Wednesday, 11th December 2024

ಮೋದಿ ಗ್ಯಾರಂಟಿಗೆ ವಾರಂಟಿಯಿಲ್ಲ !

ಕ್ರಿಯಾ ಲೋಪ

ಡೆರೆಕ್ ಓ’ಬ್ರಿಯಾನ್

‘ಡಿಜಿಟಲ್ ಇಂಡಿಯಾ’, ‘ನಾರಿ-ಶಕ್ತಿ’ ಮತ್ತಿತರ ಯೋಜನೆಗಳಡಿ ಕಲ್ಪಿಸಬೇಕಾಗಿದ್ದ ಉದ್ಯೋಗಾವಕಾಶಗಳಿಂದ ಮೊದಲ್ಗೊಂಡು ಅನೇಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಮತ್ತಷ್ಟು ಭರವಸೆಗಳನ್ನು ಕೇಂದ್ರದ ಬಿಜೆಪಿ ಸರಕಾರ ಈಡೇರಿಸಿಲ್ಲ. ಚುನಾವಣೆಯ ವೇಳೆ ಸುಳ್ಳು ಹೇಳಿ ಜನರನ್ನು ನಂಬಿಸುವುದು ಈ ಪಕ್ಷದ ಚಾಳಿಯಾಗಿಬಿಟ್ಟಿದೆ.

ಚುನಾವಣಾ ಅಖಾಡ ಕಳೆಗಟ್ಟುತ್ತಿದೆ. ಈ ಸಂದರ್ಭದಲ್ಲಿ ದೇಶದ ಜನರಿಗೆ ‘ಯಾವುದು ಸತ್ಯ, ಯಾವುದು ಮಿಥ್ಯ?’ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಮಾರ್ಚ್ ೩೧), ಬಿಜೆಪಿಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟವು ನವದೆಹಲಿಯ ರಾಮಲೀಲಾ ಮೈದಾನ ದಲ್ಲಿ ಭಾರಿ ಬಹಿರಂಗ ಸಭೆಯೊಂದನ್ನು ಹಮ್ಮಿಕೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ‘ಮೋದಿಯವರ ಗ್ಯಾರಂಟಿ’ ಎಂಬ ಮಂತ್ರಜಪ ವನ್ನು ಪಟ್ಟಾಗಿ ಹಿಡಿದುಕೊಂಡುಬಿಟ್ಟಿದೆ; ಆದರೆ ‘ಇಂಡಿಯ’ ಮೈತ್ರಿಕೂಟವು ಮೊಳಗಿಸಲಿರುವ ಘೋಷಣೆ ತೀರಾ ಸರಳವಾಗಿದೆ.

ಅದುವೇ- ‘ಬಿಜೆಪಿ ವರ್ಸಸ್ ಪ್ರಜಾಪ್ರಭುತ್ವ’. ಅಂದರೆ, ತನ್ನದು ಜನಸ್ನೇಹಿ ಆಡಳಿತ ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿಯು ಯಾವೆಲ್ಲಾ ನೆಲೆಯಲ್ಲಿ
ವಿಫಲಗೊಂಡಿದೆ, ತನ್ಮೂಲಕ ಪ್ರಜಾಪ್ರಭುತ್ವ-ವಿರೋಧಿ ಹೆಜ್ಜೆಗಳನ್ನು ಇಟ್ಟಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಈ ಘೋಷಣೆ ಅಥವಾ ಸಂದೇಶದ ಮೂಲೋದ್ದೇಶ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಪಕ್ಷದಿಂದ ಕಳೆದ ಬಾರಿ ಏನೆಲ್ಲಾ ಭರವಸೆಗಳು ಹೊಮ್ಮಿದ್ದವು ಎಂಬುದು ನಿಮಗೆ ಗೊತ್ತಿರುವಂಥದ್ದೇ. ಆದರೂ ವಿಷಯ ಮಂಡನೆಗೆ ಆಧಾರವಾಗಿರಲೆಂದು, ಹೀಗೆ ಭರವಸೆ ನೀಡಲಾದ ೧೫ ಗ್ಯಾರಂಟಿಗಳನ್ನು ಇಲ್ಲಿ ಮತ್ತೊಮ್ಮೆ ನಿಮ್ಮ ಅವಗಾಹನೆಗೆ ತರಲಾಗಿದೆ. ಇಂಥ ಪ್ರತಿಯೊಂದು ‘ಗ್ಯಾರಂಟಿ’ಯ ಮೇಲೆ ನೀಡಲಾಗಿರುವ ‘ವಾರಂಟಿ’ ಏನು? ಈ ಭರವಸೆಗಳು ಈಡೇರಿವೆ ಎಂಬ ಖಾತರಿ ನಿಮಗಿದೆಯೇ? ಎಂಬುದನ್ನು ನೀವೇ ನಿರ್ಣಯಿಸಿ.

