ವೀಕೆಂಡ್ ವಿತ್ ಮೋಹನ್
camohanbn@gmail.com
ಬ್ರಿಟಿಷರು ಭಾರತ ಬಿಟ್ಟು ತೊಲಗಿ 75 ವರ್ಷಗಳಾದರೂ ಅವರು ಬಿಟ್ಟುಹೋಗಿದ್ದ ಹಲವು ಗುಲಾಮಿ ಕುರುಹುಗಳು ಭಾರತ ದಲ್ಲಿ ಇಂದಿಗೂ ಕಾಣಸಿಗುತ್ತವೆ. ಸಾವಿರಾರು ವರ್ಷಗಳ ಭಾರತೀಯ ಪರಂಪರೆಯನ್ನು ತಮ್ಮ ಪಾಶ್ಚಿಮಾತ್ಯ ಸಂಸ್ಕೃತಿಯ ಮೂಲಕ ಕೇವಲ 300 ವರ್ಷಗಳಲ್ಲಿ ಬ್ರಿಟಿಷರು ಮೂಲೆ ಗುಂಪು ಮಾಡಿದ್ದರು.
ತಮ್ಮದು ಜಗತ್ತಿನ ಅತ್ಯುನ್ನತ ಸಂಸ್ಕೃತಿಯಾಗಿದ್ದು ಭಾರತೀಯ ಪರಂಪರೆ ಮೂಢನಂಬಿಕೆ ಗಷ್ಟೇ ಸೀಮಿತವೆಂಬಂತೆ ಬಿಂಬಿಸಿ ದ್ದರು. ಭಾರತೀಯ ಇತಿಹಾಸದಲ್ಲಿ ಆರ್ಯರೆಂಬ ಸುಳ್ಳು ದಾಳಿಕೋರರನ್ನು ಸೃಷ್ಟಿಸಿ ಭಾರತದ ಮೇಲಿನ ತಮ್ಮ ವಸಾಹತುಶಾಹಿ ಆಡಳಿತವನ್ನು ಸಮರ್ಥಿಸಿಕೊಂಡರು. ಭಾರತೀಯ ಶಿಕ್ಷಣ ಪದ್ದತಿಯನ್ನು ಅಳಿಸಿ ‘ಮೆಕಾಲೆ’ ಶಿಕ್ಷಣವನ್ನು ಜಾರಿಗೆ ತಂದು ಸಣ್ಣ ಮಕ್ಕಳ ತಲೆಯಿಂದ ಭಾರತೀಯ ಸಂಸ್ಕೃತಿಯನ್ನು ನಿಧಾನವಾಗಿ ಅಳಿಸಿಹಾಕುವ ಪ್ರಯತ್ನ ಮಾಡಿದರು.
ಭಾರತೀಯರಿಗೆ ವಾಸ್ತುಶಿಲ್ಪದ ಅರಿವಿಲ್ಲವೆಂಬಂತೆ ಪಾಶ್ಚಿಮಾತ್ಯ ವಾಸ್ತುಶಿಲ್ಪದ ಮಾದರಿ ಗಳನ್ನು ತಮ್ಮ ಆಡಳಿತಾವಧಿಯಲ್ಲಿ ಇಲ್ಲಿನ ಜನರಿಗೆ ಪರಿಚಯಿಸಿದರು. ಶಾಲೆಯಲ್ಲಿ ಮೆಕಾಲೆ ಶಿಕ್ಷಣ ಕಲಿತ ಮಗು, ತಾನು ಕಲಿತದ್ದೇ ನಿಜವೆಂಬಂತೆ ವಿದೇಶಿ ಸಂಸ್ಕೃತಿ ಯೆಡೆಗೆ ಹೆಚ್ಚಿನ ಗಮನ ವಹಿಸುವಂತಾಯಿತು. ದೇಶದಲ್ಲಿದ್ದುಕೊಂಡೇ ಬ್ರಿಟಿಷರಿಗೆ ಸಹಾಯಮಾಡುತ್ತಿದ್ದಂಥ ದೇಶದ್ರೋಹಿ ಗಳನ್ನು ಬಳಸಿಕೊಂಡು ತಮ್ಮ ವಿಚಾರ ಧಾರೆ ಗಳನ್ನು ಹೇರುವಲ್ಲಿ ಬ್ರಿಟಿಷರು ಯಶಸ್ವಿಯಾಗಿದ್ದರು.
ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರು ಬ್ರಿಟಿಷರ ಹಲವು ಗುಲಾಮಿ ಪದ್ಧತಿಗಳಿಗೆ ಬೆಂಬಲ ನೀಡಿ ಸ್ವಾತಂತ್ರ್ಯಾ ನಂತರವೂ ಪ್ರೋತ್ಸಾಹಿಸಿದ್ದು ನಮ್ಮ ದೇಶದ ದುರಂತ. ಕಾಂಗ್ರೆಸ್ಸನ್ನೂ ಮೀರಿಸುವಂತೆ ‘ಎಡಚರರು’ ದೇಶದ ವಿರುದ್ಧ ನಿಂತರು, ಬ್ರಿಟಿಷರ ಕುರುಹುಗಳನ್ನುತಮ್ಮ ಸಿಂಡಿಕೇಟ್ಗಳ ಮೂಲಕ ಜನರಿಗೆ ತಲುಪಿಸುವಲ್ಲಿ ಹಲವು ದಶಕಗಳ ಕಾಲ ಯಶಸ್ವಿಯಾಗಿದ್ದರು. ಎಡಚರರ ಬೆನ್ನಿಗೆ ನೇರವಾಗಿ ನಿಂತು ಬೆಂಬಲ ಸೂಚಿಸಿದ್ದು ನೆಹರು ಮತ್ತು ಕುಟುಂಬ. ದೆಹಲಿಯ ‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ’ ಎಡಚರರ ತವರುಮನೆಯಾಯಿತು.
ಆ ಮನೆಯಿಂದ ಹೊರಬಂದ ಬಹುತೇಕರು ಭಾರತೀಯ ಪರಂಪರೆಯನ್ನು ತುಳಿದು ಬ್ರಿಟಿಷರು ಬಿಟ್ಟುಹೋದಂಥ ಗುಲಾಮಿ ಕುರುಹುಗಳನ್ನೇ ಬೆಂಬಲಿಸುತ್ತ ಬಂದರು. ವಿಪರ್ಯಾಸವೆಂದರೆ ಇಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಬ್ರಿಟಿಷರ ಗುಲಾಮಿ ತನಕ್ಕೆ ಬೆಂಬಲಿಸುವವರ ಬುಡಕ್ಕೆ ಬೆಂಕಿಹಚ್ಚಲು ಮೋದಿಯೇ ಬರಬೇಕಾಯಿತು. ಬ್ರಿಟಿಷರ ಶಿಕ್ಷಣ ಪದ್ಧತಿಯಲ್ಲಿ ಓದಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಜನರಿದ್ದಾರೆ, ಅವರು ಬಿಟ್ಟುಹೋದಂಥ ‘ಮೆಕಾಲೆ’ಯ ಶಿಕ್ಷಣ ಪದ್ಧತಿಯನ್ನು ಇಂದಿಗೂ ಕಾಂಗ್ರೆಸ್ ಬೆಂಬಲಿಸುತ್ತಿದೆ.
