Thursday, 19th September 2024

ಅಸಾಧಾರಣ ಜನಾದೇಶಕ್ಕೆ ಸಾಕ್ಷಿಯಾದ ಮೋದಿ 3.0

ವಿಶ್ಲೇಷಣೆ

ಪ್ರಕಾಶ್ ಶೇಷರಾಘವಾಚಾರ್‌

೧೯೪೭ ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿದಾಗ ಅಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರುರವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಎಲ್ಲ ಪಕ್ಷಗಳ ನಾಯಕರನ್ನೊಳಗೊಂಡ ರಾಷ್ಟ್ರೀಯ ಸರಕಾರವು ರಚನೆಯಾಯಿತು. ಸ್ವಾತಂತ್ರ್ಯ ಬಂದು ಐದು ವರ್ಷದ ನಂತರ ೧೯೫೨ರಲ್ಲಿ ಮೊಟ್ಟ ಮೊದಲ ಸಾವರ್ತ್ರಿಕ ಚುನಾವಣೆ ನಡೆಯಿತು.

ಜವಾಹರಲಾಲ್ ನೆಹರು ಅವರನ್ನು ಎದುರಿಸುವ ವರ್ಚಸ್ವೀ ನಾಯಕತ್ವ ಯಾರಿಗೂ ಇರಲಿಲ್ಲ. ಚುನಾವಣೆಯಲ್ಲಿ ೪೮೯ ಸೀಟುಗಳಿಗೆ ಕಾಂಗ್ರೆಸ್ ೩೬೪ ಸ್ಥಾನಗಳಲ್ಲಿ ಗೆಲುವು ಸಾಽಸಿತು. ವಿಶೇಷವೆಂದರೆ ಎರಡನೆಯ ಸ್ಥಾನವನ್ನು ಪಕ್ಷೇತರರು ಪಡೆದಿದ್ದರು. ೧೯೫೭ ರ ಎರಡನೆಯ ಸಾರ್ವತ್ರಿಕ ಚುನಾವಣೆ ಯಲ್ಲಿ ಕಾಂಗ್ರೆಸ್ ೪೯೪ ಸ್ಥಾನದಲ್ಲಿ ೩೭೧ ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುತ್ತಾರೆ. ಕಾಂಗ್ರೆಸ್ ಮತ್ತು ನೆಹರು ಅವರ ಪಾರಮ್ಯ ಎರಡನೆಯ ಬಾರಿಯು ಅಬಾಧಿತವಾಗಿರುತ್ತದೆ.

ಕಾಂಗ್ರೆಸ್ ಕಳೆದ ಚುನಾವಣೆಗಿಂತ ಎರಡನೆಯ ಬಾರಿ ಹೆಚ್ಚಿನ ಏಳು ಸ್ಥಾನ ಗಳಿಸಿರುತ್ತದೆ. ೧೯೬೨ ರಲ್ಲಿ ನಡೆದ ಮೂರನೆಯ ಚುನಾವಣೆಯಲ್ಲಿ
ನೆಹರುರವರು ೪೯೪ ಸ್ಥಾನಗಳ ಪೈಕಿ ೩೬೧ ಸ್ಥಾನಗಳಲ್ಲಿ ಯಶಸ್ಸು ಕಂಡಿರುತ್ತಾರೆ. ಕಳೆದ ಬಾರಿಗಿಂತ ತುಸು ಕಡಿಮೆಯಾಗಿದ್ದರು ಶೇ.೭೦ ಕ್ಕೂ ಹೆಚ್ಚು ಸ್ಥಾನ ಅವರ ಪಾಲಾಗಿರುತ್ತದೆ. ಮೂರನೆಯ ಬಾರಿಯು ಸಹ ನೆಹರುರವರನ್ನು ಸೋಲಿಸುವ ಪಕ್ಷವಾಗಲಿ ಅಥವಾ ನಾಯಕರಾಗಲಿ ಇರಲಿಲ್ಲ. ಎರಡನೆಯ ಬಾರಿ ಗೆದ್ದ ಮೇಲೆ ಪ್ರಾದೇಶಿಕ ನಾಯಕತ್ವ ಮೊಳಕೆಯೊಡಿಯಲು ಆರಂಭವಾಗಿರುತ್ತದೆ. ೧೯೫೬ ರಲ್ಲಿ ಕೇರಳದಲ್ಲಿ ಈ.ಎ.ಎಸ್.ನಂಬೂ ದರಿಪಾದ್ ನೇತೃತ್ವದಲ್ಲಿ ಮೊಟ್ಟಮೊದಲ ಕಮ್ಯುನಿಸ್ಟ್ ಸರಕಾರ ಅಧಿಕಾರಕ್ಕೆ ಬರುತ್ತದೆ. ಆದರೆ ನೆಹರುರವರು ೧೯೫೯ ರಲ್ಲಿ ಕೇರಳ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರುತ್ತಾರೆ.

