Friday, 13th December 2024

ಮೋದಿ ಏಕೆ ಒಂದಾದ ಮೇಲೊಂದು ಎಲೆಕ್ಷನ್ ಗೆಲ್ಲುತ್ತಾರೆ ?

ಅಕ್ಬರ‍್ ನಾಮಾ

ಎಂ.ಜೆ.ಅಕ್ಬರ್‌

ಮೋದಿಯವರು ಭಾರತಕ್ಕೊಂದು ಆಧುನಿಕ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ. ಅದರಲ್ಲಿ ಜಾತೀಯತೆ ಮತ್ತು ಮತಾಂಧತೆಯನ್ನು ತನ್ನಿಂತಾನೇ ನಿರ್ಮೂಲನೆ ಮಾಡುವ ಮಂತ್ರದಂಡವನ್ನು ಅಳವಡಿಸಿದ್ದಾರೆ. ಯಾವುದೇ ವ್ಯಕ್ತಿಯ ಗುರುತು, ಹುಟ್ಟು ಅಥವಾ ಧರ್ಮದಿಂದ ನಿರ್ಧಾರವಾಗಬಾರದು. ಅದು ಆರ್ಥಿಕತೆಯಿಂದ ನಿರ್ಧಾರವಾಗಬೇಕು ಎಂಬುದು ಮೋದಿ ಸಿದ್ಧಾಂತ. ಹಾಗಿದ್ದರೆ ಮಹಿಳೆಯರೇಕೆ ಮೋದಿಗೆ ಮತ ಹಾಕುತ್ತಾರೆ? ಇದಕ್ಕೆ ಉತ್ತರ ಹೇಳಲು ಏನೂ ಕಷ್ಟವಿಲ್ಲ ಬಿಡಿ!

ಈ ಪ್ರಶ್ನೆಯಲ್ಲಿ ದೊಡ್ಡ ರಹಸ್ಯವೇನೂ ಇಲ್ಲ. ದಿಲ್ಲಿಯ ಐಷಾರಾಮಿ ಇಂಗ್ಲಿಷ್ ಓಣಿಗಳಲ್ಲಿ ನೀವು ಕಳೆದೊಂದು ದಶಕದಿಂದ ವಾಸಿಸುತ್ತಿಲ್ಲ ಎಂದಾದರೆ ಬಹುಶಃ ಈ ಪ್ರಶ್ನೆಗೆ ನಿಮಗೂ ಉತ್ತರ ಗೊತ್ತಿರಬಹುದು. ಪ್ರಧಾನಿ ನರೇಂದ್ರ ಮೋದಿ ಏಕೆ ಒಂದಾದ ಮೇಲೊಂದು ಚುನಾವಣೆಯನ್ನು ಗೆಲ್ಲುತ್ತಿದ್ದಾರೆ? ದೇಶದ ರಾಜ
ಕೀಯದಲ್ಲಿ ಘಟಿಸುತ್ತಿರುವ ಇಂಥದ್ದೊಂದು ಮಹತ್ವದ ಬೆಳವಣಿಗೆಯ ಸಾರಾಂಶವಿಷ್ಟೆ: ಇಷ್ಟು ಕಾಲ ಹಿಂದುಳಿದಿದ್ದ ನಿರ್ಲಕ್ಷಿತ ಸಮುದಾಯಗಳ ಮಹಿಳೆಯರಲ್ಲಿ
ಈಗ ರಾಜಕೀಯ ಪ್ರe ಜಾಗೃತವಾಗುತ್ತಿದೆ. ಅವರು ಚುನಾವಣೆಯಲ್ಲಿ ಮತದಾನ ಮಾಡುವುದರ ಬಗ್ಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಈ ‘ಮೋದಿ
ದಶಕ’ದಲ್ಲಿ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ.

ಅವರ ಪ್ರಗತಿಯೆಂಬುದು ಕೇವಲ ಅಂಕಿಅಂಶಗಳಲ್ಲಿ ಅಲ್ಲದೆ ವಾಸ್ತವದಲ್ಲಿಯೂ ಸಾಕಾರವಾಗುತ್ತಿದೆ. ಈಗ ದೇಶಾದ್ಯಂತ ಇರುವ ಬಡವರಿಗೆ ಅವರ ನಾಯಕ
ಲಭಿಸಿದ್ದರೆ, ಮಹಿಳೆಯರಿಗೆ ಇಷ್ಟು ಕಾಲ ಬರೀ ಭರವಸೆಗಳ ರೂಪದಲ್ಲಿ ಕೇಳಿಸುತ್ತಿದ್ದ ಸೌಕರ್ಯಗಳು ನಿಜವಾಗಿಯೂ ಸಿಗುತ್ತಿವೆ. ಬಡ ಹಾಗೂ ಮಧ್ಯಮ ವರ್ಗದವರ ಬದುಕು ಹೇಗಿರುತ್ತದೆ? ಇಲ್ಲಿ ಗಂಡಸರು ಹಣ ಸಂಪಾದನೆ ಮಾಡುತ್ತಾರೆ, ಹೆಂಗಸರು ಊಟ ಹಾಕುತ್ತಾರೆ. ಇದೊಂದು ಸರ್ವೇಸಾಮಾನ್ಯ ಚಿತ್ರಣ. ಈ ವ್ಯವಸ್ಥೆ ಯಲ್ಲಿ ಯಾವುದೇ ಕುಟುಂಬಕ್ಕೆ ಮಹಿಳೆಯರೇ ಮೂಲಾಧಾರ. ಮನೆಯ ಎಲ್ಲರೂ ಸೇರಿ ದುಡಿದಿದ್ದನ್ನು ಅವರು ಒಟ್ಟು ಸೇರಿಸಿ, ಮನೆಗೆ ಬೇಕಾದ ಕಾಳುಬೇಳೆ ತಂದು ಎಲ್ಲರ ಹೊಟ್ಟೆ ಹೊರೆಯುತ್ತಾರೆ.

