Saturday, 14th December 2024

ಭುಜದ ಮೇಲಿನ ಯುವತಿ

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ

ಬಹು ಹಿಂದೆ ಸರಯೂ ನದಿಯ ಉಪನದಿಯ ಪಕ್ಕದಲ್ಲಿನ ಒಂದು ಆಶ್ರಮದಲ್ಲಿ ಶಿಷ್ಯವೃತ್ತಿಯನ್ನು ಮಾಡಿಕೊಂಡು ಸಂಜಯ ಮತ್ತು ಧನಂಜಯ ಎಂಬ ಯುವಕರು ವಾಸವಿದ್ದರು. ಒಂದು ದಿನ ಗುರುಗಳು ಅವರನ್ನು ಕರೆದು ‘ನದಿಯಾಚೆ ಇರುವ ಹಳ್ಳಿಗೆ ಹೋಗಿ, ಮುಖ್ಯಸ್ಥನ ಬಳಿ ನಾಳೆಗೆ ಹಾಲು ತಂದು ಕೊಡಲು ಹೇಳಿ’ ಎಂದರು.

ಶಿಷ್ಯರು ನದಿಯ ದಡದಲ್ಲೇ ಒಂದು ಹರದಾರಿ ನಡೆದರು. ಆ ಜಾಗದಲ್ಲಿ ನದಿಯನ್ನು ನಡೆದುಕೊಂಡೇ ದಾಟಲು ಸಾಧ್ಯವಿತ್ತು. ‘ಅಣ್ಣಾ, ಇಲ್ಲೆಲ್ಲಾದರೂ ದೋಣಿ ಇದೆಯಾ?’ ಎಂದು ಓರ್ವ ಯುವತಿ ಅವರಿಬ್ಬರನ್ನೂ ಕರೆಯುತ್ತಿದ್ದಳು. ‘ಇಲ್ಲೆಲ್ಲೂ ದೋಣಿ ಇಲ್ಲ. ಇದೇ ದಡದಲ್ಲಿ ಎರಡು ಹರದಾರಿ ನಡೆದರೆ ಒಂದು ದೊಡ್ಡ ಹಳ್ಳಿ ಸಿಗುತ್ತದೆ. ಅಲ್ಲಿ ಅಂಬಿಗ, ದೋಣಿ ಎಲ್ಲಾ ಇವೆ’ ಎಂದ ಧನಂಜಯ.

‘ಓ ದೇವರೆ, ನಾನೀಗ ಏನು ಮಾಡುವುದು?’ ಎಂದು ಆ ಯುವತಿ ನಿಟ್ಟುಸಿರಿಟ್ಟಳು. ‘ಏನಮ್ಮಾ ನಿನ್ನ ಸಮಸ್ಯೆ?’ ಎಂದು ಸಂಜಯ ಕೇಳಿದ. ‘ನನ್ನ ತಾಯಿ ಕಳೆದ ವಾರ ಆಚೆ ದಡದಲ್ಲಿರುವ ಮಾವನ ಮನೆಗೆ ಹೋಗಿದ್ದಾಳೆ. ಆದರೆ, ಈ ನದಿಯನ್ನು ನಾನು ದಾಟುವು ದಾದರೂ ಹೇಗೆ?’ ಎಂದು ಆ ಯುವತಿ ಅಲವತ್ತುಕೊಂಡಳು. ‘ಏನಮ್ಮಾ, ನಿನಗೆ ನೀರಿಗೆ ಇಳಿಯಲು ಭಯವಾದರೆ, ನಾನು ಬೇಕಾದರೆ ನಿನ್ನನ್ನು ಎತ್ತಿಕೊಂಡು ಆಚೆ ದಡದಲ್ಲಿ ಬಿಡುತ್ತೇನೆ’ ಎಂದ ಧನಂಜಯ. ಆ ಯುವತಿ ಸರಿ ಎಂದಳು.

ಧನಂಜಯನು ಆಕೆಯ ಎದುರು ಬಗ್ಗಿ ನಿಂತ. ಆಕೆ ಅವನ ತೋಳಿನಲ್ಲಿ ಭದ್ರವಾಗಿ ಕುಳಿತಳು. ಆಕೆಯನ್ನು ಎತ್ತಿಕೊಂಡ ಧನಂಜಯ ಮತ್ತು ಅವನ ಹಿಂದೆ ಸಂಜಯ ನದಿಯ ನೀರಿನಲ್ಲಿ ನಡೆದು, ಆಚೆ ದಡ ತಲುಪಿದರು. ‘ಪಾಪ, ಅವಳ ತಾಯಿಗೆ ಹುಶಾರಿಲ್ಲ ಅಂತ ಎಷ್ಟು ಗಾಬರಿ, ನೋಡು’ ಎಂದ ಧನಂಜಯ. ಅವರಿಬ್ಬರೂ ಬಂದ ಕೆಲಸ ಮುಗಿಸಿ, ಆಶ್ರಮಕ್ಕೆ ವಾಪಸಾದರು. ಸಂಜಯ ದಾರಿಯುದ್ದಕ್ಕೂ ಮುನಿಸಿಕೊಂಡಂತೆ ಇದ್ದ.