ಬ್ರಿಟಿಷರು ಭಾರತ ಬಿಟ್ಟು 75 ವರ್ಷ ಕಳೆದರೂ ಆತನ ಶಿಕ್ಷಣ ಪದ್ಧತಿಯನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಬ್ರಿಟಿಷರ
ಅತಿದೊಡ್ಡ ಗುಲಾಮಿ ಮನಸ್ಥಿತಿಯ ಶಿಕ್ಷಣ ಪದ್ಧತಿಯನ್ನು ಬದಿಗೊತ್ತಿ ‘ನೂತನ ಶಿಕ್ಷಣ ಪದ್ಧತಿ’ಯನ್ನು ಜಾರಿಗೆ ತಂದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ಮುಂದಿನ ಪೀಳಿಗೆಯ ಮಕ್ಕಳಿಗೆ ಅಪ್ಪಟ ಭಾರತೀಯ ನೆಲೆಯಲ್ಲಿ ಸಿದ್ಧಗೊಂಡಂಥ ಶಿಕ್ಷಣ ಪದ್ಧತಿ ನೀಡುವ ಮೂಲಕ, ಮೆಕಾಲೆ ಅಳಿಸಿ ಹಾಕಿದ್ದ ಭಾರತೀಯ ಪರಂಪರೆ ಮತ್ತೊಮ್ಮೆ ಅನಾವರಣಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪ್ರಸ್ತುತ ದೆಹಲಿಯಲ್ಲಿರುವ ‘ಸಂಸತ್ ಭವನ’ವನ್ನು ಬ್ರಿಟಿಷ್ ಅಧಿಕಾರಿಗಳು 1927ರಲ್ಲಿ ನಿರ್ಮಿಸಿದ್ದರು, ಬ್ರಿಟಿಷ್ ವಾಸ್ತುಶಿಲ್ಪದ ಆಧಾರದ ಮೇಲೆ ನಿರ್ಮಾಣವಾಗಿರುವ ಕಟ್ಟಡವಿದು. ಬ್ರಿಟಿಷರು ನಿರ್ಮಾಣ ಮಾಡಿರುವ ಕಟ್ಟಡದಲ್ಲಿ 75 ವರ್ಷಗಳಿಂದ ಸಂಸತ್ ಕಾರ್ಯ ನಿರ್ವಹಿಸುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಭಾರತೀಯರು ಸ್ವತಃ ಕಟ್ಟಿದ ಸಂಸತ್ ಭವನ ವಿಲ್ಲದಿರುವು ದನ್ನು ಕೇಳಿದರೆ ಎಂಥವರಿಗೂ ಇರಿಸುಮುರಿಸಾಗುತ್ತದೆ.
ಬ್ರಿಟಿಷರು ಬಿಟ್ಟು ಹೋದಂಥ ಈ ಭವನವನ್ನು ತೆರವುಗೊಳಿಸಿ ‘ಸೆಂಟ್ರಲ್ ವಿಸ್ತಾ’ (ನೂತನ ಸಂಸತ್) ನಿರ್ಮಾಣ ಮಾಡಲು
ಮೋದಿಯೇ ಬರಬೇಕಾಯಿತು. ಇಲ್ಲಿಯೂ ಅಷ್ಟೇ, ಮೋದಿ ಏನೋ ತಮ್ಮ ಸ್ವಂತಕ್ಕೆ ಕಟ್ಟಡವನ್ನುಬಳಸಿಕೊಳ್ಳುವವರಂತೆ ವಿರೋಧ ಪಕ್ಷಗಳು ಬಾಯಿಗೆ ಬಂದಂತೆ ಮಾತನಾಡಿದವು. ಬ್ರಿಟಿಷರು ಬಿಟ್ಟುಹೋಗಿರುವ ಕಟ್ಟಡಕ್ಕೆ ಇಂದಿಗೂ ಜೈ ಎನ್ನುವ ವಿರೋಽಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ.
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ‘ಬೀಟಿಂಗ್ ರಿಟ್ರೀಟ್’ ಕಾರ್ಯಕ್ರಮದಲ್ಲಿ ಸ್ಕಾಟ್ಲೆಂಡ್ ಕವಿ ರಚಿಸಿದ ‘ಅಬೈಡ್ ವಿತ್ ಮಿ’ ಹಾಡನ್ನು ನುಡಿಸಲಾಗುತ್ತಿತ್ತು. ಗಾಂಧಿಯವರಿಗೆ ಈ ಹಾಡು ಬಹಳ ಇಷ್ಟವಾಗಿತ್ತೆಂದು ಸೈನಿಕರು ಕಾರ್ಯಕ್ರಮದಲ್ಲಿ ಬಳಸುತ್ತಿದ್ದರು. ಆದರೆ ಈ ಹಾಡಿನ ಅರ್ಥ ದೇಶದ ಬಹುತೇಕರಿಗೆ ತಿಳಿದಿಲ್ಲ. ಇಡೀ ಭಾರತೀಯರನ್ನು ಮುಟ್ಟುವ ಹಾಗೂ ಅರ್ಥವಾಗುವ ಖ್ಯಾತ ಹಾಡೊಂದನ್ನು ಬಳಸಿಕೊಳ್ಳುವ ಅವಶ್ಯಕತೆ ಇತ್ತು.