ಅಲ್ಪಸ್ವಲ್ಪ ಹಣ ಮಿಕ್ಕಿದರೆ ಅದನ್ನು ಹಬ್ಬ-ಹರಿದಿನ, ಜಾತ್ರೆಗಳು ಹಾಗೂ ಮನೋರಂಜನೆಗೆ ಖರ್ಚು ಮಾಡುತ್ತಾರೆ. ಈ ಚಿತ್ರಣವೀಗ ನಿಧಾನವಾಗಿ ಬದಲಾಗುತ್ತಿದೆ ಎಂಬುದು ನಿಜ, ಆದರೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಬದಲಾಗಿಲ್ಲ. ಆಗಾಗ ಬೇರೆ ಬೇರೆ ರಾಜ್ಯಗಳಲ್ಲಿ ಮಹಿಳೆಯರು ಮದ್ಯ ನಿಷೇಧಿಸುವಂತೆ ಹೋರಾಟ, ಧರಣಿಗಳನ್ನು ನಡೆಸುವುದು ಕೂಡ ಇದೇ ಕಾರಣಕ್ಕೆ. ಗಂಡಸರು ದುಡಿದ ಬಹುಪಾಲು ಹಣ ಮದ್ಯದಂಗಡಿಗಳಲ್ಲಿ ಖರ್ಚಾಗದೆ ಮನೆಗೆ ಬರಲಿ ಎಂಬುದಷ್ಟೇ ಅವರ ಕಳಕಳಿ. ಗಂಡ ದುಡಿದ ಹಣವೆಲ್ಲಾ ಎಲ್ಲಿ ಹೆಂಡಕ್ಕೆ ಖರ್ಚಾಗಿ ಮಕ್ಕಳನ್ನು ಉಪವಾಸ ಮಲಗಿಸುವ ದಿನ ಬಂದುಬಿಡುತ್ತದೆಯೋ ಎಂಬ ಹೆದರಿಕೆ ಅವರದು.

ಇನ್ನು, ಸಾಮಾನ್ಯವಾಗಿ ಮಹಿಳೆಯರು ದುಡಿಯುವ ಹಣ ಯಾವಾಗಲೂ ಸುರಕ್ಷಿತವಾಗಿರುತ್ತದೆ. ಏಕೆಂದರೆ ಅವರು ತಮಗಿಂತ ಹೆಚ್ಚಾಗಿ ತಮ್ಮ ಕುಟುಂಬದ ಬಗ್ಗೆ
ಯೋಚಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿಯೇ ಅವರು ಸ್ವಚ್ಛ ಭಾರತದಿಂದ ಆರಂಭಿಸಿ, ಜನಧನ್ ಬ್ಯಾಂಕ್ ಖಾತೆ, ಉಚಿತ ಅಡುಗೆ ಸಿಲಿಂಡರ್, ಮುದ್ರಾ ಬ್ಯಾಂಕ್ ಸಾಲ, ಕೋವಿಡ್ ಸಮಯದಲ್ಲಿ ಆರಂಭಿಸಿದ ಉಚಿತ ಅಕ್ಕಿ ವಿತರಣೆಯ ಗರೀಬ್ ಕಲ್ಯಾಣ್ ಯೋಜನೆ ಮುಂತಾದವುಗಳ ಮೂಲಕ ಮಹಿಳೆಯರ ಮನಸ್ಸನ್ನು ತಟ್ಟಿದರು.

