ಮೂರ್ತಿ ಪೂಜೆ
ಪಿ.ಎಂ.ವಿಜಯೇಂದ್ರ ರಾವ್
ಮಾನ್ಯ ಮೂಡ್ನಾಕೂಡು ಚಿನ್ನಸ್ವಾಮಿ ಅವರೇ, ನಿಮ್ಮ ನನ್ನ ಪರಿಚಯ ಹಳೆಯದು. ನೀವು ಮರೆತಿರುವ ಸಾಧ್ಯತೆ ಹೆಚ್ಚು. ಮರೆತಿದ್ದರೂ ಬೇಸರವಿಲ್ಲ. ನೆನಪಿನಲ್ಲಿಡ ಬೇಕಾದ ವ್ಯಕ್ತಿಯೂ ನಾನಲ್ಲ. ನನ್ನನ್ನು ಬಹಳಷ್ಟು ಜನ ಬ್ರಾಹ್ಮಣನೆಂದು ಗುರುತಿಸುತ್ತಾರೆ. ಬಹುತೇಕರಂತೆ ಹುಟ್ಟಿನಿಂದ ನಾನೂ ಶೂದ್ರ. ಹಾಗೆ ಹೇಳಿ ನಿಮ್ಮ ಸ್ಮೃತಿಯನ್ನು ಪ್ರವೇಶಿಸುವ ಯತ್ನ ಇದಲ್ಲ. ನಿಮ್ಮ ಮನದೇಗುಲದ ಪ್ರವೇಶ ದ್ವಾರ ನನಗೆ ಮುಚ್ಚಿದ್ದರೂ ಅಡ್ಡಿಯಿಲ್ಲ. ಹತ್ತು ದಿನಗಳ ಹಿಂದೆ, ಪ್ರಜಾವಾಣಿ ಯೋಜಿ ಸಿದ್ದ ಬ್ರಾಹ್ಮಣ, ಬ್ರಾಹ್ಮಣ್ಯ, ಜಾತಿನಿಂದನೆ ಎಂಬ ಸಂವಾದ ಫೇಸ್‌ಬುಕ್‌ನಲ್ಲಿ ನನ್ನ ಕಣ್ಣಿಗೆ ಬಿತ್ತು.
ನೀವೂ ಭಾಗವಹಿಸಿದ್ದ ಆ ಕಾರ್ಯಕ್ರಮದಲ್ಲಿ ಒಂದು ಗಂಟೆ, ೨೨ ನಿಮಿಷ, ೩೭ ಸೆಕೆಂಡುಗಳ ಸಂವಾದದ ವಿಡಿಯೋ ನೋಡಲು ಕೂತೆ. ೩೫ ನಿಮಿಷ ಹದಿನೇಳು ಸೆಕೆಂಡುಗಳವರೆಗೂ ವೀಕ್ಷಿಸಿ, ವಿಚಾರದಲ್ಲಿ ಹೊಸದೇನೂ ಕಾಣದಿದ್ದ ಕಾರಣಕ್ಕೆ ಅಲ್ಲಿಗೇ ನಿಲ್ಲಿಸಿದೆ. ನಾನು ವೀಕ್ಷಿಸಿದ ಅವಧಿಯಲ್ಲಿ ಕೇಳಿ ಪಡೆದ ಮಾಹಿತಿ ಯನ್ನಷ್ಟೇ ಚರ್ಚಿಸಿದರೂ ಬಹುಶಃ ಈ ಲೇಖನದ ಪದಮಿತಿಯನ್ನು ತಲುಪಿರುತ್ತೇನೆ. ಮೊದಲಿಗೆ, ಈ ಸಂವಾದವನ್ನು ವ್ಯಂಗ್ಯ ಮಾಡುವ ಮನಸ್ಸಾಯಿತು. ಅದರಿಂದ ನಾಲ್ಕು ಜನ ಓದುಗರನ್ನು ನಗಿಸಿ ರಂಜಿಸುವುದಕ್ಕಷ್ಟೆ ವಾರಕ್ಕೊಮ್ಮೆ ಬರೆಯಲು ದೊರಕುವ ಈ ಪೋಲುಮಾಡಬಾರದು ಎಂಬ ಎಚ್ಚರಿಕೆ ಮೂಡಿತು. ವ್ಯಂಗ್ಯ ಕೆಲವರಿಗೆ ಅರ್ಥವಾಗದಿರಲೂಬಹುದು. ಆಗಬಹುದಾದ ಪರಿಣಾಮವನ್ನು ಲೆಕ್ಕಿಸದೆ ವಾಸ್ತವವನ್ನು ನೇರಾನೇರ ಬಿಂಬಿಸಿ ಧನ್ಯತೆ ಅನುಭವಿಸುವುದನ್ನು ಬದುಕು ನನಗೆ ಕಲಿಸಿದೆ.