ಅದರಲ್ಲಿಯೂ ಭಾರತ ಗಣತಂತ್ರವಾದ ನಂತರ ಪ್ರಖ್ಯಾತಿ ಗಳಿಸಿರುವ ಹತ್ತಾರು ದೇಶಭಕ್ತಿ ಗೀತೆಗಳಿವೆ. ಹೀಗಿರುವಾಗ ಭಾರತೀಯ ಕವಿಗಳು ರಚಿಸಿರುವ ಹಾಡನ್ನು ಹಾಡಿಸುವುದು ಉತ್ತಮವಾಗಿತ್ತು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ನಂತರ ಬ್ರಿಟಿಷರ ಹಾಡಿಗೆ ಬ್ಯಾಂಡ್ ಬಾರಿಸುವುದನ್ನು ನಿಲ್ಲಿಸಿ, ಭಾರತದಲ್ಲಿ ಪ್ರಖ್ಯಾತವಾಗಿರುವ ‘ಏ ಮೇರೆ ವತನ್ ಕೇ ಲೋಗೋ’ ಹಾಡನ್ನು ಈ ಬಾರಿಯ ಗಣರಾಜ್ಯೋತ್ಸವದ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಯಿತು.
ಬ್ರಿಟಿಷರು ಬಿಟ್ಟುಹೋಗಿದ್ದಂತಹ ಮತ್ತೊಂದು ಹಳೆಯ ಕುರುಹನ್ನು ಅಳಿಸಿಹಾಕಲಾಯಿತು. 1962ರ ಚೀನಾ ಯುದ್ಧದ ಸಂದರ್ಭದಲ್ಲಿ ರಚನೆಯಾದಂಥ ಗೀತೆಯಿದು. ಇಂದಿಗೂ ಬಹುತೇಕ ಭಾರತೀಯರ ಬಾಯಲ್ಲಿ ಈ ಗೀತೆ ದೇಶಭಕ್ತಿಯನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ವಿಷಯದಲ್ಲಿಯೂ ಕ್ಯಾತೆ ತೆಗೆದ ಕಾಂಗ್ರೆಸ್, ತನ್ನ ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಯತ್ನಿಸಿ ಬ್ರಿಟಿಷರ ಇತಿಹಾಸವನ್ನು ಅಳಿಸಿಹಾಕುವುದನ್ನು ವಿರೋಧಿಸಿತು.
ಎಷ್ಟೇ ಆಗಲಿ ಬ್ರಿಟಿಷರು ಸ್ಥಾಪಿಸಿದ ಪಕ್ಷವಲ್ಲವೇ, ಅವರು ಬಿಟ್ಟುಹೋದಂಥ ಗುಲಾಮಿ ಕುರುಹುಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿಹೋಗಿದೆ. ಪ್ರಧಾನಿ ಮೋದಿ ಇತ್ತೀಚಿಗೆ ಕೊಚ್ಚಿಯಲ್ಲಿ ಭಾರತೀಯ ಸೈನ್ಯಕ್ಕೆ ‘ಐ.ಎನ್.ಎಸ್. ವಿಕ್ರಾಂತ್’
ಹಡಗನ್ನುಲೋಕಾರ್ಪಣೆ ಮಾಡುವಾಗ ಭಾರತೀಯ ನೌಕಾಪಡೆಯ ಧ್ವಜದಲ್ಲಿದ್ದಂಥ ಬ್ರಿಟಿಷರ ಕಾಲದ ಮತ್ತೊಂದು ಗುಲಾಮಿ ಕುರುಹನ್ನು ತೆಗೆದುಹಾಕಿದರು.