ಬಡ ವರ್ಗದ ಜನರು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಊಟಕ್ಕೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾಗ ಅವರಿಗೆ ೫ ಕೆ.ಜಿ. ಉಚಿತ ಅಕ್ಕಿ ಅಥವಾ ಗೋಽ ಹಾಗೂ ೧ ಕೆ.ಜಿ. ಬೇಳೆಯ ಪೊಟ್ಟಣವನ್ನು ಮನೆಗೇ ಕಳುಹಿಸಿ ದರು. ನೆರವಿನ ನಿರೀಕ್ಷೆಯಲ್ಲಿದ್ದ ದೇಶದ ಪ್ರತಿಯೊಂದು ಮನೆಗೂ ಈ ಪೊಟ್ಟಣಗಳು ಹೋಗಿ ಸೇರಿದವು. ಆ ಮನೆಯಲ್ಲಿರುವವರ ಹೆಸರೇನು, ಅವರ ಜಾತಿಯೇನು, ಧರ್ಮವೇನು ಎಂಬುದನ್ನು ಯಾರೂ ಕೇಳಲಿಲ್ಲ. ಜೀವ ಉಳಿಸಿಕೊಳ್ಳುವುದು ಹೇಗೆಂಬ ಚಿಂತೆಯಲ್ಲೇ ಎಲ್ಲರೂ ಇದ್ದಾಗ ಈ ಉಚಿತ ಆಹಾರ ಯೋಜನೆಯು ದೇಶದ ೮೦ ಕೋಟಿ ಜನರನ್ನು ಕಾಪಾಡಿತು.

ಅವರಿಗೆ ಆಹಾರದ ಭದ್ರತೆಯನ್ನು ನೀಡಿತು. ಈಗ ಇದೇ ಆಹಾರ ಭದ್ರತೆಯನ್ನು ಮೋದಿ ೨೦೨೮ರವರೆಗೆ ವಿಸ್ತರಿಸಿದ್ದಾರೆ. ಇತಿಹಾಸದಲ್ಲೇ ಅತ್ಯಂತ ದೊಡ್ಡ
ಸಾಮಾಜಿಕ ಕಲ್ಯಾಣ ಯೋಜನೆಯಿದು. ಕೇವಲ ಒಂದೇ ಒಂದು ನಿರ್ಧಾರದ ಮೂಲಕ ನಿರ್ಲಕ್ಷಿತ ಮಹಿಳಾ ಸಮುದಾಯವನ್ನು ಅತಿದೊಡ್ಡ ಆತಂಕದಿಂದ ಮೋದಿ ಹೊರಗೆ ತಂದುಬಿಟ್ಟರು. ಅಂದಮೇಲೆ ತಮ್ಮ ಕುಟುಂಬಕ್ಕೆ ಅನ್ನದಾತನಾಗಿರುವ ನಾಯಕನನ್ನು ಮಹಿಳೆಯರು ಯಾಕಾದರೂ ಕಡೆಗಣಿಸುತ್ತಾರೆ? ಆಹಾರ, ವಿದ್ಯುತ್, ಸೂರು, ಗ್ಯಾಸ್, ನೀರು, ನೈರ್ಮಲ್ಯ, ಆರೋಗ್ಯ ಮತ್ತು ಶಿಕ್ಷಣ- ಬದುಕಿನ ಈ ಮೂಲಸೌಕರ್ಯಗಳಿಂದ ಇಂದು ದೇಶದ ಒಂದೇ ಒಂದು ಮನೆಯೂ ಜಾತಿ ಅಥವಾ ಧರ್ಮದ ಕಾರಣ ದಿಂದ ಹೊರಗುಳಿದಿಲ್ಲ.