ಯಾರು ಯಾವಾಗ ಎಲ್ಲಾ ಹೇಗೆ ಬೇಕಾದರೂ ವಿನಾ ಕಾರಣ ಬ್ರಾಹ್ಮಣರನ್ನು ನಿಂದಿಸಿ, ಮೀಸೆ ತಿರುವಬಹುದು, ಕಾನೂನು ಅವರ ಪಾಲಿಗೆ ಇದ್ದೂ ಸತ್ತಂತೆ ಎನ್ನುವ ಹತಾಶೆಯ ಜೀವ ಸವೆಸುವುದು ಅವರ ಕರ್ಮ ಎನ್ನುವ ವ್ಯವಸ್ಥೆಯಲ್ಲಿ ವ್ಯಂಗ್ಯ ಒಂದು ತೆಳುವಾದ ಬೆತ್ತ. ಬ್ರಾಹ್ಮಣ್ಯವನ್ನು ನಾಶಪಡಿಸುವ ಭರದಲ್ಲಿ ಬ್ರಾಹ್ಮಣ ರನ್ನೂ ಇರಿಯಲು ಟೊಂಕಕಟ್ಟಿ ಕೈಯಲ್ಲಿ ಪತ್ರಿಕೆ ಎಂಬ ಪ್ರತಿಭಟನೆಯ ಲಾಂಗನ್ನು ಹಿಡಿದು ಸದಾ ಯುದ್ಧಸನ್ನದ್ಧ ರಾಗಿರುವ ಬೃಹತ್ ಸೈನ್ಯದ ವಿರುದ್ಧ ಆ ಬೆತ್ತ ಕೆಲಸ ಮಾಡಲಾರದು. ಅದೂ ಅಲ್ಲದೆ, ಗಂಭೀರವಾದ ವಿಷಯವನ್ನು ಹಾಸ್ಯದ ಮುಸುಕಿನಡಿ ಹುದುಗಿಸಿ ಬಿಟ್ಟರೆ, ಈ ಲೇಖನಕ್ಕೆ ನೀವು ಪ್ರತ್ಯುತ್ತರ ನೀಡುವ ಹೊಣೆ ಕಡಿಮೆ ಆಗಬಹುದೆಂಬ ಆತಂಕದಲ್ಲಿ ವ್ಯಂಗ್ಯದ ಊರುಗೋಲನ್ನು ಪಕ್ಕಕ್ಕಿಟ್ಟಿದ್ದೇನೆ.
ನಮ್ಮ ಭೇಟಿಯಾಗಿ ಕಾಲು ಶತಮಾನವೇ ಸಂದಿದೆ. ಆಗ ನಾನು ಡೆಕ್ಕನ್ ಹೆರಾಲ್ಡ ಪತ್ರಿಕೆಯ ಮೈಸೂರು ವರದಿಗಾರನಾಗಿದ್ದೆ. ಅಂದಿನಿಂದ ಇಂದಿನವರೆಗೂ ನಿಮ್ಮ ಆಲೋಚನಾಲಹರಿ ಹಾಗೇ ಇದೆ ಅನ್ನಿಸುತ್ತಿದೆ. ನಿಮ್ಮ ಅನುಭವದಲ್ಲಿ ನೀವು ವಿಷಯ ಮಂಡಿಸಿದ್ದೀರಿ. ನೀವು ಹಿರಿಯರಾದ್ದರಿಂದ ನಿಮ್ಮ ಅನುಭವ ನನ್ನ ಅನುಭವಕ್ಕಿಂತ ವಿಸ್ತಾರವಾಗಿರುವ ಸಾಧ್ಯತೆ ಇದೆ, ಆದ್ದರಿಂದ ಅದನ್ನು ಕೆದಕಲಾರೆ. ಆದರೆ ನಿಮ್ಮ ದೃಷ್ಟಿಕೋನದಲ್ಲೂ, ವಿಚಾರದಲ್ಲೂ ಬದಲಾವಣೆ ತಂದು ಕೊಳ್ಳುವುದಕ್ಕೆ ಆಸ್ಪದವಿದೆ ಎಂದೆನಿಸುತ್ತದೆ. ಅಂತಹ ಬದಲಾವಣೆ ಬಯಸುವುದು ನನ್ನ ಕಾರಣಕ್ಕಲ್ಲ, ಸಮಾಜದ ಕಾರಣಕ್ಕೆ, ದೇಶದ ಹಿತಕ್ಕೆ. ಬ್ರಾಹ್ಮಣರಿಗೆ ಅವಕಾಶಗಳ ಬಾಗಿಲು ಎಡೆ ತೆರೆದಿದೆ ಎಂಬ ನಿಮ್ಮ ಅಭಿಪ್ರಾಯವನ್ನು ಸಾಕ್ಷ್ಯಾಧಾರಗಳ ಸಮೇತ ತಪ್ಪೆಂದು ಸಾಬೀತು ಪಡಿಸಬಹುದು.