ಸುಮಾರು 300 ವರ್ಷಗಳ ಹಿಂದೆ ಬ್ರಿಟಿಷರ ಕಾಲದ ‘ಸಂತ ಜಾರ್ಜ್’ನ ‘ಕ್ರಾಸ್’ ಚಿಹ್ನೆಯನ್ನು ಸ್ವಾತಂತ್ರ್ಯಾ ನಂತರವೂ ಭಾರತೀಯ ನೌಕಾಪಡೆಯ ಧ್ವಜದಲ್ಲಿ ಉಳಿಸಿಕೊಳ್ಳಲಾಗಿತ್ತು. ಬ್ರಿಟಿಷರ ವಸಾಹತುಶಾಹಿಯ ಗುಲಾಮಿ ಇತಿಹಾಸ ನೆನಪಿಸುವ ಈ ಚಿಹ್ನೆಯನ್ನು ತೆಗೆದು ಹಾಕಿ, ಸುಮಾರು 400 ವರ್ಷಗಳ ಹಿಂದೆಯೇ ನೌಕಾಪಡೆಯನ್ನು ನಿರ್ಮಿಸುವಲ್ಲಿ ಬಹುದೊಡ್ಡ ಯಶಸ್ಸನ್ನು ಕಂಡಿದ್ದ ‘ಶಿವಾಜಿ’ ಮಹಾರಾಜರ ಸೂರ್ತಿಯಿಂದ ಭಾರತೀಯ ನೌಕಾಪಡೆಯ ಧ್ವಜದಲ್ಲಿ ‘ಅಷ್ಟ ಭುಜಾಕೃತಿ’
ಚಿಹ್ನೆಯನ್ನುಅಳವಡಿಸಿಕೊಳ್ಳಲಾಯಿತು.
ತನ್ನ ಆಡಳಿತದಲ್ಲಿ ಎಂಟು ದಿಕ್ಕುಗಳಲ್ಲಿಯೂ ಶತ್ರುಗಳಿಗೆ ಭಯಪಡುವಂತೆ ಮಾಡಿದ್ದ ಶಿವಾಜಿ ಮಹಾರಾಜರು ಭಾರತೀಯ ಸೈನ್ಯಕ್ಕೆ ಸ್ಪೂರ್ತಿ. ಭಾರತೀಯ ನೌಕಾಪಡೆಯೂ ಅಷ್ಟ ದಿಕ್ಕುಗಳಲ್ಲಿ ಭಾರತದ ಗಡಿಯನ್ನು ಕಾಯುತ್ತಿರುವುದರ ಸಂಕೇತವಾಗಿ
ಈ ಚಿಹ್ನೆಯನ್ನು ಅಳವಡಿಸಿಕೊಳ್ಳಲಾಯಿತು. ದೆಹಲಿಯ ರಾಷ್ಟಪತಿ ಭವನದಿಂದ ‘ಇಂಡಿಯಾ ಗೇಟ್’ ನಡುವಣ ರಸ್ತೆಯನ್ನು ‘ರಾಜಪಥ್’ ಎಂದು ಕರೆಯಲಾಗುತ್ತಿತ್ತು, ರಾಜನಾದವನು ತನ್ನ ರಾಜ್ಯದ ಕರ್ತವ್ಯವನ್ನು ನೆನಪಿಸಿಕೊಳ್ಳಬೇಕೇ ಹೊರತು ಅಧಿಕಾರದ ಆಡಂಬರವನ್ನಲ್ಲ.
