Saturday, 14th December 2024

ಮೋದಿ 2.0 ಸಾಧನೆ ಮತ್ತು ಸವಾಲುಗಳು

ಅವಲೋಕನ

ಪ್ರಕಾಶ್‌ ಶೇಷರಾಘವಾಚಾರ್‌

ನರೇಂದ್ರ ಮೋದಿಯವರ ಸರಕಾರವು ಎರಡನೆಯ ಬಾರಿ ಅಧಿಕಾರಕ್ಕೆ ಬಂದು 2 ವರ್ಷವನ್ನು ಪೂರೈಸಿದೆ. ಈ ಅವಧಿಯಲ್ಲಿ ದಿಟ್ಟವಾದ ರಾಜಕೀಯ ನಿರ್ಣಯಗಳಿಗೆ ಮತ್ತು ಸುಧಾರಣೆಯ ಕ್ರಮಗಳಿಗೆ ಸುದ್ದಿಯಾದ ಹಾಗೆಯೇ ಗಂಭೀರ ಸವಾಲುಗಳನ್ನು ಸಹ ಸರಕಾರ ಎದುರಿಸಿದೆ.

ಪ್ರಮುಖವಾದ್ದು ಚೀನಾದಿಂದ ಆಮದಾದ ಕರೋನಾ ಸೋಂಕಿನ ವಿರುದ್ಧ ಹೋರಾಟ ಮತ್ತು ಕೃಷಿ ಸುಧಾರಣಾ ತಿದ್ದುಪಡಿ ಕಾಯಿದೆಗೆ ಕೆಲ ರೈತ ಸಂಘಟನೆಗಳ ಪ್ರಬಲ ವಿರೋಧ ಮತ್ತು ಪೌರತ್ವ ಕಾಯಿದೆಯ ವಿರುದ್ಧ ಅಲ್ಪಸಂಖ್ಯಾತ ಸಮುದಾಯ
ಕೈಗೊಂಡ ಹೋರಾಟ. ನರೇಂದ್ರ ಮೋದಿಯವರ 7 ವರ್ಷಗಳ ಆಡಳಿತದ ಲಾಭ ನಷ್ಟಗಳ ವಸ್ತುನಿಷ್ಠ ಮೌಲ್ಯಮಾಪನದ ಅಗತ್ಯವಿದೆ.

7 ವರ್ಷದಲ್ಲಿ ತಳಮಟ್ಟದ ಜನರಿಗೆ ಅನುಕೂಲ ಕಲ್ಪಿಸಲು ಕೈಗೊಂಡಿರುವ ನಾನಾ ಯೋಜನೆಗಳು ಹೇಗೆ ಅವರ ಜೀವನದಲ್ಲಿ ಪರಿವರ್ತನೆ ತಂದಿರುವುದು ಎಂಬುದು ಅಧ್ಯಯನವಾಗಬೇಕಿದೆ. ವಿಶೇಷವಾಗಿ ಎರಡನೆಯ ಅವಧಿಯಲ್ಲಿ ಕರೋನಾ ಹೊಡೆತದ ನಡುವೆಯೂ ಕೈಗೊಂಡಿರುವ ದಿಟ್ಟ ರಾಜಕೀಯ ನಿರ್ಧಾರಗಳು ಮತ್ತು ಮತದ ಲೆಕ್ಕಾಚಾರವನ್ನೂ ಮೀರಿದ ಜನಪರ ಕಾಳಜಿ ಯೇ ಮೇಲುಗೈ ಸಾಧಿಸಿರುವುದು ಮೋದಿಯವರ ಆಡಳಿತದ ವಿರ್ಮಶೆಗೆ ತಳಹದಿಯಾಗಬೇಕು.

