Thursday, 14th November 2024

ಹಿಂದೆ ವಿವೇಕಾನಂದರು ಮಾಡಿದ ಕಾರ್ಯವನ್ನು ಈಗ ಮೋದಿ ಮಾಡುತ್ತಿದ್ದಾರೆ !

ದಾಸ್‌ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಇದು ಪರಮ ಅಸಹ್ಯ ಅಧಿಕಾರ ರಾಜಕಾರಣದ ಚರಮಸ್ಥಿತಿ! ದೇಶದಲ್ಲಿ ಏನೇ ಆದರೂ ಮೋದಿಯನ್ನು ನಿಂದಿಸಿ, ವಿಶ್ವಮಟ್ಟ ದಲ್ಲಿ ದೇಶದ ಮಾನ ಹರಾಜು ಮಾಡುತ್ತ ದಿನಬೆಳಗಾದರೆ ಸಾಕು, ಒಂದಲ್ಲ ಒಂದು ಸುಳ್ಳು ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದು ಈಗೀಗ ಚಟವಾಗಿ ಬಿಟ್ಟಿದೆ.

ದೇಶದ ಯಾವುದೋ ಮೂಲೆಯಲ್ಲಿ ಏನೋ ಆಯ್ತು ಅಂತಿಟ್ಟುಕೊಳ್ಳಿ. ಅದಕ್ಕೂ ಮೋದಿಗೂ ಏನು ಸಂಬಂಧವೋ ಆ ದೇವರೇ ಬಲ್ಲ! ಕಾರ್ಯಕಾರಣ ಸಂಬಂಧವನ್ನು ಬೆಸೆಯುವಾಗ ಒಂದು ಸಕಾರಣ ಮತ್ತು ಮೂಲಪ್ರಜ್ಞೆ ಇರಬೇಕಲ್ಲವೇ? ತಲೆಬುಡವಿಲ್ಲದ ನ ಲಾಯಕ್ಕುಗಳೂ ಮೋದಿ ಬಗ್ಗೆ ಆಡಿಕೊಳ್ತಾರೆ! ದೇಶದ ಭವಿಷ್ಯದ ಬಗ್ಗೆ ಜೀವಮಾನವಿಡೀ ಕನಸನ್ನು ಹೊತ್ತ ಒಬ್ಬ ಋಷಿಸದೃಶ
ಸಾಧಕ ನಮಗೆ ಪ್ರಧಾನಿಯಾಗಿ ಸಿಕ್ಕಿದ್ದಾರೆಂದು ಅಭಿಮಾನ ಪಡಬೇಕು, ಹೆಮ್ಮೆ ಪಡಬೇಕು.

ಟೀಕೆ, ವಿರೋಧ ಏನೇ ಮಾಡಬೇಕಿದ್ದರೂ ಕೊನೆಯ ಪಕ್ಷ ಒಳ್ಳೆಯ ಭಾಷೆಯದರೂ ಮಾಡಬೇಕು. ಅದನ್ನು ಬಿಟ್ಕೊಂಡು ಥರ್ಡ್ ಕ್ಲಾಸ್ ಭಾಷೆಯಲ್ಲಿ ಪ್ರಧಾನಿಯನ್ನು ನಿಂದಿಸುವುದು ಯಾವಕಾಲಕ್ಕೂ ದೇಶಕ್ಕೆ ಶೋಭೆಯಲ್ಲ! ಒಬ್ಬ ಪಂಚಾಯತ್ ಅಧ್ಯಕ್ಷನಿಗೇ ಊರನ್ನು ಸಂಭಾಳಿಸೋಕೆ ಆಗಲ್ಲ. ಮೀಟಿಂಗ್ ಕರೆದರೆ ತಲೆಗೊಂದರಂತೆ ಮಾತಾಡುತ್ತಾರೆ ಸದಸ್ಯರು. ಮತ್ತು ಊರ ನಾಗರಿಕರು. ಅಧ್ಯಕ್ಷನಾದವನು ಯಾವ ಕ್ರಮವನ್ನೋ, ಪರಿಹಾರವನ್ನೋ ತಗೊಂಡರೂ ಒಂದಿಷ್ಟು ಜನರಿಗೆ ಅದು ಒಪ್ಪಿಗೆಯಾಗೋದಿಲ್ಲ.

