Saturday, 14th December 2024

ಮಕ್ಕಳ ಹೆಣಗಳ ಮೇಲೆ ಹಣ ಮಾಡಿದರು

ಹಿಂದಿರುಗಿ ನೋಡಿದಾಗ

‘ನನ್ನಮ್ಮ ಸತ್ತಾಗ ನಾನಿನ್ನು ಬಲುಬಲು ಚಿಕ್ಕವ, ತೊದಲುವ ನನ್ನ ಮಾರಿದ ನನ್ನಪ್ಪ ಬಿಡಿಗಾಸಿಗೆ, ಗುಡಿಸುವೆ ಗುಡಿಸುವೆ ಚಿಮಣಿಯ ಗುಡಿಸುವೆ, ಮಸಿಯಲ್ಲೇ ಮಲಗುವೆ ಕನಸನ್ನು ಕಾಣುವೆ’- ಇವು ವಿಲಿಯಂ ಬ್ಲೇಕ್ (೧೭೫೭-೧೮೨೭) ಬರೆದ ‘ದಿ ಚಿಮ್ನಿ ಸ್ವೀಪರ್’ ಎನ್ನುವ ಕವನದ ಆರಂಭಿಕ ಸಾಲುಗಳು. ಈ ಕವನವು ೧೭-೧೮ನೆಯ ಶತಮಾನದ ಲಂಡನ್ ನಗರದ ಬದುಕಿನ ಸ್ಪಷ್ಟ ಚಿತ್ರವನ್ನು ನೀಡುತ್ತದೆ.

ಲಂಡನ್ನಿನಲ್ಲಿ ವರ್ಷಪೂರ್ತಿ ಉಷ್ಣತೆಯು ೯ ಡಿಗ್ರಿ- ೨೩ ಡಿಗ್ರಿಗಳ ನಡುವೆ ಇರುತ್ತದೆ. ಚಳಿಗಾಲವು ಡಿಸೆಂಬರಿನಿಂದ ಫೆಬ್ರವರಿಯವರೆಗೆ ವ್ಯಾಪಿಸುವಾಗ, ಉಷ್ಣತೆಯು ಮತ್ತಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಪ್ರತಿಯೊಂದು ಮನೆಯಲ್ಲಿ, ಇಡೀ ಮನೆಯನ್ನು ಬೆಚ್ಚಗಿಡಲು ಒಂದು ಗೂಡೊಲೆ/ಅಗ್ಗಿಷ್ಟಿಕೆ ಇರುತ್ತಿತ್ತು. ಈ
ಗೂಡೊಲೆಯಲ್ಲಿ ಕಲ್ಲಿದ್ದಲನ್ನು ಸುಡುತ್ತಿದ್ದರು. ಕಲ್ಲಿದ್ದಲಿನಿಂದ ಹೊರಬರುತ್ತಿದ್ದ ಶಾಖವು ಮನೆಯನ್ನು ಬೆಚ್ಚಗೆ ಇಡುತ್ತಿತ್ತು. ಕಲ್ಲಿದ್ದಲನ್ನು ಉರಿಸುತ್ತಿದ್ದಾಗ ಹೊರಬರುತ್ತಿದ್ದ ಹೊಗೆಯನ್ನು ಹೊರಗೆ ಸಾಗಿಸಲು ಹೊಗೆಗೂಡು ಅಥವಾ ಚಿಮಣಿಯನ್ನು ಕಟ್ಟಿಸುತ್ತಿದ್ದರು.

