Friday, 13th December 2024

ಮಂಗನ ಕಾಯಿಲೆ ಶೋಧದ ಹಾದಿಯಲ್ಲಿ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಮುಖ್ಯವಾಗಿ ಅರಣ್ಯ ನಾಶ, ಅರಣ್ಯ ಪ್ರದೇಶಗಳಲ್ಲಿ ಗೇರು, ಅಡಕೆ, ಅಕೇಶಿಯ, ನೀಲಗಿರಿ ಪ್ಲಾಂಟೇಷನ್‌ಗಳು ಜಾಸ್ತಿ ಯಾಗುತ್ತಿರುವುದು, ಮೊದಲಿನ ದಟ್ಟ ಅರಣ್ಯ ಪ್ರದೇಶಗಳಿಗೆ ಹತ್ತಿರವಾಗಿ ಜನರು ಜೀವಿಸುತ್ತಿರುವುದು, ಅಂತೆಯೇ ವಾತಾವರಣದ ತಾಪಮಾನ ಏರಿಕೆ ಯಾಗುತ್ತಿರುವುದು ಕೆಎಫ್’ಡಿ ಕಾರಣವೆನ್ನುತ್ತಾರೆ.

ಎರಡು ವಾರಗಳ ಮೊದಲು ಇದೇ ಅಂಕಣದಲ್ಲಿ ಮಂಗನ ಕಾಯಿಲೆ ಅಥವಾ ಕ್ಯಾಸ ನೂರು ಫಾರೆಸ್ಟ್ ಡಿಸೀಸ್) ಕೆಎಫ್ ಡಿ ಬಗ್ಗೆ ಬರೆದಿದ್ದೆ. ಆ ಕಾಯಿಲೆಯ ಆರಂಭದ ಹಂತದ ಶೋಧ, ಸಂಶೋಧನೆಯ ವಿವರಗಳು ರೋಚಕವಾಗಿವೆ. ಈಗ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆ ಕೆಎಫ್ಡಿ ಕಾಯಿಲೆ ನಿಯಂತ್ರಿಸಲು ಮತ್ತು ಅದರ ಬಗೆಗಿನ ಇತರ ಕ್ರಿಯೆಗಳು ಇವೆಲ್ಲವೂ 50 ವರ್ಷಗಳಿಗೂ ಮೊದಲು ಕೀಟ ಶಾಸ್ತ್ರಜ್ಞ ಡಾ.ರಾಜ ಗೋಪಾಲನ್ ಅವರು ಅಧ್ಯಯನ ಮಾಡಿ ರೂಪಿಸಿದ ಕ್ರಮಗಳೇ ಆಗಿವೆ.

6 ದಶಕಗಳ ಮೊದಲು ಪಿ ಕೆ ರಾಜಗೋಪಾಲನ್ ಈ ನಿಗೂಢ ವೈರಸ್ ಬಗ್ಗೆ ಅಧ್ಯಯನ ನಡೆಸಲು 1957ರಲ್ಲಿ ಶಿವಮೊಗ್ಗ ಜಿಲ್ಲೆಗೆ ಬಂದಿಳಿ ದರು. ಅವರು ಆಗಿನ್ನೂ 26 ವರ್ಷದ ಯುವ ಕೀಟ ಶಾಸ್ತ್ರಜ್ಞ. ಪುಣೆಯ ವೈರಾಲಜಿ ಸಂಸ್ಥೆಯವರು ಈ ಹೊಸ ನಿಗೂಢ ಕಾಯಿಲೆಯ ಬಗ್ಗೆ ವಿವರಗಳನ್ನು ಕಲೆಹಾಕಲು ನಿಯೋಜಿಸಿದ್ದರು. ಆ ಸಂದರ್ಭದಲ್ಲಿ ಪುಣೆಯ ವೈರಾಲಜಿ ಸಂಸ್ಥೆಯ ಹೆಚ್ಚಿನ ಎಲ್ಲ ವಿಜ್ಞಾನಿಗಳು ಈ ಕೆಎಫ್ಡಿ ಸಹ ಹಲವಾರು ವಿದೇಶಗಳಲ್ಲಿ ಕಂಡುಬರುವ ಹಳದಿ ಜ್ವರ (Yellow fever) ದ ರೀತಿಯದ್ದೇ ಕಾಯಿಲೆ ಎಂದು ತಿಳಿದಿದ್ದರು.