೧. ಉದ್ಯೋಗಾವಕಾಶಗಳು: ಬಿಜೆಪಿಯು ೨೦೧೪ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬರೋಬ್ಬರಿ ೨೫ ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಆದರೆ, ೨೦೧೪ರಿಂದೀಚೆಗೆ ಕೇವಲ ೧.೨ ಕೋಟಿ ಉದ್ಯೋಗಗಳನ್ನಷ್ಟೇ ಸೃಷ್ಟಿಸಲಾಗಿದೆ ಎಂದು ಕೇಂದ್ರ ಸಚಿವರೊಬ್ಬರು ೨೦೨೩ರಲ್ಲಿ ಒಪ್ಪಿಕೊಂಡಿದ್ದಾರೆ. ಲಭ್ಯ ಮಾಹಿತಿಯಂತೆ, ಸದರಿ ಸಚಿವರು ಉದ್ಯೋಗಾವಕಾಶ ಸಂಬಂಧಿತ ತಮ್ಮ ಸಮರ್ಥನೆಗಳಿಗೆ ಆಧಾರವಾಗಿ ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯ (ಇಪಿಎಫ್ ಒ) ದತ್ತ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. ಮಾಹಿತಿಗಳೇ ತಿಳಿಸುವಂತೆ, ೨೫ ವರ್ಷಕ್ಕಿಂತ ಕಡಿಮೆ ವಯೋಮಾನದ ೧೦ ಪದವೀಧರರಲ್ಲಿ ನಾಲ್ವರು ನಿರುದ್ಯೋಗಿಗಳಾಗಿದ್ದಾರೆ (ಆಧಾರ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಸೆಂಟರ್ ಫಾರ್ ಸಸ್ಟೇನಬಲ್ ಎಂಪ್ಲಾಯ್‌ಮೆಂಟ್’ ವತಿಯಿಂದ ನೀಡಲ್ಪಟ್ಟ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ೨೦೨೩’ ಎಂಬ ವರದಿ).

೨. ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವಿಕೆ: ಕೃಷಿಕರ ಆದಾಯವು ೨೦೨೨ರ ವರ್ಷದ ವೇಳೆಗೆ ದ್ವಿಗುಣ ಗೊಳ್ಳುವಂತಾಗಲು ೨೦೧೫ರ ವರ್ಷದಿಂದ ಶುರುವಾಗಿ, ವರ್ಷಕ್ಕೆ ಶೇ.೧೦ರಷ್ಟು ಪ್ರಮಾಣದಲ್ಲಿ ಅದು ಬೆಳೆಯ ಬೇಕಾದ ಅಗತ್ಯವಿತ್ತು. ಆದರೆ ದಾಖಲಾಗಿರುವ ವಾಸ್ತವಿಕ ಬೆಳವಣಿಗೆ ಶೇ.೩.೫ರಷ್ಟು ಮಾತ್ರ. ಈ ಬೆಳವಣಿಗೆಯ ದರವೇ ಮುಂದುವರಿದರೆ, ಆದಾಯ ದ್ವಿಗುಣೀಕರಣದ ಖಾತ್ರಿಯು ಕೈಗೂಡುವುದು ೨೦೩೫ರ ವರ್ಷದಲ್ಲಿ ಮಾತ್ರ.

ಇಲ್ಲಿ ಮತ್ತೊಂದು ಕಹಿವಾಸ್ತವವನ್ನೂ ನಿಮ್ಮ ಮುಂದಿಡಬೇಕು- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌ಸಿಆರ್‌ಬಿ) ಇತ್ತೀಚಿನ ದತ್ತಮಾಹಿತಿ ಯಂತೆ, ಪ್ರತಿದಿನ ೩೦ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಆದಾಯ ದ್ವಿಗುಣಗೊಂಡಿದ್ದರೆ ಇಂಥ ದುರಂತಗಳಾಗುತ್ತಿದ್ದವೇ?