ಹಾಗೆಯೇ, ಬ್ರಾಹ್ಮಣರಲ್ಲದವರಿಗೆ ಅವಕಾಶಗಳು ಇಲ್ಲವೆಂತಲೋ, ಕಡಿಮೆ ಎಂತಲೋ ಹೇಳುವ ನಿಮ್ಮ ಮಾತೂ ಸತ್ಯಕ್ಕೆ ದೂರ. ಉದಾಹರಣೆಗೆ, ನಾನು ಡೆಕ್ಕನ್ ಹೆರಾಲ್ಡ ಸೇರಿದ್ದು, ಬಹುತೇಕ ಇತರ ಪತ್ರಕರ್ತರಂತೆ, ಪ್ರವೇಶ ಪರೀಕ್ಷೆಯಲ್ಲಿ ಪಾಸಾದ ನಂತರ. ಬ್ರಾಹ್ಮಣನೆಂದು – ಹಾಗೆಂದು ನನಗೇ ಎಂದೂ ಅನಿಸಿಲ್ಲ – ಯಾರೂ ನನಗೆ ಮಣೆ ಹಾಕಲಿಲ್ಲ. ಅದನ್ನು ನಾನೆಂದೂ ಬಯಸಿಯೂ ಇಲ್ಲ. ಆನಂತರ, ನನ್ನನ್ನು ಆಯ್ಕೆ ಮಾಡಿದವರು ಅಂದಿನ ಮುಖ್ಯ ಸಂಪಾದಕ ರಾದ ಕೆ.ಎನ್. ಹರಿಕುಮಾರ್.
ಹುಟ್ಟಿನಿಂದ ಬ್ರಾಹ್ಮಣ ಎಂಬ ನಿಮ್ಮ ಪರಿಕಲ್ಪನೆಯನ್ನು ಒಪ್ಪದಿದ್ದರೂ, ಬ್ರಾಹ್ಮಣರಿಗೆ ಅವರ ಸಂಖ್ಯೆಗನುಗುಣವಾಗಿ ಸಿಗಬೇಕಾದ್ದಕ್ಕಿಂತ ಹೆಚ್ಚು ಅವಕಾಶಗಳು ಸಿಗುತ್ತಿವೆ ಎಂಬ ನಿಮ್ಮ ವಾದಕ್ಕೆ ಬರುತ್ತೇನೆ. ಜನಸಂಖ್ಯೆಯಲ್ಲಿ ಘೋಷಿತ ಅಲ್ಪಸಂಖ್ಯಾತರಿಗಿಂತ ಬಹಳಷ್ಟು ಕಡಿಮೆ ಇರುವ ಬ್ರಾಹ್ಮಣ ಸಮುದಾಯ ಹೆಚ್ಚು ಸ್ಥಾನಗಳನ್ನು ಆಕ್ರಮಿಸಿದ್ದಾರೆ ಎಂಬುದೇ ವ್ಯವಸ್ಥಿತ ಅಪಪ್ರಚಾರ. ಆ ಕಾರಣಕ್ಕೆ, ಆ ತಪ್ಪು ಕಲ್ಪನೆಯ ಕಾರಣದಿಂದ ಹುಟ್ಟಿದ ಅಸಹಿಷ್ಣುತೆ ಆಧಾರರಹಿತ.
ಆದರೂ, ಕುವಿಚಾರವೇ ದಟ್ಟವಾಗಿರುವ ನಮ್ಮ ವ್ಯವಸ್ಥೆಯಲ್ಲಿ ಅಸಹಿಷ್ಣುತೆ ಇರುವುದು ಮತ್ತು ಬೆಳೆಯುತ್ತಿರುವುದು ಸತ್ಯ ಮತ್ತು ಅಪಾಯಕಾರಿ.