ಚುನಾಯಿತ ಸರಕಾರವನ್ನು ವಜಾ ಮಾಡುವ ಪರಂಪರೆಗೆ ಬೀಜಾಂಕುರವಾಗಿ ಮುಂದಿನ ಐವತ್ತು ವರ್ಷದಲ್ಲಿ ನೂರಕ್ಕೂ ಹೆಚ್ಚು ಸರಕಾರಗಳನ್ನು ಕೆಡವಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಇದೇ ವೇಳೆ ಮದ್ರಾಸ್ ಪ್ರಾಂತ್ಯದಲ್ಲಿ ದ್ರಾವಿಡ ಚಳವಳಿಯು ಬೇರೂರ ತೊಡಗಿತ್ತು. ಅವರ ಹಿಂದಿ
ವಿರೋಧ ಮತ್ತು ಬ್ರಾಹ್ಮಣರ ದ್ವೇಷ ಕಾಂಗ್ರೆಸ್‌ಗೆ ಸವಾಲೊಡ್ಡಲು ತೊಡಗಿತ್ತು. ೧೯೫೯ ರಲ್ಲಿ ಹಿರಿಯ ನಾಯಕ ರಾಜಾಜಿಯವರು ಕಾಂಗ್ರೆಸ್ ತೊರೆದು ಸ್ವತಂತ್ರ ಪಕ್ಷವನ್ನು ಸ್ಥಾಪನೆ ಮಾಡುತ್ತಾರೆ. ನೆಹರು ನಾಯಕತ್ವಕ್ಕೆ ಅಲುಗಾಡಿಸುವಷ್ಟು ಸವಾಲಾಗದಿದ್ದರು ಅವರ ವಿರುದ್ದ ಧ್ವನಿಯೆತ್ತುವ ನಾಯಕತ್ವ ತಲೆಯೆತ್ತಲು ಆರಂಭವಾಯಿತು.

ತಮ್ಮ ಮೂರನೆಯ ಅವಧಿಯಲ್ಲಿ ನೆಹರುರವರು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚೀನಾ ಜತೆಯ ಯುದ್ಧದ ಸೋಲು ಅವರನ್ನು ಜರ್ಝರಿತಗೊಳಿಸುತ್ತದೆ. ಹಲವಾರು ಉಪಚುನಾವಣೆಗಳಲ್ಲಿ ಸೋಲಾಗುತ್ತದೆ. ದೇಶದಲ್ಲಿ ಜೆ. ಬಿ. ಕೃಪಲಾನಿ, ರಾಮಮನೋಹರ ಲೋಹಿಯಾ ಮತ್ತು ದೀನ ದಯಾಳ್ ಉಪಾಧ್ಯಾಯರವರ ಪ್ರಭಾವ ವಿಸ್ತಾರವಾಗ ತೊಡಗಿದ್ದು ಈ ಅವಧಿಯಲ್ಲಿಯೇ.

ಚೀನಾದೊಂದಿಗೆ ಯುದ್ಧದಲ್ಲಿ ಪರಾಭವಗೊಂಡಿದ್ದು ನೆಹರುರವರನ್ನು ಅವರನ್ನು ಹಣ್ಣು ಮಾಡಿಬಿಡುತ್ತದೆ. ಅವರಲ್ಲಿದ್ದ ಮೊದಲಿನ ಹೊಳಪು ಮಂಕಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ೧೯೬೪ ಮೇ ೨೭ರಂದು ನೆಹರುರವರು ನಿಧನರಾಗುತ್ತಾರೆ. ವಿಷಾದವೆಂದರೆ ಅವರ ಹದಿನೇಳು ವರ್ಷದ ಆಳ್ವಿಕೆಯು ಹಲವಾರು ಹಿನ್ನೆಡೆಗಳೊಂದಿಗೆ ಅಂತ್ಯವಾಗುತ್ತದೆ.