ಆದರೆ, ಇಲ್ಲಿ ಕಾಯಿಲೆ ಬೇರೆ ಸ್ವರೂಪ ತಳೆದು ಹಲವಾರು ಜನರು ಕಾಯಿಲೆಗೆ ಈಡಾಗಿ, ಮತ್ತೆ ಕೆಲವರ ಮರಣಕ್ಕೂ ಕಾರಣ ವಾದಾಗ ಇದು ಹಳದಿ ಜ್ವರ ಅಲ್ಲ, ಬೇರೆಯದ್ದೇ ರೀತಿಯ ಕಾಯಿಲೆ ಎಂಬುದು ಅರಿವಾಯಿತು. ಕೊನೆಗೆ ರಾಜಗೋ ಪಾಲನ್ ಅವರು ಈ ಕಾಯಿಲೆಗೆ ‘ಕ್ಯಾಸನೂರು ಅರಣ್ಯ ಕಾಯಿಲೆ’ ಎಂದು ಹೆಸರು ಕೊಟ್ಟರು. ಅಲ್ಲಿಯವರೆಗೆ ಸ್ಥಳೀಯರು ಇದನ್ನು ಮಂಗನ ಕಾಯಿಲೆ ಎಂದೇ ಕರೆಯು ತ್ತಿದ್ದರು.

ಈ ವೈರಸ್ ಸಂಶೋಧನೆಗೆ ಅಮೆರಿಕ ಮೂಲದ ರಾಕ್ ಫೆಲ್ಲರ್ ಫೌಂಡೇಶನ್ ಆಸಕ್ತಿ ವಹಿಸಿ ಅದಕ್ಕೆ ಬೇಕಾದ ಲ್ಯಾಬೋರೇಟರಿ ಮತ್ತು ಫೀಲ್ಡ ಸ್ಟೇಷನ್ ಅನ್ನು ಶಿವಮೊಗ್ಗ ಜಿಯ ಸಾಗರದಲ್ಲಿ (ನಾನು ಈಗ ನೆಲೆಸಿರುವ ಸ್ಥಳ) ಸ್ಥಾಪಿಸಿದರು. ಕಾಯಿಲೆ ಹೇಗೆ ಉಗಮವಾಯಿತು, ಮನುಷ್ಯನಿಗೆ ಹೇಗೆ ವರ್ಗಾವಣೆಯಾಯಿತು ಎಂಬ ಬಗ್ಗೆ ವಿವರವಾಗಿ ಅಧ್ಯಯನ ಮಾಡಲು ಯಥೇಚ್ಛವಾಗಿ ಹಣ ಖರ್ಚು ಮಾಡಲು ತಯಾರಿದ್ದರು.

ರಾಜಗೋಪಾಲನ್ ಮತ್ತವರ ತಂಡ ಸಾಗರಕ್ಕೆ ಬಂದು ಕ್ಯಾಸನೂರಿನ ಮತ್ತು ಆಸುಪಾಸಿನ ಅರಣ್ಯಗಳಲ್ಲಿ ತಿರುಗಾಡಿ ವಿವರ ಸಂಗ್ರಹಿ ಸಲು ಆರಂಭಿಸಿದರು. ಅವರ ಕೆಲಸ ತುಂಬಾ ಕ್ಲಿಷ್ಟಕರವಾಗಿತ್ತು. ಕಾಯಿಲೆ ಬಗ್ಗೆ ಏನೆಂದೂ ಸ್ಪಷ್ಟತೆಯಿರಲಿಲ್ಲ. ಇದು ಟೈಫಾಯಿಡ್ ಇರಬಹುದೇ? ಹೊಸ ರೀತಿಯ ಹಳದಿ ಜ್ವರವೇ? ಎಂಬೆಲ್ಲ ಅನುಮಾನಗಳೆದ್ದವು. ಬಹುಶಃ ಸೊಳ್ಳೆಗಳಿಂದ ಈ ಕಾಯಿಲೆ ಹರಡುತ್ತದೆ ಎಂದು ಆಗ ಭಾವಿಸಲಾಗಿತ್ತು. ಹಳದಿ ಜ್ವರಕ್ಕೆ ವ್ಯಾಕ್ಸಿನ್ ತೆಗೆದುಕೊಂಡು ಬಂದಿದ್ದ ಆರಂಭಿಕ ಸಂಶೋಧಕರಲ್ಲಿ ಸಹ ಕೆಎಫ್ಡಿ ಕಾಣಿಸಿ ಕೊಂಡಿತ್ತು.