ಬ್ರಿಟಿಷರ ಕಾಲದಲ್ಲಿ ಈ ದಾರಿಯನ್ನು ‘ಕಿಂಗ್ಸ್ ವೇ’ ಎಂದು ಕರೆಯಲಾಗುತ್ತಿತ್ತು. ನಂತರ ಕಾಂಗ್ರೆಸ್ಸಿಗರು ಅದನ್ನು ಯಥಾವತ್ತಾಗಿ ‘ರಾಜಪಥ್’ ಎಂದು ಹಿಂದಿ ಭಾಷೆಗೆ ತರ್ಜುಮೆ ಮಾಡಿದರು. ಆಡಳಿತಾವಧಿಯಲ್ಲಿ ತನ್ನ ಕರ್ತವ್ಯ ಮರೆತಿದ್ದ ಕಾಂಗ್ರೆಸ್ ಪಕ್ಷ, ನೆಹರು ಕುಟುಂಬಸ್ಥರನ್ನು ರಾಜರನ್ನಾಗಿಸಿಕೊಂಡೇ ಬಂದಿರುವ ಕಾರಣದಿಂದಾಗಿ, ಅದೇ ಹೆಸರನ್ನು ಮುಂದುವರಿಸಿರಬಹುದು. ಮೋದಿಯವರು ರಾಜನಾದವನಿಗೆ ಕರ್ತವ್ಯ ಮುಖ್ಯವೆಂಬ ಅರ್ಥದೊಂದಿಗೆ ಈ ರಸ್ತೆಯನ್ನು ‘ಕರ್ತವ್ಯಪಥ’ ಎಂದು ಮರು ನಾಮಕರಣ ಮಾಡಿದರು.
ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಎಂದಿಗೂ ಮರೆಯಬಾರದೆಂಬ ಸಂದೇಶವನ್ನು ಸಾರುವ ರಸ್ತೆ ಇದಾಗಬೇಕೆಂಬುದು ಮೋದಿಯವರ ಉದ್ದೇಶ. ಇದೇ ಸಂದರ್ಭದಲ್ಲಿ 28 ಅಡಿಯ ನೇತಾಜಿ ‘ಸುಭಾಷ್ಚಂದ್ರ ಬೋಸರ’ ಪ್ರತಿಮೆಯನ್ನು ‘ಇಂಡಿಯಾ ಗೇಟ್’ನಲ್ಲಿ ಪ್ರತಿಷ್ಠಾಪಿಸಲಾಯಿತು. ‘ಇಂಡಿಯಾ ಗೇಟ್ ’ನಲ್ಲಿ 1968ರವರೆಗೂ ಬ್ರಿಟಿಷರ ರಾಜ ‘ಕಿಂಗ್ ಜಾರ್ಜ್’ನ ಪ್ರತಿಮೆಯಿತ್ತು. ನಂತರ ಆ ಪ್ರತಿಮೆಯನ್ನು ತೆಗೆದುಹಾಕಲಾಗಿತ್ತು, ಆದರೆ ಆ ಜಾಗಕ್ಕೆ ಬೇರೆ ಪ್ರತಿಮೆಯನ್ನು ಪ್ರತಿಷ್ಠಾಪಿಸಿರಲಿಲ್ಲ.
ಕೇವಲ ನೆಹರು ವಂಶಸ್ಥರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಭಾವಿಸಿರುವ ಕಾಂಗ್ರೆಸ್ ಪಕ್ಷ ಅವರ ಕುಟುಂಬದವರಿಗೆ ದೆಹಲಿಯಲ್ಲಿ ನೀಡಿರುವಷ್ಟು ಪ್ರಾಮುಖ್ಯವನ್ನು ಬೇರೆ ಹೋರಾಟಗಾರರಿಗೆ ನೀಡಿಲ್ಲ. ನೇತಾಜಿಯವರು ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನುಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತಕ್ಕೆ ಕಾಲಿಟ್ಟರೆ, ಅವರನ್ನು ಬಂಧಿಸಬೇಕಾಗುತ್ತದೆಯೆಂಬ ಎಚ್ಚರಿಕೆ ಯನ್ನು ನೀಡಿದ್ದ ನೆಹರು, ತಾವು ಪ್ರಧಾನ ಮಂತ್ರಿಯಾದ ಮೇಲೆ ನೇತಾಜಿಯ ತ್ಯಾಗಕ್ಕೆ ಕಿಂಚಿತ್ತೂ ಗೌರವ ನೀಡಲಿಲ್ಲ.
