Wednesday, 11th December 2024

ಮೋದಿ: ನಾಯಕತ್ವಕ್ಕೊಂದು ಹೊಸ ಚರ್ಯೆ

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್, ಬರಹಗಾರ, ಶಿಕ್ಷಕ

ಮೋದಿಯವರ ವೈಯಕ್ತಿಕ ಬದುಕು ಎಷ್ಟು ಆದರ್ಶವೋ, ಅದಕ್ಕೂ ಮಿಗಿಲಾಗಿ ಅವರಲ್ಲಿರುವ ನಾಯಕತ್ವದ ಶಕ್ತಿ ಮತ್ತು ನಾಯಕಾದರ್ಶ ಬಹುಮುಖ್ಯವಾದುದು. ನಾಯಕತ್ವಕ್ಕೊಂದು ಹೊಸ ಚರ್ಯೆ ಬರುವುದು ಇಂಥ ಶಕ್ತಿ ಮತ್ತು ಆದರ್ಶಗಳಿಂದ! ಕಾರಣ, ಮೋದಿಯ ವೈಚಾರಿಕತೆ, ಬೌದ್ಧಿಕ ಮತ್ತು ಭಾವನಾತ್ಮಕ ನಿಲುವುಗಳು, ಅಂತಾರಾಷ್ಟ್ರೀಯ ಮಟ್ಟದ ವಿಚಾರಗಳಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸಿದ ರೀತಿ, ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಸ್ಪಂದಿಸಿದ ಮತ್ತು ಪ್ರತಿಕ್ರಿಯಿಸಿದ ಪರಿ
ಅನನ್ಯವಾದುದು ಇಂಥ ಶಕ್ತಿ ಮತ್ತು ಆದರ್ಶಗಳಿಂದ!

ಗ್ರಹಿಸಿ ನೋಡಿ: ಮೋದಿ ಪ್ರಧಾನಿಯಾದ ದಿನದಿಂದಲೂ ಚೀನಾ ಮತ್ತು ಪಾಕಿಸ್ತಾನ ಮಾಡಿದ ಕುತಂತ್ರ, ಕಾರಸ್ಥಾನ, ಬಿಕನಾಸಿ
ಕಾರ್ಯಗಳಿಗೆ ಮೋದಿ ಪ್ರತಿಕ್ರಿಯಿಸಿದ ಬಗೆಯೇ ಚೀನಾ ಮತ್ತು ಪಾಕಿಸ್ತಾನವನ್ನು ದಂಗು ಬಡಿಸಿದೆ. ಕಸಿವಿಸಿಗೊಳಿಸಿದೆ. ಮಣ್ಣು ಮುಕ್ಕಿಸಿವೆ. ಹಲವು ರೂಪದಲ್ಲಿ ಕಾಡುತ್ತಿರುವ ಅವೆರಡೂ ದೇಶಗಳು ವಿಶ್ವಮಟ್ಟದಲ್ಲಿ ಮುಖಭಂಗವನ್ನು ಎದುರಿಸುವಂತಾ ದುದು ಮೋದಿ ನಾಯಕತ್ವದ ಹೊಸ ಚರ್ಯೆಯಿಂದ!

ಒಬ್ಬ ಮುತ್ಸದ್ದಿ ರಾಜಕಾರಣಿಗೆ ಮಾತ್ರ ರಾಜನೀತಿ ಗೊತ್ತಿರುತ್ತದೆ, ಅದರಲ್ಲೂ ಅಂತಾರಾಷ್ಟ್ರೀಯ ಸಂಬಂಧಗಳ ಮೇಲಿನ ನಡಿಗೆಯೆಂಬುದು ಎರಡು ಬಾಯಿಯ ಕತ್ತಿಯಲಗಿನ ಮೇಲೆ ನಡೆದಂತಿರುತ್ತದೆ. ಯಾವುದೇ ರಾಷ್ಟ್ರದೊಂದಿಗೆ ವ್ಯಾಪಾರವೋ ಒಪ್ಪಂದವೋ ಅಥವಾ ಇನ್ಯಾವುದೋ ಬಗೆಯಲ್ಲಿ ಸಂಬಂಧ ಬೆಳೆಸಿದರೂ ಅದು ಇತರ ರಾಷ್ಟ್ರಗಳ ಕಣ್ಣು ಕೋರೈಸುತ್ತಿರುತ್ತದೆ. ಅಮೆರಿಕ, ಚೀನಾ, ರಷ್ಯಾದಂಥ ರಾಷ್ಟ್ರಗಳು ಇಂಥ ಬೆಳವಣಿಗೆಗಳ ಮೇಲೆ ಕಣ್ಣು ಬಿಟ್ಕೊಂಡು ಕಾಯುತ್ತಾ ಇರುತ್ತಾರೆ.