ಇಂದಿರಾಗಾಂಧಿಯವರು ತಮ್ಮ ತಂದೆಯು ಮರಣಿಸಿದ ನಂತರ ಏಕ್ ದಂ ಅವರ ಸ್ಥಾನಕ್ಕೆ ಲಗ್ಗೆ ಹಾಕುವುದಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ಸಂಪುಟ ದಲ್ಲಿ ವಾರ್ತಾ ಮತ್ತು ಪ್ರಸಾರ ಮಂತ್ರಿಯಾಗುತ್ತಾರೆ. ೧೯೬೬ರಲ್ಲಿ ಶಾಸ್ತ್ರಿಯವರು ತಾಷ್ಕೆಂಟಿನಲ್ಲಿ ಅಕಾಲಿಕವಾಗಿ ಮೃತಪಟ್ಟಾಗ ಕಾಂಗ್ರೆಸ್ ಅಧ್ಯಕ್ಷ ರಾಗಿದ್ದ ಕೆ.ಕಾಮರಾಜ್ ರವರ ಜಾಣ್ಮೆಯ ರಾಜಕೀಯ ತಂತ್ರದಿಂದ ಮೊರಾರ್ಜಿ ದೇಸಾಯಿಯವರನ್ನು ಪಕ್ಕಕ್ಕೆ ಸರಿಸಿ ಇಂದಿರಾರವರನ್ನು ಪ್ರಧಾನಿ
ಪಟ್ಟಕ್ಕೇರಿಸುತ್ತಾರೆ.

ಇಂದಿರಾ ಶಕೆಯು ಮೂರು ಹಂತದಲ್ಲಿ ನೋಡಬೇಕಾಗುತ್ತದೆ. ೧೯೬೬ ರಿಂದ ೬೭ ಅವರ ತಂದೆಯವರ ಜನಾದೇಶದ ಮೇಲೆ ಆಡಳಿತ ನಡೆಸುತ್ತಾರೆ. ೧೯೬೭ರಲ್ಲಿ ಇವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ೨೮೩ ಸ್ಥಾನವನ್ನು ಗೆಲ್ಲುತ್ತದೆ. ಆದರೆ ೧೯೬೨ ರಲ್ಲಿ ಜಯಗಳಿಸಿದ್ದ ೩೬೧ ಸೀಟಿ ನಿಂದ ೨೮೩ ಕ್ಕೆ ಕಾಂಗ್ರೆಸ್ ಬಲ ಕುಗ್ಗುತ್ತದೆ. ಇಂದಿರಾ ಗಾಂಧಿಯವರು ಮೊಟ್ಟ ಮೊದಲ ಬಾರಿಗೆ ೧೯೭೧ ರಲ್ಲಿ ಮಧ್ಯಂತರ ಚುನಾವಣೆಯನ್ನು ಘೋಷಿಸುತ್ತಾರೆ.

‘ಗರೀಬಿ ಹಟಾವೋ’ ಘೋಷಣೆಯಡಿಯಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾರವರು ೫೨೧ ಸ್ಥಾನಕ್ಕೆ ೩೫೨ ರಲ್ಲಿ ಅಭೂತಪೂರ್ವ ಗೆಲುವು ಸಾಧಿಸು ತ್ತಾರೆ. ದುರಾದೃಷ್ಟವಶಾತ್ ಅವರ ಈ ಗೆಲುವು ಅನೇಕ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಕುಖ್ಯಾತಿ ಪಡೆಯುತ್ತದೆ. ೧೯೮೦ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ಜನತಾ ಪಾರ್ಟಿಯನ್ನು ಸೋಲಿಸಿ ೩೭೭ ಸ್ಥಾನ ಗೆದ್ದು ಮೂರನೆಯ ಬಾರಿ ಮತ್ತೆ ಅಧಿಕಾರ ಗದ್ದುಗೆಯ ಮೇಲೆ ವಿರಾಜಮಾನರಾಗುತ್ತಾರೆ. ೧೯೮೪ ರಲ್ಲಿ ಅವರ ಅಂಗರಕ್ಷಕರಿಂದ ಅಮಾನುಷವಾಗಿ ಹತ್ಯೆಯಾಗಿ ಹದಿನೈದು ವರ್ಷದ ಇಂದಿರಾ ಯುಗವು ದುರಂತದಲ್ಲಿ ಅಂತ್ಯವಾಗುತ್ತದೆ.