ಈ ಸೌಕರ್ಯಗಳನ್ನು ನಿಮಗೆ ನೀಡುವಾಗ ನೀವು ಮೋದಿಗೆ ಮತ ಹಾಕಿದ್ದೀರೋ ಇಲ್ಲವೋ ಎಂಬುದನ್ನು ಯಾರೂ ಕೇಳುವುದಿಲ್ಲ. ದೇಶದ ವರ್ಣಾಶ್ರಮ ವ್ಯವಸ್ಥೆಯನ್ನು ಮೋದಿ ಕ್ರಾಂತಿಕಾರಿ ರೀತಿಯಲ್ಲಿ ಮರುವಿನ್ಯಾಸ ಮಾಡಿದ್ದಾರೆ. ಅವರ ಹೊಸ ವ್ಯವಸ್ಥೆಯಲ್ಲಿ ಮಹಿಳೆಯರು ಎಂಬುದು ‘ಪ್ರಧಾನ ಜಾತಿ’. ಎಲ್ಲಾ ಮಹಿಳೆಯರೂ ಒಂದು ಜಾತಿ ಎಂದು ಇತ್ತೀಚೆಗೆ ಚುನಾವಣಾ ರ‍್ಯಾಲಿಯೊಂದರಲ್ಲಿ ಅವರೇ ಹೇಳಿದ್ದರು. ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮಹಿಳೆಯರೆಲ್ಲ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದರು. ಸಾಂಪ್ರದಾಯಿಕ ವರ್ಣಾಶ್ರಮ ವ್ಯವಸ್ಥೆಯನ್ನು ಮರುವ್ಯಾಖ್ಯಾನ ಮಾಡಿ ಮೋದಿ ಪಟ್ಟಿ ಮಾಡಿದ ಹೊಸ ಜಾತಿಗಳು ಯಾವುವು ಗೊತ್ತಾ? ಬಡವರು, ಯುವಕರು, ಮಹಿಳೆಯರು ಮತ್ತು ಕೃಷಿಕರು. ಇವೇ ನಾಲ್ಕು ನಮ್ಮ ದೇಶದ ಜಾತಿಗಳು. ನಮ್ಮ ಅನುಭವದ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬೇಕು; ಯುವಕರೇ ದೇಶದ ಭವಿಷ್ಯ; ಮಹಿಳೆಯರು ಈ ದೇಶದ ಸಂರಕ್ಷಕರು; ಮತ್ತು ರೈತರು ಇಡೀ ದೇಶಕ್ಕೆ ಅನ್ನ ಹಾಕುವ ಪುಣ್ಯಾತ್ಮರು. ಮೋದಿಯವರು ಭಾರತಕ್ಕೊಂದು ಆಧುನಿಕ ಆಡಳಿತ ವ್ಯವಸ್ಥೆಯನ್ನು ರೂಪಿಸಿ ಕೊಟ್ಟಿದ್ದಾರೆ. ಅದರಲ್ಲಿ ಜಾತೀಯತೆ ಮತ್ತು ಮತಾಂಧತೆಯನ್ನು ತನ್ನಿಂತಾನೇ ನಿರ್ಮೂಲನೆ ಮಾಡುವ ಮಂತ್ರದಂಡವನ್ನು ಅಳವಡಿಸಿದ್ದಾರೆ. ಯಾವುದೇ ವ್ಯಕ್ತಿಯ ಗುರುತು, ಹುಟ್ಟು ಅಥವಾ ಧರ್ಮದಿಂದ ನಿರ್ಧಾರವಾಗ ಬಾರದು. ಅದು ಆರ್ಥಿಕತೆಯಿಂದ ನಿರ್ಧಾರವಾಗಬೇಕು ಎಂಬುದು ಮೋದಿ ಸಿದ್ಧಾಂತ.

ಹಾಗಿದ್ದರೆ ಮಹಿಳೆಯರೇಕೆ ಮೋದಿಗೆ ಮತ ಹಾಕುತ್ತಾರೆ? ಇದಕ್ಕೆ ಉತ್ತರ ಹೇಳಲು ಏನೂ ಕಷ್ಟವಿಲ್ಲ ಬಿಡಿ!
***

ಜೀವನದ ಅತಿದೊಡ್ಡ ಸಂತೋಷಗಳಲ್ಲಿ ಹೊಸ ಪುಸ್ತಕವನ್ನು ತೆರೆಯುವುದು ಕೂಡ ಒಂದು. ಯಾರೂ ಯಾವ ಪುಸ್ತಕವನ್ನೂ ‘ಇದು ಕೆಟ್ಟ ಪುಸ್ತಕವಿರಬಹುದು’
ಎಂಬ ನಿರೀಕ್ಷೆಯಲ್ಲಿ ಖರೀದಿಸುವುದಿಲ್ಲ. ಅದು ಒಳ್ಳೆಯ ಪುಸ್ತಕವೆಂಬ ನಿರೀಕ್ಷೆಯಲ್ಲೇ ಖರೀದಿಸುತ್ತಾರೆ. ಆದರೂ ಆ ಪುಸ್ತಕ ಚೆನ್ನಾಗಿದ್ದರೆ ಖುಷಿ ಇನ್ನಷ್ಟು
ಜಾಸ್ತಿಯಾಗುತ್ತದೆ. ‘ಅಶೋಕ: ಪೋರ್ಟ್ರೇಟ್ ಆಫ್ ಎ ಫಿಲಾಸಫರ್ ಕಿಂಗ್’ ಪುಸ್ತಕವನ್ನು ಅದರ ಮುಖಪುಟ ಮತ್ತು ಒಳಗಿನ ಹೂರಣವೆರಡರಿಂದಲೂ ಸುಲಭವಾಗಿ ಅಳೆಯಬಹುದು. ಏಕೆಂದರೆ ಅವೆರಡೂ ಅದ್ಭುತವಾಗಿವೆ.