ಅದರಲ್ಲೂ ಭಾರತದ ಮೇಲಂತೂ ಎಲ್ಲ ದೇಶಗಳ ಕಣ್ಣೂ ಇದ್ದೇ ಇದೆ; ಪ್ರೀತಿಗೂ, ವಿರೋಧಕ್ಕೂ, ಸ್ನೇಹಕ್ಕೂ! ಮೋದಿಯ ಭಾರತವನ್ನು ವಿರೋಧಿಸುವುದಕ್ಕೆ ಚೀನಾ, ಕಿಸ್ತಾನಗಳಿಗೆ ಕಾರಣ ಬೇಕೆಂದೇನೂ ಇಲ್ಲ. ಚೀನಾದ ಅತೀದುಷ್ಟ ಮಹತ್ವಾ ಕಾಂಕ್ಷೆಯೇ ನಮ್ಮನ್ನು ವಿರೋಽಸುತ್ತದೆ. ಧರ್ಮದ ನೆಲೆಗಳು, ಸ್ವಾತಂತ್ರ್ಯ ಪ್ರಾಪ್ತಿಯ ಸನ್ನಿವೇಶದಲ್ಲಿ ಉಂಟಾದ ವಿಭಜನೆಯದ ಸ್ಥಿತ್ಯಂತರಗಳು, ಅದರಿಂದುಂಟಾದ ಕ್ಷೋಭೆ, ಬ್ರಿಟಿಷರು ಬಿತ್ತಿಹೋದ ವೈಷಮ್ಯ, ಹಿಂದೂ ಮತ್ತು ಮುಸ್ಲಿಂ ಎಂಬ ಜನಾಂಗೀಯ
ದ್ವೇಷ, ಸ್ವಾತಂತ್ರ್ಯೋತ್ತರ ಭಾರತದ ಕಾಲದಲ್ಲಿ ಚೀನಾ, ಪಾಕ್ ಅಂತಾರಾಷ್ಟ್ರೀಯ ಸಂಬಂಧ, ಇವೆರಡೂ ದೇಶಗಳು ಭಾರತ ದೊಂದಿಗೆ ಮಾಡಿದ ಯುದ್ಧಗಳು ಇತ್ಯಾದಿ ಘಟನೆಗಳು ಸಂಗತಿಗಳು ಭಾರತವನ್ನು ಕಾಡುತ್ತಲೇ ಇವೆ.

ಭಾರತದಂಥ ವೈವಿಧ್ಯಮಯ ದೇಶದಲ್ಲಿ, ಸ್ವಾತಂತ್ರ್ಯಾ ನಂತರ ಒಪ್ಪಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಸಂಖ್ಯೆಯ ಹಿಂದೂಗಳನ್ನು ಹೊಂದಿರುವ ನಾವು ಭಾರತೀಯರಾಗಿ ಸಮತಾವಾದ, ಜಾತ್ಯತೀತ ನಿಲುವನ್ನು ಎಷ್ಟು ಅಭಿವ್ಯಕ್ತಿಸಿದರೂ ಜಾತಿಮತ ಪಂಥ ಧರ್ಮಗಳ ಸೆರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಾಗಿದೆ. ಮೆಜಾರಿಟಿ ಮತ್ತು ಮೈನಾರಿಟಿ ಪರಿಕಲ್ಪನೆಗಳ ನಡುವೆಯೇ ಈ ದೇಶ ಸಾಗಬೇಕಾಗಿದೆ. ಅದರಲ್ಲೂ ರಾಷ್ಟ್ರೀಯತೆಯ ಬಗೆಗಿನ ಪ್ರಜ್ಞೆ ಮತ್ತು ನಿಲುವಿಗೆ ಸಂಬಂಧಿಸಿ ಯಾವತ್ತೂ ಸಂಘರ್ಷಗಳು ಇದ್ದೇ ಇದೆ.

ರಾಷ್ಟ್ರಗಳು ಸಾಯುವುದು ಮತ್ತು ಉದ್ಧಾರವಾಗುವುದು ಧ್ಯೇಯಗಳಿಂದ ಮತ್ತು ವಾದಗಳಿಂದ! ಭಾರತ ಹೊಂದಿರುವ ಧ್ಯೇಯ ಮತ್ತು ವಾದಗಳಲ್ಲಿ ಹಾಗೂ ಅವುಗಳು ಹುಟ್ಟುಹಾಕುವ ನಿರಂತರವಾದ ಸಂಘರ್ಷದಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾದ ಸಂಗತಿಗಳು ನಡೆದಿವೆ, ನಡೆಯುತ್ತಲೂ ಇವೆ.