ಆಮೇಲೆ ಭಿನ್ನಾಭಿಪ್ರಾಯ ಸುರುವಾಗಿ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಕೊನೆಗದು ಯಾವ್ಯಾವುದೋ ರೂಪದಲ್ಲಿ ಅಂತ್ಯ ಕಾಣುತ್ತದೆ. ಒಬ್ಬರಿಗೆ ಒಳ್ಳೆಯದನ್ನು ಮಾಡಲು ಮುಂದಾದರೆ ಇನ್ಯಾರಿಗೋ ಕೆಟ್ಟದಾಗೇ ಅಗುತ್ತದೆ. ಇದು ಸಹಜ ತಾನೆ? ಒಂದು
ಮನೆಯಲ್ಲಿ ಇರುವ ಇಬ್ಬರು ಮಕ್ಕಳನ್ನೇ ಸಮಾಧಾನಪಡಿಸೋಕೆ ಹೆತ್ತವರಿಗಾಗುವುದಿಲ್ಲ. ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆಳೆಯಿತು ಅಂದಹಾಗೆ ಮಗಳೊಂದು ಥರ, ಮಗನೊಂದು ಥರ! ಇಬ್ಬರೂ ಹೆಣ್ಣಾದರೆ ಕತೆಯೇ ಬೇರೆ!

ಗಂಡಾದರಂತೂ ಕೇಳೋದೇ ಬೇಡ ಎಂಬಂಥ ಸ್ಥಿತಿ ಹಲವು ಪೋಷಕರದ್ದು! ಇರುವ ಇಬ್ಬರನ್ನೇ ನಿರ್ವಹಣೆ  ಮಾಡಲು ಆಗದೆ ತಲೆಮೇಲೆ ಕೈ ಹೊತ್ತು ಕೂತ್ಕೊಂಡವರು ಅದೆಷ್ಟಿಲ್ಲ ಹೇಳಿ? ಕೊನೆಗೆ ಅವರವರ ಹಣೆಬರೆಹದಂತೆ ಆಗುತ್ತೆ, ನಾವೇನು ಮಾಡಲು ಸಾಧ್ಯ ಎಂದು ತಟಸ್ಥರಾಗುವುದಿಲ್ಲವೆ? ಗಂಗೆಯಲ್ಲಿ ಹೆಣಗಳು ತೇಲಿಕೊಂಡು ಬರಲು ಕಾರಣ ಮೋದಿಯೆಂದೂ, ಮೋದಿಯನ್ನು ಗುರಿಯಾಗಿಸುವ ಮೂರ್ಖ ಶಿಖಾಮಣಿಗಳಿಗೆ ಏನು ಹೇಳಬೇಕು? ಎಂಥದ್ದೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದರೂ ರೇಪ್, ಮರ್ಡರ್, ಅಸ್ಪೃಶ್ಯತೆ, ಸುಲಿಗೆ, ದೌರ್ಜನ್ಯ, ವರದಕ್ಷಿಣೆ, ಭ್ರಷ್ಟಾಚಾರ, ಜಾತಿನಿಂದನೆ ನಿಂತಿವೆಯೇ? ಕರೋನಾ ಭಾರತಕ್ಕೆ ಬಂದು ಸೃಷ್ಟಿಸಿದ ಅವಾಂತರವನ್ನು ಮೋದಿ ಪರಿಹರಿಸಲು ಶ್ರಮಿಸುತ್ತಿರುವುದು ಕಣ್ಣುಕುರುಡರಾದವರಿಗೆ ಕಾಣಿಸುವುದಾದರೂ ಹೇಗೆ? ಬದುಕಿರುವವರೆಗೂ ಮೋದಿಯನ್ನು ಆಡಿಕೊಳ್ಳುವುದು ಅಂತ ಕೆಲವರು ಈಗಾಗಲೇ ನಿಶ್ಚಯಿಸಿ ಆಗಿದೆ.