ಮೋದಿಯವರ ಪ್ರತಿಯೊಂದು ಶಬ್ದ ಮತ್ತು ಹೆಜ್ಜೆಯು ಅವರ ಟೀಕಾಕಾರ ಅತ್ಯಂತ ಸೂಕ್ಷ್ಮ ಪರಿಶೀಲನೆಗೆ ಒಳಪಡುತ್ತದೆ. ಮೋದಿಯವರ ಪರಿಸ್ಥಿತಿಯನ್ನು ಬೇರಾವುದೇ ನಾಯಕರು ಎದುರಿಸಿದ್ದರೆ ಪ್ರಾಯಶಃ ಆಡಳಿತದಲ್ಲಿ ಅನಿಶ್ಚಿತತೆ ಉಂಟಾಗಿ ಅಭಿವೃದ್ಧಿಯ ರೇಖೆಯು ಪಾತಾಳದ ಹಾದಿ ಹಿಡಿದಿರುತ್ತಿತ್ತು. ಆದರೆ ಮೋದಿಯವರು ಬೆನ್ನ ಹಿಂದೆ ಬಿದ್ದವರ ಬಗ್ಗೆ ತಲೆಕೆಡಿಸಿ ಕೊಳ್ಳದೆ 130 ಕೋಟಿ ಭಾರತೀಯರ ಸೇವೆಯೇ ನನ್ನ ಗುರಿ ಎಂದು ಮುಂದೆ ಸಾಗಿದ್ದಾರೆ.

ನರೇಂದ್ರ ಮೋದಿಯವರು 2002ರಿಂದಲೂ ನಾನಾ ವಿಧವಾದ ಕಿರುಕುಳ ಮತ್ತು ಪ್ರತಿಕೂಲ ಮಾಧ್ಯಮವನ್ನು ಎದುರಿಸಿ ಕೊಂಡು ಬಂದವರು. ವಿರೋಧಿಗಳು ಇವರನ್ನು ಬಯ್ಯದಿರುವ ಶಬ್ದವೇ ಇಲ್ಲ. ಮುಖ್ಯಮಂತ್ರಿಯಾಗಿ 12 ವರ್ಷಗಳಲ್ಲಿ ಕಲಿತ ಅನುಭವದ ಪಾಠದ ಫಲವಾಗಿ ಕಳೆದ 7 ವರ್ಷದಲ್ಲಿ ತಮ್ಮ ವಿರೋಧಿಗಳಿಂದ ತೀವ್ರವಾದ ಸೂಕ್ಷ್ಮ ಪರಿಶೀಲನೆಗೆ ಒಳಪಟ್ಟಿದ್ದರೂ ಅದರಿಂದ ಧೃತಿಗೆಡದೆ ಕರ್ತವ್ಯಮುಖಿಯಾಗಿದ್ದಾರೆ.

ಎರಡನೆಯ ಅವಧಿಗೆ ಅಧಿಕಾರ ಬಂದ ಹತ್ತು ತಿಂಗಳಿಗೆ ದೇಶವು ಲಾಕ್‌ಡೌನ್ ಆಗುತ್ತದೆ. ಆರ್ಥಿಕ ಚಟುವಟಿಕೆ ಸ್ಥಗಿತವಾಗಿ ಸರಕಾರದ ಆದಾಯ ಮೂಲಗಳ ಬಾಗಿಲು ಮುಚ್ಚಲ್ಪಡುತ್ತದೆ. ಇಂಥ ಸಂದಿಗ್ಧ ಸಂದರ್ಭದಲ್ಲಿಯೂ 20 ಲಕ್ಷ ಕೋಟಿ ಆತ್ಮ ನಿರ್ಭರ ಪ್ಯಾಕೇಜ್ ಘೋಷಿಸಿ ದೇಶದ ಆರ್ಥಿಕ ಸ್ಥಿತಿಗೆ ಕಾಯಕಲ್ಪ ನೀಡಿದ ಸುಧಾರಣಾವಾದಿ ಮೋದಿಯವರು.

ಕೋವಿಡ್ ಮಹಾಮಾರಿಯ ಹೋರಾಟದಲ್ಲಿ ತಮ್ಮ ದೂರಗಾಮಿ ಚಿಂತನೆಯ ಆತ್ಮನಿರ್ಭರ ಭಾರತದ ಪರಿಕಲ್ಪನೆಯು ಸಂಕಷ್ಟದ ಸಂದರ್ಭವನ್ನು ಅನುಕೂಲಕರವಾಗಿ ಬದಲಾಯಿಸಿಕೊಂಡು ದೇಶೀಯ ಉತ್ಪಾದನೆಗೆ ಬಹುದೊಡ್ಡ ಉತ್ತೇಜನ ದೊರೆಯುವಂತೆ ಮಾಡಿದ ಕೀರ್ತಿ ಮತ್ತು ಜಾಣ್ಮೆ ಮೋದಿಯವರದು. ಪ್ರಪಂಚದಲ್ಲಿ ಕೇವಲ ಐದು ರಾಷ್ಟ್ರಗಳು ಮಾತ್ರ
ಕೋವಿಡ್ ಸೋಂಕಿಗೆ ಲಸಿಕೆಯನ್ನು ಕಂಡು ಹಿಡಿದಿರುವುದು ಅದರಲ್ಲಿ ಭಾರತವು ಒಂದು ಎಂಬುದು ಹೆಮ್ಮೆಯ ಸಂಗತಿ.