ಅವರ ರಕ್ತದ ಮಾದರಿಯನ್ನು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ರಾಕ್ ಫೆಲ್ಲರ್‌ರವರ ಲ್ಯಾಬೋರೇಟರಿಗೆ ಕಳುಹಿಸಲಾಯಿತು. ಒಂದು ದಶಕದ ಮೊದಲು ರಷ್ಯಾದ ಸೈಬೀರಿಯಾದಲ್ಲಿ ಕಾಣಿಸಿಕೊಂಡ OMSK hemorrhagic ಜ್ವರದ ಹತ್ತಿರದ ರೀತಿಯ ವೈರಸ್ ಇದು ಎಂದು ವರದಿ ಬಂದಿತು. ಆ ಜ್ವರ ಉಣ್ಣಿ (ನಮ್ಮ ಭಾಗದಲ್ಲಿ ಉಣುಗು ಎನ್ನುತ್ತಾರೆ)ಯ ಕಡಿತದಿಂದ ಮನುಷ್ಯನಿಗೆ, ಇತರ ಪ್ರಾಣಿಗಳಿಗೆ ಬರುತ್ತದೆ. ಹಾಗೆಯೇ ಕೆಎಫ್ಡಿ ಸಹಿತ ಇದೇ ಉಣ್ಣಿಗಳ ಕಡಿತದಿಂದ ಬರುತ್ತದೆ. ಆಗ ಉದ್ಭವಿಸಿದ ಪ್ರಶ್ನೆ – 7000 ಕಿ.ಮೀ ದೂರದ ರಷ್ಯಾದ ಸೈಬೀರಿಯಾದಿಂದ ಕರ್ನಾಟಕದ ಶಿವಮೊಗ್ಗ ಜಿಲ್ಲೆಗೆ ಈ ವೈರಸ್ ವರ್ಗಾಯಿಸಲ್ಪಟ್ಟಿತೇ? ದೂರ ದೂರ ಚಲಿಸುವ ಹಕ್ಕಿಗಳು ಆ ದೂರ ದಿಂದ ಇಲ್ಲಿಗೆ ಉಣ್ಣಿ ಅಥವಾ ಕಾಯಿಲೆಯನ್ನು ತಂದವೇ ? ರಾಜಗೋಪಾಲನ್‌ರ ತಂಡ 184 ವಿವಿಧ ಜಾತಿಗೆ ರಿದ 8474 ಹಕ್ಕಿಗಳನ್ನು ವಿಶೇಷ ಯೋಜನೆಯ ರೀತ್ಯಾ ಟ್ರ್ಯಾಪ್ ಮಾಡಲು ಆರಂಭಿಸಿದರು.

ಹಾಗೆಯೇ ಉಣ್ಣಿಗಳನ್ನು ಸಹಿತ ಸಂಗ್ರಹಿಸಿ ಅವುಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪಶ್ಚಿಮ ಘಟ್ಟಗಳಲ್ಲಿ ಎಲ್ಲ ಕಡೆ ಕಂಡು ಬರುವ
Haemaphysalis Spinigeria ಜಾತಿಯ ಉಣ್ಣಿಗಳು 1082 ಹಕ್ಕಿಗಳಲ್ಲಿ ಕಂಡು ಬಂದವು. ಈ ಉಣ್ಣಿಗಳು ಸ್ಥಳೀಯವಾಗಿ ಇರುವ ಹಕ್ಕಿಗಳಲ್ಲಿ ಕಾಣಿಸಿಕೊಂಡವೇ ಹೊರತು ವಲಸೆ ಬರುವ ಹಕ್ಕಿಗಳಲ್ಲಿ ಕಾಣಿಸಲಿಲ್ಲ. ಹಾಗಾಗಿ ಈ ಕಾಯಿಲೆ ಸ್ಥಳೀಯವಾಗಿ ಹುಟ್ಟಿದ ಕಾಯಿಲೆಯೇ ಹೊರತು ಹೊರಗಡೆಯಿಂದ ಬಂದ ಕಾಯಿಲೆಯಲ್ಲ ಎಂಬ ಅಭಿಪ್ರಾಯಕ್ಕೆ ಬಂದರು ರಾಜಗೋಪಾಲನ್.