ಅವರಿಗೆ ಇಂಥದ್ದೇ ವಿಷಯ, ವಿಚಾರ ಅಂತಿಲ್ಲ, ಯಾವುದೇ ವಿಷಯ, ವಿಚಾರವಾದರೂ ಮೋದಿಯನ್ನು ಎಳೆದುತಂದು ಸಂಪರ್ಕ ಸೇತುವೆ ನಿರ್ಮಿಸಿ ಸಂಬಂಧ ಕಟ್ಟಿ ಅವಹೇಳನ ಮಾಡುವುದು, ಆರೋಪಿಸುವುದು ನಿರಂತರವಾಗಿ ಸಾಗುತ್ತಿದೆ.
ಸರಿಹೊತ್ತಿನ ರಾಜಕಾರಣದಲ್ಲಿ ಮತ್ತು ಸಮಕಾಲೀನ ಭಾರತದ ರಾಜಕಾರಣದಲ್ಲಿ ಮೋದಿಯ ಪ್ರಾಮುಖ್ಯತೆಯನ್ನು ಹೇಳುವಾಗ ದುರಾಗ್ರಹಗಳನ್ನು ಹೇಳದೇ ಹೋಗಲು ಸಾಧ್ಯವಾಗದಂತೆ ಮೋದಿಯ ಸುತ್ತ ಒಂದು ಪ್ರಭೆಯನ್ನು ಈಗಾಗಲೇ ಕಟ್ಟಿಕೊಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ನಡೆಯುತ್ತಿದೆಯೆನ್ನಿ. ಮೋದಿಯೇ ಒಂದು ಇತಿಹಾಸವಾಗುವುದಕ್ಕೆ ಸಾಧ್ಯವಿಲ್ಲ, ಕೊನೆಗೂ ಮೋದಿ ಈ ದೇಶದ ಇತಿಹಾಸದಲ್ಲಿ ಸೇರಲೇಬೇಕು ಎಂಬುದು ಸತ್ಯವಾದರೂ ಈ ಪರಿಯಲ್ಲಿ ಮೋದಿಯನ್ನು ವಿರೋಧಿಸುವ ಪ್ರಯತ್ನ ಕೊನೆಯಲ್ಲಿ ದೇಶದ ಮರ್ಯಾದೆ ಯನ್ನು ಮೂರುಕಾಸಿಗೆ ಅಡವಿಟ್ಟಂತೆ ಆಗುತ್ತದೆಂಬುದು ಅಷ್ಟು ಸುಲಭವಾಗಿ ಅರ್ಥವಾಗಲಾರದು.

ಇಷ್ಟಾದರೂ ಇಂಥ ನ ಲಾಯಕ್ಕುಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಕೆಲಸವನ್ನು ಮೋದಿ ಮಾಡಲಿಲ್ಲ. ಇಂದಿರಾ ಗಾಂಽ ತುರ್ತು ಪರಿಸ್ಥಿತಿಯಲ್ಲಿ ಹೇರಿದಂತೆ ಮೋದಿ ನಿಯಂತ್ರಣವನ್ನು ಹೇರಲಿಲ್ಲ. ಕಾರಣ ಆ ಧೋರಣೆ ಮೋದಿಯವರಲ್ಲಿ ಇಲ್ಲವೆಂದೇ ಹೇಳಬೇಕು. ಮೋದಿಯಲ್ಲಿ ದೌರ್ಬಲ್ಯಗಳು ವೈಯಕ್ತಿಕವಾದ ನೆಲೆಯಲ್ಲಿ ಕಾಣಿಸುವುದಿಲ್ಲ. ಆದರೆ, ರಾಜಕಾರಣ ಮತ್ತು ಅಧಿಕಾರ ನಿರ್ವಹಣೆಯಲ್ಲಿ ಕಾಣುವ ದೌರ್ಬಲ್ಯ ಸರಿಹೊತ್ತಿನಲ್ಲಿ ಸರಿಯೆನಿಸಿದರೂ ದೂರಾಲೋಚನೆಯಲ್ಲಿ ತಪ್ಪಾಗಿ
ಕಾಣಲಾರದು.

ಮೋದಿ ಮಾಡಿದ್ದೆಲ್ಲವೂ ಸರಿಯೆಂದು ಒಪ್ಪಬೇಕಾಗಿಲ್ಲ. ಎಲ್ಲ ಪ್ರಧಾನಿಗಳಂತೆ ಮೋದಿಯೂ ಪ್ರಶ್ನಾರ್ಹರೇ. ಸಂಶಯವೇ ಇಲ್ಲ. ಆದ್ದರಿಂದ ಮೋದಿ ಯನ್ನು ಪ್ರಶ್ನಿಸುವುದರಲ್ಲಿ ತಪ್ಪೇನಿಲ್ಲ. ಪ್ರಜಾಪ್ರಭುತ್ವದಲ್ಲಿ ಸಮರ್ಥವಾದ ವಿರೋಧವಿದ್ದರೆ ಮಾತ್ರ ಜನತೆ ಉತ್ತಮ ಸರಕಾರವನ್ನು ಪಡೆಯಲು ಸಾಧ್ಯ. ಆದರೆ ವಿರೋಧಕ್ಕೂ ಒಂದು ಪ್ರಜಾಪ್ರಭುತ್ವದ್ದೇ ಆದ ಮಾರ್ಗವಿದೆಯಲ್ಲವೆ?
ರೀತಿ – ನೀತಿಗಳಿಲ್ಲವೆ? ಕೇವಲ ದಾರಿ ತಪ್ಪಿಸುವುದೇ ಉದ್ದೇಶವಾದರೆ ಏನು ಮಾಡುವುದಕ್ಕೆ ಸಾಧ್ಯ? ಅದರಿಂದ ಏನು ಸಾಧನೆ ಯಾಗುತ್ತದೆ? ಚರಿತ್ರೆಯನ್ನು ಅವಲೋಕಿಸಿದರೆ ವೇದ್ಯವಾಗುತ್ತದೆ.

