Wednesday, 9th October 2024

ನಸುನಕ್ಕ ಸನ್ಯಾಸಿ

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ

ಗೋದಾವರಿ ನದಿ ದಂಡೆಯಲ್ಲಿ ಓರ್ವ ಸನ್ಯಾಸಿಯ ಆಶ್ರಮ ಇತ್ತು. ರೈತನೊಬ್ಬನ ಜಾಗದಲ್ಲಿದ್ದ ಆ ಆಶ್ರಮವು ಹಳ್ಳಿ ಜನರ ಪ್ರೀತಿಯ ತಾಣ. ಆದರೆ ಓರ್ವ ಶ್ರೀಮಂತ ವ್ಯಕ್ತಿ ಮಾತ್ರ, ಆ ರೈತನನ್ನು ಪೀಡಿಸುತ್ತಿದ್ದ : ‘ಆಶ್ರಮ ಇರುವ ಜಾಗವನ್ನು ನನಗೆ
ಮಾರಾಟ ಮಾಡು’.

‘ಇದನ್ನು ನಾನು ಮಾರುವುದಿಲ್ಲ. ಆ ಸನ್ಯಾಸಿಯವರು ಅಲ್ಲಿ ಆಶ್ರಮ ನಡೆಸುತ್ತಿದ್ದು, ಆಶ್ರಮಕ್ಕೆ ಹೋಗುವ ಎಲ್ಲರಿಗೂ ಶಾಂತಿ ಸಿಗುತ್ತಿದೆ. ಆ ಜಾಗವನ್ನು ನಾನು ಹೇಗೆ ಮಾರಲಿ?’ ಎಂದು ರೈತ ವಿನಯದಿಂದ ಹೇಳುತ್ತಿದ್ದ. ‘ಹೆಚ್ಚಿನ ಹಣ ನೀಡುತ್ತೇನೆ, ಜಮೀನು ನನಗೆ ಕೊಡು’ ‘ಇಲ್ಲ ಸ್ವಾಮಿ, ಆ ಸನ್ಯಾಸಿಯವರು ಒಳ್ಳೆಯವರು. ಅವರು ಅಲ್ಲಿರಬೇಕು’

ಶ್ರೀಮಂತನಿಗೆ ಕೋಪ ಬಂತು: ‘ಅವರನ್ನು ಸನ್ಯಾಸಿ ಎಂದು ಪದೇ ಪದೇ ಹೊಗಳಬೇಡ. ಅವರದ್ದೇನು ವಿಶೇಷ? ನಾನು ಸಹ ಗಡ್ಡ ಬಿಟ್ಟು, ಕಾವಿ ಬಟ್ಟೆ ತೊಟ್ಟರೆ ಸನ್ಯಾಸಿ ರೀತಿ ಆಗಬಹುದು’ ‘ಇಲ್ಲ ಸ್ವಾಮಿ, ಅವರು ಒಳ್ಳೆಯವರು. ಅವರಿಗೆ ಕೋಪವೇ ಬರುವುದಿಲ್ಲ’ ಎಂದ ರೈತ.

‘ಮೂರ್ಖತನದ ಮಾತು ಇದು. ಅವರಿಗೂ ಕೋಪ ಬರುತ್ತೆ. ಬೇಕಾದರೆ, ನಾಳೆ ಬೆಳಿಗ್ಗೆ ಆಶ್ರಮದ ಹತ್ತಿರ ಬಂದು ನೋಡು, ಸನ್ಯಾಸಿಗೆ ಕೋಪ ಬರುವ ಹಾಗೆ ಮಾಡಿರುತ್ತೇನೆ’ ಎಂದ ಶ್ರೀಮಂತ. ‘ಸನ್ಯಾಸಿಗೆ ಕೋಪ ಬಂದರೆ, ಜಮೀನನ್ನು ನನಗೆ ನೀನು ಮಾರಬೇಕು’ ಎಂದು ರೈತನಿಗೆ ಎಚ್ಚರಿಕೆ ನೀಡಿ ಕಳಿಸಿದ.