೩. ನೋಟು ಅಮಾನ್ಯೀಕರಣ: ವಿದೇಶಿ ಬ್ಯಾಂಕುಗಳಲ್ಲಿ ಅಡಗಿಸಿಡಲಾಗಿದೆ ಎನ್ನಲಾದ ಕಪ್ಪುಹಣವನ್ನು ದೇಶಕ್ಕೆ ಮರಳಿ ತರುವಿಕೆ, ಖೋಟಾನೋಟು ಚಲಾವಣೆಯನ್ನು ತಡೆಯುವಿಕೆ, ಭಯೋತ್ಪಾದನೆಗೆ ಲಗಾಮು ಹಾಕುವಿಕೆ, ಭ್ರಷ್ಟಾಚಾರದ ಮೂಲೋತ್ಪಾಟನೆ ಇವೇ ಮೊದಲಾದ ಗ್ಯಾರಂಟಿಗಳೆಲ್ಲ ವಿಫಲ ಗೊಂಡಿವೆ. ಅಪನಗದೀಕರಣ ಗೊಂಡ ನೋಟುಗಳ ಪೈಕಿ ಶೇ.೯೯ರಷ್ಟು ಭಾಗವು ವ್ಯವಸ್ಥೆಯ ತೆಕ್ಕೆಗೆ ಮರಳಿದೆ. ಈ ದುಡುಕುಬುದ್ಧಿಯ ಯೋಜನೆಯು ಆರ್ಥಿಕ ಭಯೋತ್ಪಾದನೆಯ ಕೃತ್ಯಕ್ಕಿಂತ ಕಮ್ಮಿಯೇನಿರಲಿಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗಿ ಬಂದಿದೆ.

೪. ಉಜ್ವಲಾ ಯೋಜನೆ: ಲಭ್ಯ ವರದಿಗಳ ಪ್ರಕಾರ, ಸಬ್ಸಿಡಿಗಳನ್ನು ನೀಡಿದ್ದರ ಹೊರತಾಗಿಯೂ ೧.೨ ಕೋಟಿಯಷ್ಟು ಕುಟುಂಬಗಳು ೨೦೨೨-೨೩ರ ವರ್ಷದಲ್ಲಿ
ಯಾವುದೇ ರಿಫಿಲ್ ಸಿಲಿಂಡರ್‌ಗಳನ್ನು ಖರೀದಿಸಿಯೇ ಇಲ್ಲ. ಮತ್ತೊಂದೆಡೆ, ೧.೫ ಕೋಟಿಯಷ್ಟು ಫಲಾನುಭವಿಗಳು ಖರೀದಿಸಿರುವುದು ಒಂದು ಸಿಲಿಂಡರ್ ಅನ್ನು
ಮಾತ್ರ.

೫. ಬುಲೆಟ್ ರೈಲು: ಈ ಯೋಜನೆಯನ್ನು ೨೦೧೭ರಲ್ಲಿ ಘೋಷಿಸಲಾಯಿತಾದರೂ, ಅಲ್ಲಿಂದೀಚೆಗೆ ಸಂಬಂಧಿತ ಗಡುವನ್ನು ಹಲವಾರು ಬಾರಿ ಮುಂದೂಡಲಾಗಿದೆ!

೬. ಸ್ವಚ್ಛ ಭಾರತ್ ಯೋಜನೆ: ಕಳೆದ ಐದು ವರ್ಷಗಳಲ್ಲಿ, ಒಳಚರಂಡಿಗಳು ಮತ್ತು ರೊಚ್ಚುತೊಟ್ಟಿಗಳನ್ನು ತೊಳೆಯುವಂಥ ಅಪಾಯಕಾರಿ ಕೆಲಸದಲ್ಲಿ ತೊಡಗಿರುವಾಗ ೩೬೭ ಮಂದಿ ಅಸುನೀಗಿದ್ದಾರೆ (ಲೋಕಸಭೆಯಲ್ಲಿ ಕೇಳಲಾದ ಚುಕ್ಕಿ ಗುರುತಿಲ್ಲದ ಪ್ರಶ್ನೆ ಸಂಖ್ಯೆ ೪೪೦; ಇದಕ್ಕೆ ೫.೧೨.೨೦೨೩ರಂದು ಉತ್ತರ ಸಿಕ್ಕಿತು). ಇದು, ಮನುಷ್ಯರು ಹೊಲಸನ್ನು ಚೊಕ್ಕಗೊಳಿಸುವ ಕಾರ್ಯವನ್ನು ಭಾರತದಲ್ಲಿ ೨೦೧೩ರಿಂದ ನಿಷೇಽಸಿದ್ದರ ಹೊರತಾಗಿಯೂ ನಡೆದಿರುವ
ಪ್ರಮಾದ.

