನು ಒಂದು ಗತಿಯಲ್ಲಿ ಸಾಗುವುದಕ್ಕೆ ಬೇಕಾಗಿ ಪಡಿತರವನ್ನು ನೀಡಿದ್ದು ಶ್ಲಾಘನೀಯವಾದ ಕಾರ್ಯವೇ ಸರಿ! ಆದರೆ, ಹೀಗೆ ಫ್ರೀಯಾಗಿ ಸಿಗುತ್ತದೆ ಎಂಬ ಮನಸ್ಥಿತಿಯಿಂದ ಸರಿಹೊತ್ತಿನವರೆಗೂ ಇದ್ದದ್ದು ಮಾತ್ರ ದುಡಿದು ತಿನ್ನುವ ಮನಸ್ಥಿತಿಯಿಂದ ದೂರಗೊಳಿಸಿದ್ದು ಪರಮಸತ್ಯವೇ ಸರಿ! ಪರಮ ದುರಂತವೇ ಸರಿ! ಇರಲಿ. ಮೊಬೈಲಿನ ಹುಚ್ಚಿ ನಿಂದ ಮಕ್ಕಳು ಹಾಳಾದರೆಂಬ ಕೂಗು ರೋದನೆಯಾಗಿ ಈಗ ಎಲ್ಲೂ ಕೇಳುತ್ತಿದೆ.
ಸರಿಸುಮಾರು ಎರಡು ವರ್ಷ ಆಯ್ತೇನೋ! ಸರಿಯಾಗಿ ಶಾಲೆಗೆ ಹೋಗದೆ ಮಕ್ಕಳು ಕಲಿಯುವುದನ್ನೇ ಮರೆತಿದ್ದಾರೆ ಎಂಬ ಮಾತು ಎಷ್ಟು ಸತ್ಯವೋ? ಸುಳ್ಳೋ? ಗೊತ್ತಿಲ್ಲ. ಆದರೆ, ಮಕ್ಕಳು ಕಲಿಯುವುದನ್ನು ಮರೆತರು ಎಂದೋ, ಅಥವಾ ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡರು ಎಂದೋ ಆರೋಪಿಸುತ್ತೇವೆ, ಆಕ್ಷೇಪಿಸುತ್ತೇವೆ. ಹೆಜ್ಜೆಹೆಜ್ಜೆಗೂ ಮಕ್ಕಳನ್ನು ಶಿಕ್ಷಿಸುತ್ತೇವೆ. ಮೊಬೈಲಿಂದ ಮಕ್ಕಳೆಲ್ಲ ಹಾಳಾದರು ಎಂದು ಗೊಣಗುತ್ತೇವೆ.
ಮನೆಯಲ್ಲಿ ದೊಡ್ಡವರಿಗೂ ಮೊಬೈಲನ್ನು ಬಿಡಲಾಗುತ್ತಿಲ್ಲ. ಶಾಲೆಯಲ್ಲಂತೂ ಮಕ್ಕಳಿಗಿಂತ ಹೆಚ್ಚಾಗಿ ಮೊಬೈಲ್ ಹುಚ್ಚು ಶಿಕ್ಷಕ ರನ್ನು ಕಾಡಿದೆ, ಕಾಡುತ್ತಿದೆ. ಇದರ ಪರಿಣಾಮವಾಗಿ, ಬೋಧನೆಯಲ್ಲಿ ನಿರಾಸಕ್ತಿ. ಮಕ್ಕಳನ್ನು ಸೃಜನಶೀಲ ಚಟುವಟಿಕೆ ಗಳಲ್ಲಿ ತೊಡಗಿಸಲು ಅನಾದರ. ಒಂದೇ ಸಲಕ್ಕೆ ಕಲಿಕಾಂಶಗಳನ್ನು ಎಲ್ಲ ಮಕ್ಕಳು ಕಲಿತುಬಿಡಬೇಕು ಎಂಬ ದುರಾಗ್ರಹ. ಮಕ್ಕಳ ಮೇಲೆ ಒಂಥರಾ ಅಸಡ್ದೆ! ಮಕ್ಕಳ ಕಲಿಕೆಯ ಶಕ್ತಿಯ ಮಟ್ಟವನ್ನು ಇದ್ದಹಾಗೆ ಸ್ವೀಕರಿಸುವಲ್ಲಿ ಅಸಹ್ಯವೆನಿಸಬಹುದಾದ ಅಸಹನೆ!