ನೀವು ಹೇಳಿದಂತೆ, ಬ್ರಾಹ್ಮಣರು ಪ್ರಭಾವಿಗಳಾಗಿದ್ದರೆ ಬ್ರಾಹ್ಮಣ್ಯದ ಮೂಲಕ ಅವರು ತಮ್ಮನ್ನು ಅವಹೇಳನ ಮಾಡುವ ಅದೆಷ್ಟು ಜನರ ಮೇಲೆ ಕೇಸ್ ದಾಖಲು
ಮಾಡಬಹುದಾಗಿತ್ತು, ಅಲ್ಲವೇ? ಅಂದ ಹಾಗೆ, ಸಾಮಾಜಿಕ ಹಿತವನ್ನು ಬಯಸುವ ನನ್ನ ಸ್ನೇಹಿತರೊಬ್ಬರು ಜಾತಿನಿಂದನೆ ಮೊಕದ್ದಮೆಗಳಲ್ಲಿನ ಸತ್ಯಾಂಶವನ್ನು ಅಂಕಿ ಅಂಶಗಳ ಮೂಲಕ ಹೊರತೆಗೆದಿzರೆ. ಸೀಮಿತ ಸಂಪನ್ಮೂಲದ ಕಾರಣಕ್ಕಾಗಿ ಅದನ್ನು ಅವರು ಪ್ರಕಟಗೊಳಿಸಿಲ್ಲ. ಪ್ರಜಾವಾಣಿ ನಡೆಸಿದ ಸಂವಾದವನ್ನು ನೋಡಿ ಸಾಮಾಜಿಕ ಜಾಲತಾಣವೆಂಬ ಬ್ರಾಹ್ಮಣ ಸಮುದಾಯದ ಮತ್ತೊಂದು ಕಿರು ಊರುಗೋಲನ್ನು ಬಳಸಿ ಪ್ರಕಟಿಸುತ್ತಿದ್ದಾರೆ.
ಮಾಹಿತಿ ಹಕ್ಕು ಕಾನೂನಿನಡಿ ಸರಕಾರದಿಂದ ಪಡೆದ ದಾಖಲೆಗಳು. ತಮ್ಮದೇ ಜೇಬಿನಿಂದ ಖರ್ಚು ಮಾಡಿ ಹೆಕ್ಕಿದ ಮಾಹಿತಿಯನ್ನಾಧರಿಸಿ ಅವರ ಸರಣಿ ನಿಮ್ಮ ಮತ್ತು ನಿಮ್ಮಂಥವರ ಕಣ್ತೆರೆಸುವಂತಿದೆ. ಬಿವಿ ಕಾರಂತರಿಗೆ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಆರತಿ ಎತ್ತಿ ತಟ್ಟೆಯಲ್ಲಿ ಬೀಳುವಕಾಸಿನ ಆಧಾರವಾದರೂ ಸಿಕ್ಕಿತೆಂದು ಹೇಳಿದಿರಿ. ಪ್ರಬಲ ಸಾಕ್ಷ್ಯಾಧಾರಗಳಿದ್ದೂ ಪ್ರಭಾವಿ ವ್ಯಕ್ತಿಗಳ ಮೇಲೆ ಯಾವುದೇ ಕ್ರಿಮಿನಲ್ ಆರೋಪ ಹೊರಿಸಿದರೆ ಅದನ್ನು ಆ ವ್ಯಕ್ತಿಯ ಜಾತಿಯ ಜನರು ರಸ್ತೆಗಿಳಿದು ಪ್ರತಿಭಟಿಸುವ ಹೀನಾಯ ಪರಿಪಾಠವಿರುವ ವ್ಯವಸ್ಥೆಯಲ್ಲಿ, ಕಾರಂತರು ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಆರೋಪಿಯಾದಾಗ ಅದಾವ ಬ್ರಾಹ್ಮಣ ಸಮುದಾಯ ಅವರ ಬೆಂಬಲಕ್ಕಾಗಿ ಪ್ರತಿಭಟನೆಗೆ ನಿಂತಿತು, ನೀವೇ ಹೇಳಿ.