೭. ನಮಾಮಿ ಗಂಗೆ: ಪ್ರಸ್ತುತ ಗಂಗಾ ನದಿಯಲ್ಲಿ ಕಾಣಬರುವ ಮಾಲಿನ್ಯದ ಮಟ್ಟವು ೨೦೧೪ರಲ್ಲಿ ದಾಖಲಾಗಿದ್ದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಒಳಚರಂಡಿ ಘಟಕದ ಯೋಜನೆಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನವು ಸಂಪನ್ನಗೊಂಡಿವೆ. ಇಷ್ಟಾಗಿಯೂ, ‘ಟಾಕ್ಸಿಕ್ ಲಿಂಕ್’ ಎಂಬ ಸಂಸ್ಥೆಯು ೨೦೨೧ರಲ್ಲಿ ಕೈಗೊಂಡ ‘ಕ್ವಾಂಟಿಟೇಟಿವ್ ಅನಾಲಿಸಿಸ್ ಆಫ್ ಮೈಕ್ರೋಪ್ಲಾಸ್ಟಿಕ್ಸ್ ಅಲಾಂಗ್ ರಿವರ್ ಗಂಗಾ’ ಹೆಸರಿನ ಅಧ್ಯಯನದ ಅನುಸಾರ, ಪರೀಕ್ಷೆಗೆ ಒಳಪಡಿಸಲಾದ ಮಾದರಿ ಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯಕಾರಕಗಳು ಅತಿಹೆಚ್ಚು ಪ್ರಮಾಣದಲ್ಲಿ ಕಂಡುಬಂದಿರುವುದು ವಾರಾಣಸಿಯಲ್ಲಿ. ಇದು ನಮ್ಮ ಪ್ರಧಾನ ಮಂತ್ರಿಗಳ ಮತಕ್ಷೇತ್ರವೂ ಹೌದು ಎಂಬುದು ನಿಮ್ಮ ಗಮನಕ್ಕೆ!

೮. ಸಾಗರಮಾಲಾ ಯೋಜನೆ: ಇದು ಭಾರತದ ಭಾರಿ ಸರಕುಸಾಗಣೆ ವಲಯದ ಸಾಮರ್ಥ್ಯವನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾಗಿರುವ ‘ಬಂದರು-ನೇತೃತ್ವ’ದ
ಒಂದು ಉಪಕ್ರಮವಾಗಿದೆ. ೨೦೨೨-೨೩ರ ಅನುದಾನದ ಬೇಡಿಕೆಗಳ ಸಮಿತಿಯ ಪ್ರಕಾರ, ಅಭಿವೃದ್ಧಿಯ ಹಂತದಲ್ಲಿರುವ ೪೪ ಯೋಜನೆಗಳ ಪೈಕಿ ೩೧ಕ್ಕೆ ಯಾವುದೇ ಆರ್ಥಿಕ ನೆರವನ್ನೇ ನೀಡಿಲ್ಲ ಎಂದು ತಿಳಿದುಬಂದಿದೆ.

೯. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಽ: ೨೦೨೧ರ ವರ್ಷದವರೆಗೆ, ೪೨ ಲಕ್ಷದಷ್ಟು ಅನರ್ಹ ರೈತರಿಗೆ ೩,೦೦೦ ಕೋಟಿ ರುಪಾಯಿಗಳನ್ನು ವರ್ಗಾವಣೆ ಮಾಡಲಾಗಿದೆ. ಇಂಥ ವಂಚಕ -ಲಾನುಭವಿಗಳಿಂದ ಹತ್ತನೇ ಒಂದು ಭಾಗದಷ್ಟು ಮೊತ್ತವನ್ನು ಮಾತ್ರವೇ ಕೇಂದ್ರ ಸರಕಾರವು ವಸೂಲಿಮಾಡಿದೆ (ರಾಜ್ಯಸಭೆಯ ಅಽವೇಶನ ೨೬೩ರಲ್ಲಿ ಕೇಳಲಾದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ೧೨; ಇದಕ್ಕೆ ೨.೨.೨೦೨೪ರಂದು ಉತ್ತರಿಸಲಾಗಿದೆ).