ಕರೋನಾ ಹೋರಾಟದಲ್ಲಿ ಸ್ವದೇಶಿ ವ್ಯಾಕ್ಸಿನ್ ಅಭಿವೃದ್ಧಿಯು ಮೋದಿ ಸರಕಾರದ ಮಹತ್ತರವಾದ ಸಾಧನೆಯಾಗಿದೆ. ಇದಲ್ಲದೆ ಮೋದಿಯವರ ಉತ್ತೇಜನದ ಫಲವಾಗಿ ಡಿ.ಆರ್ .ಡಿ.ಒ. 2-ಡಿಜಿ ಎಂಬ ಪುಡಿ ರೂಪದ ಔಷಧಿಯನ್ನು ಕೋವಿಡ್-19ಗೆ ಅಭಿವೃದ್ಧಿ ಪಡಿಸಿದೆ.

ಸೌಜನ್ಯದ ಗಡಿ ದಾಟಿರುವ ಮೋದಿ ವಿರೋಧಿಗಳ ವರ್ತನೆ, ಕೋವಿಡ್‌ನಂಥ ಗಂಭೀರ ಸಮಸ್ಯೆಯ ಸಂದರ್ಭದಲ್ಲಿಯೂ ಕನಿಷ್ಠ ಸಹಕಾರವು ನೀಡದ ಬಹುತೇಕ ವಿರೋಧ ಪಕ್ಷಗಳ ಕಟುವಾದ ನಿಲುವು ಮತ್ತು ದುರುದ್ದೇಶದಿಂದ ಕೂಡಿರುವ ಟೀಕೆಗಳನ್ನು ನಂಜನ್ನು ನುಂಗಿದ ನೀಲಕಂಠನ ಹಾಗೆ ನುಂಗಿಕೊಂಡು ಕರೋನಾ ಉಪಟಳದಿಂದ ದೇಶವನ್ನು ಕಾಪಾಡುವ ಕಾಯಕದಲ್ಲಿ
ತೊಡಗಿಸಿಕೊಂಡಿರುವ ಕರ್ಮಯೋಗಿ ಮೋದಿಯವರು.

ಮೋದಿಯವರಲ್ಲಿ ಅಡಕವಾಗಿರುವ ದೃಢವಾದ ನಾಯಕತ್ವದ ಗುಣ ಮತ್ತು ದೈವದತ್ತವಾಗಿ ಒಲಿದಿರುವ ದೂರದೃಷ್ಟಿಯ ಫಲವಾಗಿ ಬಂದಂಥ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಸಂಕಟದಲ್ಲಿಯೂ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಯಶಸ್ವಿ ನಾಯಕತ್ವ ನೀಡಿದ್ದಾರೆ. ಮನಮೋಹನ್ ಸಿಂಗ್‌ರವರಿಂದ ಮೋದಿ ಬಳುವಳಿಯಾಗಿ ಪಡೆದಿದ್ದು ಭ್ರಷ್ಟಾಚಾರ ಕೂಪ ದಲ್ಲಿ ಮುಳುಗಿದ್ದ ಆಡಳಿತ ಮತ್ತು ಚಿಂತಾಜನಕ ಸ್ಥಿತಿಯಲ್ಲಿದ್ದ ಆರ್ಥಿಕತೆಯನ್ನು.

ಕಳೆದ 7 ವರ್ಷದಲ್ಲಿ ಒಂದೇ ಒಂದು ಹಗರಣಕ್ಕೂ ಅವಕಾಶ ನೀಡದಂತೆ ಆಡಳಿತ ನೀಡಿರುವುದು ಮೋದಿ ಸರಕಾರದ ಬಹು ದೊಡ್ಡ ಸಾಧನೆ. ಮೋದಿ ಮುಗ್ಗರಿಸಲಿ ಎಂಬ ಕನವರಿಕೆಯಲ್ಲಿಯೇ ಸದಾ ಇರುವ ವಿರೋಧಿಗಳ ಬಾಯಿಗೆ ಅವರು ಆಹಾರ ವಾಗದೆ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ. ಸಂತ ಶಿಶುನಾಳ ಶರೀಫರು ಹೇಳಿದ ಹಾಗೆ ಸೋರುತಿಹುದು ಮನೆಯ ಮಾಳಿಗೆ ಎಂಬಂತೆ ತೆರಿಗೆ ಹಣವು ಅಂಕೆಯಿಲ್ಲದೆ ಸೋರಿ ಹೋಗುತ್ತಿತ್ತು.