ಪ್ರಮುಖವಾಗಿ, ಕಾಠಿಣ್ಯದಿಂದ ಮುಸ್ಲಿಂ ವೈಚಾರಿಕತೆ. ಅದು ತನ್ನ ಧರ್ಮದ ಚೌಕಟ್ಟಿನ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ. ಕಾಠಿಣ್ಯದ ವೈಚಾರಿಕತೆಯಿಂದ ಕೂಡಿದ್ದಷ್ಟೇ ಅಲ್ಲದೆ, ಅದರ ರಾಷ್ಟ್ರೀಯ ನಿಷ್ಠೆ ಮತ್ತು ಬದ್ಧತೆ ಪ್ರಶ್ನಾರ್ಹವಾಗೇ ಉಳಿದು ಬಿಟ್ಟಿದೆ. ಯಾಕೆಂದರೆ, ಮನುಷ್ಯನ ಅಸ್ಮಿತೆಯಾಗಿ ಧರ್ಮವನ್ನೇ ಆತ್ಯಂತಿಕವಾಗಿ ಒಪ್ಪಿರುವ ಧರ್ಮದ ಮುಂದೆ ದೇಶ ಪ್ರಮುಖವಾಗಲಾರದು ಎಂಬ ಸಂದೇಶವನ್ನು ಮತ್ತೆ ಮತ್ತೆ ಸಾಬೀತು ಮಾಡುವಂಥ ಕಾರ್ಯವನ್ನು ಅದು ಮಾಡುತ್ತಲೇ ಇರುತ್ತದೆ. ಅದರಲ್ಲೂ ತಮ್ಮ ಧರ್ಮಗ್ರಂಥವನ್ನು ತಾವು ಮೀರಲಾರೆವು ಎಂಬುದನ್ನು ಎಷ್ಟೋ ಸಂದರ್ಭ ಸನ್ನಿವೇಶಗಳಲ್ಲಿ ಮುಸ್ಲಿಮರು ಸಾಬೀತು ಮಾಡಿದ್ದಾರೆ.

ಹಿಂದೂ ದೇಶ ಎಂತಾದ ಮೇಲೆ ಇಲ್ಲಿರುವವರೆಲ್ಲರೂ ಹಿಂದೂಗಳೇ ಆಗಬೇಕು. ಯಾಕೆಂದರೆ ಹಿಂದೂ ಜಾತಿವಾಚಕವಲ್ಲ, ಮತವಾಚಕವಲ್ಲ, ಕೋಮುವಾಚಕವೂ ಅಲ್ಲ. ಈ ದೇಶದಲ್ಲಿ ಬೆಳೆದು ಬಂದ ಸಾಂಸ್ಕೃತಿಕ ಮೌಲ್ಯಗಳ ಒಟ್ಟೂ ಅಸ್ಮಿತೆಯೇ ಹಿಂದೂಸ್ಥಾನ. ಇಲ್ಲಿಯ ವಿಭಿನ್ನವೂ ವೈವಿಧ್ಯಮಯವೂ ಆದ ಜೀವನಕ್ರಮ, ಆಚಾರ – ವಿಚಾರಗಳು ಎಲ್ಲವೂ ಸೇರಿಯೇ ಅಲ್ಲವೆ ಈ ದೇಶವನ್ನು ಪುಣ್ಯಭೂಮಿ ಎಂದು ಪ್ರಾಚೀನರು ಗುರುತಿಸಿದ್ದು.

ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ- ಭೂಮಿಯೇ ನನ್ನ ತಾಯಿ, ನಾನೇ ಅದರ ಮಗ- ಇದು ಋಗ್ವೇದದ ಮಾತು. ಈ ದೇಶ ಹಿಂದೂಸ್ಥಾನ ಅಂತಾದರೆ ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಜೈನರು ಎಲ್ಲರೂ ಹಿಂದೂಗಳೇ ಅಂತ ಪರಿಗಣಿತವಾಗುತ್ತದೆ. ಯಾಕೆಂದರೆ, ಹಿಂದೂ ಧರ್ಮ ಅಲ್ಲ, ಜೀವನ ಪದ್ಧತಿ. ಹಿಂದೂಗಳು ಇರುವ ಸ್ಥಾನ ಹಿಂದೂಸ್ಥಾನ. ಈ ನೆಲದಲ್ಲಿ ಇದ್ದುಕೊಂಡು ಇಲ್ಲಿಯ ಸವಲತ್ತು ಸೌಲಭ್ಯಗಳನ್ನು ಯಥೇಚ್ಛವಾಗಿ ಉಪಯೋಗಿಸಿಕೊಂಡು ಪಾಕಿಸ್ತಾನಕ್ಕೋ ಇನ್ನಾವುದೋ ದೇಶಕ್ಕೆ ಒಳಿತನ್ನು
ಬಯಸುವವರು ನಿಜಕ್ಕೂ ಅನ್ನದ್ರೋಹಿಗಳಾಗುತ್ತಾರೆ. ಅದು ಅನ್ನದ್ರೋಹವಾಗುತ್ತದೆ. ಉಣ್ಣುವ ಅನ್ನಕ್ಕೆ ಸಂಚಕಾರ ತಂದು ಕೊಳ್ಳುವ ಕಾರ್ಯವನ್ನೇ ಮಾಡುವುದರಲ್ಲಿ ಸಮುದಾಯ ಆರೋಗ್ಯವನ್ನು ಕೆಡಿಸುವ ಹುನ್ನಾರವಿರುತ್ತದೆ.