ಈ ಚಿಮಣಿಯ ವ್ಯಾಸ ಮಾತ್ರ ಬಹಳ ಕಿರಿದಾಗಿರುತ್ತಿತ್ತು. ಹಾಗಾಗಿ ಆಗಾಗ್ಗೆ ಈ ಗೂಡುಗಳಲ್ಲಿ ಕಲ್ಲಿದ್ದಲ ಮಸಿ ಕಟ್ಟಿಕೊಳ್ಳುತ್ತಿತ್ತು. ಈ ಮಸಿಯನ್ನು ತೆಗೆಯುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಹೀಗಾಗಿ ಹೊಗೆಗೂಡುಗಳಲ್ಲಿ ಕಟ್ಟಿದ್ದ ಮಸಿಯನ್ನು ಹೆರೆದು ತೆಗೆಯುವ ಒಂದು ಹೊಸ ಉದ್ಯೋಗವು ಸೃಷ್ಟಿಯಾಯಿತು. ಗೂಡು ಗಳ ಒಳಗೆ ಇಳಿದು ಮಸಿಯನ್ನು ಹೆರೆಯಬೇಕಾಗಿದ್ದ ಕಾರಣ, ಗುತ್ತಿಗೆದಾರರು ೪-೬ ವರ್ಷದ ಬಡ ಹುಡುಗ-ಹುಡುಗಿಯ ರನ್ನು ಮಾರುಕಟ್ಟೆಯಲ್ಲಿ ಕೊಳ್ಳುತ್ತಿದ್ದರು. ಹೌದು. ಕೊಳ್ಳುತ್ತಿದ್ದರು. ‘ದಿ ಚಿಮ್ನಿ ಸ್ವೀಪರ್’ ಕವನದ ನಾಯಕನಾಗಿರುವ ಹುಡುಗನೇ ಹೇಳುವ ಹಾಗೆ, ಅವನಮ್ಮ ಸತ್ತಕೂಡಲೇ, ಅವನಪ್ಪ ಈ ಹುಡುಗನನ್ನು ಮಾರಿಬಿಟ್ಟನಂತೆ!

ಇಂಥ ಹುಡುಗರನ್ನು ಕೊಳ್ಳುತ್ತಿದ್ದ ಗುತ್ತಿಗೆದಾರರು ಅವರ ತಲೆಯನ್ನು ಬೋಳಿಸಿ, ಮೈಮೇಲಿನ ಉಡುಪನ್ನೆಲ್ಲ ಕಳಚಿ, ಹೊಗೆಗೂಡುಗಳ ಒಳಗೆ ಇಳಿಬಿಡುತ್ತಿದ್ದರು. ಆ ಮಕ್ಕಳು ಮಸಿಯನ್ನೆಲ್ಲ ಹೆರೆದು ಹೆರೆದು ತೆಗೆಯಬೇಕಾಗಿತ್ತು. ಹೀಗೆ ಹೆರೆಯುವಾಗ ಅಕಸ್ಮಾತ್ ಜಾರಿ ಬಿದ್ದರೆ, ಅವರು ಸಾಯುವುದು ಅನಿವಾರ್ಯವಾಗಿತ್ತು. ಹಾಗೆ ಸತ್ತವರು ಹಲವರು. ಕೆಲವು ಸಲ ಮಸಿ ತುಂಬಿಕೊಂಡು ಉಸಿರುಕಟ್ಟಿ ಸಾಯುತ್ತಿದ್ದರು. ಸತ್ತ ಹುಡುಗನನ್ನು ಗುತ್ತಿಗೆದಾರ ಎಳೆದು ಆ ಕಡೆ ಎಸೆಯುತ್ತಿದ್ದ. ಹೊಸ ಹುಡುಗನನ್ನು ಕೊಂಡುಕೊಳ್ಳುತ್ತಿದ್ದ.

ಹಣವನ್ನು ಮಾಡಿಕೊಳ್ಳುತ್ತಿದ್ದ. ಇವರು ‘ಚಿಮ್ನಿ ಬಾಯ್ಸ್’ ಅಥವಾ ‘ಕ್ಲೈಂಬಿಂಗ್ ಬಾಯ್ಸ್’ ಎಂದು ಹೆಸರಾಗಿದ್ದರು. ಮಕ್ಕಳ ಬಳಕೆ: ೧೬೬೬ರಲ್ಲಿ ಲಂಡನ್ನಿನಲ್ಲಿ ಒಂದು ಭೀಕರ ಅಗ್ನಿದುರಂತ ಸಂಭವಿಸಿತು. ಸೆಪ್ಟೆಂಬರ್ ೨ರಿಂದ ೬ರವರೆಗೆ ಉರಿದ ಬೆಂಕಿಯು ಲಂಡನ್ ನಗರವನ್ನು ಸುಟ್ಟು ಬೂದಿ ಮಾಡಿತು. ಅಂದಿನ ಲಂಡನ್ನಿನಲ್ಲಿ ಮನೆಗಳನ್ನು ಮರದಿಂದ ನಿರ್ಮಿಸಿ, ಹುಲ್ಲು ಚಾವಣಿಯನ್ನು ಹೊದಿಸುತ್ತಿದ್ದರು. ಚಿಮಣಿಯಿಂದ ಎದ್ದ ಒಂದು ಕಿಡಿ ಅವ್ಯಾಹತವಾಗಿ ಹರಡಿ ಅಗ್ನಿ ದುರಂತಕ್ಕೆ ಕಾರಣವಾಗಿತ್ತು. ಹಾಗಾಗಿ ಇಂಗ್ಲೆಂಡಿನಲ್ಲಿ ಹೊಸ ಕಾನೂನುಗಳು ಜಾರಿಗೆ ಬಂದವು.