ನೆನಪಿಸಿಕೊಳ್ಳಿ: ಹಿಂದೊಮ್ಮೆ ಮನಮೋಹನ್ ಸಿಂಗರು ಅಮೆರಿಕದ ಅಧ್ಯಕ್ಷರು ಹೇಳಿದ್ದಕ್ಕೆಲ್ಲ ಸಹಿ ಮಾಡಿದ್ದರು. ಅದಕ್ಕೂ ಕೆಲವು ತಿಂಗಳು ಮೊದಲು ಅಂದಿನ ರಕ್ಷಣಾ ಸಚಿವರು ವಿಶ್ವಶಾಂತಿಗೆ ಆಪತ್ತಿದೆ ಎಂದು ಭಾವಿಸಿದಾಗ ಭಾರತದ ಸೇನೆಯನ್ನು ಹೋರಾಟಕ್ಕೆ ಕಳಿಸುವ ಒಪ್ಪಂದಕ್ಕೆ ಸಹಿ ಮಾಡಿ ಬಂದಿದ್ದರು.

ವಾಜಪೇಯಿ ಸರಕಾರದ ಅವಧಿಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯ ಆಯಕಟ್ಟಿನ ಸ್ಥಳಗಳನ್ನೆಲ್ಲ ಅಮೆರಿಕನ್ನರಿಗೆ ಪರಿಚಯ
ಮಾಡಿಕೊಳ್ಳಲು ಅವಕಾಶ ಕೊಡಲಾಗಿತ್ತು. ದಿ. ನರಸಿಂಹ ರಾವ್ ಕಾಲದಲ್ಲಿ ಅರ್ಥವ್ಯವಸ್ಥೆಯನ್ನು ಗುಲಾಮಗಿರಿಗೆ ತಳ್ಳುವ ಒಡಂಬಡಿಕೆಗಳಿಗೆ ಸಹಿ ಮಾಡಲಾಗಿತ್ತು. ದೇಶದ ಆತ್ಮಗೌರವಕ್ಕೆ ಧಕ್ಕೆ ತರುವಂಥ ತಪ್ಪುಗಳನ್ನು ಕಾಂಗ್ರೆಸ್ಸು ಮಾಡಿದೆ ಎಂದೇ ಮೋದಿ ನೇತೃತ್ವದ ಎನ್‌ಡಿಎಯನ್ನು ಜನತೆ ಆರಿಸಿದ್ದು. ಈಗ ಮೋದಿಯನ್ನೂ ಹಿಂದಿನಂತೆಯೇ ವಿರೋಧಿಸುತ್ತ (ವಿರೋಧಿಸ ಬೇಕಾದುದನ್ನು ವಿರೋಧಿಸಲೇಬೇಕು. ಎಲ್ಲದಕ್ಕೂ ವಿರೋಧಿಸುವುದು ದೇಶಕ್ಕೆ ಹಿತವಲ್ಲ) ಹೋದರೆ ಈ ದೇಶ ಭವಿಷ್ಯದಲ್ಲಿ ಏನಾಗಬಹುದು? ಹಾಗಂತ ಮೋದಿಯಿಂದ ತಪ್ಪೇ ಆಗಲಿಲ್ಲ ಎನ್ನುವುದನ್ನು ಬಿಡಲಾಗದು!