ಪ್ಯಾಟ್ರಿಕ್ ಓಲಿವೆಲ್ಲೆ ಶ್ರೀಲಂಕಾದಲ್ಲಿ ಹುಟ್ಟಿ, ಅಲ್ಲೇ ಬೆಳೆದವರು. ಈಗ ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವ
ಹಿಸುತ್ತಿದ್ದಾರೆ. ಅಸಾಧಾರಣ ಬುದ್ಧಿವಂತ ವ್ಯಕ್ತಿ. ಭಾಷೆ ಯನ್ನು ಎಷ್ಟು ಸರಳವಾಗಿ ಬಳಸುತ್ತಾರೆಂದರೆ, ನಮಗೆ ಅಷ್ಟು ಸರಳವಾಗಿ ಬರೆಯಲು ಬರುವುದಿಲ್ಲವಲ್ಲಾ
ಎಂದು ಅಸೂಯೆಯಾಗುತ್ತದೆ. ಅತ್ಯಂತ ಸುಲಭವಾದ ಭಾಷೆಯಲ್ಲೇ ಆಳವಾದ ಸಂಗತಿಗಳನ್ನು ಕಟ್ಟಿಕೊಡುವುದು ಅವರ ಶೈಲಿ. ಬುದ್ಧ, ಅಶೋಕ, ಚೋಳ,
ಗಾಂಧಾರ, ಕಳಿಂಗ, ಕಾಂಬೋಜ, ಪಾಂಡ್ಯ, ಪಿಟಿಣಿಕ ಹಾಗೂ ಶ್ರೀಲಂಕಾದ ಹಳೆಯ ಹೆಸರಾದ ತಾಮ್ರ ಪರ್ಣಿಯ ಕುರಿತ ಅವರ ಸಂಶೋಧನೆಗಳು
ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತವೆ.

ಯಾವುದು ಕೆಟ್ಟಿಲ್ಲವೋ ಅದನ್ನು ರಿಪೇರಿ ಮಾಡಲು ಹೊರಡುವ ವ್ಯಕ್ತಿ ನಾನಲ್ಲ. ಹಾಗೆ ಮಾಡುವುದರಲ್ಲಿ ನನಗೆ ನಂಬಿಕೆಯೂ ಇಲ್ಲ. ಆದರೆ ಅಧಿಕಾರಶಾಹಿಯ
ಅನಾಸಕ್ತಿಕರ ಪಡಸಾಲೆಯೊಳಗೆ ಒಂದಷ್ಟು ಕಾವ್ಯಾತ್ಮಕತೆ ಯನ್ನು ತುಂಬುವುದಕ್ಕೇನೂ ಅಡ್ಡಿಯಿಲ್ಲ ಅಲ್ಲವೇ? ಬ್ರಿಟಿಷರು ಉಕ್ಕಿನ ಅನೇಕ ನಿರ್ಮಿತಿಗಳನ್ನು ನಮಗಾಗಿ ಬಿಟ್ಟುಹೋದರು. ಅವೆಲ್ಲ ಇವತ್ತಿಗೂ ಗಟ್ಟಿಮುಟ್ಟಾಗಿ ನಿಂತಿವೆ. ಆದರೆ ಒಂದಷ್ಟು ವಿಚಿತ್ರಗಳನ್ನೂ ಕೊಟ್ಟು ಹೋದರು. ಅವರು ಬಳುವಳಿಯಾಗಿ ನೀಡಿದ ಆಡಳಿತ ವ್ಯವಸ್ಥೆಯಲ್ಲಿ ನಿರ್ದೇಶಕರು ಕಾರ್ಯದರ್ಶಿಗಿಂತ ಕೆಳಗಿನವರು. ಆ ಸೆಕ್ರೆಟರಿಗಳಲ್ಲೂ ಅಂಡರ್, ಓವರ್, ಅಡಿಷನಲ್ ಹೀಗೆ ಹಲವಾರು ರೀತಿಯವ ರಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಅಶೋಕ ಚಕ್ರವರ್ತಿ ತನ್ನ ಬೃಹತ್ ಸಾಮ್ರಾಜ್ಯವನ್ನು ಸರಕಾರದ ನಾಲ್ಕು ವಿಭಾಗಗಳ ಮೂಲಕ ಆಳುತ್ತಿದ್ದ. ಅತ್ಯುನ್ನತ ಹಂತದಲ್ಲಿ ಮಹಾ ಮಂತ್ರ ಎಂಬ ವಿಭಾಗವಿರುತ್ತಿತ್ತು. ಅದು ಒಂದು ಇಲಾಖೆ ಅಥವಾ ಗವರ್ನರ್ ರೀತಿಯಲ್ಲಿ ಕೆಲಸ ಮಾಡುತ್ತಿತ್ತು. ಅದರ ಅಽನದಲ್ಲಿ ಕ್ರಮವಾಗಿ ಯಕ್ತ, ರಾಜುಕ ಹಾಗೂ ಪ್ರಾದೇಶಿಕ ಎಂಬ ವಿಭಾಗಗಳಿರುತ್ತಿದ್ದವು.