ಮನೆಯಲ್ಲಿರುವ ಗೂಡೊಲೆಗಳ ಸಂಖ್ಯೆಗೆ ನಿಯಂತ್ರಣವನ್ನು ಹಾಕಿದರು. ಹೆಚ್ಚು ಗೂಡೊಲೆಗಳಿದ್ದಷ್ಟೂ ಹೆಚ್ಚು ಕರವನ್ನು ಹೇರಿದರು. ಮೊದಲಿದ್ದ ಚಿಮಣಿಗಳಿಗಿಂತ, ಈಗ ಚಿಮಣಿಗಳ ಎತ್ತರವನ್ನು ಮೇಲೇರಿಸಿ ದರು ಹಾಗೂ ಚಿಮಣಿಗಳ ವ್ಯಾಸವನ್ನು ಕಿರಿದುಗೊಳಿಸಿದರು. ಈ ಚಿಮಣಿಗಳಲ್ಲಿ ಕಲ್ಲಿದ್ದಲ ಕಿಟ್ಟವು ಬೇಗ ಸಂಗ್ರಹ ವಾಗುತ್ತಿತ್ತು. ಈ ಹಿಂದೆಯೂ ಚಿಮಣಿಗಳಲ್ಲಿ ಕಿಟ್ಟವು ಸಂಗ್ರಹವಾಗುತ್ತಿತ್ತು. ಅದನ್ನು ಸ್ವಚ್ಛಗೊಳಿಸಲು ಪ್ರತ್ಯೇಕ ಜನರಿದ್ದರು ಎನ್ನುವುದು ನಿಜ. ಆದರೆ ಈ ಕಿರುಚಿ ಮಣಿಗಳಲ್ಲಿ ಹಿಂದಿಗಿಂತ ಬೇಗವಾಗಿ ಕಿಟ್ಟ ಸಂಗ್ರಹವಾಗುತ್ತಿದ್ದ ಕಾರಣ, ಅವನ್ನು ಪದೇ ಪದೆ ಸ್ವಚ್ಛಗೊಳಿಸಬೇಕಾಗುತ್ತಿತ್ತು. ಹೀಗಾಗಿ ಚಿಮಣಿಗಳನ್ನು ಸ್ವಚ್ಛಗೊ ಳಿಸುವ ಒಂದು ಹೊಸ ವೃತ್ತಿಯು ಆರಂಭವಾಯಿತು. ಆ ವೃತ್ತಿಯಲ್ಲಿ ವಯಸ್ಕರ ಬದಲು ಮಕ್ಕಳನ್ನೇ ಬಳಸುವ ಪ್ರವೃತ್ತಿಯು ಆರಂಭವಾಯಿತು.

ಸ್ನಾನವಿಲ್ಲ: ಮಕ್ಕಳು ಬೆಳಗ್ಗೆಯಿಂದ ಸಂಜೆಯವರಿಗೆ ಹೊಗೆಗೂಡನ್ನು ಸ್ವಚ್ಛಮಾಡುತ್ತಿದ್ದರು. ಅವರಿಗೆ ಹೊಟ್ಟೆ ತುಂಬಾ ಅನ್ನ ದೊರೆಯುವುದು ದುಸ್ತರವಾಗಿತ್ತು. ಅವರು ಚೆನ್ನಾಗಿ ತಿಂದು ದಪ್ಪವಾಗಿಬಿಟ್ಟರೆ, ಚಿಮಣಿಯ ಒಳಗೆ ನುಸುಳುವುದು ಕಷ್ಟವಾಗುತ್ತಿತ್ತು. ಹಾಗಾಗಿ ಜೀವಹಿಡಿಯಲು ಅಗತ್ಯವಾದ ಕನಿಷ್ಠ ಪ್ರಮಾಣದ ಆಹಾರವನ್ನು ಮಾತ್ರ ನೀಡುತ್ತಿದ್ದರು. ಹುಡುಗರು ಬಟ್ಟೆಯನ್ನು ಹಾಕಿಕೊಂಡು ಚಿಮಣಿಯ ಒಳಗೆ ನುಸುಳುವುದು ಕಷ್ಟವಾಗುತ್ತಿತ್ತು. ಹಾಗಾಗಿ ಅವರು ಯಾವುದೇ ಬಟ್ಟೆಯನ್ನು ತೊಡದೆ ಸಂಪೂರ್ಣ ನಗ್ನರಾಗಿ ಚಿಮಣಿಯ ಒಳಗೆ ಹೋಗುತ್ತಿದ್ದರು. ಹೀಗೆ ನುಸುಳಿ ಒಳಗೆ ಹೋಗುವಾಗ, ಮಸಿಯನ್ನು ಕೈಯಿಂದ ಹೆರೆದು ಹೆರೆದು ತೆಗೆಯುವಾಗ, ಅವರಿಗೆ ಮಸಿಯ ಅಭಿಷೇಕವಾಗುತ್ತಿತ್ತು.