ಅಷ್ಟಕ್ಕೂ ಮೋದಿಯಿಂದ ಆದ ಪ್ರಮಾದಗಳನ್ನು ಪಟ್ಟಿಮಾಡಿ ಹೇಳಿ ಎಂದರೂ ಉತ್ತರವಿಲ್ಲ. Of course ಎಲ್ಲ ಪ್ರಮಾದ ಗಳನ್ನು ಮೋದಿ ಮೇಲೆ ಹೊರಿಸಲಾಗದು. ದೇಶದಲ್ಲಿ ಎಲ್ಲಿ ಏನೇ ಆದರೂ ಎಲ್ಲವನ್ನೂ ನಿಯಂತ್ರಿಸುವುದು ಮತ್ತು ನಿರ್ವಹಿಸು ವುದು ಮೋದಿಯ ಕಾರ್ಯಕ್ಷೇತ್ರಕ್ಕೆ ಒಳಪಡುತ್ತದೆಯೇ? ಇದು ಫೆಡರಲ್ ಸಿಸ್ಟೆಮ್ಮಿನ ಪ್ರಜಾಪ್ರಭುತ್ವ ವ್ಯವಸ್ಥೆ. ರಾಜ್ಯಗಳ ಸಾರ್ವಭೌಮತ್ವವನ್ನು ಕಾಪಾಡುವ ಜವಾಬ್ದಾರಿ ಕೇಂದ್ರಕ್ಕಿರುತ್ತದೆ. ಆದ್ದರಿಂದ ಮೋದಿ ಯನ್ನು ಆರೋಪಿಸುವ, ವಿರೋಧಿಸುವ ಮೊದಲು ಈ ಸಿಸ್ಟೆಮ್ ಮೊದಲು ಅರ್ಥವಾಗಬೇಕು. ನೋಟ್ ಬ್ಯಾನ್, ಜಿಎಸ್ ಟಿ, ಬೆಲೆಯೇರಿಕೆ – ಇವುಗಳೆಲ್ಲ ಮೇಲ್ನೋಟಕ್ಕೆ ಮೋದಿ ಸರಕಾರದ ವೈಫಲ್ಯವಿದೆ ಆರೋಪಿಸಬಹುದು.

ಆದರೆ ಭಾರತದಂಥ ಬಹುಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಎಲ್ಲವನ್ನೂ ಎಲ್ಲರನ್ನೂ ಪ್ರಧಾನಿಯೇ ನಿಭಾಯಿ ಸೋದು ಅಂದುಕೊಂಡಷ್ಟು ಸುಲಭವಲ್ಲ. ಹಾಗೆ ನಿರೀಕ್ಷಿಸುವುದೂ ಸರಿಯಲ್ಲ. ಜನಪರ ಯೋಜನೆಗಳನ್ನು ಮೋದಿ ಕೊಡಬೇಕು. ಪುಕ್ಕಟೆಯಾಗಿಯೋ ಕಡಿಮೆ ಬೆಲೆಗೋ ವಸ್ತುಗಳನ್ನು ಒದಗಿಸಬೇಕು. ಆದರೆ, ಯಾವುದರ ಬೆಲೆಯನ್ನೂ ಏರಿಸ ಬಾರದು ಎಂದರೆ ಹೇಗೆ? ಈಗ ಜನರು ಹೆಚ್ಚೆಚ್ಚು ಬುದ್ಧಿವಂತರಾಗಿದ್ದಾರೆ. ವಿಚಾರವಂತರಾಗಿದ್ದಾರೆ.

ರಾಜಕಾರಣದ ಎಳೆಯನ್ನು ಹಿಡಿದು ಮಾತಾಡುವ ಕೌಶಲವನ್ನು ಬೆಳೆಸಿಕೊಂಡಿದ್ದಾರೆ. ಮೊದಲೆಲ್ಲ ಜನರಲ್ಲಿ ರಾಜಕಾರಣದ ಗಂಧಗಾಳಿಯೂ ಇಲ್ಲದ ಸಂದರ್ಭದಲ್ಲಿ ಸರಕಾರಗಳು ಯಾವುದೇ ಯೋಜನೆ, ನೀತಿ – ನಿಯಮ, ಕಾಯ್ದೆಗಳನ್ನು ಜಾರಿಗೆ ತಂದರೂ ವಿರೋಧಗಳು, ಆರೋಪಗಳು ಉನ್ನತ ಮಟ್ಟದಲ್ಲಿ ನಡೆಯುತ್ತಿತ್ತೇ ವಿನಾ ಕೆಳಮಟ್ಟದಲ್ಲಿ ಯಾವ ಸಂಚಲನವೂ
ಹುಟ್ಟುತ್ತಿರಲಿಲ್ಲ.