ಮರುದಿನ ಬೆಳಗ್ಗೆ ರೈತ ಆಶ್ರಮದ ಬಳಿ ಬಂದ. ಸನ್ಯಾಸಿಗಳು ಧ್ಯಾನ ಮಾಡುತ್ತಾ ಕುಳಿತಿದ್ದರು. ಅಷ್ಟರಲ್ಲಿ, ಆ ಊರಿನ ಕುಖ್ಯಾತ
ಪುಂಡನೋರ್ವ ಬಂದ. ರೈತನು ನೋಡನೋಡುತ್ತಿದ್ದಂತೆಯೇ, ಸನ್ಯಾಸಿಯ ತಲೆಯ ಮೇಲೆ ಉಗಿದ. ಸನ್ಯಾಸಿಯು ಕಣ್ಣು ಬಿಟ್ಟು, ಆ ಪುಂಡನನ್ನು ನೋಡಿದರು. ಮೌನವಾಗಿ ಎದ್ದು ನದಿಯಲ್ಲಿ ಮುಳುಗಿ, ಸ್ನಾನ ಮಾಡಿ ವಾಪಸಾಗಿ ಪುನಃ ಧ್ಯಾನ ಮಾಡುತ್ತಾ ಕುಳಿತರು. ಆ ಪುಂಡ ಈಗ ಅವರ ಬೆನ್ನಿನ ಮೇಲೆ ಉಗಿದ. ಸನ್ಯಾಸಿಗಳು, ಕಣ್ಣು ತೆರೆದು ಆ ಪುಂಡನನ್ನು ನೋಡಿ ನಸು ನಕ್ಕು, ನದಿಗೆ ಹೋಗಿ ಸ್ನಾನ ಮಾಡಿ ವಾಪಸಾದರು. ಅವರು ಬರುತ್ತಿದ್ದಂತೆ ಪುಂಡ ಇನ್ನೊಮ್ಮೆ ಅವರ ಮೇಲೆ ಉಗಿದ.

ಸನ್ಯಾಸಿಗಳು ನಸುನಗುತ್ತಲೇ ನದಿಗೆ ಹೋಗಿ ಮುಳುಗು ಹಾಕಿ ಬಂದರು. ಈ ರೀತಿ ಮಧ್ಯಾಹ್ನದ ತನಕ ಆಯಿತು. ಸನ್ಯಾಸಿಗಳು ಆ ಪುಂಡನಿಗೆ ಬೈಯಲಿಲ್ಲ. ಆ ಪುಂಡ ಕೊನೆಕೊನೆಗೆ ಪೇಲವನಾದ. ಸನ್ಯಾಸಿಗಳು ನೂರ ಏಳು ಬಾರಿ ಸ್ನಾನ ಮಾಡಿ ಆಶ್ರಮಕ್ಕೆ ಬರುತ್ತಿದ್ದಂತೆ, ಅವರ ಕಾಲಿಗೆ ಬಿದ್ದು ‘ಕ್ಷಮಿಸಬೇಕು ಮಹಾಸ್ವಾಮಿಗಳೆ. ಈ ಊರಿನ ಶ್ರೀಮಂತ ನನಗೆ ದುಡ್ಡು ಕೊಟ್ಟು ನಿಮ್ಮ ಮೇಲೆ ಉಗಿಯುತ್ತಾ ಇರಬೇಕು ಎಂದಿದ್ದ. ನೀವು ನನಗೆ ಶಾಪ ಕೊಡುವ ತನಕ ಉಗಿ ಎಂದಿದ್ದ. ನನ್ನಿಂದ ಮಹಾಪರಾಧ ವಾಯಿತು’ ಎಂದ.