೧೦. ಆತ್ಮನಿರ್ಭರ ಭಾರತ: ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಂಎಸ್‌ಎಂಇ) ಮೇಲಾಧಾರ- ಮುಕ್ತ ಸ್ವಯಂಚಾಲಿತ ಸಾಲದ ರೂಪದಲ್ಲಿ ೩ ಲಕ್ಷ ಕೋಟಿ ರುಪಾಯಿ ನೀಡುವುದಾಗಿ ಈ ಯೋಜನೆಯು ಖಾತ್ರಿಪಡಿಸಿತು. ಆದರೆ, ಚಾಲ್ತಿಯಲ್ಲಿರುವ ಸಾಲಗಾರರನ್ನು ಮಾತ್ರವೇ ಈ ಯೋಜನೆಯಲ್ಲಿ
ಗುರಿಯಾಗಿಸಲಾಗಿದೆ ಎಂಬುದು ವಾಸ್ತವ.

೧೧. ಡಿಜಿಟಲ್ ಇಂಡಿಯಾ: ಇತ್ತೀಚಿನ ವರ್ಷಗಳಲ್ಲಿ ಆಧಾರ್ ಗುರುತಿನ ಚೀಟಿ ಆಧರಿತ ದತ್ತಮಾಹಿತಿಗಳನ್ನು (ಡೇಟಾ) ಭೇದಿಸುವ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ವರದಿಯಾಗಿವೆ. ಕಳೆದ ವರ್ಷ ಬರೋಬ್ಬರಿ ೮೧ ಕೋಟಿ ಭಾರತೀಯರ ಖಾಸಗಿ ಮಾಹಿತಿಯು ಡಾರ್ಕ್ ವೆಬ್ ಮಾಧ್ಯಮದಲ್ಲಿ ಹ್ಯಾಕರ್‌ಗಳಿಗೆ ಸೋರಿಕೆಯಾಗಿತ್ತು.

೧೨. ರೈಲ್ವೆ ಮೂಲಸೌಕರ್ಯ: ೨೦೧೭ ಮತ್ತು ೨೦೨೨ರ ವರ್ಷಗಳ ನಡುವೆ ಬರೋಬ್ಬರಿ ೨೪೪ರಷ್ಟು ರೈಲು ಅಪಘಾತಗಳು ಸಂಭವಿಸಿವೆ. ಇನ್ನು, ೨೦೨೩ರ ವರ್ಷವೊಂದರಲ್ಲೇ ೧೫ ದೊಡ್ಡ ಅಪಘಾತಗಳಾಗಿರುವುದು ವಿಷಾದನೀಯ. ಕಡ್ಡಾಯಗೊಳಿಸಲಾಗಿರುವ ರೈಲುಮಾರ್ಗದ ಸುರಕ್ಷತಾ ತಪಾಸಣೆಗಳ ಪೈಕಿ ಅರ್ಧದಷ್ಟು ಪೂರ್ಣಗೊಂಡಿಲ್ಲ ಎಂಬ ಮಾಹಿತಿಯು ಈ ಸಂಬಂಧವಾಗಿ ಬೆಳಕು ಚೆಲ್ಲಬಲ್ಲದು. ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ನ ಅಡಿಯಲ್ಲಿ ಅಂತರ್ಗತಗೊಳಿಸಿರುವುದೂ ಈ ಸ್ಥಿತಿಗೆ ಒಂದು ಕಾರಣವಾಗಿರಬಹುದು.

೧೩. ನಾರಿ-ಶಕ್ತಿ: ೨೦೨೧ರ ವರ್ಷದವರೆಗೆ, ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ನಿಧಿಗಳ ಸರಿಸುಮಾರು ಶೇ.೮೦ರಷ್ಟು ಭಾಗವನ್ನು ಜಾಹೀರಾತಿನ ಮೇಲೆ ಖರ್ಚುಮಾಡಲಾಗಿತ್ತು. ೨೦೨೧-೨೨ರಲ್ಲಿ, ಮಹಿಳಾ ಕಾರ್ಮಿಕರು ಪುರುಷರು ಗಳಿಸಿದ ಹಣದ ಶೇ.೬೦ರಷ್ಟನ್ನು ಸಂಪಾದಿಸಿದ್ದಾರೆ (ಆಧಾರ: ಪೆನ್ಸಿಲ್ವೇನಿಯಾದ ‘ಸಿಎಎಸ್‌ಐ’ ನೀಡಿರುವ ‘ಇಕನಾಮಿಕ್ ಗ್ರೋತ್, ಸ್ಟ್ರಕ್ಚರಲ್ ಚೇಂಜ್ ಆಂಡ್ ವಿಮೆನ್ಸ್ ಅರ್ನಿಂಗ್ಸ್ ಇನ್ ಇಂಡಿಯಾ’ ಎಂಬ
ವರದಿ). ೨೦೨೨ರಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ೪,೪೫,೨೫೬ ಅಪರಾಧ ಪ್ರಕರಣಗಳು ಜರುಗಿವೆ.ಇದರರ್ಥ, ಪ್ರತಿ ಗಂಟೆಗೆ ಬರೋಬ್ಬರಿ ೫೧ ಎಫ್ ಐಆರ್ ಗಳು (ಪ್ರಥಮ ಮಾಹಿತಿ ವರದಿಗಳು) ಸಲ್ಲಿಕೆಯಾಗಿವೆ (ಆಧಾರ: ಎನ್‌ಸಿಆರ್‌ಬಿ ಅಪರಾಧ ದಾಖಲೆಗಳು).