ಭರತ ಖಂಡಕ್ಕೆ ಮತ್ತೆ ಜಂಬೂದ್ವೀಪ ಅಥವಾ ಗುಲಾಬಿ ಸೇಬಿನ ನಾಡು ಎಂದು ಹೆಸರಿಡುವುದಕ್ಕೆ ಈಗ ತುಂಬಾ ತಡವಾಗಿದೆ ಬಿಡಿ. ಆದರೆ ಅದರ ಬಗ್ಗೆ ಒಂದು
ವಿಚಾರ ಸಂಕಿರಣವನ್ನಾದರೂ ನಡೆಸಬಹುದಲ್ಲ. ‘ಜಂಬೂದ್ವೀಪ ವಿಚಾರ ಸಂಕಿರಣ’ ನಡೆಸಲು ಒಂದು ಚಿಂತಕರ ಚಾವಡಿಯನ್ನು ಹುಟ್ಟುಹಾಕಿ, ಅದರ
ಮೂಲಕ ಪ್ರಾದೇಶಿಕ ಆಹಾರ ಹಾಗೂ ವ್ಯೂಹಾತ್ಮಕ ಭದ್ರತೆಯ ಬಗ್ಗೆ ಒಂದೊಳ್ಳೆಯ ಚಿಂತನ ಮಂಥನ ನಡೆಸಬಹುದು. ಅದಕ್ಕೆ ಹಣ ಎಲ್ಲಿಂದ ತರುವುದು
ಎಂಬುದೇ ಪ್ರಶ್ನೆ.

ಮತ್ತೆ ಪ್ಯಾಟ್ರಿಕ್ ಓಲಿವಿಲ್ಲೆಗೆ ಬರೋಣ. ಈ ದೇಶ ಕಂಡ ಅಪ್ರತಿಮ ಚಕ್ರವರ್ತಿ ಅಶೋಕನ ಜೀವಿತದಲ್ಲಿ ಕಳಿಂಗದ ಮೇಲಿನ ಯುದ್ಧ ಮತ್ತು ಅದರ ನಾಶ
ವೊಂದು ಕಪ್ಪುಚುಕ್ಕೆ. ಹೆಚ್ಚುಕಮ್ಮಿ ಇಂದಿನ ಒಡಿಶಾವೇ ಅಂದಿನ ಕಳಿಂಗ. ಅಲ್ಲಿನ ಅನಾಮಧೇಯ ರಾಜನೊಬ್ಬ ಯಾರಿಗೂ ತಲೆಬಾಗುತ್ತಿರಲಿಲ್ಲ. ಅಕ್ಕಪಕ್ಕದ ಮಹತ್ವಾಕಾಂಕ್ಷಿ ರಾಜರುಗಳ ಕಣ್ಣು ಕುಕ್ಕಿಸುವ ಸಂಪತ್ತು ಅವನ ನಾಡಿನಲ್ಲಿತ್ತು. ಅರ್ಥಶಾಸ್ತ್ರದಲ್ಲಿ ಕೌಟಿಲ್ಯ ಹೇಳುವಂತೆ, ಕಳಿಂಗದ ಯುದ್ಧಾನೆಗಳು ಹಾಗೂ ಮಜಬೂತಾದ ಹಳೆಯ ಸೇನೆಯ ಬೃಹತ್ ಟ್ಯಾಂಕ್‌ಗಳು ಆ ಕಾಲದ ಬೇರಾವುದೇ ಸೇನೆಯಲ್ಲಿರುವುದಕ್ಕಿಂತ ಉತ್ಕೃಷ್ಟವಾಗಿದ್ದವು.

ರಸ್ತೆ ಹಾಗೂ ಸಮುದ್ರ ಮಾರ್ಗದಲ್ಲಿ ನಡೆಯುವ ವ್ಯಾಪಾರದ ಮೇಲೆ ಕಳಿಂಗ ದೇಶ ಅಧಿಪತ್ಯ ಸ್ಥಾಪಿಸಿತ್ತು. ಅಲ್ಲಿನ ಬಂದರುಗಳು ಆಗ್ನೇಯ ಏಷ್ಯಾಕ್ಕೆ ಸರಕುಗಳನ್ನು ಕಳುಹಿಸುತ್ತಿದ್ದವು. ೨೫೦೦ ವರ್ಷಗಳ ನಂತರವೂ ನಾವು ಶಾಲೆಯ ಪಠ್ಯಪುಸ್ತಕಗಳಲ್ಲಿ ಓದುವಷ್ಟು ಪ್ರಾಮುಖ್ಯವನ್ನು ಮೌರ್ಯ ಸಾಮ್ರಾಜ್ಯ ಗಳಿಸಿಕೊಳ್ಳಬೇಕು ಅಂತಾದರೆ ಅದಕ್ಕೆ ಅಶೋಕನು ಕಳಿಂಗವನ್ನು ಗೆಲ್ಲಬೇಕಿತ್ತು! ಹೀಗಾಗಿ ಕ್ರಿಸ್ತಪೂರ್ವ ೨೬೦ರಲ್ಲಿ ಅವನು ಯುದ್ಧ ಮಾಡಿದ. ಆ ಗೆಲುವಿನಿಂದ ಅವನಿಗೆ ಸಿಕ್ಕಿದ್ದೇನೆಂದರೆ ಹೆಣದ ರಾಶಿಗಳು! ಕನಿಷ್ಠ ಒಂದು ಲಕ್ಷ ಶತ್ರುಗಳು ಯುದ್ಧಭೂಮಿಯಲ್ಲಿ ಸತ್ತು ಮಲಗಿದ್ದರು.