ಮಸಿಯು ಎರಡು ತೊಡೆಗಳ ನಡುವೆ ಸೇರಿ ಕೊಂಡು, ಬೀಜಚೀಲದ ಮಡಿಕೆಗಳಲ್ಲಿ ಸಂಗ್ರಹವಾಗುತ್ತಿತ್ತು. ಹುಡುಗರು ಅನೇಕ ಸಲ ಬಿಸಿಬಿಸಿ ಚಿಮಣಿಯ ಒಳಗೆ
ನುಗ್ಗಬೇಕಾಗಿದ್ದ ಕಾರಣ ಸಾಕಷ್ಟು ಬೆವರುತ್ತಿದ್ದರು. ಬೆವರಿನಲ್ಲಿ ಮಸಿಯು ಕರಗುತ್ತಿತ್ತು. ಈ ಒದ್ದೆಮಸಿಯು ತೊಡೆಗಳ ಒತ್ತಡಕ್ಕೆ ಸಿಕ್ಕಿ ಬೀಜಚೀಲದ ಚರ್ಮದ ಮಡಿಕೆಗಳಲ್ಲಿ ಗಟ್ಟಿಯಾಗಿ ಮೆತ್ತಿಕೊಳ್ಳುತ್ತಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಹೊಗೆಗೂಡನ್ನು ಸ್ವಚ್ಛಮಾಡಿದ ಮೇಲೆ, ಈ ಮಕ್ಕಳಿಗೆ ಸ್ನಾನ ಮಾಡಲು
ಅವಕಾಶವಿರುತ್ತಿರಲಿಲ್ಲ. ಮಕ್ಕಳು ಹೆರೆದ ಮಸಿಯನ್ನೆಲ್ಲ ಒಂದು ದುಪ್ಪಟಿಯಲ್ಲಿ ಸಂಗ್ರಹಿಸುತ್ತಿದ್ದರು. ಸ್ನಾನವನ್ನೇ ಮಾಡಲು ಅವಕಾಶವಿರಲಿಲ್ಲ ಎಂದಾಗ, ದುಪ್ಪಟ್ಟಿಯನ್ನು ಒಗೆಯುವ ಪ್ರಶ್ನೆಯೇ ಬರುತ್ತಿರಲಿಲ್ಲ. ಲಂಡನ್ನಿನಲ್ಲಿ ವಿಪರೀತ ಚಳಿ ಬೇರೆ. ಅದೇ ಮಸಿಯಲ್ಲಿ ಮಲಗಿ, ಅದೇ ಮಸಿಯ ದುಪ್ಪಟ್ಟಿಯನ್ನು ಹೊದೆಯುತ್ತಿದ್ದರು. ಸೈಂಟ್ ಬಾರ್ಥಲೋಮಿಯೋ ಆಸ್ಪತ್ರೆಯ ದಾಖಲೆಗಳ ಅನ್ವಯ, ಕೆಲವು ಮಕ್ಕಳು ೫-೬ ವರ್ಷಗಳಾದರೂ ಸ್ನಾನವನ್ನೇ ಮಾಡುತ್ತಿರಲಿಲ್ಲ!