ಒಬ್ಬ ಭ್ರಷ್ಟ ಜನಪ್ರನಿಧಿಯೂ ಮತ್ತೆ ಮತ್ತೆ ಮೂರ್ನಾಕು ಬಾರಿ ಗೆಲ್ಲಲು ಸಹಾಯವಾಗುವಂಥ ಪರಿಸ್ಥಿತಿಯಿತ್ತು. ಈಗ ಹಾಗಲ್ಲ, ಹಾಗೂ ಇಲ್ಲ. ಪ್ರಧಾನಿಯನ್ನು ಯಾರೂ ಟ್ರೋಲ್ ಮಾಡಬಹುದು, ಜರೆಯಬಹುದು, ಆರೋಪಿಸಬಹುದು, ಆಕ್ಷೇಪಿಸ
ಬಹುದು, ಪ್ರಶ್ನಿಸಬಹುದು. ತಲೆಬುಡವಿಲ್ಲದೆ ಮಾತಾಡಬಹುದು. ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರಗಳ ಸಾಮಾನ್ಯ ಅರಿವೂ ಇಲ್ಲದೆ ಬಾಯಿಗೆ ಬಂದ ಹಾಗೆ ಬಡಕಾಯಿಸಹುದು.

ಹಾದಿಬದಿಯಲ್ಲಿ ನಿಂತು ಮೋದಿಗೆ ಸಲಹೆ ಸೂಚನೆಯನ್ನು ಕೊಡುವಷ್ಟು ಅಥವಾ ವಿರೋಧಿಸುವಷ್ಟು ಜನ ಈಗ ತಯಾರಾಗಿ ದ್ದಾರೆ. ಇದು ದೇಶವ್ಯಾಪಿ ಮೋದಿ ಹುಟ್ಟಿಸಿದ ಸಂಚಲನ. ಒಬ್ಬ ಸಮರ್ಥ ನಾಯಕನಿಂದ ಮಾತ್ರ ಇದು ಸಾಧ್ಯ! ಮೀಡಿಯಾಗಳು ಮಿತಿಮೀರಿ ಬೆಳೆದುನಿಂತ ಈ ಸರಿಹೊತ್ತಿನಲ್ಲಿ ಮೋದಿ ಹೇಗೆ ನಡೆದುಕೊಂಡರೂ ತಪ್ಪು ಹುಡುಕುವುದು ಸಾಮಾನ್ಯ! ಅಂತೆಯೇ ಹೊಗಳುವುದೂ ಸಾಧ್ಯ! ಮೋದಿಯ ಭಾರತವನ್ನು ಜಗತ್ತು ಗುರುತಿಸುವ ಪರಿಯೇ ಈ ಏಳು ವರ್ಷಗಳಲ್ಲಿ ಬದಲಾಗಿದೆ. ಇದು ಉತ್ಪ್ರೇಕ್ಷೆಯ ಮಾತಲ್ಲ. ಹಿಂದೆ ಅಮೆರಿಕದ ಅಧ್ಯಕ್ಷರು ಇಂದಿರಾಗಾಂಧಿಯನ್ನು ಮಾಟಗಾತಿಯೆಂದೂ, ಭಾರತೀಯರನ್ನು ಬಲಹೀನರೆಂದೂ ನಿಂದಿಸಿದ್ದಿದೆ.

ಆಮೇಲೆ, ಮನಮೋಹನ್ ಸಿಂಗರ ಕಾಲದಲ್ಲಿ ಭಾರತೀಯರ ತುಂಬಾ ಒಳ್ಳೆಯವರು, ನಾವು ಹೇಳಿದಂತೆ ಕೇಳುತ್ತಾರೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದಿದೆ. ಈಗ ಪರಿಸ್ಥಿತಿ ಬದಲಾಗಿದೆ. ಮೊದಲಿನಂತಿಲ್ಲ. ಕಾರಣ ಸುಸ್ಪಷ್ಟವಾಗಿ ಎದುರೇ ಇದೆ. ಭಾರತದ ಆತ್ಮಗೌರವವನ್ನೂ ಪುರಸ್ಕರಿಸುವ ಹಲವು ರಾಷ್ಟ್ರಗಳ ಸ್ನೇಹವೂ ಭಾರತಕ್ಕೆ ಹೆಚ್ಚು ಹೆಚ್ಚು ದಕ್ಕುತ್ತಿದೆ, ಆತ್ಮಗೌರವವೇನು ದೇಶವನ್ನೇ ತಿಂದು ತೇಗಿಬಿಟ್ಟೇನು ಎಂದು ವರ್ತಿಸುವ ಚೀನಾ, ಪಾಕಿಸ್ತಾನದ ಕೆಟ್ಟ ಸ್ನೇಹವೂ ಹೊರಜಗತ್ತಿಗೆ ಕಾಣುವಂತೆ ಭಾರತ ಮಾಡಿ ತೋರಿಸಿದೆ.