‘ಇನ್ನೊಮ್ಮೆ ನನ್ನ ಮೇಲೆ ಉಗಿ’ ಎಂದರು ಸನ್ಯಾಸಿ. ‘ಇಲ್ಲ ಸ್ವಾಮಿ, ತಪ್ಪಾಯಿತು’ ಎಂದು ಆ ಪುಂಡ ನೆಲದ ಮೇಲೆ ಹೊರಳಾಡಿದ. ‘ಎದ್ದೇಳು. ನೀನು ನನ್ನ ಮೇಲೆ ಉಗಿದದ್ದು ಒಂದು ರೀತಿಯಲ್ಲಿ ಒಳ್ಳೆಯದಾಯಿತು.ಈ ನದಿಯಲ್ಲಿ ನೂರೆಂಟು ಮುಳುಗು ಹಾಕುತ್ತೇನೆ ಎಂದು ಬಹಳ ಹಿಂದೆ ಈ ಊರಿಗೆ ಬರಗಾಲ ಬಂದಾಗ ದೇವರಲ್ಲಿ ಹೇಳಿಕೊಂಡಿದ್ದೆ. ಅದನ್ನು ನಾನು ಮರೆತೇ ಬಿಟ್ಟಿದ್ದೆ. ಆಮೇಲೆ ಮಳೆ ಬಂತು. ನಿನ್ನಿಂದಾಗಿ ನಾನು ದೇವರಿಗೆ ಹೇಳಿಕೊಂಡಿದ್ದನ್ನು ಪೂರೈಸಲು ಇವತ್ತು ಸಾಧ್ಯವಾಯಿತು. ಈಗ ಇನ್ನೊಂದು ಬಾರಿ ನಾನು ಮುಳುಗು ಹಾಕಬೇಕು’ ಎನ್ನುತ್ತಾ ಸನ್ಯಾಸಿ ಮತ್ತೊಮ್ಮೆ ನದಿಯಲ್ಲಿ ಮುಳುಗು ಹಾಕಿ, ದೇವರನ್ನು ಧ್ಯಾನಿಸಿ ಆಶ್ರಮಕ್ಕೆ ಬಂದರು.

ಈಗ ಸನ್ಯಾಸಿಯವರ ಕಾಲಿಗೆ ಬೀಳುವ ಸರದಿ ಆ ಶ್ರೀಮಂತನದ್ದು. ‘ಸ್ವಾಮಿ, ಕ್ಷಮಿಸಬೇಕು. ಆ ಪುಂಡನಿಗೆ ಹಣ ಕೊಟ್ಟು ನಿಮ್ಮ ಮೇಲೆ ಉಗಿಯಲು ಹೇಳಿದ್ದೆ. ನೀವು ಕೋಪಗೊಂಡರೆ, ಈ ಜಮೀನನ್ನು ಆ ರೈತನಿಂದ ಖರೀದಿಸಬೇಕೆಂಬ ದುರಾಸೆ ನನ್ನದು. ನನ್ನಿಂದ ಮಹಾಪರಾಧವಾಯಿತು’ ‘ಒಳ್ಳೆಯದಾಯಿತು. ನನ್ನ ನೂರೆಂಟು ಮುಳುಗು ವೃತ ಅದರಿಂದ ಪೂರೈಸಿತು. ನೀನು ಮತ್ತು ಆ ಪುಂಡ ನನಗೆ ಸಹಾಯವನ್ನೇ ಮಾಡಿದ್ದೀರಿ!’ ಎಂದರು ಆ ಸನ್ಯಾಸಿಗಳು. ಆ ಪುಂಡ ಆ ನಂತರ ಆಶ್ರಮದ ಕಾವಲುಗಾರನಾಗಿ ಕೆಲಸ ಮಾಡಿದ. ಶ್ರೀಮಂತ ವ್ಯಕ್ತಿಯು ಆ ಸನ್ಯಾಸಿಯ ಶಿಷ್ಯನಾಗಿ ಪರಿವರ್ತನೆಗೊಂಡು, ಮುಂದೆ ಸಂತ ಏಕನಾಥ ಎಂದು ಹೆಸರು ಗಳಿಸಿದರು.