ಅವರು ಕೆಲವು ತಿಂಗಳುಗಳ ಮೊದಲು ತಮ್ಮ 92ನೆಯ ವಯಸ್ಸಿನಲ್ಲಿ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 1957ರಿಂದ 1970ರ ವರೆಗೆ ಸಾಗರದ ಸಂಶೋಧನಾ ಕೇಂದ್ರವನ್ನು ಸಂಪೂರ್ಣವಾಗಿ ಅವರೇ ನಿಭಾಯಿಸಿ ದ್ದರು. ರಾಜಗೋಪಾಲನ್‌ರ ತಂಡ ಆಗಿನ ಈ ನಿಗೂಢ ಕಾಯಿಲೆಯ ಬಗೆಗೆ ಅಧ್ಯಯನಕ್ಕೆ ತೊಡಗಿಕೊಂಡಿರುವ ಸಮಯದಲ್ಲಿ ಈ ಭಾಗ ದಲ್ಲಿ ಕರ್ನಾಟಕ ಸರಕಾರ ಲಿಂಗನಮಕ್ಕಿ ಅಣೆಕಟ್ಟು ಕಟ್ಟುವ ಸನ್ನಾಹ ದಲ್ಲಿತ್ತು. 1950ರ ದಶಕದಲ್ಲಿ ಶರಾವತಿ ನದಿಗೆ ಕಟ್ಟಲು ಆರಂಭಿಸಿದ ಆ ಆಣೆಕಟ್ಟು 300 ಕಿ.ಮೀ. ಮುಖ್ಯ ಅರಣ್ಯ ಭೂಮಿಯ ಪ್ರದೇಶ ನೀರಿನಲ್ಲಿ ಮುಳುಗುವ ಸಂಭವವಿದ್ದು 22968 ಕುಟುಂಬಗಳನ್ನು ಆ ಪ್ರದೇಶಗಳಿಂದ ಸ್ಥಳಾಂತರಿಸಬೇಕಾದ ಅನಿವಾರ್ಯ ಒದಗಿತು.

ಆ ಬೃಹತ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯಿಂದ ಅರಣ್ಯ ನಾಶ, ಜನರ ಓಡಾಟ, ಚಲನೆ – ಈ ಕಾರಣಗಳಿಂದ ಕಾಡಿನ ಇದ್ದಿರ ಬಹುದಾದ ಈ ವೈರಸ್‌ನ ಕಾಯಿಲೆ ಜಾಸ್ತಿಯಾಯಿತು ಎಂದು ರಾಜಗೋಪಾಲನ್‌ರ ಅಭಿಪ್ರಾಯ. ಆ ಪ್ರದೇಶ ಮೊದಲು ಬಹಳಷ್ಟು
ಕ್ರೂರ ಪ್ರಾಣಿಗಳನ್ನೊಳಗೊಂಡ ತುಂಬಾ ದಟ್ಟ ಅರಣ್ಯ ಪ್ರದೇಶವಾಗಿತ್ತು. ಈ ಕಾಡು ಪ್ರಾಣಿಗಳು ಮೊದಲು ತಿಳಿಸಿದ ಹಲವು ಬಗೆಯ ಉಣ್ಣಿಗಳಿಗೆ ಆಶ್ರಯ ತಾಣವಾಗಿದ್ದವು. ಅಣೆಕಟ್ಟು ಕಟ್ಟುವಿಕೆಯಿಂದ ಅರಣ್ಯ ನಾಶವಾಗತೊಡಗಿತು. ಪರಿಣಾಮ ಎಂದರೆ ಕ್ರೂರ ಕಾಡು ಪ್ರಾಣಿಗಳು ಒಳಗಿನ ತಾಣಗಳಿಂದ ಹೊರಗೆ ಬಂದು ಬೇರೆ ಬೇರೆ ಸ್ಥಳಗಳನ್ನು ಹುಡುಕಿಕೊಂಡವು. ಆಗ ಉಣ್ಣಿಗಳು ಅನಿವಾರ್ಯವಾಗಿ ಹಸು, ಎಮ್ಮೆ, ಕುರಿ – ಈ ರೀತಿಯ ಸಾಕು ಪ್ರಾಣಿಗಳಿಗೆ ಸ್ಥಳಾಂತರಗೊಂಡವು.