ಮೋದಿಯನ್ನು ಏನಕೇನ ವಿರೋಽಸುವವರು ಇಂಥ ಅನ್ನಕ್ಕೆ ಸಂಚಕಾರ ತಂದುಕೊಳ್ಳುವವರೇ ಆಗಿದ್ದಾರೆ. ಈಗಂತೂ ಅದು
ನಿಚ್ಚಳವಾಗುತ್ತಿದೆ. ಒಬ್ಬ ಸಮರ್ಥ ನಾಯಕ ಮಾತ್ರ ಸಮುದಾಯದ ಸ್ವಾಸ್ಥ್ಯವೇ ತನ್ನ ಸ್ವಾಸ್ಥ್ಯ ಎಂದು ಭಾವಿಸುತ್ತಾನೆ. ತ್ರಿವಳಿ ತಲಾಖಿಗೆ ಅಂತ್ಯ ಹಾಡುವಂತಾದದ್ದು ಸಮುದಾಯದ ಸ್ವಾಸ್ಥ್ಯವನ್ನು ಬಯಸಿಯೇ ಅಲ್ಲವೆ? ಮೋದಿಯ ಹಿಂದೂ ಹಿತಾಸಕ್ತಿಯಲ್ಲಿ ಎಲ್ಲ ಕೋಮಿನ ಹಿತರಕ್ಷಣೆಯೂ ಇದೆ. ಅಷ್ಟಕ್ಕೂ ಹಿಂದೂ ಹಿತಾಸಕ್ತಿಯೆಂದರೆ ಒಂದು ಕೋಮಿನ ಹಿತಾಸಕ್ತಿಯೇ ಅಲ್ಲವಲ್ಲ! ಇದನ್ನು ಮುಸ್ಲಿಮರು ಮುಸ್ಲಿಮೇತರರೂ ಅರ್ಥಮಾಡಿಕೊಳ್ಳಬೇಕಿದೆ.

ಮೋದಿ ನಾಯಕತ್ವಕ್ಕೊಂದು ಹೊಸ ಚರ್ಯೆಯನ್ನು ನೀಡಿದ್ದು ಈ ಭಾವವನ್ನು ಅಭಿವ್ಯಕ್ತಿಸಿದ್ದರಿಂದ! ಅವಲೋಕಿಸಿ; ಮೋದಿ ಪ್ರಧಾನಿಯಾದರೆ ಆಗಬಾರದ ಅನಾಹುತವಾಗಿ ಬಿಡುತ್ತೆ ಅಂತ ಅನಂತಮೂರ್ತಿಯಂಥ ಹಿರಿಯ ಚಿಂತಕರು ಭಾವಿಸಿ, ಗ್ರಹಿಸಿ ಮುಸ್ಲಿಂರನ್ನು ಭಯಪಡಿಸಿ ಎಲ್ಲೂ ಮೋದಿಯ ಬಗ್ಗೆ ಒಂದು ನಕಾರಾತ್ಮಕ ಪ್ರಭೆಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದರು. ಇದನ್ನು ಹಿಂದುತ್ವ ಅಥವಾ ಹಿಂದ್ ಸ್ವರಾಜ್ ಎಂಬ ತಮ್ಮ ಕೊನೆಯ ಪುಸ್ತಕದಲ್ಲಿ ವಿವರವಾಗೇ ಬರೆದುಕೊಂಡಿದ್ದರು. (ಈ ಕೃತಿಗೆ ಪ್ರತಿಕ್ರಿಯೆ ಎಂಬಂತೆಯೂ ಸತ್ಯವನ್ನು ಅನಾವರಣಗೊಳಿಸುವಂತೆಯೂ ಡಾ.ಅಜಕ್ಕಳ ಗಿರೀಶ ಭಟ್ಟರು ಅ-ಸತ್ಯ ಅಥವಾ ಸತ್ಯ ಎಂಬ ತಮ್ಮ ಕೃತಿಯಲ್ಲಿ ತಾರ್ಕಿಕವಾಗೇ ಬರೆದುಕೊಂಡರು. ಓದುಗರು ಎರಡನ್ನೂ ಓದಬೇಕು) ಮೋದಿಯ ಗೆಲುವು ಗಾಂಧಿ ಯವರ ಹಿಂದ್ ಸ್ವರಾಜ್‌ಗೆ ವಿರುದ್ಧವಾದ ವ್ಯಾಖ್ಯೆಯಂತೆ ಇದೆಯೆಂದವರು ಅನಂತಮೂರ್ತಿ. ಮೋದಿಯ ಗೆಲುವು ಸಾವರ್ಕರ್
ಹಿಂದುತ್ವ ಕಲ್ಪನೆಗೆ ಹಾಗೆಂದು ಸಾರದೆಯೂ ಹತ್ತಿರವಾಗಿದೆ ಎನ್ನುತ್ತಾ ಮೋದಿಯ ಹಿಂದುತ್ವದ ನೆರಳಲ್ಲಿ ಸಾವರ್ಕರರ ಕಟ್ಟರ್ ಹಿಂದುತ್ವವನ್ನು ಪೂರ್ತಿಯಾಗಿ ಅಲ್ಲದಿದ್ದರೂ ಭಾಗಶಃ ಇದೆಯೆಂದೇ ಗ್ರಹಿಸುತ್ತಾರೆ.