ಮುಖ್ಯವಾಗಿ, ಮಕ್ಕಳನ್ನು ಮಕ್ಕಳಾಗಿಯೇ ನೋಡಬೇಕೆಂಬುದನ್ನೇ ಮರೆತದ್ದರಿಂದ ಶಿಕ್ಷಕರ ಪ್ರಜ್ಞೆ ಮತ್ತು ಬೋಧನಾ ಸಾಮರ್ಥ್ಯ ಕುಸಿಯುತ್ತಿದೆಯೆಂದು ಅನಿಸುತ್ತಿದೆ. ಪಾಠಯೋಜನೆ, ಪಾಠಹಂಚಿಕೆ, ಪರೀಕ್ಷೆ, ಮೌಲ್ಯಮಾಪನಗಳಲ್ಲಿ ಮೊದಲಿ ನಷ್ಟು ಉತ್ಸಾಹ ಇದ್ದಂತಿಲ್ಲ. ಪ್ರಶ್ನೋತ್ತರ ಮಾದರಿಯಲ್ಲಿ ಬೋಧನೆಯಿಲ್ಲ. ನಾಮ್ -ಕೆ-ವಾಸ್ತೆ ಎನ್ನುವಂತೆ ತರಗತಿ ಬೋಧನೆಯನ್ನು ಸಾಗುಹಾಕುವುದೇ ಪ್ರಧಾನವಾಗಿ, ಚಟುವಟಿಕೆಗಳು ನಿಸ್ತೇಜವಾಗಿದೆಯೇನೋ!
ಕ್ಲಾಸು ಮುಗಿಸಿ ಹೊರಬರುತ್ತಿದ್ದಂತೆ ಮೊಬೈಲನ್ನು ಹಿಡಿದುಕೊಳ್ಳುವ ಶಿಕ್ಷಕರಿಗೆ ಸಂಬಳದ ಏರಿಕೆಯ ವಿಚಾರದಲ್ಲಿ ಮಾತ್ರ ಸದಾ ಕುತೂಹಲ. ಸಾಲದು ಎಂಬ ಒಂಥರಾ ಅತೃಪ್ತಿ, ಅಸಮಾಧಾನ ಇದ್ದೇ ಇರುತ್ತದೆಯೆಂಬುದು ಲೋಕಾರೂಢಿಯ ಮಾತು! ಎಷ್ಟು ಸತ್ಯವೋ ಎಂಬುದನ್ನು ಶಿಕ್ಷಕರೇ ಪ್ರಶ್ನಿಸಿಕೊಳ್ಳಬೇಕು. ಶಾಲಾವಧಿ ಮುಗಿಯುವುದೇ ತಡ, ಮನೆಗೆ ಹೊರಡುವ ಅವಸರದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳೊಂದಿಗೆ ಅರ್ಧಗಂಟೆ ಕಳೆಯುವ ಆಸಕ್ತಿ ಮೊದಲಿನಂತಿಲ್ಲ ಎಂಬ
ವರಸೆ ಬೇರೆ!
ಶಾಲೆ ಬೇಡ, ಮಕ್ಕಳು ಬೇಡ, ಆದರೆ, ವೃತ್ತಿ ಮಾತ್ರ ಬೇಕು. ಅದರಿಂದ ಹುಟ್ಟುವ ಸಂಬಳ, ಸಾಮಾಜಿಕ ಸ್ಥಾನಮಾನ, ಅಂತಸ್ತು, ಪದವಿ, ಪ್ರತಿಷ್ಠೆ, ಒಣ ಅಹಮ್ಮು ದಕ್ಕಲೇಬೇಕು. ಇಲ್ಲ ದಕ್ಕಿಸಿಕೊಳ್ಳಬೇಕು. ಏಕೆಂದರೆ, ಬದುಕಬೇಕು. ಹಾಗಂತ, ರಿಸ್ಕುಗಳು ಬೇಡ. ಜವಾಬ್ದಾರಿ ಬೇಡ. ಜೀವನ ಚೆನ್ನಾಗಿ ಸಾಗಬೇಕು. ಕಾರು, ಬಂಗಲೆ, ಐಷಾರಾಮದ ಬದುಕು ಕಟ್ಟಿಕೊಳ್ಳುವ ಅಥವಾ ಹಾಗೆ ರೂಪಿಸಿಕೊಳ್ಳುವ ಧಾವಂತವೇ ಮನಸ್ಸಿಗೆ ಗೀಳಾಗಿ ವೃತ್ತಿಗೆ ಢಾಳಾಗಿ ಅಂಟಿಕೊಂಡುಬಿಟ್ಟಿತೇ? ವೃತ್ತಿಬದ್ಧತೆ ಯೆಂಬುದು ಕೇವಲವಾಗಿ ಬರಬರುತ್ತ ‘ಬೆಲ್ ಆಂಡ್ ಬಿಲ್’ ಎನ್ನುವ ವಿಪರೀತವೆನಿಸುವ ಮನಸ್ಥಿತಿಯನ್ನು ತಲುಪಿಬಿಟ್ಟಿದೆ.