ಹಾಗಂತ ಆಗ ಏನೂ ಬದಲಾಗಲಿಲ್ಲ. ಆದರೆ ನಂತರ ದೊರೆತ ಅಶೋಕನ ಶಿಲಾಶಾಸನಗಳಲ್ಲಿ ಅವನು ತನ್ನಿಂದಾದ ನೋವಿಗೆ ಮನುಕುಲದ ಕ್ಷಮೆ ಯಾಚಿಸಿದ. ಹಾಗಾದರೆ ಒಂದು ಸಂಗತಿಯಾದರೂ ಬದಲಾದಂತಾಯಿತು. ಯುದ್ಧ ಗೆದ್ದವನು ಕ್ಷಮೆ ಕೇಳಿದನಲ್ಲ!
***

ಕೃತಕ ಬುದ್ಧಿಮತ್ತೆ ಬಗ್ಗೆ ಭಯಾನಕ ಎನ್ನಿಸುವ ಏಕೈಕ ಸಂಗತಿಯೆಂದರೆ ಎಷ್ಟೊಂದು ಯುವಕರು ಕೂಡ ಇದನ್ನು ಭಯಾನಕ ಎಂದು ಪರಿಗಣಿಸುತ್ತಾರಲ್ಲಾ ಎಂಬುದು. ಯುವ ಸಹೋದ್ಯೋಗಿಯೊಬ್ಬರು ಇತ್ತೀಚೆಗೆ ‘ಈ ರೋಬೋಟ್‌ಗಳಿಗೆಲ್ಲ ಒಂದು ದಿನ ಜೀವ ಬಂದು, ಅವು ತಮ್ಮನ್ನು ಸೃಷ್ಟಿಸಿದವರ ಮೇಲೆ ಸೇಡು
ತೀರಿಸಿಕೊಳ್ಳಲು ನಿರ್ಧರಿಸಿ, ಒಬ್ಬರಾದ ಮೇಲೆ ಒಬ್ಬ ರಂತೆ ಎಲ್ಲಾ ಮನುಷ್ಯರನ್ನೂ ಕೊಲ್ಲತೊಡಗಿದರೆ ಏನು ಮಾಡಬೇಕು’ ಎಂದು ಕೇಳಿದರು. ಇದು ತಲೆಬುಡ ವಿಲ್ಲದ ಆತಂಕ. ಏಕೆಂದರೆ ರೋಬೋಟ್‌ಗಳು ನಾವು ನೀಡುವ ಮಾಹಿತಿ ಮತ್ತು ಲಾಜಿಕ್ ಮೇಲೆ ಕೆಲಸ ಮಾಡುತ್ತವೆ. ಎರಡನೆಯದಾಗಿ, ಮನುಷ್ಯ ಮತ್ತು
ಜಿರಳೆಗೆ ಎಲ್ಲಿ ಬೇಕಾದರೂ ಬದುಕುಳಿಯುವ ಸಾಮರ್ಥ್ಯವಿದೆ.

ಈ ಬ್ರಹ್ಮಾಂಡದಲ್ಲಿ ಜೀವವಿಕಾಸದ ಮುಂದಿನ ಹಂತ ಕೃತಕ ಬುದ್ಧಿಮತ್ತೆಯೇ ಆಗಿದ್ದರೆ ‘ಕೃತಕ ಬುದ್ಧಿಮತ್ತೆ’ ಎಂಬ ಹೆಸರು ಅರ್ಧ ಮಾತ್ರ ಸರಿಯಾಗಿದೆ
ಎಂಬುದು ನನ್ನ ಅಂಬೋಣ. ಇದು ಕೃತಕ ಎಂಬುದು ಸರಿ, ಆದರೆ ಇದರ ಸೃಷ್ಟಿಕರ್ತರು ಹೇಳುತ್ತಿರುವಷ್ಟು ಹಾಗೂ ಬೇರೆಯವರು ಆತಂಕಗೊಳ್ಳುತ್ತಿರುವಷ್ಟು
ಇದು ಬುದ್ಧಿವಂತ ಅಲ್ಲ. ಏಕೆಂದರೆ ಮಾಹಿತಿ ಸಂಗ್ರಹಿಸುವುದೇ ಜ್ಞಾನವಲ್ಲ. ಲೆಕ್ಕಾಚಾರವೇ ಗಣಿತವಲ್ಲ. ಇತ್ತೀಚೆಗೆ ಬಂದಿರುವ ಒಂದು ವರದಿಯ ಪ್ರಕಾರ ಕೃತಕ
ಬುದ್ಧಿಮತ್ತೆಯು ವಿಕಾಸಗೊಳ್ಳುವ ಅಥವಾ ಸೃಜನಶೀಲ ಶಕ್ತಿಯನ್ನು ಹೊಂದಿಲ್ಲ. ಮನುಷ್ಯನ ಮಿದುಳಿನಂತೆ ಇದಕ್ಕೆ ಸೃಜನಾತ್ಮಕ ಶಕ್ತಿಯಿಲ್ಲ. ಕೃತಕ ಬುದ್ಧಿಮತ್ತೆಯೆಂಬುದು ಒಂದು ಉತ್ಪನ್ನವೇ ಹೊರತು ಇದೇ ಸೃಷ್ಟಿಯಲ್ಲ.