ಸಂಜೆ ಆಗಿದೆ. ಧ್ಯಾನ ಮಾಡಲು ಸಿದ್ಧರಾಗಿ’ ಎಂದರು ಗುರುಗಳು. ಶಿಷ್ಯರಿಬ್ಬರೂ ಹೊರಟುಹೋದರು. ತುಸು ಹೊತ್ತಿನ ನಂತರ ಸಂಜಯ ಗುರುಗಳ ಬಳಿಗೆ ವಾಪಸಾಗಿ, ‘ಗುರುಗಳೆ ಒಂದು ವಿಚಾರ ಹೇಳಬೇಕಿತ್ತು’ ಎಂದ. ‘ಗುರುಗಳೆ,ನನ್ನ ಮಟ್ಟಿಗೆ, ಪಯಣ ಚೆನ್ನಾಗಿರಲಿಲ್ಲ. ನಾವೇನು ಮಾಡಬಾರದೋ ಅದನ್ನು ಧನಂಜಯ ಮಾಡಿದ’ ಎಂದ ಸಂಜಯ.

‘ಏನದು ಅಂತಹ ಅಪರಾಧ?’ ಎಂದರು ಗುರುಗಳು. ‘ನೀವು ಪ್ರವಚನದ ಸಮಯದಲ್ಲಿ ಎಷ್ಟೊಂದು ಬಾರಿ ಹೇಳಿದ್ದಿರಿ,
ಮಹಿಳೆ ಯರಿಂದ ದೂರ ಇರಬೇಕು, ಅವರನ್ನು ಮುಟ್ಟಬಾರದು ಅಂತ. ಆದರೆ, ಇವತ್ತು ಧನಂಜಯನು ಒಬ್ಬ ಸುಂದರ ಯುವತಿಯನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡದ್ದನ್ನು ನಾನೇ ಕಣ್ಣಾರೆ ನೋಡಿದೆ’. ಗುರುಗಳು ಧನಂಜಯನನ್ನು ಕರೆಸಿ, ವಿವರಣೆ ಕೇಳಿದರು.

‘ಗುರುಗಳೆ, ನದಿಯಲ್ಲಿ ನೀರಿನ ಸೆಳೆತವೂ ಇರಲಿಲ್ಲ. ಒಬ್ಬ ಅಪರಿಚಿತರಿಗೆ ಸಹಾಯ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರ
ತಾಯಿಗೆ ಹುಶಾರಿರಲಿಲ್ಲವಂತೆ. ಆದ್ದರಿಂದ ಅವರನ್ನು ನಾನೇ ಎತ್ತಿಕೊಂಡು ಆಚೆ ದಡದಲ್ಲಿ ಬಿಟ್ಟೆ’ ಎಂದ ಧನಂಜಯ. ಕೂಡಲೆ ಸಂಜಯನು ಏರು ದನಿಯಲ್ಲಿ, ‘ಅವಳು ಒಬ್ಬ ಯುವತಿ, ಗುರುಗಳೆ. ಹದಿನೆಂಟು ವರ್ಷ. ಇವನೇ ಅವಳನ್ನು ಭುಜದ ಮೇಲೆ
ಕೂರಿಸಿಕೊಂಡು ಆಚೆ ದಡಕ್ಕೆ ಕರೆದೊಯ್ದ, ಛೆ..ಛೆ’ಎಂದ. ‘ಹೌದಾ ಧನಂಜಯ?’ ಎಂದು ಕೇಳಿದರು ಗುರುಗಳು.

‘ನಿಜ ಗುರುಗಳೆ, ಆಕೆಯ ವಯಸ್ಸನ್ನು ನಾನು ಗಮನಿಸಲಿಲ್ಲ. ಆಕೆಯ ತಾಯಿಗೆ ಹುಶಾರಿರಲಿಲ್ಲ. ಆಚೆ ದಡಕ್ಕೆ ಬೇಗನೆ ಹೋಗ ಬೇಕು ಅಂದಳು. ದೋಣಿ ಇರಲಿಲ್ಲ. ನಾನು ಕರೆದುಕೊಂಡು ಹೋದೆ’ ಎಂದ ಧನಂಜಯ. ‘ನೀನಿನ್ನು ಹೋಗಬಹುದು’ ಎಂದರು ಗುರುಗಳು. ನಂತರ, ಸಂಜಯನ ಕಡೆ ತಿರುಗಿ, ‘ಶಿಷ್ಯಾ, ನಿನ್ನ ಭುಜದ ಮೇಲಿರುವ ಆ ಯುವತಿಯನ್ನು ಕೆಳಗಿಳಿಸು’ ಎಂದರು.

‘ಏನು ಗುರುಗಳೆ, ನನ್ನ ಭುಜದ ಮೇಲೆ ಯಾರೂ ಇಲ್ಲವಲ್ಲ!’ ಎಂದ ಸಂಜಯ. ‘ಶಿಷ್ಯಾ, ಧನಂಜಯನು ಅವಳನ್ನು ಆಗಲೇ ನದಿ ದಡದಲ್ಲಿ ಇಳಿಸಿ ಬಂದಾಯಿತು. ನೀನು ಮಾತ್ರ ನಿನ್ನ ಭುಜ ಮತ್ತು ತಲೆಯಲ್ಲಿ ಅವಳನ್ನು ಕೂರಿಸಿಕೊಂಡಿದ್ದೀಯಾ. ಅದನ್ನು ಬಿಡು. ಧ್ಯಾನಕ್ಕೆ ತೊಂದರೆಯಾಗುತ್ತೆ. ಈಗಲೇ ಅವಳನ್ನು ಕೆಳಗಿಳಿಸು’ ಎಂದರು ಗುರುಗಳು. ಸಂಜಯನಿಗೆ ಜ್ಞಾನೋದಯ ವಾಯಿತು.