ಒಬ್ಬ ಪ್ರಧಾನಿಯನ್ನು ಈ ದೇಶವಾಸಿಗಳ ನಾಯಕನನ್ನು, ನಾಯಕತ್ವವನ್ನು ಹೀಗೆ ಗುಮಾನಿಸುವುದು ಶುದ್ಧಾತಿಶುದ್ಧ ತಪ್ಪು ಎಂದು ಬುದ್ಧಿಜೀವಿ  ಅನಂತಮೂರ್ತಿಗೆ ಅನಿಸದೇ ಹೋದದ್ದು ವಿಪರ್ಯಾಸ! ಇನ್ನೊಂದು ಸತ್ಯವಿದೆ: ಹಿಂದೂ ಸ್ವಂತಿಕೆಯಲ್ಲಿ ಮಾತ್ರ ನಿಜವಾದ ಜಾತ್ಯತೀತತೆ ಇದೆಯೆಂಬುದನ್ನು ತ್ರಿವಳಿ ತಲಾಖ್ ನಿಷೇಧದ ಮೂಲಕ ಮೋದಿ ತೋರಿಸಿಕೊಟ್ಟರು.
ಹಿಂದುತ್ವದ ಸರ್ವರ ಒಳಿತಿದೆಯೇ ಹೊರತು ಇಸ್ಲಾಮೀಕರಣದ ಅಥವಾ ಇನ್ಯಾವುದರ ಅಲ್ಲ!

ಹಿಂದುತ್ವವು ಬಯಸುವ ಒಳಿತಿನ ಇಲ್ಲಿರುವ ಮತಗಳೂ ಬದುಕುತ್ತವೆ. ಯಾಕೆಂದರೆ, ಭಾರತ ದರಿದ್ರ ಪಾಕಿಸ್ತಾನವಲ್ಲವಲ್ಲ! ಹಿಂದುತ್ವದ ಶಾಂತಿಯಿದೆ, ಪ್ರೀತಿಯಿದೆ, ಸೌಹಾರ್ದತೆಯ ಸಹಬಾಳ್ವೆಯಿದೆ. ಸ್ವಾತಂತ್ರ್ಯವೂ ಇದೆ. ಅನ್ಯಮತ ಸಹಿಷ್ಣುತೆಯಿದೆ.
ಯಾಕೆಂದರೆ, ತಮ್ಮೊಳಗೇ ಬಡಿದಾಡಿಕೊಂಡು ಸಾಯುವಂಥ ಯಾವ ಬೋಧೆಯೂ ಹಿಂದುತ್ವದಲ್ಲಿಲ್ಲ. ಇದನ್ನು ಮೋದಿ
ತಮ್ಮ ವಿದೇಶೀ ನೀತಿಯಲ್ಲಿ ಈವರೆಗೂ ಅಭಿವ್ಯಕ್ತಿಸಿದ್ದನ್ನು ಕಣ್ಣು ತೆರೆದು ನೋಡಬೇಕಿದೆ.