ಮೋದಿಯವರು ಭಾಷಣದಿಂದ ಭ್ರಷ್ಟಚಾರ ನಿರ್ಮೂಲನೆ ಮಾಡಬಹುದು ಎಂಬ ಭ್ರಮೆಯಲ್ಲಿ ಇಲ್ಲದ ಕಾರಣ ಆಡಳಿತದಲ್ಲಿ ಡಿಜಿಟಲ್ ಪ್ರಪಂಚವನ್ನು ಅನಾವರಣ ಮಾಡಿ ಅನಾಯಾಸವಾಗಿ ಸಾವಿರಾರು ಕೋಟಿ ಸೋರುವುದನ್ನು ತಡೆದ ಕೀರ್ತಿಯು ಸರಕಾರಕ್ಕೆ ಸಲ್ಲುತ್ತದೆ. ಶತಮಾನಗಳಿಂದ ಪರಿಹಾರ ಕಾಣದೆ ಕಗ್ಗಂಟಾಗಿದ್ದ ಅಯೋಧ್ಯೆ ರಾಮಮಂದಿರ ವಿವಾದವು ನ್ಯಾಯಾ ಲಯದಲ್ಲಿ ಬಗೆಹರಿದು ಅದರ ಆದೇಶದನ್ವಯ ಟ್ರಸ್ಟ್ ರಚಿಸಿ ಮಂದಿರ ನಿರ್ಮಾಣಕ್ಕೆ ಚಾಲನೆಯು ದೊರೆತಿದೆ.

ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಿ ದೇಶದ ಮುಖ್ಯವಾಹಿನಿಗೆ ಸೇರ್ಪಡೆ ಮಾಡುವ ಐತಿಹಾಸಿಕ ಕ್ರಮ
ಕೈಗೊಳ್ಳಲಾಯಿತು. ಮೆಹಬೂಬಾ ಮುಫ್ತಿಯವರು 370ನೇ ವಿಧಿ ರದ್ದು ಮಾಡಿದರೆ ಕಾಶ್ಮೀರ ಹತ್ತಿ ಉರಿಯುತ್ತದೆ ಎಂದು
ಅಬ್ಬರಿಸಿದ್ದರು. ಆದರೆ ರದ್ದುಪಡಿಸಿದಾಗ ಕಾಶ್ಮೀರದ ಕಣಿವೆಯಲ್ಲಿ ಒಂದು ಚಿನಕುರುಳಿ ಪಟಾಕಿಯ ಸದ್ದು ಕೇಳಲಿಲ್ಲ.

ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್‌ನಿಂದ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ಅದನ್ನು ಕಾನೂನುಬಾಹಿರ ಮಾಡಿ ಅನಿಷ್ಠ ಪದ್ಧತಿಯೊಂದಕ್ಕೆ ಇತಿಶ್ರೀ ಹಾಡಲಾಯಿತು. ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗಿ ನೆರೆಯ ರಾಷ್ಟ್ರಗಳಿಂದ ಭಾರತಕ್ಕೆ ನಿರಾಶ್ರಿತರಾಗಿ ಬಂದು ನೆಲೆಸಿರುವ ಹಿಂದೂ, ಸಿಖ್ಖ್ ಮತ್ತು ಕ್ರಿಶ್ಚಿಯನ್‌ರಿಗೆ ಪೌರತ್ವ ನೀಡಲು ಪೌರತ್ವ ಕಾಯಿದೆಗೆ ತಿದ್ದುಪಡಿ ಯನ್ನು ತರಲಾಯಿತು. ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣವಾದ ‘ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆಯನ್ನು (ಯುಎಪಿಎ)’ ಜಾರಿಗೆ ತರಲಾಗಿದೆ.