ಇಂದಿರಾ ಕಾಲಾವಽಯು ಭಾರತದ ರಾಜಕಾರಣದಲ್ಲಿ ಅನೇಕ ಐತಿಹಾಸಿಕ ಬದಲಾವಣೆಗಳನ್ನು ಕಂಡಿತು. ಸಮಾಜವಾದ ಆರ್ಥಿಕ ನೀತಿಯು ಇವರ ಮೂಲ ಮಂತ್ರವಾಗಿತ್ತು. ಕಾಂಗ್ರೆಸ್ ಹಿರಿಯ ನಾಯಕರಿಗೆ ಸಡ್ಡು ಹೊಡೆದು ಪಕ್ಷವನ್ನೇ ಇಬ್ಭಾಗ ಮಾಡಿ ಕಾಂಗ್ರೆಸ್ (ಆಡಳಿತ) ಎಂದು ಹೊಸ ಪಕ್ಷವನ್ನು ಹುಟ್ಟು ಹಾಕಿದರು. ಜನಪ್ರಿಯತೆ ಗಳಿಸಲು ರಾಷ್ಟ್ರೀಕರಣ ಮಂತ್ರವನ್ನು ಜಪಿಸಿದ ಕಾಲವಿದು. ೧೯೬೯ ರಲ್ಲಿ ಹದಿನಾಲ್ಕು ಖಾಸಗಿ ಬ್ಯಾಂಕ್‌ಗಳು
ರಾಷ್ಟ್ರೀಕರಣವಾಗುತ್ತದೆ. ೧೯೭೦ ರಲ್ಲಿ ರಾಜಧನ ರದ್ಧತಿ ಮಾಡಿ ಮಹಾರಾಜರ ದರ್ಬಾರಿಗೆ ಅಂತ್ಯ ಹೇಳುತ್ತಾರೆ.

೧೯೭೧ರಲ್ಲಿ ಗಾಂಧಿಯವರು ಕಲ್ಲಿದ್ದಲು, ಉಕ್ಕು, ತಾಮ್ರ, ಸಂಸ್ಕರಣೆ, ಹತ್ತಿ, ಜವಳಿ ಮತ್ತು ವಿಮಾ ಉದ್ಯಮಗಳನ್ನು ರಾಷ್ಟ್ರೀಕರಣಗೊಳಿಸುತ್ತಾರೆ.
ಈ ಎಲ್ಲ ಉಪಕ್ರಮದಿಂದ ಅವರು ಜನಪ್ರಿಯತೆಯ ಉತ್ತುಂಗವನ್ನು ತಲುಪಿರುತ್ತಾರೆ. ಆದರೆ ಚುನಾವಣಾ ಅಕ್ರಮದ ಮೊಕದ್ದಮೆಯಲ್ಲಿ ಅಲಹಾಬಾದ್ ಹೈಕೋರ್ಟ್ ಇವರ ಲೋಕಸಭಾ ಸ್ಥಾನವನ್ನು ಅನೂರ್ಜಿತಗೊಳಿಸಿದಾಗ ಅಧಿಕಾರ ಉಳಿಸಿಕೊಳ್ಳಲು ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿ ಸರ್ವಾಧಿಕಾರಿಯಾಗಿ ಬದಲಾಗುತ್ತಾರೆ. ೧೯೭೭ರಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಪರಾಭವವನ್ನು ಅನುಭವಿಸುತ್ತಾರೆ.

ವಿಫಲಗೊಂಡ ಜನತಾ ಪಾರ್ಟಿ ಪ್ರಯೋಗವು ೧೯೮೦ ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಮತ್ತೇ ಗೆದ್ದು ಪ್ರಧಾನಿಯಾಗುತ್ತಾರೆ. ಮೂರನೆಯ ಅವಧಿಯಲ್ಲಿ, ಪಂಜಾಬ್ ಅಸ್ಸಾಂ ರಾಜ್ಯಗಳಲ್ಲಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ದೇಶದ ಆಂತರಿಕ ಭದ್ರತೆಗೆ ಬಹು ದೊಡ್ಡ ಸವಾಲಾಗುತ್ತದೆ.
ಅಮೃತಸರದ ಸಿಖ್ಖರ ಪವಿತ್ರ ಸ್ಥಾನವಾದ ಸ್ವರ್ಣ ಮಂದಿರದ ಆವರಣದೊಳಗೆ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಕೈಗೊಂಡು ಸಿಖ್ಖ್ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗುತ್ತಾರೆ. ಸಿಖ್ಖ್ ಸಮಾಜವು ಇಂದಿರಾರವರ ವಿರೋಧಿಗಳಾಗುತ್ತಾರೆ.