ಅಗಾಧ ಅರಣ್ಯ ನಾಶ: ಲಿಂಗನಮಕ್ಕಿ ಅಣೆಕಟ್ಟು ಕಟ್ಟುವಿಕೆಯಿಂದ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಬದಲಾವಣೆ ಗಳು ಆಗತೊಡಗಿ ದವು. ಅಣೆಕಟ್ಟಿನ ಜಾಗದಲ್ಲಿನ ಹಲವಾರು ಕುಟುಂಬಗಳನ್ನು ಕರ್ನಾಟಕ ಸರಕಾರದ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿನ 13067 ಎಕರೆ ಜಾಗದಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟರು. ಇದರಲ್ಲಿ ಹೆಚ್ಚಿನ ಪ್ರದೇಶಗಳು ಅರಣ್ಯ ಭೂಮಿಯೇ ಆಗಿತ್ತು ಎಂಬುದು ದೌರ್ಭಾಗ್ಯದ ವಿಚಾರ. ನಿರಾಶ್ರಿತ ಕುಟುಂಬಗಳಿಗೆ ಆಶ್ರಯ ಕಲ್ಪಿಸಲು ಅಗಾಧ ಪ್ರಮಾಣದ ಬಹುಮುಖ್ಯ ಪಶ್ಚಿಮ ಘಟ್ಟದ ಅರಣ್ಯವನ್ನು ನಾಶ ಪಡಿಸಲಾಯಿತು. ಈ ಕುಟುಂಬಗಳು ವಿಸ್ತಾರಿಸಲಾ ರಂಭಿಸಿದ ನಂತರ ದಶಕಗಳ ಕಾಲ ರಾಜಕೀಯ ವ್ಯಕ್ತಿಗಳ ಬೆಂಬಲದಿಂದ ಇನ್ನೂ ಹೆಚ್ಚಿನ ಪ್ರಮಾಣದ ಅರಣ್ಯ ನಾಶವಾಯಿತು.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಹಿತ ನಾಟಗಳ ಅಗತ್ಯಕ್ಕಾಗಿ ಹಲವು ಸಾವಿರ ಎಕರೆಗಳ ಕಾಡು ಕಡಿದು ಅಕೇಶಿಯ, ನೀಲಗಿರಿ ರೀತಿಯ ಪ್ಲಾಂಟೇಷನ್ ಗಿಡಗಳನ್ನು ಬೆಳೆಸಲಾರಂಭಿಸಿದರು. ಅರಣ್ಯನಾಶ ಮತ್ತು ಪ್ಲಾಂಟೇಷನ್ ಬೆಳೆಗಳ ಬೆಳೆಯುವಿಕೆ – ಇವು ಕೆಎಫ್ಡಿ ಅನ್ನು ಜಾಸ್ತಿ ಮಾಡುವಲ್ಲಿ ಪ್ರಮುಖಪಾತ್ರ ವಹಿಸಿತು ಎಂದು ಈ ಕಾಯಿಲೆಯ ಸಂಶೋಧನೆಯಲ್ಲಿ ಕಂಡು ಬಂದ ಅಂಶ. ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ಯಾವುದೇ ಜಿಗಿಂತ ಜಾಸ್ತಿ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಅರಣ್ಯ ನಾಶ ಮತ್ತು ಮಣ್ಣಿನ ಸವಕಳಿ ಕಂಡುಬರುತ್ತದೆ. ಉಪಗ್ರಹ ಚಿತ್ರಗಳನ್ನು ಆಧರಿಸಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಈ ಭಾಗದಲ್ಲಿ 1973 ಮತ್ತು 2018 ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ ಶೇ.9.79 ಅಂಶಗಳಷ್ಟು ಅಥವಾ 83 ಚದರ ಕಿಮೀ ಅರಣ್ಯ ಕಡಿಮೆಯಾಗಿದೆ ಎಂದು ಗೊತ್ತಾಗಿದೆ.