ಚೀನಾ, ಪಾಕಿಸ್ತಾನದಂಥ ದೇಶಗಳು ಯಾವತ್ತೂ ನಮ್ಮ ದೇಶವನ್ನು ನಿಂದಿಸುವುದಕ್ಕಾಗಿ, ಕೇಡು ಬಯಸುವುದಕ್ಕಾಗಿ ಕಾಯು ತ್ತಲೇ ಇರುವಂತೆ ಮಾಡಿದ್ದೂ ಮೋದಿಯ ಸಾಧನೆಯೇ ಅಲ್ಲವೆ? ಅಂಥ ಗಟ್ಟಿತನ ಇಂದಿರಾ ಗಾಂಧಿಗಿತ್ತು, ಈಗ ಮೋದಿ ಯಲ್ಲಿ ಹೆಚ್ಚು ಪ್ರಕಟವಾಗುತ್ತಿದೆ.  ಬಡವರ ಓಟು ಕಾಂಗ್ರೆಸ್ಸಿಗೆ ಎನ್ನುವ ಮಾತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗರ ಬಾಯಿಂದ ಒಮ್ಮೆ ಬಂದಿತ್ತು. ಇದರ ಅರ್ಥವನ್ನು ಸೂಕ್ಷ್ಮವಾಗಿ ಗ್ರಹಿಸಿನೋಡಿ.

ಕಾಂಗ್ರೆಸ್ ಈ ದೇಶವನ್ನು ಬಹುಕಾಲ ಆಳಿದ್ದರ ಹಿಂದೆ ನೆಹರೂ, ಇಂದಿರಾರ ವರ್ಚಸ್ಸು ದಟ್ಟವಾಗಿತ್ತು. ಅಷ್ಟು ವರ್ಷ ಆಳಲು ಅವರಿಗೆ ಕೊಟ್ಟ ಅವಕಾಶವನ್ನು ಬಿಜೆಪಿಯ ಮೋದಿಗೂ ಕೊಡಬೇಕಲ್ಲವೆ? ಅದ್ಯಾಕೆ, ಬೆಳಗಾಗುವುದರೊಳಗಾಗಿ ಎಲ್ಲವೂ ಸರಿಯಾಗಿ ಬಿಡಬೇಕೆಂಬ ದುರಾಗ್ರಹ ಮೋದಿಯ ಮೇಲೆ? ಈ ದುರಾಗ್ರಹ ಇಷ್ಟು ವರ್ಷ ಎಲ್ಲಿಹೋಗಿತ್ತು? ಇಂದಿರಾಗಾಂಧಿ
ಕಾಲದ ಯೋಜನೆಗಳು, ಹಲವು ನಿರ್ಧಾರಗಳು ಬಡವರ ಪರವಾಗಿತ್ತು.

ಹಾಗೆಯೇ ಅವುಗಳಲ್ಲಿ ದುಷ್ಪರಿಣಾಮಗಳೂ ಇದ್ದವು. ಮತ್ತು ಅವು ಟೀಕೆಗೂ ಒಳಗಾಗಿದ್ದವು. ಮೋದಿಯ ಕಾಲದಲ್ಲೂ ಹೀಗೆಯೇ ಆಗುತ್ತಿದೆ. ಕಿಸಾನ್ ತಿದ್ದುಪಡಿ ಕಾಯಿದೆಯ ವಿರುದ್ಧದ ಹೋರಾಟಗಳು ಇದಕ್ಕೆ ಸಾಕ್ಷಿ. ಈಗಂತೂ ಪೆಟ್ರೋಲ್, ಡೀಸೆಲ್, ಗೊಬ್ಬರ, ಅಡುಗೆ ಎಣ್ಣೆ, ಇತ್ಯಾದಿ ವಸ್ತುಗಳ ಬೆಲೆಯೇರಿಕೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಈಗ ಟೀಕೆ ಮತ್ತು ವಿರೋಧಗಳ ಪ್ರಮಾಣ
ಆಗಿನ ಕಾಲಕ್ಕಿಂತಲೂ ಹೆಚ್ಚು ಪ್ರಖರವಾಗಿ ಪ್ರಕಟವಾಗುತ್ತಿದೆ.