ಭದ್ರತಾ ಅಧಿಕಾರಿಗಳ ಮಾತಿಗೆ ಬೆಲೆ ಕೊಡದ ತಪ್ಪಿಗೆ ತಮ್ಮ ಪ್ರಾಣವನ್ನೇ ಬಲಿ ಕೊಡಬೇಕಾಗುತ್ತದೆ. ಮನಮೋಹನ್ ಸಿಂಗ್ ರವರು ೨೦೦೪ರಲ್ಲಿ ಯುಪಿಎ ಸರಕಾರದಲ್ಲಿ ಪ್ರಧಾನಿಯಾಗುತ್ತಾರೆ. ಮೊದಲ ಐದು ವರ್ಷದ ಆಳ್ವಿಕೆಗೆ ೨೦೦೯ರಲ್ಲಿ ಒಪ್ಪಿಗೆಯ ಮುದ್ರೆ ಬಿದ್ದು ಎರಡನೆಯ ಅವಧಿಗೂ ಪ್ರಧಾನಿಯಾಗುತ್ತಾರೆ. ಈ ಅವಧಿಯು ದೇಶದ ಆರ್ಥಿಕ ಸ್ಥಿತಿಯು ಅಧೋಗತಿಯನ್ನು ತಲುಪುತ್ತದೆ. ಲಕ್ಷಾಂತರ ಕೋಟಿ ಹಗರಣಗಳ ಸರಮಾಲೆಯಿಂದ ಜನ ಬೇಸತ್ತು ಹೋಗಿರುತ್ತಾರೆ. ೨೦೧೪ ರಲ್ಲಿ ಬದಲಾವಣೆಗೆ ಜನ ತುದಿಗಾಲಿನಲ್ಲಿ ಕಾದಿರುತ್ತಾರೆ.

ಇಂತಹ ಪರ್ವ ಕಾಲದಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸುತ್ತದೆ. ಗುಜರಾತಿನಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳಿಂದ ಜನಪ್ರಿಯರಾಗಿದ್ದ ಮೋದಿಯವರು ಜನರ ವಿಶ್ವಾಸಗಳಿಸುತ್ತಾರೆ. ೨೦೧೪ ರಲ್ಲಿ ಮತದಾರರು ಮೋದಿಯವರನ್ನು ಬೆಂಬಲಿಸಿ ಮೂವತ್ತು ವರ್ಷದ ನಂತರ ದೇಶದಲ್ಲಿ ಸಮ್ಮಿಶ್ರ ಸರಕಾರದ ಸರಪಳಿಯ ಕೊಂಡಿ ಕಳಚಿ ಬಿಜೆಪಿಗೆ ಪೂರ್ಣ ಬಹುಮತ
ನೀಡುತ್ತಾರೆ. ೨೦೧೯ ರಲ್ಲಿ ಎರಡನೆಯ ಬಾರಿ ಬಿಜೆಪಿಯು ಮೋದಿಯವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಬಹುಮತದಿಂದ ಮತ್ತೇ ಅಧಿಕಾರಕ್ಕೆ ಬರುತ್ತಾರೆ.

ಮೂರನೆಯ ಅವಧಿಯ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಬಲ ಪೈಪೋಟಿ ಎದುರಿಸುತ್ತಾರೆ. ತಂತ್ರeನ ಬಳಸಿ ಸುಳ್ಳು ಸಂಗತಿ ಹರಡುವುದು, ಜಾತಿ ಕೇಂದ್ರೀಕೃತ ಚುನಾವಣಾ ಪ್ರಚಾರ ಮತ್ತು ವಿದೇಶ ಶಕ್ತಿಗಳೂ ಕೈ ಜೋಡಿಸಿ ಬಿಜೆಪಿಯನ್ನು ಸೋಲಿಸಲು ಹರಸಾಹಸ ಮಾಡುತ್ತವೆ. ಇವೆಲ್ಲದರ ನಡುವೆಯೂ ಮೋದಿಯವರು ಕುಸಿದ ಬಹುಮತದಿಂದ ಪುನರಾಯ್ಕೆಯಾಗಿ ದಾಖಲೆ ಸೃಷ್ಟಿಸಿzರೆ. ಈ ಬಾರಿ ಮೈತ್ರಿ ಪಕ್ಷಗಳ ಎನ್‌ಡಿಎ ಸರಕಾರವನ್ನು ರಚನೆ ಮಾಡಬೇಕಾಗುತ್ತದೆ.