ಅದರ ಬದಲಾಗಿ ಪ್ಲಾಂಟೇಷನ್ ಬೆಳೆಯಾದ ಅಡಕೆ ಗಿಡ ಮರಗಳು 1648 ಚದರ ಕಿಮೀ ಜಾಗದಲ್ಲಿ ಶೇ.20 ಅಂಶಗಳಷ್ಟು ಜಾಸ್ತಿ
ಯಾಗಿದೆ. ಈ ರೀತಿಯ ಅರಣ್ಯ ಪ್ರದೇಶದ ಗಮನಾರ್ಹ ಬದಲಾವಣೆ ಕೆಎಫ್ಡಿ ಜಾಸ್ತಿಯಾಗಲು ಮುಖ್ಯ ಕಾರಣ ಎಂದು ಎಲ್ಲ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೊರೇಷನ್ ಪ್ರಕಾರ ಮೇಲೆ ತಿಳಿಸಿದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 1.44 ಲಕ್ಷ ಎಕರೆಗಳಷ್ಟು ಭೂಮಿಯನ್ನು ರೈತರು ತಮ್ಮದಾಗಿಸಿಕೊಂಡಿದ್ದಾರೆ. ಯಾವುದೇ ಪಶ್ಚಿಮ ಘಟ್ಟಗಳ ಇತರ ಜಿಲ್ಲೆಗಳಿಗಿಂತ ತುಂಬಾ ಜಾಸ್ತಿ. ಇದರಲ್ಲಿ ಅರಣ್ಯಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರುಗಳ ಕುಮ್ಮಕ್ಕು ಮತ್ತು ಕೈವಾಡ ಇದೆ ಎಂಬುದು ಬಾರೀ ದುರದೃಷ್ಟಕರ ವಿಚಾರ.

ಮೊದಲು ತಿಳಿಸಿದಂತೆ ಕಲುಷಿತ ವಾತಾವರಣ ಈ ಕೆಎಫ್ಡಿ ಜಾಸ್ತಿ ಮಾಡುವ ಅಂಶ ಎಂಬುದು ೫೦ ವರ್ಷಗಳ ಮೊದಲೂ ರಾಜ ಗೋಪಾಲನ್ ಮತ್ತು ಅವರ ಗುರುಗಳಾದ ಜೋರ್ಜ್ ಬಾಷೆಲ್ ಮ್ಯಾನರಿಖ್‌ರ ಗಮನಕ್ಕೆ ಬಂದಿತ್ತು. ಜೋರ್ಜ್ ಬಾಷೆಲ್
ರು ಕೊಲಂಬಿಯಾದ ವೈದ್ಯರು ಹಾಗೂ ಪಕ್ಷಿ ಕಾಯಿಲೆಗಳ ತಜ್ಞರು. ಅವರು ದಕ್ಷಿಣ ಅಮೆರಿಕದಲ್ಲಿ ಹಳದಿ ಜ್ವರವನ್ನು ಆಮೂಲಾಗ್ರವಾಗಿ ಇಲ್ಲದಂತೆ ಮಾಡಿದ ವೈದ್ಯರು. ಅಂತಹಾ ನುರಿತ ತಜ್ಞರು ಸಾಗರದ ಸಂಶೋಧನಾ ಘಟಕದಲ್ಲಿ 1960 ರಿಂದ 5 ವರ್ಷಗಳ ಕಾಲ ಇದ್ದರು ಎಂಬುದು ಗಮನಾರ್ಹ ವಿಷಯ. ಈ ಭಾಗದ ಜನಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ.