ಅನ್ಯಥಾ ಭಾವಿಸಬಾರದು. ಇಡಿಯ ಶಿಕ್ಷಕ ಸಮುದಾಯವೇ ಹೀಗಾಗಿದೆ ಅಂತ ನಾನು ಹೇಳುತ್ತಿಲ್ಲ! ಒಬ್ಬ ಶಿಕ್ಷಕ ಇಂಥದ್ದನ್ನು ಮಾಡಿದರೂ ಇಡಿಯ ಶಿಕ್ಷಕ ಸಮುದಾಯವೇ ಸರಿಯಿಲ್ಲ ಎಂಬ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಂದಿನ ದಿನಮಾನಗಳಿವೆ.
ಇಂಥ ಪರಿಸ್ಥಿತಿಯಲ್ಲಿ ವೃತ್ತಿ ಬದ್ಧತೆ ಎಂಬುದು ಕ್ಷೀಣಿಸುತ್ತ (ವೃತ್ತಿಬದ್ಧತೆಯ ಕ್ಷೀಣತೆಯ ಈ ಸಮಸ್ಯೆ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಲ್ಲ ಎಂಬುದೂ ಗಮನಾರ್ಹ! ಎಲ್ಲ ಕ್ಷೇತ್ರಗಳಲ್ಲೂ ಇದು ಕಾಡುತ್ತಿರುವ ಮೂಲಭೂತವಾದ ಪ್ರಶ್ನೆಯಾಗಿದೆ) ಊದೋ ಶಂಖ ಊದಿದರಾಯ್ತು ಎಂಬ ಉದಾಸೀನತೆಯನ್ನು ಹಾಸಿಕೊಂಡಿದೆ! ಹಾಗಂತ ಎಂದಿನಂತೆ ಊದೋ ಶಂಖವನ್ನು ಊದುವಾ ಗಲೂ ಔದಾಸೀನ್ಯ!
ವೃತ್ತಿ ಪರಿಧಿಯ ಘನತೆಗೆ ಅನುಸಾರ ವರ್ತಿಸಬೇಕೆನ್ನುವ ಸಾಮಾನ್ಯ ಜ್ಞಾನವೂ ಇಲ್ಲದ ಹಾಗೆ ತರಗತಿಯಲ್ಲೂ ತರಗತಿ ಹೊರಗೂ ವರ್ತಿಸುವ ಮನಸ್ಥಿತಿ ಶಿಕ್ಷಕರಿಗೆ ಸರ್ವಥಾ ಹಿತವಾಗಿ ಒದಗಲಾರದು. ಒಬ್ಬ ಶಿಕ್ಷಕ ಯಾವುದೇ ಬಗೆಯ ಅನುಚಿತ
ವರ್ತನೆ ತೋರಿದರೂ ಅದರ ಪ್ರತಿಫಲನದ ವ್ಯಾಪ್ತಿ ಶಾಲೆಗೆ, ಸಮಾಜಕ್ಕೆ ಎನ್ನುವುದು ಅಷ್ಟು ಸುಲಭವಾಗಿ ಅರ್ಥವಾ ಗುವುದಿಲ್ಲ. ಮತ್ತು ಇಡಿಯ ಶಿಕ್ಷಕ ಸಮುದಾಯಕ್ಕೇ ಎಂಬ ಪ್ರಜ್ಞೆಯೂ ಅಂದುಕೊಂಡಷ್ಟು ಗತಿಯಲ್ಲಿ ವೇಗದಲ್ಲಿ ಹುಟ್ಟಲಾರದು. ತನ್ನ ಮೂಗಿನ ನೇರಕ್ಕೇ ಮೊಂಡುವಾದ ಮಾಡುವ, ತಾನಂದುಕೊಂಡದ್ದೇ ಸರಿಯೆನ್ನುವ ಹುಂಬು ಧಾರ್ಷ್ಟ್ಯದ ಸ್ವಭಾವದಲ್ಲಿ ಯಾವ ಅಪೇಕ್ಷಿತ ಬದಲಾವಣೆಯೂ ಅಷ್ಟು ಸುಲಭದಲ್ಲಿ ಆಗಲಾರದು ಎಂಬುದು ಶಿಕ್ಷಕರಿಗೆ ಗೊತ್ತಿರಬೇಕು.