ಅವರು ಖುಲಾಸೆಯಾಗಿದ್ದಕ್ಕೆ ಬ್ರಾಹ್ಮಣರ‍್ಯಾರಾದರೂ ನಡುರಾತ್ರಿಯ, ನಡುಬೀದಿಯ ಪಟಾಕಿ ಸಿಡಿಸಿದ್ದು ನಿಮ್ಮ ಕಿವಿಗೆ ಬಿತ್ತೋ? ಸಭ್ಯತೆಯನ್ನು ಬಿಂಬಿಸುವ ಈ ಬ್ರಾಹ್ಮಣ್ಯವನ್ನೇಕೆ ಸಂಸ್ಕೃತಿಯ ಚಿಂತಕರಾದ ನೀವು ಜನಪ್ರಿಯಗೊಳಿಸಬಾರದು? ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆಯುವಂತೆ, ನೀವು ನಿಮ್ಮ ವಾದದ ಸಮರ್ಥನೆಗೆ ದಿವಂಗತರಿಬ್ಬರು ಕಾರಂತರವರೆಗೂ ಹೋದಿರಿ. ನಿಮ್ಮ ಜತೆಯ ಸಂವಾದದಲ್ಲಿ ಪಾಲ್ಗೊಂಡಿದ್ದ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಅವರದ್ದೇ ಇತ್ತೀಚಿನ ಉದಾಹರಣೆ ಕೊಡಬಹುದಾಗಿತ್ತು. ಸಂವಿಧಾನ ಓದು ಎಂಬ ಅವರ ಪುಸ್ತಿಕೆಗೆ ಚಾಮರಾಜನಗರ ಸಂಸದರ ನಿಧಿಯಿಂದ ಅವರಿಗೆ ಉದಾರ ವಾದ ದೇಣಿಗೆ ನೀಡಲಾಯಿತು. ಆ ಹಣವನ್ನು ಆ ಬಾಬಿನಡಿ ಬಳಸುವಂತಿಲ್ಲ.
ದಾಸರ ಭಾಗ್ಯದ ಬಾಗಿಲು ಕೋಟೆಯ ಬಾಗಿಲಿನಷ್ಟು ದೊಡ್ಡದು. ಆದರೂ ನಿಮ್ಮ ದೃಷ್ಟಿ ಸ್ವರ್ಗೀಯ ಕಾರಂತರ ತಟ್ಟೆಯ ಕಾಸಿನತ್ತ. ಬ್ರಾಹ್ಮಣರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ದಾಸರು ಸಿದ್ಧರಿದ್ದರೆ, ನಾನು ದಾಸಾನುದಾಸನಾಗಬ. ನನಗೂ ನಾನು ತಯಾರಿಸಿದ ಸಾಕ್ಷ್ಯ ಚಿತ್ರವೊಂದನ್ನು ಸರಕಾರದ ನೆರವಿನಿಂದ ಜನಪ್ರಿಯ ಗೊಳಿಸಬೇಕಿದೆ. ಈ ಕುರಿತು ದಲಿತ ಅಧಿಕಾರಿಯೊಬ್ಬರ ನನ್ನ ಅನುಭವವನ್ನು ಹಂಚಿಕೊಳ್ಳುತ್ತೇನೆ, ಕೇಳಿ.
ಪಿ.ಮಣಿವಣ್ಣನ್ ಎಂಬ ಐಎಎಸ್ ಅಽಕಾರಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಜಿಽಕಾರಿಯಾಗಿ ಬಂದರು. ಅವರು ಬರುವುದಕ್ಕೆ ಮೊದಲೇ ಅವರ ಖ್ಯಾತಿ ಮೈಸೂರಿಗೆ ಬಂದಾಗಿತ್ತು. ಅವರನ್ನು ಪ್ರಾಮಾಣಿಕರೆಂದು ನಂಬಿದವರಲ್ಲಿ ನಾನೂ ಒಬ್ಬ. ಹಾಗಾಗಿ ಅವರನ್ನು ಮೆಚ್ಚಿಕೊಂಡಿದ್ದೆ. ಅವರೂ ಅಷ್ಟೆ. ನಾನು ಸಂದೇಶ ಕಳಿಸಿದ ಎರಡು ನಿಮಿಷದಲ್ಲಿ ಫೋನ್ ಮಾಡುತ್ತಿದ್ದರು. ಒಂದು ದಿನ , ಮನೆಗೆ ಉಪಾಹಾರಕ್ಕೆ ಕರೆದಿದ್ದರು. ನಿಮ್ಮಲ್ಲಿ ಅದೆಷ್ಟು ಅದ್ಭುತ ಆಲೋಚನೆಗಳಿವೆ.
ನಿಮ್ಮ ಜತೆ ದಿನನಿತ್ಯ ಬ್ರೇಕಾಸ್ಟ್ ಮಾಡುತ್ತಾ ಅವುಗಳನ್ನು ಆಲಿಸಬೇಕು ಎಂದು ನುಡಿದಿದ್ದರು.