ಇಲ್ಲದಿದ್ದರೆ ಪಾಕ್ ಈವರೆಗೆ ಮಾಡಿದ ಕುತಂತ್ರಕ್ಕೆ ತಕ್ಕ ಶಾಸ್ತಿಯನ್ನು ಮೋದಿ ಎಂದೋ ಮಾಡಿ ಮುಗಿಸಬಿಡುವುದು ದೊಡ್ಡ ಸಂಗತಿಯೇನಲ್ಲ ವಾಗಿತ್ತು! ಶಾಂತಿ ಮತ್ತು ಸೌಹಾರ್ದತೆಯನ್ನು ಆಂತರ್ಯದಲ್ಲಿ ಹೊಂದಿರುವ ಒಬ್ಬ ನಿಜ  ಅಂಥದ್ದನ್ನು ಎಂದಿಗೂ ಮಾಡಲಾರ! ಮುಸ್ಲಿಂ ಸ್ವಂತಿಕೆಯ ಯಾವ ರಾಷ್ಟ್ರದಲ್ಲಿ ಶಾಂತಿ ಸಹಬಾಳ್ವೆ ಇದೆ? ಹಿಂದೂ ಸಂಸ್ಕೃತಿಯಲ್ಲಿ ಅನ್ಯಮತದ ದಮನ ಇಲ್ಲವೇ ಇಲ್ಲ. ಭಗವದ್ಗೀತೆಯನ್ನು ಮೋದಿ ಉಡುಗೊರೆಯಾಗಿ ಗಣ್ಯರಿಗೆ ಕೊಡುವುದು ಶಾಂತಿ ಮತ್ತು ಸಹಬಾಳ್ವೆಯ ದ್ಯೋತಕವಾಗಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಮೋದಿಯ ರಾಜನೀತಿ ರಾಜಧರ್ಮವನ್ನು ಯಾವತ್ತೂ ಮೀರಿಲ್ಲ. ಜಗತ್ತಿನ ಯಾವ ರಾಷ್ಟ್ರಕ್ಕೂ ಈವರೆಗೆ ಈ ದೇಶದ ಪ್ರಧಾನಿ ಯಾದ ಯಾರೂ ಕಣಿಕ ನೀತಿಯನ್ನು ಅನುಸರಿಸಿ ಆಕ್ರಮಣದ ಭೀತಿಯನ್ನು ಹುಟ್ಟಿಸಲಿಲ್ಲ. ಆಕ್ರಮಣ ಭೀತಿಯಲ್ಲಿ  ಜೀವಿಸು ವಂತೆ ಯಾವ ರಾಷ್ಟ್ರವನ್ನೂ ಕಾಡಲಿಲ್ಲ. ಬದಲಿಗೆ ಶಾಂತಿಯನ್ನೇ ಪ್ರತಿಪಾದಿಸಿದರು. ಶಾಂತಿ ಬಯಸಿ ಸ್ನೇಹವನ್ನು ಬೇಡಿದರು. ಬೇಡಿ ಬಂದವರನ್ನು ಕೂಡಿದರು.

ಹಿಂದುತ್ವದ ಕಟ್ಟಾನುಯಾಯಿಯಾಗಿ ಮೋದಿ ಭಯವನ್ನು ಎಲ್ಲೂ ಹುಟ್ಟಿಸುತ್ತಾರೆಂದು ಅನಂತಮೂರ್ತಿ ಮುಸ್ಲಿಮರಲ್ಲಿ ಹುಟ್ಟಿಸಿದ ಭಯವನ್ನು ಮೋದಿಯೇ ನಿವಾರಿಸಿದರು. ಇದು ಮೋದಿಯ ನಾಯಕತ್ವದ ಹೊಸ ಚರ್ಯೆ. ತನ್ನ ದೇಶವಾಸಿಗಳಲ್ಲಿ ತನ್ನ ಬಗ್ಗೆ ಹುಟ್ಟಿಸಿದ ಭಯವನ್ನು ತಾನೇ ಹೋಗಲಾಡಿಸಿಕೊಂಡು ಅವರನ್ನು ಮುಖ್ಯವಾಹಿನಿಯಲ್ಲಿ ಕರೆದುಕೊಂಡು ಹೋಗುವ  ನಾಯಕತ್ವ ಇದೆಯಲ್ಲ, ಅದು ಮೋದಿಗೆ ಮಾತ್ರ ಸಾಧ್ಯವಾಗುವಂಥದ್ದು. ನೆಹರೂ ಇಂದಿರಾಗೆ ಇದು ಸಾಧ್ಯವಾಗ ಲಿಲ್ಲ. ಓಲೈಕೆ ರಾಜಕಾರಣ ಮಾಡುವವರಿಗೆ ಇದು ಅಸಾಧ್ಯದ ಮಾತು!