ಅಂತೆಯೇ ವಾತಾವರಣದಲ್ಲಿ ತೀವ್ರ ಬದಲಾವಣೆಯ ಪರಿಣಾಮ ಕಾಡಿನ ಒಳಗಡೆಯೇ ಇದ್ದ ಪ್ರಾಣಿಗಳ ಗುಪ್ತವಾಗಿ ಹುದುಗಿದ್ದ ಕಾಯಿಲೆ ಗಳು ಹೊರಬರಲಾರಂಭಿಸಿದವು. ದಟ್ಟ ಅರಣ್ಯದ ಕಾಡಿನ ಪ್ರಾಣಿಗಳ ಸಂಪರ್ಕಕ್ಕೆ ಮನುಷ್ಯ ಬಂದಾಗ ಮಾನವನಿಗೆ ಕಾಯಿಲೆ
ಉಂಟು ಮಾಡುವ ವೈರಸ್‌ಗಳು ಮನುಷ್ಯರಿಗೆ ವರ್ಗಾವಣೆ ಆಗತೊಡಗಿದವು. ಎಂದು ಜೋರ್ಜ್ ಬಾಷೆಲ್‌ರು 1969 ರಲ್ಲಿ ಅಂತಾ ರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟಿಸಿದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅಂತಹಾ ಕಾಯಿಲೆಗಳಲ್ಲಿ ಆಗ ಕಾಣಿಸಿದ ಕೆಎಫ್ಡಿ ಮತ್ತು ಈಗಿನ ಕೋವಿಡ್ – 19 ಕಾಯಿಲೆ ಮುಂಚೂಣಿಯಲ್ಲಿವೆ ಎಂದು ವಿಜ್ಞಾನಿಗಳ
ಈಗಿನ ಅಭಿಪ್ರಾಯ. 2012ರ ವರೆಗೆ ಈ ಮಂಗನ ಕಾಯಿಲೆಯು ಶಿವಮೊಗ್ಗದ ಆಸುಪಾಸಿನ 5 ಜಿಲ್ಲೆಗಳಲ್ಲಿ ಮಾತ್ರ ಕಂಡುಬಂದಿತ್ತು. ಆನಂತರ ಚಾಮರಾಜನಗರ ಜಿಲ್ಲೆ, ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರದ ದಕ್ಷಿಣ ಭಾಗ, ತಮಿಳು ನಾಡು, ಕೇರಳದ ಪಾಲ್ಘಾಟ್, ವಯನಾಡ್ ಜಿಲ್ಲೆಗಳಲ್ಲಿ ಆಗಾಗ ಕೆಎಫ್ ಡಿ ಕಾಯಿಲೆ ಕಾಯಿಲೆ ಕಂಡು ಬರತೊಡಗಿತು. ಮೊದಲಿನ ಪ್ರದೇಶಗಳಿಂದ ತುಂಬಾ ದೂರದ ಈ ಹೊಸ
ಪ್ರದೇಶಗಳಲ್ಲಿ ಕಂಡು ಬರಲು ಏನು ಕಾರಣ ಎಂಬ ಅಂಶ ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ.

ಆದರೆ ಮುಖ್ಯವಾಗಿ ಅರಣ್ಯ ನಾಶ, ಅರಣ್ಯ ಪ್ರದೇಶಗಳಲ್ಲಿ ಗೇರು, ಅಡಿಕೆ, ಅಕೇಶಿಯ, ನೀಲಗಿರಿ ಪ್ಲಾಂಟೇಷನ್ ಗಳು ಜಾಸ್ತಿಯಾಗು ತ್ತಿರುವುದು, ಮೊದಲಿನ ದಟ್ಟ ಅರಣ್ಯ ಪ್ರದೇಶಗಳಿಗೆ ಹತ್ತಿರವಾಗಿ ಜನರು ಜೀವಿಸುತ್ತಿರುವುದು, ಅಂತೆಯೇ ವಾತಾವರಣದ ತಾಪಮಾನ ಏರಿಕೆಯಾಗುತ್ತಿರುವುದು – ಈ ನಾಲ್ಕು ಅಂಶಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

1970ರಲ್ಲಿ ರಾಜಗೋಪಾಲನ್‌ರು ದೆಹಲಿಗೆ ವರ್ಗಾವಣೆ ಹೊಂದಿದರು. ಸಾಗರದ ಫೀಲ್ಡ್ ಸ್ಟೇಷನ್ ಮುಚ್ಚಿತು. ಆನಂತರ ಸಂಶೋಧನೆ
ನಡೆಯದೆ ಕಾಯಿಲೆ ನಿರ್ಲಕ್ಷಿಸಲ್ಪಟ್ಟಿತು. ಹಾಗಾಗಿ ಕಾಯಿಲೆಯ ಹಲವಾರು ಅಂಶಗಳು ಇನ್ನೂ ನಿಗೂಢವಾಗಿಯೇ ಇವೆ.