೧೪. ಉಡಾನ್ ಯೋಜನೆ: ‘ಉಡೇ ದೇಶ್ ಕಾ ಆಮ್ ನಾಗರಿಕ್’ ಎಂಬ ಆಶಯವನ್ನಿಟ್ಟುಕೊಂಡಿರುವ ಯೋಜನೆಯಿದು. ಆದರೆ ಉಡಾನ್-೩ ವಿಮಾನಯೋಜನೆ
ಅಡಿಯಲ್ಲಿ ಯೋಜಿಸಲಾದ ೭೭೪ ಮಾರ್ಗಗಳ ಪೈಕಿ ಅರ್ಧದಷ್ಟರ ಕಾರ್ಯಾಚರಣೆಗಳು ಶುರುವಾಗಲೇ ಇಲ್ಲ. ಕಾರ್ಯಾಚರಣೆಯನ್ನು ಪ್ರಾರಂಭಿಸಿದ ೩೭೧ ಮಾರ್ಗಗಳ ಪೈಕಿ ಮೂರನೇ ಒಂದರಷ್ಟು ಭಾಗದವು ಮಾತ್ರವೇ ೩ ವರ್ಷಗಳ ರಿಯಾಯಿತಿ ಅವಧಿಯನ್ನು ಪೂರ್ಣಗೊಳಿಸಬಹುದು (ಆಧಾರ: ಸಿಎಜಿ ವರದಿ, ಕೇಂದ್ರ ಸರಕಾರದ ನಾಗರಿಕ ವಿಮಾನಯಾನ ಖಾತೆ).

೧೫. ಹಸಿವು: ಲಭ್ಯ ಮಾಹಿತಿಗಳ ಪ್ರಕಾರ, ನಾಲ್ವರು ಭಾರತೀಯರ ಪೈಕಿ ಮೂವರಿಗೆ ಆರೋಗ್ಯಕರವಾದ ಸಮತೋಲಿತ ಆಹಾರವನ್ನು ಪಡೆಯಲು ಆಗುತ್ತಿಲ್ಲ.
ಆದ್ದರಿಂದ, ಕೋವಿಡ್ ಮಹಾಮಾರಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಕಾರ್ಯಕ್ರಮವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಪರಿಣಾಮವಾಗಿ, ಒಂದೆಡೆ ಶತಕೋಟ್ಯಧಿಪತಿಗಳ ಸಂಖ್ಯೆಯು ಹಲವು ಪಟ್ಟು ಹೆಚ್ಚುತ್ತಿದ್ದರೆ, ಮತ್ತೊಂದೆಡೆ ೮೦ ಕೋಟಿ ಭಾರತೀಯರು ತಮ್ಮ ಊಟಗಳಿಗಾಗಿ ಉಚಿತ ಪಡಿತರವನ್ನೇ ಇನ್ನೂ ಅವಲಂಬಿಸುವಂತಾಗಿದೆ.

ಹಾಗಿದ್ದ ಮೇಲೆ, ‘ಮೋದಿ ಗ್ಯಾರಂಟಿ’ಯನ್ನು ‘ಶೂನ್ಯ ಗ್ಯಾರಂಟಿ’ ಅಂತ ಕರೆಯಬೇಕಾಗುತ್ತದೆ, ಅಲ್ಲವೇ?

(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್) (ಲೇಖಕರು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು
ಹಾಗೂ ರಾಜ್ಯಸಭಾ ಸದಸ್ಯರು)