Friday, 13th December 2024

Mukund Davanagere Column: ಬದಲಾವಣೆ ಒಳ್ಳೆಯದು

ಅಭಿಮತ

ಮುಕುಂದ ದಾವಣಗೆರೆ

ಒಂದು ದೇಶ, ಒಂದು ಚುನಾವಣೆ’ ಎಂಬ ಪ್ರಸ್ತಾವನೆಯ ಮೂಲಕ ಕೇಂದ್ರ ಸರಕಾರವು ನಮ್ಮ ಚುನಾವಣಾ ವ್ಯವಸ್ಥೆ ಯಲ್ಲಿ ಬದಲಾವಣೆ ತರಲು ಯತ್ನಿಸುತ್ತಿದೆ. ಆದರೆ ಬಹುತೇಕ ಪ್ರತಿಪಕ್ಷಗಳು ಅದನ್ನು ವಿರೋಧಿಸುತ್ತಿವೆ.

ನನ್ನ ಪ್ರಕಾರ ಇಂಥ ಬದಲಾವಣೆ ಒಳ್ಳೆಯದು. ಏಕೆಂದರೆ, ಚುನಾವಣಾ ಖರ್ಚಿನಲ್ಲಿ ಭಾರಿ ಉಳಿತಾಯವಾಗುತ್ತದೆ. ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಪಕ್ಷಾಂತರ, ಸರಕಾರದ ಪತನ ಮುಂತಾದ ಯೋಚನೆ ಗಳಿಲ್ಲದೆ ಆಳುಗರು 5 ವರ್ಷ ಒಳ್ಳೆಯ ಆಡಳಿತ ನೀಡಬಹುದು. ಇಲ್ಲಿ ಇನ್ನೊಂದಷ್ಟು ಸಂಗತಿಗಳ ಕಡೆಗೆ ಗಮನ ಕೊಡುವುದು ಸೂಕ್ತ. ವ್ಯಕ್ತಿಯೊಬ್ಬ ಒಂದು ಪಕ್ಷದಿಂದ ಚುನಾಯಿತನಾದ ಮೇಲೆ ಐದು ವರ್ಷ ಪೂರೈಸು ವವರೆಗೂ ಪಕ್ಷಾಂತರ ಮಾಡುವ ಹಾಗಿಲ್ಲ ಎಂಬುದಾಗಿ ನಿಯಮಕ್ಕೆ ತಿದ್ದುಪಡಿ ತರಬೇಕು. ಹಾಗೇನಾದರೂ ಪಕ್ಷಾಂತರ ಮಾಡಿ ದಲ್ಲಿ, ಆತನಿಗೆ ಜೀವನ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಬಾರದು. ಯಾವುದಾದರೂ ಕಾರಣಕ್ಕೆ ಶಾಸಕರ ಅಥವಾ ಸಂಸದರ ಸ್ಥಾನ ಖಾಲಿಯಾದಲ್ಲಿ ಅವರ ಜಾಗಕ್ಕೆ ಆಯಾ ಕ್ಷೇತ್ರದ, ರಾಜಕಾರಣಿಯಲ್ಲದ ಸಮರ್ಥ ನಾಗರಿಕನೊಬ್ಬನನ್ನು ರಾಜ್ಯಪಾಲರು/ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡಬೇಕು.

ಜನಪ್ರತಿನಿಧಿಗಳು ಭ್ರಷ್ಟಾಚಾರ ಅಥವಾ ಅನಾಚಾರದಲ್ಲಿ ತೊಡಗಿಸಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕಾಗಿ ಬಂದಾಗಲೂ ರಾಜ್ಯಪಾಲರು/ರಾಷ್ಟ್ರಪತಿಗಳು ಇಂಥದೇ ಕ್ರಮಕ್ಕೆ ಮುಂದಾಗಬೇಕು. ವಿಧಾನಸಭೆ ಅಥವಾ ಲೋಕಸಭೆಯ ವಿಸರ್ಜನೆ ಆದ ಮೇಲೆ ಮತ್ತೆ ಬರುವ ಚುನಾವಣೆಗೆ ಮುಂಚಿತವಾಗಿ ಇರುವ ಅಲ್ಪಕಾಲದಲ್ಲಿ ಮಾತ್ರವೇ ಪಕ್ಷವನ್ನು ಬದಲಿಸಲು ರಾಜಕಾರಣಿಗಳಿಗೆ ಅವಕಾಶ ಕಲ್ಪಿಸಬೇಕು.

‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಪ್ರತಿಪಕ್ಷಗಳು ವಿರೋಧಿಸುತ್ತಿರುವುದೇಕೋ ಗೊತ್ತಾಗುತ್ತಿಲ್ಲ. ಒಂದೊಮ್ಮೆ ಈ ಪರಿಕಲ್ಪನೆ ಜಾರಿಗೆ ಬಂದರೆ ಬಿಜೆಪಿಗಿಂತ ವಿರೋಧ ಪಕ್ಷಗಳಿಗೇ ಅನುಕೂಲ. ‘ಬಿಜೆಪಿಯೇ ಪಕ್ಷಾಂ ತರ ಮಾಡಿಸಿ ದೇಶದ ವಿವಿಧೆಡೆ ಚುನಾಯಿತ ಸರಕಾರವನ್ನು ಬೀಳಿಸುತ್ತಿದೆ’ ಎಂಬುದು ಪ್ರತಿಪಕ್ಷಗಳ ಆರೋಪ ವಲ್ಲವೇ? ಆದ್ದರಿಂದ, ‘ಒಂದು ದೇಶ, ಒಂದು ಚುನಾವಣೆ’ ಜಾರಿಗೆ ಬಂದಲ್ಲಿ ವಿರೋಧ ಪಕ್ಷಗಳಿಗೇ ಅನುಕೂಲ ವಾಗುತ್ತದೆ. ನನಗೀಗ 78 ವರ್ಷ ವಯಸ್ಸು. ನನ್ನ ೨೧ನೇ ಹರೆಯದಿಂದ ಪ್ರತಿ ಚುನಾವಣೆಯಲ್ಲಿ ಮತದಾನ ಮಾಡಿ ಕೊಂಡು ಬಂದಿದ್ದೇನೆ.

1960ರ ದಶಕದ ಮಧ್ಯಭಾಗದವರೆಗೂ ‘ಒಂದು ದೇಶ, ಒಂದು ಚುನಾವಣೆ’ ನಡೆಯುತ್ತಿತ್ತು. ಈ ಪ್ರಸ್ತಾವಕ್ಕೆ ಈಗ ಬಲವಾದ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ಸಿಗರೇ ಆಗ ಆಡಳಿತ ನಡೆಸುತ್ತಿದ್ದುದು. ರಾಷ್ಟ್ರಕ್ಕೊಂದು, ರಾಜ್ಯ ಕ್ಕೊಂದು ಅಂತ ಬೇರೆ ಬೇರೆ ಚುನಾವಣೆ ಬಂದಿದ್ದು ಅವರ ಕಾಲದಲ್ಲೇ. ಕಾರಣ, ತಮಗಿಷ್ಟವಿಲ್ಲದ ಸರಕಾರಗಳನ್ನು ಅವಧಿಗೆ ಮುಂಚೆಯೇ ವಿಸರ್ಜಿಸಿ/ತೆಗೆದುಹಾಕಿ, ಚುನಾವಣೆ ನಡೆಸಿ, ತಮಗೆ ಬೇಕಾದ ಸರಕಾರ ವನ್ನು ತರುತ್ತಿದ್ದರು. ಹಾಗಾಗಿ ಮಧ್ಯಂತರ ಚುನಾವಣೆ ನಡೆಸಬೇಕಾದ ಪರಿಪಾಠ ರೂಢಿಗೆ ಬಂತು.

ಆದ್ದರಿಂದ, ಒಂದಷ್ಟು ಬಲವಾದ ಮತ್ತು ಕಟ್ಟುನಿಟ್ಟಿನ ಕಾನೂನುಗಳನ್ನು/ನಿಯಮಗಳನ್ನು ಆಧಾರವಾಗಿಟ್ಟು ಕೊಂಡು ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಜಾರಿಗೆ ತರಬೇಕೆಂದು ದೇಶದ ಒಬ್ಬ ಜವಾಬ್ದಾರಿ ಯುತ ಪ್ರಜೆಯಾಗಿ ನಾನು ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇನೆ.

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: One Nation One Election: ʼಒಂದು ರಾಷ್ಟ್ರ ಒಂದು ಚುನಾವಣೆʼ ಪ್ರಸ್ತಾವನೆಯ ಮುಂದಿದೆ ಹಲವು ಸವಾಲು!