ಹಾಗಾಗಿ ಇಂಗ್ಲಿಷ್ ಭಾಷೆಯಲ್ಲಿ ‘ಬ್ಲಾಕ್ ಅಸ್ ಎ ಸ್ವೀಪ್’ (ಮಸಿ ಹೆರೆಯುವ ಹುಡುಗನ ಹಾಗೆ ಕಪ್ಪು) ಎಂಬ ಒಂದು ಹೊಸ ನುಡಿಗಟ್ಟು ಹುಟ್ಟಿಕೊಂಡಿತು.
ಚಿಮಣಿಯನ್ನು ಸ್ವಚ್ಛಗೊಳಿಸುವವರ ಬಗ್ಗೆ ವಿಲಿಯಂ ಷೇಕ್ಸ್‌ಪಿಯರ್ (೧೫೬೪-೧೬೧೬) ಪ್ರಸ್ತಾಪಿಸಿರುವುದು ಗಮನೀಯ. ಷೇಕ್ಸ್‌ಪಿಯರನ ಪ್ರಾಥಮಿಕ ಪರಿಚಯ ಇರುವವರಿಗೂ, ಅವನಿಗೆ ಬೆಳ್ಳನೆಯ ಹುಡುಗಿಯರಿಗಿಂತ ನಸುಗಪ್ಪಿನ ಹುಡುಗಿಯರೇ ಇಷ್ಟ ಎನ್ನುವ ವಿಚಾರವು ತಿಳಿದಿರುತ್ತದೆ. ಅವನ ನಾಟಕ/ಸಾನೆಟ್ಟುಗಳಲ್ಲಿ ಅಗಾಗ್ಗೆ ಈ ಕಪ್ಪುಸುಂದರಿಯರ ಪ್ರಸ್ತಾಪವು ಬರುತ್ತದೆ. ಷೇಕ್ಸ್‌ಪಿಯರನ ಪ್ರೇಯಸಿಯೂ ಕಪ್ಪಾಗಿದ್ದುದೇ ಇದಕ್ಕೆ ಕಾರಣ ಎನ್ನುವ ಗಾಳಿಮಾ ತುಂಟು. ಷೇಕ್ಸ್‌ಪಿಯರ್ ‘ಲವ್ಸ್ ಲೇಬರ್ಸ್ ಲಾಸ್ಟ್’ ಎಂಬ ಹಾಸ್ಯನಾಟಕವನ್ನು ಬರೆದಿದ್ದಾನೆ.

ಅದರ ಆಕ್ಟ್-೪ ಸೀನ್-೩ರಲ್ಲಿ ಡುಮೈನ್ ಎನ್ನುವ ಪಾತ್ರವು ‘ಅವಳು, ಚಿಮಣಿ ಗುಡಿಸುವವರಂತೆ ಕಪ್ಪಾಗಿ ಕಾಣಲು’ (ಟು ಲುಕ್ ಲೈಕ್ ಹರ್ ಆರ್ ಚಿಮ್ನಿ ಸ್ವೀಪರ್ಸ್ ಬ್ಲಾಕ್) ಎನ್ನುತ್ತದೆ; ಚಿಮಣಿಗಳನ್ನು ಸ್ವಚ್ಛಗೊಳಿಸುವ ಹೆಣ್ಣುಮಕ್ಕಳು ಹೇಗೆ ಕಪ್ಪಗಿರುತ್ತಿದ್ದರೋ ಹಾಗೆ ನನ್ನ ಹುಡುಗಿ ಎನ್ನುವ ಭಾವವು ಈ ಸಂಭಾಷಣೆ ಯಲ್ಲಿದೆ. ಚಿಮ್ನಿ ಬಾಯ್ಸ್ ಹುಡುಗರ ಮೈಮೇಲೆ ಮಸಿಯು ತಿಂಗಳುಗಟ್ಟಲೆ, ವರ್ಷಗಟ್ಟಲೇ ಇರುತ್ತಿದ್ದ ಕಾರಣ, ಅದು ತನ್ನ ದುಷ್ಪ್ರಭಾವವನ್ನು ಬೀರುತ್ತಿತ್ತು. ಇದರಿಂದ ಆ ಮಕ್ಕಳ ಮೂಗು ಮತ್ತು ಬೀಜಚೀಲಗಳ ಮೇಲೆ ಗಂಟುಗಳು ಏಳುತ್ತಿದ್ದವು, ಹುಣ್ಣುಗಳಾಗುತ್ತಿದ್ದವು. ಆ ಹುಣ್ಣಿನಲ್ಲಿ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳು ಬೆಳೆದು ಕೊಳೆಯುತ್ತಿದ್ದವು. ಹುಣ್ಣು ಮತ್ತಷ್ಟು ಬಲಿತು ಚರ್ಮವನ್ನು ಛೇದಿಸಿಕೊಂಡು ಒಳನುಗ್ಗಿ ವೃಷಣ (ಬೀಜ)ವನ್ನು ಆಕ್ರಮಿಸಿಕೊಳ್ಳುತ್ತಿತ್ತು.