ಬ್ರಿಟಿಷರು ಬಿತ್ತು ಹೋದ ಹಿಂದೂ ಮುಸ್ಲಿಂ ಜನಾಂಗೀಯ ದ್ವೇಷವನ್ನು ನಮ್ಮ ಇತಿಹಾಸಕಾರರು ಹಿಂದೂ ಯುಗ, ಮುಸ್ಲಿಂ ಯುಗ, ಕ್ರೈಸ್ತ ಯುಗ ಅಂತೆಲ್ಲ ಬೌದ್ಧಿಕವಾಗಿ ವಿಂಗಡಿಸಿ, ಈಗ ಅವೆಲ್ಲ ಬಿದ್ದುಹೋದರೂ ಭಾವ ವಲಯದಲ್ಲಿ ಜೀವಂತವಾಗೇ ಇದೆ. ಈ ವಿಂಗಡಣೆ ಭಾರತೀಯ ಸಂಸ್ಕೃತಿಯೆಂದರೆ ಹಿಂದೂ ಯುಗದ ಸಂಸ್ಕೃತಿ ಎಂಬ ಭಾವನೆಯನ್ನು ಹುಟ್ಟುಹಾಕಿತು. ಹಿಂದೂ ಯುಗದ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೆಂದು ಅರ್ಥೈಸಿದ ಅತೀ ಬುದ್ಧಿವಂತ ಅಡ್ಡಕಸುಬಿಗಳೂ ಇzರೆ. ಇಂಥವರ ಕಸುಬುತನವನ್ನು ಮೆಚ್ಚಿಕೊಂಡವರು ಬ್ರಾಹ್ಮಣರನ್ನು ವಿರೋಧಿಸತೊಡಗಿದರು.

ಇತಿಹಾಸದ ನೈಜ ಪರಿಸ್ಥಿತಿಯಲ್ಲಿ ಹಿಂದೂಗಳು ಹಿಂದೂಗಳಿಂದ ಆಳಿಸಿಕೊಂಡ ಸಂದರ್ಭದಲ್ಲಿ, ಮುಸ್ಲಿಮರು ಮುಸ್ಲಿಮರಿಂದ ಆಳಿಸಿಕೊಂಡ ಸಂದರ್ಭದಲ್ಲಿ, ಅಥವಾ ಅಯಾ ಧರ್ಮೀಯರು ಆಯಾ ಧರ್ಮದವರಿಂದ ಆಳಿಸಿಕೊಂಡ ಸಂದರ್ಭದಲ್ಲಿ ಸುಖ ಕಡಿಮೆಯಾಗಿತ್ತು. ಹಿಂದೂಗಳ ಆಳ್ವಿಕೆಯ ಕಾಲದಲ್ಲಿ ಹಿಂದೂಗಳು ತುಳಿತಕ್ಕೊಳಗಾಗಿದ್ದು ಇದೆ. ಮುಸ್ಲಿಮರ ಆಳ್ವಿಕೆಯಲ್ಲಿ
ಮುಸ್ಲಿಮರು ನಿರ್ಗತಿಕರಾಗಿದ್ದೂ ಇದೆ. ಯಾಕೆಂದರೆ, ಆಯಾ ಧರ್ಮಗಳಲ್ಲಿರುವ ಮೇಲು ವರ್ಗದವರಿಂದ, ಉಳ್ಳವರಿಂದ
ಶೋಷಣೆ ಇದ್ದೇ ಇತ್ತು.ಹಿಂದೂಸ್ಥಾನಕ್ಕೆ ಒಬ್ಬ ಹಿಂದೂ ಪ್ರಧಾನಿಯಾಗಿ ತನ್ನ ಸಾಂಪ್ರದಾಯಿಕ ನಡೆಯಲ್ಲಿ ಅಲ್ಪಸಂಖ್ಯಾತರು ಅನುಮಾನದಿಂದ ನೋಡುವುದಕ್ಕಾಗಲೀ, ಅಥವಾ ಅಭದ್ರತೆಯ ಭಾವವನ್ನು ತಾಳುವುದಕ್ಕಾಗಲೀ ಮೋದಿ ಆಸ್ಪದ ಕೊಡದಿರುವುದೇ ಮೋದಿಯ ನಾಯಕತ್ವ ಕ್ಕೊಂದು ಹೊಸ ಚರ್ಯೆಯೊಂದನ್ನು ಕೊಟ್ಟಿದೆ.