ಹಲವು ವರ್ಷ ತಯಾರಿ ನಡೆಸಿ ನಾನು ಮೈಸೂರು ಕುರಿತಾದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದೆ. ಚಿತ್ರದ ಇಪ್ಪತ್ತೈದು ವಿಷಯಗಳಲ್ಲಿ ನಾನು ಇಷ್ಟಪಡುವ ದಲಿತ ಸಮುದಾಯ ಕುರಿತಾದ ವಿಷಯವೊಂದನ್ನೂ ಆರಿಸಿಕೊಂಡಿದ್ದೆ. ಚಿತ್ರನಿರ್ಮಾಣದಲ್ಲಿದ್ದ ನನ್ನನ್ನು ಮಣಿವಣ್ಣನ್ ಎಲೆಕ್ಟ್ರಾನಿಕ್ ಮತಪೆಟ್ಟಿಗೆಯ ಬಳಕೆ ಕುರಿತು ಮತದಾರರಲ್ಲಿ ಅರಿವು ಮೂಡಿಸುವ ಕಿರುಚಿತ್ರವೊಂದನ್ನು ತಯಾರಿಸಿ ಕೊಡಲು ಕೇಳಿದರು. ನನ್ನ ಚಿತ್ರವನ್ನು ನಿರ್ದೇಶಿಸುತ್ತಿದ್ದ ನನ್ನ ಹಿರಿಯ ಸಹೋ ದ್ಯೋಗಿ ಈ ವಿಷಯದಲ್ಲಿ ಪಳಗಿದವರು, ಹಾಗಾಗಿ ಅವರನ್ನು ಮಣಿವಣ್ಣನ್‌ರಿಗೆ ಪರಿಚಯ ಮಾಡಿಕೊಟ್ಟೆ. ಆ ಚಿತ್ರದಲ್ಲಿ ಮಣಿವಣ್ಣನ್‌ರೇನು ಕಾಣಿಸಿಕೊಳ್ಳುವ
ಅವಶ್ಯಕತೆ ಇಲ್ಲ ಎಂದ ಅವರು ಅದನ್ನು ಅವರಿಗೆ ಹೇಗೆ ಹೇಳುವುದು ಎಂದು ಹೆಣಗುತ್ತಿದ್ದಾಗ ನಾನೇ ಹೇಳಲು ಮುಂದಾದೆ.
ಹೇಳಿದರೆ ನನ್ನ ಕೆಲಸ ಕೆಡುತ್ತದೆಂದು ನನ್ನ ಸಹೋದ್ಯೋಗಿ ಎಚ್ಚರಿಸಿದರು. ಅದರಲ್ಲಿ ನನ್ನ ಸ್ವಾರ್ಥವೇನೂ ಇಲ್ಲ, ಇದು ನಮ್ಮಿಬ್ಬರ ವೃತ್ತಿನಿಷ್ಠೆಯ ವಿಚಾರ ಎಂದು
ನಾನೇ ಬಾಯ್ಬಿಟ್ಟೆ: ಮಿಸ್ಟರ್ ಮಣಿವಣ್ಣನ್, ಈ ಚಿತ್ರದಲ್ಲಿ ನೀವಿರುವ ಅವಶ್ಯಕತೆ ಇಲ್ಲವೆಂದು ನನ್ನ ಸಹೋದ್ಯೋಗಿ ಹೇಳುತ್ತಿದ್ದಾರೆ. ನಿಮ್ಮ ಕನ್ನಡದಲ್ಲಿ ತಮಿಳಿನ ದಟ್ಟ ಛಾಯೆಯಿದೆ. ಮೇಲಾಗಿ, ನಿಮ್ಮ ನಂತರ ಬರುವ ಡಿಸಿ ತಾನೇ ಇರುವ ಮತ್ತೊಂದು ಚಿತ್ರವನ್ನು ನಿರ್ಮಿಸುವ ಸಾಧ್ಯತೆಯೂ ಇದೆ, ಹಾಗಾದಲ್ಲಿ ಸಾರ್ವ ಜನಿಕರ ಹಣ ಪೋಲಾಗುತ್ತದೆ. ಅವರಿದ್ದ ಫೂಟೇಜನ್ನು ಕೈಬಿಡಲಾಯಿತು. ಮಣಿವಣ್ಣನ್ ನನ್ನ ಸಂಪರ್ಕವನ್ನು ಕಡಿದುಕೊಂಡರು.
ಇವಿಎಂ ಕುರಿತ ಚಿತ್ರಕ್ಕೆ ನನ್ನ ಸ್ನೇಹಿತರಿಗೆ ಸಂದಾಯವಾಗಬೇಕಿದ್ದ ೩೦,೦೦೦ ರುಪಾಯಿ ತಡೆ ಹಿಡಿದರು. ನಾನು ನಿರ್ಮಿಸುತ್ತಿದ್ದ ಮೈಸೂರು ಕುರಿತಾದ ಚಿತ್ರವನ್ನು ಬದಿಗಿರಿಸಿ ಅಡ್ಡಕಸುಬಿಯೊಬ್ಬನಿಂದ ದಿಢೀರ್ ಚಿತ್ರವೊಂದನ್ನು ತಯಾರಿಸಿ ಅಮೆರಿಕದಲ್ಲಿ ನಡೆಯುತ್ತಿದ್ದ ಅಕ್ಕ ಸಮ್ಮೇಳನಕ್ಕೆ ಕಳಿಸಲಾಯಿತು.