ಇದು ಯಂತ್ರವೇ ಹೊರತು ಹೊಸ ಜೀವವಲ್ಲ. ಇದೊಂದು ಅಲ್ಗಾರಿದಮ್ಮೇ ಹೊರತು ನಮ್ಮ ಮನಸ್ಸಲ್ಲ. ಮನುಷ್ಯ ಕುಲವನ್ನೇ ಇದು ನಾಶಪಡಿಸುತ್ತದೆ ಎಂಬ
ವದಂತಿಗಳು, ಮಾರ್ಕ್ ಟ್ವೇನ್ ಹೇಳುತ್ತಿದ್ದಂತೆ, ಬಹುದೊಡ್ಡ ಉತ್ಪ್ರೇಕ್ಷೆಯಲ್ಲದೆ ಮತ್ತೇನೂ ಅಲ್ಲ.
***

ನಾವೇನಾದರೂ ಕೇಳಿದರೆ ಕೃತಕ ಬುದ್ಧಿಮತ್ತೆಯ ರೋಬೋಟ್‌ಗಳು ನೀಡುವ ಮಾಹಿತಿಗಳು ಎಷ್ಟು ಶುಷ್ಕವಾಗಿರುತ್ತವೆ ಎಂಬುದಕ್ಕೊಂದು ಉದಾಹರಣೆ.
ಖ್ಯಾತ ನಟಿ ಎಲಿಜಬೆತ್ ಟೇಲರ್‌ಗೆ ಆಗಾಗ ಗಂಡ ನಾಗುತ್ತಿದ್ದ ರಿಚರ್ಡ್ ಬರ್ಟನ್ ನಿಮಗೆ ಗೊತ್ತಲ್ಲವೇ? ಆತ ೧೯೬೨ರ ಜನವರಿಯಲ್ಲಿ ಐತಿಹಾಸಿಕ ಫ್ಲಾಪ್
ಸಿನಿಮಾ ‘ಕ್ಲಿಯೋಪಾತ್ರ’ದ ಸೆಟ್‌ನಲ್ಲಿ ಎಲಿಜಬೆತ್ ಟೇಲರ್‌ಳನ್ನು ಮೊದಲ ಬಾರಿ ಭೇಟಿಯಾದ ದಿನದಿಂದ ಹಿಡಿದು ಆಕೆಗೆ ೧೯೭೬ರಲ್ಲಿ ಎರಡನೇ ಬಾರಿ ಡೈವೋರ್ಸ್ ನೀಡುವವರೆಗೆ ಅವಳ ಮೇಲೆ ಪ್ರತಿ ಗಂಟೆಗೆ ಬರೋಬ್ಬರಿ ೧೦೦೦ ಪೌಂಡ್ ಖರ್ಚು ಮಾಡಿದ್ದಾನಂತೆ!

ಇದು ನಿಜವಾದ ಪ್ರೀತಿ ಅಲ್ಲದೇ ಇರಬಹುದು, ಆದರೆ ಮಾಹಿತಿಯಂತೂ ನಿಜ.
***

ದೆಹಲಿಯಲ್ಲಿ ಹವಾಮಾನ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಆದರೆ ಗೋವಾದಲ್ಲಿ ಈ ಬದಲಾವಣೆ ಬಹಳ ನಿಧಾನ. ಈಗ ಮಳೆಗಾಲ ಮುಗಿದಿರುವುದರಿಂದ
ಗೋವಾದಲ್ಲಿ ಮತ್ತೆ ಮೊದಲಿನಂತೆ ದಿನಕ್ಕೆ ಮೂರು ಋತುಗಳು ಕಾಣಿಸಿಕೊಳ್ಳುತ್ತಿವೆ. ಬೆಳಗ್ಗೆ ಚಳಿಗಾಲ, ಮಧ್ಯಾಹ್ನ ಬೇಸಿಗೆ ಕಾಲ, ರಾತ್ರಿ ವಸಂತಕಾಲ.
ಗೋವಾಕ್ಕೆ ಹೋಗಲು ವಿಮಾನದ ಟಿಕೆಟ್‌ಗಳು ಆ ಪರಿ ಯಾಕೆ ದುಬಾರಿಯಾಗಿವೆ ಎಂಬುದು ನಿಮಗೀಗ ಗೊತ್ತಾಗಿರಬೇಕು.

(ಲೇಖಕರು ಹಿರಿಯ ಪತ್ರಕರ್ತರು)