ಅದೂ ಬಹುಕಾಲ ಅಲ್ಪಸಂಖ್ಯಾತರನ್ನು ಓಲೈಸಿಕೊಂಡೇ ಆಳಿದ ನೆಹರೂ, ಇಂದಿರಾ ಪ್ರಣೀತ ಪಕ್ಷವಾಳಿದ ಸಮತಾವಾದ,
ಜಾತ್ಯತೀತ ಸಿದ್ಧಾಂತವನ್ನು ಒಪ್ಪಿದ ಪ್ರಜಾಪ್ರಭುತ್ವದ ಭಾರತದಲ್ಲಿ! ಇದು ನಿಜವಾದ ಜನ ನಾಯಕತ್ವದ ಹೊಸ ಚರ್ಯೆ. ಬಹುಸಂಖ್ಯಾತರಿಗೆ ಅಲ್ಪಸಂಖ್ಯಾತರಿಗೆ ಭದ್ರತೆಯ ಭಾವನೆಯನ್ನು ಕೊಡುವುದು ಕರ್ತವ್ಯವಾಗಿದ್ದರೂ ಅಲ್ಪಸಂಖ್ಯಾತರೂ ಅದಕ್ಕೆ ಸರಿಯಾಗಿ ಅಂದರೆ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ವರ್ತಿಸಬೇಕಾದುದು ಪ್ರಮುಖ ಕರ್ತವ್ಯವೇ ಆಗಿರುತ್ತದೆ. ಇದನ್ನು ಅಲ್ಪಸಂಖ್ಯಾತರು ಅರ್ಥಮಾಡಿಕೊಂಡು ತಮ್ಮ ಸಮಗ್ರ ಬದುಕಿನಲ್ಲಿ ಅಭಿವ್ಯಕ್ತಿ ಬೇಕಾಗುತ್ತದೆ.

ಹಾಗಂತ ಬಹುಸಂಖ್ಯಾತರು ಮಾಡಿದ್ದೆಲ್ಲವೂ ಸರಿ ಅಥವಾ ತಪ್ಪು, ಅಲ್ಪಸಂಖ್ಯಾತರೂ ಮಾಡಿದ್ದೆಲ್ಲವೂ ಸರಿ ಅಥವಾ ತಪ್ಪೆಂದು ಹೇಳಲಾಗುವುದಿಲ್ಲ. ಬಹುಸಂಖ್ಯಾತ ರೊಂದಿಗೆ ಕೂಡಿ ಬಾಳಬೇಕಾದವರು ಅಲ್ಪಸಂಖ್ಯಾತರು. ಅವರನ್ನು ಒಟ್ಟುಗೂಡಿಸಿ ಕೊಂಡೇ ಸಾಗಬೇಕಾದುದು ಬಹುಸಂಖ್ಯಾತರ ಕರ್ತವ್ಯ. ಇದನ್ನು ಮೋದಿಯ ನಾಯಕತ್ವದಲ್ಲಿ ಈ ದೇಶವಾಸಿಗಳು ಮುಖ್ಯವಾಗಿ
ಅಲ್ಪಸಂಖ್ಯಾತರು ಕಂಡುಕೊಳ್ಳಬೇಕಾಗಿದೆ. ಆದರೆ ಅಲ್ಪಸಂಖ್ಯಾತರ ಕೆಲವು ಸಾರ್ವಜನಿಕ ಅಭಿವ್ಯಕ್ತಿಗಳು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಲೇ ಇದೆ. ಇದು ಸುತರಾಂ ಒಪ್ಪಲು ಸಾಧ್ಯವಿಲ್ಲ.

ಪ್ರಜಾಪ್ರಭುತ್ವ ಬೇಕು, ಹಾಗೆಯೇ ಪ್ರಜೆಯಾಗಿ ನಿರ್ವಹಿಸಬೇಕಾದ ಕರ್ತವ್ಯವೂ ಪ್ರಧಾನವೇ ಆಗಿರುತ್ತದೆ. ಅದು ಅಲ್ಪಸಂಖ್ಯಾತ ರಿಗಾಗಲೀ, ಬಹುಸಂಖ್ಯಾತರಿಗಾಗಲೀ ಒಂದೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ದೇಶ, ಒಂದು ನಾಗರಿಕತೆಯ ಅಗತ್ಯವಿದೆ, ಆವಶ್ಯಕವೂ ಆಗಿದೆ, ಅನಿವಾರ್ಯವೂ ಆಗಿದೆ. ಮೋದಿಯ ನಾಯಕತ್ವದ ಹೊಸ ಚರ್ಯೆ ಅದನ್ನು ಆದಷ್ಟೂ ಬೇಗ ಸಾಕಾರಗೊಳಿಸಲಿ.