ಅವರು ನಿಗೂಢವಾಗಿ ಕಣ್ಮರೆಯಾಗಿದ್ದು ತಿಳಿದಿದ್ದರೂ ಬ್ರಿಟಿಷರ ಪರವಾಗಿ ನಿಂತಂಥ ಮಹಾನುಭಾವ ನೆಹರು. ಅಂಥ ಹೋರಾಟಗಾರನಿಗೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸಿಕ್ಕಿದ್ದು ಶಾಲಾ ಮಕ್ಕಳ ಪಠ್ಯದಲ್ಲಿ ಎರಡು ಪುಟ. ಮೋದಿಯವರು ಎರಡು ವರ್ಷಗಳ ಹಿಂದೆಯೇ ನೇತಾಜಿಯವರ ಪ್ರತಿಮೆಯನ್ನು ಅನಾವರಣಗೊಳಿಸುತ್ತೇನೆಂದು ಹೇಳಿ, ಕೊಟ್ಟ ಮಾತಿನಂತೆ
ಬ್ರಿಟಿಷರ ರಾಜನ ಪ್ರತಿಮೆ ಇದ್ದಂಥ ಜಾಗದಲ್ಲಿ ನೇತಾಜಿ ಸುಭಾಷ್ಚಂದ್ರ ಬೋಸರ ಪ್ರತಿಮೆಯನ್ನು ಅನಾವರಣ ಗೊಳಿಸುವ ಮೂಲಕ ಬ್ರಿಟಿಷರ ಮತ್ತೊಂದು ಗುಲಾಮಿ ಕುರುಹನ್ನು ಅಳಿಸಿಹಾಕಿದರು.
ಅಪ್ರತಿಮ ಕ್ರಾಂತಿಕಾರಿ ‘ಸುಭಾಷ್ಚಂದ್ರ ಬೋಸ್’ರಿಗೆ ಸ್ವಾತಂತ್ರ್ಯಾನಂತರ ಸಂದಿರುವ ಬಹುದೊಡ್ಡ ಗೌರವ ಇದಾಗಿದೆ.
ಭಾರತೀಯ ಪರಂಪರೆಯನ್ನು ತುಚ್ಛವಾಗಿ ಕಂಡು ತಮ್ಮ ಸಿಂಡಿಕೇಟಿನ ಮೂಲಕ ಪಠ್ಯಗಳಲ್ಲಿ, ಬರವಣಿಗೆಗಳಲ್ಲಿ, ಮಾಧ್ಯಮ ಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಬ್ರಿಟಿಷರ ಗುಲಾಮಿ ಕುರುಹುಗಳನ್ನು ಪಸರಿಸುವ ಕೆಲಸವನ್ನು ಎಡಚರರು ನಿರಾಯಾಸವಾಗಿ ಮಾಡಿಕೊಂಡು ಬಂದಿದ್ದರು.
ಇವರ ಶ್ರೀರಕ್ಷೆಗೆಂದೇ ಕಾಂಗ್ರೆಸ್ ಸರಕಾರ ಆಯಕಟ್ಟಿನ ಸ್ಥಳಗಳಲ್ಲಿ ಇವರನ್ನು ಕೂರಿಸಿತ್ತು. ‘ಬರಗೂರು ರಾಮಚಂದ್ರಪ್ಪ’ ರಾಷ್ಟ್ರಗೀತೆಯನ್ನು ಅವಮಾನ ಮಾಡಿ 1983ರಲ್ಲಿ ಬರೆದಿದ್ದರು, ಆಗ ಅವರನ್ನು ಕಾಂಗ್ರೆಸ್ಸಿಗರು ಪ್ರಶ್ನಿಸಲಿಲ್ಲ. ದೇಶದ ಆಯ ಕಟ್ಟಿನ ಸ್ಥಳಗಳಲ್ಲಿ ಬ್ರಿಟಿಷರ ಗುಲಾಮಿ ಪರಂಪರೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಡಚರರ ಬುಡಕ್ಕೆ ಮೋದಿ ಯವರು ಬೆಂಕಿ ಇಟ್ಟಿದ್ದಾರೆ.
ಬ್ರಿಟಿಷರು ಬಿಟ್ಟುಹೋಗಿರುವ ಗುಲಾಮಿ ಕುರುಹುಗಳನ್ನು ಒಂದೊಂದಾಗಿ ಅಳಿಸಿಹಾಕಿ ಭಾರತೀಯರೆಂಬ ಮ್ಮೆಯನ್ನು ಸಾರಿ ಸಾರಿ ಹೇಳುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.