ಚಿನ್ನಸ್ವಾಮಿಯವರೇ, ಈ ಚಿತ್ರವನ್ನು ನಾನು ನಿರ್ಮಿಸಿದ್ದು ಡೆಕ್ಕನ್ ಹೆರಾಲ್ಡ ಬಿಟ್ಟ ನಂತರ. ಅಲ್ಲಿದ್ದುಕೊಂಡೇ ಮಾಡಿದ್ದರೆ, ಸಂಸ್ಥೆಯ ಹೆಸರು ಹೇಳಿಕೊಂಡು ತಮ್ಮ
ಬೇಳೆಬೇಯಿಸಿಕೊಳ್ಳುವ ಸುಮಾರು ಜನ ಪ್ರಜಾವಾಣಿ ಸಹೋದ್ಯೋಗಿಗಳಂತೆ ನಾನೂ ಬೇಳೆ ಬೇಯಿಸಿಕೊಳ್ಳಬಹುದಿತ್ತೇನೊ! ಅದು ನನಗೆ ಒಗ್ಗದ್ದು.
ಅವರಲ್ಲಿ ನಾನು ಒಪ್ಪದ ವಿಚಾರ ಕೂಡ. ಇದಕ್ಕೂ, ಸದರಿ ಸಂವಾದದ ನಿರೂಪಕರಾಗಿ ನಿಮ್ಮತ್ತ ನಿಮಗುತ್ತರಿಸಲು ಇಷ್ಟವಾಗುವ ಪ್ರಶ್ನೆಗಳನ್ನೆಸೆದ ಬಿಎಂ ಹನೀಫ್ರನ್ನು ಉದ್ಧರಿಸಲಿಚ್ಛಿಸುತ್ತೇನೆ. ದೂರ ಹೋಗಬೇಕಿಲ್ಲ. ಅಪಾರ ದಲಿತಪರ ಕಾಳಜಿ ವ್ಯಕ್ತಪಡಿಸುವ ಅವರ‍್ಯಾರೂ ನಮ್ಮ ಕಚೇರಿಯಲ್ಲಿ ಅನೌಪಚಾರಿಕವಾಗಿ ನೇಮಕವಾಗಿದ್ದ ತಳ ಸಮುದಾಯದ ನಾಗೇಂದ್ರ ಎಂಬ ವೃದ್ಧ ಕೂಲಿಯ ಪರ ದನಿ ಎತ್ತಲಿಲ್ಲ. ನೆಟ್ಟಗೆ ಸೂರೂ ಇಲ್ಲದ ಅವನು ಸಂಸಾರ ನಡೆಯುತ್ತಿದ್ದುದು ಬಹುತೇಕ ನಮ್ಮ ಕಚೇರಿಯ ಮೆಟ್ಟಿಲುಗಳ ಮೇಲೆ. ಅವನಿಗೆ ಸಣ್ಣ ನೆರವು ಒದಗಿಸುತ್ತಿದ್ದವರಲ್ಲಿ ಪತ್ರಕರ್ತರಲ್ಲದ ಕೆಲವು ಬ್ರಾಹ್ಮಣ ಸಹೋದ್ಯೋಗಿಗಳು.