ಖಂಡಿತವಾಗಿ ಎಲ್ಲರಿಗೂ ಗೊತ್ತಿರಬೇಕು ಎಂಬ ಮಾತು ಬೇರೆ! ಮೊಬೈಲನ್ನು ತರಗತಿ ಅಥವಾ ತರಗತಿ ಹೊರಗೆ ಅಥವಾ ಶಾಲೆಯ ಆವರಣದಲ್ಲಿ ಬಳಸುವಾಗಲೂ ಅದರ ಪ್ರತಿಫಲನ ಮಕ್ಕಳ ಮೇಲೆ ಹೇಗೆ ಆದೀತು ಎಂಬ ಎಚ್ಚರ ಶಿಕ್ಷಕರಿಗೆ ಇರುತ್ತದೆ, ಇರಬೇಕು ಕೂಡ! ಕಲಿಕೆ ಮತ್ತು ಬೋಧನೆಗೆ ಸಂಬಂಧಿಸಿದಂತೆ ಅದನ್ನು ಬಳಸುವಾಗಲೂ ಒಂದು ಮಿತಿಯ ಎಚ್ಚರದಲ್ಲಿ ಬುದ್ಧಿ ಮತ್ತು ಪ್ರಜ್ಞೆ ಕೆಲಸ ಮಾಡಬೇಕು. ಅದನ್ನು ಮೀರಿ ಯಾರೂ ವರ್ತಿಸಲಾಗದು, ವರ್ತಿಸಬಾರದು. ಸಾಕಷ್ಟು
ಪೂರ್ವಸಿದ್ಧತೆಯೊಂದಿಗೆ ತರಗತಿಗೆ ಶಿಕ್ಷಕರ ಪ್ರವೇಶ ಆಗದಿದ್ದರೆ ಬೋಧನೆ ನಿಸ್ಸಾರವಾದೀತು.
ಹಾಗಂತ, ಟೆಕ್ನಾಲಜಿ ಇದೆಯಲ್ಲ, ಅದನ್ನು ಬಳಸಿದರೇನು ತಪ್ಪು ಎಂದು ವಾದಿಸುವಾಗಲೂ ಕಲಿಕೆ ಮತ್ತು ಬೋಧನೆ ಉದ್ದಿಶ್ಯವನ್ನು ಮರೆಯಬಾರದು! ಯಾವ ಕಲಿಕೋಪಕರಣಗಳೂ ಇಲ್ಲದ ಕಾಲದಲ್ಲಿ ತಾವೆಲ್ಲ ಕಲಿತವರು, ಮೇಲಾಗಿ ಶಿಕ್ಷಕನಿಗಿಂತ ಅತ್ಯುತ್ತಮ ಕಲಿಕೋಪಕರಣ ಯಾವುದೂ ಇಲ್ಲ ಎಂಬರಿವು ಈ ಕಾಲದಲ್ಲೂ ಅಸಡ್ಡೆಯಾಗದಂತೆ ಜತನದಿಂದ ಇರಬೇಕಾದ ಅಸ್ಮಿತೆಯಂತೂ ಶಿಕ್ಷಕರಿಗೆ ಸದಾ ಇದೆ, ಮತ್ತು ಇರಲೇಬೇಕು.
ಶಿಕ್ಷಕ ವೃತ್ತಿಯ ಘನತೆಯನ್ನು ಶಿಕ್ಷಕರು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾದ ಕಾಲಘಟ್ಟದಲ್ಲಿ ನಿಂತು ಇಷ್ಟು ಮಾತುಗ ಳನ್ನು ಆಡಿದ್ದೇನೆ. ಈ ವೃತ್ತಿಗಿರುವ ಘನತೆ ಮತ್ತು ಪಾವಿತ್ರ್ಯ ಇನ್ನೂ ಚೂರಾದರೂ ಉಳಿದುಕೊಂಡಿದೆಯೆಂಬ ದೊಡ್ಡ ಔದಾರ್ಯದಲ್ಲಿ ಆಡಿಕೊಂಡ ಮಾತುಗಳಿವು.