ರಾಜಕೀಯ ಇಚ್ಛಾ ಶಕ್ತಿ ಇದ್ದರೆ ದಾರಿ ದುರ್ಗಮವಾದರೂ ಅದನ್ನು ಕ್ರಮಿಸಲು ಬೇಕಾಗಿರುವ ಎದೆಗಾರಿಕೆಯನ್ನು ತೋರಲು ಸರಕಾರವು ಹಿಂಜರಿಯುವುದಿಲ್ಲ ಎಂಬುದನ್ನು ಸಿದ್ದಪಡಿಸಿದೆ. ಮೋದಿಯವರು ದೇಶದ ಹಿತವನ್ನು ಕೇವಲ ರಾಜಕೀಯ ಲಾಭದ ದೃಷ್ಟಿಕೋನದಿಂದ ನೋಡುವ ಪರಿಪಾಠವಿಲ್ಲದ ನಾಯಕರಾಗಿ ವಿಜೃಂಭಿಸಿದ್ದಾರೆ. ಟೀಕಾಕಾರರಿಗೆ ದೇಶದ ಹಿತದೃಷ್ಟಿ ಯಿಂದ ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.

ಮೋದಿ 2.0ನ ಬಹುಮುಖ್ಯ ಸಾಧನೆಯೆಂದರೆ ಗ್ರಾಮೀಣ ಮಹಿಳೆಯರ ಪಾಲಿಗೆ ವರದಾನವಾಗುವ 3.4ಲಕ್ಷ ಕೋಟಿ ವೆಚ್ಚದಲ್ಲಿ ಗ್ರಾಮೀಣ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ನೀಡುವ ‘ಜಲ ಜೀವನ ಮಿಷನ್’ ಯೋಜನೆ. ಸ್ವಾತಂತ್ರ್ಯ ಬಂದ 68 ವರ್ಷ ಗಳಲ್ಲಿ ಮೂರು ಕೋಟಿ ಮನೆಯಲ್ಲಿ ಮಾತ್ರ ಕೊಳಾಯಿ ನೀರಿನ ಸಂಪರ್ಕ ಲಭ್ಯವಿತ್ತು.

ಆದರೆ ಕಳೆದ 18 ತಿಂಗಳಿನಲ್ಲಿ 7,44,00,866 ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ನೀಡಲಾಗಿದೆ. 2024ರೊಳಗೆ 20 ಕೋಟಿ ಗ್ರಾಮೀಣ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ನೀಡುವ ಗುರಿಯನ್ನು ಈ ಯೋಜನೆಯು ಹೊಂದಿರುವುದು. ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 10000 ರು. ಸಾಲ ಮತ್ತು ರಾಷ್ಟ್ರೀಯ ಸಣ್ಣ ವ್ಯಾಪಾರಿಗಳ ಮತ್ತು ಸ್ವಯಂ ಉದ್ಯೋಗಸ್ಥರ ಪಿಂಚಣಿ ಯೋಜನೆಯಲ್ಲಿ 60 ವರ್ಷ ದಾಟಿದವರಿಗೆ ಮಾಸಿಕ 3000 ಪಿಂಚಣಿ ನೀಡಲಾಗುತ್ತದೆ.

ಮೋದಿಯವರ ಆಡಳಿತದ ವಿಶೇಷತೆಯು ಅತಿ ದುರ್ಬಲ ವರ್ಗದವರಿಗೆ ಸೌಲಭ್ಯ ಮತ್ತು ಆರ್ಥಿಕ ಸವಲತ್ತು ನೀಡುವ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿರುವುದು. ಐದು ವರ್ಷಗಳಲ್ಲಿ ಡಿಜಿಟಲ್ ಪೇಮಂಟ್ 5 ಲಕ್ಷ ಕೋಟಿ ದಾಟಿ ವಿಶ್ವದಲ್ಲಿ ಭಾರತ ಮೊದಲನೆಯ ಸ್ಥಾನವನ್ನು ಆಕ್ರಮಿಸಿದೆ. ನೋಟು ಅಮಾನ್ಯೀಕರಣವನ್ನು ಮತ್ತು ಡಿಜಿಟಲ್ ಇಂಡಿಯಾ ಯೋಜನೆಯನ್ನು ಹಾಸ್ಯ ಮಾಡಿದವರಿಗೆ ಕಪಾಳಮೋಕ್ಷವಾಗಿದೆ. ಕಳೆದ ಎರಡು ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯು
ಅಭೂತಪೂರ್ವ ಸಾಧನೆ ಮಾಡಿರುವುದು.