ಅವನ ಪರವಾಗಿ ಹರಿಕುಮಾರರಿಗೆ ಅಹವಾಲು ಸಲ್ಲಿಸಿದ್ದೆ. ಅದಕ್ಕೆ ಸಹಿ ಹಾಕುವ ಧೈರ್ಯ ತೋರಿದ್ದು ನಿಮ್ಮ ಸಹಕವಿ ಜಿಪಿ ಬಸವರಾಜು ಅವರೊಬ್ಬರೇ. ಅದಾದ ಒಂದು ವರ್ಷದ ನಂತರ ಮೈಸೂರು ಕಚೇರಿಗೆ ಹಠಾತ್ ಭೇಟಿ ನೀಡಿದ್ದ ಸಂಸ್ಥೆಯ ಮತ್ತೊಬ್ಬ ಪಾಲುದಾರ ಕೆ.ಎನ್. ತಿಲಕ್ ಕುಮಾರ್. ನಾಗೇಂದ್ರನ ಬಗ್ಗೆ ನಾನು ಪ್ರಶ್ನೆ ಎತ್ತಿದ್ದೇ ತಪ್ಪು ಎನ್ನುವಂತೆ ಅವರು ಉತ್ತರಿಸಿದ್ದರಿಂದ ಅದಕ್ಕೆ ಪ್ರತ್ಯುತ್ತರವಾಗಿ ನಾನು ಬಹಳ ಹೊತ್ತು ಮಾತನಾಡಬೇಕಾಯಿತು. ತಿಲಕರ ಭೇಟಿ ಹಠಾತ್ ಆದ್ದರಿಂದಲೋ ಏನೋ, ಅದರಿಂದ ಗರಬಡಿದಂತಿದ್ದ ನನ್ನ ಬ್ರಾಹ್ಮಣೇತರ ಪ್ರಜಾವಾಣಿ ಸಹೋದ್ಯೋಗಿಗಳಿಗೆ ದಾರಿದ್ರ್ಯಪೀಡಿತ ನಾಗೇಂದ್ರನನ್ನು ಬೆಂಬಲಿಸಿ ಒಂದೆರಡು ಮಾತುಗಳನ್ನು ಹೇಳಲು ಬಾಯಿ ಬರಲಿಲ್ಲ.
ಬ್ರಾಹ್ಮಣರು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಲ್ಲರು ಎಂಬ ನಿಮ್ಮ ನಿಲುವು ಬಿಡಿ, ಬ್ರಾಹ್ಮಣೇತರ ಬಡವನೊಬ್ಬನಿಗೆ ಬದುಕುವುದಕ್ಕೆ ಅವಕಾಶ ದೊರಕಿಸಿಕೊಡುವ ಸ್ಥಿತಿಯಲ್ಲೂ ಎಲ್ಲಾ ಬ್ರಾಹ್ಮಣರಿಗಿಲ್ಲ. ಪ್ರಾಮಾಣಿಕನಾಗಿ ದುಡಿದ ನಾಗೇಂದ್ರನೆಂಬ ತಬರ ಪರಿಹಾರ ಸಿಗದೇ ಸತ್ತೇ ಹೋದ. ಮಹಾಕಾವ್ಯದಷ್ಟು ಬರೆಯಲು ಸಾಮಗ್ರಿ ಇರುವ ವಿಷಯದ ಬಗ್ಗೆ ಒಂದು ಅಂಕಣದಲ್ಲಿ ಹೇಳಿ ಮುಗಿಸಲಿಕ್ಕಾಗದು. ಇಷ್ಟನ್ನು ನೀವು ಅರಗಿಸಿಕೊಳ್ಳಿ. ಮುಂದಿನವಾರ ಇನ್ನಷ್ಟು ಬರೆಯುತ್ತೇನೆ. ಆಮೇಲೆ, ಒಮ್ಮೆಗೆ ಉತ್ತರಿಸಿ (ಸಾಧ್ಯವಾದರೆ). ಇದು ಸವಾಲಲ್ಲ. ಮತ್ತೊಂದು ಆರೋಗ್ಯಕರ ಸಂವಾದಕ್ಕೆ ಆಹ್ವಾನ.
ನೀವು ಈಗಾಗಲೇ ಪಾಲ್ಗೊಂಡ ಸಂವಾದದದರೋ ಒಂದೇ ಪಂಥದ ಇಬ್ಬರನ್ನೂ, ಬ್ರಾಹ್ಮಣ ನಡುಪಂಥೀಯರೊಬ್ಬರನ್ನೂ (ಅರವಿಂದ ಚೊಕ್ಕಾಡಿ) ಆಮಂತ್ರಿಸಲಾಗಿತ್ತು. ನಿಮ್ಮನ್ನು ಪ್ರಶ್ನಿಸಿದವರೂ ನಿಮ್ಮ ಪಂಥದವರೇ. ಹಾಗಾಗಿ, ಒಬ್ಬ ಬ್ರಾಹ್ಮಣನನ್ನು ಮಣಿಸಲು ಇಬ್ಬರು ಬ್ರಾಹ್ಮಣರೇತರರನ್ನು ಕರೆಸಿದಂತೆ ಭಾಸವಾಗುತ್ತಿತ್ತು. ಇರಲಿ, ಇಲ್ಲಿ ನಾವು ಸೆಣಸಾಟ ಮಾಡುವುದು ಬೇಡ. ಮಂಥನ ಮಾಡೋಣ.
ಪ್ರೀತಿಪೂರ್ವಕ ನಮಸ್ಕಾರ