ನೆಹರು ನಂತರ ಸತತವಾಗಿ ಮೂರು ಬಾರಿ ಪ್ರಧಾನಿಯಾಗಿರುವುದು ಮೋದಿಯವರು ಮಾತ್ರ. ಇಂದಿರಾರವರಿಗೆ ೭೭ರಲ್ಲಿ ಸೋಲಾಗಿ ಮೂರನೆಯಬಾರಿ
೧೯೮೦ರಲ್ಲಿ ಅವರು ಮತ್ತೇ ಪ್ರಧಾನಿಯಾಗಿದ್ದು. ಮೋದಿಯವರು ಗಾಂಧಿ ಕುಟುಂಬದವರ ಪ್ರಧಾನಿ ಪಟ್ಟದ ಏಕಸ್ವಾಮ್ಯಕ್ಕೆ ಅಂತ್ಯ ಹಾಡಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ರಾಯಶಃ ಗಾಂಧಿ ಪರಿವಾರಕ್ಕೆ ಈ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗಿರುವ ಹಾಗಿದೆ. ೧೯೬೨ ರಲ್ಲಿ ನೆಹರು ರವರು ಪ್ರಧಾನಿಯಾದಾಗ ಭಾರತದ ಜನಸಂಖ್ಯೆ ೪೬ ಕೋಟಿ ಮತ್ತು ಇಂದಿರಾರವರು ೧೯೮೦ರಲ್ಲಿ ಪ್ರಧಾನಿಯಾದಾಗ ಭಾರತದ ಜನಸಂಖ್ಯೆ ೭೦ ಕೋಟಿ ಆದರೆ
ಮೋದಿಯವರು ೨೦೨೪ ರಲ್ಲಿ ಪ್ರಧಾನಿಯಾದಾಗ ದೇಶದ ಜನಸಂಖ್ಯೆಯು ೧೪೪ ಕೋಟಿ ದಾಟಿದೆ. ಹೀಗಾಗಿ ಅವರಿಬ್ಬರ ಜನಾದೇಶಕ್ಕೆ ಮೋದಿಯವರ
ಜನಾದೇಶವನ್ನು ಹೋಲಿಕೆ ಮಾಡಲಾಗದು.

ನೆಹರು ಮತ್ತು ಇಂದಿರಾರವರಿಗೆ ರಾಜಕೀಯವಾಗಿ ಪ್ರಬಲ ಸವಾಲುಗಳೇ ಇರಲಿಲ್ಲ ಹಾಗೂ ಅವರಿಬ್ಬರ ಕಾಲದಲ್ಲಿ ಕೇವಲ ಮುದ್ರಣ ಮಾಧ್ಯಮ ಮಾತ್ರವೊಂದೇ ಸುದ್ದಿ ಮೂಲವಾಗಿತ್ತು. ಇಂದು ರಾಜ್ಯಕ್ಕೊಂದು ಪ್ರಾದೇಶಿಕ ಪಕ್ಷಗಳು, ೨೪ ಗಂಟೆಯೂ ಸುದ್ದಿ ಬಿತ್ತರಿಸುವ ಎಲೆಕ್ಟ್ರಾನಿಕ್ ಮಾಧ್ಯಮ, ಯೂ ಟ್ಯೂಬ್‌ನಲ್ಲಿಯೂ ಅಬ್ಬರದ ಪ್ರಚಾರ. ಇವೆಲ್ಲಕ್ಕಿಂತ ಪ್ರಮುಖವಾಗಿ ಸಾಮಾಜಿಕ ತಾಣದ ಅಬ್ಬರವು ಹೆಜ್ಜೆ ಹೆಜ್ಜೆಗೂ ಕಾಣಬಹುದು. ಪ್ರತಿಯೊಂದು ಹೇಳಿಕೆ ಮತ್ತು ನಿರ್ಣಯಗಳ ಪರಾಮರ್ಶೆ ಕ್ಷಣಕ್ಷಣಕ್ಕೂ ನಡೆಯುತ್ತಿದೆ. ಇಂತಹ ಅತ್ಯಂತ ಸಂಕೀರ್ಣ ಯುಗದಲ್ಲಿಯೂ ಮೂರನೆಯ ಬಾರಿಗೆ ಸತತವಾಗಿ ಜನಾದೇಶ ಪಡೆದಿರುವುದು ಮೋದಿಯವರ ಅಸಾಧಾರಣ ಸಾಧನೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ.

(ಲೇಖಕರು: ಬಿಜೆಪಿ ವಕ್ತಾರರು)

Leave a Reply

Your email address will not be published. Required fields are marked *