ಅಲ್ಲಿಂದ ನೇರವಾಗಿ ಉದರದೊಳಗೆ ಪ್ರವೇಶಿಸಿ ಅಲ್ಲಿರುವ ಅಂಗಗಳಿಗೆ ವ್ಯಾಪಿಸುತ್ತಿತ್ತು. ಈ ವೇಳೆಗೆ, ಸಾಮಾನ್ಯವಾಗಿ ಆ ಹುಡುಗ ಮರಣಿಸುತ್ತಿದ್ದ. ಯಾವುದೇ ಚಿಕಿತ್ಸೆಗೆ ಬಗ್ಗದ ಈ ಹುಣ್ಣುಗಳು ಆ ಹುಡುಗರನ್ನು ಬಲಿ ತೆಗೆದುಕೊಳ್ಳುತ್ತಿದ್ದವು. ಯಥಾಪ್ರಕಾರ ಗುತ್ತಿಗೆದಾರರು ಮತ್ತಷ್ಟು ಹುಡುಗರನ್ನು ಕೊಂಡುಕೊಂಡು
ತಮ್ಮ ವೃತ್ತಿಯನ್ನು ಮುಂದುವರಿಸುತ್ತಿದ್ದರು. ಅಪರೂಪಕ್ಕೆ, ಒಂದಿಬ್ಬರು ಹುಡುಗರು ವೈದ್ಯಕೀಯ ಸಲಹೆಯನ್ನು ಪಡೆದರು. ವೈದ್ಯರಿಗೆ ಈ ಗಂಟು ಏನು
ಎನ್ನುವುದೇ ತಿಳಿಯಲಿಲ್ಲ. ಬಹುಶಃ ಲೈಂಗಿಕ ಓಘವಿರಬೇಕೆಂದು ಬಗೆದರು. ಅಂದಿನ ದಿನಗಳಲ್ಲಿ ಬಳಕೆಯಲ್ಲಿದ್ದ ಪಾದರಸ ಸಂಯುಕ್ತಗಳನ್ನು ಹಚ್ಚಿ ಕಳುಹಿಸಿದರು. ಕೊನೆಗೆ ಲಂಡನ್ನಿನ ಸೈಂಟ್ ಬಾರ್ಥಲೋಮಿಯು ಆಸ್ಪತ್ರೆಯ ಪರ್ಸಿವಾಲ್ ಪಾಟ್ (೧೭೧೪-೧೭೮೮) ಎನ್ನುವ ಇಂಗ್ಲಿಷ್ ಸರ್ಜನ್ ಇದನ್ನು ಗಮನಿಸಿದ. ಆತನು ಈ ಬೀಜಚೀಲ ಗಂಟಿನ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿದ.