ಇವುಗಳಿಗೆ ಬೇಗ ಪ್ರಚಾರವೂ ಸಿಕ್ಕಿ ಅದಕ್ಕೆ ಕೈ, ಕಾಲು, ಬಾಲ, ಪುಕ್ಕಗಳು ಹುಟ್ಟಿಕೊಳ್ಳುತ್ತವೆ. ಕಾರಣ ಅಭಿವೃದ್ಧಿ ಹೊಂದಿದ
ಟೆಕ್ನಾಲಜಿ ಪರಿಣಾಮದಿಂದ! ಖಚಿತ ಸಿದ್ಧಾಂತವನ್ನು ಇಟ್ಟುಕೊಂಡು ದೇಶವನ್ನು ನಡೆಸುವುದು ಸುಲಭ ಸಾಧ್ಯವಲ್ಲ ಎಂಬು ದನ್ನು ಸರಿಯಾಗಿ ಅರ್ಥಮಾಡಿಕೊಂಡ ಪಕ್ಷ ಇದ್ದರೆ ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ಸಿಗೆ ಇರುವಷ್ಟು flexibility ಬಿಜೆಪಿಗಿಲ್ಲ ಎಂದೇ ಅನಿಸುತ್ತದೆ. ಕಾಂಗ್ರೆಸ್ಸಿಗೆ ಬಿಜೆಪಿಯ ಗುಣವಿದೆ. ಕಮ್ಯುನಿಸ್ಟ್ ಗುಣವಿದೆ. ಸರ್ವಾಧಿಕಾರದ ಗುಣವೂ ಇದೆ. ತುರ್ತು ಪರಿಸ್ಥಿತಿ ಈ ಗುಣವನ್ನು ಕಾಂಗ್ರೆಸ್ಸಿನಲ್ಲಿ ಬೆಳಸಿತೇನೋ!

ಆದರೆ ಬಿಜೆಪಿಯಲ್ಲಿ ರಾಷ್ಟ್ರೀಯತೆ ಮತ್ತು ಹಿಂದುತ್ವದ ನಿಲುವು ಮಾತ್ರ ಕಾಣುತ್ತದೆ. ಹಾಗಂತ ಪ್ರಖರ ರಾಷ್ಟ್ರೀಯತೆಯಾಗಿ ಹಿಂದುತ್ವವನ್ನು ಸ್ಥಾಪಿಸಲು ಸಾಧ್ಯ ವಾಗುವುದಿಲ್ಲ ಎಂಬುದು ಅದಕ್ಕೆ ಅರಿವಾಗಿದೆ. ಕಾರಣ ಕಾಂಗ್ರೆಸ್ ತುರ್ತುಸ್ಥಿತಿಯ ಅನಂತರ ಕಲಿತ ಪಾಠವನ್ನು ಈ ಏಳು ವರ್ಷಗಳಲ್ಲಿ ಬಿಜೆಪಿ ಕಲಿತಿದೆ. ಆದರೂ ಜನತಾಂತ್ರಿಕತೆಯ ಸಾಮರ್ಥ್ಯದ ಅರಿವು ಆಳುಗರಿಗೆ ಈಗ
ಮೊದಲಿಗಿಂತಲೂ ಹೆಚ್ಚು ಪ್ರಖರವಾಗುತ್ತಿದೆ. ಮೋದಿಯ ಸಮರ್ಥತೆಯ ಬಗ್ಗೆ ಯಾವ ಅನುಮಾನವೂ ಇಲ್ಲ. ಆದರೆ ಮೋದಿ ಯಂತೆ ಬಿಜೆಪಿಯ ಎಲ್ಲ ನಾಯಕರೂ ಇಲ್ಲವೆಂಬುದು ಅಪ್ರಿಯ ಸತ್ಯವಾದರೂ ಒಪ್ಪಲೇಬೇಕು.

ದೇಶದ ಸಾಂಸ್ಕೃತಿಕ – ಆರ್ಥಿಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದರೆ ದೇಶೀಯ ಸಾಂಸ್ಕೃತಿಕ ನೆಲೆಗಳು ಶಕ್ತಿಯುತವಾಗಿರ ಬೇಕು. ಅಂಥ ಶಕ್ತಿಯನ್ನು ಮೋದಿಯಂಥ  ಯಕರು ಮಾತ್ರ ಶಾಕ್ ಕೊಟ್ಟು ತರಬಲ್ಲವರು. ಈ ಶಾಕ್ ಎಂಬುದು ದೇಶದ ಆತ್ಮ ವಿಸ್ಮೃತಿಯನ್ನು ಬಡಿದೆಬ್ಬಿಸುತ್ತದೆ. ದೇಶವಾಸಿಗಳ ಹೃದಯ ಸಂವೇದನೆ ಜೀವಂತವಾಗಿರುವುದಕ್ಕೆ ಇಂಥ ಶಾಕ್ ಅನ್ನು ಕೊಡಲೇ ಬೇಕು. ಹಿಂದೆ ವಿವೇಕಾನಂದರು ಮಾಡಿದ ಕಾರ್ಯವನ್ನು ಈಗ ಮೋದಿ ಮಾಡುತ್ತಿದ್ದಾರೆ!