2009ರಲ್ಲಿ ಪ್ರತಿದಿನ 5 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದರೆ 2021ರಲ್ಲಿ ಅದು 34ಕಿ.ಮೀ ತಲುಪಿದೆ.
ರೈಲ್ವೇ ಅಭಿವೃದ್ಧಿಯು ಹೊಸ ಮಜಲನ್ನು ಮುಟ್ಟಿದೆ. ಸರಕು ಸಾಗಣೆಗಾಗಿ ನಿರ್ಮಿಸುತ್ತಿರುವ ರೈಲ್ವೆ ಸರಕು ಕಾರಿಡಾರ್ ಯೋಜನೆ ಯಲ್ಲಿ 2843 ಕಿ.ಮೀ ಮಾರ್ಗದ ನಿರ್ಮಾಣ ಕಾರ್ಯ ಜಾರಿಯಲ್ಲಿದೆ. ಈಗಾಗಲೇ 657 ಕಿ.ಮೀ ಮಾರ್ಗ ಮುಕ್ತಾಯ ವಾಗಿ ರೈಲು ಸಂಚಾರ ಆರಂಭವಾಗಿದೆ ಇನ್ನೂ 400 ಕಿ.ಮೀ ಕಾರ್ಯಾಚರಣೆಗೆ ಸಿದ್ದವಾಗಿದೆ. 2022ರಲ್ಲಿ ದೇಶದ ಸ್ವಾತಂತ್ರೋತ್ಸವದ 75ನೇ ವರ್ಷಕ್ಕೆ ಪೂರ್ವ ಮತ್ತು ಪಶ್ಚಿಮ ಸರಕು ಸಾಗಣೆ ಕಾರಿಡಾರ್ ಸಿದ್ದವಾಗಲಿದೆ.

ಯೋಜನೆಯು ಪೂರ್ಣವಾದ ತರುವಾಯ ಸರಕು ಸಾಗಣೆಯ ಕ್ಷೇತ್ರದಲ್ಲಿ ಮಹತ್ತರವಾದ ಕ್ರಾಂತಿಯಾಗಲಿದೆ. ಹಾಗೆಯೇ,  2024ರೊಳಗೆ ದೇಶದ ಸಮಸ್ತ ರೈಲ್ವೆ ಮಾರ್ಗಗಳು ವಿದ್ಯುದ್ದೀಕರಣವಾಗಲಿದೆ ಈಗಾಗಲೇ ಶೇ.70ರಷ್ಟು ಪರಿವರ್ತನೆ ಯಾಗಿರುವುದು. ಮುಂದಿನ ದಿನಗಳ ಸವಾಲನ್ನು ಎದುರಿಸಿ ರೈತರ ಆದಾಯ ದುಪ್ಪಟ್ಟು ಮಾಡಲು ಕೃಷಿ ಕಾಯಿದೆಗೆ ಮೂರು
ತಿದ್ದುಪಡಿಗಳನ್ನು ತರಲಾಗಿದೆ. ತಪ್ಪು ಗ್ರಹಿಕೆಯಿಂದ ಪಂಜಾಬ್ ಮತ್ತು ಹರಿಯಾಣ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ.

ಆದರೆ ರೈತರ ಹಿತಾಸಕ್ತಿಯನ್ನು ಕಾಯಲು ತಂದಿರುವ ಈ ಸುಧಾರಣೆಯನ್ನು ಕೈಬಿಡಲು ಸರಕಾರ ಸುತರಾಂ ಸಿದ್ದವಿಲ್ಲದೆ ಸಮಸ್ಯೆಯು ಕಗ್ಗಂಟಾಗಿ ಕಾಯಿದೆಯ ವಿರುದ್ಧ ಸುದೀರ್ಘ ಹೋರಾಟವು ಇನ್ನೂ ಮುಂದುವರಿದಿದೆ. ತಮ್ಮ ಎರಡನೆಯ ಅವಧಿಯಲ್ಲಿ ಬಹುತೇಕ ಸಮಯ ಕೋವಿಡ್-19ರ ಹೋರಾಟಕ್ಕೆ ಮೀಸಲಾಗಿದ್ದರೂ ಸರಕಾರವು ಸುಧಾರಣೆ ಕೈಗೊಳ್ಳಲು ಮತ್ತು ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲು ಹಿಂದೆ ಸರಿಯದಿರುವುದು ಮೋದಿ 2.0ನ ಗಮನಾರ್ಹ ಸಾಧನೆಯಾಗಿದೆ.