ಈ ಗಂಟು ಕ್ಯಾನ್ಸರ್ ಎನ್ನುವುದನ್ನು ನಿರೂಪಿಸಿದ. ಇದನ್ನು ‘ಚಿಮ್ನಿ ಸ್ವೀಪರ್ಸ್ ಕ್ಯಾನ್ಸರ್/ಕಾರ್ಸಿನೋಮ’ ಎಂದು ಕರೆದ. ಕಲ್ಲಿದ್ದಲ ಮಸಿಯು ಒಂದು ಪ್ರಬಲ ‘ಕ್ಯಾನ್ಸರ್ ಕಾರಕ’ (ಕಾರ್ಸಿನೋಜೆನಿಕ್) ಎನ್ನುವುದಕ್ಕೆ ಋಜುವಾತನ್ನು ಒದಗಿಸಿದ. ಎಳೆಯ ಮಕ್ಕಳನ್ನು ಚಿಮಣಿ ಸ್ವಚ್ಛಗೊಳಿಸಲು ಬಳಸಿಕೊಳ್ಳುವುದು ಅಮಾನವೀಯ ಎಂದ. ಮಕ್ಕಳನ್ನು ಇಂಥ ಕೆಲಸಗಳಿಗೆ ಬಳಸಿಕೊಳ್ಳದಂತೆ ತಡೆಗಟ್ಟುವ ಹೊಸ ಕಾನೂನನ್ನು ತರುವುದರಲ್ಲಿ ಯಶಸ್ವಿಯಾದ. ಹೀಗೆ ಪರ್ಸಿವಾಲ್ ಪಾಟ್, ಜಗತ್ತಿನ ಮೊತ್ತಮೊದಲ ವೃತ್ತಿಸಂಬಂಽತ ಕ್ಯಾನ್ಸರ್ (ಆಕ್ಯುಪೇಷನಲ್ ಕ್ಯಾನ್ಸರ್) ಕಂಡುಹಿಡಿದ. ನಂತರ, ವೃತ್ತಿಗೆ ಸಂಬಂಧಿಸಿದ ಹಲವು ಕ್ಯಾನ್ಸರ್‌ಗಳ ಜತೆಯಲ್ಲಿ ವೃತ್ತಿ ಸಂಬಂಧಿತ ಅನಾರೋಗ್ಯಗಳ ಬಗ್ಗೆ ಒಂದು ಹೊಸ ಜಾಗೃತಿಯು ಉಂಟಾಯಿತು.

ಔದ್ಯೋಗಿಕ ವೈದ್ಯಕೀಯಕ್ಕೆ ಹೆಚ್ಚು ಹೆಚ್ಚು ಮಾನ್ಯತೆ ದೊರೆಯಿತು. ವಿಲಿಯಂ ಬ್ಲೇಕ್ ಬರೆದ ಕವನವನ್ನು ಪೂರ್ಣ ಓದಿದರೆ, ಆ ಅಮಾಯಕ ಮಕ್ಕಳ ಬದುಕಿನ ಬಗ್ಗೆ ಓದುಗರಲ್ಲಿ ಕರುಣೆ ಉಕ್ಕಿ ಬರುವುದರ ಜತೆಗೆ, ಅಂದಿನ ವ್ಯವಸ್ಥೆಯ ಬಗ್ಗೆ ಕೋಪವೂ ಬರುತ್ತದೆ. ಆದರೆ, ಉದ್ಯೋಗ ಸಂಬಂಧಿತ ಅನಾರೋಗ್ಯಗಳ ಪರಿಸ್ಥಿತಿಯು ಅಂದಿಗಿಂತ ಇಂದು ಅಷ್ಟೇನೂ ಉತ್ತಮವಾಗಿಲ್ಲ ಎನ್ನುವುದು ಕಟುವಾಸ್ತವ. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ಕಾರ್ಮಿಕ
ಸಂಘಟನೆಯ ಅನ್ವಯ, ಇಂದಿಗೂ ಪ್ರತಿವರ್ಷ ೨೩ ದಶಲಕ್ಷ ಕಾರ್ಮಿಕರು ಉದ್ಯೋಗ ಸಂಬಂಧಿತ ಅಪಘಾತಗಳು ಇಲ್ಲವೇ ಅನಾರೋಗ್ಯದ ಕಾರಣ ಮರಣಿಸು ತ್ತಿದ್ದಾರೆ. ಅಂದರೆ ಪ್ರತಿದಿನವೂ ಜಗತ್ತಿನಲ್ಲಿ ೬೦೦೦ ಜನರು ಸಾಯುತ್ತಿದ್ದಾರೆ.

ಜತೆಗೆ ಪ್ರತಿವರ್ಷ ೩೪೦ ದಶಲಕ್ಷ ಉದ್ಯೋಗ ಸಂಬಂಧಿತ ಕಾಯಿಲೆಗಳು ಹಾಗೂ ೧೬೦ ದಶಲಕ್ಷ ನಾನಾ ಅನಾರೋಗ್ಯಗಳು ಘಟಿಸುತ್ತಿವೆ. ಇಷ್ಟೆಲ್ಲ ಆಗು ತ್ತಿದ್ದರೂ ಇವನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಬೇಕೆಂಬ ಪ್ರಾಮಾಣಿಕ ಪ್ರಯತ್ನವು ಸರಕಾರದಿಂದ, ಆಡಳಿತ ವರ್ಗದವರಿಂದ ಹಾಗೂ ಕಾರ್ಮಿಕರಿಂದ ನಡೆಯದಿರುವುದು ವಿಷಾದನೀಯ.